ಎಲ್ಲರಿಗೂ Paytm ಮಾಡಿ ಎಂದು ಈಗ ಕೈಕೊಟ್ಟರೆ ಏನು ಗತಿ ?

Update: 2024-02-06 05:16 GMT
Editor : Ismail | Byline : ಆರ್. ಜೀವಿ

"ಪೇಟಿಎಂ ಕರೋ​" ಅಂತ ಹಾಡಿ ಹಾಡಿ, ​ ಹೋದಲ್ಲಿ ಬಂದಲ್ಲೆಲ್ಲ ಅದರ ಪ್ರಚಾರ ಮಾಡಿದ್ದೇ ಬಂತು. ಇನ್ನು ​"ಪೇಟಿಎಂ ಕರೋ​" ಅಂತ ಹೇಳೋ ಹಾಗಿಲ್ಲ. ​ಈ ದೇಶದ ಬಹಳ ದೊಡ್ಡ ಸಂಖ್ಯೆಯ ಜನರ ಕೈಗೆ ಪೇಟಿಎಂ ಕೊಟ್ಟು,​ ಇದೇ ಭವಿಷ್ಯ ಎಂದು ಹೇಳಲಾಗಿತ್ತು.

ಟೀ ಕುಡಿಯುವ ಕ್ಯಾಂಟೀನ್ ನಿಂದ ಹೆದ್ದಾರಿಯ ಫಾಸ್ಟ್ಯಾಗ್ ವರೆಗೆ ಎಲ್ಲ ಕಡೆ ಪೇಟಿಎಂ ಬಳಸುವ ಅಭ್ಯಾಸವನ್ನು ಜನರಿಗೆ ಮಾಡಿಸಲಾಗಿತ್ತು.

ಜನರೂ ಸಂಪೂರ್ಣವಾಗಿ ಇದಕ್ಕೆ ಒಗ್ಗಿ ಹೋಗಿದ್ದರು. ​ಆದರೆ ಈಗ ಅದೇ ಪೇಟಿಎಂ ಮೇಲೆ ನಿರ್ಬಂಧ ವಿಧಿಸಲಾಗಿದೆ.

ಫೆಬ್ರವರಿ 29ರಿಂದ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಬಂದ್ ಆಗಲಿದೆ. ಆರ್‌ಬಿಐನ ಈ ನಿರ್ಬಂಧ ಪೇಟಿಎಂನ ಬ್ಯಾಂಕಿಂಗ್ ಕಾರ್ಯಾಚರಣೆಗಳಿಗೆ ಮಾತ್ರ ಅನ್ವಯಿಸಲಿದೆ. ಅಂದರೆ ಗ್ರಾಹಕರು ಬೇರೆ ಬ್ಯಾಂಕ್‌ಗೆ ಲಿಂಕ್ ಮಾಡಿರುವ ಯುಪಿಐ ಸೇವೆಗಳಲ್ಲಿ ಡಿಜಿಟಲ್ ಪಾವತಿಗಾಗಿ ಪೇಟಿಎಂನ್ನು ಬಳಸ​ಬಹುದು. ಆದರೆ, ಮೋದಿ ದರ್ಬಾರಿನಲ್ಲಿ ಏನೇನೋ ಆಡಂಬರಗಳೊಂದಿಗೆ ಬರುವ ಇಂಥ ಎಲ್ಲವೂ ಅದೆಷ್ಟು ಬೇಗ ನೆಲ ಕಚ್ಚುತ್ತಿವೆ ಎಂಬುದನ್ನು ಗಮನಿಸಲೇಬೇಕಾಗಿದೆ. ಕ್ರಾಂತಿಕಾರಿ ಹೆಜ್ಜೆ ಎಂದೆಲ್ಲ ಶುರುವಾದ ಈ ಪೇಟಿಎಂ ಅದೆಷ್ಟು ಬೇಗ ಎಲ್ಲಿಗೆ ಬಂದು ನಿಂತಿದೆ ನೋಡಿ.

ಪೇಟಿಎಂನ ಸ್ಥಾಪಕ ವಿಜಯ್ ಶೇಖರ್ ಶರ್ಮ​ ಪ್ರಧಾನಿ ಮೋದಿಯವರನ್ನು ಹೊಗಳಿದ್ದೇನು ?. ಅದೇ ಶರ್ಮಾರನ್ನು ಇಲ್ಲಿನ ಮಡಿಲ ಮೀಡಿಯಾಗಳು ​"ಚಾಂಪಿಯನ್ ಆಫ್ ಸ್ಟಾರ್ಟ್ ಅಪ್ಸ್​" ಅಂತ ಹೊಗಳಿ​ ಅಟ್ಟಕ್ಕೇರಿಸಿದ್ದೇನು ?. ಹೀಗೆ ಮೋದಿಯವರದ್ದೇ​ ದೊಡ್ಡ ಫೋಟೋ ಹಾಕಿಕೊಂಡು ಶುರುವಾದ ಕಂಪೆನಿಯ ಭವಿಷ್ಯ ಏನು ? ಮೋದಿಯವರನ್ನು ನಂಬಿ ಅದನ್ನು ನಂಬಿ​ಕೊಂಡಿದ್ದ ಜನರ ಗತಿ ಏನು ?

ಅದು ನಿರಂತರವಾಗಿ ಹಲವಾರು ಬ್ಯಾಂಕಿಂಗ್ ನಿಯಮಗಳನ್ನು ಉಲ್ಲಂಘಿಸಿ​ದೆ. ಹಾಗು ಅದರ ವ್ಯವಹಾರಗಳ ಬಗ್ಗೆ ಕಳವಳ ಇದ್ದು ಅದರ ಮೇಲೆ ನಿಗಾ ಇಡಬೇಕಾಗಿದೆ ಎಂದು ಹೇಳಿರುವ ಆರ್ಬಿಐ​, ಆ ಹಿನ್ನೆಲೆಯಲ್ಲಿ ಈಗ ​ ಹಲವು ನಿರ್ಬಂಧಗಳನ್ನು ಹೇರಿದೆ.​ ಮೋದಿಯವರ ಫೋಟೋ ಹಾಕಿಕೊಂಡು ಜನರ ಮುಂದೆ ಮಿಂಚಿದ್ದ ಪೇಟಿಎಂ ಅದೇ ಧೈರ್ಯದಲ್ಲಿ ಎಲ್ಲಾ ಬ್ಯಾಂಕಿಂಗ್ ನಿಯಮಗಳನ್ನು ನಿರ್ಲಕ್ಷಿಸಿತ್ತೆ?

ಮೊದಲು ಆರ್ಬಿಐ ಹೇರಿರುವ ನಿರ್ಬಂಧಗಳೇನು ಅನ್ನೋದನ್ನು ನೊಡೋಣ.

1. ಆರ್ಬಿಐ ಹೇರಿರುವ ನಿರ್ಬಂಧಗಳ ಅನ್ವಯ ಫೆಬ್ರವರಿ 29ಕ್ಕೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್ ಸೇವೆಗಳು ಸ್ಥಗಿತಗೊಳ್ಳಲಿವೆ.

2. ತಾಜಾ ಠೇವಣಿಗಳನ್ನು ಸ್ವೀಕರಿಸದಂತೆ ಮತ್ತು ಕ್ರೆಡಿಟ್ ವಹಿವಾಟುಗಳನ್ನು ಮಾಡದಂತೆ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್​ ಗೆ ನಿರ್ಬಂಧ ವಿಧಿಸಲಾಗಿದೆ.

3. ಫೆ.29ರ ನಂತರ ಗ್ರಾಹಕರ ಖಾತೆಗಳು ಅಥವಾ ಪ್ರಿಪೇಯ್ಡ್ ಸೇವೆಗಳಾದ ವ್ಯಾಲೆಟ್‌ಗಳು ಮತ್ತು ಫಾಸ್ಟ್ ಟ್ಯಾಗ್‌ಗಳಲ್ಲಿ ಠೇವಣಿಗಳನ್ನು ಸ್ವೀಕರಿಸುವಂತಿಲ್ಲ.

4. ಕ್ರೆಡಿಟ್ ವಹಿವಾಟುಗಳನ್ನು ನಡೆಸುವುದು ಅಥವಾ ಟಾಪ್-ಅಪ್‌ ತೆಗೆದುಕೊಳ್ಳುವುದ​ನ್ನೂ ಆರ್‌ಬಿಐ ನಿರ್ಬಂಧಿಸಿದೆ.

5. ​ಪೇಟಿಎಂ ಮಾಲೀಕ ಸಂಸ್ಥೆಯಾದ ಒನ್97 ಕಮ್ಯೂನಿಕೇಶನ್ಸ್ ಮತ್ತು ಪೇಟಿಎಂ ಪೇಮೆಂಟ್ಸ್ ಸರ್ವಿಸಸ್​ ನ ನೋಡಲ್ ಅಕೌಂಟ್ಗಳನ್ನು ಫೆಬ್ರುವರಿ 29ರೊಳಗೆ ನಿಲ್ಲಿಸುವಂತೆಯೂ ರಿಸರ್ವ್ ಬ್ಯಾಂಕ್ ನಿರ್ದೇಶನ ನೀಡಿದೆ.

​ಪೇಟಿಎಂ​ ಮೇಲಿನ ಈ ನಿರ್ಬಂಧಗಳಿಂದಾಗಿ ಗ್ರಾಹಕರ ಮೇಲೆ ಉಂಟಾಗುವ ಪರಿಣಾಮಗಳು ಏನು?

1. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಫೆಬ್ರವರಿ 29ರ ನಂತರ ಠೇವಣಿಗಳನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲವಾದ್ದರಿಂದ, ವ್ಯಾಲೆಟ್‌ಗಳು ಸೇರಿದಂತೆ ಕ್ರೆಡಿಟ್ ವಹಿವಾಟುಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ.

ಅಂದರೆ, ಬ್ಯಾಂಕ್ ತನ್ನ ಖಾತೆಗಳು ಅಥವಾ ವ್ಯಾಲೆಟ್‌ಗಳ ಮೂಲಕ ಗ್ರಾಹಕರಿಗೆ ಸಾಲದ ಹಣವನ್ನು ಕ್ರೆಡಿಟ್ ಮಾಡಲು ಸಾಧ್ಯವಾಗುವುದಿಲ್ಲ.

2. ಆದರೆ, ಗ್ರಾಹಕರು ತಮ್ಮ ಖಾತೆಯಲ್ಲಿ ಇನ್ನೂ ಉಳಿದಿರುವ ಬಾಕಿಗಳನ್ನು ನಿರ್ಬಂಧಗಳಿಲ್ಲದೆ ಹಿಂಪಡೆಯಬಹುದು ಅಥವಾ ಬಳಸಿಕೊಳ್ಳಬಹುದು.

3. ಆರ್ಬಿಐ ಹೇರಿರುವ ಈ ನಿರ್ಬಂಧದಂತೆ, ಯುಪಿಐ ಸೇರಿದಂತೆ ಹಣ ವರ್ಗಾವಣೆಯನ್ನು ನೀಡಲು ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ಗೆ ಅವಕಾಶವಿಲ್ಲ. ಹಾಗಾಗಿ ಯಾರಾದರೂ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್‌ನಲ್ಲಿ​ರುವ ತಮ್ಮ ಬ್ಯಾಲೆನ್ಸ್ ಅನ್ನು UPI ಮೂಲಕ ವರ್ಗಾಯಿಸಲು ಸಾಧ್ಯವಾಗುವುದಿಲ್ಲ.

4. ಪೇಟಿಎಂನ ವ್ಯಾಲೆಟ್ ಅಪ್ಲಿಕೇಶನ್ ಮತ್ತು ಇತರ ಬ್ಯಾಂಕ್‌ಗಳ ಖಾತೆಗಳಿಗೆ ಲಿಂಕ್ ಮಾಡಲಾದ ಯುಪಿಐ ಸೇವೆಗಳಿಗೆ ಯಾವುದೇ ತೊಂದರೆಯಿಲ್ಲ.

5. ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಖಾತೆಗಳಿಗೆ ಲಿಂಕ್ ಮಾಡಲಾದ ಸೇವೆಗಳನ್ನು ಮಾತ್ರ ಬಳಸಲು ಆಗುವುದಿಲ್ಲ.

6. ರಸ್ತೆ ಟೋಲ್‌ಗಳನ್ನು ಪಾವತಿಸಲು ಯಾವುದೇ ಗ್ರಾಹಕ ಖಾತೆಗಳು, ಪ್ರಿಪೇಯ್ಡ್ ಉಪಕರಣಗಳು, ವ್ಯಾಲೆಟ್‌ಗಳು, ಕಾರ್ಡ್‌ಗಳನ್ನು ಟಾಪ್ ಅಪ್ ಮಾಡುವಂತಹ ಚಟುವಟಿಕೆಗಳಿಗೂ ಅವಕಾಶವಿಲ್ಲವಾಗಿದೆ.

7. ಬ್ಯಾಂಕ್, ಆದಾಗ್ಯೂ, ಗ್ರಾಹಕರ ಖಾತೆಗಳಲ್ಲಿ ಬಡ್ಡಿ, ಕ್ಯಾಶ್‌ಬ್ಯಾಕ್ ಅಥವಾ ಮರುಪಾವತಿಯನ್ನು ಕ್ರೆಡಿಟ್ ಮಾಡಬಹುದು.

8. ಉಳಿತಾಯ ಬ್ಯಾಂಕ್ ಖಾತೆಗಳು, ಕರೆಂಟ್ ಅಕೌಂಟ್‌ಗಳು, ಪ್ರಿಪೇಯ್ಡ್ ಉಪಕರಣಗಳು, ಫಾಸ್ಟ್ ಟ್ಯಾಗ್‌ಗಳು, ರಾಷ್ಟ್ರೀಯ ಸಾಮಾನ್ಯ ಮೊಬಿಲಿಟಿ ಕಾರ್ಡ್‌ಗಳು ಸೇರಿದಂತೆ ತಮ್ಮ ಖಾತೆಗಳಿಂದ ಬ್ಯಾಲೆನ್ಸ್ ಗಳನ್ನು ಹಿಂಪಡೆಯಲು ಅಥವಾ ಬಳಸಿಕೊಳ್ಳಲು ಗ್ರಾಹಕರಿಗೆ ಯಾವುದೇ ನಿರ್ಬಂಧಗಳಿಲ್ಲ. ಅವರ ಬಾಕಿ ಹಣ ಹಿಂತೆಗೆದುಕೊಳ್ಳುವವರೆಗೆ ಅಥವಾ ಬಳಸಿಕೊಳ್ಳುವವರೆಗೂ ಈ ಅವಕಾಶ ಇರುತ್ತದೆ.

9. ಅಂದರೆ, ಗ್ರಾಹಕರು ಈ ಸೇವೆಗಳನ್ನು ​ಹೊಸದಾಗಿ ಹಣ ಹಾಕಿ ಟಾಪ್ ಅಪ್ ಮಾಡಲು ಸಾಧ್ಯವಾಗುವುದಿಲ್ಲ. ಈಗಿರುವ ಬ್ಯಾಲನ್ಸ್ ಬಳಸುವುದಕ್ಕಷ್ಟೇ ಅವಕಾಶವಿದೆ.

ಎರಡು ವರ್ಷದ ಹಿಂದೆಯೂ ಹೀಗೇ ಆಗಿತ್ತು.

2022ರ ಮಾರ್ಚ್ ತಿಂಗಳಲ್ಲಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಹೊಸ ಗ್ರಾಹಕರನ್ನು ​ತೆಗೆದುಕೊಳ್ಳ ಬಾರದು ಎಂದು ಆರ್ಬಿಐ ನಿರ್ಬಂಧ ಹಾಕಿತ್ತು.

ಅದಾಗಿ ಸುಮಾರು ಎರಡು ವರ್ಷಗಳ ನಂತರ ಈಗ​ ಮತ್ತೆ ಈ ನಿರ್ಬಂಧಗಳನ್ನು ಹೇರಲಾಗಿದೆ.

ಪೇಟಿಎಂ ಸಂಸ್ಥಾಪಕ ವಿಜಯ್ ಶೇಖರ್ ಶರ್ಮಾ ಬ್ಯಾಂಕ್ ಆರ್ಬಿಐ ನಿಯಮಗಳನ್ನು ಸಂಪೂರ್ಣವಾಗಿ ಅನುಸರಿಸುತ್ತದೆ ಎಂದು ಹೇಳಿದ್ದರು.

ಆದರೆ ಮೋದಿ ಫೋಟೊ ಎದುರಿಗಿಟ್ಟುಕೊಂಡು ಆಮೇಲೆ ಅವರು ಆಡಿರುವ ಆಟವೇನು ಎನ್ನುವುದು ಹೀಗೆ ಬಯಲಾಗಿದೆ.

​ಅತ್ಯಲ್ಪ ಕಾಲದಲ್ಲಿ ಸರಕಾರದ ಸಂಪೂರ್ಣ ಪ್ರೋತ್ಸಾಹದೊಂದಿಗೆ ಮಿಂಚಿನ ವೇಗದಲ್ಲಿ ಪೇಟಿಎಂ ಬೆಳೆದಿತ್ತು.

ಪೇಟಿಎಂ ಅದೆಷ್ಟು ವೇಗವಾಗಿ ಬೆಳೆಯಿತು ಅಂದ್ರೆ ಅದರ ಮಾಲಕ ವಿಜಯ್ ಶೇಖರ್ ಶರ್ಮಾ ಬಿಲಿಯನೇರ್ ಆದರು.

ಅವರಿಗೆ ಅಷ್ಟೇ ವೇಗವಾಗಿ ಬಂಡವಾಳ ಹರಿದು ಬಂತು. ಅದಕ್ಕೆ ಸರಕಾರವೂ ಸಂಪೂರ್ಣ ಸಹಕಾರ ನೀಡಿತ್ತು.

ದೇಶದ ಕೋಟಿಗಟ್ಟಲೆ ಜನರು ಪೇಟಿಎಂ ನ ಪ್ರಚಾರದ ಅಬ್ಬರಕ್ಕೆ ಮರುಳಾಗಿ ಅದನ್ನು ಬಳಸಲು ಶುರು ಮಾಡಿದರು.

ಅದರಲ್ಲೇ ಬಹಳಷ್ಟು ಪಾವತಿ ಮಾಡಲು ಶುರು ಮಾಡಿದರು.

ಪ್ರತಿಯೊಂದು ಮಹತ್ವದ ಘಟನೆ, ದಿನಗಳಂದು ಪೇಟಿಎಂ ಒಂದೊಂದು ಜಾಹೀರಾತು ಮಾಡಿ ಆ ಮೂಲಕ ದೇಶದ ಜನರನ್ನು ಸೆಳೆಯಿತು.

ಮೊನ್ನೆ ಅಯೋಧ್ಯೆಯಲ್ಲಿ ರಾಮ ಮಂದಿರ ಉದ್ಘಾಟನೆ ಆಗುವಾಗ ಅಲ್ಲೂ ಪೇಟಿಎಂ ನ ಭರ್ಜರಿ ಪ್ರಚಾರ ನಡೀತು.

ಇಷ್ಟೆಲ್ಲಾ ಆದ ಮೇಲೆ ಈಗ ನೋಡಿದರೆ ಈ ಪೇಟಿಎಂ ಪಾಲಿಸಬೇಕಾದ ನಿಯಮಗಳನ್ನೇ ಪಾಲಿಸುತ್ತಿರಲಿಲ್ಲ.

ಬೇಕಾಬಿಟ್ಟಿ ವ್ಯವಹಾರ ಮಾಡುತ್ತಾ ಬಂದಿತ್ತು.

ಸಂಶಯಾಸ್ಪದ ರೀತಿಯಲ್ಲಿ ತನ್ನ ಕಂಪೆನಿಯನ್ನು ನಡೆಸಿಕೊಂಡು ಬಂದಿತ್ತು.

ಅದರ ವ್ಯವಹಾರಗಳ ಮೇಲೆ ನಿಗಾ ಇಡುವುದು ಅಗತ್ಯ ಎಂದು ಆರ್ ಬಿ ಐ ಈಗ ಹೇಳುತ್ತಿದೆ.

ಪೇಟಿಎಂ ಅನ್ನು ತಲೆ ಮೇಲೆ ಹೊತ್ತುಕೊಂಡು ಅದರ ಸ್ಥಾಪಕನ ಸರಣಿ ಸಂದರ್ಶನ ಮಾಡಿದ , ಅವರಿಂದ ಲಕ್ಷ ಲಕ್ಷದ ಜಾಹಿರಾತು ಬಾಚಿಕೊಂಡ, ಮಡಿಲ ಮೀಡಿಯಾಗಳು ಈಗ ಗಪ್ ಚುಪ್ !

ಪ್ರಧಾನಿ ಮೋದಿ ಸ್ಟಾರ್ಟ್ ಅಪ್ ಕ್ರಾಂತಿ ಮಾಡ್ತಾ ಇದ್ದಾರೆ ಎಂದು ಹೇಳುತ್ತಿದ್ದ ಬಿಜೆಪಿ ನಾಯಕರೂ ಈಗ ಸಂಪೂರ್ಣ ಮೌನವಾಗಿದ್ದಾರೆ.

ಆ ಕಡೆ ಲಾಭದಲ್ಲಿರೋ ಬ್ಯಾಂಕುಗಳನ್ನು ಈ ಸರಕಾರ ನಷ್ಟದಲ್ಲಿರೋ ಬ್ಯಾಂಕುಗಳ ಜೊತೆ ವಿಲೀನ ಮಾಡುತ್ತಾ ಬಂತು.

ಈಗ ಬ್ಯಾಂಕುಗಳು ಜನರಿಂದ ಪ್ರತಿಯೊಂದಕ್ಕೂ ಚಾರ್ಜು ಪೀಕಿಸುತ್ತಾ ಅವರ ಗೋಳು ಹೊಯ್ದುಕೊಳ್ಳುತ್ತಿವೆ.

ಮೊದಲೇ ಆದಾಯ ಕಡಿಮೆಯಾಗಿರುವ ಜನರು ಬ್ಯಾಂಕುಗಳಿಗೆ ಹೋಗುವುದಕ್ಕೆ ಹೆದರುವ ಪರಿಸ್ಥಿತಿ ಇದೆ.

​ಪ್ರಧಾನಿ ಮೋದಿ ಮುಖ ನೋಡಿ​ ನಂಬಿದ ಮಂದಿ​ ಹೀಗೆಲ್ಲ ಫಜೀತಿ ಅನುಭವಿಸುವುದು ಇಲ್ಲಿ ನಡೆದೇ ಇದೆ.

ಈಗ ಪೇಟಿಎಂ ಮಾಡೋದಾ ಬೇಡ್ವಾ ಅನ್ನೋ ಸ್ಥಿತಿಗೆ ಅವರು ಬಂದು ನಿಲ್ಲೋ ಹಾಗಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!