ಸುಪ್ರೀಂ ಕೋರ್ಟ್ ತಡೆದ ಈ ಮಹಾ ಹಗರಣದ ಹೊಣೆ ಯಾರು ?
ಮೋದಿ ಸರ್ಕಾರ ತಂದಿದ್ದ ಚುನಾವಣಾ ಬಾಂಡ್ ಯೋಜನೆ ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು ನೀಡಿದೆ. ಚುನಾವಣಾ ಬಾಂಡ್ ಯೋಜನೆ ಮಾಹಿತಿ ಹಕ್ಕು ಕಾಯ್ದೆಯ ಉಲ್ಲಂಘನೆ ಎಂದೂ ಹೇಳಿರುವ ಸುಪ್ರೀಂ ಕೋರ್ಟ್, ಆ ಯೋಜನೆಯನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ. ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹಾಗೂ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ ಆರ್ ಗವಾಯಿ, ಜೆ ಬಿ ಪರ್ದಿವಾಲ ಮತ್ತು ಮನೋಜ್ ಮಿಶ್ರಾ ಅವರ ಪೀಠ ಈ ಮಹತ್ವದ ತೀರ್ಪು ನೀಡಿದೆ.
ಇದರೊಂದಿಗೆ, ಮೋದಿ ಸರ್ಕಾರದ ಅತಿ ದೊಡ್ಡ ಹಗರಣವೊಂದು, ಭಾರೀ ವಂಚನೆಯೊಂದು ದೇಶದೆದುರು ಬಯಲಾಗಿದೆ. ಸರಕಾರವೇ ಮುಂದೆ ನಿಂತು ಜಾರಿಗೆ ತಂದಿದ್ದ ಮಹಾ ಮನಿ ಲಾಂಡರಿಂಗ್ ಹಗರಣವೊಂದಕ್ಕೆ ಕೊನೆಗೂ ತಡೆ ಬಿದ್ದಂತಾಗಿದೆ. ಲೋಕಸಭಾ ಚುನಾವಣೆ ಎದುರಲ್ಲಿ ಇರುವ ಹೊತ್ತಿನಲ್ಲಿ ಇದು ಬಹಳ ಮಹತ್ವದ ವಿದ್ಯಮಾನ.
ಚುನಾವಣಾ ಬಾಂಡ್ ಹೆಸರಲ್ಲಿ ದೊಡ್ಡ ಅಪಾಯ ಎದುರಾಗಿರುವುದರ ಬಗ್ಗೆ ಮತ್ತೆ ಮತ್ತೆ ಎಚ್ಚರಿಕೆ ಕೊಟ್ಟಿದ್ದವರ ಆ ಎಲ್ಲ ಮಾತುಗಳು ಈಗ ನಿಜವಾಗಿವೆ. ಚುನಾವಣಾ ಬಾಂಡ್ ವಿರುದ್ಧ ಸುದೀರ್ಘ ಹೋರಾಟ ನಡೆಸಿದ್ದ ಎಲ್ಲರಿಗೂ ಸುಪ್ರೀಂ ಕೋರ್ಟ್ ತೀರ್ಪಿನಿಂದ ದೊಡ್ಡ ಗೆಲುವು ಸಿಕ್ಕಂತಾಗಿದೆ. ಪ್ರಜಾಸತ್ತೆಯ ಕಗ್ಗೊಲೆಗೆ ಹೇಗೆ ಮೋದಿ ಸರ್ಕಾರ ಚುನಾವಣಾ ಬಾಂಡ್ ಹೆಸರಲ್ಲಿ ಆಟವಾಡಿತ್ತು, ಹೇಗೆ ಆ ತೀರಾ ನಿಗೂಢ ವ್ಯವಸ್ಥೆಯನ್ನು ಪಾರದರ್ಶಕ ಎಂದು ಹೇಳುತ್ತಲೇ ದೇಶವನ್ನು ವಂಚಿಸುವುದು ನಡೆದಿತ್ತು ಎಂಬುದು ಈಗ ದೇಶದ ಪರಮೋಚ್ಚ ನ್ಯಾಯಾಲಯದ ಮೂಲಕವೇ ಬಯಲಾದಂತಾಗಿದೆ.
ದೇಶದ ಜನತೆಯನ್ನು, ದೇಶದ ಮತದಾರರನ್ನು ನಿರಂತರವಾಗಿ ವಂಚಿಸಿ ಹೇಗೆ ಇಡೀ ಚುನಾವಣಾ ವ್ಯವಸ್ಥೆಯನ್ನು ಕೆಲವೇ ಕೆಲವು ಕೈಗಾರಿಕೋದ್ಯಮಿಗಳ ಕೈಗೆ ಕೊಡಲಾಗಿತ್ತು ? ಹೇಗೆ ಇಡೀ ಚುನಾವಣಾ ವ್ಯವಸ್ಥೆ ದುಡ್ಡುಳ್ಳವರ ದಾಸ್ಯಕ್ಕೆ ಒಳಗಾಗುವ ಸ್ಥಿತಿ ತಲೆದೋರಿತ್ತು? ಮತ್ತು ಇದೆಲ್ಲದರ ಹಿಂದೆ ಇದ್ದವರು ಯಾರಾಗಿದ್ದರು?.
ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಗೊತ್ತಿದ್ದೂ ಪ್ರಜಾಸತ್ತೆಯ ಬಗ್ಗೆ ಕಳಕಳಿ ಇಟ್ಟುಕೊಂಡಿದ್ದ ಎಲ್ಲರೂ ಅಸಹಾಯಕರಾಗಿ ನಿಲ್ಲುವಂತಾಗಿತ್ತು. ಆದರೆ ಈಗ ಸುಪ್ರಿಂ ಕೋರ್ಟ್ನ ಈ ಐತಿಹಾಸಿಕ ತೀರ್ಪಿನಿಂದಾಗಿ ಪ್ರಜಾಸತ್ತೆಗೆ ಒಂದು ದೊಡ್ಡ ಬಲ, ದೊಡ್ಡ ಜಯ ಸಿಕ್ಕಂತಾಗಿದೆ.
ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿರುವುದೇನು?
1. ಚುನಾವಣಾ ಬಾಂಡ್ ಯೋಜನೆ ಅಸಾಂವಿಧಾನಿಕ.
2. ಚುನಾವಣಾ ಬಾಂಡ್ಗಳು ಮಾಹಿತಿ ಹಕ್ಕು ಕಾಯ್ದೆಯ ಉಲ್ಲಂಘನೆ ಹಾಗೂ ಸಂವಿಧಾನದ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹಕ್ಕಿಗೆ ವಿರುದ್ಧ.
3. ರಾಜಕೀಯ ಪಕ್ಷಗಳಿಗೆ ಆರ್ಥಿಕ ಬೆಂಬಲ ನೀಡುವುದು ಖ್ವಿಡ್ ಪ್ರೊ ಕೊ , ಅಂದರೆ ಒಂದು ಸಹಾಯ ಮಾಡಿದ್ದಕ್ಕಾಗಿ ಇನ್ನೊಂದು ಪ್ರಯೋಜನ ಪಡೆಯುವುದಕ್ಕೆ ಕಾರಣವಾಗಬಹುದು.
4. ಕಪ್ಪುಹಣಕ್ಕೆ ಕಡಿವಾಣ ಹಾಕಲು ಚುನಾವಣಾ ಬಾಂಡ್ ಯೋಜನೆ ಒಂದೇ ದಾರಿಯಲ್ಲ, ಅದಕ್ಕೆ ಪರ್ಯಾಯ ಮಾರ್ಗಗಳಿವೆ.
ಇದಲ್ಲದೆ, ಚುನಾವಣಾ ಬಾಂಡ್‌ಗಳನ್ನು ಮಾರಾಟ ಮಾಡುವುದನ್ನು ಎಸ್ ಬಿಐ ತಕ್ಷಣ ನಿಲ್ಲಿಸಬೇಕು ಎಂದು ಕೋರ್ಟ್ ಆದೇಶಿಸಿದೆ. ಚುನಾವಣಾ ಬಾಂಡ್ಗಳ ಮೂಲಕ ರಾಜಕೀಯ ಪಕ್ಷಗಳಿಗೆ ಮಾಡಿರುವ ದೇಣಿಗೆಗಳ ಎಲ್ಲಾ ಮಾಹಿತಿಯನ್ನು ಒದಗಿಸಲು ಸೂಚಿಸಿದೆ. ಎಷ್ಟು ದೇಣಿಗೆ ಬಂದಿದೆ, ಎಷ್ಟು ಹಣವನ್ನು ರಾಜಕೀಯ ಪಕ್ಷಗಳು ಬಳಸಿಕೊಂಡಿವೆ ಎಂಬ ಮಾಹಿತಿ ನೀಡಲು ಸುಪ್ರೀಂ ಕೋರ್ಟ್ ಸೂಚನೆ ನೀಡಿದೆ.
ಮಾರ್ಚ್ 6ರ ವೇಳೆಗೆ ಎಸ್ ಬಿಐ ಚುನಾವಣಾ ಆಯೋಗಕ್ಕೆ ಚುನಾವಣಾ ಬಾಂಡ್ಗಳ ಕುರಿತು ಮಾಹಿತಿಯನ್ನು ಸಲ್ಲಿಸಬೇಕು. ರಾಜಕೀಯ ಪಕ್ಷಗಳು ನಗದಾಗಿ ಪರಿವರ್ತಿಸಿಕೊಂಡ ಪ್ರತಿಯೊಂದು ಚುನಾವಣಾ ಬಾಂಡ್ಗಳ ಕುರಿತು ಎಸ್ ಬಿಐ ನಗದಿನ ದಿನಾಂಕ, ಮುಖಬೆಲೆ ಸೇರಿದಂತೆ ಪ್ರತಿಯೊಂದು ಮಾಹಿತಿಯನ್ನು ಬಹಿರಂಗಗೊಳಿಸಬೇಕು.
ಎಸ್ಬಿಐ ಹಂಚಿಕೊಳ್ಳುವ ಮಾಹಿತಿಯನ್ನು ಚುನಾವಣಾ ಆಯೋಗ ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಮಾರ್ಚ್ 13ರೊಳಗೆ ಪ್ರಕಟಿಸಬೇಕು ಎಂಬುದು ಸುಪ್ರೀಂ ಕೋರ್ಟ್ ಸೂಚನೆಯಾಗಿದೆ. ಈ ತೀರ್ಪಿಗೆ ಮೊದಲು ಹಲವರಿಂದ ಒಂದು ಸುದೀರ್ಘ ಹೋರಾಟವೇ ನಡೆದಿತ್ತು. ಚುನಾವಣಾ ಬಾಂಡ್ಗಳ ಕುರಿತ ಎಲ್ಲ ಸವಾಲುಗಳು, ಅದರ ಕುರಿತ ಅನುಮಾನಗಳು, ಆರೋಪಗಳು ಈಗ ಸಾಬೀತಾದಂತಾಗಿದೆ.
ಚುನಾವಣೆಗೆ ಹಣ ಸೇರಿಸುವುದಕ್ಕೆ ಇಂಥದೊಂದು ಅಸಾಂವಿಧಾನಿಕ ದುಸ್ಸಾಹಸದ ಹೆಜ್ಜೆಯನ್ನು ಮೋದಿ ಸರ್ಕಾರ ಇಟ್ಟಿತ್ತಲ್ಲ ಎಂಬುದೇ ಬೆಚ್ಚಿಬೀಳಿಸುತ್ತದೆ. ಅವರೀಗ ಉತ್ತರಿಸಬೇಕಿದೆ. ಹೀಗೇಕೆ ಮಾಡಿದರು ಎಂಬುದು ಸಣ್ಣ ಪ್ರಶ್ನೆಯಲ್ಲ. ಪ್ರಧಾನಿ ಮೋದಿ ಈಗ ಇದರ ಅಸಾಂವಿಧಾನಿಕತೆ ಬಗ್ಗೆ ಸುಪ್ರೀಂ ಕೋರ್ಟ್ ಹೇಳಿರುವುದಕ್ಕೆ ಸಾಂವಿಧಾನಿಕ ಮತ್ತು ನೈತಿಕ ಹೊಣೆ ಹೊರುತ್ತಾರೆಯೆ?
ಇದು ಕೇಳಲೇಬೇಕಾದ ಪ್ರಶ್ನೆಯಾಗಿದೆ. ಮೋದಿ ಮುಂದಾಳತ್ವದಲ್ಲಿಯೇ ಆ ಕಾನೂನು ಪಾಸಾಯಿತು. ಅದನ್ನೀಗ ಕೋರ್ಟ್ ಅಸಾಂವಿಧಾನಿಕ ಎಂದಿದೆ. ಮಡಿಲ ಮೀಡಿಯಾದ ಎಷ್ಟು ಪತ್ರಕರ್ತರಿಗೆ ಈ ವಿಚಾರವಾಗಿ ಪ್ರಧಾನಿಯನ್ನು ಪ್ರಶ್ನಿಸುವ ಧೈರ್ಯವಿದೆ? ಚುನಾವಣಾ ಬಾಂಡ್ಗಳು ಅಸಾಂವಿಧಾನಿಕ ಎಂದು ಸುಪ್ರೀಂ ಕೋರ್ಟ್ ತೀರ್ಪು ಕೊಟ್ಟಿರುವ ಈ ಸಂದರ್ಭದಲ್ಲಿ, ಏನು ಚುನಾವಣಾ ಬಾಂಡ್ ಎಂಬುದನ್ನು ಸಂಕ್ಷಿಪ್ತವಾಗಿ ನೋಡೋಣ.
ಯಾರೇ ಆದರೂ ಎಷ್ಟೇ ದೊಡ್ಡ ಮೊತ್ತವನ್ನಾದರೂ ರಾಜಕೀಯ ಪಕ್ಷಗಳಿಗೆ ಗುಟ್ಟಾಗಿ ದೇಣಿಗೆ ನೀಡಲು ಅವಕಾಶ ಮಾಡಿಕೊಡುವುದೇ ಚುನಾವಣಾ ಬಾಂಡ್ ವ್ಯವಸ್ಥೆ. ಇದನ್ನು 2017ರಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿತು. ಜನಪ್ರಾತಿನಿಧ್ಯ ಕಾಯ್ದೆ ಪ್ರಕಾರ, ರಾಜಕೀಯ ಪಕ್ಷಗಳಿಗೆ ವ್ಯಕ್ತಿ ಅಥವಾ ಸಂಸ್ಥೆಗಳು ನೀಡುವ ದೇಣಿಗೆ ಮೊತ್ತವು 20 ಸಾವಿರಕ್ಕಿಂತ ಹೆಚ್ಚಿದ್ದಲ್ಲಿ ಅಂಥವರ ಹೆಸರನ್ನು ರಾಜಕೀಯ ಪಕ್ಷಗಳು ಬಹಿರಂಗಪಡಿಸಬೇಕು.
ಆದರೆ, ಹೀಗೆ ಮಾಹಿತಿಯನ್ನೇ ಬಹಿರಂಗಪಡಿಸದೆ ವ್ಯಕ್ತಿಗಳು, ಸಂಸ್ಥೆಗಳು ತಮಗೆ ಬೇಕೆನಿಸಿದಷ್ಟು ದೊಡ್ಡ ಮೊತ್ತವನ್ನು ರಾಜಕೀಯ ಪಕ್ಷಗಳಿಗೆ ದೇಣಿಗೆಯಾಗಿ ನೀಡಲು ಚುನಾವಣಾ ಬಾಂಡ್ ಮೂಲಕ ಅವಕಾಶ ಮಾಡಿಕೊಡಲಾಗಿತ್ತು. 2017ರಲ್ಲಿ ರೆಪ್ರೆಸೆಂಟೇಷನ್ ಆಫ್ ಪೀಪಲ್ಸ್ ಆಕ್ಟ್ 1951 (RPA) ನ ಸೆಕ್ಷನ್ 29ಸಿ ಗೆ ತಿದ್ದುಪಡಿ ತರುವ ಮೂಲಕ, 2017ರ ಹಣಕಾಸು ಮಸೂದೆಯಲ್ಲಿ ಚುನಾವಣಾ ಬಾಂಡ್ ಪರಿಚಯಿಸಲಾಯಿತು.
10 ಸಾವಿರದಿಂದ ಒಂದು ಕೋಟಿವರೆಗಿನ ಮೌಲ್ಯದಲ್ಲಿ ಈ ಬಾಂಡ್ಗಳು ಲಭ್ಯವಿರುತ್ತವೆ. ಯಾರೂ ಯಾವುದೇ ಪಕ್ಷಕ್ಕೂ ಗುಟ್ಟಾಗಿ ದೇಣಿಗೆ ಕೊಡಲು ಅವಕಾಶವಿತ್ತು.ಈ ಬಾಂಡ್ಗಳ ಮಾರಾಟವೇನಿದ್ದರೂ ಎಸ್ಬಿಐ ಮೂಲಕ ಮಾತ್ರವೇ ನಡೆಯುತ್ತಿತ್ತು. ಅದರರ್ಥ,
ಸಂಪೂರ್ಣ ಹತೋಟಿ ಸರ್ಕಾರದ ಬಳಿ ಇತ್ತು ಮತ್ತು ಯಾವೆಲ್ಲ ಪಕ್ಷಗಳಿಗೆ ಎಷ್ಟೆಲ್ಲ ದೇಣಿಗೆ ಯಾರ್ಯಾರಿಂದ ಬಂದಿದೆ ಎಂಬ ಎಲ್ಲ ಮಾಹಿತಿಗಳು ಸರ್ಕಾರಕ್ಕೆ ಸಿಗುವುದಕ್ಕೆ ಅವಕಾಶವಿತ್ತು.
ವಿವಾದಕ್ಕೆ ಒಳಗಾಗಿದ್ದು ಏಕೆ?
ದೇಣಿಗೆ ನೀಡುವವರ ಮಾಹಿತಿ ಗೌಪ್ಯವಾಗಿರಿಸಲು ಅವಕಾಶವಿರುವುದೇ ಇಲ್ಲಿ ವಿವಾದದ ವಿಚಾರವಾಗಿತ್ತು. ಪ್ರತಿವರ್ಷ ಚುನಾವಣಾ ಆಯೋಗಕ್ಕೆ ಕಡ್ಡಾಯವಾಗಿ ಸಲ್ಲಿಸುವ ದೇಣಿಗೆ ವರದಿಯಲ್ಲಿ ಚುನಾವಣಾ ಬಾಂಡ್ಗಳ ಮೂಲಕ ಯಾರಿಂದ ದೇಣಿಗೆ ಬಂದಿದೆ ಎಂಬುದನ್ನು ರಾಜಕೀಯ ಪಕ್ಷಗಳು ಬಹಿರಂಗಪಡಿಸುವ ಅಗತ್ಯವೇ ಇರಲಿಲ್ಲ.
ಹಣ ಎಲ್ಲಿಂದ ಬಂತು, ಯಾರು ಕೊಟ್ಟರು ಎಂಬ ವಿವರಗಳನ್ನು ಪಡೆಯುವ ಅವಕಾಶವೇ ಈ ದೇಶದ ಜನತೆಗೆ ಇರಲಿಲ್ಲ. ತೆರಿಗೆದಾರರಾಗಿರುವ ಜನರು ಈ ದೇಣಿಗೆಗಳ ಮೂಲ ತಿಳಿದುಕೊಳ್ಳದಂತೆ ಮಾಡಲಾಗಿತ್ತು. ಹೀಗಾಗಿಯೇ, ಚುನಾವಣಾ ಬಾಂಡ್ ಯೋಜನೆಯ ಸಿಂಧುತ್ವ ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು.
ಪ್ರತಿ ತ್ರೈಮಾಸಿಕದ ಮೊದಲ 10 ದಿನಗಳಲ್ಲಿ ಮಾತ್ರ ಇದರ ಮಾರಾಟಕ್ಕೆ ಅವಕಾಶ ಎಂಬ ನಿಯಮ ತಾಂತ್ರಿಕವಾಗಿಯೇನೋ ಇತ್ತು. ಅಂದರೆ, ಜನವರಿ, ಏಪ್ರಿಲ್, ಜುಲೈ ಹಾಗೂ ಅಕ್ಟೋಬರ್ಗಳಲ್ಲಿ. ಆದರೆ, 2018ರಲ್ಲಿ ಈ ನಿಯಮವನ್ನು ಮುರಿದು ಮೇ ಹಾಗೂ ನವೆಂಬರ್ ತಿಂಗಳಲ್ಲಿ ಬಾಂಡ್ಗಳ ಖರೀದಿಗೆ ಅವಕಾಶ ನೀಡಲಾಗಿತ್ತು. ಈ ವಿಚಾರವೂ ಸುಪ್ರಿಂ ಕೋರ್ಟ್ ಮುಂದೆ ಬಂದಿತ್ತು.
ತಾನೂ ತಿನ್ನುವುದಿಲ್ಲ, ತಿನ್ನುವುದಕ್ಕೂ ಬಿಡುವುದಿಲ್ಲ ಎಂದು ಹೇಳುತ್ತ ಅಧಿಕಾರಕ್ಕೆ ಬಂದಿದ್ದ ಮೋದಿ ಸರ್ಕಾರ, ಇಂಥದೊಂದು ಭಾರೀ ಜನವಿರೋಧಿ ಯೋಜನೆ ಜಾರಿಗೆ ತಂದಾಗಿನಿಂದಲೂ ಬಿಜೆಪಿಯ ಖಜಾನೆ ಭರ್ಜರಿಯಾಗಿ ತುಂಬುತ್ತಲೇ ಇದ್ದುದನ್ನು ಹಲವು ವರದಿಗಳು ಬಹಿರಂಗಪಡಿಸಿದ್ದವು.
ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳ ಒಟ್ಟು ಆದಾಯದ ಅರ್ಧಕ್ಕಿಂತ ಹೆಚ್ಚಿನ ಮೂಲ ಚುನಾವಣಾ ಬಾಂಡ್‌ಗಳ ದೇಣಿಗೆಯೇ ಆಗಿದೆ ಎಂಬುದು ಚುನಾವಣಾ ಬಾಂಡ್ ಬಗ್ಗೆ ಕೋರ್ಟಿನಲ್ಲಿ ಪ್ರಶ್ನಿಸಿರುವ ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ವಾದವಾಗಿತ್ತು. ಆದರೆ ಇಷ್ಟೊಂದು ದೊಡ್ಡ ಮೊತ್ತದ ಹಣದ ಹರಿವಿನ ಮೂಲ ಕೇಳುವಂತಿಲ್ಲ ಎಂಬುದೇ ದೇಶದ ಜನತೆಯನ್ನು ಪೂರ್ತಿ ಕತ್ತಲಲ್ಲಿಡುವ ನೀತಿಯಾಗಿತ್ತು.
ದೇಣಿಗೆ ನೀಡುವವರ ಅನಾಮಧೇಯತೆ ವಿಚಾರದಲ್ಲಿ ಮತ್ತೂ ಒಂದು ಅಪಾಯಕಾರಿ ಸಂಗತಿಯಿತ್ತು. ಅದೇನೆಂದರೆ, ದೇಣಿಗೆ ಯಾರಿಂದ ಯಾರಿಗೆ ಬಂತೆಂಬುದು ಜನರಿಗೆ ಗೊತ್ತಾಗುವಂತರಿಲಿಲ್ಲ ಅಷ್ಟೆ. ಆದರೆ, ವಿರೋಧ ಪಕ್ಷಕ್ಕೆ ಯಾರು ಎಷ್ಟು ಕೊಟ್ಟರು ಎಂಬುದನ್ನು ಸರ್ಕಾರ ತಿಳಿದುಕೊಳ್ಳಲು ಅವಕಾಶ ಇತ್ತು. ಚುನಾವಣಾ ಬಾಂಡ್ ಪ್ರಸ್ತಾವನೆ ಹಂತದಲ್ಲಿಯೇ ಅದನ್ನು ಆರ್ಬಿಐ ಮತ್ತು ಚುನಾವಣಾ ಆಯೋಗ ಕೂಡ ವಿರೋಧಿಸಿದ್ದವು. ಅದರ ಅಪಾಯದ ಬಗ್ಗೆ ಎಚ್ಚರಿಸಿದ್ದವು.
ದೇಣಿಗೆ ವಿಚಾರದಲ್ಲಿ ಯಾವುದೇ ಪಾರದರ್ಶಕತೆ, ಉತ್ತರದಾಯಿತ್ವ ಇಲ್ಲದಿರುವುದರಿಂದ ದೇಣಿಗೆಯ ಮೂಲವೇ ಗೊತ್ತಾಗುವುದಿಲ್ಲ. ಅದು ಕಪ್ಪುಹಣ ವ್ಯವಹಾರಕ್ಕೆ ಉತ್ತೇಜನ ನೀಡಿದಂತೆ ಎಂಬ ಆಕ್ಷೇಪ ಎದ್ದಿತ್ತು. ಆದರೆ, ಸ್ವಚ್ಛ ಹಣ ದೇಣಿಗೆ ನೀಡಲು ಚುನಾವಣಾ ಬಾಂಡ್ ಉತ್ತೇಜಿಸುತ್ತದೆ. ಅದು ತೆರಿಗೆ ನಿಯಮಗಳಿಗೆ ಅನುಗುಣವಾಗಿಯೇ ಇರುತ್ತದೆ ಎಂಬುದು ಸುಪ್ರಿಂ ಕೋರ್ಟ್ ಎದುರು ಕೇಂದ್ರದ ವಾದವಾಗಿತ್ತು.
ಗುಟ್ಟಾಗಿ ಕೊಡುವ ಹಣ ಹೇಗೆ ಸ್ವಚ್ಛ ಹಣವಾಗಿರಲಿದೆ ಮತ್ತು ತೆರಿಗೆ ಕರಾರುಗಳಿಗೆ ಬದ್ಧವಾಗಿರಲಿದೆ?. ಮತ್ತು ಹೀಗಿರುವಾಗ ರಾಜಕೀಯ ಪಕ್ಷಗಳು ಹಣದ ಮೂಲವನ್ನೇಕೆ ಬಹಿರಂಗಪಡಿಸಕೂಡದು ಎಂಬ ಅನುಮಾನಗಳು ಎದ್ದಿದ್ದವು. ರಾಜಕೀಯ ಪಕ್ಷಗಳು ಸಂಗ್ರಹಿಸುವ ಒಟ್ಟು ದೇಣಿಗೆಯಲ್ಲಿ ದೊಡ್ಡ ಮೊತ್ತ ಚುನಾವಣಾ ಬಾಂಡ್ಗಳಿಂದಲೇ ಸಂಗ್ರಹವಾಗುತ್ತದೆ. ಮತ್ತು ಆ ಹಣವೇ ಕುದುರೆ ವ್ಯಾಪಾರಕ್ಕೂ ಬಳಕೆಯಾಗುವುದು ಎಂಬ ಗಂಭೀರ ಆರೋಪಗಳೂ ಇದ್ದವು.
ಚುನಾವಣೆಯಲ್ಲಿ ಗೆಲ್ಲಲಾಗದೇ ಹೋದಾಗ, ಗೆದ್ದ ಅನ್ಯಪಕ್ಷಗಳ ಮಂದಿಯನ್ನು ಸೆಳೆಯುವ ಕೆಲಸ ಮಾಡುತ್ತಲೇ ಬಂದಿರುವವರು ಯಾರು ಎಂಬುದೂ ತಿಳಿಯದಿರುವ ವಿಚಾರವೇನಲ್ಲ. ಚುನಾವಣಾ ಬಾಂಡ್ ಮೂಲಕ ದೇಣಿಗೆಯಾಗಿ ಸಲ್ಲಿಕೆಯಾಗುವ ಹಣ ಮನಿ ಲಾಂಡರಿಂಗ್ಗೆ ಸಮವೆಂದೂ, ಅದು ಕಪ್ಪು ಹಣವನ್ನು ಬಿಳಿಯಾಗಿಸುವ ಸಾಧನವೆಂದೂ ವಾದಗಳಿದ್ದವು.
ಹೀಗಿರುವುದರಿಂದಲೇ ಅದರ ಗೌಪ್ಯತೆ ವಿಚಾರದಲ್ಲಿ ಪ್ರಶ್ನೆ ಮೂಡಿತ್ತು. ರಾಜಕೀಯ ಪಕ್ಷಗಳಿಗೆ ಬರುವ ದೇಣಿಗೆ ವಿಚಾರದಲ್ಲಿ ಪಾರದರ್ಶಕತೆ ಇರದಂತೆ ಮಾಡುವ ವ್ಯವಸ್ಥೆ ಇದಾಗಿದೆ ಎಂದು ಚುನಾವಣಾ ಆಯೋಗ ಕೂಡ ಹಿಂದೆ ಹೇಳಿತ್ತು. ಎಲ್ಲ ಹಣವೂ ಆಡಳಿತ ಪಕ್ಷದ ಜೇಬು ಸೇರುವುದಕ್ಕೆ ದಾರಿ ಮಾಡಿಕೊಡುವ, ಚುನಾವಣೆಯಲ್ಲಿ ಪಾರದರ್ಶಕತೆ ಇಲ್ಲವಾಗಿಸುವ, ಪ್ರಜಾತಂತ್ರಕ್ಕೆ ಮಾರಕವಾದ ಯೋಜನೆ ಇದೆಂಬ ವಾದಗಳೊಂದಿಗೆ ಚುನಾವಣಾ ಬಾಂಡ್ ವಿರುದ್ಧದ ಪ್ರಶ್ನೆಗಳು ಸುಪ್ರೀಂ ಕೋರ್ಟ್ ಎದುರು ಬಂದಿದ್ದವು.
ಈಗ ಸುಪ್ರೀಂ ಕೋರ್ಟ್ ತೀರ್ಪಿನಿಂದ ಎಲ್ಲದಕ್ಕೂ ಉತ್ತರ ಸಿಕ್ಕಿದಂತಾಗಿದೆ. ಮತ್ತು ಮೋದಿ ಸರ್ಕಾರದ ದೊಡ್ಡ ಹಗರಣ ಬಟಾ ಬಯಲಾಗಿದೆ.ಚುನಾವಣಾ ಬಾಂಡ್ಗಳ ವಿರುದ್ಧದ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದವರು ಹಲವರು.ಚುನಾವಣಾ ಬಾಂಡ್ ವ್ಯವಸ್ಥೆ ರದ್ದುಗೊಳಿಸಬೇಕೆಂದು ಕೋರಿ ಎಡಿಆರ್ ಮತ್ತು ಕಾಮನ್ ಕಾಸ್ ಸಂಸ್ಥೆಗಳು ಸುಪ್ರಿಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದವು. ಅಲ್ಲದೆ, ಸಿಪಿಐಎಂ ಕೂಡ ಅರ್ಜಿ ಸಲ್ಲಿಸಿತ್ತು. ಈ ಎರಡು ಅರ್ಜಿಗಳು 2018ರಲ್ಲಿ ಸಲ್ಲಿಕೆಯಾಗಿದ್ದವು.
6 ವರ್ಷಗಳ ಬಳಿಕ ಈಗ ಸುಪ್ರೀಂ ಕೋರ್ಟ್ ತೀರ್ಪು ಬಂದಿದೆ. 2023ರ ನವೆಂಬರ್ನಲ್ಲಿ ವಿಚಾರಣೆ ಪೂರ್ಣಗೊಳಿಸಿದ್ದ ಕೋರ್ಟ್, ತೀರ್ಪು ಕಾಯ್ದಿರಿಸಿತ್ತು. ಚುನಾವಣಾ ಬಾಂಡ್ ಮೂಲಕ ಬಿಜೆಪಿ ಸತತ ಲಾಭ ಮಾಡಿಕೊಂಡದ್ದು ಹೇಗೆ ಎಂಬುದನ್ನೂ ಗಮನಿಸಬೇಕು. ಈಗಾಗಲೇ ವರದಿಗಳು ಹೇಳುತ್ತಿರುವಂತೆ, ಚುನಾವಣಾ ಬಾಂಡ್ಗಳ ಮೂಲಕ ದೊಡ್ಡ ಲಾಭವಾಗಿರುವುದು ಬಿಜೆಪಿಗೆ.
2018ರಿಂದ 2023ರ ಮಾರ್ಚ್ವರೆಗಿನ ಅವಧಿಯಲ್ಲಿ ಚುನಾವಣಾ ಬಾಂಡ್ಗಳ ಮೂಲಕ ಸಲ್ಲಿಸಲಾದ ದೇಣಿಗೆಯ ಶೇ.57ರಷ್ಟು ಬಿಜೆಪಿ ಪಾಲಾಗಿದೆ.
6566.12 ಕೋಟಿಯಷ್ಟು ಹಣ ಈ ಬಾಂಡ್ಗಳ ಮೂಲಕ ಬಿಜೆಪಿಗೆ ಹರಿದುಬಂದಿದೆ. ನಂತರದ ಸ್ಥಾನದಲ್ಲಿ ಕಾಂಗ್ರೆಸ್ ಇದ್ದು, ಅದಕ್ಕೆ ಬಂದಿರುವುದು 1123.31 ಕೋಟಿ.
ಚುನಾವಣೆಯಲ್ಲಿ ಈಗಾಗಲೇ ಎಷ್ಟೆಲ್ಲ ಅಧ್ವಾನಗಳು, ಪ್ರಜಾಸತ್ತೆಯನ್ನೇ ಅಣಕಿಸುವಂಥ ವಿದ್ಯಮಾನಗಳು ನಡೆಯುತ್ತಿವೆ ಎಂಬುದು ಗೊತ್ತೇ ಇದೆ.
ಚಂಡೀಘಡ ಮೇಯರ್ ಎಲೆಕ್ಷನ್ ಈಚಿನ ಒಂದು ಉದಾಹರಣೆ. ಅಲ್ಲಿ ಬಿಜೆಪಿ ಗೆಲ್ಲಲು ಏನು ನಡೆಯಿತು ಎಂಬುದನ್ನು ದೇಶವೇ ಕಂಡಿದೆ.
ಆಗ ಲೋಕತಂತ್ರದ ಹತ್ಯೆಯಾಗಲು ಅವಕಾಶ ಕೊಡುವುದಿಲ್ಲ ಎಂದು ಸ್ವತಃ ಸುಪ್ರಿಂ ಕೋರ್ಟ್ ಹೇಳಿತ್ತು. ಆದರೆ ನೈತಿಕ ಹೊಣೆಗಾರಿಕೆ ಹೊರಲು ಆಗಲೂ ಮೋದಿ ಬರಲೇ ಇಲ್ಲ.
ಈಗ ಅದೇ ಮೋದಿ ಸರ್ಕಾರ ಚುನಾವಣಾ ಬಾಂಡ್ ಹೆಸರಲ್ಲಿ ಮಾಡಿರುವ ವಂಚನೆ ಎಂಥದ್ದು ಎಂಬುದು ಬಹಿರಂಗವಾಗಿದೆ. ಈ.ಡಿ ಯನ್ನು ಬಳಸಿಕೊಂಡು ವಿಪಕ್ಷಗಳನ್ನ ಹಣಿಯುವ ಮೋದಿ, ವಿಪಕ್ಷಗಳ ಎಲ್ಲ ನಾಯಕರನ್ನು ಈ.ಡಿ ಬಳಸಿ ಜೈಲಿಗೆ ಅಟ್ಟುವ ಮೋದಿ, ಚುನಾವಣಾ ಬಾಂಡ್ ಮೂಲಕ ಎಸಗಿರುವುದು ಎಂಥ ಘೋರ ಭ್ರಷ್ಟಾಚಾರ ಎಂಬುದು ಬಯಲಾಗಿದೆ.
ಚುನಾವಣಾ ಬಾಂಡ್ ಅಸಾಂವಿಧಾನಿಕ ಎನ್ನಲಾಗಿರುವುದು ಸಣ್ಣ ತೀರ್ಮಾನವಲ್ಲ. ಅಸಾಂವಿಧಾನಿಕ ವ್ಯವಸ್ಥೆಯ ನೆರವಿನಿಂದ ಚುನಾವಣಾ ಬಾಂಡ್ ಹುಟ್ಟಿಕೊಂಡಿತು. ಆ ಮೂಲಕ ಇಡೀ ಪ್ರಜಾಸತ್ತೆಗೆ ಅತಿ ದೊಡ್ಡ ವಂಚನೆ ನಡೆಯಿತು.
ಧರ್ಮದ ಹೆಸರಿನ ರಾಜಕೀಯದ ಲಾಭ ಮಾಡಿಕೊಳ್ಳುತ್ತಿರುವವರ, ಧರ್ಮದ ಹೆಸರಿನಲ್ಲಿ ಜನರನ್ನು ಮರುಳು ಮಾಡಿದವರ ಅಧರ್ಮ ಈಗ ಬಟಾ ಬಯಲಾಗಿದೆ. ಮಡಿಲ ಮೀಡಿಯಾಗಳು ಇದನ್ನೆಂದೂ ಪ್ರಶ್ನಿಸಲೇ ಇಲ್ಲ. ಅವು ವೃತ್ತಿಧರ್ಮವನ್ನು ಪಾಲಿಸಲಾರದೆ ಹೋದವು. ಸಾಂವಿಧಾನಿಕ ಧರ್ಮದ ರಕ್ಷಣೆಗೂ ಅವು ನಿಲ್ಲಲಿಲ್ಲ.
ರಾಹುಲ್ ಗಾಂಧಿ ಈ ಹಿಂದೆಯೇ ಇದರ ಬಗ್ಗೆ ಪ್ರಶ್ನೆ ಎತ್ತಿದ್ದರು. ನವ ಭಾರತದಲ್ಲಿ, ಲಂಚ ಮತ್ತು ಅಕ್ರಮ ಕಮಿಷನ್ಗಳನ್ನು ಚುನಾವಣಾ ಬಾಂಡ್‌ಗಳು ಎಂದು ಕರೆಯಲಾಗುತ್ತದೆ ಎಂದು ಅವರು ವ್ಯಂಗ್ಯವಾಡಿದ್ದರು. ಈಗ ತೀರ್ಪಿನ ಬಳಿಕ ಮತ್ತೆ ರಾಹುಲ್ ಟ್ವೀಟ್ ಮಾಡಿದ್ದು, ಮೋದಿ ಭ್ರಷ್ಟ ನೀತಿಯ ಮತ್ತೊಂದು ಪುರಾವೆ ನಿಮ್ಮೆದುರು ಇದೆ, ಬಿಜೆಪಿ ಬಾಂಡ್ಗಳನ್ನು ಲಂಚ ಮತ್ತು ಕಮಿಷನ್ ನೀಡುವ ಮಾಧ್ಯಮವಾಗಿ ಬಳಸಿತ್ತು. ಅದು ಈಗ ಸಾಬೀತಾಗಿದೆ ಎಂದಿದ್ದಾರೆ.
ಅಧಿಕಾರಕ್ಕೆ ಬಂದರೆ ಚುನಾವಣಾ ಬಾಂಡ್ ರದ್ದುಗೊಳಿಸುವುದಾಗಿ 2019ರಲ್ಲಿ ಕಾಂಗ್ರೆಸ್ ಹೇಳಿತ್ತು. ಆದರೆ ಅದು ಚುನಾವಣೆಯಲ್ಲಿ ಸೋತಿತು.
ಆದರೆ ಈಗ ಸುಪ್ರೀಂ ಕೋರ್ಟಿನ ತೀರ್ಪಿನ ಮೂಲಕ ಅದು ಸಾಧ್ಯವಾಗಿದೆ. ಮಡಿಲ ಮೀಡಿಯಾಗಳು ಆಗಲೂ ಬಾಯಿ ಹೊಲಿದುಕೊಂಡಿದ್ದವು. ಈಗಲೂ ಅವಕ್ಕೆ ಬಾಯಿಲ್ಲ.ಯಾವ ಪಕ್ಷ ಎಷ್ಟನ್ನು ಬಾಂಡ್ ಮೂಲಕ ಪಡೆದಿದೆ ಎನ್ನುವುದು ಈಗ ಬಹಿರಂಗವಾಗಬೇಕಿದೆ.
ಬಿಜೆಪಿಗೆ ಯಾವ್ಯಾವ ಕಂಪನಿಗಳು ಚಂದಾ ಕೊಟ್ಟಿದ್ದವು ಎನ್ನುವುದು ಬಯಲಾಗಲಿದೆ. ಯಾವ್ಯಾವ ಉದ್ಯಮಿಗಳು ಕೊಟ್ಟಿದ್ದರು ಎಂಬುದು ಬಯಲಾಗಲಿದೆ.ಅವರಿಗೋಸ್ಕರ ಮೋದಿ ಸರ್ಕಾರ ಏನೇನು ಮಾಡಿತ್ತು ಎಂಬುದನ್ನೂ ನೋಡಲೂ ಸಾಧ್ಯವಾಗಲಿದೆ. ಚುನಾವಣಾ ಬಾಂಡ್ಗಳ ಮೂಲಕ ಕಾರ್ಪೋರೇಟ್ ದೇಣಿಗೆಯ ದೊಡ್ಡ ಪಾಲು ಪ್ರತಿ ಬಾರಿಯೂ ಬಂದದ್ದು ಬಿಜೆಪಿಗೇ.
ಅದು ಅತಿ ಭ್ರಷ್ಟ ವ್ಯವಸ್ಥೆ. ಮತ್ತದರಲ್ಲಿ ನೇರವಾಗಿ ಮೋದಿ ಷಾಮೀಲಾಗಿದ್ದರು. ಬಾಂಡ್ ಮೂಲಕ ರಹಸ್ಯ ನಿಧಿ ಪಡೆಯುವ ಆಟವನ್ನಾಡಿತ್ತು ಮೋದಿ ಸರ್ಕಾರ. ವಿದೇಶಿ ಕಂಪನಿಗಳು ಕೂಡ ಬಾಂಡ್ ಖರೀದಿ ಮಾಡಲು ಅವಕಾಶವಾಗುವ ಹಾಗೆ ಕಾನೂನು ರೂಪಿಸಲಾಗಿತ್ತು. ಚುನಾವಣಾ ಆಯೋಗದ ವಿರೋಧವನ್ನೂ ಕಡೆಗಣಿಸಲಾಗಿತ್ತು.
2019ರ ನವೆಂಬರ್ನಲ್ಲಿ ಹಫ್ ಪೋಸ್ಟ್ ಗಾಗಿ ನಿಥಿನ್ ಸೇಥಿ ಬರೆದ ಸರಣಿ ವರದಿಗಳ
ಪ್ರಕಾರ, ಕಪ್ಪು ಹಣ ರಾಜಕಾರಣದೊಳಕ್ಕೆ ಬರುವುದಕ್ಕೆ ಮತ್ತು ಅಸ್ಥಿರತೆಗೆ ಬಾಂಡ್ ಕಾರಣವಾಗುತ್ತದೆ ಎಂಬ ಎಚ್ಚರಿಕೆಗೂ ಆಗಿನ ಹಣಕಾಸು ಸಚಿವ ಅರುಣ್ ಜೇಟ್ಲಿ ಕವಡೆ ಕಾಸಿನ ಕಿಮ್ಮತ್ತನ್ನೂ ಕೊಟ್ಟಿರಲಿಲ್ಲ.
ಅವಧಿ ಮುಗಿದ ಬಾಂಡ್ಗಳ ಅಕ್ರಮ ಮಾರಾಟವೂ ಪಿಎಂಒ ಸೂಚನೆಯಂತೆ ನಡೆದಿತ್ತು.
ರಾಜಕೀಯ ಪ್ರತೀಕಾರದ ಭಯದಿಂದಾಗಿ ದೇಣಿಗೆದಾರರು ರಹಸ್ಯವಾಗಿಡುವಂತೆ ಕೇಳುತ್ತಿದ್ದಾರೆ ಎಂದು ಸರ್ಕಾರ ಮತ್ತೆ ಮತ್ತೆ ಪ್ರತಿಪಾದಿಸುತ್ತ ಬಂದಿತ್ತು. ಆದರೆ ರಹಸ್ಯ ಕಾಪಾಡಲು ಕೇಳಿದ್ದುದು ದೇಣಿಗೆದಾರರಾಗಿರಲಿಲ್ಲ ಎಂಬುದು ಅನಂತರ ಆರ್ಟಿಐ ಮಾಹಿತಿಯಿಂದ ಬಯಲಾಗಿತ್ತು.
ಮನಿ ಲಾಂಡರಿಂಗ್ ಆರೋಪದಲ್ಲಿ ವಿಪಕ್ಷಗಳ ನಾಯಕರನ್ನು ಜೈಲಿಗೆ ಅಟ್ಟುವ ಮೋದಿ ಸರ್ಕಾರ, ಬಾಂಡ್ ಹೆಸರಲ್ಲಿ ಆಡಿದ್ದು ಅದೇ ಮನಿ ಲಾಂಡರಿಂಗ್ ಆಟವೇ ಆಗಿತ್ತು.
ಇಷ್ಟು ಕಾಲವೂ ಬಾಂಡ್ ಹೆಸರಲ್ಲಿ ಬಿಜೆಪಿ ಮತ್ತು ಮೋದಿ ಸರ್ಕಾರ ಏನೇನು ಆಟವಾಡಿವೆ, ಹೇಗೆಲ್ಲ ವಂಚಿಸಿವೆ ಎಂಬ ಇಂಚಿಂಚು ವಿವರವೂ ಜನರ ಮುಂದೆ ಬರಬೇಕಿದೆ.
ಇದು ಮೋದಿ ಸರ್ಕಾರದ ಅತಿ ದೊಡ್ಡ ಹಗರಣ ಎಂದು ಕಪಿಲ್ ಸಿಬಲ್ ಹೇಳಿದ್ದಾರೆ. ಚುನಾವಣಾ ಬಾಂಡ್ ಯೋಜನೆಯ ಸ್ಥಗಿತ ನಿಸ್ಸಂಶಯವಾಗಿಯೂ ದೊಡ್ಡ ಪರಿಣಾಮ ಬೀರಲಿದೆ ಎಂದಿದ್ದಾರೆ ಅವರು. ಇನ್ನು ಮುಂದಾದರೂ ಸರ್ಕಾರ ಇಂತಹ ದುಷ್ಟ ಆಲೋಚನೆಗಳನ್ನು ಮಾಡುವುದನ್ನು ನಿಲ್ಲಿಸಲಿದೆ ಎಂದು ಭಾವಿಸುವುದಾಗಿ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಸುಪ್ರಿಂ ಕೋರ್ಟ್ ತೀರ್ಪು ಪ್ರಜಾಪ್ರಭುತ್ವಕ್ಕೆ ದೊಡ್ಡ ವರದಾನ ಎಂದು ಮಾಜಿ ಚುನಾವಣಾ ಆಯುಕ್ತ ಎಸ್ ವೈ ಖುರೇಷಿ ಅಭಿಪ್ರಾಯಪಟ್ಟಿದ್ದಾರೆ.ಇಂಥದೊಂದು ಅಪಾರದರ್ಶಕ ಯೋಜನೆಯನ್ನು, ಪ್ರಜಾಸತ್ತೆಗೆ ಅಪಾಯಕಾರಿಯಾಗಿದ್ದ ಯೋಜನೆಯನ್ನು ಪಾರದರ್ಶಕ ಎಂದು ಸುಳ್ಳು ಹೇಳುತ್ತ, ಜನರನ್ನು ಕತ್ತಲೆಯಲ್ಲಿಡಲಾಗಿತ್ತು.
ವಿಪಕ್ಷಗಳಿಗೆ ಹೋಗುವ ದೇಣಿಗೆಯ ಬಗ್ಗೆ ಮಾಹಿತಿ ಕಲೆ ಹಾಕುವುದಕ್ಕೆ ಸರ್ಕಾರಕ್ಕೆ ಅವಕಾಶವಿತ್ತು. ವಿಪಕ್ಷಗಳಿಗೆ ಯಾರು ದೇಣಿಗೆ ಕೊಟ್ಟರು ಎಂಬುದನ್ನು ಪತ್ತೆ ಮಾಡಿ ಅವರ ಬೆನ್ನು ಬೀಳುವುದಕ್ಕೆ, ಕಿರುಕುಳ ಕೊಡುವುದಕ್ಕೆ ಅವಕಾಶವಿತ್ತು.ಜನರ ಎಲ್ಲ ಮಾಹಿತಿಯೂ ಸರ್ಕಾರದ ಬಳಿ ಇರುತ್ತದೆ. ಆದರೆ ಸರ್ಕಾರ ಎಂಥ ಆಟವಾಡುತ್ತಿದೆ ಎಂಬ ಮಾಹಿತಿ ಅದನ್ನು ಗೆಲ್ಲಿಸಿದ ಈ ದೇಶದ ಜನರಿಗೆ ಗೊತ್ತಾಗುವ ಹಾಗಿರಲಿಲ್ಲ.
ಇದು ಎಂಥ ವಿಪರ್ಯಾಸವಾಗಿತ್ತಲ್ಲವೆ? ಎಲ್ಲ ಅಟ್ಟಹಾಸ, ಆಟಾಟೋಪಗಳಿಗೂ ಒಂದು ಅಂತ್ಯವಿರುತ್ತದಂತೆ. ಇದು ಅಂಥದೇ ಒಂದು ಅಂತ್ಯ.
ಮತ್ತು ಪ್ರಜಾಸತ್ತೆಯ ಹಾದಿಯಲ್ಲಿ ಸುಪ್ರೀಂ ಕೋರ್ಟ್ನ ಈ ತೀರ್ಪು ಬಹು ದೊಡ್ಡ ಬೆಳಕು.