ನರಸಿಂಹರಾವ್ ನಿಜಕ್ಕೂ ಮೃದು ಹಿಂದುತ್ವವಾದಿಯಾಗಿದ್ದರೇ ?

ಪಿ.ವಿ.ನರಸಿಂಹರಾವ್ ಈ ದೇಶದ ಪ್ರಥಮ ಬಿಜೆಪಿ ಪ್ರಧಾನಿ!.

Update: 2023-08-30 17:44 GMT

ನರಸಿಂಹರಾವ್

ಹೀಗೊಂದು ಆರೋಪ ಮಾಡಿದ್ದು ಸ್ವತಃ ಕಾಂಗ್ರೆಸಿನ ಹಿರಿಯ ಮುಖಂಡ, ಮಾಜಿ ಕೇಂದ್ರ ಸಚಿವ ಮಣಿಶಂಕರ್ ಅಯ್ಯರ್. ಇದು ಮೊದಲ ಸಲವಲ್ಲ, ಈ ಹಿಂದೆಯೂ ಹಲವು ಬಾರಿ ಅಯ್ಯರ್ ಇಂತಹ ಗಂಭೀರ ಆರೋಪ ಮಾಡುತ್ತಲೇ ಬಂದಿದ್ದಾರೆ. ರಾಜೀವ್ ಗಾಂಧಿಯವರ ಹತ್ಯೆಯ ನಂತರ ಕಾಂಗ್ರೆಸ್ನೊಳಗೆ ಉಂಟಾಗಿದ್ದ ರಾಜಕೀಯ ನಿರ್ವಾತದ ಫಲವಾಗಿ 1991-96ರವರೆಗೆ ಕಾಂಗ್ರೆಸ್ ನೇತೃತ್ವದ ಸಮ್ಮಿಶ್ರ ಸರಕಾರದಲ್ಲಿ ಭಾರತದ ಪ್ರಧಾನಿಯಾಗಿ ಕರ್ತವ್ಯ ನಿರ್ವಹಿಸಿದ ಪಿ.ವಿ. ನರಸಿಂಹರಾವ್ ಅವರು ಒಂದುಕಡೆ, ತಮ್ಮ ಉದಾರೀಕರಣ ನೀತಿಗಳ ಭಾಗವಾಗಿ ಆರ್ಥಿಕ ಸುಧಾರಕನಾಗಿ ಗುರುತಿಸಿಕೊಂಡರೆ, ಮತ್ತೊಂದೆಡೆ ಬಾಬರಿ ಮಸೀದಿ ಧ್ವಂಸವನ್ನು ತಡೆಗಟ್ಟಲಾಗದ ಅಸಮರ್ಥತೆಯ ಕಾರಣಕ್ಕೆ ಭಾರೀ ಟೀಕೆಗೂ ಗುರಿಯಾಗಿದ್ದವರು.

ಈಗ ಮಣಿಶಂಕರ್ ಅಯ್ಯರ್ ಆರೋಪ ಮಾಡುತ್ತಿರುವುದು ಈ ಎರಡನೇ ಆಯಾಮದ ನಿಟ್ಟಿನಿಂದ. ಹಾಗಾದರೆ, ನರಸಿಂಹರಾವ್ ನಿಜಕ್ಕೂ ‘ಸಾಫ್ಟ್ ಹಿಂದುತ್ವವಾದಿಯಾಗಿದ್ದರೇ?. ಜಾತ್ಯತೀತ ತತ್ವಗಳನ್ನು ಹಿನ್ನೆಲೆಗೆ ದೂಡಿ, ಈ ನೆಲದಲ್ಲಿ ಹಿಂದುತ್ವ ರಾಜಕಾರಣ ಮುನ್ನೆಲೆಗೆ ಬರುವಲ್ಲಿ ಪ್ರಧಾನಿಯಾಗಿ ಪಿ.ವಿ. ನರಸಿಂಹರಾವ್ ಅವರ ಆಡಳಿತ ಕಾರಣವೇ?. ಹಿಂದುತ್ವದ ರಾಜಕಾರಣಕ್ಕೆ ತಡೆಯೊಡ್ಡುವಲ್ಲಿ ನರಸಿಂಹರಾವ್ ಅವರ ಅಸಮರ್ಥತೆಯನ್ನು ಹೊರತುಪಡಿಸಿ, ಕಾಂಗ್ರೆಸಿನ ಯಾವ ಪಾಲುದಾರಿಕೆಯೂ ಇಲ್ಲವೇ?. ಈ ಪ್ರಶ್ನೆಗಳಿಗೆ ನಾವು ಉತ್ತರ ಕಂಡುಕೊಳ್ಳಬೇಕಾದ್ದು ಕಾಲದ ತುರ್ತು ಎಂದರೂ ತಪ್ಪಲ್ಲ.

ಯಾಕೆಂದರೆ, ಪಿ.ವಿ.ನರಸಿಂಹರಾವ್ ಕಾಲದಲ್ಲಿ ನಡೆದ ಬಾಬರಿ ಮಸೀದಿ ಧ್ವಂಸ ಪ್ರಕರಣದಿಂದಾಗಿ ಮುನ್ನೆಲೆಗೆ ಬಂದ ಹಿಂದುತ್ವ ಕೋಮುವಾದಿ ರಾಜಕಾರಣ, ಇಂದು ತನ್ನ ಉತ್ತುಂಗವನ್ನು ತಲುಪಿದೆ. ಈ ಹಂತದಲ್ಲಿ ನಾವು ಕೋಮುವಾದಿ ರಾಜಕಾರಣವನ್ನು ಮುಖಾಮುಖಿಯಾಗಬೇಕೆಂದರೆ, ಚರಿತ್ರೆಯು ನಮ್ಮ ಮುಂದಿರಿಸಿರುವ ಇಂಥಾ ಪ್ರಶ್ನೆಗಳಿಗೆ ಉತ್ತರ ಕಂಡುಕೊಳ್ಳಲೇಬೇಕಾಗುತ್ತದೆ.

ಪಿ.ವಿ. ನರಸಿಂಹರಾವ್ ವೈಯಕ್ತಿಕವಾಗಿ ಹಿಂದುತ್ವ ರಾಜಕಾರಣದತ್ತ ಮೃದು ಭಾವನೆ ತಳೆದಿದ್ದರು ಎನ್ನಲು ಮಣಿಶಂಕರ್ ಅಯ್ಯರ್ ಹಲವು ನಿದರ್ಶನಗಳನ್ನು ನಮ್ಮ ಮುಂದಿಡುತ್ತಾರೆ. ಬಾಬರಿ ಮಸೀದಿಯನ್ನು ನೆಪವಾಗಿಟ್ಟುಕೊಂಡು ಸಂಘ ಪರಿವಾರ ಎಲ್.ಕೆ.ಅಡ್ವಾಣಿಯವರ ನೇತೃತ್ವದಲ್ಲಿ ಕೋಮು ಧ್ರುವೀಕರಣದ ರಥಯಾತ್ರೆಯನ್ನು ಹಮ್ಮಿಕೊಂಡಿದ್ದಾಗ, ಅದಕ್ಕೆ ಪ್ರತಿಯಾಗಿ ಮಣಿಶಂಕರ್ ಅಯ್ಯರ್, ಕೋಮು ಸಾಮರಸ್ಯವನ್ನು ಮುನ್ನೆಲೆಗೆ ತರುವ ‘ರಾಮ್-ರಹೀಮ್ ಯಾತ್ರೆಯನ್ನು ಆಯೋಜಿಸಿರುತ್ತಾರೆ. ಅವರ ಯಾತ್ರೆ ಉತ್ತರ ಪ್ರದೇಶವನ್ನು ಪ್ರವೇಶಿಸಿದಾಗ, ಅದರ ಮೇಲೆ ನಿರ್ಬಂಧ ವಿಧಿಸುವ ಪ್ರಧಾನಿ ರಾವ್ ಅವರ ಸರಕಾರ, ಅಯ್ಯರ್ ಅವರನ್ನು ಬಂಧಿಸುತ್ತದೆ.

ಆಗ ಅಯ್ಯರ್ ಅವರನ್ನು ತಮ್ಮ ನಿವಾಸಕ್ಕೆ ಕರೆಸಿಕೊಳ್ಳುವ ರಾವ್ ಅವರು, 'ನಿಮ್ಮ ಯಾತ್ರೆಯ ಬಗ್ಗೆ ನನಗೆ ಯಾವ ತಕರಾರೂ ಇಲ್ಲ ಅಯ್ಯರ್. ಆದರೆ ನೀವು ಜಾತ್ಯತೀತತೆಗೆ ನೀಡುತ್ತಿರುವ ವ್ಯಾಖ್ಯಾನದ ಬಗ್ಗೆ ಸಮ್ಮತಿ ಇಲ್ಲ. ಎಷ್ಟೇ ಆಗಲಿ ಇದು ಹಿಂದೂ ರಾಷ್ಟ್ರವಲ್ಲವೇ?' ಎಂದು ಪ್ರಶ್ನಿಸುತ್ತಾರೆ. ಅರೇ, ಬಿಜೆಪಿ ಮತ್ತು ಆರೆಸ್ಸೆಸ್ ಕೂಡಾ ಇದೇ ಮಾತು ಹೇಳುತ್ತವೆ. ನಿಮಗೂ ಅವರಿಗೂ ಏನು ವ್ಯತ್ಯಾಸ? ಎಂದು ತಾನು ಆಶ್ಚರ್ಯಗೊಂಡು ಪ್ರತಿಕ್ರಿಯಿಸಿದ್ದಾಗಿ ಅಯ್ಯರ್ ಹೇಳಿಕೊಂಡಿದ್ದಾರೆ.

ಇದೊಂದು ಸಂಭಾಷಣೆಯನ್ನು ಆಧಾರವಾಗಿಟ್ಟುಕೊಂಡು ನಾವು ನರಸಿಂಹರಾವ್ ಅವರನ್ನು ನೇರವಾಗಿ ಹಿಂದುತ್ವದ ಪ್ರತಿಪಾದಕನೆಂದು ಕರೆದುಬಿಡಬಹುದೇ? ಖಂಡಿತ ಸಾಧ್ಯವಿಲ್ಲ. ಆದರೆ, ಇಡೀ ಬಾಬರಿ ಮಸೀದಿ ಪ್ರಕರಣದಲ್ಲಿ ಪಿ.ವಿ.ನರಸಿಂಹರಾವ್ ಅವರು ನಡೆದುಕೊಂಡ ರೀತಿಯನ್ನು ಗಮನಿಸಿದಾಗ, ಅಯ್ಯರ್ ಅವರ ಆರೋಪಕ್ಕೆ, ರಾವ್ ಅರ್ಹರೇನೋ ಅನ್ನಿಸದಿರದು.

ಸಾಧು ಸಂತರ ಜೊತೆ ಮಾತುಕತೆ ನಡೆಸುವ ಮೂಲಕ ಅಯೋಧ್ಯೆ ಭೂವಿವಾದವನ್ನು ಬಗೆಹರಿಸಬಹುದು ಎನ್ನುವುದು ಅವರ ಬಲವಾದ ನಂಬಿಕೆಯಾಗಿತ್ತು. ಆ ಪ್ರಯತ್ನದಲ್ಲಿ ಅವರು ನಿರತರಾಗಿದ್ದರು ಕೂಡಾ. ಸಾಧು ಮತ್ತು ಸಂತರ ಜೊತೆ ಅಯೋಧ್ಯೆ ಭೂವಿವಾದವನ್ನು ಶಾಂತಿಯುತ ಒಪ್ಪಂದದ ಮೂಲಕ ಬಗೆಹರಿಸಲು ಮಾತುಕತೆ ನಡೆಸುತ್ತಿದ್ದ ನರಸಿಂಹರಾವ್, 1992ರ ಆಗಸ್ಟ್ ವರೆಗೂ ಅಯೋಧ್ಯೆ ವಿವಾದ ಒಂದು ‘a political’ ವಿವಾದ ಅಂತಲೇ ನಂಬಿಕೊಂಡಿದ್ದರು ಮತ್ತು ಸಾಧು-ಸಂತರು ಕೋಮುವಾದಿ ರಾಜಕೀಯ ಶಕ್ತಿಗಳಿಂದ ಪ್ರಭಾವಿತರಾಗಿರುವ ವಾಸ್ತವವನ್ನು ಮನಗಾಣುವಲ್ಲಿ ವಿಫಲರಾಗಿದ್ದರು.

ಇದು ಅವರು ಮಾಡಿದ ಬಹುದೊಡ್ಡ ಪ್ರಮಾದ ಮಾತ್ರವಲ್ಲ, ಕೋಮುವಾದಿ ರಾಜಕಾರಣ ಮತ್ತು ಧಾರ್ಮಿಕ ಮೂಲಭೂತವಾದದ ನಡುವಿನ ತೆಳು ಪೊರೆಯನ್ನು ಅರ್ಥೈಸಿಕೊಳ್ಳುವಲ್ಲಿ ಕಾಂಗ್ರೆಸ್ ಪಕ್ಷ ನಿರಂತರವಾಗಿ ಎಡವುತ್ತಾ ಬಂದಿರುವ ಪರಂಪರೆಯ ವಿಸ್ತರಣೆ ಕೂಡಾ ಆಗಿತ್ತು.

ತಮ್ಮ ಕೊನೆಗಾಲದಲ್ಲಿ ರಾವ್ ಬರೆದ 'Ayodhya: 6 December 1992’ ಕೃತಿಯಲ್ಲಿ ತಾವು ಮಾತುಕತೆ ನಡೆಸುತ್ತಿದ್ದ ವಿಶ್ವ ಹಿಂದೂ ಪರಿಷತ್ ನೇತೃತ್ವದ ಸಾಧು ಸಂತರು ‘ರಾಜಕೀಯ ಶಕ್ತಿಗಳಿಂದ ಪ್ರಭಾವಿತರಾಗಿದ್ದರು’ ಎಂದು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಆದರೆ ಆಗಲೂ ಬಿಜೆಪಿಯನ್ನು ನೇರವಾಗಿ ಹೆಸರಿಸದೆ, ‘ಆ ರಾಜಕೀಯ ಶಕ್ತಿಗಳು ಅಡ್ಡಗಾಲು ಹಾಕದೇ ಹೋಗಿದ್ದರೆ, ತಾನು ಸಾಧು ಸಂತರ ಜೊತೆಗಿನ ಸೌಹಾರ್ದ ಮಾತುಕತೆಯ ಮೂಲಕ, ಕಾನೂನು ಸುವ್ಯವಸ್ಥೆಗೆ ಅಡ್ಡಿಯಾಗದಂತೆ ರಾಮಮಂದಿರಕ್ಕೆ ಸಂಧಾನ ಸೂತ್ರ ರೂಪಿಸುತ್ತಿದ್ದೆ ಎಂದು ಪ್ರತಿಪಾದಿಸಿಕೊಂಡಿದ್ದಾರೆ.

ಅಂದರೆ, ಕೊನೆಯವರೆಗೂ ರಾಮಮಂದಿರ ವಿವಾದ ಮೂಲತಃ ಒಂದು ರಾಜಕೀಯ ಹುನ್ನಾರ ಎನ್ನುವುದನ್ನು ಅವರು ಅರ್ಥ ಮಾಡಿಕೊಂಡಿರಲೇ ಇಲ್ಲ ಅಥವಾ ಅರ್ಥ ಮಾಡಿಕೊಳ್ಳಲು ಅವರು ಬಯಸಿರಲಿಲ್ಲ ಎಂಬುದು ಇದರಿಂದ ಸಾಬೀತಾಗುತ್ತದೆ.

1985ರ ಅವಧಿಯಿಂದ, ಆಮದು ಆಧಾರಿತ ಆರ್ಥಿಕತೆಯ ಮೇಲೆ ಅವಲಂಬಿತವಾಗುತ್ತಾ ಬಂದು, 1990ರ ಸುಮಾರಿಗೆ ಬಹುದೊಡ್ಡ ಸಂಕಷ್ಟಕ್ಕೆ ಸಿಲುಕಿದ್ದ ಭಾರತದ ಆರ್ಥಿಕತೆ ಚೇತರಿಸಿಕೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದ ನರಸಿಂಹರಾವ್ ಅವರು ಅಯೋಧ್ಯೆ ವಿವಾದದ ಹಿಂದಿನ ಸುಸ್ಪಷ್ಟ ರಾಜಕೀಯ ಚಿತಾವಣೆಯನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾದದ್ದು ಏಕೆ?.

ಮೂಲತಃ ತೆಲಂಗಾಣದ ವಾರಂಗಲ್ ಜಿಲ್ಲೆಯ ಭೂಮಾಲಕ ನಿಯೋಗಿ ಬ್ರಾಹ್ಮಣ ಕುಟುಂಬದಲ್ಲಿ ಹುಟ್ಟಿ ಬೆಳೆದ ರಾವ್, ಕೋಮುವಾದಿ ರಾಜಕಾರಣಕ್ಕೆ ಬೇಕಾದ ಭೂಮಾಲಕ ಗುಣ ಹಾಗೂ ಜಾತಿಯ ಪ್ರಿವಿಲೇಜ್ ಗಳು ಉಳ್ಳವರಾಗಿದ್ದರು. ಆ ಕಾರಣಕ್ಕೆ ರೆಡ್ಡಿ ಮತ್ತು ವೇಲಂ ಜಾತಿಗಳ ಪಾರುಪತ್ಯವಿರುವ ತೆಲಂಗಾಣ ಅಂದ್ರೆ ಆಗಿನ ಹೈದ್ರಾಬಾದ್ ಸಂಸ್ಥಾನ ರಾಜ್ಯದಲ್ಲಿ ರಾಜಕಾರಣದ ಉತ್ತುಂಗವನ್ನು ತಲುಪಲು ರಾವ್ ಅವರಿಗೆ ಸಾಧ್ಯವಾಯಿತು. 1971ರಲ್ಲಿ ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾದರು. ಆಗಿನ ಏಕೀಕೃತ ಆಂಧ್ರದಲ್ಲಿ, ತೆಲಂಗಾಣ ಭಾಗದಿಂದ ಸಿಎಂ ಸ್ಥಾನಕ್ಕೇರಿದ ಮೊದಲ ವ್ಯಕ್ತಿ ನರಸಿಂಹ ರಾವ್.

ತಾವು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಅವರು ಜಾರಿಗೆ ತಂದ ಭೂಸುಧಾರಣೆ ನೀತಿಗಳು ಮತ್ತು ಕೆಳಜಾತಿಯವರಿಗೆ ಮೀಸಲಾತಿ ನೀಡುವ ಕ್ರಮಗಳ ಹೊರತಾಗಿಯೂ ಪಿ.ವಿ.ನರಸಿಂಹ ರಾವ್, ಆಗಿನ ಕಾಲದ ಬಹಳಷ್ಟು ಕಾಂಗ್ರೆಸ್ ನಾಯಕರಂತೆ ಧಾರ್ಮಿಕತೆ ಮತ್ತು ಕೋಮುವಾದಗಳ ನಡುವೆ ಸ್ಪಷ್ಟ ವ್ಯತ್ಯಾಸವನ್ನು ಗುರುತಿಸಲಾರದಷ್ಟು ಗೊಂದಲದಲ್ಲಿದ್ದರು. ಅಥವಾ ಇನ್ನೊಂದು ಮಾತಿನಲ್ಲಿ ಹೇಳುವುದಾದರೆ, ತಮ್ಮ ಧಾರ್ಮಿಕ ನಂಬಿಕೆಗಳು ಕೋಮುವಾದಿ ರಾಜಕಾರಣಕ್ಕೆ ಹೇಗೆ ದಾರಿ ಸುಗಮ ಮಾಡಿಕೊಡುತ್ತಾ ಬರುತ್ತಿವೆ ಎಂಬುದನ್ನು ಅರ್ಥ ಮಾಡಿಕೊಳ್ಳುವಲ್ಲಿ ವಿಫಲವಾಗಿದ್ದರು.

ಈ ಮೊದಲೇ ಹೇಳಿದಂತೆ ಇದು ನರಸಿಂಹರಾವ್ ಅವರಿಗೆ ಮಾತ್ರ ಸೀಮಿತವಾದ ಸಂಗತಿಯಲ್ಲ, ಕಾಂಗ್ರೆಸ್ನೊಳಗೆ ತಮ್ಮ ಪಕ್ಷದ ತಾತ್ವಿಕ ಸ್ಪಷ್ಟತೆಯಲ್ಲಿ ಇರುವ ಗೊಂದಲದ ಸಾರ್ವತ್ರಿಕ ರೂಪವೂ ಹೌದು. ಈ ನಿಟ್ಟಿನಲ್ಲಿ ನೋಡುವುದಾದರೆ, ಸ್ವಾತಂತ್ರ್ಯಪೂರ್ವ ಕಾಲದಿಂದಲೂ ಕಾಂಗ್ರೆಸ್ ಪ್ರತಿಪಾದಿಸಿಕೊಂಡು ಬಂದ ‘ಜಾತ್ಯತೀತ’ ತತ್ವದ ನಿಜವಾದ ಅರಿವು ಮತ್ತು ವಿಸ್ತಾರ ಸ್ವಾತಂತ್ರ್ಯಾ ನಂತರದಲ್ಲಿ ಉಳಿದದ್ದು ನೆಹರೂ ಅವರಲ್ಲಿ ಮಾತ್ರ!. ಇವತ್ತಿಗೂ ಕೋಮುವಾದಿಗಳಿಗೆ ನೆಹರೂ ಅಪಥ್ಯವಾಗಿರುವುದು ಇದೇ ಕಾರಣಕ್ಕೆ.

ಇಂದಿರಾಗಾಂಧಿ, ರಾಜೀವ್ಗಾಂಧಿಯೂ ಸೇರಿದಂತೆ ಕಾಂಗ್ರೆಸಿನ ಬಹುಪಾಲು ನಾಯಕರು ‘ಜಾತ್ಯತೀತ’ ತತ್ವವನ್ನು ಗ್ರಹಿಸುವಲ್ಲಿ ಮುಗ್ಗರಿಸುತ್ತಲೇ ಬಂದರು. ಇನ್ನೊಂದು ಅರ್ಥದಲ್ಲಿ, ತಮಗೇ ಅರಿವಿಲ್ಲದೆ ಕೋಮುವಾದಿ ರಾಜಕಾರಣ ಬಲಗೊಳ್ಳುವುದಕ್ಕೆ ನೆರವಾಗುತ್ತಾ ಬಂದರು. ಅಂತಹ ಪರಂಪರೆಯ ಒಂದು ವಿಸ್ತರಣೆಯ ರೂಪವೇ 1991 ರಿಂದ 96ರ ಅವಧಿಯಲ್ಲಿ ಈ ದೇಶಕ್ಕೆ ಸಿಕ್ಕ ಪಿ.ವಿ.ನರಸಿಂಹ ರಾವ್ ಅವರ ಆಡಳಿತ ವೈಖರಿ.

ಅಯ್ಯರ್ ಉಲ್ಲೇಖಿಸಿರುವ ನಿದರ್ಶನದಲ್ಲಿ ‘ಜಾತ್ಯತೀತತೆ’ಗೆ ನೀವು ನೀಡುತ್ತಿರುವ ವ್ಯಾಖ್ಯಾನಕ್ಕೆ ನನ್ನ ಸಮ್ಮತಿಯಿಲ್ಲ ಎಂದು ರಾವ್ ಹೇಳಿದ್ದು ಕೂಡಾ, ಕಾಂಗ್ರೆಸ್ನೊಳಗೇ ಜಾತ್ಯತೀತ ಸಿದ್ಧಾಂತವನ್ನು ಸಮಷ್ಟಿಯಾಗಿ ಗ್ರಹಿಸುವ ವಿಚಾರದಲ್ಲಿ ದೊಡ್ಡ ಕೊರತೆ ಇದೆ ಎಂಬುದನ್ನು ಅರ್ಥ ಮಾಡಿಸುತ್ತದೆ.

ಹಾಗಾದರೆ, ಪಿ.ವಿ.ನರಸಿಂಹರಾವ್ ಅವರ ದೃಷ್ಟಿಯಲ್ಲಿ ಜಾತ್ಯತೀತತೆ ಎಂಬುದರ ಕಲ್ಪನೆ ಏನಾಗಿತ್ತು?.

2019ರಲ್ಲಿ ಸಂಸತ್ತಿನಲ್ಲಿ ರಾಷ್ಟ್ರಪತಿಗಳ ಭಾಷಣಕ್ಕೆ ಧನ್ಯವಾದ ಅರ್ಪಿಸುತ್ತಾ ಪ್ರಧಾನಿ ಮೋದಿ ಮಾಡಿದ ಭಾಷಣದಲ್ಲಿ, ರಾಜೀವ್ ಗಾಂಧಿಯವರು ಪ್ರಧಾನಿಯಾಗಿದ್ದಾಗ ಅವರ ಸಂಪುಟದಲ್ಲಿ ಸಚಿವರಾಗಿದ್ದ ಮಂತ್ರಿಯೋರ್ವರು " ಮುಸ್ಲಿಮ್ ಸಮುದಾಯ ಗಟಾರದ ಗುಂಡಿಯಲ್ಲಿ ಬಿದ್ದಿರುವುದನ್ನೇ ಬಯಸುವುದಾದರೆ, ನಾವಾದರೂ ಹೇಗೆ ಅವರ ಏಳಿಗೆ ಮಾಡಲು ಸಾಧ್ಯ?" ಎಂದು ಅಸಂವೇದನೆಯಿಂದ ಮಾತಾಡಿದ್ದರು ಎಂದು ಹೇಳಿದ್ದರು.

ಪ್ರಧಾನಿ ಮೋದಿಯವರಿಗೆ ಮತ್ತು ಅವರ ಪಕ್ಷಕ್ಕೆ ಮುಸ್ಲಿಮ್ ಏಳಿಗೆಯ ಬಗ್ಗೆ ಎಷ್ಟು ಮಾತ್ರ ಕಾಳಜಿ ಎನ್ನುವುದು ಬೇರೆ ವಿಚಾರ, ಆದರೆ ಮುಸ್ಲಿಮರ ಕುರಿತಂತೆ ಕಾಂಗ್ರೆಸ್ ಯಾವ ರೀತಿ ನಿಲುವನ್ನು ಹೊಂದಿತ್ತು ಎಂಬ ಹಳಸಲು ನಿದರ್ಶನವನ್ನು ಉಲ್ಲೇಖಿಸಿ, ಆ ಮೂಲಕ ಮುಸ್ಲಿಮರು ಕಾಂಗ್ರೆಸ್ನಿಂದ ವಿಮುಖರಾಗುವಂತೆ ಮಾಡುವುದು ಅವರ ಉದ್ದೇಶವಾಗಿತ್ತು. ಇಲ್ಲಿ ಈ ಮಾತು ಯಾಕೆ ಮುಖ್ಯವಾಗುತ್ತದೆಂದರೆ, ಮೋದಿಯವರು ಉಲ್ಲೇಖಿಸಿದ ಆ ಮಾತನ್ನು ಆಡಿದ್ದು ಬೇರೆ ಯಾರೂ ಅಲ್ಲ, ರಾಜೀವ್ ಅವರ ಸಂಪುಟದಲ್ಲಿ ಮಂತ್ರಿಯಾಗಿದ್ದ ಪಿ.ವಿ. ನರಸಿಂಹ ರಾವ್ ಅವರು!. ಅದೇ ಸಂಪುಟದಲ್ಲಿ ಕಿರಿಯ ಮಂತ್ರಿಯಾಗಿದ್ದ ಆರೀಫ್ ಮುಹಮ್ಮದ್ ಖಾನ್ ಅವರೇ ಇದನ್ನು ಸ್ಪಷ್ಟಪಡಿಸಿದ್ದಾರೆ.

ಮುಸ್ಲಿಮರ ಕುರಿತಾಗಿ ನರಸಿಂಹರಾವ್ ಅವರ ಗ್ರಹಿಕೆ ಹೇಗಿತ್ತು ಎನ್ನುವುದು, ಅವರ ಜಾತ್ಯತೀತ ತತ್ವದ ಗ್ರಹಿಕೆ ಹೇಗಿತ್ತು ಎಂಬುದನ್ನೂ ನಮಗೆ ಅರ್ಥ ಮಾಡಿಸುತ್ತದೆ. ಕೋಮುವಾದಿಗಳ ರಕ್ತಪಿಪಾಸು ರಾಜಕಾರಣವನ್ನು ಬೆಂಬಲಿಸದೆ ಹೋದರೂ, ‘ಮುಸ್ಲಿಮರು ಈ ದೇಶಕ್ಕೆ ಹೊರಗಿನವರು’ ಎಂಬ ಅನ್ಯಭಾವನೆಯನ್ನು ಭಾರತೀಯ ಸಮಾಜದಲ್ಲಿ ಹೇಗೆ ಪಸರಿಸಲಾಗಿದೆಯೋ, ಅದಕ್ಕೆ ನರಸಿಂಹರಾವ್ ಅವರೂ ಬಲಿಯಾಗಿದ್ದರಿಂದಲೇ ‘ಎಷ್ಟೇ ಆಗಲಿ ಇದು ಹಿಂದೂ ರಾಷ್ಟ್ರವಲ್ಲವೇ?’ ಎಂಬ ಮಾತು ಅವರ ಬಾಯಿಂದ ಬರಲು ಸಾಧ್ಯವಾದದ್ದು.

ಅದಷ್ಟೇ ಅಲ್ಲ, ಬಾಬರಿ ಮಸೀದಿಯ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಪಕ್ಷದ ಕೋರ್ ಕಮಿಟಿ ಸಭೆಯೊಂದರಲ್ಲಿ, ರಾವ್ ಅವರು ಕಠಿಣ ಕ್ರಮಗಳಿಗೆ ಮುಂದಾಗದೆ ಸಾಧು-ಸಂತರ ಜೊತೆ ಮಾತುಕತೆ ನಡೆಸುತ್ತಿರುವುದರ ಕುರಿತು ಆಕ್ಷೇಪಗಳು ಕೇಳಿಬಂದಾಗ, ಹಿಂದಿನ ಕಾಲದಲ್ಲೂ ರಾಜ-ಮಹಾರಾಜರು ತಮ್ಮ ಆಡಳಿತಕ್ಕೆ ಸಾಧು-ಸಂತರು-ಧಾರ್ಮಿಕ ಗುರುಗಳನ್ನು ಸಂಪರ್ಕಿಸಿ ಸಲಹೆ, ಮಾರ್ಗದರ್ಶನ ಪಡೆಯುತ್ತಿದ್ದರು. ನಾನೂ ಹಾಗೇ ಮಾಡುತ್ತಿದ್ದೇನೆ ಎಂದು ಸಮರ್ಥಿಸಿಕೊಂಡಿದ್ದರು ಎಂಬುದಾಗಿಯೂ ಮಣಿಶಂಕರ್ ಅಯ್ಯರ್ ಒಂದುಕಡೆ ಆರೋಪಿಸಿದ್ದಾರೆ. ಇದು ನರಸಿಂಹರಾವ್ ಅವರ ಮನಸ್ಥಿತಿಯನ್ನು ಸೂಚಿಸುತ್ತದೆ.

ಕೋಮುವಾದಿಗಳ ಬಗ್ಗೆ ರಾವ್ ಅವರ ಈ ಮೃದುತ್ವವೇ ಬಾಬರಿ ಮಸೀದಿ ಧ್ವಂಸಕ್ಕೆ ಎಡೆ ಮಾಡಿಕೊಟ್ಟಿತು ಎಂದರೂ ತಪ್ಪಾಗಲಾರದು. ಈ ಮಾತನ್ನು 1992ರಲ್ಲಿ ಗೃಹ ಸಚಿವಾಲಯದ ಕಾರ್ಯದರ್ಶಿಯಾಗಿದ್ದ ಮಾಧವ್ ಗೋಡಬೊಲೆಯವರು ತಮ್ಮ 'The Babri Masjid-Ram Mandir Dilemma: An Acid Test for India's Constitution' ಕೃತಿಯಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.

ಲಕ್ಷಾಂತರ ಕರಸೇವಕರು ದೇಶಾದ್ಯಂತ ಜಮೆಯಾಗಿ ಅಯೋಧ್ಯೆಯತ್ತ ಹೊರಟ ವರ್ತಮಾನವನ್ನು ಅಧ್ಯಯನ ಮಾಡಿದ ಕೇಂದ್ರ ಗೃಹ ಸಚಿವಾಲಯವು ಒಂದು 'Contingency Plan' ಅಂದ್ರೆ " ಆ ಅಪಾಯಕಾರಿ ಸ್ಥಿತಿ ಎದುರಿಸುವ ಯೋಜನೆ " ತಯಾರಿಸಿ, ಆದಷ್ಟು ಬೇಗ ಸಂವಿಧಾನದ 356ನೇ ವಿಧಿಯನ್ನು ಬಳಸಿಕೊಂಡು ಉತ್ತರ ಪ್ರದೇಶದ ಬಿಜೆಪಿ ಸರಕಾರವನ್ನು ವಜಾಗೊಳಿಸಿ, ರಾಷ್ಟ್ರಪತಿ ಆಳ್ವಿಕೆ ಹೇರಲು ಶಿಫಾರಸು ಮಾಡಿತ್ತು. ಅಂದಿನ ಪ್ರಧಾನಿಗಳು ಒಂದು ದಿಟ್ಟ ರಾಜಕೀಯ ನಿರ್ಧಾರವನ್ನು ತೆಗೆದುಕೊಂಡಿದ್ದರೆ, ಈ ರಾಮಾಯಣದ ಮಹಾಭಾರತವೇ ನಡೆಯುತ್ತಿರಲಿಲ್ಲ.

ಒಂದು ನಿರ್ಣಾಯಕ ಟೆಸ್ಟ್ ಕ್ರಿಕೆಟ್ ಮ್ಯಾಚ್ನಲ್ಲಿ ತುಂಬಾ ಪ್ರಧಾನ ಭೂಮಿಕೆ ನಿರ್ವಹಿಸಿಬೇಕಿದ್ದ ರಾವ್ ಅವರು, ದುರದೃಷ್ಟವಶಾತ್ ಕಣಕ್ಕೇ ಇಳಿಯದ ಕಪ್ತಾನನಾಗಿ ಕೂತರು ಎಂದು ಗೋಡಬೊಲೆಯವರು ತಮ್ಮ ಪುಸ್ತಕದಲ್ಲಿ ಅಭಿಪ್ರಾಯ ಪಟ್ಟಿದ್ದಾರೆ. ಗೃಹ ಸಚಿವಾಲಯ ನೀಡಿದ್ದ Contingency Plan ಅನ್ನು ರಾವ್ ಅವರು ಕಾರ್ಯಸಾಧುವಲ್ಲದ ಯೋಜನೆ ಎಂದು ತಿರಸ್ಕರಿಸಿದ್ದರು. ಅದರ ನಂತರವೇ ಬಾಬರಿ ಮಸೀದಿ ಧ್ವಂಸಗೊಳಿಸಲು ಕರಸೇವಕರಿಗೆ ಸಾಧ್ಯವಾದದ್ದು.

ಧ್ವಂಸ ಪ್ರಕರಣದ ಬೆನ್ನಿಗೆ ದೇಶಾದ್ಯಂತ ಹಿಂಸಾಚಾರ ಭುಗಿಲೆದ್ದಾಗ, ರಾವ್ ನೇತೃತ್ವದ ಕೇಂದ್ರ ಸರಕಾರ 1992ರಲ್ಲಿ ಆರೆಸ್ಸೆಸ್, ವಿಎಚ್ ಪಿ, ಬಜರಂಗ ದಳ, ಜಮಾಅತೆ ಇಸ್ಲಾಂ, ಸಿಮಿ ಸಂಘಟನೆಗಳನ್ನು ಬ್ಯಾನ್ ಮಾಡಿ ಆದೇಶವನ್ನೇನೊ ಹೊರಡಿಸಿದರು. ಆದರೆ ಆ ಬ್ಯಾನ್ ಕುರಿತು ವಿಚಾರಣೆ ನಡೆಸಿದ ಕೇಂದ್ರ ಟ್ರಿಬ್ಯೂನಲ್ ಮುಂದೆ ರಾವ್ ಅವರ ಸರಕಾರ, ಯಾವ ಕಾರಣಕ್ಕೆ ತಾವು ಅವುಗಳನ್ನು ಬ್ಯಾನ್ ಮಾಡಿದ್ದೇವೆ ಹಾಗೂ ಬ್ಯಾನ್ ಮಾಡದೆ ಹೋದರೆ ಅವುಗಳಿಂದ ಸಮಾಜದಲ್ಲಿ ಉಂಟಾಗುವ ಅಶಾಂತ ವಾತಾವರಣ ಎಂಥದ್ದು ಎಂಬುದನ್ನು ದಾಖಲೆ ಸಹಿತ ವಿವರಿಸುವಲ್ಲಿ ವಿಫಲವಾಯಿತು. ಹಾಗಾಗಿ ಭಾರತದ ಆಧುನಿಕ ಚರಿತ್ರೆಯಲ್ಲಿ ಮೂರನೇ ಸಲ ನಿಷೇಧಕ್ಕೆ ತುತ್ತಾಗಿದ್ದ ಆರೆಸ್ಸೆಸ್ ಮೇಲಿನ ನಿರ್ಬಂಧವನ್ನು ಕೇವಲ ಆರು ತಿಂಗಳಲ್ಲಿ ಸ್ವತಃ ರಾವ್ ಸರಕಾರ ಹಿಂಪಡೆಯಬೇಕಾಯಿತು.

ರಾವ್ ಅವರು ಹಿಂದುತ್ವ ಸಂಘಟನೆಗಳ ನಾಯಕರೊಂದಿಗೆ ನಿಕಟ ಸಂಪರ್ಕ ಹೊಂದಿದ್ದರಿಂದಾಗಿಯೇ, ಅವರ ಸರಕಾರ ಟ್ರಿಬ್ಯೂನಲ್ ಮುಂದೆ ಸಮರ್ಪಕ ವಾದ ಮಂಡಿಸಲಿಲ್ಲ ಎನ್ನಲಾಗುತ್ತಿದೆ. ಇದು ನಿಜವೂ ಇರಬಹುದು. ಯಾಕೆಂದರೆ, 1994ರಲ್ಲಿ ಆರೆಸ್ಸೆಸ್ ಮುಖ್ಯಸ್ಥರಾಗಿ ಪ್ರೊ. ರಾಜೇಂದ್ರ ಸಿಂಗ್ ಅಂದ್ರೆ ರಜು ಭಯ್ಯಾಆಯ್ಕೆಯಾದಾಗ, "ಅರೇ ರಾವ್ ಸಾಹೇಬ್ ಫಿರ್ ರಹ್ ಗಯೇ" ಅಂದ್ರೆ "ಅರೇ ನರಸಿಂಹ ರಾವ್ ಸಾಹೇಬರಿಗೆ ಮತ್ತೆ ಅವಕಾಶ ಕೈತಪ್ಪಿತು" ಎಂಬ ಲೇವಡಿ ಮಾತು ಪ್ರಚಲಿತಕ್ಕೆ ಬಂದಿತ್ತು.

ಅಕಸ್ಮಾತ್ ಪ್ರಧಾನಿಯಾಗಿ ನರಸಿಂಹ ರಾವ್ ಅವರು ಅಯೋಧ್ಯೆ ಭೂವಿವಾದದ ಹಿಂದಿನ ರಾಜಕೀಯ ಹುನ್ನಾರವನ್ನು ಗ್ರಹಿಸಿ, ಹಿಂದುತ್ವದ ಮುಲಾಜುಗಳಿಗೆ ಬಲಿಯಾಗದೆ ದೃಢ ರಾಜಕೀಯ ನಿರ್ಧಾರವನ್ನು ತೆಗೆದುಕೊಂಡಿದ್ದಿದ್ದರೆ ಬಾಬರಿ ಮಸೀದಿ ಧ್ವಂಸವನ್ನು ತಡೆಗಟ್ಟಬಹುದಿತ್ತು ಮಾತ್ರವಲ್ಲದೆ, ಭಾರತೀಯ ರಾಜಕಾರಣದಲ್ಲಿ ಕೋಮುವಾದಿಗಳ ವಿಜೃಂಭಿಸುವಿಕೆಯನ್ನು ಇನ್ನಷ್ಟು ಕಾಲಕ್ಕೆ ಮುಂದೂಡಬಹುದಿತ್ತು ಎನ್ನುವುದಂತೂ ಸತ್ಯ.

ಕಡೇಪಕ್ಷ, ಧ್ವಂಸೋತ್ತರದ ಆರೆಸ್ಸೆಸ್ ಮತ್ತು ಇತರ ಮೂಲಭೂತವಾದಿ ಸಂಘಟನೆಗಳ ಮೇಲಿನ ಬ್ಯಾನ್ ಅನ್ನು ನ್ಯಾಯಾಧೀಕರಣದ ಮುಂದೆ ಸಮರ್ಥಿಸಿಕೊಂಡು ಮುಂದುವರಿಸಿದ್ದರೂ, ರಾವ್ ಅವರನ್ನು ಇವತ್ತು ಅಯ್ಯರ್ ತರಹದ ಸಹೋದ್ಯೋಗಿಗಳೇ ‘ಈ ದೇಶದ ಮೊದಲ ಬಿಜೆಪಿ ಪ್ರಧಾನಿ’ ಎಂದು ಹೀಗಳೆಯುವ ಅಪವಾದದಿಂದಲಾದರೂ ಮುಕ್ತವಾಗಬಹುದಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಗಿರೀಶ್ ತಾಳಿಕಟ್ಟೆ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!