ಕುಮಾರಸ್ವಾಮಿ ಬಿಡುಗಡೆ ಮಾಡಿದ ಸಿಎಂ ಪುತ್ರನ ವೀಡಿಯೊದಲ್ಲಿ ಏನಿದೆ ?

Update: 2023-11-24 12:36 GMT
Editor : Ismail | Byline : ಆರ್. ಜೀವಿ
ಆಡಳಿತಾ ರೂಢ  ಕಾಂಗ್ರೆಸ್ ಮೇಲೆ  ಮೇಲಿಂದ ಮೇಲೆ  ಆರೋಪಗಳನ್ನು ಮಾಡುತ್ತಲೇ ಇರುವ ಎಚ್ ಡಿ ಕುಮಾರಸ್ವಾಮಿ, ಇದೀಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಗ ಯತೀಂದ್ರ ಅವರ ಮೇಲೆ ಮುಗಿಬಿದ್ದಿದ್ದಾರೆ. 
ಮೈಸೂರಿನ ಕೀಳನಪುರ ಗ್ರಾಮದಲ್ಲಿ ಜನ ಸಂಪರ್ಕ ಸಭೆಯಲ್ಲಿ ಯತೀಂದ್ರ ಸಿದ್ದರಾಮಯ್ಯ ಮಾತನಾಡಿರುವ ವಿಡಿಯೊ ಹಂಚಿಕೊಂಡ  ಕುಮಾರಸ್ವಾಮಿ "ಕಾಸಿಗಾಗಿ ಹುದ್ದೆ ಉರುಫ್ ದಂಧೆ ಕರ್ನಾಟಕದಲ್ಲಿ ಅವ್ಯಾಹತವಾಗಿ, ಎಗ್ಗಿಲ್ಲದೆ, ಲಜ್ಜೆಗೆಟ್ಟು ನಡೆದಿದೆ ಎನ್ನುವುದಕ್ಕೆ ಈ ವಿಡಿಯೋ ತುಣುಕೇ ಸಾಕ್ಷಿ"  ಎಂದು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಬರೆದಿರುವ ಅವರು,
ಕರ್ನಾಟಕದ ಕಲೆಕ್ಷನ್ ಕಿಂಗ್ ಅಪ್ಪ, ಕರ್ನಾಟಕದ ಕಲೆಕ್ಷನ್ ಪ್ರಿನ್ಸ್ ಮಗ ಸೇರಿ ಸಿಎಂ ಸಚಿವಾಲಯವನ್ನು ಸುಲಿಗೆ ಅಡ್ಡಾ ಮಾಡಿಕೊಂಡಿದ್ದಾರೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಪುರಾವೆ ಬೇಕಿಲ್ಲ? ಸಾರ್ವಜನಿಕ ಸಭೆಯಲ್ಲೇ ಎಗ್ಗಿಲ್ಲದೆ, ನಾಚಿಕೆ ಮಾನ ಮರ್ಯಾದೆ ಬಿಟ್ಟು ವರ್ಗಾವಣೆ ದಂಧೆ ನಡೆಸುವ ಮುಖ್ಯಮಂತ್ರಿ, ಮತ್ತವರ ಸುಪುತ್ರ, ಸಿಎಂ ಕಚೇರಿಯ ಪರ್ಸಂಟೇಜ್ ಪಟಾಲಂ ರಾಜ್ಯದ ಪ್ರತಿಷ್ಠೆಯನ್ನು ಹಣಕ್ಕಾಗಿ ಮಾರಿಕೊಂಡಿದೆ. ಬೀದಿಯಲ್ಲಿಯೇ ಇಷ್ಟಾದರೆ ನಾಲ್ಕು ಗೋಡೆಗಳ ಮಧ್ಯೆ ಇನ್ನೆಷ್ಟು ವ್ಯವಹಾರ ನಡೆಸುತ್ತಿರಬಹುದು? ಎಂದು  ಕೇಳಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗೇ ಧಮ್ಕಿ ಹಾಕಿ, "ನಾನು ಹೇಳಿದವರಷ್ಟನ್ನೇ ಮಾಡಿ" ಎನ್ನುವ ಈ ವ್ಯಕ್ತಿ ಮುಖ್ಯಮಂತ್ರಿ ಮಗನೋ ಅಥವಾ ಕರ್ನಾಟಕದ ಸೂಪರ್ ಸಿಎಮ್ಮೋ ?? ಅಥವಾ ಮಿನಿಸ್ಟರ್ ಫಾರ್ ಕ್ಯಾಶ್  ಫಾರ್ ಪೋಸ್ಟಿಂಗಾ ? ಇಲ್ಲವೇ ಒಳಾಡಳಿತ ಸಚಿವಾಲಯ ಮಾದರಿಯ 'ಒಳ ವಸೂಲಿ ಸಚಿವಾಲಯ'ದ ಸಚಿವರಾ?
"ಸ್ವತಃ ಮುಖ್ಯಮಂತ್ರಿಯೇ ಫೋನ್ ಕೊಡುವಷ್ಟು ಪ್ರಭಾವಿಯಾದ ಆ ಭಾರೀ ಆಸಾಮಿ ಯಾರು? ಇಷ್ಟಕ್ಕೂ ಆ ಮಹದೇವ ಎನ್ನುವ ವ್ಯಕ್ತಿ ಯಾರು? ಹಿಂದೊಮ್ಮೆ ನಾನೇ ಮಾಧ್ಯಮಗೋಷ್ಠಿಯಲ್ಲಿ ಹೇಳಿದ್ದೆ. ಪ್ರತೀ ವರ್ಗಾವಣೆಗೆ ತಲಾ 30 ಲಕ್ಷ ರೂ. ಪೀಕುತ್ತಿದ್ದ ಗಿರಾಕಿ ಈತ ಎಂದು ತಿಳಿಸಿದ್ದೆ. ಕುಮಾರಸ್ವಾಮಿ ಸುಳ್ಳು ಹೇಳ್ತಾ ಇದ್ದಾರೆ, ಅವರು ಹೇಳೋದು 99.9999% ಸುಳ್ಳು. ಅವರಿಗೆ ನಾನು ಉತ್ತರ ಕೊಡಲ್ಲ, ಅವರು ಹಿಟ್ ಅಂಡ್ ರನ್ ಗಿರಾಕಿ ಎಂದಿದ್ದ ಸಿಎಂ ಸಿದ್ದರಾಮಯ್ಯನವರು ಈಗ ಏನು ಹೇಳುತ್ತಾರೆ?"
"ಈಗ ಹೇಳಿ ಸಿದ್ದರಾಮಯ್ಯ  ನವರೇ, ನೀವು, ನಿಮ್ಮ ಮಗ ಎಷ್ಟು ಪರ್ಸೆಂಟ್ ಗೆ ಹುದ್ದೆಗಳನ್ನು ಮಾರಿದ್ದೀರಿ? ಅದರಲ್ಲಿ ನಿಮಗೆಷ್ಟು? ನಿಮ್ಮ ಮಗನಿಗೆ ಎಷ್ಟು? ನಿಮ್ಮ ಕಚೇರಿಯ ಪರ್ಸಂಟೇಜ್ ಪಟಾಲಂಗೆ ಎಷ್ಟು?"
ನಿಮ್ಮಿಂದ ಉತ್ತರವಷ್ಟೇ ಅಲ್ಲ, ನಿಮಗೆ ಮಾನ ಮರ್ಯಾದೆ ಬಹಳ ಜಾಸ್ತಿ ಅಲ್ಲವೇ? ನೈತಿಕ ಮೌಲ್ಯಗಳಂತೂ ದುಪಟ್ಟು ಜಾಸ್ತಿ, ಹೌದಲ್ಲವೇ ? ಅದಕ್ಕೆ ಬೆಲೆ ಕೊಟ್ಟು ರಾಜೀನಾಮೆ ಕೊಡಿ. ನಿಮಗೆ ಉಳಿದಿರುವುದು ಸಿಎಂ ಕಚೇರಿ ಖಾಲಿ ಮಾಡುವುದಷ್ಟೇ. ಕೂಡಲೇ ಮುಖ್ಯಮಂತ್ರಿ ಪದವಿಗೆ ರಾಜೀನಾಮೆ ಕೊಡಿ. ಇದು ನನ್ನ ಆಗ್ರಹ ಎಂದು ಕುಮಾರಸ್ವಾಮಿ  ಎಕ್ಸ್ ನಲ್ಲಿ ಬರೆದುಕೊಂಡಿದ್ದಾರೆ.
ಇನ್ನು, ಕುಮಾರಸ್ವಾಮಿ ಹಂಚಿಕೊಂಡ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ, ವಿಪಕ್ಷ ಬಿಜೆಪಿಯ ನಾಯಕರು ಸಿದ್ದರಾಮಯ್ಯ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ್ದಾರೆ.
ಕುಮಾರಸ್ವಾಮಿ ಆರೋಪಿಗಳಿಗೆ ತಿರುಗೇಟು ನೀಡಿರುವ ಸಿಎಂ ಸಿದ್ದರಾಮಯ್ಯ,
‘ತಾನು ಕಳ್ಳ,  ಪರರ ನಂಬ’ ಎಂದು ಟೀಕಿಸಿರುವ ಅವರು, ಕುಮಾರಸ್ವಾಮಿ ತಮ್ಮ ಸಡಿಲ ನಾಲಿಗೆಯ ಮೂಲಕ ಮತ್ತೆ ಸುಳ್ಳುಗಳನ್ನು ಹರಿಯಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೆ ತಮ್ಮ ಕ್ಷೇತ್ರದ ಸರ್ಕಾರಿ ಶಾಲೆಗಳ ಕೊಠಡಿ ರಿಪೇರಿ ಬಗ್ಗೆ ಯತೀಂದ್ರ ಜತೆ ಚರ್ಚಿಸಿದ್ದಾಗಿ ಮುಖ್ಯಮಂತ್ರಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ ಐದು ಶಾಲೆಗಳ ಪಟ್ಟಿಯನ್ನೂ ಅವರು ಬಿಡುಗಡೆ ಮಾಡಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವ ಅವರು, ‘ತಾ ಕಳ್ಳ ಇತರರ ನಂಬ’ ಎಂಬ ಗಾದೆ ಮಾತನ್ನು ಒಬ್ಬಮಾಜಿ ಮುಖ್ಯಮಂತ್ರಿ ಬಗ್ಗೆ ಬಳಸಬೇಕಾಗಿ ಬಂದಿದ್ದಕ್ಕೆ ನನಗೆ ವಿಷಾದ ಇದೆ. ಡಾ.ಯತೀಂದ್ರ ಅವರ ಜೊತೆಗಿನ ಪೋನ್ ಸಂಭಾಷಣೆಯ ಹಿನ್ನೆಲೆಯನ್ನು ಸ್ಪಷ್ಟಪಡಿಸಿದ ನಂತರವೂ ಕುಮಾರಸ್ವಾಮಿಯವರು ಮತ್ತೆ ತಮ್ಮ ಸಡಿಲ ನಾಲಿಗೆಯಲ್ಲಿ ಸುಳ್ಳುಗಳನ್ನು ಹರಿಯಬಿಟ್ಟಿದ್ದಾರೆ ಎಂದು ಹೇಳಿದ್ದಾರೆ.
ಪೋನ್ ಸಂಭಾಷಣೆಯಲ್ಲಿ ಡಾ.ಯತೀಂದ್ರ ಹೆಸರಿಸಿದ ವಿವೇಕಾನಂದ ಅವರು ವರುಣ ಕ್ಷೇತ್ರಕ್ಕೆ ಸಂಬಂಧಿಸಿದ ಕ್ಷೇತ್ರ ಶಿಕ್ಷಣಾಧಿಕಾರಿಯಾಗಿದ್ದಾರೆ. ವರುಣ ಕ್ಷೇತ್ರಕ್ಕೆ ಸೇರಿರುವ ಹಾರೋಹಳ್ಳಿ, ಕೀಳನಪುರ, ದೇವಲಾಪುರ ಗ್ರಾಮಪಂಚಾಯಿತಿಗಳ ವ್ಯಾಪ್ತಿಯ ಐದು ಸರ್ಕಾರಿ ಶಾಲೆಗಳ ರಿಪೇರಿಯಾಗಬೇಕಿರುವ ಕೊಠಡಿಗಳ ವಿವರದ ಪಟ್ಟಿಯನ್ನು ಬಿಇಒ ಅವರೇ ನನ್ನ ಕಚೇರಿಯ ಜಂಟಿ ಕಾರ್ಯದರ್ಶಿಗಳಿಗೆ ಕಳಿಸಿದ್ದರು. ಇದರ ಬಗ್ಗೆಯೇ ನಾನು ಡಾ.ಯತೀಂದ್ರ ಅವರ ಜೊತೆಯಲ್ಲಿ ಮಾತನಾಡಿದ್ದು. ಇದಕ್ಕೆ ಸಂಬಂಧಿಸಿದ ದಾಖಲೆಯನ್ನು ಇಲ್ಲಿ ಲಗತ್ತಿಸಿದ್ದೇನೆ ಎಂದು ಬರೆದುಕೊಂಡಿರುವ ಮುಖ್ಯಮಂತ್ರಿಗಳು ಐದು ಶಾಲೆಗಳ ಪಟ್ಟಿಯನ್ನು ಹಂಚಿಕೊಂಡಿದ್ದಾರೆ.
ಸುಳ್ಳುಕೋರರ ನಂಜಿನ ಆರೋಪಗಳಿಗೆ ವಿವರಣೆ ನೀಡಬೇಕಾದ ಅಗತ್ಯ ಖಂಡಿತ ಇಲ್ಲ. ಆದರೆ ಮಾಧ್ಯಮಗಳಲ್ಲಿ ಪ್ರಸಾರ, ಪ್ರಕಟವಾಗುತ್ತಿರುವ ಸುಳ‍್ಳು ಸುದ್ದಿಗಳನ್ನು ಅಮಾಯಕ ಜನ ನಂಬಿ ತಪ್ಪು ತಿಳಿದುಕೊಳ್ಳಬಾರದು ಎನ್ನುವ ಕಾರಣಕ್ಕೆ ಈ ವಿವರವನ್ನು ನೀಡಿದ್ದೇನೆ. ಸುಳ್ಳು, ಮೋಸ, ದ್ರೋಹ, ವಚನಭ್ರಷ್ಟತೆಗಳನ್ನೇ ಅಸ್ತ್ರಮಾಡಿಕೊಂಡು ಗಳಿಸಿದ ಅಧಿಕಾರವನ್ನು ಕೇವಲ ಹಣದ ಲೂಟಿಗಾಗಿ ದುರ್ಬಳಕೆ ಮಾಡಿಕೊಂಡ ಕುಮಾರಸ್ವಾಮಿಯವರಿಗೆ ಅಭಿವೃದ್ದಿಯ ವಿಚಾರ ಅರ್ಥವಾಗುವಂತಹದ್ದಲ್ಲ ಎಂದು ಛೇಡಿಸಿದ್ದಾರೆ.
 ಕುಮಾರಸ್ವಾಮಿ ವಿರುದ್ಧ  ಬೆಂಗಳೂರಿನ ಜೆಪಿ ನಗರದ ತಮ್ಮ ನಿವಾಸದಲ್ಲಿ ದೀಪಾವಳಿಯ ದೀಪಾಲಂಕಾರಕ್ಕೆ ನೇರವಾಗಿ ವಿದ್ಯುತ್ ಕಂಬದಿಂದ ಅಕ್ರಮ ವಿದ್ಯುತ್ ಸಂಪರ್ಕ ಪಡೆದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಈ ಕುರಿತು ವಿಡಿಯೋ, ಫೋಟೋ ಸಮೇತ ಕಾಂಗ್ರೆಸ್ ಟ್ವೀಟ್ ಮಾಡಿತ್ತು.  ವಿದ್ಯುತ್ ಕಳ್ಳತನದ ಆರೋಪದ ಮೇಲೆ  ಕುಮಾರಸ್ವಾಮಿ ವಿರುದ್ಧ ಎಫ್‌ಐಆರ್ ಕೂಡಾ  ದಾಖಲಾಗಿದೆ.
ಒಂದು ಕ್ಷೇತ್ರದ ಜವಾಬ್ದಾರಿ ಇರುವಾಗ ಇದೆಲ್ಲ ಸಾಮಾನ್ಯ. ಅಧಿಕಾರ ಇದ್ದಾಗ ಕೆಲಸ ಮಾಡಬೇಕೆಂದು ಹೇಳ್ತಾರೆ, ಇದು ತಪ್ಪಾ? ಯತೀಂದ್ರ ಶಾಸಕರಾಗಿದ್ದರು, ಕೆಲಸ ಆಗಬೇಕೆಂದು ಹೇಳಿರಬಹುದು. ಯತೀಂದ್ರ ಮುಖ್ಯಮಂತ್ರಿ ಕ್ಷೇತ್ರದ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಇದೆಕ್ಕಲ್ಲಾ ನಾನು ಸಣ್ಣದಾಗಿ ಮಾತನಾಡಲು ಹೋಗಲ್ಲ. ದೇವಗೌಡರು  PWD ಸಚಿವರಾಗಿದ್ದಾಗ ನಾನು ಅವರ ಕ್ಷೇತ್ರ ನೋಡಿಕೊಳ್ತಿದ್ದೆ. ಹಾಗಾಗಿ ಒಂದು ಕ್ಷೇತ್ರದ ಜವಾಬ್ದಾರಿ ಇದ್ದಾಗ ಏನೋ ಮಾತಾಡಿರುತ್ತಾರೆ. ಇದಕ್ಕೆಲ್ಲಾ ಬೇರೆ ಅರ್ಥ ಕಲ್ಪಿಸಬೇಡಿ ಎಂದು ಹಾಸನದಲ್ಲಿ ಯತೀಂದ್ರ ಪರ JDS​ ಶಾಸಕ ಹೆಚ್​.ಡಿ.ರೇವಣ್ಣ ಬ್ಯಾಟಿಂಗ್ ಮಾಡಿದ್ದಾರೆ.
ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಸಿಎಂ ಡಿಕೆಶಿ , 
ಯಾವ ಅಧಿಕಾರಿ ಹೆಸರು, ಯಾವ ಹುದ್ದೆ, ಎಷ್ಟು ಲಂಚ ಎಂದು ಯತೀಂದ್ರ ಎಲ್ಲಿ ಹೇಳಿದ್ದಾರೆ. ಕುಮಾರಸ್ವಾಮಿ ಸುಮ್ಮನೆ ಪ್ರಚಾರ ಮಾಡಿ ನಮ್ಮ ಹುಡುಗನನ್ನು ನಾಯಕನನ್ನಾಗಿ ಬೆಳೆಸುತ್ತಿದ್ದಾರೆ’ ಎಂದು ಹೇಳಿದ್ದಾರೆ.
‘ನಾನು ಆ ವಿಡಿಯೊ ನೋಡಿದ್ದೇನೆ. ಮಾಜಿ ಶಾಸಕ ತಂದೆಯ ಜವಾಬ್ದಾರಿ ತೆಗೆದುಕೊಂಡು ತಮ್ಮ ಕ್ಷೇತ್ರದ ಶಾಲೆಗಳ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ. ವರ್ಗಾವಣೆ ದಂಧೆ ಎನ್ನಲು ಅವರು ಯಾವ ಅಧಿಕಾರಿ, ಯಾವ ಹುದ್ದೆ ಎಂದು ಉಲ್ಲೇಖವನ್ನೇ ಮಾಡಿಲ್ಲವಲ್ಲ.ಮಾಜಿ ಶಾಸಕರಾಗಿ ಯತೀಂದ್ರ ಅವರು ಒಂದು ವೇಳೆ ತಮ್ಮ ಕ್ಷೇತ್ರಕ್ಕೆ ಬೇಕಾದ 4-5 ಅಧಿಕಾರಿಗಳನ್ನು ವರ್ಗಾವಣೆ ಮಾಡಿಸಿಕೊಂಡರೆ ಅದರಲ್ಲಿ ತಪ್ಪೇನಿದೆ’ ಎಂದೂ ಪ್ರಶ್ನಿಸಿದ್ದಾರೆ.
‘ಬಿಜೆಪಿ- ಜೆಡಿಎಸ್‌ನವರಿಗೆ ಮಾಡಲು ಕೆಲಸವಿಲ್ಲ. ಯತೀಂದ್ರ ಅವರು ಆಶ್ರಯ ಸಮಿತಿ ಅಧ್ಯಕ್ಷರು. ಒಂದಷ್ಟು ಶಾಲೆಗಳಿಗೆ ಸಿಎಸ್ಆರ್ ಅನುದಾನದ ಅಡಿಯಲ್ಲಿ ಮೂಲಸೌಕರ್ಯಗಳನ್ನು ಒದಗಿಸಲು ವಿವೇಕಾನಂದ ಅಥವಾ ಮಹದೇವಪ್ಪ ಎನ್ನುವ ಅಧಿಕಾರಿಗೆ ಶಾಲೆಗಳನ್ನು ಗುರುತಿಸುವ ಜವಾಬ್ದಾರಿ ನೀಡಿದ್ದಾರೆ. ಯಾರೋ ಒಂದಷ್ಟು ಶಾಲೆಗಳ ಹೆಸರನ್ನು ಬದಲಾಯಿಸಿದ ಕಾರಣ, ಸ್ಥಳೀಯರು ದೂರು ನೀಡಿದ್ದರು. ಅದಕ್ಕೆ ಯತೀಂದ್ರ ಅವರು ಇಂತಿಷ್ಟು ಹಳ್ಳಿಗಳ ಶಾಲೆಗಳಿಗೆ ಸೌಲಭ್ಯ ನೀಡುತ್ತೇವೆ ಎಂದು ಮಾತುಕೊಟ್ಟಿದ್ದು, ಅದರಂತೆ ಜನ ಸಂಪರ್ಕ ಸಭೆಯಲ್ಲಿಯೇ ಕರೆ ಮಾಡಿ ಮಾತನಾಡಿದ್ದಾರೆ’ ಎಂದಿದ್ದಾರೆ ಡಿಕೆ ಶಿವಕುಮಾರ್ .
ವಿಧಾನಸಭಾ ಚುನಾವಣೆಯ ಸೋಲಿನ ಬಳಿಕ ಕುಮಾರಸ್ವಾಮಿ ಹೊಸ ಸರಕಾರದ ವಿರುದ್ಧ ಆಕ್ರಮಣಕಾರಿ ಶೈಲಿಯಲ್ಲಿ ಮುಗಿಬಿದ್ದಿದ್ದಾರೆ. ವಿಪಕ್ಷವಾಗಿ ಸರಕಾರದ ತಪ್ಪುಗಳನ್ನು ಎತ್ತಿ ತೋರಿಸೋದು ಅವರ ಕರ್ತವ್ಯ. ಆದರೆ  ಮಾಜಿ ಸಿಎಂ ಆಗಿ, ಹಿರಿಯ ನಾಯಕರಾಗಿ ಅವರು ಮಾಡುವ ಆರೋಪಗಳ ಬಗ್ಗೆ ಅವರು ಇನ್ನಷ್ಟು ತಿಳಿದುಕೊಳ್ಳುವುದು ಉತ್ತಮ. ಜೊತೆಗೆ ಈಗಾಗಲೇ ಮಾಡಿರುವ ದೊಡ್ಡ ದೊಡ್ಡ ಆರೋಪಗಳ ಸಿಡಿ ಕೊಡ್ತೀನಿ, ಪೆನ್ ಡ್ರೈವ್ ಕೊಡ್ತೀನಿ ಅಂತ ಹೇಳಿದ್ದಾರೆ ಬಿಟ್ರೆ ಆ ಸಾಕ್ಷ್ಯಾಧಾರಗಳನ್ನು ಕೊಟ್ಟಿಲ್ಲ. 
ಕುಮಾರಸ್ವಾಮಿಯವರಂತ ನಾಯಕರು ಒಂದು ಆರೋಪ ಮಾಡಿದರೆ ಅದಕ್ಕೊಂದು ತೂಕ  ಇರಬೇಕು. ಅದಕ್ಕೆ ಪೂರಕ ಸಾಕ್ಷ್ಯ ಇರಬೇಕು. ಅದು ಸರಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಹಾಗೆ ಇರಬೇಕು. ಮಂತ್ರಿಗಳು, ಮುಖ್ಯಮಂತ್ರಿಗಳು ಉತ್ತರ ಕೊಡಲು ತಿಣುಕಾಡುವಂತಿರಬೇಕು.  
ಅದನ್ನು ಬಿಟ್ಟು ಪ್ರತಿದಿನ ಒಂದು ಆರೋಪ ಮಾಡಲೇಬೇಕು. ಅದಕ್ಕಾಗಿ ಏನಾದರೂ ಒಂದು ಇರಲಿ ಎಂದು ಆರೋಪ ಮಾಡುತ್ತಾ ಹೋದರೆ ಜನ ಅದನ್ನು ಗಂಭೀರವಾಗಿ ಸ್ವೀಕರಿಸೋದನ್ನು ನಿಲ್ಲಿಸ್ತಾರೆ. ಸರಕಾರವೂ ಇದು ಇದ್ದದ್ದೇ ಬಿಡಿ ಅಂತ ನಿರ್ಲಕ್ಷ್ಯ ತಾಳುತ್ತೆ. ಅಷ್ಟೇ.

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!