ಗ್ಯಾಂಗ್ ರೇಪ್ ಆರೋಪಿ ಬಿಜೆಪಿ ಪದಾಧಿಕಾರಿಗಳನ್ನು ಎರಡು ತಿಂಗಳು ಬಂಧಿಸಿಲ್ಲ ಯಾಕೆ ?
ಅವರನ್ನು ದೇವರು ಮಹಿಳಾ ಮೀಸಲಾತಿ ಮಸೂದೆ ಜಾರಿಗೊಳಿಸಲಿ ಎಂದೇ ಆರಿಸಿರುವುದಂತೆ. ಅವರ ಸರ್ಕಾರದಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಹೆಸರು ನಾರಿ ಶಕ್ತಿ ವಂದನಾ ಅಧಿನಿಯಮ. ಅವರ ಸರಕಾರದಲ್ಲಿ ಬೇಟಿ ಬಚಾವೊ ಬೇಟಿ ಪಡಾವೋ ಒಂದು ಭಾರೀ ಫೇಮಸ್ ಸ್ಲೋಗನ್. ತನ್ನ ಪಕ್ಕದಲ್ಲೇ ಅತ್ಯಾಚಾರಿಗಳನ್ನು, ಮಹಿಳಾ ಕ್ರೀಡಾಪಟುಗಳಿಗೆ ಲೈಂಗಿಕ ಕಿರುಕುಳ ಕೊಟ್ಟವರನ್ನು ಇಟ್ಟುಕೊಂಡು ಅವರನ್ನು ರಕ್ಷಿಸುವುದಕ್ಕೆ ಮೌನ ವಹಿಸುವವರೂ ಅವರೇ ಆಗಿದ್ದಾರೆ ಎಂಬುದು ಎಂಥ ವಿಪರ್ಯಾಸ ಅಲ್ಲವೆ?. ಈಗ ಪ್ರಧಾನಿ ಮೋದಿಯ ಕ್ಷೇತ್ರ ವಾರಾಣಸಿಯಲ್ಲೇ ಬೇಟಿ ಬಚಾವೋ ಘೋಷಣೆಯ ಬಂಡವಾಳ ಬಯಲಾಗಿದೆ.
ಪ್ರಧಾನಿಯ ನಾರಿ ಶಕ್ತಿ ಕುರಿತ ಟ್ವೀಟ್ ಅನ್ನು ರಿಟ್ವೀಟ್ ಮಾಡುವ, ಅವರ ಪಕ್ಕದಲ್ಲೇ ನಿಂತುಕೊಳ್ಳುವ ಅವರದೇ ಬಿಜೆಪಿಯ ಮಂದಿ ಸಾಮೂಹಿಕ ಅತ್ಯಾಚಾರ ಕೇಸಲ್ಲಿ ಬಂಧನಕ್ಕೆ ಒಳಗಾಗಿದ್ದಾರೆ. ಅದೂ ಘಟನೆ ನಡೆದು ಪ್ರತಿಭಟನೆ ಶುರುವಾಗಿ ಎರಡು ತಿಂಗಳ ಬಳಿಕ.
ವಿಪರ್ಯಾಸವೆಂದರೆ, ಮೂವರನ್ನೂ ಬಂಧಿಸಿದ ಮೇಲೆ ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳುವ ತೊಂದರೆಯನ್ನೂ ಆದಿತ್ಯನಾಥ್ ಅವರ ಪೊಲೀಸರು ತೆಗೆದುಕೊಂಡಿಲ್ಲ. ಗ್ಯಾಂಗ್ ರೇಪ್ ಮಾಡಿದವರಲ್ಲಿ ಕೇಳೋದೇನಿದೆ ಎಂಬ ಉತ್ತರ ಪ್ರದೇಶ ಪೊಲೀಸರ ಧೋರಣೆಯೂ ಕೇಂದ್ರ ಸರಕಾರ ಹಾಗು ಉತ್ತರ ಪ್ರದೇಶ ಸರಕಾರಕ್ಕೆ ತಕ್ಕುದೇ ಆಗಿದೆ.
ನಡೆದಿರೋದು ಅತ್ಯಂತ ಆಘಾತಕಾರಿ ಘಟನೆ. ಅದೂ ಎಲ್ಲಿ? ಈ ದೇಶದ ಪ್ರಧಾನಿ ಮೋದಿ ಅವರು ಪ್ರತಿನಿಧಿಸೋ ವಾರಾಣಸಿ ಲೋಕಸಭಾ ಕ್ಷೇತ್ರದಲ್ಲಿ. ಬನಾರಸ್ ಹಿಂದೂ ವಿವಿ ಕ್ಯಾಂಪಸ್ನಲ್ಲಿಯೇ ಐಐಟಿ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಅಂಥದೊಂದು ಕರಾಳ ಘಟನೆ ನಡೆದು ಎರಡು ತಿಂಗಳುಗಳೇ ಆಗಿವೆ. ಪ್ರತಿಭಟನೆಗಳು ಶುರುವಾದ ಮೇಲೆ ಕಡೆಗೂ ಈಗ ಅತ್ಯಾಚಾರ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತರು ಯಾರು ಗೊತ್ತೆ? ಅದೇ ಮೋದಿ ಕ್ಷೇತ್ರ ವಾರಾಣಸಿಯ ಬಿಜೆಪಿಯ ಐಟಿ ಸೆಲ್ನ ಪದಾಧಿಕಾರಿಗಳು. ಒಬ್ಬ ವಾರಾಣಸಿ ಬಿಜೆಪಿ ಐಟಿ ಸೆಲ್ನ ಸಂಯೋಜಕ ಕುನಾಲ್ ಪಾಂಡೆ. ಎರಡನೆಯವರನು ಐಟಿ ಸೆಲ್ ಸಹ ಸಂಯೋಜಕ ಸಕ್ಷಮ್ ಪಟೇಲ್ ಹಾಗೂ ಮೂರನೆಯವರನು ಐಟಿ ಸೆಲ್ ಕಾರ್ಯಸಮಿತಿ ಸದಸ್ಯ ಆನಂದ್ ಅಲಿಯಾಸ್ ಅಭಿಷೇಕ್ ಚೌಹಾಣ್.
ಸಂತ್ರಸ್ತ ವಿದ್ಯಾರ್ಥಿನಿ ನವೆಂಬರ್1 ರ ರಾತ್ರಿ ತನ್ನ ಸ್ನೇಹಿತನೊಂದಿಗೆ ಹಾಸ್ಟೆಲ್‌ನಿಂದ ಹೊರಗೆ ಹೋಗಿದ್ದಳು. ಆಗ ಬೈಕ್ ನಲ್ಲಿ ಬಂದ ಈ ಮೂವರು, ಆಕೆಯನ್ನು ಸ್ನೇಹಿತನಿಂದ ಬೇರ್ಪಡಿಸಿ ಬಲವಂತವಾಗಿ ಕ್ಯಾಂಪಸ್ ಮೂಲೆಗೆ ಕರೆದೊಯ್ದು ಆಕೆಯನ್ನು ವಿವಸ್ತ್ರಗೊಳಿಸಿ, ಅತ್ಯಾಚಾರವೆಸಗಿದ್ಧಾರೆ. ಆಕೆಯ ವೀಡಿಯೊ ಮಾಡಿ ಫೋಟೋ ತೆಗೆದಿದ್ದಾರೆ.
ಸುಮಾರು 15 ನಿಮಿಷಗಳ ನಂತರ ಆಕೆಯ ಫೋನ್ ನಂಬರ್ ತೆಗೆದುಕೊಂಡು ಹೋಗಲು ಬಿಟ್ಟರು ಎಂಬುದು ಸಂತ್ರಸ್ತೆಯ ದೂರು. ಐಪಿಸಿ ಸೆಕ್ಷನ್ 354 (ಮಹಿಳೆ ಮೇಲೆ ದೌರ್ಜನ್ಯ), ಸಾಮೂಹಿಕ ಅತ್ಯಾಚಾರ ಹಾಗೂ ಮಾಹಿತಿ ತಂತ್ರಜ್ಞಾನ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಲಂಕಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳುತ್ತಿದ್ಧಾರೆ.
ಘಟನೆ ಭಾರೀ ಕೋಲಾಹಲಕ್ಕೆ ಕಾರಣವಾಯಿತು. ವಿವಿಯ ಐಐಟಿ ವಿದ್ಯಾರ್ಥಿಗಳು ಆರೋಪಿಗಳನ್ನು ತಕ್ಷಣ ಬಂಧಿಸಬೇಕು ಮತ್ತು ಕ್ಯಾಂಪಸ್‌ನಲ್ಲಿ ಭದ್ರತೆ ಬಲಪಡಿಸಲು ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಇದೆಲ್ಲ ನಡೆದ ಮೇಲೆ ಈಗ ಅನಿವಾರ್ಯವಾಗಿ ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಆದ್ರೆ, ಎಂಥ ವಿಪರ್ಯಾಸ ನೋಡಿ, ಅತ್ಯಾಚಾರ ಆರೋಪಿಗಳನ್ನು ಉತ್ತರ ಪ್ರದೇಶ ಪೊಲೀಸರು ಕಸ್ಟಡಿಗೇ ತೆಗೆದುಕೊಳ್ಳುವುದಿಲ್ಲ. ಆರೋಪಿಗಳು ಪ್ರಧಾನಿ ಮೋದಿ, ಕೇಂದ್ರ ಸಚಿವರಾದ ಸ್ಮೃತಿ ಇರಾನಿ, ಅನುರಾಗ್ ಠಾಕೂರ್, ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ, ಉತ್ತರ ಪ್ರದೇಶ ಸಿಎಂ ಆದಿತ್ಯನಾಥ್ ಸೇರಿದಂತೆ ಬಿಜೆಪಿಯ ದೊಡ್ಡ ದೊಡ್ಡ ಜನರ ಜೊತೆ ಕಾಣಿಸಿಕೊಳ್ಳುವವರು.
ಆರ್ಎಸ್ಎಸ್ ಶಾಖೆಯಲ್ಲೂ ಸಕ್ರಿಯರು. ಅತ್ಯಾಚಾರ ಆರೋಪಿಗಳು ಹೀಗೆ ಬಿಜೆಪಿಯ ದೊಡ್ಡ ಜನರ ಜೊತೆ ಕಾಣಿಸಿಕೊಂಡವರು ಎಂಬ ಕಾರಣಕ್ಕೆ ಉತ್ತರ ಪ್ರದೇಶ ಪೊಲೀಸರು ಮುದುರಿಕೊಂಡು ಕುಳಿತರಾ?. ಈ ಪ್ರಕರಣದಲ್ಲಿ ಪೊಲೀಸರು ಮೂವರು ಆರೋಪಿಗಳನ್ನು ನ್ಯಾಯಾಲಯದಿಂದ ವಿಚಾರಣೆಗೆ ಕಸ್ಟಡಿಗೆ ಪಡೆಯಲೇ ಇಲ್ಲ. ಇದಕ್ಕಾಗಿ ಜನರು ಯುಪಿ ಪೊಲೀಸರನ್ನು ಟೀಕಿಸುತ್ತಿದ್ದಾರೆ.
ಇನ್ನೂ ಒಂದು ಮಹತ್ವದ ವಿಚಾರವನ್ನು ಗಮನಿಸಬೇಕು. ಯುವತಿಯನ್ನು ವಿವಸ್ತ್ರಗೊಳಿಸಿ ಬಲಾತ್ಕಾರವೆಸಗಿದ್ದೂ ಅಲ್ಲದೆ, ಆಕೆಯ ವೀಡಿಯೊ, ಫೊಟೊ ತೆಗೆದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಬಹಿರಂಗ ಪಡಿಸುವ ಧಮ್ಕಿಯನ್ನೂ ಹಾಕಿದ್ದ ಈ ಆರೋಪಿಗಳು ಹೇಗೆ ಆರಾಮಾಗಿಯೇ ಓಡಾಡಿಕೊಂಡಿದ್ದರಲ್ಲ?.
ಸಂಕೇತ್ ಉಪಾಧ್ಯಾಯ ಹಾಗು ಸೌರಭ್ ಶುಕ್ಲಾ ಅವರ ದಿ ರೆಡ್ ಮೈಕ್ ಯೂಟ್ಯೂಬ್ ಚಾನೆಲ್ ಹೇಳುವ ಪ್ರಕಾರ, ಇವರನ್ನು ಪೋಲಿಸರು ಪ್ರಶ್ನಿಸಲು ಕರೆಸಿಕೊಂಡು ಹಾಗೇ ವಾಪಸ್ ಕಳಿಸಿದ್ದರು. ಮತ್ತು ಆರೋಪಿಗಳು ವಾರಾಣಸಿಯನ್ನೇ ಬಿಟ್ಟು ಮಧ್ಯಪ್ರದೇಶಕ್ಕೆ ಹೋಗಿದ್ದರು. ಇದರ ನಡುವೆಯೂ ಅವರ ಜೊತೆ ಒಬ್ಬ ಪೊಲೀಸ್ ಅಧಿಕಾರಿ ಸಂಪರ್ಕದಲ್ಲಿದ್ದು, ಅತ್ತ ಇತ್ತ ಓಡಾಡಿಕೊಂಡಿರಲು ನಿರ್ದೇಶನ ನೀಡುತ್ತಿದ್ದುದರ ಬಗ್ಗೆಯೂ ಅದು ಹೇಳಿದೆ.
ಆ ಪೊಲೀಸ್ ಅಧಿಕಾರಿಯ ನಿರ್ದೇಶನದಂತೆ ಆರೋಪಿಗಳು ಅತ್ತ ಇತ್ತ ಓಡಾಡಿಕೊಂಡಿದ್ದರು ಎಂದರೆ ಇದೆಂಥ ವ್ಯವಸ್ಥೆ?.
ಅತ್ಯಾಚಾರ ಆರೋಪಿಗಳಿಗೇ ನೆರವಾಗುತ್ತಿದ್ದ ಆ ಪೊಲೀಸ್ ಅಧಿಕಾರಿ ಯಾರು?. ಪ್ರಶ್ನಿಸಲು ಕರೆಸಿಕೊಂಡು ವಾಪಸ್ ಕಳಿಸಲಾಗಿತ್ತು, ಅವರ ಸಂಪರ್ಕದಲ್ಲಿಯೇ ಇದ್ದು, ಅವರ ರಕ್ಷಣೆಗೆ ನಿಲ್ಲಲಾಗಿತ್ತು.
ಹಾಗಾದರೆ ಇದೆಂಥ ವ್ಯವಸ್ಥೆ?. ಬಿಜೆಪಿಯ ದೊಡ್ಡ ಜನರ ಜೊತೆ ಇದ್ದವರೆಂಬ ಕಾರಣದಿಂದಾಗಿಯೇ ಅವರಿಗೆ ಇಂಥದೊಂದು ರಕ್ಷಣೆ ಸಿಕ್ಕಿತಲ್ಲವೆ?.
ಅತ್ಯಾಚಾರ ನಡೆದು ಎರಡು ತಿಂಗಳು ಬೇಕಾಯಿತು ಯುಪಿ ಪೊಲೀಸರು ಆರೋಪಿಗಳನ್ನು ಬಂಧಿಸುವುದಕ್ಕೆ. ಒಬ್ಬ ಯುವತಿ ಜೊತೆ ಇಷ್ಟೆಲ್ಲ ಘೋರವಾಗಿ ನಡೆದುಕೊಂಡವರು ಬಿಜೆಪಿಯವರಾದ ಕೂಡಲೇ ಇಷ್ಟೆಲ್ಲ ಮರ್ಯಾದೆಯೆ?
ಒಂದೆಡೆ, ನಾರಿ ಸಮ್ಮಾನ್ ಪೋಸ್ಟರ್ ಶೇರ್ ಮಾಡುವವರೂ ಅವರೇ. ಬೀದಿ ಬೀದಿಗಳಲ್ಲಿ ಅನೈತಿಕ ಪೊಲೀಸ್ ಗಿರಿ ಮಾಡುವವರೂ ಅವರೇ.
ಮತ್ತೊಂದೆಡೆ ವಿವಿ ಕ್ಯಾಂಪಸ್ನಲ್ಲಿ ವಿದ್ಯಾರ್ಥಿನಿಯನ್ನು ಅಡ್ಡಗಟ್ಟಿ ಅತ್ಯಾಚಾರ ಎಸಗುವವರೂ ಅವರೇ?. ಹೇಗಿದೆ ಮೋದಿಯವರ ದರ್ಬಾರಿನಲ್ಲಿ ನಾರಿ ಸಮ್ಮಾನ್?. ಮಹಿಳಾ ಸುರಕ್ಷತೆ ಬಗ್ಗೆ ಭಾರಿ ದೊಡ್ಡ ದೊಡ್ಡ ಮಾತಾಡುವ ಬಿಜೆಪಿಯ ಮಂದಿ ಮಾಡೋದೇನು ಎಂಬುದಕ್ಕೆ ಇದು ಕರಾಳ ನಿದರ್ಶನವಲ್ಲವೆ?
ಬಂಧಿಸುವುದಕ್ಕೆ ಇಷ್ಟು ಸಮಯ ತೆಗೆದುಕೊಂಡ ನಂತರವೂ ಆರೋಪಿಗಳನ್ನು ಕಸ್ಟಡಿಗೆ ತೆಗೆದುಕೊಳ್ಳದ ಪೊಲೀಸರು, ಈ ಘಟನೆ ಬಗ್ಗೆ ಮಾಧ್ಯಮಗಳ ಮುಂದೆ ಮಾತಾಡಿಯೇ ಇಲ್ಲ. ಇದೇ ಆರೋಪಿಗಳ ಜಾಗದಲ್ಲಿ ಕಾಂಗ್ರೆಸ್, ಎಸ್ಪಿ ಮೊದಲಾದ ಪಕ್ಷಗಳ ಪದಾಧಿಕಾರಿಗಳೇನಾದರೂ ಇದ್ದಿದ್ದರೆ. ಆ ಪಕ್ಷಗಳ ಕಾರ್ಯಕರ್ತರೇನಾದರೂ ಇದ್ದಿದ್ದರೆ ಇಷ್ಟು ಹೊತ್ತಿಗೆ ಏನಾಗಿರುತ್ತಿತ್ತು?.
ಆಗ ಪೊಲೀಸರು ಎದೆಯುಬ್ಬಿಸಿಕೊಂಡು ಬಂದು ಮೀಡಿಯಾ ಎದುರು ಮಾತನಾಡುತ್ತಿದ್ದರು. ಆದರೆ ಈಗೇಕೇ ಬಾಯಿ ಬಿಗಿದುಕೊಂಡು ಕೂತಿದ್ಧಾರೆ?. ಮಡಿಲ ಮೀಡಿಯಾಗಳದ್ದಂತೂ ಇನ್ನೂ ನಾಚಿಕೆಗೇಡಿನ ಕಥೆ. ಯಾವ ಚಾನೆಲ್ಲುಗಳೂ ಈ ಆರೋಪಿಗಳು ಬಿಜೆಪಿಯವರು ಎಂದು ಹೇಳುತ್ತಿಲ್ಲ. ಬೇರೆ ಪಕ್ಷದವರಾಗಿದ್ದರೆ ಇಷ್ಟು ಹೊತ್ತಿಗೆ ಅದೇ ಆಂಕರ್ಗಳು ಅರಚಾಡಿಕೊಂಡಿ ಅದನ್ನು ಜಗಜ್ಜಾಹೀರು ಮಾಡಿರುತ್ತಿದ್ದರು, ಅಲ್ಲವೆ?
ವಿಪಕ್ಷಗಳು ಇದನ್ನೇ ಕೇಳುತ್ತಿವೆ. ಮೋದಿಯ ಸಂಸದೀಯ ಕ್ಷೇತ್ರದ ಬಿಜೆಪಿ ಕಾರ್ಯಕರ್ತರೇ ಹೀಗೆ ಎಂದ ಮೇಲೆ, ಆ ಕ್ಷೇತ್ರವನ್ನು ಪ್ರಧಾನಿಸುವ ಮೋದಿ ಏಕೆ ಮಾತನಾಡುತ್ತಿಲ್ಲ ಎಂಬುದು ಪ್ರತಿಪಕ್ಷಗಳ ಪ್ರಶ್ನೆಯಾಗಿದೆ. ಸಚಿವೆ ಸ್ಮೃತಿ ಇರಾನಿ ಏಕೆ ಮಾತನಾಡುತ್ತಿಲ್ಲ?. ಅವರ ಜೊತೆ ಇದೇ ಆರೋಪಿಗಳು ಕಾಣಿಸಿಕೊಂಡಿರುವ ಫೊಟೋಗಳನ್ನು ತೋರಿಸಿ ಕಾಂಗ್ರೆಸ್ ನಾಯಕಿ ಸುಪ್ರಿಯಾ ಶ್ರಿನೇತ್ ಕೇಳಿದ್ದಾರೆ.
ರಾಹುಲ್ ಗಾಂಧಿ ವಿರುದ್ಧ ಲೋಕಸಭೆಯಲ್ಲಿ ಮಹಿಳಾ ಸಂಸದರತ್ತ ಫ್ಲೈಯಿಂಗ್ ಕಿಸ್ ಆರೋಪ ಹೊರಿಸಿ ಸಿಕ್ಕಾಪಟ್ಟೆ ರಾದ್ಧಾಂತ ಮಾಡಿದ್ದ ಸ್ಮೃತಿ ಇರಾನಿಯವರಿಗೆ ಈಗ ತಮ್ಮ ಜತೆಗೇ ಇರುವವರು ಮಾಡಿದ್ದು ಎಂಥ ಸಂಸ್ಕೃತಿಯಾಗಿ ಕಾಣಿಸುತ್ತಿದೆ?
ಈಗೇಕೆ ಆವರ ಬಾಯಿಂದ ಮಾತು ಬರುತ್ತಿಲ್ಲ?. ಉತ್ತರ ಪ್ರದೇಶದ ಕಾನೂನು ವ್ಯವಸ್ಥೆಯನ್ನು ಕೊಂಡಾಡುವ ಜೆಪಿ ನಡ್ಡಾ ಈಗ ಏಕೆ ಸುಮ್ಮನಿದ್ದಾರೆ?. ಒಂದು ಕಾಲದಲ್ಲಿ ಉತ್ತರ ಪ್ರದೇಶ ಗೂಂಡಾಗಳ ಪ್ರದೇಶ ಎಂದೇ ಕುಖ್ಯಾತವಾಗಿತ್ತು. ಮಹಿಳೆಯರು ಮನೆಯಿಂದ ಹೊರಬರುವುದೇ ದುಸ್ತರ ಅನ್ನೋ ಸ್ಥಿತಿಯಿತ್ತು. ಈಗ ಮೋದಿ ಮತ್ತು ಆದಿತ್ಯನಾಥ್ ಆಶೀರ್ವಾದದಿಂದ ಯುಪಿ ಬದಲಾಗಿದೆ ಎನ್ನುತ್ತಾರೆ ನಡ್ಡಾ. ಎಂಥ ಜೋಕ್ ಅಲ್ಲವೆ?.
ಹೀಗೆ ಜೋಕ್ ಮಾಡುವ ನಡ್ಡಾಗೆ ಅವರ ಜೊತೆಜೊತೆಗೇ ಕಾಣಿಸಿಕೊಂಡವರು ಅತ್ಯಾಚಾರ ಆರೋಪಿಗಳು ಮತ್ತು ಆ ಆರೋಪಿಗಳು ಅವರೇ ಹಾಡಿ ಹೊಗಳುವ ಉತ್ತರ ಪ್ರದೇಶ ಪೊಲೀಸರ ಕೈಯಲ್ಲಿ ಸುರಕ್ಷಿತವಾಗಿದ್ದಾರೆ ಎಂದರೆ ಅದು ನಾಚಿಕೆಗೇಡು ಅನ್ನಿಸುತ್ತಿಲ್ಲವೆ?. ಹೇಗಿದೆ ನೋಡಿ, ವಾರಾಣಸಿ ಬಿಜೆಪಿ ಐಟಿ ಸೆಲ್ನವರು ರೇಪಿಸ್ಟ್ಗಳು. ಅವರಿಗೆ ಪೊಲೀಸರಿಂದ ಯಾವುದೇ ತೊಂದರೆಯಿಲ್ಲ.
ರಾಮ್ ರಹೀಮ್ ಅನ್ನೋ ಅತ್ಯಾಚಾರಿ ತನಗೆ ಬೇಕೆಂದಾಗಲೆಲ್ಲ ಪರೋಲ್ ಮೇಲೆ ಬರುತ್ತಲೇ ಇರುತ್ತಾನೆ. ಯಾಕೆಂದರೆ ಬಿಜೆಪಿ ಕಡೆಯವರ ಮನುಷ್ಯ ಆತ. ಮಹಿಳಾ ಕುಸ್ತಿ ಪಟುಗಳನ್ನು ಶೋಷಿಸಿದ, ಅವರು ದೆಹಲಿ ಬೀದಿಯಲ್ಲಿ ನಿಂತು ಕಣ್ಣೀರು ಹಾಕಲು ಕಾರಣನಾದ, ಕಡೆಗೆ ಗೆದ್ದು ತಂದ ಪ್ರಶಸ್ತಿಯನ್ನೂ ವಾಪಸ್ ಮಾಡುವುದಕ್ಕೆ, ನೆಚ್ಚಿನ ಕ್ರೀಡೆಗೇ ವಿದಾಯ ಹೇಳುವುದಕ್ಕೆ ಕಾರಣನಾದ ಬಿಜೆಪಿ ಸಂಸದ ಕೂಡ ಇದೇ ಉತ್ತರ ಪ್ರದೇಶದವನು.
ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ಎಸಗಿದ ಕಳಂಕ ಹೊತ್ತಿರೋ ಬಿಜೆಪಿ ಸಂಸದ ಬ್ರಿಜ್ ಭೂಷಣ್ ವಿಚಾರವಾಗಿ ಪ್ರಧಾನಿಯೂ ಮಾತನಾಡುವುದಿಲ್ಲ, ಸ್ಮೃತಿ ಇರಾನಿಯೂ ಮಾತನಾಡುವುದಿಲ್ಲ. ಸೆಂಗೋಲ್ ಹಿಡಕೊಂಡು ನೂತನ ಸಂಸತ್ ಭವನದಲ್ಲಿ ಕಾಣಿಸಿಕೊಳ್ಳುವ ಪ್ರಧಾನಿ, ಮಹಿಳಾ ಮೀಸಲಾತಿ ಮಸೂದೆ ಜಾರಿಗೊಳಿಸಲೆಂದೇ ದೇವರು ತನ್ನನ್ನು ಆರಿಸಿರುವುದಾಗಿ ಹೇಳುವ ಪ್ರಧಾನಿ, ದೇಶದ ನಾರಿಯರನ್ನು ರಕ್ಷಿಸುವ ಭಾರೀ ದೊಡ್ಡ ಮಾತನಾಡುವ ಪ್ರಧಾನಿ ಮಹಿಳಾ ಕುಸ್ತಿಪಟುಗಳ ಕಣ್ಣೀರಿಗೆ ಪ್ರತಿಕ್ರಿಯಸಲಿಲ್ಲ.
ಈಗ ಅವರದೇ ವಾರಾಣಸಿ ಬಿಜೆಪಿಯ ಮಂದಿ ಸಾಮೂಹಿಕ ಅತ್ಯಾಚಾರ ಕೇಸ್ನಲ್ಲಿ ಬಂಧಿತರಾಗಿದ್ದರೂ ಮಾತಿಲ್ಲ. ವಿದ್ಯಾರ್ಥಿನಿಯೊಬ್ಬಳಿಗೆ ಅನ್ಯಾಯವಾಗಿದೆ, ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಹಾಗಿದ್ದರೂ ಸ್ಟಾರ್ ಮಹಿಳಾ ಆಂಕರ್ಗಳು ಏಕೆ ಮಾತನಾಡುತ್ತಿಲ್ಲ ಎಂಬ ಪ್ರಶ್ನೆಯನ್ನೂ ಎತ್ತಲಾಗಿದೆ.
ಮೊನ್ನೆ ಸಂಸತ್ ಒಳಗೆ ನುಗ್ಗಿದ್ದ ಆಗಂತುಕರ ಮೇಲೆ ಯುಎಪಿಎ ಕೇಸ್ ಹಾಕಲಾಯಿತು. ಅವರಲ್ಲಿ ಒಬ್ಬ ಟಿಎಂಸಿ ಕಡೆಯವನು, ಒಬ್ಬ ಎಡಪಂಥೀಯ ಎಂದು ಫೋಟೋ ತೋರಿಸಿ ಇದೇ ಮೀಡಿಯಾಗಳು ಅರಚಾಡಿದ್ದವಲ್ಲವೆ?. ಆರೋಪಿಗಳು ಬಿಜೆಪಿಯವರಾದರೆ ಅವರನ್ನು ನೋಡುವ ರೀತಿಯೇ ಬೇರೆ, ಬೇರೆಯವರಾದರೆ ನೋಡುವ ರೀತಿಯೇ ಬೇರೆಯೆ?.
ಬನಾರಸ್ನಲ್ಲಿ ವಿವಿ ಕ್ಯಾಂಪಸ್ನೊಳಗೇ ಸಾಮೂಹಿಕ ಅತ್ಯಾಚಾರ ಮಾಡಿದ ಬಿಜೆಪಿ ಐಟಿ ಸೆಲ್ನವರನ್ನು ಬಂಧಿಸಲು ಎರಡು ತಿಂಗಳು ಬೇಕಾಯಿತು.
ಅವರಿಗೆ ಭಯವೇ ಇಲ್ಲ. ಯಾಕೆಂದರೆ ಅವರು ಬಿಜೆಪಿಯವರು, ಆರ್ಎಸ್ಎಸ್ನವರು. ಈಗ ಹೇಗಾದರೂ ಮಾಡಿ ಅವರನ್ನು ಬಚಾವ್ ಮಾಡುವ ಕೆಲಸವನ್ನೇ ಆದಿತ್ಯನಾಥ್ ಅವರ ಪೊಲೀಸರು, ಜೆಪಿ ನಡ್ಡಾ ಕೊಂಡಾಡುವ ಉತ್ತರ ಪ್ರದೇಶ ಪೊಲೀಸರು ಮಾಡುತ್ತಿದ್ದಾರೆ.
ಮಹಿಳಾ ಮೀಸಲಾತಿ ಮಸೂದೆಯನ್ನು ಪಾಸು ಮಾಡಿದ ಕ್ರೆಡಿಟ್ ತಗೊಂಡಿರೋ ಬಿಜೆಪಿ ಸರ್ಕಾರ, ಅದನ್ನು ಜಾರಿ ಮಾಡಲು ಆಗದಂತೆಯೂ ವ್ಯವಸ್ಥೆ ಮಾಡಿಕೊಂಡಿದೆ. ಮಸೂದೆ ಪಾಸು ಮಾಡಿ ಅದರ ಕ್ರೆಡಿಟ್ಟು ಬಾಚಿಕೊಂಡಿರುವ ಬಿಜೆಪಿ ಮಹಿಳೆಯರಿಗೆ ಮಾಡುತ್ತಿರುವ ದೋಖಾಗಳು ಮಾತ್ರ ಕಡಿಮೆಯಿಲ್ಲ ಎಂಬುದಕ್ಕೆ ಮಹಿಳಾ ಕುಸ್ತಿಪಟುಗಳ ಕಣ್ಣೀರು ಸಾಕ್ಷಿ.
ಅತ್ಯಾಚಾರ ಆರೋಪಿಗಳನ್ನು ಸನ್ನಡತೆ ಆಧಾರದ ಮೇಲೆ ಬಿಡುಗಡೆ ಮಾಡಿ, ಸಿಹಿ ಹಂಚಿ ಬರಮಾಡಿಕೊಳ್ಳುವ, ಸಂಭ್ರಮಿಸುವ ಬಿಜೆಪಿಯ ರೀತಿ ಅದಕ್ಕೆ ಇನ್ನೊಂದು ಉದಾಹರಣೆ. ಈಗ ಮೋದಿ ಕ್ಷೇತ್ರದ ಬಿಜೆಪಿಯವರೇ ಸಾಮೂಹಿಕ ಅತ್ಯಾಚಾರ ಎಸಗಿರುವಾಗಲೂ ಅವರನ್ನು ಹೊರಗೆ ಕರೆತರುವ ತಂತ್ರಗಳು ನಡೆಯುತ್ತಿರುವುದು ಹೊಸ ಉದಾಹರಣೆ. ಇವರ ದ್ವಂದ್ವಕ್ಕೆ, ಆಷಾಢಭೂತಿತನಕ್ಕೆ ಮಿತಿಯೇ ಇಲ್ಲವೆ ? ಕೊನೆಯೇ ಇಲ್ಲವೆ ?.