ರಾಜಕಾರಣದ ಎದುರಿನಲ್ಲಿ ಜೀವಗಳಿಗೆ ಎಲ್ಲಿ ಬೆಲೆ?
ಕಾನೂನನ್ನೇ ಪಾಲಿಸದೆ ನಡೆಯುತ್ತಿದ್ದ ಗೇಮಿಂಗ್ ರೆನ್ ಇಷ್ಟೊಂದು ಪ್ರಮಾಣದಲ್ಲಿ ಜೀವಬಲಿ ಪಡೆದಿದೆ. ವರದಿಗಳ ಪ್ರಕಾರ ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ, ಇಡೀ ಗೇಮಿಂಗ್ ರೆನ್ ಕುಸಿದಿದೆ.
ದೇಶಕ್ಕೇ ಮಾದರಿ ಎನ್ನುತ್ತ್ತಕೊಳಕು ರಾಜಕಾರಣ ಮಾಡುವವರಿಗೆ ಕಳೆದ ಮೂರು ವರ್ಷಗಳಲ್ಲಿ ಮೂರು ದೊಡ್ಡ ದುರಂತಗಳು ಗುಜರಾತ್‌ನಲ್ಲಿಯೇ ನಡೆದವೆನ್ನುವುದು, ಅದೆಷ್ಟೋ ಜೀವಗಳ ಬಲಿ ಪಡೆದವೆನ್ನುವುದು ಕಿಂಚಿತ್ತೂ ಆತ್ಮಸಾಕ್ಷಿಯನ್ನು ಕಾಡುವುದಿಲ್ಲವೆ?
ಗುಜರಾತ್‌ನಲ್ಲಿ ಇನ್ನೊಂದು ದೊಡ್ಡ ದುರಂತ ನಡೆದಿದೆ.
33ಕ್ಕೂ ಹೆಚ್ಚು ಮಂದಿ ಬಲಿಯಾಗಿ ಹೋಗಿದ್ದಾರೆ. ಸತ್ತವರಲ್ಲಿ 9 ಮಕ್ಕಳೂ ಇದ್ದಾರೆ.
ಈಗ ಅಗ್ನಿ ಅವಘಡ ನಡೆದಿರುವ ರಾಜ್‌ಕೋಟ್‌ನ ಟಿಆರ್‌ಪಿ ಗೇಮಿಂಗ್ ರೆನ್‌ಗೆ ಅಗ್ನಿ ಶಾಮಕ ಇಲಾಖೆಯಿಂದ ಸೂಕ್ತ ಅನುಮತಿಯೇ ಇರಲಿಲ್ಲ, ಹೊರಹೋಗಲು ಒಂದೇ ದಾರಿಯಿತ್ತು ಇತ್ಯಾದಿ ಆರೋಪ ಕೇಳಿ ಬರುತ್ತಾ ಇದೆ. ಒಂದೆರಡು ದಿನಗಳ ಹಿಂದಷ್ಟೇ ಅಲ್ಲಿ ಶಾರ್ಟ್ ಸರ್ಕ್ಯೂಟ್ ಆಗಿದ್ದರೂ ಮತ್ತೆ ಕಾರ್ಯಾರಂಭ ಮಾಡಲಾಗಿದೆ. ಈಗ ಅಮಾಯಕರು ಬಲಿಯಾಗಿದ್ದಾರೆ. ಇದು ಮಾನವ ನಿರ್ಮಿತ ದುರಂತ ಎಂದಿದೆ ಗುಜರಾತ್ ಹೈಕೋರ್ಟ್.
ಇನ್ನು ದಿಲ್ಲಿಯಲ್ಲಿ ಆಸ್ಪತ್ರೆಯೊಂದಕ್ಕೆ ಬೆಂಕಿಬಿದ್ದು ಏಳು ಪುಟಾಣಿಗಳು ಬಲಿಯಾಗಿದ್ದಾರೆ.
ಮುಂಬೈಯಲ್ಲಿ ಬೋರ್ಡ್ ಬೀಳುವಾಗ, ಪುಣೆಯಲ್ಲಿ ಬಿಲ್ಡರ್ ಮಗ ಕಾರು ಚಾಲನೆ ಮಾಡುವಾಗ, ಕಾನ್ಪುರದಲ್ಲಿ ಈ ಹಿಂದೆ ಇಬ್ಬರನ್ನು ಬಲಿ ಪಡೆದ ವೈದ್ಯನ ಮಗ ಎರಡನೇ ಬಾರಿ ಢಿಕ್ಕಿ ಹೊಡೆಯುವಾಗ, ಗುಜರಾತ್‌ನಲ್ಲಿ ಈ ಹಿಂದೆ ಸೇತುವೆಯೇ ಕುಸಿದು ಬಿದ್ದಾಗ, ಈಗ ಗೇಮಿಂಗ್ ರೆನ್‌ಗೆ ಬೆಂಕಿ ಬಿದ್ದಾಗ-ಅಮಾಯಕರು ಬಲಿಯಾಗುತ್ತಲೇ ಇರುತ್ತಾರೆ. ಕೆಲವೇ ದಿನಗಳಲ್ಲಿ ಅದನ್ನು ಎಲ್ಲರೂ ಮರೆತೂ ಬಿಡುತ್ತಾರೆ.
ಮಾತೆತ್ತಿದರೆ ಗುಜರಾತ್ ಮಾಡೆಲ್ ಎನ್ನುತ್ತದೆ ಬಿಜೆಪಿ ಮತ್ತದರ ಬೆಂಬಲಿಗ ಭಕ್ತಪಡೆ. ದೇಶಕ್ಕೆ ಮಾದರಿ ಎನ್ನುವ ಗುಜರಾತ್‌ನಲ್ಲಿ ಪ್ರಧಾನಿ ತವರಲ್ಲಿ ಈಗ ಹೀಗಾಗಿದೆ. ಮೊರ್ಬಿ ಸೇತುವೆ ಆಯಿತು, ವಡೋದರ ಕೆರೆ ಆಯಿತು, ಈಗ ಗೇಮಿಂಗ್ ರೆನ್ ದುರಂತ ನಡೆದುಹೋಗಿದೆ. ಕಾನೂನನ್ನೇ ಪಾಲಿಸದೆ ನಡೆಯುತ್ತಿದ್ದ ಗೇಮಿಂಗ್ ರೆನ್ ಇಷ್ಟೊಂದು ಪ್ರಮಾಣದಲ್ಲಿ ಜೀವಬಲಿ ಪಡೆದಿದೆ. ವರದಿಗಳ ಪ್ರಕಾರ ಬೆಂಕಿಯ ತೀವ್ರತೆ ಎಷ್ಟಿತ್ತೆಂದರೆ, ಇಡೀ ಗೇಮಿಂಗ್ ರೆನ್ ಕುಸಿದಿದೆ.
ದೇಶಕ್ಕೇ ಮಾದರಿ ಎನ್ನುತ್ತ ಕೊಳಕು ರಾಜಕಾರಣ ಮಾಡುವವರಿಗೆ ಕಳೆದ ಮೂರು ವರ್ಷಗಳಲ್ಲಿ ಮೂರು ದೊಡ್ಡ ದುರಂತಗಳು ಗುಜರಾತ್‌ನಲ್ಲಿಯೇ ನಡೆದವೆನ್ನುವುದು, ಅದೆಷ್ಟೋ ಜೀವಗಳ ಬಲಿ ಪಡೆದವೆನ್ನುವುದು ಕಿಂಚಿತ್ತೂ ಆತ್ಮಸಾಕ್ಷಿಯನ್ನು ಕಾಡುವುದಿಲ್ಲವೆ?
2022ರಲ್ಲಿ ಗುಜರಾತ್‌ನ ಮೊರ್ಬಿ ನಗರದಲ್ಲಿ ಮಚ್ಚು ನದಿಗೆ ನಿರ್ಮಿಸಲಾಗಿದ್ದ ತೂಗುಸೇತುವೆ ನವೀಕರಣಗೊಂಡು ಉದ್ಘಾಟನೆಯಾದ ನಾಲ್ಕೇ ದಿನಕ್ಕೆ, ಅಂದರೆ ನವೆಂಬರ್ 1ರಂದು ಕುಸಿದಿತ್ತು. 135 ಜನ ಸಾವಿಗೀಡಾಗಿದ್ದರು. ಮೃತರಲ್ಲಿ 47 ಮಕ್ಕಳಿದ್ದರು. ಘಟನೆ ಸಂಬಂಧ 9 ಮಂದಿಯನ್ನು ಬಂಧಿಸಲಾಗಿತ್ತು. ಆಮೇಲೆ ಅದರ ತನಿಖೆ ಏನಾಯಿತೆಂದೇ ಸುದ್ದಿಯಾಗಿಲ್ಲ.
ಅದೇ ಗುಜರಾತ್‌ನ ವಡೋದರದಲ್ಲಿರುವ ಹರ್ನಿ ಕೆರೆಯಲ್ಲಿ ಕಳೆದ ಜನವರಿ 18ರಂದು ದೋಣಿ ದುರಂತ ಸಂಭವಿಸಿತು. 12 ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕಿಯರು ಮೃತಪಟ್ಟರು. ಆ ಘಟನೆಯ ಬಗ್ಗೆ ಕೂಡ ಹೈಕೋರ್ಟ್ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿತ್ತು.
ಈಗ ಮತ್ತೊಂದು ಭಾರೀ ದುರಂತ ಅದೇ ಗುಜರಾತ್‌ನಲ್ಲಿ ಘಟಿಸಿದೆ.
ಈ ಬೆಂಕಿ ದುರಂತದಲ್ಲಿ ದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಗುರುತಿಸುವುದೇ ಕಷ್ಟಸಾಧ್ಯವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ದುರಂತದಲ್ಲಿ ಒಂದು ಕುಟುಂಬವಂತೂ ಐವರನ್ನು ಕಳೆದುಕೊಂಡಿದೆ. ನವವಿವಾಹಿತ ದಂಪತಿ ಕೂಡ ಆ ಐವರಲ್ಲಿ ಇದ್ದುದಾಗಿ ವರದಿಯಾಗಿದೆ.
ವೆಲ್ಡಿಂಗ್ ಕೆಲಸ ನಡೆಯುತ್ತಿತ್ತು, ಅದು ಬೆಂಕಿ ದುರಂತಕ್ಕೆ ಕಾರಣ ಎಂದು ವರದಿಗಳು ಹೇಳುತ್ತಿವೆ.
ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಂಡಿರುವ ಗುಜರಾತ್ ಹೈಕೋರ್ಟ್, ಅದನ್ನು ಮನುಷ್ಯನಿಂದಾದ ದುರಂತ ಎಂದು ಹೇಳಿದೆ. ಯಾವ ನಿಬಂಧನೆ ಮೇಲೆ ಈ ಗೇಮಿಂಗ್ ರೆನ್ ನಡೆಯುತ್ತಿತ್ತು ಎಂಬುದರ ಮಾಹಿತಿ ಕೊಡುವಂತೆ ರಾಜ್ಯ ಸರಕಾರಕ್ಕೂ ಹೈಕೋರ್ಟ್ ಸೂಚಿಸಿದೆ. ಮಹಾನಗರ ಪಾಲಿಕೆಗೂ ನೋಟಿಸ್ ಜಾರಿ ಮಾಡಿದೆ.
ನಾಲ್ಕು ವರ್ಷಗಳ ಹಿಂದೆ ಶುರುವಾದ ಗೇಮಿಂಗ್ ರೆನ್ ತಾತ್ಕಾಲಿಕ ಕಟ್ಟಡದಲ್ಲೇ ನಡೆಯುತ್ತಿತ್ತು. ಎರಡು ಮಹಡಿಗಳ ಕಟ್ಟಡವನ್ನು ತಗಡು ಬಳಸಿ ಕಟ್ಟಲಾಗಿತ್ತು ಎಂದು ಹೇಳಲಾಗಿದೆ.
50 ಮಿಟರ್ ಅಗಲ ಹಾಗೂ 60 ಮೀಟರ್ ಉದ್ದದ ವಿಸ್ತೀರ್ಣದಲ್ಲಿದ್ದ ಕಟ್ಟಡ ಸುಮಾರು ಮೂರು ಅಂತಸ್ತುಗಳಷ್ಟು ಎತ್ತರವಿತ್ತು.
ಈ ಗೇಮಿಂಗ್ ರೆನ್ ಅಗ್ನಿ ಸುರಕ್ಷತೆಗೆ ಸಂಬಂಧಿಸಿ ಎನ್‌ಒಸಿಯನ್ನೇ ಪಡೆದಿರಲಿಲ್ಲ ಎಂಬ ಮಾಹಿತಿಯೂ ಸಿಕ್ಕಿದೆ. ಸೂಕ್ತ ಅಗ್ನಿಶಾಮಕ ಉಪಕರಣಗಳು ಕೂಡ ಅಲ್ಲಿ ಇಲ್ಲದಿರುವ ಬಗ್ಗೆ ವರದಿಗಳು ಹೇಳುತ್ತಿವೆ.
ಅಗ್ನಿ ಅನಾಹುತವಾದರೆ ಜನ ಸಾಯಬಹುದು ಎಂಬುದು ಗೊತ್ತಿದ್ದರೂ ಜನರ ಪ್ರಾಣವನ್ನು ಅಪಾಯಕ್ಕೊಡ್ಡುವಷ್ಟು ನಿಷ್ಕಾಳಜಿಯನ್ನು ಗೇಮಿಂಗ್ ರೆನ್ ಮಾಲಕರು ತೋರಿಸಿದ್ದರು ಎಂಬ ಆರೋಪಗಳು ಕೇಳಿಬಂದಿವೆ.
ಆದರೆ, ಇಂತಹವರ ವಿರುದ್ಧ ಸರಕಾರ ಏನು ಕ್ರಮ ಕೈಗೊಳ್ಳಲಿದೆ?, ಬಲಿಯಾದವರ ಕುಟುಂಬಗಳಿಗೆ ಯಾವ ರೀತಿಯಲ್ಲಿ ನ್ಯಾಯ ದೊರಕಲಿದೆ?
ಹಿಂದಿನ ದುರಂತಗಳಲ್ಲಿನ ತನಿಖೆಯ ಗತಿ ನೋಡಿದರೆ ಯಾವ ನಿರೀಕ್ಷೆಯನ್ನೂ ಇಟ್ಟುಕೊಳ್ಳಲು ಸಾಧ್ಯವಿಲ್ಲ.
ಅಗ್ನಿ ಸುರಕ್ಷತಾ ಕ್ರಮಗಳೇ ಇಲ್ಲದಿದ್ದುದು ಒಂದೆಡೆಯಾದರೆ, ಗೇಮಿಂಗ್ ರೆನ್ ಪ್ರವೇಶಕ್ಕೂ, ಹೊರಹೋಗುವುದಕ್ಕೂ ಒಂದೇ ದ್ವಾರ ಇದ್ದುದು ಮತ್ತೊಂದು ಗಂಭೀರ ಲೋಪ.
ಸಾವಿರಾರು ಲೀಟರ್‌ಗಟ್ಟಲೆ ಪೆಟ್ರೋಲ್ ಮತ್ತು ಡೀಸೆಲ್ ಸಂಗ್ರಹ ಕೂಡ ಗೇಮಿಂಗ್ ರೆನ್‌ನ ವಿವಿಧೆಡೆ ಇತ್ತೆನ್ನಲಾಗಿದೆ.
ಬೆಂಕಿ ವೇಗವಾಗಿ ಹರಡಿ, ಇಡೀ ಕಟ್ಟಡ ಬೀಳುವುದಕ್ಕೆ ಇದು ಕಾರಣವಾಗಿರುವುದು ಬೆಳಕಿಗೆ ಬಂದಿದೆ.
ಸುಮಾರು 3,500 ಲೀಟರ್ ಪೆಟ್ರೋಲ್ ಅಲ್ಲಿತ್ತೆಂದು ಹೇಳಲಾಗಿದೆ.
ಪೊಲೀಸರು 6 ಮಂದಿ ಪಾಲುದಾರರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಬಂಧಿತರಲ್ಲಿ ಗೇಮಿಂಗ್ ರೆನ್ ಮಾಲಕ ಯುವರಾಜ್ ಸಿಂಗ್ ಸೋಲಂಕಿ ಹಾಗೂ ಮ್ಯಾನೇಜರ್ ನಿತಿನ್ ಜೈನ್ ಸೇರಿದ್ದಾರೆ.
ಈ ಹಿಂದಿನ ದುರಂತಗಳ ತನಿಖೆ ಎಲ್ಲಿಗೆ ತಲುಪಿದೆ ಎಂದು ನೋಡಿಕೊಂಡರೆ ಈ ಎಫ್‌ಐಆರ್ ಏನಾಗಬಹುದು ಎಂಬುದನ್ನು ಊಹಿಸುವುದು ಕಷ್ಟವಲ್ಲ.
ಇನ್ನು ದಿಲ್ಲಿ ಆಸ್ಪತ್ರೆಯಲ್ಲಿನ ಅಗ್ನಿ ದುರಂತ.
ಪೂರ್ವ ದಿಲ್ಲಿಯ ವಿವೇಕ್ ವಿಹಾರ್ ಪ್ರದೇಶದಲ್ಲಿನ ಬೇಬಿ ಕೇರ್ ನ್ಯೂಬಾರ್ನ್ ಆಸ್ಪತ್ರೆಯಲ್ಲಿ ಶನಿವಾರ ತಡರಾತ್ರಿ ಸಂಭವಿಸಿದ ಬೆಂಕಿ ಅವಘಡದಲ್ಲಿ 7 ನವಜಾತ ಶಿಶುಗಳು ಮೃತಪಟ್ಟಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆ ಮಾಲಕ ನವೀನ್ ಕಿಚಿ ಎಂಬಾತನನ್ನು ಪೊಲೀಸರು ಬಂಧಿಸಿದ್ಧಾರೆ.
ಆತನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದು, ಇತರ ಹಲವಾರು ಬೇಬಿ ಕೇರ್ ಸೆಂಟರ್‌ಗಳನ್ನು ಕೂಡ ಆತ ನಡೆಸುತ್ತಿರುವ ಮಾಹಿತಿ ಸಿಕ್ಕಿದೆ.
ಆತನ ವಿರುದ್ಧ ಪೊಲೀಸರು ಐಪಿಸಿ ಸೆಕ್ಷನ್ 336, 304ಎ ಮತ್ತು 34ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದಾರೆ.
ಆಸ್ಪತ್ರೆ ಅಗ್ನಿಶಾಮಕ ಎನ್‌ಒಸಿ ಹೊಂದಿತ್ತೇ ಇಲ್ಲವೆ ಎಂಬ ನಿಟ್ಟಿನಲ್ಲಿ ತನಿಖೆ ನಡೆಯುತ್ತಿರುವುದಾಗಿ ವರದಿಗಳು ಹೇಳಿವೆ.
ಈ ಮಧ್ಯೆ, ಆಸ್ಪತ್ರೆ ಬೆಂಕಿ ದುರಂತಕ್ಕೆ ಸಂಬಂಧಿಸಿ ದಿಲ್ಲಿ ಸರಕಾರ ಮ್ಯಾಜಿಸ್ಟ್ರೇಟ್ ತನಿಖೆಗೆ ಆದೇಶಿಸಿದೆ.
ದಿಲ್ಲಿ ಲೆಫ್ಟಿನೆಂಟ್ ಗವರ್ನರ್ ವಿ.ಕೆ. ಸಕ್ಸೇನಾ ಮುಖ್ಯ ಕಾರ್ಯದರ್ಶಿ ನರೇಶ್ ಕುಮಾರ್ ಅವರಿಗೆ ಈ ಬಗ್ಗೆ ಸೂಚಿಸಿದ್ದಾರೆ.
ಗೇಮಿಂಗ್ ರೆನ್ ದುರಂತದಲ್ಲಿ ಮೃತರಾದವರ ಕುಟುಂಬಗಳಿಗೆ ತಲಾ 4 ಲಕ್ಷ ಪರಿಹಾರ ಘೋಷಿಸಲಾಗಿದ್ದರೆ, ದಿಲ್ಲಿ ಆಸ್ಪತೆ ದುರಂತದಲ್ಲಿ ಸಾವಿಗೀಡಾದ ಶಿಶುಗಳ ಕುಟುಂಬಕ್ಕೆ ತಲಾ 2 ಲಕ್ಷ ಹಾಗೂ ಗಾಯಾಳುಗಳಿಗೆ ತಲಾ 50,000 ಪರಿಹಾರವನ್ನು ಪ್ರಧಾನಿ ಘೋಷಿಸಿದ್ದಾರೆ.
ಆದರೆ, ಇಂತಹ ದುರಂತಗಳ ವಿಚಾರದಲ್ಲಿ, ಈ ದುರಂತಗಳ ಹಿಂದಿನ ಅಕ್ರಮಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಇಚ್ಛಾಶಕ್ತಿಯನ್ನು ಸರಕಾರಗಳು ತೋರಿಸುತ್ತವೆಯೇ?
ಹಾಗೆ ಕಠಿಣ ಕ್ರಮ ಕೈಗೊಳ್ಳದ ಹೊರತು,
ಜನರ ಜೀವ ತೆಗೆಯುವ ಮಟ್ಟಿನ ಅಕ್ರಮಗಳಲ್ಲಿ ಭಾಗಿಯಾದವರಿಗೆ ಯಾವುದೋ ಬಾಗಿಲಿನಿಂದ ರಕ್ಷಣೆ ಒದಗಿಸುವುದು ನಡೆಯುತ್ತಲೇ ಇರುವವರೆಗೂ, ಇಂತಹ ಪರಿಹಾರ ಘೋಷಣೆ ಕೂಡ ಮತ್ತೊಂದು ಬಗೆಯ ರಾಜಕೀಯ ಮಾತ್ರವಾಗಿರುತ್ತದೆ.
ಗಮನಿಸಿದರೆ, ಹೀಗೆಲ್ಲ ದುರಂತಗಳು ಆದಾಗ ಯಾಕೆ ಅದರ ತನಿಖೆ ತಾರ್ಕಿಕ ಅಂತ್ಯ ಕಾಣುವುದಿಲ್ಲ? ಯಾಕೆ ಯಾರದ್ದೂ ತಲೆದಂಡ ಆಗುವುದೇ ಇಲ್ಲ? ಶಾಸಕರು, ಸಚಿವರು, ಸಿಎಂ ಹಂತದ ಯಾರೂ ಇದಕ್ಕೆ ಜವಾಬ್ದಾರರೇ ಅಲ್ಲವೇ
ರಾಜಧಾನಿ ದಿಲ್ಲಿಯಲ್ಲಿನ ದುರಂತವನ್ನು ಪ್ರಧಾನಿ ಎಷ್ಟು ಗಂಭೀರವಾಗಿ ತೆಗೊಂಡಿದ್ದಾರೆ? ಅವರದೇ ತವರಿನಲ್ಲಿ ನಡೆದ ಆ ಸೇತುವೆ ದುರಂತದ ತನಿಖೆ ಏನಾಯ್ತು? ಯಾರಿಗೆಲ್ಲ ಅದರಲ್ಲಿ ಶಿಕ್ಷೆಯಾಯಿತು? ದೇಶವನ್ನೇ ಬೆಚ್ಚಿಬೀಳಿಸಿದ ಆ ದುರಂತಗಳೆಲ್ಲವೂ ಎಷ್ಟು ಬೇಗ ಈ ರಾಜಕೀಯದವರ ಮನಸ್ಸಿನಿಂದ ಮರೆತುಹೋಗುತ್ತವೆ?
ಇಂಥ ಪ್ರಶ್ನೆಗಳು ಜನಮಾನಸದಲ್ಲಿ ಏಳುತ್ತಲೇ ಇರುತ್ತವೆ. ಆದರೆ ಉತ್ತರ?
ಮೊರ್ಬಿ ಸೇತುವೆ ನವೀಕರಣದ ಗುತ್ತಿಗೆ ಪಡೆದಿದ್ದ ಒರೆವಾ ಕಂಪೆನಿಯ ಗುತ್ತಿಗೆದಾರರು ಅರ್ಹ ಇಂಜಿನಿಯರ್‌ಗಳೇ ಅಲ್ಲ ಎಂದು ಪೊಲೀಸರು ನ್ಯಾಯಾಂಗಕ್ಕೆ ತಿಳಿಸಿದ್ದು ವರದಿಯಾಗಿತ್ತು.
ವೆಲ್ಡಿಂಗ್, ಇಲೆಕ್ಟ್ರಿಕಲ್ ಕೆಲಸದಲ್ಲಿ ತೊಡಗಿದ್ದವರಿಗೆ ಅಂಥದೊಂದು ನಿರ್ಮಾಣ ಕಾರ್ಯದ ಗುತ್ತಿಗೆ ನೀಡಲಾಗಿತ್ತೆ?
ದೇಶಕ್ಕೇ ಮಾಡೆಲ್ ಎನ್ನಲಾಗುವ ಗುಜರಾತಿನಲ್ಲಿ ಬಿಜೆಪಿ ಸರಕಾರ ಹಾಗಾದರೆ ಏನು ಮಾಡಿತ್ತು?
ಅರ್ಹತೆಯೇ ಇಲ್ಲದವರಿಗೆ ಅಂಥದೊಂದು ಹೊಣೆಗಾರಿಕೆಯ ಕೆಲಸ ವಹಿಸಿತ್ತಾದರೆ, ಅದೇಕೆ ಆ ದುರಂತಕ್ಕೆ ನೈತಿಕ ಹೊಣೆ ಹೊರಲೇ ಇಲ್ಲ?
ಮೊರ್ಬಿ ಸೇತುವೆ ದುರಂತದ ತನಿಖೆ ಅವ್ಯವಸ್ಥಿತ ಹಾದಿಯಲ್ಲಿ ಇದ್ದುದರ ಬಗ್ಗೆ 2022ರ ನವೆಂಬರ್‌ನಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಕಿಡಿ ಕಾರಿದ್ದರು.
ಆ ವಿಚಾರದಲ್ಲಿ ಗುಜರಾತ್ ಸರಕಾರವನ್ನು ಪ್ರಧಾನಿ ಮೋದಿ ತರಾಟೆಗೆ ತೆಗೆದುಕೊಳ್ಳಬೇಕು ಎಂದು ಖರ್ಗೆ ಒತ್ತಾಯಿಸಿದ್ದರು.
ತುಕ್ಕು ಹಿಡಿದಿದ್ದ ಸೇತುವೆಯ ಕೇಬಲ್‌ಗಳನ್ನೂ ಬದಲಿಸಿರಲಿಲ್ಲ. ಅದನ್ನು ದುರಸ್ತಿಗೊಳಿಸುವ ಕೆಲಸವೂ ಆಗಿರಲಿಲ್ಲ.
ಅಧಿಕಾರಿಗಳ ಅನುಮತಿಯನ್ನೂ ಪಡೆಯದೆ, ಗುಣಮಟ್ಟ ಪರೀಕ್ಷೆಯನ್ನೂ ನಡೆಸದೆ ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು. ಆದರೆ, ಆ ದುರಂತವನ್ನು ದೇವರ ಇಚ್ಛೆ ಎಂದು ಆರೋಪಿಗಳಲ್ಲಿ ಒಬ್ಬ ಹೇಳಿದ್ದುದು ವರದಿಯಾಗಿತ್ತು.
ಬಹುಶಃ ಬಿಜೆಪಿ ಸರಕಾರ ಕೂಡ ಹಾಗೆಯೇ ಅಂದುಕೊಂಡಿದ್ದಿರಬಹುದು.
ನೂರಾರು ಪ್ರಾಣಗಳನ್ನು ಬಲಿ ಪಡೆದ ಘಟನೆಯ ತನಿಖೆ ತಾರ್ಕಿಕ ಅಂತ್ಯವನ್ನೇ ಕಾಣದೆ ನನೆಗುದಿಗೆ ಬಿದ್ದಿದೆ.
ಹೃದಯ ವಿದ್ರಾವಕ ಎಂದೆಲ್ಲ ಇಂತಹ ದುರಂತಗಳು ನಡೆದಾಗ ಟ್ವೀಟ್ ಮೂಲಕ ಕಣ್ಣೀರು ಹಾಕುವ ಪ್ರಧಾನಿಗೆ ನಿಜವಾದ ಹೃದಯವಂತಿಕೆ ಇದ್ದಿದ್ದರೆ ತನಿಖೆಗಳೇಕೆ ದಾರಿ ತಪ್ಪುವುದು ಸಾಧ್ಯವಿತ್ತು?
ಕಡೇ ಪಕ್ಷ ಅವೆಲ್ಲಿಗೆ ಮುಟ್ಟಿದವು ಎಂಬುದು ಕೂಡ ಅಸ್ಪಷ್ಟವಾಗಿರುವ ಮಟ್ಟಿಗೆ ಎಲ್ಲವನ್ನೂ ಬದಿಗೆ ಸರಿಸಲಾಗುತ್ತದೆ. ಶೋಕಿಗಷ್ಟೇ ಕಳಕಳಿ, ಕಾಳಜಿ ಕಣ್ಣೀರಿನ ನಾಟಕ ನಡೆಯುತ್ತದೆ.
ನಾಲ್ಕು ವರ್ಷಗಳಿಂದ ಸರಿಯಾದ ನಿಯಮ ಪಾಲಿಸದೆ ಗೇಮಿಂಗ್ ರೆನ್ ನಡೆಯುತ್ತಿತ್ತೆಂಬುದು ಈಗ ಬಯಲಾಗುತ್ತಿದೆ. ಆದರೆ ಅದೆಲ್ಲವೂ ಸರಕಾರದ ಗಮನಕ್ಕಿಲ್ಲದೆ ನಡೆದಿದೆಯೆ?
ಸರಕಾರದಲ್ಲಿರುವವರ, ಪ್ರಭಾವಿಗಳ ಬೆಂಬಲವಿಲ್ಲದೆ ಅಷ್ಟೊಂದು ನಿಷ್ಕಾಳಜಿ ಮತ್ತು ಹೊಣೆಗೇಡಿತನವನ್ನು ತೋರಿಸಲು ಆ ಗೇಮಿಂಗ್‌ರೆನ್ ಮಾಲಕರುಗಳಿಗೆ ಸಾಧ್ಯವೆ?
ಎಲ್ಲವೂ ಅದೇ ಬಿಜೆಪಿ ಸರಕಾರದ ಮೂಗಿನಡಿಯೇ ನಡೆದಿರುತ್ತದಲ್ಲವೆ?
ಅವರ ಆಳ್ವಿಕೆಯಡಿಯಲ್ಲಿನ ದುರಂತಗಳಿಗೆ, ಅದು ಪಡೆದಿರುವ ಜೀವ ಬಲಿಗೆ ಯಾರು ಉತ್ತರಿಸಬೇಕು? ಯಾಕೆ ಅವರನ್ನು ನೈತಿಕತೆಯ ಪ್ರಶ್ನೆ ಕೂಡ ಕಾಡದೇ ಹೋಗುತ್ತದೆ?
ದುರಂತಗಳು ನಡೆದಾಗೊಮ್ಮೆ ಎರಡು ದಿನ ಹೇಳಿಕೆಗಳ ರಾಜಕಾರಣ ನಡೆಯುತ್ತದೆ. ನಂತರ ಎಲ್ಲ ಸದ್ದುಗಳೂ ಅಡಗಿ ಹೋಗುತ್ತವೆ.