ಬಿಜೆಪಿಯ ದಿಗ್ಗಜ ನಾಯಕರನ್ನು ಪ್ರಾಣ ಪ್ರತಿಷ್ಠಾಪನೆಗೆ ಹೋಗದಂತೆ ತಡೆದಿದ್ದು ಯಾರು ?

Update: 2024-02-09 04:20 GMT
Editor : Ismail | Byline : ಆರ್. ಜೀವಿ

ಅಯೋಧ್ಯೆಯಲ್ಲಿ ರಾಮ ಮಂದಿರ ಪ್ರಾಣ ಪ್ರತಿಷ್ಠಾಪನೆಯಲ್ಲಿ ಎಲ್ಲವೂ ಮೋದಿಮಯವಾಗಿ, ಪ್ರತಿ ಫ್ರೇಮ್ ನಲ್ಲೂ, ಪ್ರತಿ ಆಂಗಲ್ ನಲ್ಲೂ ಮೋದಿಯವರೇ ರಾರಾಜಿಸುತ್ತಿದ್ದಾಗ, ದೇಶದ ಕಾರ್ಪೊರೇಟ್ ಹಾಗು ಸಿನಿಮಾ ರಂಗದ ಗಣ್ಯರೆಲ್ಲ ಮೋದಿಗೆ ನಮಸ್ಕರಿಸಿ ಧನ್ಯರಾಗುತ್ತಿದ್ದಾಗ,

ಬಿಜೆಪಿಯ ಘಟಾನುಘಟಿ ನಾಯಕರೆಲ್ಲಾ ಎಲ್ಲಿದ್ದರು ?​

ದೇಶದ ಗೃಹ ಸಚಿವ ಅಮಿತ್ ಶಾ ಏಕೆ ಅವತ್ತು ದಿಲ್ಲಿಯ ಬಿರ್ಲಾ ಮಂದಿರದಲ್ಲಿದ್ದರು ?. ರಕ್ಷಣಾ ಸಚಿವ, ಯುಪಿ ಮಾಜಿ ಸಿಎಂ ಹಾಗು ಅತ್ಯಂತ ಹಿರಿಯ ಬಿಜೆಪಿ ನಾಯಕ ರಾಜನಾಥ್ ಸಿಂಗ್ ಏಕೆ ಅವರ ಮನೆಯಲ್ಲೇ ಇದ್ದರು ?. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅಯೋಧ್ಯೆಗೆ ಬರದೇ ದಿಲ್ಲಿಯಲ್ಲಿ ಯಾಕಿದ್ದರು ?.

ಬಿಜೆಪಿ ಮಾಜಿ ರಾಷ್ಟ್ರೀಯ ಅಧ್ಯಕ್ಷ, ಕೇಂದ್ರ ಸಚಿವ, ಆರೆಸ್ಸೆಸ್ ಗೂ ಅತ್ಯಾಪ್ತ ನಿತಿನ್ ಗಡ್ಕರಿ ಯಾಕೆ ಅಯೋಧ್ಯೆಯಲ್ಲಿ ಕಾಣಲಿಲ್ಲ ?. ​ಮಾಜಿ ಪ್ರಧಾನಿ ಜೆಡಿಎಸ್ ನಾಯಕ ದೇವೇಗೌಡ, ಮಾಜಿ ಸಿಎಂ ಕುಮಾರಸ್ವಾಮಿ ಅಯೋಧ್ಯೆಯಲ್ಲಿ ಮಿಂಚಿದರು. ಆದರೆ ಕರ್ನಾಟಕದ ಯಡಿಯೂರಪ್ಪ ಸಹಿತ ಯಾವುದೇ ಹಿರಿಯ ನಾಯಕರು ಅಯೋಧ್ಯೆಯಲ್ಲಿ ಕಾಣಲೇ ಇಲ್ಲ ಯಾಕೆ ?. ಇಲ್ಲಿ ರಾಮ ಮಂದಿರದ ಹೆಸರಲ್ಲಿ ಮೋದಿ ಹೆಸರಲ್ಲಿ ಕಾಂಗ್ರೆಸ್ ಜೊತೆ ಪ್ರತಿದಿನ ಜಗಳಾಡುವ ಅವರ್ಯಾರೂ ಅಲ್ಲಿರಲಿಲ್ಲ ಯಾಕೆ ?. ಜೆಡಿಎಸ್ ನಾಯಕರೇ ವಿಶೇಷ ವಿಮಾನದಲ್ಲಿ ಅಲ್ಲಿಗೆ ಹೋಗಿರುವಾಗ ಅವರನ್ನು ಹೋಗದಂತೆ ತಡೆದವರು ಯಾರು ?.

ಈ ಎಲ್ಲ ನಾಯಕರು ಭಾರೀ ಧರ್ಮಭಕ್ತರು, ರಾಮ ಭಕ್ತರು. ಆದರೂ ಅವರೇಕೆ ಪ್ರಾಣ ಪ್ರತಿಷ್ಠಾಪನೆಗೆ ಸಾಕ್ಷಿಯಾಗಲು ಅಯೋಧ್ಯೆಗೆ ಬರಲಿಲ್ಲ ?. ಇಡೀ ದೇಶವೇ ಅಯೋಧ್ಯೆಯ ಕಡೆ ನೋಡುತ್ತಿರುವಾಗ, ಈ ಪರಮ ರಾಮ ಭಕ್ತರು ಯಾಕೆ ಅಲ್ಲಿಗೆ ಬರಲೇ ಇಲ್ಲ ?. ಅವರೆಲ್ಲ ಮರುದಿನ ಕೂಡ ಅಯೋಧ್ಯೆಗೆ ಹೋಗಲಿಲ್ಲ ಏಕೆ ?.

ಮಂದಿರ, ಧರ್ಮ, ರಾಮ ಇಷ್ಟೊಂದು ಮುಖ್ಯವಾಗಿರುವ ಬಿಜೆಪಿಯ ಅತ್ಯಂತ ಹಿರಿಯ ನಾಯಕರೆಲ್ಲ ಅಯೋಧ್ಯೆಗೆ ಯಾಕೆ ತಲುಪಲಿಲ್ಲ ?.

ಇಡೀ ದೇಶದ ಜನರು ಅಯೋಧ್ಯೆಯಲ್ಲಿ ರಾಮನ ದರ್ಶನಕ್ಕಾಗಿ ಮುಗಿಬೀಳುತ್ತಿರುವಾಗ ಬಿಜೆಪಿಯ ದಿಗ್ಗಜ ನಾಯಕರೇ ಯಾಕೆ ಅಲ್ಲಿಗೆ ಬರಲಾಗಲಿಲ್ಲ ?. ರಾಮ ಮಂದಿರಕ್ಕಾಗಿ ಪಕ್ಷದ ಇಷ್ಟೆಲ್ಲಾ ನಾಯಕರು ಹೋರಾಡಿರುವಾಗ ಅವರೇಕೆ ಅಯೋಧ್ಯೆಗೆ ಅವತ್ತು ಬರಲೇ ಇಲ್ಲ ?.

ಆಮಂತ್ರಣ ಸಿಕ್ಕಿದ ಮೇಲೂ ಅವರನ್ನು ಅಯೋಧ್ಯೆಗೆ ಬರದಂತೆ ತಡೆದವರು ಯಾರು ?. ಬಿಜೆಪಿಯೊಳಗೆ ಈ ಬಗ್ಗೆ ಚರ್ಚೆ, ಅಪಸ್ವರ, ಗುಸುಗುಸು ಶುರುವಾಗಿದೆಯೇ ?. ರಾಮ ಮಂದಿರಕ್ಕಾಗಿ ಹೋರಾಡಿದ್ದ ಹಿಂದುತ್ವದ ಐಕನ್ ಬಾಳಾ ಠಾಕ್ರೆಯ ಪುತ್ರನೇ ಅಯೋಧ್ಯೆಗೆ ಬಾರದ ಹಾಗೆ ರಾಜಕೀಯ ಮಾಡಲಾಯಿತು. ಠಾಕ್ರೆಯ ಪಕ್ಷವನ್ನೇ ಇಬ್ಭಾಗ ಮಾಡಲಾಯಿತು. ಅಯೋಧ್ಯೆಗೆ ಸಿನಿಮಾ ನಟರು, ಸೆಲೆಬ್ರಿಟಿಗಳು, ಉದ್ಯಮಿಗಳು, ಗಾಯಕರು, ಸಂತರು ಎಲ್ಲರೂ ಬಂದಿದ್ದರು.

ಆದರೆ ರಾಮ ಜನ್ಮ ಭೂಮಿ ಆಂದೋಲನ ಶುರು ಮಾಡಿದ ಪಕ್ಷ ಬಿಜೆಪಿಯ ಇವತ್ತಿನ ಪ್ರಮುಖ ರಾಷ್ಟ್ರೀಯ ನಾಯಕರೇ ಅಲ್ಲಿ ಯಾಕೆ ಇರಲಿಲ್ಲ.

ಆ ಹತ್ತಿಪ್ಪತ್ತು ಮಂದಿಗೆ ಅಲ್ಲೊಂದು ವ್ಯವಸ್ಥೆ ಕಲ್ಪಿಸಲು ಯಾವ ಸಮಸ್ಯೆಯಿತ್ತು ?. ಅವರು ಅಲ್ಲಿಗೆ ಬಾರದ ಹಾಗೆ ಅವರಿಗೆ ಸೂಚನೆ ಹೋಗಿತ್ತೇ ?.

ಅಥವಾ ಅವರಾಗಿಯೇ ಈ ಕಾರ್ಯಕ್ರಮದಿಂದ ದೂರ ಉಳಿದರೇ ?. ಹೌದು ಎಂದಾದರೆ ಯಾಕೆ ಅಷ್ಟು ದೊಡ್ಡ, ಪ್ರಮುಖ ಕಾರ್ಯಕ್ರಮದಿಂದ ಅವರು ದೂರ ಉಳಿದರು ? .

ಇಲ್ಲಿ ಹೆಸರಿಸಿದವರು ಅಲ್ಲದೆ ಇನ್ನೂ ಹಲವು ಹಿರಿಯ ಬಿಜೆಪಿ ನಾಯಕರು ಅಯೋಧ್ಯೆಗೆ ಬಾರದೆ ತಮ್ಮ ತಮ್ಮ ರಾಜ್ಯ ಅಥವಾ ಊರುಗಳಲ್ಲೇ ಉಳಿದುಕೊಂಡು ಅಲ್ಲಿಂದಲೇ ಅಯೋಧ್ಯೆಯ ಕಾರ್ಯಕ್ರಮದ ನೇರ ಪ್ರಸಾರ ವೀಕ್ಷಿಸಿದರು. ಅದ್ಯಾಕೆ ಹಾಗೆ ?. ಉಳಿದೆಲ್ಲರನ್ನು ಬದಿಗೆ ಸರಿಸಿ ಬಿಡುವ ಈ ಪ್ರಕ್ರಿಯೆ ಇನ್ನು ಬಿಜೆಪಿಯಲ್ಲಿ ಎಲ್ಲೆಡೆಯೂ ಕಾಣಲಿದೆಯೇ ? .ಲೋಕಸಭಾ ಚುನಾವಣಾ ಪ್ರಚಾರದಲ್ಲಿ, ಟಿಕೆಟ್ ಹಂಚಿಕೆಯಲ್ಲೂ ಇದೇ ಆಗಲಿದೆಯೇ ?.

ಹಾಗಲ್ಲ ಎಂದಾದರೆ, ಯಾವ ಪ್ರಮುಖರೂ ಅಯೋಧ್ಯೆಯಲ್ಲಿ ಕಾಣಿಸದೆ, ಮೋದಿಯೊಬ್ಬರೇ ಅಲ್ಲಿ ಮಿಂಚಿದ್ದು ಮತ್ತು ವಿಜೃಂಭಿಸಿದ್ದರ ಹಿಂದಿನ ಅರ್ಥವೇನು?. ಬಿಜೆಪಿ ಕಚೇರಿಯಲ್ಲಿಯೂ ಪೂಜೆ ನಡೆಯಿತಾದರೂ, ಅಲ್ಲಿ ಯಾವ ದೊಡ್ಡ ನಾಯಕರೂ ಇರಲಿಲ್ಲ. ಸಣ್ಣಪುಟ್ಟ ನಾಯಕರೇ ಇದ್ದು ಅದನ್ನು ನೆರವೇರಿಸಿದ್ದರು.

ದೊಡ್ಡ ನಾಯಕರೆಲ್ಲ ಅಯೋಧ್ಯೆಯಲ್ಲಿ ಇರಲಿದ್ದಾರೆ ಎಂದುಕೊಂಡರೆ ಅಲ್ಲಿಯೂ ಅವರಾರೂ ಇರಲಿಲ್ಲ. ಅಲ್ಲಿ ಮೋದಿಯೊಬ್ಬರೇ ರಾರಾಜಿಸ್ತಾ ಇದ್ದರು. ಯಾಕೆ ಹೀಗೆ?. ಮಂದಿರದ ಪ್ರತಿಪಾದಕರುಗಳು, ಹಿಂದುತ್ವದ ಹೆಸರಿನಲ್ಲಿ, ಧರ್ಮದ ಹೆಸರಿನಲ್ಲಿ ರಾಜಕೀಯ ಮಾಡುವವರು ಅದೇಕೆ ಒಂದಿಲ್ಲೊಂದು ನೆಪ ಮಾಡಿಕೊಂಡು ಪ್ರಾಣ ಪ್ರತಿಷ್ಠಾಪನೆ ದಿನವೇ ಅಯೋಧ್ಯೆಯಿಂದ ದೂರವಿದ್ದರು?.

ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ ಅಂತೂ ಬರುವ ಲೋಕಸಭಾ ಚುನಾವಣೆಯಲ್ಲಿ ಮೋದಿಯವರ ನೇತೃತ್ವದಲ್ಲಿ ಪಕ್ಷ ಭಾರೀ ಜಯ ಗಳಿಸಲಿದೆ. ಹಿಂದಿನ ದಾಖಲೆಗಳನ್ನೂ ಮೀರಿ ಯಶಸ್ವಿಯಾಗಲಿದೆ ಎಂದು ಭಾಷಣ ಮಾಡುತ್ತಿದ್ದರು. ಅಯೋಧ್ಯೆಯಲ್ಲಿ ಮೋದಿ ರಾಮಲಲ್ಲಾ ಪ್ರತಿಷ್ಠಾಪನೆಯಲ್ಲಿ ತೊಡಗಿಕೊಂಡು ಧರ್ಮದ ಹೆಸರಿನಲ್ಲಿ ಚುನಾವಣಾ ರಾಜಕಾರಣ ಮಾಡುತ್ತ ಕ್ಯಾಮರಾಗಳಿಗೆ ಪೋಸು ಕೊಡುತ್ತಿದ್ದಾಗ ಅತ್ತ ಅವರದೇ ಗುಣಗಾನದಲ್ಲಿ ನಡ್ಡಾ ತೊಡಗಿದ್ದುದು ಆಕಸ್ಮಿಕವೇನೂ ಅಲ್ಲ ಎಂದೇ ಹೇಳಬೇಕು.

ಯಾಕೆಂದರೆ ಬಿಜೆಪಿಯ ಎಲ್ಲರ ನಡವಳಿಕೆಯೂ ಈಗ ಸ್ಕ್ರಿಪ್ಟೆಡ್ ಅಥವಾ ಪೂರ್ವಯೋಜಿತ ಲೆಕ್ಕಾಚಾರದಂತೆಯೇ ಇರುತ್ತದೆ. ಯಾಕೆಂದರೆ ಅವರಿರುವುದು ಮೋದಿ ನಾಯಕತ್ವದಲ್ಲಿ. ಅಂಥ ಮೋದಿ ನಾಯಕತ್ವದಲ್ಲಿ ಬಿಜೆಪಿ ಹೇಗೆಲ್ಲ ತನ್ನ ಹಾದಿಯನ್ನು ನಿರಾತಂಕಗೊಳಿಸಿಕೊಂಡಿದೆ ಎಂಬುದನ್ನೂ ನೋಡಬೇಕು. ಯಾರೂ ತನ್ನ ಹಾದಿಗೆ ಅಡ್ಡಿಯಾಗದ ಹಾಗೆ ಅದು ವ್ಯವಸ್ಥೆ ಮಾಡಿಕೊಂಡಿದೆ. ರಥಯಾತ್ರೆ ಮೂಲಕ ರಾಮಮಂದಿರದ ಪ್ರತಿಪಾದನೆ ಮತ್ತು ಕೋಮು ಧ್ರವೀಕರಣದ ರಾಜಕಾರಣ ಶುರು ಮಾಡಿದ್ದ ಅಡ್ವಾಣಿಯವರನ್ನು ಮೋದಿಯವರ ಬಿಜೆಪಿ ಹೇಗೆ ಪಕ್ಷದಲ್ಲೇ ಮೂಲೆಗುಂಪು ಮಾಡಿತು ಎಂಬುದನ್ನು ನೋಡಿದ್ದೇವೆ.

ಹಾಗೆಯೇ ಬಾಬರಿ ಮಸೀದಿ ಧ್ವಂಸದಲ್ಲಿ ಅತ್ಯಂತ ಸಕ್ರಿಯವಾಗಿ ಭಾಗಿಯಾಗಿದ್ದ ಬಾಳ ಠಾಕ್ರೆಯವರ ಶಿವಸೇನೆಯನ್ನು ಕೂಡ ಒಡೆಯುವ ಕೆಲಸ ಅತ್ಯಂತ ವ್ಯವಸ್ಥಿತವಾಗಿಯೇ ನಡೆಯಿತು. ಠಾಕ್ರೆ ಬಣ ಹೋಳಾಗಿ, ಈಗ ಏಕನಾಥ್ ಶಿಂಧೆಯ ಬಣವೇ ಅಧಿಕೃತ ಶಿವಸೇನೆ ಎಂದಾಗುವುದರೊಂದಿಗೆ, ಠಾಕ್ರೆ ಪುತ್ರ ಉದ್ಧವ್ ಠಾಕ್ರೆಯವರು ಅಯೋಧ್ಯೆ ಅಬ್ಬರದಲ್ಲಿ ಯಾವ ಕ್ರೆಡಿಟ್ಟನ್ನೂ ತೆಗೆದುಕೊಳ್ಳಲು ಅವಕಾಶವೇ ಇಲ್ಲದಂತೆ ಮಾಡಲಾಯಿತು. ಆದರೂ ಉದ್ಧವ್ ಠಾಕ್ರೆ ಬಣ ಬಾಬರಿ ಮಸೀದಿ ಧ್ವಂಸದಲ್ಲಿ ತನ್ನದೇ ಪಾಲು ಹೆಚ್ಚಿನದು ಎಂದು ಕೊಚ್ಚಿಕೊಳ್ಳುತ್ತಾ ಕೂತಿದೆ. ಅದರ ಆಟವನ್ನು ಯಾವತ್ತೋ ಮುಗಿಸಿ, ಅದನ್ನು ಹೊಸಕಿ ಹಾಕಿದಂತಿರುವ ಸಂಭ್ರಮದಲ್ಲಿ ಮೋದಿ ಟೀಂ ಇದೆ.

ಏಕನಾಥ್ ಶಿಂಧೆಯನ್ನು ಮುಂದಿಟ್ಟುಕೊಂಡು ಬಾಳಾ ಠಾಕ್ರೆ ಕುಟುಂಬದ ವಿರುದ್ಧ ಬಿಜೆಪಿ ಆಟ ಆಡುತ್ತಿದೆ. ಹಾಗಾಗಿ ಶಿವಸೇನೆಯ ಹುಲಿಗಳು ಹಳೇ ಕಥೆಯನ್ನು ನೆನಪು ಮಾಡಿಕೊಂಡು ಕೈಕೈ ಹಿಸುಕಿಕೊಳ್ಳುವಂತಾಗಿದೆ. ರಾಮನಿಗಾಗಿ ಇಲ್ಲದವರು ಯಾವ ಕೆಲಸಕ್ಕೂ ಸಲ್ಲರು ಎಂದು ಏಕನಾಥ್ ಶಿಂಧೆ ಶಿವಸೇನೆ ಉದ್ಧವ್ ಠಾಕ್ರೆ ಬಣದ ವಿರುದ್ಧ ಟೀಕಿಸಿದ್ದಾರೆ. "ಬಾಳಾ ಠಾಕ್ರೆ ಸೇರಿದಂತೆ ಕೊಟ್ಯಂತರ ಭಕ್ತರ ಕನಸನ್ನು ನನಸು ಮಾಡಿರುವವರು ಮೋದಿ" ಎಂದು ಶಿಂಧೆ ಎಲ್ಲ ಕ್ರೆಡಿಟ್ಟನ್ನೂ ಮೋದಿಯವರಿಗೇ ಕೊಟ್ಟಿದ್ದಾರೆ.

ಹೀಗೆ ಶಿಂಧೆ ಮೂಲಕ ಬಿಜೆಪಿಯ ರಾಜಕೀಯ ಆಟ ಅಲ್ಲಿ ಸಾಗಿದೆ. ಬಿಜೆಪಿಯಲ್ಲಿ ಎಲ್ಲವೂ ಮೋದಿಯನ್ನೇ ಕೇಂದ್ರೀಕರಿಸಿ ನಡೆಯುತ್ತವೆ. ಚುನಾವಣೆಯಲ್ಲಿ ಮೋದಿ ಮುಖವನ್ನೇ ಮುಂದೆ ಮಾಡಲಾಗುತ್ತದೆ. ಮೋದಿ ನೇತೃತ್ವದಲ್ಲಿ ಎಂದೇ ಎಲ್ಲರ ಭಾಷಣ ಶುರುವಾಗುತ್ತದೆ. ಮೋದಿಗೆ ಪಕ್ಷದೊಳಗೆ ಸ್ಪರ್ಧಿಗಳು ಎಂಬಂತೆ ಕಂಡಿದ್ದವರೆಲ್ಲ ಲೆಕ್ಕದಿಂದಲೇ ಹೊರಕ್ಕೆ ತಳ್ಳಲ್ಪಡುತ್ತಿದ್ದಾರೆ.

ಯಾವುದೇ ರಾಜ್ಯದಲ್ಲಿ ಚುನಾವಣೆ ನಡೆದರೂ ಅಲ್ಲಿನ ಸಿಎಂ ಯಾರಾಗಬೇಕೆಂದು ಮೋದಿಯವರೇ ನಿರ್ಧರಿಸುತ್ತಾರೆ. ಮೋದಿಯವರ ಸಚಿವ ಸಂಪುಟದ ಸಚಿವರು ದೇಶದ ವಿವಿಧೆಡೆಗಳ ಜನರಿಗೆ ಅಷ್ಟೊಂದು ಪರಿಚಿತರೇ ಅಲ್ಲ. ಯಾಕೆಂದರೆ ಪ್ರತಿ ಇಲಾಖೆಯ ಮಹತ್ವದ ಘೋಷಣೆ, ಹೊಸ ಯೋಜನೆಗೆ ಚಾಲನೆ ಎಲ್ಲವನ್ನೂ ಮೋದಿಯವರೇ ಮಾಡ್ತಾರೆ. ಮೋದಿಗೆ ಪಕ್ಷದೊಳಗೆ ಪರ್ಯಾಯ ಎಂಬುದನ್ನು ಅದು ಕನಸು ಕಾಣುವುದಕ್ಕೂ ಆಗಲಾರದ ಹಾಗಾಗಿದೆ. ಸಂಘಪರಿವಾರವನ್ನೂ ಮೀರಿ ಮೋದಿ ಬೆಳೆದಾಗಿದೆ.

ಹೀಗಾಗಿ, ಮೋದಿ ಮಾತ್ರವೇ ವಿಜೃಂಭಿಸಬೇಕೆಂದು ನಿರ್ಧರಿತವಾದ ಹಾಗಿದ್ದ ಅಯೋಧ್ಯೆಯ ಕಾರ್ಯಕ್ರಮದಿಂದ ಬಿಜೆಪಿಯ ಎಲ್ಲ ದೊಡ್ಡ ನಾಯಕರೂ ದೂರವೇ ಇದ್ದರು. ಉತ್ತರ ಪ್ರದೇಶದ ಸಿಎಂ ಆದಿತ್ಯನಾಥ್ ಹೊರತುಪಡಿಸಿ ಬಿಜೆಪಿಯ ಇತರ ಮುಖ್ಯಮಂತ್ರಿಗಳೂ ಅಯೋಧ್ಯೆಗೆ ಅಂದು ಬರಲೇ ಇಲ್ವಾ ? ಅಥವಾ ಬಂದ್ರೂ ಅವರೆಲ್ಲೂ ಕಾಣಿಸಲೇ ಇಲ್ವಾ ?.

ನಾಳೆ ಚುನಾವಣೆ ಪ್ರಚಾರದ ಹೊತ್ತಿನಲ್ಲೂ ಬಹುಶಃ ಮೋದಿಯೊಬ್ಬರೇ ರಾರಾಜಿಸಲಿದ್ದಾರೆ. ಮೋದಿಯೊಬ್ಬರದೇ ಮಾತು ಕೇಳಿಸಲಿದೆ.ಇದೆಲ್ಲದರ ನಡುವೆ, ಅಯೋಧ್ಯೆಗೆ ರಾಮಲಲ್ಲಾ ಪ್ರತಿಷ್ಠಾಪನೆ ವೇಳೆ ಹೋಗದೇ ಇದ್ದ ಬಿಜೆಪಿ ನಾಯಕರೆಲ್ಲ ಯಾವಾಗ ಅಲ್ಲಿಗೇ ಹೋಗಲಿದ್ದಾರೆ ಎಂಬ ಪ್ರಶ್ನೆಯೂ ಏಳುತ್ತದೆ. ಹಿಂದುತ್ವ ಪ್ರತಿಪಾದಕರಾದ ಅವರು ಹೋಗಲೇಬೇಕಲ್ಲವೆ?. ಕಾರ್ಯಕ್ರಮದಿಂದ ದೂರ ಇದ್ದ ವಿಪಕ್ಷದವರನ್ನೆಲ್ಲ ಹಿಂದೂ ವಿರೋಧಿ ಎಂದು ಜರೆದಿದ್ದವರೇ ಹೀಗೆ ತಮ್ಮ ನಾಯಕ ಮೋದಿಗಾಗಿ, ಮೋದಿಮಯ ರಾಜಕೀಯವನ್ನು ಬಿಂಬಿಸುವುದಕ್ಕಾಗಿ ಅಯೋಧ್ಯೆಯಿಂದ ದೂರ ಉಳಿಯುವಂತಾಗಿಬಿಟ್ಟಿತೆ?.ಇದು ಎಂಥ ವಿಪರ್ಯಾಸ ಅಲ್ವಾ ?.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!