ಮೋದಿಯ 10 ವರ್ಷದ ಆಡಳಿತ ಮಾಡಿದ್ದೇನು ?
ಮೋದಿ ಸರ್ಕಾರದ ಸುಳ್ಳುಗಳಿಗೆ ಕೊನೆಯೇ ಇಲ್ಲ. ವಾಸ್ತವವನ್ನು ಮರೆಮಾಚಿ ಭ್ರಮೆಯನ್ನು ಸೃಷ್ಟಿಸುವುದರಲ್ಲಿಯೂ ಅದು ಮುಂದಿರುತ್ತದೆ.
ಕಳೆದ 10 ವರ್ಷಗಳಲ್ಲಿ ಮೋದಿ ಸರ್ಕಾರ ಮಾಡಿದ್ದೇನು? ತನ್ನ ಸಾಧನೆಯ ಬಗ್ಗೆ ಬಡಾಯಿ ಕೊಚ್ಚಿಕೊಳ್ಳುವ ಮೋದಿ ಸರ್ಕಾರದ ಆಡಳಿತ ಕೊಟ್ಟ ಭರವಸೆಯಂತೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿಲ್ಲ.
ಆದರೆ ಅದು ಕೋಟ್ಯಂತರ ಭಾರತೀಯರ ಪಾಲಿಗೆ ಸೃಷ್ಟಿಸಿರುವುದು ಶೋಚನೀಯ ಸ್ಥಿತಿಯನ್ನು ಮಾತ್ರ.10 ವರ್ಷಗಳಲ್ಲಿ ಕಲ್ಯಾಣವನ್ನು ನೀಡುವ ಮೂಲಕ ಬಡವರು, ರೈತರು, ಯುವಕರು ಮತ್ತು ಮಹಿಳೆಯರಿಗೆ ಅಭಿವೃದ್ಧಿ ಯೋಜನೆಗಳ ಮೂಲಕ ನೆರವಾಗಿರುವುದಾಗಿ ಮೋದಿ ಸರ್ಕಾರ ಹೇಳುತ್ತಿರುವುದು ನಿಜವೆ? ಆ ಪೊಳ್ಳು ವಾದದ ಹಿಂದಿನ ವಾಸ್ತವವನ್ನು ಆರ್ಥಿಕ ತಜ್ಞ ಹಾಗೂ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪತಿ ಪರಕಾಲ ಪ್ರಭಾಕರ್ ಬಯಲು ಮಾಡಿದ್ದಾರೆ.
ದಿ ವೈರ್ ಸಂಸ್ಥಾಪಕ ಸಂಪಾದಕ ಎಂಕೆ ವೇಣು ಅವರೊಂದಿಗಿನ ಸಂದರ್ಶನಲ್ಲಿ ಪರಕಾಲ ಪ್ರಭಾಕರ್ ಅವರು ದೇಶದಲ್ಲಿನ ನಿರುದ್ಯೋಗ ಸ್ಥಿತಿಯ ಗಂಭೀರತೆಯನ್ನು, ಬೆಲೆಯೇರಿಕೆ ಸನ್ನಿವೇಶದ ತಳಮಳಗಳನ್ನು ವಿವರಿಸಿದ್ದಾರೆ. ಮೋದಿ ಸರ್ಕಾರ ಎಲ್ಲವನ್ನೂ ಎನ್ಡಿಎ ಮತ್ತು ಯುಪಿಎ ಎಂಬ ರೀತಿಯಲ್ಲಿಯೇ ಬಿಂಬಿಸಲು ನೋಡುತ್ತದೆ. ಅದು ಹಾಗಲ್ಲ. ಚರ್ಚೆ ವಿಶಾಲ ದೃಷ್ಟಿಕೋನದಲ್ಲಿರಬೇಕು.
ರೈತರು, ಯುವಕರು, ಮಹಿಳೆಯರು, ನಿರುದ್ಯೋಗಿಗಳ ವಿಚಾರದಲ್ಲಿ ಏನಾಗುತ್ತಿದೆ ಎಂಬುದನ್ನು ನೋಡಬೇಕಿದೆ.
ರೈತರ ಪ್ರತಿಭಟನೆ ವಿಚಾರವನ್ನು ನೋಡವುದಾದರೆ, ಕೃಷಿ ವಲಯ ನೇರವಾಗಿ ಇಲ್ಲವೆ ಪರೋಕ್ಷವಾಗಿ ದೊಡ್ಡ ಸಂಖ್ಯೆಯ ಜನರ ಮೇಲೆ ಪರಿಣಾಮ ಬೀರುತ್ತದೆ. ಉದ್ಯೋಗ, ಆದಾಯ ಎಲ್ಲವೂ ಬರುತ್ತದೆ. ಮತ್ತು ಇದು ಭೌಗೋಳಿಕವಾಗಿ ಕೂಡ ದೇಶದ ಬಹುಭಾಗಕ್ಕೆ ಸಂಬಂಧಪಟ್ಟಿದೆ.
ರೈತರನ್ನು, ಕೃಷಿ ಕಾನೂನು ವಿರೋಧಿಸಿದವರನ್ನು ಆಡಳಿತ ಪಕ್ಷದ ಮಂತ್ರಿಗಳು ನಾಯಕರೆಲ್ಲರೂ ರಾಷ್ಟ್ರವಿರೋಧಿಗಳು, , ಸರ್ಕಾರದ ವಿರೋಧಿಗಳು, ಭಾರತದ ವಿರೋಧಿಗಳು, ಖಾಲಿಸ್ತಾನಿಗಳು, ನಕ್ಸಲರು ಎಂದೆಲ್ಲ ಕರೆಯಲಾಗುತ್ತದೆ. ಚರ್ಚೆಯೇ ಇಲ್ಲದೆ ಕೆಲವನ್ನು ಮಾಡಿರುವುದು, ಚರ್ಚೆಯೇ ಇಲ್ಲದೆ ಕೆಲವನ್ನು ಅಲಕ್ಷಿಸಿರುವುದೇ ರೈತರು ಮತ್ತೆ ಬೀದಿಗಿಳಿಯಲು ಕಾರಣ.
ರೈತರ ಬೇಡಿಕೆಗಳು ಅಥವಾ ಕೆಲವು ಬೇಡಿಕೆಗಳು ಅಥವಾ ಪ್ರಮುಖ ಬೇಡಿಕೆಗಳ ವಿಚಾರದಲ್ಲಿ ಅವರೊಂದಿಗೆ ಮಾತನಾಡುವುದು ಮುಖ್ಯ.
ವ್ಯಾಪಕವಾದ ಚರ್ಚೆ ನಡೆಯಬೇಕು. ಕಡೇಪಕ್ಷ ಚುನಾಯಿತ ಜನಪ್ರತಿನಿಧಿಗಳ ಜೊತೆಗಾದರೂ ಚರ್ಚಿಸಬೇಕು. ಇದು ಸರ್ಕಾರ ಅನುಸರಿಸಬೇಕಾಗಿರುವ ನಡೆ.
ಇನ್ನು ಮಧ್ಯಂತರ ಬಜೆಟ್ ಮತ್ತು ಶ್ವೇತಪತ್ರ ಇವೆರಡೂ ಸರ್ಕಾರದ ಅತಿ ಪ್ರಮುಖ ದಾಖಲೆಗಳು. ಅವೆರಡೂ ಆರ್ಥಿಕತೆ ಬಗ್ಗೆ ಹೇಳುತ್ತವೆ.
ಅದರಲ್ಲಿ ಅವರೇನು ಅಂದುಕೊಂಡಿದ್ದರು ಮತ್ತು ಕಳೆದ ವರ್ಷಗಳಲ್ಲಿ ಆಗಿದ್ದೇನು ಎಂಬುದನ್ನು ಹೇಳುವುದಕ್ಕೆ ವಿಸ್ತೃತ ಅವಕಾಶವಿರುತ್ತದೆ. 2014ರಲ್ಲಿ ಏನಾಯಿತು? ಅಧಿಕಾರಕ್ಕೆ ಬರುವ ಮೊದಲು ಮೋದಿ ದೊಡ್ಡ ಪ್ರಮಾಣದ ಉದ್ಯೋಗಾವಕಾಶದ ಬಗ್ಗೆ, ವಾರ್ಷಿಕ 2 ಕೋಟಿ ಉದ್ಯೋಗಗಳ ಬಗ್ಗೆ ಹೇಳಿದ್ದರು.
ಅಂತರ ಕಪ್ಪು ಇಲ್ಲವಾಗಿಸುವ ವಿಚಾರವಿತ್ತು. ಅಧಿಕಾರಕ್ಕೆ ಬಂದ ಬಳಿಕ ಸ್ವಾಮಿನಾಥನ್ ಸೂತ್ರದನ್ವಯ ಎಂಎಸ್ಪಿ ತರುವ ಮಾತು ಹೇಳಲಾಗಿತ್ತು.
ಮೇಕಿಂಗ್ ಇಂಡಿಯಾ, ಸ್ಟಾರ್ಟಪ್ ಇಂಡಿಯಾ ಅಂಥ ಹಲವು ಕಾರ್ಯಕ್ರಮಗಳು ದೇಶದ ಆರ್ಥಿಕತೆ ಮತ್ತು ಜೀವನಮಟ್ಟವನ್ನು ಬದಲಿಸಬಲ್ಲವಾಗಿದ್ದವು.
ಆದರೆ ಅದಾದ ಬಳಿಕ ಎಲ್ಲವೂ ಸುದ್ದಿಯಾಗುವುದಕ್ಕಷ್ಟೇ ಸೀಮಿತವಾಯಿತು. ಆ ಎಲ್ಲ ಕಾರ್ಯಕ್ರಮಗಳು ಏನಾದವು? ಆಯಾ ಸಚಿವಾಲಯಗಳ ವಾರ್ಷಿಕ ವರದಿಗಳು ಕೂಡ ಅವುಗಳ ಬಗ್ಗೆ ಹೇಳಲಿಲ್ಲ. ಬೇಟಿ ಬಚಾವೋ ಕೂಡ ಅಷ್ಟೇ ಮಹತ್ವದ್ದಾಗಿತ್ತು. ಆದರೆ ಅದರ ಶೇ.80ರಷ್ಟು ಪಾಲನ್ನು ಪ್ರಚಾರಕ್ಕೆ ಮಾತ್ರವೇ ಬಳಸಲಾಯಿತು. ಬೆಲೆಯೇರಿಕೆ ಸನ್ನಿವೇಶದಲ್ಲಿ ನಾವೆಲ್ಲಿ ಇದ್ದೇವೆ? ವರ್ಷಗಳ ಲೆಕ್ಕ ನೋಡಬೇಕಿಲ್ಲ. 2023ರ ನವೆಂಬರ್ನಿಂದ ಫೆಬ್ರವರಿವರೆಗಿನ 4 ತಿಂಗಳಲ್ಲಿ ಏರಿಕೆಯಾಗಿರುವ ಬೇಳೆ, ತರಕಾರಿ, ಸಕ್ಕರೆಯಂಥ ದಿನನಿತ್ಯದ ಬಳಕೆಯ ವಸ್ತುಗಳ ಬೆಲೆಗಳನ್ನು ನೋಡಿದರೆ ಸಾಕು.
ಕೋವಿಡ್ ಮೊದಲು ಗ್ರಾಮೀಣ ಭಾಗದಿಂದ ನಗರ ವಲಯಕ್ಕೆ ದೊಡ್ಡ ಸಂಖ್ಯೆಯ ವಲಸೆಯಾಯಿತು. ಆದರೆ ಅಲ್ಲಿ ಅವರ ನಿರೀಕ್ಷೆಗೆ ತಕ್ಕಂತೆ ಏನೂ ಆಗದೆ ಮರಳಿದ್ದರಿಂದ ನರೇಗಾಕ್ಕೆ ದೊಡ್ಡ ಬೇಡಿಕೆ ಬಂತು. 2022ರ ಆರಂಭದಲ್ಲಿ ರೈಲ್ವೆಯಲ್ಲಿನ 35 ಸಾವಿರ ತಾಂತ್ರಿಕೇತರ ಹುದ್ದೆಗಳಿಗೆ ಉತ್ತರ ಪ್ರದೇಶ, ಬಿಹಾರದ ಯುವಕರು ಪೈಪೋಟಿಗಿಳಿದಿದ್ದರು. 1 ಕೋಟಿ 25 ಲಕ್ಷ ಯುವಕರು ಪರೀಕ್ಷೆ ಬರೆದಿದ್ದರು.
ನಿರುದ್ಯೋಗದ ಗಂಭೀರತೆ ಎಂಥದು ಎನ್ನುವುದು ಇಲ್ಲಿ ಕಾಣುತ್ತದೆ. ಉತ್ತರ ಪ್ರದೇಶ, ಬಿಹಾರ, ಛತ್ತಿಸಘಡ, ಹರ್ಯಾಣದ ಜನರು ಗಾಝಾಕ್ಕೆ ಉದ್ಯೋಗಕ್ಕಾಗಿ ಹೋಗುತ್ತಿದ್ದಾರೆ. ಇಲ್ಲಿನ ನಿರುದ್ಯೋಗ ಸ್ಥಿತಿಯಿಂದ ತಪ್ಪಿಸಿಕೊಳ್ಳಲು ಅಲ್ಲಿಗೆ ಹೋಗುತ್ತಿದ್ದಾರೆ. ವಿಶ್ವದಲ್ಲೇ ದೊಡ್ಡ ಪ್ರಮಾಣದಲ್ಲಿ ಯುವಕರಲ್ಲಿನ ನಿರುದ್ಯೋಗ ಭಾರತದಲ್ಲಿದೆ. ಅತಿ ಹೆಚ್ಚು ಯುವಕರು ನಿರುದ್ಯೋಗಿಗಳಾಗಿದ್ದು, ಅಂಥವರ ಪ್ರಮಾಣ ಶೇ.24ರಷ್ಟು ಇದೆ. ನೆರೆಯ ಬಾಂಗ್ಲಾದೇಶದಲ್ಲಿನ ಸ್ಥಿತಿಯೇ ತೀರಾ ಉತ್ತಮವಿದ್ದು, ಅಲ್ಲಿ ಶೇ.10ರಷ್ಟು ಯುವಕರು ಮಾತ್ರವೇ ನಿರುದ್ಯೋಗ ಸಮಸ್ಯೆ ಎದುರಿಸುತ್ತಿದ್ದಾರೆ. ದೇಶದಲ್ಲಿ 82 ಕೋಟಿ ಜನರಿಗೆ ಉಚಿತ ಪಡಿತರ ವಿಸ್ತರಿಸಲು ಏಕೆ ಸರ್ಕಾರ ನಿರ್ಧರಿಸಿತು? ಅಂದರೆ ಅಷ್ಟರ ಮಟ್ಟಿಗೆ ಸ್ಥಿತಿ ಶೋಚನೀಯವಾಗಿದೆ. ಆಹಾರ ಸಾಮಗ್ರಿಗಳನ್ನೇ ಖರೀದಿಸಲಾರದ ಸ್ಥಿತಿಯಿದೆ.