ಸಂಬಳ ಕೇಳಿದ ದಲಿತನ ಬಾಯಿಗೆ ಚಪ್ಪಲಿ ತುರುಕಿದ ವಿಭೂತಿ ಪಟೇಲ್
ಬಡ ದಲಿತರೆಂದರೆ ತಮ್ಮ ದೌರ್ಜನ್ಯವನ್ನು ಸಹಿಸುವದಕ್ಕೇ ಇರುವವರು ಎಂಬ ಭಾವನೆಯೇ ಈ ಮೇಲ್ಜಾತಿಯ ಜನರಿಗೆ?. ದಲಿತರ ಬಾಯಲ್ಲಿ ಮೂತ್ರ ವಿಸರ್ಜನೆಯಂಥ ಹೀನ ಕೃತ್ಯಕ್ಕೂ ಮುಂದಾಗುವುದು ಜಾತಿ ದರ್ಪದಿಂದಲೇ ಅಲ್ಲವೆ?. ದಲಿತ ಮಹಿಳೆಯನ್ನು ವಿವಸ್ತ್ರಗೊಳಿಸಿ, ಆಕೆಯ ಕಣ್ಣೆದುರೇ ಆಕೆಯ ಮಗನನ್ನು ಕೊಲ್ಲಲಾಗುತ್ತದೆ. ಹಸುವಿನ ಕಳೇಬರ ಎತ್ತಲು ಒಪ್ಪಲಿಲ್ಲ ಎಂದು ದಲಿತ ವೃದ್ಧನ ಮೇಲೆ ಹಲ್ಲೆ ಮಾಡಲಾಗುತ್ತದೆ.
ಇವರ ಕ್ರೌರ್ಯಕ್ಕೆ, ನೀಚತನಕ್ಕೆ ದೇಶಾದ್ಯಂತ ಬಲಿಯಾಗುವ ದಲಿತ ಹೆಣ್ಣುಮಕ್ಕಳ ಲೆಕ್ಕವೇ ಇಲ್ಲ. ಇನ್ನು ದಲಿತ ಯುವಕ ತನ್ನದೇ ಮದುವೆಯಲ್ಲಿ ಕುದುರೆಯೇರಿದರೂ ಇವರು ಸಹಿಸುವುದಿಲ್ಲ.ರಸ್ತೆಯಲ್ಲಿ ತಮ್ಮನ್ನು ಓವರ್ಟೇಕ್ ಮಾಡಿದರೂ ಅದು ಕೂಡ ಇವರ ದೃಷ್ಟಿಯಲ್ಲಿ ಅಪರಾಧವಾಗುತ್ತದೆ. ದಲಿತರನ್ನು ಇಲ್ಲದ ನೆಪ ಹುಡುಕಿ ಥಳಿಸುವುದು ಇವರಿಗೆ ದಿನನಿತ್ಯದ ಚಾಳಿಯೇ ಆಗಿದೆ.
ಇಂಥ ಏನೆಲ್ಲವನ್ನೂ ನೋಡಬೇಕಾಗಿದೆ ಈ ದೇಶದಲ್ಲಿ?. ದಿನ ಬೆಳಗಾದರೆ ಇಂಥವೆಲ್ಲ ಕಿವಿಗೆ ಬೀಳುತ್ತಲೇ ಇರುತ್ತವೆ. ಕಡೆಗೆ ಒಬ್ಬ ದಲಿತ ನ್ಯಾಯಯುತವಾಗಿ ತನಗೆ ಬರಬೇಕಾದ ಸಂಬಳ ಕೇಳಿದರೂ ಇವರಿಗೆ ಅದು ಕೂಡ ಮಹಾಪರಾಧವಾಗಿ ಕಾಣಿಸಿಬಿಡುತ್ತದೆ.
ಕೆಲಸಕ್ಕೆ ನೇಮಿಸಿಕೊಂಡ ಹದಿನೈದು ದಿನಗಳಲ್ಲೇ ಕೆಲಸದಿಂದ ಕಿತ್ತುಹಾಕಿದ್ದೂ ಅಲ್ಲದೆ, ತನ್ನ ಸಂಬಳವನ್ನಾದರೂ ಕೊಡಿ ಎಂದು ಕೇಳಿದ್ದಕ್ಕೆ ಆತನ ಬಾಯಲ್ಲಿ ಚಪ್ಪಲಿಯನ್ನೇ ತುರುಕುವಷ್ಟು ಉದ್ಧಟತನವನ್ನು ಒಬ್ಬ ಮಹಿಳಾ ಉದ್ಯಮಿ ತೋರಿಸಿದ್ದಾಳೆ ಎಂದರೆ ಎಂಥ ಸ್ಥಿತಿಯಿದೆ ಈ ದೇಶದಲ್ಲಿ?.
ಎಲ್ಲೋ ಅಲ್ಲ, ಪ್ರಧಾನಿ ಮೋದಿಯ ತವರು ಗುಜರಾತ್ನಲ್ಲಿಯೇ ಇಂಥದೊಂದು ಕರಾಳ ಘಟನೆ ನಡೆದಿದೆ. ಈಗ ಜಾತಿ ಬೇಧ ಎಲ್ಲಿದೆ ? ಮೀಸಲಾತಿ ಏಕೆ ಕೊಡ್ಬೇಕು ? ಪ್ರತಿಭೆ ಮೇಲೆ ಹುದ್ದೆ ಕೊಡಿ ಅಂತ ಹೇಳುವವರು ಈ ಸ್ಟೋರಿ ಓದಬೇಕು. ವಿಶ್ವಗುರು ಎಂದು ಹೇಳಿಕೊಳ್ಳುವವರ ಈ ದೇಶದಲ್ಲಿ ಏನು ನಡೀತಿದೆ, ಪ್ರಧಾನಿ ಮೋದಿಯ ಅಮೃತ ಕಾಲದಲ್ಲಿ ಅವರ ತವರಲ್ಲಿಯೇ ಏನು ನಡೆದಿದೆ ಅಂತ ಒಮ್ಮೆ ನೋಡಿ.
ಮಹಿಳಾ ಉದ್ಯಮಿ ಹಾಗೂ ಆಕೆಯ 6 ಸಹಚರರು ದಲಿತ ವ್ಯಕ್ತಿಯೊಬ್ಬನ ಮೇಲೆ ದೌರ್ಜನ್ಯ ಎಸಗಿರುವುದು ಗುಜರಾತ್ ರಾಜ್ಯದ ಮೊರ್ಬಿ ನಗರದಲ್ಲಿ. ಸಂಬಳ ನೀಡುವಂತೆ ಗೋಗರೆದ ಯುವಕನ ಮೇಲೆ ಸಿಟ್ಟಿಗೆದ್ದ ಮಹಿಳೆ, ತನ್ನ ಕಂಪನಿಯ ಇತರ ಕಾರ್ಮಿಕರ ನೆರವು ಪಡೆದು 21 ವರ್ಷ ವಯಸ್ಸಿನ ದಲಿತ ಯುವಕನ ಬಾಯಿಗೆ ತನ್ನ ಚಪ್ಪಲಿಯನ್ನು ತುರುಕಿದ್ದಾಳೆ. ಸಂಬಳಕ್ಕಾಗಿ ಒತ್ತಾಯ ಮಾಡಿದ ದಲಿತ ಯುವಕನಿಗೆ ಕ್ಷಮೆ ಕೇಳುವಂತೆ ಒತ್ತಾಯಿಸಿದ್ದಾಳೆ.
ಆ ಬಡ ಯುವಕ ತನ್ನ ಸಂಬಳ ಕೇಳಿದ್ದೇ ತಪ್ಪಾಯಿತೆ?. ದಲಿತ ಯುವಕನ ಮೇಲೆ ದೌರ್ಜನ್ಯ ಎಸಗಿದವಳ ಹೆಸರು ವಿಭೂತಿ ಪಟೇಲ್ ಅಲಿಯಾಸ್ ರಾಣಿಬಾ ಎಂದು ಹೇಳಲಾಗಿದೆ. ಥಳಿಸಿದವರಲ್ಲಿ ಆಕೆಯ ಜೊತೆ ಆಕೆಯ ಸಹೋದರ ಓಂ ಪಟೇಲ್, ರಾಣಿಬಾಗೆ ಸೇರಿದ ಕಂಪನಿಯ ಮ್ಯಾನೇಜರ್ ಪರೀಕ್ಷಿತ್ ಕೂಡಾ ಇದ್ದುದರ ಬಗ್ಗೆ ಪೊಲೀಸರಿಗೆ ದಲಿತ ಯುವಕ ನಿಲೇಶ್ ದಲ್ಸಾನಿಯಾ ನೀಡಿದ ದೂರಿನಲ್ಲಿ ಹೇಳಲಾಗಿದೆ.
ಈ ವಿಭೂತಿ ಪಟೇಲ್ ಎಂಬಾಕೆ ರಾಣಿಬಾ ಇಂಡಸ್ಟ್ರೀಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ಒಡತಿಯಂತೆ. ಗುಜರಾತ್‌ನ ರವಾಪುರ ಕ್ರಾಸ್ ರಸ್ತೆಯಲ್ಲಿ ಈಕೆ ವಾಣಿಜ್ಯ ಮಳಿಗೆ ಹೊಂದಿದ್ದು, ಇಲ್ಲಿಯೇ ಕಚೇರಿಯೂ ಇದೆ. ಕಳೆದ ಅಕ್ಟೋಬರ್‌ನಲ್ಲಷ್ಟೇ ನಿಲೇಶ್ ದಲ್ಸಾನಿಯಾನನ್ನು ಟೈಲ್ಸ್ ಮಾರ್ಕೆಟಿಂಗ್ ಕೆಲಸಕ್ಕಾಗಿ ರಾಣಿಬಾ ನೇಮಕ ಮಾಡಿಕೊಂಡಿದ್ದಳು. ಆತನಿಗೆ 12 ಸಾವಿರ ರೂಪಾಯಿ ಸಂಬಳ ನಿಗದಿ ಮಾಡಲಾಗಿತ್ತಾದರೂ, ಹದಿನೈದು ದಿನಗಳಾಗುವಷ್ಟರಲ್ಲೇ ಇದ್ದಕ್ಕಿದ್ದಂತೆ ಆತನನ್ನು ಕೆಲಸದಿಂದ ಕಿತ್ತುಹಾಕಿ ಸಂಬಳವನ್ನೂ ನೀಡದೆ ಸತಾಯಿಸಲಾಯಿತು.
ತಾನು ಕನಿಷ್ಟ 16 ದಿನ ಕೆಲಸ ಮಾಡಿದ್ದು, ಅಷ್ಟು ದಿನಗಳ ವೇತನವನ್ನಾದರೂ ಕೊಡಿ ಎಂದು ನಿಲೇಶ್ ದಲ್ಸಾನಿಯಾ ಕೇಳಿಕೊಂಡಿದ್ದರೂ ರಾಣಿಬಾ ಮಾತ್ರ ಸಂಬಳ ಕೊಡುವ ಮನಸ್ಸು ಮಾಡಲೇ ಇಲ್ಲ. ಕಡೆಗೆ ಆತನ ಫೋನ್ ಕರೆಗಳನ್ನು ತೆಗೆದುಕೊಳ್ಳುವುದನ್ನೂ ನಿಲ್ಲಿಸಿದ್ದಳಂತೆ.
ಇದರಿಂದ ನೊಂದಿದ್ದ ನಿಲೇಶ್ ದಲ್ಸಾನಿಯಾ ತನ್ನ ಸಹೋದರ ಮೇಹುಲ್ ಹಾಗೂ ನೆರೆಮನೆಯ ಭವೇಶ್ ಎಂಬಾತನ ಜೊತೆಗೆ ರಾಣಿಬಾ ಕಚೇರಿಗೆ ಹೋದಾಗ, ರಾಣಿಬಾ ತನ್ನ ಸಹೋದರ ಓಂ ಪಟೇಲ್ನನ್ನು ಕರೆಸಿಕೊಂಡಿದ್ದಾಳೆ. ರಾಣಿಬಾ, ಆಕೆಯ ಸಹೋದರ ಓಂ ಪಟೇಲ್, ಕಂಪನಿಯ ಮ್ಯಾನೇಜರ್ ಹಾಗೂ ಇತರ ಕಾರ್ಮಿಕರು ಸೇರಿಕೊಂಡು ಈ ಮೂವರನ್ನೂ ಥಳಿಸಿದ್ದಾರೆ. ವಾಣಿಜ್ಯ ಕಟ್ಟಡದ ಟೆರೇಸ್ಗೆ ಮೂವರನ್ನೂ ಎಳೆದೊಯ್ದ ಆರೋಪಿಗಳು ಅಲ್ಲಿಯೂ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಅಷ್ಟು ಮಾತ್ರವಲ್ಲ, ನಿಲೇಶ್ ದಲ್ಸಾನಿಯಾ ಬಾಯಿಗೆ ತನ್ನ ಚಪ್ಪಲಿ ತುರುಕಿದ ರಾಣಿಬಾ, ಸಂಬಳ ಕೇಳಿದ್ದಕ್ಕಾಗಿ ಕ್ಷಮೆ ಕೇಳುವಂತೆ ಒತ್ತಾಯಿಸಿರುವುದಾಗಿ ದೂರಿನಲ್ಲಿ ಹೇಳಲಾಗಿದೆ. ನಿಲೇಶ್ ಹಾಗೂ ಆತನ ಜೊತೆಗಾರರಿಗೆ ಥಳಿಸಿದ ಆರೋಪದ ಮೇಲೆ ಆ ಮಹಿಳೆ ಸೇರಿ ಆರು ಮಂದಿ ವಿರುದ್ಧ ಎಸ್ಸಿ ಎಸ್ಟಿ ದೌರ್ಜನ್ಯ ತಡೆ ಕಾಯ್ದೆಯಡಿ ಎಫ್‌ಐಆರ್ ದಾಖಲಿಸಲಾಗಿದೆ.
ಆದರೆ, ಈ ಎಫ್ ಐ ಆರ್ ಗಳೆಲ್ಲ ಏನಾಗುತ್ತವೆ ಎಂಬುದು ಕಡೆಗೆ ಗೊತ್ತಾಗುವುದೇ ಇಲ್ಲ. ದಲಿತರ ನಿಂದನೆ, ಹಲ್ಲೆ, ಕೊಲೆಯಂಥ ಘಟನೆಗಳು ಇಲ್ಲಿ ನಿಲ್ಲುವುದೇ ಇಲ್ಲ. ಅಮೃತ ಕಾಲದ ಬಗ್ಗೆ ಮಾತನಾಡುವ ಮೋದಿಯಾಗಲಿ, ಅವರ ಬಿಜೆಪಿಯಾಗಲಿ ದಲಿತರ ಬಗ್ಗೆ ಹೊಂದಿರುವ ಕಾಳಜಿ ಎಂಥದು ಎಂಬುದಕ್ಕೆ ಮೋದಿ ತವರಿನಲ್ಲಿಯೇ ನಡೆದ ಈ ಕರಾಳ ಘಟನೆ ಒಂದು ಉದಾಹರಣೆ ಮಾತ್ರ.
ದಲಿತರ ಪಾಲಿಗೆ ಇಂತಹ ಕರಾಳ ಪರಿಸ್ಥಿತಿಯಿರುವ ದೇಶದಲ್ಲಿ ಸುಧೀರ್ ಚೌಧರಿ ಎಂಬ ಪ್ರಧಾನಿ ಮೋದಿಯ ಭಟ್ಟಂಗಿ ಆಂಕರ್ , "ಕ್ರಿಕೆಟ್ ನಲ್ಲಿ ಮೀಸಲಾತಿ ಇಲ್ಲದೇ ಇರೋದ್ರಿಂದ ನಮ್ಮ ದೇಶದ ತಂಡ ವಿಶ್ವಕಪ್ ನಲ್ಲಿ ಫೈನಲ್ ವರೆಗೂ ಅಜೇಯವಾಗಿ ಬಂತು. ಅಲ್ಲೂ ಮೀಸಲಾತಿ ಇದ್ದಿದ್ದರೆ ಏನಾಗುತ್ತಿತ್ತೋ ಏನೋ" ಎಂಬಂತೆ ಮಾತಾಡುವ ದಾರ್ಷ್ಟ್ಯ ಪ್ರದರ್ಶಿಸುತ್ತಾನೆ.
ಆತ ಹಾಗೆ ಮಾತಾಡಿದ ವೀಡಿಯೊವನ್ನು ಪ್ರಧಾನಿ ಮೋದಿಯ ಕಟ್ಟಾ ಬೆಂಬಲಿಗರು, ನಿವೃತ್ತ ಅಂಕಲ್ ಆಂಟಿಗಳು ಅವರ ಸುತ್ತಮುತ್ತಲ ಎಲ್ಲ ವಾಟ್ಸ್ ಆಪ್ ಗ್ರೂಪ್ ಗಳಿಗೆ ಫಾರ್ವರ್ಡ್ ಮಾಡಿ " ನೋಡಿ, ನೋಡಿ ಎಂಥಾ ಒಳ್ಳೆ ಮಾತಾಡಿದ್ದಾರೆ... " ಅಂತ ಹೇಳ್ತಾರೆ.
" ನಮ್ಮ ಪ್ರತಿಭಾವಂತ ಮಕ್ಕಳ ಎಲ್ಲ ಅವಕಾಶಗಳನ್ನು ಈ ಎಸ್ಸಿ ಎಸ್ಟಿಗಳು ಮೀಸಲಾತಿಯಿಂದಾಗಿ ಕಿತ್ತು ಕೊಳ್ತಾ ಇದ್ದಾರೆ " ಅಂತ ಇದೇ ಮೋದಿಜಿ ಭಕ್ತ ಅಂಕಲ್ ಆಂಟಿಗಳು ಇನ್ನಿಲ್ಲದಂತೆ ಪ್ರಚಾರ ಮಾಡ್ತಾರೆ.
ಅಂತ ದ್ವೇಷ ಹಾಗು ಸುಳ್ಳು ಹರಡುವ ವೀಡಿಯೊವನ್ನೇ ಮೋದಿ ಬೆಂಬಲಿಗ ನಿರುದ್ಯೋಗಿ ಯುವಜನರೂ ಫಾರ್ವರ್ಡ್ ಮಾಡ್ತಾರೆ. ಈ ವೀಡಿಯೊ ತಮ್ಮ ಪಾಲಿಗೇ ಕಂಟಕ ಎಂಬುದೂ ಅವರ ಅರಿವಿಗೆ ಬರೋದಿಲ್ಲ. ಏಕೆಂದರೆ ಅವರ ಮೆದುಳಿಗೆ ಸುಳ್ಳಿನ ಸಗಣಿ ಹಾಗು ಮನಸ್ಸಿಗೆ ದ್ವೇಷದ ವಿಷ ತುಂಬಿ ಬಿಡಲಾಗಿದೆ. ಇಲ್ಲಿ ಅಂಬೇಡ್ಕರ್ ಗೆ ಕಾಂಗ್ರೆಸ್ ಮೋಸ ಮಾಡಿತು ಎಂದು ಮೋದೀಜಿ, ಬಿಜೆಪಿ ಪ್ರಚಾರ ಮಾಡುತ್ತಲೇ ರಾಜಕೀಯ ಲಾಭ ಬಾಚುತ್ತಲೇ ಇರುತ್ತಾರೆ.
ಅವರ ಮೂಗಿನಡಿಯಲ್ಲೇ ಇವತ್ತಿಗೂ ಇಲ್ಲಿ ದಲಿತರ ಬಾಯಿಗೆ ತಮ್ಮ ಚಪ್ಪಲಿ ಹಾಕುವ ಅವರ ಬೆಂಬಲಿಗರ ಆಟಾಟೋಪ ಮುಂದುವರಿಯುತ್ತಲೇ ಇರುತ್ತದೆ.