ಸೂಪರ್ ಸ್ಟಾರ್ ಪಕ್ಷ ಘೋಷಣೆ ಬೆನ್ನಲ್ಲೇ ಎ ಐ ಎ ಡಿ ಎಂ ಕೆ ನಾಯಕ ಹೇಳಿದ್ದೇನು ?

Update: 2024-02-06 05:09 GMT
Editor : Ismail | Byline : ಆರ್. ಜೀವಿ

ವಿಜಯ್

ತಮಿಳುನಾಡು ರಾಜಕೀಯದಲ್ಲಿ ಇನ್ನು ದಳಪತಿ ಯುಗವೇ ?. ಸೂಪರ್ ಸ್ಟಾರ್ ನಟ ದಳಪತಿ ವಿಜಯ್ ಹೊಸ ರಾಜಕೀಯ ಪಕ್ಷದ ಘೋಷಣೆ ಮಾಡುವುದರೊಂದಿಗೆ, ಅಲ್ಲೀಗ ಹೊಸ ರಾಜಕೀಯ ಲೆಕ್ಕಾಚಾರಗಳು ಶುರುವಾಗಿವೆ. ತಮಿಳುನಾಡಿನಲ್ಲಿ ಸಿನಿಮಾ ನಟರ ರಾಜಕೀಯ ಪ್ರವೇಶ ಹೊಸದಲ್ಲ. ಎಂಜಿಆರ್, ಕರುಣಾನಿಧಿ, ಜಯಲಲಿತಾ ಅವರುಗಳು ಸಿನಿಮಾ ಹಿನ್ನೆಲೆಯಿಂದಲೇ ರಾಜಕೀಯ ಪ್ರವೇಶಿಸಿ ದೊಡ್ಡ ಯಶಸ್ಸು ಸಾಧಿಸಿದ್ದರು. ವಿಜಯಕಾಂತ್ ಕೂಡ ರಾಜಕಾರಣದಲ್ಲಿ ಸಾಕಷ್ಟು ಯಶಸ್ಸು ಕಂಡಿದ್ದ ಮತ್ತೊಬ್ಬ ನಟರಾಗಿದ್ದರು.

ನಟ ರಜನೀಕಾಂತ್ ಕೂಡ ರಾಜಕೀಯಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಿತ್ತು. ರಾಜಕೀಯ ಪಕ್ಷ ಕಟ್ಟಬಯಸಿ, ಕಡೆಗೆ ಆರೋಗ್ಯದ ಕಾರಣದಿಂದ ಹಿಂದೆ ಸರಿದಿದ್ದರು. ರಜನೀಕಾಂತ್ ರಾಜಕೀಯ ನಿಲುವು ಎಂಥದು ಎಂಬುದು ಅವರ ನಡೆಯಿಂದ, ಹೇಳಿಕೆಗಳಿಂದ ಸಾಬೀತಾಗುತ್ತಲೇ ಇರುವಾಗ, ದ್ರಾವಿಡ ನೆಲದ ಗಟ್ಟಿತನ ಕಾಣಿಸುತ್ತಿರುವುದು ಕಮಲ್ ಹಾಸನ್ ಅವರಲ್ಲಿ. ಅವರು ಕೂಡ ರಾಜಕೀಯ ಪಕ್ಷ ಸ್ಥಾಪಿಸಿದ್ದಾರೆ.

ಆದರೆ, ವಿಜಯ್ ಇನ್ನೂ ನಿಖರವಾಗಿ, ಸ್ಪಷ್ಟ ರಾಜಕೀಯ ನಿಲುವಿನೊಂದಿಗೆ ಮುಂದಡಿಯಿಟ್ಟಿದ್ದಾರೆ ಎಂಬುದೇ ಅವರ ಪ್ರವೇಶದಿಂದ ಹೊಸದೇನೋ ಆಗಲಿದೆ ಎಂಬ ನಿರೀಕ್ಷೆ ಹುಟ್ಟಿರುವುದಕ್ಕೆ ಕಾರಣ. ರಾಜಕೀಯಕ್ಕೆ ಇಳಿಯುತ್ತಿದ್ದಂತೆ ಸಿನಿಮಾ ರಂಗಕ್ಕೆ ಗುಡ್ ಬೈ ಹೇಳುವ ಸೂಚನೆಯನ್ನೂ ಅವರು ಹೊಸ ಪಕ್ಷ ಘೋಷಣೆ ವೇಳೆ ನೀಡಿದ್ದಾರೆ. ಇದು ಕೂಡ ಅವರು ರಾಜಕೀಯವನ್ನು ಎಷ್ಟು ಗಂಭೀರವಾಗಿ ತೆಗೆದುಕೊಂಡಿದ್ದಾರೆ ಎಂಬುದಕ್ಕೆ ಸಾಕ್ಷಿ.

ವಿಜಯ್ ರಾಜಕೀಯ ಪ್ರವೇಶದ ಸುದ್ದಿ ಕಳೆದ ವರ್ಷ ಜುಲೈನಲ್ಲಿಯೇ ತಮಿಳುನಾಡು ರಾಜಕೀಯದಲ್ಲಿ ಸಂಚಲನ ಸೃಷ್ಟಿಸಿತ್ತು. ಅವರು ರಾಜಕೀಯಕ್ಕೆ ಎಂಟ್ರಿ ಕೊಟ್ಟಿದ್ದೇ ಹೌದಾದಲ್ಲಿ ತಮಿಳುನಾಡಿನ ಪ್ರಸ್ತುತ ರಾಜಕೀಯದ ಚಿತ್ರಣವೇ ಪೂರ್ತಿ ಬದಲಾಗಲಿದೆ ಎಂಬ ಮಾತುಗಳೂ ಕೇಳಿಬಂದಿದ್ದವು.

ಬಹುಶಃ ಹಾಗೆ ಬದಲಾಗುವುದೇ ಹೌದೆಂದಾದರೆ, ಈಗ ಆ ಕಾಲವೂ ಕೂಡಿಬಂದಿದೆ. ಮತ್ತು ತಮಿಳುನಾಡಿನಲ್ಲಿನ ಮುಂದಿನ ವಿಧಾನಸಭೆ ಚುನಾವಣೆಯಿಂದ ದಳಪತಿ ಯುಗ ಶುರುವಾಗಲಿದೆ. ಈ ಲೋಕಸಭಾ ಚುನಾವಣೆಯಲ್ಲಿ ಅವರ ಹೊಸ ಪಕ್ಷ ಅಖಾಡದಲ್ಲಿರುವುದಿಲ್ಲ. ಅಂದಹಾಗೆ ವಿಜಯ್ ಪಕ್ಷದ ಹೆಸರು ತಮಿಳಗ ವೆಟ್ರಿ ಕಳಗಂ ಅಥವಾ ಟಿ ವಿ ಕೆ. ಅಂದರೆ ತಮಿಳುನಾಡು ವಿಜಯ ಪಕ್ಷ.

ಲೋಕಸಭಾ ಚುನಾವಣೆ ಸಮೀಪದಲ್ಲಿರುವಂತೆಯೇ ರಾಜಕೀಯದ ಪಕ್ಷದ ಹೆಸರನ್ನು ಅವರು ಘೋಷಿಸಿದ್ದಾರಾದರೂ, ಈ ಚುನಾವಣೆಯಿಂದ ಅವರು ದೂರವೇ ಇರಲಿದ್ದಾರೆ. ಆದರೆ, ತಾನು ರಾಜಕೀಯಕ್ಕೆ ಅಧಿಕೃತವಾಗಿ ಎಂಟ್ರಿ ಕೊಟ್ಟಾಯಿತು ಎಂಬುದನ್ನು ಮಾತ್ರ ಅವರು ಈ ಚುನಾವಣೆಯ ಹೊಸ್ತಿಲಲ್ಲೇ ಸ್ಪಷ್ಟವಾಗಿ ಸೂಚಿಸಿದಂತಾಗಿದೆ.

ಈ ಲೋಕಸಭಾ ಚುನಾವಣೆಯಲ್ಲಿ ಅವರ ಪಕ್ಷ ಸ್ಪರ್ಧೆ ಮಾಡುತ್ತಿಲ್ಲ ಎಂಬುದು ಒಂದು ವಿಚಾರವಾದರೆ, ಯಾವುದೇ ರಾಜಕೀಯ ಪಕ್ಷಕ್ಕೂ ಬೆಂಬಲ ಸೂಚಿಸದೆ ಇರುವ ತೀರ್ಮಾನವನ್ನು ಕೈಗೊಳ್ಳಲಾಗಿರುವುದು ಮತ್ತೊಂದು ಬಹಳ ಮುಖ್ಯ ಸಂಗತಿ. ಈ ಹಿನ್ನೆಲೆಯಲ್ಲಿ, ಹೊಸ ಪಕ್ಷ ಘೋಷಣೆ ಬಳಿಕ ಅವರು ಹೇಳಿರುವ ಮಾತುಗಳಿಗೆ ಇನ್ನಷ್ಟು ಮಹತ್ವ ಬಂದಂತಾಗಿದೆ.

ಹೊಸ ಪಕ್ಷ ಘೋಷಣೆ ವೇಳೆ ಅವರು ಹೇಳಿರುವ ಎರಡು ಮುಖ್ಯವಾದ ಅಂಶಗಳೆಂದರೆ, ಒಂದು, ಮೂಲಭೂತ ರಾಜಕೀಯ ಬದಲಾವಣೆಯನ್ನು ತರಲು ಬದ್ಧವಾಗಿರುವುದಾಗಿ ಹೇಳಿರುವುದು. ಎರಡು, ಪಾರದರ್ಶಕ, ಜಾತ್ಯತೀತ ಹಾಗೂ ಭ್ರಷ್ಟಾಚಾರ ರಹಿತ ಆಡಳಿತ ನಡೆಸುವ ಪಣ ತೊಟ್ಟಿರುವುದು.

ಕಳೆದ ವಾರ ತಮ್ಮ ಅಭಿಮಾನಿ ಸಂಘ 'ವಿಜಯ್ ಮಕ್ಕಳ್ ಇಯಕ್ಕಂ' ಜೊತೆ ಚೆನ್ನೈನಲ್ಲಿ ವಿಜಯ್ ಸಭೆ ನಡೆಸಿದ್ದರು. ಆ ಬಳಿಕ ರಾಜಕೀಯ ಪಕ್ಷದ ಘೋಷಣೆಯ ನಿರ್ಧಾರ ಕೈಗೊಳ್ಳಲಾಗಿತ್ತು. ರಾಜಕೀಯ ನನಗೆ ಇನ್ನೊಂದು ವೃತ್ತಿಯಲ್ಲ. ಅದು ಭಯದಲ್ಲಿರುವ ಜನರ ಕೆಲಸ. ಹಲವು ವರ್ಷಗಳಿಂದ ನನ್ನನ್ನು ನಾನು ಇದಕ್ಕೆ ಸಿದ್ಧಪಡಿಸಿಕೊಳ್ಳುತ್ತಿದ್ದೇನೆ. ರಾಜಕೀಯ ನನಗೆ ಹವ್ಯಾಸ ಅಲ್ಲ. ಅದು ನನ್ನಲ್ಲಿರುವ ಬಯಕೆ. ನಾನು ಇದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳಲು ನಿರ್ಧರಿಸಿದ್ದೇನೆ ಎಂದು ವಿಜಯ್ ಹೇಳಿದ್ದಾರೆ.

ಹೀಗಾಗಿ ರಾಜಕೀಯಕ್ಕೆ ತಾವು ಸಂಪೂರ್ಣ ಬದ್ಧವಾಗಿರುವುದರ ಸುಳಿವನ್ನು ಅವರು ಕೊಟ್ಟಂತಾಗಿದೆ. ಮುಂಬರುವ 2026ರ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆಲ್ಲುವುದು ಮತ್ತು ಮೂಲಭೂತ ರಾಜಕೀಯ ಬದಲಾವಣೆ ತರುವುದು ತಮ್ಮ ಗುರಿಯಾಗಿದ್ದು, ಇದನ್ನೇ ಜನರು ಬಯಸಿದ್ದಾರೆ ಎಂದು ವಿಜಯ್ ಹೇಳಿದ್ದಾರೆ.

ಸದ್ಯದ ರಾಜಕೀಯ ವಾತಾವರಣದ ಬಗ್ಗೆ ನಿಮಗೆಲ್ಲರಿಗೂ ತಿಳಿದಿದೆ. ಆಡಳಿತದ ದುಷ್ಕೃತ್ಯಗಳು ಮತ್ತು ಭ್ರಷ್ಟ ರಾಜಕೀಯ ಸಂಸ್ಕೃತಿ ಒಂದೆಡೆಯಾದರೆ, ಇನ್ನೊಂದೆಡೆ, ನಮ್ಮ ಜನರನ್ನು ಧರ್ಮ ಹಾಗೂ ಜಾತಿಯ ಆಧಾರದ ಮೇಲೆ ವಿಭಜಿಸುವ ರಾಜಕೀಯ ಸಂಸ್ಕೃತಿ ಇದೆ ಎಂಬ ಅವರ ಮಾತುಗಳಲ್ಲಿ ಅವರ ರಾಜಕೀಯ ಧೋರಣೆ ಮತ್ತದರ ತೀಕ್ಷ್ಣತೆ ಕಾಣಿಸುತ್ತಿದೆ.

ಪ್ರತಿಯೊಬ್ಬರೂ, ವಿಶೇಷವಾಗಿ, ತಮಿಳುನಾಡಿನಲ್ಲಿ ನಿಸ್ವಾರ್ಥ, ಪಾರದರ್ಶಕ, ಜಾತಿ ಮುಕ್ತ, ದೂರದೃಷ್ಟಿ, ಭ್ರಷ್ಟಾಚಾರ ಮುಕ್ತ ಮತ್ತು ಸಮರ್ಥ ಆಡಳಿತಕ್ಕೆ ಕಾರಣವಾಗುವ ಮೂಲಭೂತ ರಾಜಕೀಯ ಬದಲಾವಣೆಗಾಗಿ ಹಂಬಲಿಸುತ್ತಿದ್ದಾರೆ ಎಂಬ ವಿಜಯ್ ಮಾತುಗಳು ಅವರ ಸ್ಪಷ್ಟ ರಾಜಕೀಯ ಆಲೋಚನೆಗಳನ್ನು ಸೂಚಿಸುವಂತಿವೆ.

ಈಗಾಗಲೇ ಒಪ್ಪಿಕೊಂಡಿರುವ ಚಿತ್ರಗಳನ್ನು ಪಕ್ಷದ ಕೆಲಸಗಳಿಗೆ ಧಕ್ಕೆಯಾಗದಂತೆ ಪೂರ್ಣಗೊಳಿಸಲು ನಿರ್ಧರಿಸಿರುವ ಅವರು, ಆ ಬಳಿಕ ಸಾರ್ವಜನಿಕ ಸೇವೆಯ ರಾಜಕೀಯದಲ್ಲಿ ತನ್ನನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದಾಗಿ ಹೇಳಿದ್ದಾರೆ. ಇದು ತಮಿಳುನಾಡಿನ ಜನರಿಗೆ ನನ್ನ ಕೃತಜ್ಞತೆ ಎಂದು ನಾನು ಪರಿಗಣಿಸುತ್ತೇನೆ ಎಂದು ವಿಜಯ್ ಹೇಳಿರುವುದು ವರದಿಯಾಗಿದೆ.

ಇದುವರೆಗೆ 68 ಚಿತ್ರಗಳಲ್ಲಿ ನಟಿಸಿರುವ ವಿಜಯ್, ಜನ ಕಲ್ಯಾಣ ಕೆಲಸಗಳಲ್ಲಿಯೂ ಈಗಾಗಲೇ ತೊಡಗಿಸಿಕೊಂಡವರು. ಉಚಿತ ಆಹಾರ, ವಿದ್ಯಾರ್ಥಿ ವೇತನ ವಿತರಣೆ, ಗ್ರಂಥಾಲಯ, ಸಂಜೆ ಕಾಲೇಜು, ಕಾನೂನು ಸಹಾಯ ಸೇರಿದಂತೆ ಹಲವಾರು ಕಾರ್ಯಕ್ರಮಗಳನ್ನು ವಿಜಯ್‌ ತಮ್ಮ ಅಭಿಮಾನಿ ಸಂಘಗಳ ಮೂಲಕ ಮಾಡಿಸುತ್ತಿದ್ದಾರೆ.

2018ರಲ್ಲಿ ತುತ್ತುಕುಡಿ ಪೊಲೀಸ್ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದವರ ಕುಟುಂಬ ಸದಸ್ಯರನ್ನು ಅವರು ಭೇಟಿ ಮಾಡಿದ್ದರು, ಅದು ಅವರ ರಾಜಕೀಯ ಗಂಭೀರತೆಯನ್ನು ಸೂಚಿಸುವಂತಿತ್ತು. ಕಳೆದ ಡಿಸೆಂಬರ್‌ನಲ್ಲಿ ಪ್ರವಾಹದಿಂದ ಜರ್ಜರಿತವಾಗಿದ್ದ ತಮಿಳುನಾಡಿನ ದಕ್ಷಿಣ ಜಿಲ್ಲೆಗಳಿಗೆ ಭೇಟಿ ನೀಡಿದ್ದರು.

ಎಲ್ಲಾ ಸಿದ್ಧತೆ ಮಾಡಿಕೊಂಡೇ ರಾಜಕೀಯಕ್ಕೆ ಇಳಿಯುತ್ತಿರುವ ಅವರ ಬರುವಿಕೆ, ತಮಿಳುನಾಡಿನ ರಾಜಕೀಯದಲ್ಲಿ ಹೊಸ ತಿರುವು ತರಲಿದೆ ಎಂದು ಭಾವಿಸಲಾಗಿದೆ. ಅಪಾರ ಅಭಿಮಾನಿಗಳನ್ನು ಹೊಂದಿರುವ ವಿಜಯ್, ಸಿನಿಮಾ ರಂಗಕ್ಕೆ ವಿದಾಯ ಹೇಳಿ, ಪೂರ್ಣ ಪ್ರಮಾಣದಲ್ಲಿ ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ನಿರ್ಧಾರ ಮಾಡಿರುವುದೇ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಇದು ಅತ್ಯಂತ ಧೈರ್ಯದ ನಿರ್ಧಾರವೂ ಹೌದು.

ತಮಿಳು ನಾಡಿನಲ್ಲಿ ವಿಜಯ್ ಜನಪ್ರಿಯತೆ ಈಗ ತುತ್ತ ತುದಿಯಲ್ಲಿದೆ. ಅವರ ಆ ಸ್ಟಾರ್ ವ್ಯಾಲ್ಯೂ ರಾಜಕೀಯ ವರ್ಚಸ್ಸು ಆಗಿ ಎಷ್ಟರ ಮಟ್ಟಿಗೆ ಬದಲಾಗಲಿದೆ ಎಂದು ಕಾದು ನೋಡಬೇಕು. ಡಾ.ಅಂಬೇಡ್ಕರ್, ಪೆರಿಯಾರ್, ಕಾಮರಾಜ್ ಅವರಂಥ ನಾಯಕರ ಬಗ್ಗೆ ನೀವು ಓದಬೇಕು ಎಂದು ವಿದ್ಯಾರ್ಥಿಗಳಿಗೆ ಹೇಳುವ ವಿಜಯ್, ಆ ಮೂಲಕ ಒಂದು ದೃಢ ನಿಲುವಿನ ಹೊಸ ತಲೆಮಾರಿನ ಕುರಿತು ಹಂಬಲಿಸುವವರು ತಾವೆಂಬುದನ್ನು ತೋರಿಸಿದ್ದಾರೆ.

ರಾಜಕೀಯ ಎನ್ನುವುದು ಮತ್ತೊಂದು ಮನರಂಜನಾ ತಾಣವಲ್ಲ. ಪವಿತ್ರ ಸಾಮಾಜಿಕ ಸೇವೆ ಎಂಬ ಅವರ ಮಾತಿನಲ್ಲಿ ಅವರ ಗಂಭೀರ ರಾಜಕೀಯ ನಿಲುವಿನ ಪ್ರಖರತೆ ಸ್ಪಷ್ಟವಾಗಿದೆ. ಹವ್ಯಾಸಕ್ಕಾಗಿ ಇದನ್ನು ಆಯ್ಕೆ ಮಾಡಿಕೊಂಡಿಲ್ಲ. ಪೂರ್ಣ ಮನಸ್ಸಿನಿಂದ ರಾಜಕೀಯಕ್ಕೆ ಕಾಲಿಡುತ್ತಿದ್ದೇನೆ ಎಂದಿದ್ದಾರೆ ವಿಜಯ್. ಅವರ ಈ ಮಾತುಗಳು, ಬಹಳ ಕಾದು, ಎಲ್ಲವನ್ನೂ ಯೋಚಿಸಿಯೇ ರಾಜಕೀಯಕ್ಕೆ ಬರುತ್ತಿರುವ ಅವರ ನಡೆಯ ಹಿಂದಿನ ಸ್ಪಷ್ಟತೆ - ಇವೆಲ್ಲವನ್ನೂ ಗಮನಿಸುತ್ತಿದ್ದರೆ, ದ್ರಾವಿಡ ನೆಲದ ಮತ್ತೊಬ್ಬ ದೃಢ ರಾಜಕೀಯ ನಾಯಕನೊಬ್ಬ ಅವರಲ್ಲಿ ಕಾಣಸಿಗುವ ಹಾಗಿದೆ.

ಈಗಾಗಲೇ ತನ್ನ ಅಭಿಮಾನಿ ಸಂಘಟನೆಯ ಸದಸ್ಯರನ್ನು ಅಲ್ಲಲ್ಲಿ ಪಂಚಾಯತ್ ಮತ್ತಿತರ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸ್ಪರ್ಧಿಸಿ ರಾಜಕೀಯ ಟೆಸ್ಟ್ ಮಾಡಿ ನೋಡಿದ್ದಾರೆ ವಿಜಯ್. ರಾಜಕಾರಣದ ಬಗ್ಗೆ ಅವರ ಮನಸ್ಸೊಳಗಿರುವುದೆಲ್ಲವೂ ನಿಜದಲ್ಲೂ ಕೈಗೂಡಿದರೆ ಅದು ಹೊಸದೇ ಹಾದಿಯನ್ನ ತಮಿಳುನಾಡು ರಾಜಕಾರಣದಲ್ಲಿ ತೆರೆಯಲಿದೆ.

ಆಡಳಿತಾರೂಢ ಡಿ ಎಂ ಕೆ ವಿಜಯ್ ರಾಜಕೀಯ ಪಕ್ಷ ಘೋಷಣೆಗೆ ಎಚ್ಚರಿಕೆಯ ಪ್ರತಿಕ್ರಿಯೆ ನೀಡಿದೆ. ಸಚಿವ ಉದಯನಿಧಿ ಸ್ಟಾಲಿನ್ ಅವರು ವಿಜಯ್ ಗೆ ಶುಭ ಕೋರಿದ್ದಾರೆ. ಡಿಎಂಕೆ ವಕ್ತಾರ ಇಳಂಗೋವನ್ ಅವರು " ಪಕ್ಷ ಮಾಡುವ ಅಧಿಕಾರ ಎಲ್ಲರಿಗೂ ಇದೆ. ಆದರೆ ಅವರ ಪಕ್ಷದ ಸಿದ್ಧಾಂತ , ಉದ್ದೇಶ ಏನು ಎಂಬುದು ಸ್ಪಷ್ಟ ವಾಗಬೇಕು. ಆಮೇಲೆ ನೋಡುವ " ಎಂದಿದ್ದಾರೆ.

ಇನ್ನೊಂದು ಪ್ರಮುಖ ಪಕ್ಷ ಎ ಡಿ ಎಂ ಕೆ ಯ ನಾಯಕ ಕೋವೈ ಸತ್ಯನ್ ಅವರು ವಿಜಯ್ ಅನ್ನು ಬಿಜೆಪಿ ಸೆಳೆಯಲಿದೆ ಎಂಬಂತೆ ಮಾತಾಡಿದ್ದಾರೆ. ಎ ಡಿ ಎಂ ಕೆ ಪಕ್ಷ ಬಿಜೆಪಿ ಜೊತೆ ಸಖ್ಯ ಕಡಿದುಕೊಂಡ ಮೇಲೆ ಆ ಪಕ್ಷಕ್ಕೆ ರಾಜ್ಯದಲ್ಲಿ ಯಾರದಾದರೂ ಆಸರೆ ಬೇಕಿತ್ತು. ರಜನಿಕಾಂತ್ ಅವರನ್ನು ಬಳಸಿಕೊಳ್ಳಲು ನೋಡಿದರು. ಈಗ ಅವರು ವಿಜಯ್ ಜೊತೆ ಸೇರಿಕೊಳ್ತಾರೆ. ಇಬ್ಬರಿಗೂ ಒಳ್ಳೆಯದಾಗಲಿ " ಎಂದಿದ್ದಾರೆ.

ಬಿಜೆಪಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರೂ ವಿಜಯ್ ರಾಜಕೀಯ ಪಕ್ಷ ಘೋಷಣೆಯನ್ನು ಸ್ವಾಗತಿಸಿದ್ದಾರೆ. ಭ್ರಷ್ಟಾಚಾರದ ವಿರುದ್ಧ ಒಟ್ಟಿಗೆ ಹೊರಾಡೋಣ ಎಂದಿದ್ದಾರೆ.

ವಿಜಯ್ ಈವರೆಗೆ ವ್ಯಕ್ತಪಡಿಸುತ್ತಾ ಬಂದಿರುವ ನಿಲುವುಗಳು ಹಾಗೂ ತಮಿಳು ನಾಡಿನಲ್ಲಿ ಗಟ್ಟಿಯಾಗಿ ಬೇರೂರಿರುವ ದ್ರಾವಿಡ ಸಂಸ್ಕೃತಿಯ ಹಿನ್ನೆಲೆಯಲ್ಲಿ ವಿಜಯ್ ಬಿಜೆಪಿ ಜೊತೆ ಕೈ ಜೋಡಿಸುವ ಸಾಧ್ಯತೆ ತೀರಾ ಕಡಿಮೆ. ಆದರೆ ರಾಜಕೀಯದಲ್ಲಿ ಯಾವುದೂ ಅಸಾಧ್ಯವೂ ಅಲ್ಲ. ದಕ್ಷಿಣ ರಾಜ್ಯಗಳ, ಅದರಲ್ಲೂ ದ್ರಾವಿಡ ನೆಲದ ಅಸ್ಮಿತೆಗೆ ಧಕ್ಕೆ ತರುವ ಶಕ್ತಿಗಳ ಯತ್ನ ನಡೆದಿರುವ ಹೊತ್ತಿನಲ್ಲಿನ ದಳಪತಿ ವಿಜಯ್ ರಾಜಕೀಯ ಪ್ರವೇಶದ ಘೋಷಣೆ, ಅವರ ಪಕ್ಷ ತಮಿಳುನಾಡು ರಾಜಕಾರಣದಲ್ಲಿ ಅಸ್ತಿತ್ವಕ್ಕೆ ಬರಲಿರುವುದು ಬಹಳ ದೊಡ್ಡ ವಿದ್ಯಮಾನವಾಗಿದೆ.

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!