ಉತ್ತರಾಖಂಡ : ಸುರಂಗದಲ್ಲಿ 17 ದಿನಗಳಿಂದ ಸಿಲುಕಿದ್ದ 41 ಕಾರ್ಮಿಕರ ರಕ್ಷಣೆ

Update: 2023-12-08 12:51 GMT

Photo: PTI 

ಕಡೆಗೂ ಇಡೀ ದೇಶ ಸಮಾಧಾನದ ಒಂದು ದೀರ್ಘ ನಿಟ್ಟುಸಿರು ಬಿಡೋ ಹಾಗಾಗಿದೆ. ಉತ್ತರಾಖಂಡದಲ್ಲಿ ಚಾರ್ಧಾಮ್ ಸರ್ವಋತು ಹೆದ್ದಾರಿಯಲ್ಲಿನ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿಕೊಂಡಿದ್ದ 41 ಕಾರ್ಮಿಕರು ಕೊನೆಗೂ ಸುದೀರ್ಘ 17 ದಿನಗಳ ಬಳಿಕ ಸುರಕ್ಷಿತವಾಗಿ ಹೊರಬಂದಿದ್ದಾರೆ. 16 ದಿನಗಳಿಂದ ಸುರಂಗದೊಳಗೇ ಸಿಲುಕಿದ್ದ ಅವರ ತಲ್ಲಣಗಳು ಏನಿದ್ದವೊ. ಇನ್ನೊಂದೆಡೆ ಅವರ ಕುಟುಂಬದವರ ಆತಂಕಗಳು ಏನೇನಿದ್ದವೊ ?

ಇದೆಲ್ಲದರ ನಡುವೆಯೇ ಅವರನ್ನು ರಕ್ಷಿಸುವ ಕಾರ್ಯಾಚರಣೆ ಮೊದಲ ದಿನದಿಂದಲೂ ಸಾಗಿಯೇ ಬಂದಿತ್ತು. ಅದಕ್ಕೆ ನಿರಂತರ ಅಡೆತಡೆಗಳೇ ಎದುರಾದದ್ದು ಇನ್ನಷ್ಟು ಆತಂಕ ಸೃಷ್ಟಿಸಿತ್ತು. ನಿಜಕ್ಕೂ ಅದೊಂದು ಅಭೂತಪೂರ್ವ ಕಾರ್ಯಾಚರಣೆಯಾಗಿತ್ತು. ರಕ್ಷಣಾ ಕಾರ್ಯಾಚರಣೆಯಲ್ಲಿ ಸೇನೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ NDRF, ರಾಜ್ಯ ವಿಪತ್ತು ನಿರ್ವಹಣಾ ಪಡೆ SDRF ಅಲ್ಲದೆ ವಿದೇಶದ ಸುರಂಗ ತಂತ್ರಜ್ಞರೂ ಪಾಲ್ಗೊಂಡಿದ್ದರು.

ಕೊನೆ ಹಂತದಲ್ಲಿ ಅತ್ಯಾಧುನಿಕ ಎನ್ನಲಾಗಿದ್ದ ದೈತ್ಯ ಯಂತ್ರಗಳೂ ವಿಫಲವಾಗಿದ್ದವು. ಮುರಿದು ಬಿದ್ದಿದ್ದವು. ಅಂಥ ಯಂತ್ರಗಳೇ ಕೆಲಸಕ್ಕೆ ಬಾರದಂತಾದ ಬಳಿಕ ಮುಂದೇನು ಎಂಬ ಆತಂಕವೂ ತಲೆದೋರಿತ್ತು. ಇನ್ನು ಪರ್ಯಾಯವಿಲ್ಲ ಎಂಬ ಹೊತ್ತಿನಲ್ಲಿ ಕೈಹಿಡಿದದ್ದು ಅದೊಂದು ಅವೈಜ್ಞಾನಿಕ ತಂತ್ರ. ಅದೂ ಆಗಲೇ ನಿಷೇಧಗೊಂಡಿದ್ದ ತಂತ್ರವೂ ಹೌದು.

ಆದರೆ ಇಲ್ಲಿ 41 ಜೀವಗಳ ರಕ್ಷಣೆಗೆ ಅದು ನೆರವಾಯಿತು. ಅತ್ಯಂತ ಆತಂಕಕ್ಕೆ ಎಡೆ ಮಾಡಿಕೊಟ್ಟಿದ್ದ ಘಟನೆಯೊಂದು ಸುಖಾಂತ್ಯ ಕಾಣುವುದಕ್ಕೆ ಕಾರಣವಾಯಿತು. ವಕೀಲ್ ಹಸನ್ ನೇತೃತ್ವದ ಇಲಿ ಬಿಲ ತಂತ್ರ ಬಳಸಿ ಸುರಂಗ ಕೊರೆಯುವ 12 ಮಂದಿಯ ತಂಡ ತಮ್ಮ ಜೀವವನು ಪಣಕ್ಕೊಡ್ಡಿ​ ಯಾವುದೇ ಅತ್ಯಾಧುನಿಕ ಯಂತ್ರದಿಂದ ಕೊರೆಯಲು ಸಾಧ್ಯವಾಗದ ​ಕೊನೆಯ 15 ಮೀಟರ್ ಕೊರೆದು 41 ಜನರನ್ನು ರಕ್ಷಿಸಿದರು. ಆ ತಂಡದಲ್ಲಿದ್ದ ಇತರರು ಮುನ್ನ ಖುರೇಷಿ , ಫಿರೋಜ್ , ಮೋನು, ನಸೀಮ್, ಇರ್ಷಾದ್ , ಅಂಕುರ್ ,ರಶೀದ್, ಜತಿನ್ , ನಾಸಿರ್ , ಸೌರಭ್ ಹಾಗು ದೇವೇಂದ್ರ.

ಕಡೆಗೂ ನಿನ್ನೆ ಅಂದ್ರೆ ನವೆಂಬರ್ 28ರ ರಾತ್ರಿ 8 ಗಂಟೆಗೆ ಮೊದಲ ಕಾರ್ಮಿಕನನ್ನು ಸುರಂಗದೊಳಗಿಂದ ಹೊರತರುವಲ್ಲಿ ವಿಪತ್ತು ನಿರ್ವಹಣಾ ತಂಡ ಯಶಸ್ವಿಯಾಯಿತು. ಬಳಿಕ ಒಬ್ಬರ ಬೆನ್ನಲ್ಲೊಬ್ಬರಂತೆ ಎಲ್ಲ ಕಾರ್ಮಿಕರು ಹೊರಬಂದರು. ಸಿಹಿ ಹಂಚಿ ಸಂಭ್ರಮಿಸಲಾಯಿತು.​

ಸುರಂಗದ ಹೊರಗೇ ವೈದ್ಯಕೀಯ ತಂಡ ಕಾದಿತ್ತು. ಅಂಬ್ಯುಲನ್ಸ್ಗಳೂ ಕಾದಿದ್ದವು. ಸ್ಥಳದಲ್ಲೇ ತಪಾಸಣೆಗೆ ಒಳಪಡಿಸಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದವರನ್ನು ತಕ್ಷಣ ಸಾಗಿಸಲು ಸೇನಾ ಹೆಲಿಕಾಪ್ಟರ್ ಕೂಡ ಸ್ಥಳದಲ್ಲಿತ್ತು. ಇಡೀ ಕಾರ್ಯಾಚರಣೆಯನ್ನು ಅದ್ಭುತ ಟೀಮ್ ವರ್ಕ್ ಎಂದು ಪ್ರಶಂಸಿಸಿರುವ ಪ್ರಧಾನಿ ಮೋದಿ ಹೊರ ಬಂದ ಕಾರ್ಮಿಕರಲ್ಲಿ ಫೋನ್ ಮಾಡಿ ಮಾತಾಡಿದ್ದಾರೆ. ಇಂಥದೊಂದು ಸುಖಾಂತ್ಯದ ಹಿಂದಿನ 16 ದಿನಗಳ ದಿಗಿಲು, ದುಗುಡಗಳು ಮಾತ್ರ ಸಣ್ಣದಾಗಿರಲಿಲ್ಲ.

ಅದು ಒಂದೆಡೆ ಕಾರ್ಮಿಕರ ಪ್ರಾಣದ ಕುರಿತಾಗಿದ್ದರೆ, ಇನ್ನೊಂದೆಡೆ ಇಂಥ ಅಭಿವೃದ್ಧಿ ಕಾರ್ಯಗಳು ಹಿಮಾಲಯದಂಥ ನೆಲದಲ್ಲಿ ತಂದಿಡುತ್ತಿರುವ ಅಪಾಯಗಳ ಬಗ್ಗೆಯೂ ಚರ್ಚೆಯಾಗುತ್ತಿದ್ದವು. ಸುರಂಗ ಯೋಜನೆಯಲ್ಲಿ ತುರ್ತು ನಿರ್ಗಮನ ಮಾರ್ಗದ ನಿಯಮ ಪಾಲನೆಯಾಗಿಲ್ಲ ಎಂಬ ವಿಚಾರವಂತೂ ತೀವ್ರ ಟೀಕೆಗೆ ಗುರಿಯಾಗಿತ್ತು.

ಇನ್ನು ಕಾರ್ಯಾಚರಣೆಯ ವಿಚಾರ ನೋಡುವುದಾದರೆ, ಸುರಂಗ ಕುಸಿತವಾದಾಗ ಸುಮಾರು 61 ಮೀಟರ್ ಉದ್ದದಷ್ಟು ಸುರಂಗ ಕಲ್ಲುಮಣ್ಣುಗಳಿಂದ ಮುಚ್ಚಿಹೋಗಿತ್ತು. ಅದರಾಚೆ ಸುರಂಗದೊಳಕ್ಕೆ ಸಿಲುಕಿರುವ ಕಾರ್ಮಿಕರನ್ನು ರಕ್ಷಿಸಬೇಕಿತ್ತು.

ಆರಂಭದಲ್ಲಿ ಅರ್ಥ್ ಮೂವರ್ ಯಂತ್ರಗಳನ್ನು ಬಳಸಿ ಕಲ್ಲುಮಣ್ಣು ತೆರವುಗೊಳಿಸುವ ಕಾರ್ಯಾಚರಣೆ ನಡೆಯಿತು.

ದುರಂತವೆಂದರೆ ಹಾಗೆ ತೆರವು ಮಾಡುತ್ತಿದ್ದಾಗಲೇ ಪರ್ವತದ ಭಾಗ ಮತ್ತೆ ಕುಸಿಯುತ್ತಿತ್ತು.

ಅಲ್ಲಿಗೆ ಆ ಕಾರ್ಯಾಚರಣೆ ಸ್ಥಗಿತಗೊಳಿಸಬೇಕಾಯಿತು. ಮೊದಲು ಒಳಗೆ ಸಿಲುಕಿರುವವರ ಪ್ರಾಣರಕ್ಷಣೆ ಕಡೆಗೆ ಗಮನ ಕೊಡಲಾಯಿತು.

ಸಣ್ಣ ಸುರಂಗ ಕೊರೆದು, ಕೊಳವೆ ಮೂಲಕ ಆಮ್ಲಜನಕ, ಆಹಾರ, ನೀರು, ಔಷಧ ಮತ್ತಿತರ ಅಗತ್ಯ ವಸ್ತುಗಳನ್ನು ಒಳಗೆ ತಲುಪಿಸುವ ವ್ಯವಸ್ಥೆ ಮಾಡಲಾಯಿತು.

ಕಾರ್ಮಿಕರನ್ನು ಹೊರತರುವ ಕಾರ್ಯಾಚರಣೆಯ ಭಾಗವಾಗಿ ಸುರಂಗದ ತಳಭಾಗಕ್ಕೆ ಸಮಾನಾಂತರವಾಗಿ ಸುರಂಗ ಕೊರೆಯುವುದಕ್ಕೆ ತೊಡಗಲಾಯಿತು. ಆದರೆ ಆ ಪ್ರಯತ್ನಗಳು ಮತ್ತೆ ಮತ್ತೆ ವಿಫಲವಾದವು. ದೊಡ್ಡ ದೊಡ್ಡ ಯಂತ್ರಗಳೇ ಮುರಿದುಹೋದವು.

ಒಂದೆಡೆ ಈ ಪರಿಸ್ಥಿತಿಯಿದ್ದರೆ, ಸುರಂಗದ ಮೇಲ್ಭಾಗದಲ್ಲಿ ಕೊರೆಯುವ ಪ್ರಯತ್ನವೂ ವಿಫಲವಾಯ್ತು. ಅಲ್ಲಿ ಪೂರ್ತಿ ಸಡಿಲ ಮಣ್ಣು ಇದ್ದುದರಿಂದ ಮಣ್ಣು ಮತ್ತಷ್ಟು ಸುರಂಗದೊಳಕ್ಕೇ ಕುಸಿಯುತ್ತಿತ್ತು.

ಹೀಗಾದಾಗ ಬಂಡೆಯನ್ನು ಕೊರೆದು ಒಳಹೋಗುವ ಪ್ರಯತ್ನಕ್ಕೆ ಇಳಿಯಲಾಯಿತು. ಮತ್ತೊಂದೆಡೆ ಇನ್ನೊಂದು ದಿಕ್ಕಿನಿಂದ ಸುರಂಗ ಕೊರೆದು, ಕುಸಿಯದಂತೆ ಕಾಂಕ್ರೀಟ್ ಹಾಕುವ ವಿಧಾನವನ್ನೂ ಅನುಸರಿಸಲಾಯಿತು. ಯಾವುದಾದರೂ ಒಂದರಲ್ಲಿ ಯಶಸ್ವಿಯಾದರೆ ಆದಷ್ಟು ಬೇಗ ಒಳಗಿರುವ ಕಾರ್ಮಿಕರನ್ನು ರಕ್ಷಿಸಿ ಹೊರತರಬಹುದು ಎಂಬ ಧಾವಂತ.

ಆದರೆ ಯಂತ್ರಗಳು ಉಪಯೋಗಕ್ಕೆ ಬರುತ್ತಿಲ್ಲ ಎಂದಾದಾಗ ಅನಿವಾರ್ಯವಾಗಿ ಬದಿಗಿಡಲೇಬೇಕಾಯಿತು. ಯಂತ್ರಗಳ ನೆರವಿಲ್ಲದೆ ಸುರಂಗ ಕೊರೆಯುವ ಪರಿಣಿತರನ್ನು ಈ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳುವುದೇ ಉಳಿದಿರುವ ದಾರಿಯಾಗಿ ಕಂಡಿತು. ಆದರೆ ಇದಕ್ಕೆ ಇನ್ನೆಷ್ಟು ದಿನ ಆದೀತೊ, ಕೆಲಸ ಶುರು ಮಾಡಿದರೂ ಮತ್ತೆ ಯಾವ ಅಡ್ಡಿ ಉಂಟಾದೀತೊ ಎಂಬ ಅನುಮಾನಗಳೇ ಇದ್ದವು. ಸೋಮವಾರವೇ ಈ ತಂತ್ರ ಬಳಸಿ ಸುರಂಗ ಕೊರೆವ ಕೆಲಸ ಶುರುವಾಗಿತ್ತು. ಒಂದೇ ದಿನದಲ್ಲಿ ಯಶಸ್ಸು ಸಿಕ್ಕಿ ಕಾರ್ಮಿಕರನ್ನು ಕಾಪಾಡುವುದು ಸಾಧ್ಯವಾಯಿತು.

ಯಂತ್ರಗಳ ನೆರವಿಲ್ಲದೆ ಸುರಂಗ ಕೊರೆಯುವ ಈ ತಂತ್ರಕ್ಕೆ ರ್ಯಾಟ್ ಹೋಲ್ ಮೈನಿಂಗ್ ತಂತ್ರ ಅಥವಾ ಇಲಿ ಬಿಲ ತಂತ್ರ ಎಂದು ಹೆಸರು.

ಈ ತಂತ್ರದಲ್ಲಿ ನಿಪುಣರಾದ 12 ಮಂದಿ ಕೊನೆ ಹಂತದಲ್ಲಿ ರಕ್ಷಣಾ ಕಾರ್ಯದಲ್ಲಿ ಭಾಗಿಯಾಗಿದ್ದರು.

ಇಲಿ ಬಿಲ ತಂತ್ರ ಎಂದರೇನು? . ಇದು ಮೇಘಾಲಯದಲ್ಲಿ ಕಲ್ಲಿದ್ದಲು ಗಣಿಗಾರಿಕೆಗೆ ವ್ಯಾಪಕವಾಗಿ ಬಳಸಲಾಗುತ್ತಿದ್ದ ತಂತ್ರ. ಕಿರಿದಾದ, ಅಡ್ಡವಾದ ಸುರಂಗಳಲ್ಲಿ ಒಳಹೋಗಿ ಕಲ್ಲಿದ್ದಲನ್ನು ಹೊರತೆಗೆಯುವ ವಿಧಾನ. ನೆಲದಲ್ಲಿ ಕಿರಿದಾದ ಹೊಂಡಗಳನ್ನು ತೆಗೆಯುವುದರಿಂದ ಇದಕ್ಕೆ ಹೀಗೆ ಹೆಸರು. ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಒಳಹೋಗಲು ಮತ್ತು ಕಲ್ಲಿದ್ದಲನ್ನು ಹೊರತೆಗೆಯಲು ಸಾಧ್ಯವಾಗುವಷ್ಟು ಕಿರುಗಾತ್ರದ ಹೊಂಡ ಇದಾಗಿರುತ್ತದೆ.

ತಜ್ಞರು ಹೇಳುವ ಪ್ರಕಾರ ಇದರಲ್ಲಿ ಎರಡು ವಿಧ. ಮೊದಲನೆಯದು ಅಡ್ಡವಾಗಿ ಕೊರೆಯುವ ವಿಧಾನ. ಬೆಟ್ಟದ ಇಳಿಜಾರುಗಳಲ್ಲಿ ಕಿರಿದಾದ ಸುರಂಗ ಕೊರೆಯುತ್ತ, ಕಲ್ಲಿದ್ದಲು ಪದರು ಸಿಗುವವರೆಗೆ ಕಾರ್ಮಿಕರು ಒಳ ಹೋಗುತ್ತಾರೆ. ಇನ್ನೊಂದು ವಿಧಾನವನ್ನು ಬಾಕ್ಸ್ ಕಟಿಂಗ್ ಎಂದು ಕರೆಯಲಾಗುತ್ತದೆ. ಅದು ಆಯತಾಕಾರದ ಕೊರೆಯುವಿಕೆ. ಆಳದ ಲಂಬವಾದ ಹೊಂಡವನ್ನು ಅಗೆಯಲಾಗುತ್ತದೆ. ಕಲ್ಲಿದ್ದಲು ಪದರು ಕಂಡ ಬಳಿಕ ಅಡ್ಡಲಾಗಿ ಕೊರೆದು ಅದರ ಮೂಲಕ ಹೋಗಿ ಕಲ್ಲಿದ್ದಲನ್ನು ಹೊರತೆಗೆಯಲಾಗುತ್ತದೆ.

ಸಿಲ್ಕ್ಯಾರಾ ಸುರಂಗ ಕುಸಿತ ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ 12 ಪರಿಣಿತರು, ಕಾರ್ಮಿಕರನ್ನು ಕರೆತರುವುದಕ್ಕೆಂದು ಅಳವಡಿಸಲಾಗಿದ್ದ ಪೈಪ್ನೊಳಕ್ಕೆ ಡ್ರಿಲ್ ಮಷಿನ್ ಹಾಗೂ ಗ್ಯಾಸ್ ಕಟರ್ಗಳೊಂದಿಗೆ ಹೋಗಿದ್ದರು. ಇಂಥ ಸನ್ನಿವೇಶದಲ್ಲಿ ಒಬ್ಬ ಕೊರೆಯವ ಕೆಲಸದಲ್ಲಿ ತೊಡಗಿದ್ದರೆ, ಮತ್ತೊಬ್ಬ ಕಲ್ಲುಮಣ್ಣುಗಳ ಅವಶೇಷವನ್ನು ಒಂದೆಡೆಗೆ ಸೇರಿಸುತ್ತಾನೆ. ಮತ್ತೊಬ್ಬ ಅದನ್ನು ಟ್ರಾಲಿಗೆ ಹಾಕಿ ಹೊರಕ್ಕೆ ಕಳಿಸುತ್ತಾನೆ.

ಒಮ್ಮೆ ಕಾರ್ಮಿಕರು ಸಿಲುಕಿರುವ ಸ್ಥಳ ಸಿಕ್ಕ ಬಳಿಕ ಒಬ್ಬೊಬ್ಬರನ್ನೂ ಸುರಂಗದಿಂದ ಹೊರಕ್ಕೆ ತರುವುದಕ್ಕೆ 3ರಿಂದ 5 ನಿಮಿಷಗಳು ಬೇಕಾಗಬಹುದೆಂದು ಅಂದಾಜು ಮಾಡಲಾಗಿತ್ತು. ಗಣಿಗಾರಿಕೆಯಲ್ಲಿ ಈ ತಂತ್ರ ಅಪಾಯಕಾರಿಯೂ ಹೌದು. ಹಾಗಾಗಿಯೇ ವಿವಾದಕ್ಕೊಳಗಾಗಿ ಕಡೆಗೆ ಮೇಘಾಲಯದಲ್ಲಿ ಇದನ್ನು 2022ರಲ್ಲಿ ನಿಷೇಧಿಸಲಾಯಿತು.

ಇದು ಒಂದೆಡೆ ಗಣಿ ಕಾರ್ಮಿಕರ ಪ್ರಾಣಕ್ಕೆ ಅಪಾಯ ತರುವುದಲ್ಲದೆ, ಮತ್ತೊಂದೆಡೆ ಪರಿಸರ ಹಾನಿಗೂ ಕಾರಣವಾಗುತ್ತದೆ. ಮಳೆಗಾಲದಲ್ಲಿ ಗಣಿಗಾರಿಕೆ ಪ್ರದೇಶಕ್ಕೆ ನೀರು ನುಗ್ಗಿ ಹಲವಾರು ಕಾರ್ಮಿಕರು, ಉದ್ಯೋಗಿಗಳು ಸಾವನ್ನಪ್ಪಿದ ಘಟನೆಗಳೂ ಸಂಭವಿಸಿದ್ದಿದೆ. ಆದರೆ, ಸಿಲ್ಕ್ಯಾರಾ ಕಾರ್ಯಾಚರಣೆಯಲ್ಲಿ ಎಲ್ಲ ಭರವಸೆಗಳೂ ಕರಗಿದ ಹಂತದಲ್ಲಿ ಇದೊಂದೇ ದಾರಿ ಭರವಸೆಯದ್ದಾಗಿ ಕಂಡಿತು. ಆ ಭರವಸೆ ನಿಜವೂ ಆಗಿ, ಎಲ್ಲ 41 ಕಾರ್ಮಿಕರ ಪ್ರಾಣ ರಕ್ಷಣೆ ಸಾಧ್ಯವಾಗಿದೆ.

ಈ ರಕ್ಷಣಾ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಉತ್ತರಾಖಂಡ ಸರಕಾರದ ಇಲಾಖೆಗಳು, ಯೋಧರು, ಸಿಬ್ಬಂದಿ, ತಂತ್ರಜ್ಞರು, ಕಾರ್ಮಿಕರು ಎಲ್ಲರಿಗೂ ನಮ್ಮದೊಂದು ಸೆಲ್ಯೂಟ್. ಈಗ ಗಮನ ಹರಿಸಬೇಕಿರುವ ಸಂಗತಿಗಳು ಬಹಳಷ್ಟಿವೆ. ಹಿಮಾಲಯದ ಒಡಲು ಕೊರೆಯುವ ಅಭಿವೃದ್ಧಿ ಯೋಜನೆಗಳು ಎಂಥೆಂಥ ಅಪಾಯವನ್ನು ಒಡ್ಡುತ್ತಿವೆ ಎಂಬುದು ಈಗಾಗಲೇ ಅಲ್ಲಿನ ಪರಿಸರ ವಿಕೋಪಗಳಲ್ಲಿ ಗೊತ್ತಾಗುತ್ತಿದೆ. ಆದರೆ ಇವತ್ತಿನ ರಾಜಕೀಯ, ಪರಿಸರದ ಎಲ್ಲ ಎಚ್ಚರಿಕೆಗಳನ್ನು ಮರೆಯುತ್ತ, ಯಾವ್ಯಾವುದೋ ಲಾಬಿಗೆ ಮಣಿಯುತ್ತ, ಅವ್ಯಾಹತ ಅನಾಚಾರದಲ್ಲಿ ತೊಡಗಿದೆ.

ಇದೆಲ್ಲದರ ನಡುವೆಯೇ ಇಂಥ ಯೋಜನೆಗಳ ಹೊತ್ತಲ್ಲಿ ನಿಜವಾಗಿಯೂ ಪಾಲಿಸಬೇಕಾದ ನಿಯಮಗಳ ಪಾಲನೆಯಾಗದೇ ಇರುವುದು ಕೂಡ ಇಂಥ ಅಪಾಯಕ್ಕೆ, ಅವಘಡಕ್ಕೆ ಕಾರಣವಾಗುತ್ತದೆ. ಸಿಲ್ಕ್ಯಾರಾ ಸುರಂಗ ಯೋಜನೆಯಲ್ಲಿ ತುರ್ತು ನಿರ್ಗಮನ ದಾರಿಯ ನಿರ್ಮಾಣವನ್ನೇ ಎಲ್ಲಿಯೂ ಮಾಡದೆ ನಿಯಮ ಉಲ್ಲಂಘಿಸಲಾಗಿದೆ. ಇದು ಈ ಯೋಜನೆಯಲ್ಲಿನ ಬಹು ದೊಡ್ಡ ಲೋಪ.

ಈಗ ಸಿಲ್ಕ್ಯಾರಾದಲ್ಲಿ ಎದುರಿಸಬೇಕಾಗಿ ಬಂದ ತುರ್ತು ಸ್ಥಿತಿಗೆ ಕಾರಣವಾದದ್ದು ಅಲ್ಲಿನ ಭೂಲಕ್ಷಣ ಒಂದಾದರೆ, ಸುರಂಗದಲ್ಲಿ ತುರ್ತು ನಿರ್ಗಮನ ಮಾರ್ಗ ನಿರ್ಮಿಸದೇ ಇದ್ದುದು ಮತ್ತೊಂದು ಕಾರಣ ಎನ್ನುತ್ತಾರೆ ಪರಿಣಿತರು. ತುರ್ತು ನಿರ್ಗಮನ ಮಾರ್ಗ ಇದ್ದಿದ್ದರೆ ಹೀಗೆ ಅವಘಡ ಸಂಭವಿಸಿದ ಹೊತ್ತಲ್ಲಿ ಒಳಗೆ ಸಿಲುಕಿರುವ ಕಾರ್ಮಿಕರ ರಕ್ಷಣೆ ಸುಲಭವಾಗುತ್ತದೆ, ತ್ವರಿತ ಗತಿಯಲ್ಲಿ ಆಗುತ್ತದೆ.

ಕಾಮಗಾರಿ ನಂತರೂ ಸಾರ್ವಜನಿಕರ ರಕ್ಷಣೆಗೂ ಇಂಥ ತುರ್ತು ನಿರ್ಗಮನ ಮಾರ್ಗಗಳ ಅವಶ್ಯಕತೆ ಇದ್ದೇ ಇರುತ್ತದೆ. ಅವಘಡಗಳು ನಡೆಯುತ್ತಲೇ ಇದ್ದರೂ ಅಭಿವೃದ್ಧಿ ಎಂದು ಮಾತ್ರ ಹಲಬುವ ಸರ್ಕಾರಗಳಿಗೆ, ರಾಜಕಾರಣಿಗಳಿಗೆ, ಹಣ ಮಾಡಿಕೊಳ್ಳುವ ಗುತ್ತಿಗೆದಾರರಿಗೆ ಕಳಕಳಿ ಎಂಬುದೇ ಇಲ್ಲ. ಇಂಥ ಅಕ್ರಮಗಳೆಗೆಲ್ಲ ಕಡಿವಾಣ ಬೀಳದ ಹೊರತು, ಇಂಥ ಸಂಕಟಗಳು, ಆತಂಕಗಳು ಕೂಡ ಕೊನೆಗಾಣುವುದಿಲ್ಲ.

ಇನ್ನಾದರೂ ಎಚ್ಚರ ಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!