ಬಿಜೆಪಿ ಬಾಗಿಲು ಮುಚ್ಚಿದ್ದಕ್ಕೆ ವಾಪಸ್ ಬಂದ ಕಮಲ್ ನಾಥ್ ಕಾಂಗ್ರೆಸ್ ಗೆ ಯಾಕೆ ?

Update: 2024-02-27 07:09 GMT
Editor : Ismail | Byline : ಆರ್. ಜೀವಿ

ಕಮಲ್ ನಾಥ್ | Photo: PTI

ಬಿಜೆಪಿಯವರಿಗೆ ಕಮಲ್ ನಾಥ್ ಬೇಡವಂತೆ. ಕಮಲ್ ನಾಥ್ ಪಾಲಿಗೆ ಬಿಜೆಪಿ ಬಾಗಿಲು ಮುಚ್ಚಿದೆ. ಕಾಂಗ್ರೆಸ್ಗಾದರೂ ಕಮಲ್ ನಾಥ್ ಬೇಕಾಗಿದ್ದಾರೆಯೆ? ಅವರ ಜರೂರು ನಿಜವಾಗಿಯೂ ​ಈಗ ಕಾಂಗ್ರೆಸ್ಗೆ ಇದೆಯೆ? ಕಾಂಗ್ರೆಸ್ನಿಂದ 9 ಬಾರಿ ಸಂಸದರಾದ, ​ಹಲವು ಬಾರಿ ಕೇಂದ್ರ ಸಚಿವರಾದ, ಸಿಎಂ ಕೂಡ ಆದ, ಇಂದಿರಾ ಗಾಂಧಿ​ಯಿಂದ ಮೂರನೇ ಮಗ ಎಂದೇ ಕರೆಸಿಕೊಳ್ಳುತ್ತಿದ್ದ ಕಮಲ್ ನಾಥ್ ಮೊದಲು ಮಧ್ಯ ಪ್ರದೇಶದಲ್ಲಿ ಕಮಲ ಅರಳಿಸಿದರು.

ಆಮೇಲೆ ಸ್ವತಃ ಕಮಲ ಹಿಡಿಯಲು ಹೋಗಿದ್ದವರು, ಆ ಪಕ್ಷದವರು "ಹೋಗಿ ಇಲ್ಲಿಂದ, ನಮಗೆ ​ಈಗ ಬೇಡ " ಎಂದು ಹೇಳಿದ ಮೇಲೆ ಅಲ್ಲಿಂದ ವಾಪಸ್ ಬಂ​ದಿದ್ದಾರೆ. ತಮ್ಮ ಮನೆ ಮೇಲೆ ಹಾಕಿದ್ದ ​ಕೇಸರಿ ಧ್ವಜ​ವನ್ನು ಇಳಿಸಿ ರಾಹುಲ್ ಗಾಂಧಿ ನಮ್ಮ ನಾಯಕ ಎಂದಿದ್ದಾರೆ. ಅದೇ ಹೊತ್ತಲ್ಲಿ ಅವರ ಮಗ ಸಂಸದ ನಕುಲ್ ನಾಥ್ ಚಿಂದ್ವಾರದಲ್ಲಿ ಬಿಜೆಪಿ ಸಿಎಂ ಅನ್ನು ಸ್ವಾಗತಿಸಿದ್ದಾರೆ. ಅಲ್ಲಿನ​ ಕಮಲ್ ನಾಥ್ ಬೆಂಬಲಿಗ ಸ್ಥಳೀಯ ಕಾಂಗ್ರೆಸ್ ನಾಯಕರೆಲ್ಲರೂ ಒಟ್ಟಾಗಿ ಬಿಜೆಪಿ ಸೇರಿದ್ದಾರೆ. ಅಂದ್ರೆ ಕೊನೆಗೆ ಕಾಂಗ್ರೆ​ಸ್ ನಲ್ಲಿ ಈಗ ಉಳಿದಿರೋದು ಯಾವುದೇ ಕೆಲಸಕ್ಕೆ ಬಾರದ​, ​ಪಕ್ಷಕ್ಕೆ ಹೊರೆ​ಯಾಗಿರುವ ಕಮಲ್ ನಾಥ ಮಾತ್ರ.

ಇಂತಹ ಕಮಲ್ ನಾಥ್ ಯಾಕೆ ಬಿಜೆಪಿಗೇ ಹೋಗ​ಲೇಬೇಕು ? ಅಂತಹವರು ಇರುವುದು ಕಾಂಗ್ರೆಸ್ ಪಕ್ಷಕ್ಕೆ ಅದೆಷ್ಟು ದೊಡ್ಡ ಹೊರೆ ?

ಅಂಥವರಿಂದ ಈಗಾಗಲೇ ಕಾಂಗ್ರೆಸ್ ಸಂಘಟನಾತ್ಮಕವಾಗಿ, ಸೈದ್ಧಾಂತಿಕವಾಗಿ, ರಾಜಕೀಯ ಶಕ್ತಿಯಾಗಿ ಕಳಕೊಂಡಿದ್ದೆಷ್ಟು ? ಇದೇ ಕಮಲ್ ನಾಥ್ ಗಾಗಿ ಕಾಂಗ್ರೆಸ್ ನರಮೇಧದ ಕಳಂಕ ಮೆತ್ತಿಸಿಕೊಂಡಿತು. ಯುವ ನಾಯಕರನ್ನು ಕಳಕೊಂಡಿತು. ಪ್ರಮುಖ ರಾಜ್ಯದಲ್ಲಿ ಅಧಿಕಾರವನ್ನೂ ಕಳಕೊಂಡಿತು.

ಇಂತಹ ಕಮಲ ಪ್ರಿಯರಿಂದ ಮುಕ್ತಿ ಸಿಗದೇ ಕಾಂಗ್ರೆಸ್​ ಪಕ್ಷದ ಉದ್ಧಾರ ಸಾಧ್ಯವೆ? ​ರಾಹುಲ್ ಗಾಂಧಿ ಇನ್ನು ಅದೆಷ್ಟು ಯಾತ್ರೆ ಮಾಡಿದರೂ, ಅದೆಷ್ಟೇ ಶ್ರಮ ಹಾಕಿದರೂ ಪಕ್ಷದೊಳಗೇ ಇಂತಹ ಹಿತಶತ್ರುಗಳು ಇದ್ದರೆ ಪಕ್ಷ ಉದ್ಧಾರ ಆಗೋದಾದ್ರೂ ಹೇಗೆ ? ಇಷ್ಟು ಕಾಲ ಕಾಂಗ್ರೆಸ್ನಲ್ಲಿ ​ಎಲ್ಲವನ್ನೂ ಅನಭವಿಸಿದ್ದ ನಾಯಕ,​ ಅದೇ ಪಕ್ಷದಿಂದ ಪುತ್ರನನ್ನೂ ಸಂಸದನನ್ನಾಗಿಸಿದ ನಾಯಕ, ಕಡೆಗೆ ​77 ​ವರ್ಷದ ಇಳಿ ವಯಸ್ಸಲ್ಲಿ ಹೋಗಿ​ ಬಿಜೆಪಿ ಬಾಗಿಲಲ್ಲಿ ನಿಂತುಬಿಟ್ಟಿದ್ದರು.

ಅವರ ರಾಜಕೀಯ ನಡೆ ಅದೆಷ್ಟು ನಿಗೂಢವೆನ್ನುವಂತಾಗಿ ಬಿಟ್ಟಿತ್ತೆಂದರೆ, ಕಮಲನಾಥ್‌ಗೆ ಕಮಲದ ಅಚ್ಚು ಇದೆಯೋ ಅಥವಾ ಕೈ ಮುದ್ರೆ ಇದೆಯೋ ಅಥವಾ ಕಮಲದಲ್ಲಿ ಕೈಗಳಿವೆಯೋ ಅಥವಾ ಕೈಯಲ್ಲಿ ಕಮಲವಿದೆಯೋ ಗೊತ್ತಾಗದ ಹಾಗಾಗಿತ್ತು. ಈಗ ಬಿಜೆಪಿ ಬಾಗಿಲು ಮುಚ್ಚಿದ ಮೇಲೆ ಮತ್ತೆ ಕಾಂಗ್ರೆಸ್ ಬಾವುಟ ಹಿಡಿದು ನಾಟಕ ನ​ಡೆಸಿರುವ ಕಮಲ್ ನಾಥ್ ಕಾಂಗ್ರೆಸ್ಗಾದರೂ ಯಾಕೆ ಬೇಕಾಗಿದ್ದಾರೆ?

ಕಮಲ್ ನಾಥ್ ರಾಜಕೀಯ ದುರಾಸೆ ಅವರನ್ನು ಎಷ್ಟು ಹಾಸ್ಯಾಸ್ಪದ ನಾಯಕನನ್ನಾಗಿಸಿತು ಎಂಬುದಕ್ಕೆ ಸೋಷಿಯಲ್ ಮೀಡಿಯಾಗಳಲ್ಲಿ ಬಂದ ಮೀಮ್ ಗಳೇ ಸಾಕ್ಷಿ. ಅಷ್ಟಕ್ಕೂ ಕಮಲ್ ನಾಥ್ಗೆ ಆಹ್ವಾನ ಬಂದಿದ್ದು ವೀಕೆಂಡ್ ಪಾರ್ಟಿಗೇ ಹೊರತು ಭಾರತೀಯ ಜನತಾ ಪಾರ್ಟಿಗೆ ಅಲ್ಲ ಎಂಬಲ್ಲಿಂದ ಹಿಡಿದು, ಆಫರ್ ಲೆಟರ್ ಸಿಗದೆ ರಾಜೀನಾಮೆ ಕೊಟ್ಟುಬಿಟ್ಟರು ಎನ್ನುವಲ್ಲಿಯವರೆಗೆ​ ಜನರು ಆಡಿಕೊಳ್ಳುವಂತಾಯಿತು.

ಕಾಂಗ್ರೆಸ್ ಕಡೆಯವರನ್ನು ​ಸೆಳೆಯುವ ಬಿಜೆಪಿಯ ಕೊಳಕು ರಾಜಕೀಯ ಕೂಡ ಲೇವಡಿಗೆ ತುತ್ತಾಯಿತು. ಕಾಂಗ್ರೆಸ್ ಮುಕ್ತ ಭಾರತ ಎನ್ನುವ ಬಿಜೆಪಿ ಮಾತ್ರ ಕಾಂಗ್ರೆಸ್ ಯುಕ್ತವಾಗುತ್ತಿರುವುದು, ಕಾಂಗ್ರೆಸ್ನವರೇ ಬಿಜೆಪಿಯೊಳಗೆ ತುಂಬಿಹೋಗುತ್ತಿರುವುದು ನಿಜಕ್ಕೂ ತಮಾಷೆಯ ಸಂಗತಿಯೇ ಆಗಿದೆ. ಬಿಜೆಪಿ ಬಾಗಿಲು ಕಮಲ್ ನಾಥ್ ಪಾಲಿಗೆ ಶಾಶ್ವತವಾಗಿ ಮುಚ್ಚಿದೆಯೆ ಅಥವಾ 2024ರ ಚುನಾವಣೆ ನಂತರ ಮತ್ತೆ ಅದು ತೆರೆದುಕೊಳ್ಳಲಿದೆಯೆ?

ಆದರೆ ಈಗಂತೂ ಕಮಲ್ ನಾಥ್ ಮತ್ತೆ ಕಾಂಗ್ರೆಸ್ ಕಡೆ ಓಡೋಡಿ ಬಂದಿದ್ದಾರೆ. ರಾಹುಲ್ ಗಾಂಧಿ ಅವರ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಪಕ್ಷದ ಕಾರ್ಯಕರ್ತರು ಹಾಗೂ ರಾಜ್ಯದ ಜನತೆಗೆ ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಕಮಲ್ ನಾಥ್ ಕೇಳಿಕೊಂಡಿದ್ದಾರೆ. ರಾಹುಲ್ ಗಾಂಧಿ ದೇಶಾದ್ಯಂತ ಬೀದಿಗಿಳಿದು ಅನ್ಯಾಯದ ವಿರುದ್ಧ ನಿರ್ಣಾಯಕ ಹೋರಾಟ ಘೋಷಿಸಿರುವಾಗ ಈ ಕಮಲ್ ನಾಥ್ ತನ್ನ ಮತ್ತು ತನ್ನ ಪುತ್ರನ ಹಿತಚಿಂತನೆಯಲ್ಲಿ ತೊಡಗಿದ್ದರು.

ಆದರೆ ಯಾವಾಗ ಬಿಜೆಪಿ ದಢಾರನೆ ಬಾಗಿಲನ್ನು ಮುಚ್ಚಿತೊ, ಆಗ ಕಮಲ್ ನಾಥ್​ ಗೆ ಕೈ ಮಾತ್ರ ಗತಿಯೆಂದು ಕಂಡಿದೆ. ಹಾಗಾಗಿಯೇ ಈಗ ಈ ಹೊಸ ವರಸೆ. ಬಿಜೆಪಿ ಪಾಳಯವನ್ನು ಸೇರಿಯೇಬಿಟ್ಟರು ಎಂಬಂತೆ ಕಂಡಿದ್ದವರು ಈಗ ಬಂದು ಒಟ್ಟಾಗಿ ಯಾತ್ರೆಯಲ್ಲಿ ಪಾಲ್ಗೊಳ್ಳಲು ಕಾರ್ಯಕರ್ತರಿಗೆ ಕರೆ ನೀಡುತ್ತಿರುವುದು ಎಷ್ಟು ಹಾಸ್ಯಾಸ್ಪದ ಅಲ್ಲವೆ? ಕಾರ್ಯಕರ್ತರೇ ಆಡಿಕೊಂಡು ನಗುವುದಿಲ್ಲವೆ? ಕಮಲ್ ನಾಥ್ ಉಪದೇಶ ಕಾಂಗ್ರೆಸ್ನವರಿಗೆ ಬೇಕಾಗಿದೆಯೆ?

ರಾಜ್ಯಸಭೆ ಚುನಾವಣೆಗೆ ತಮ್ಮನ್ನು ಅಭ್ಯರ್ಥಿಯಾಗಿ ಪರಿಗಣಿಸಲಿಲ್ಲ, ಜೊತೆಗೆ ಅಭ್ಯರ್ಥಿ ಆಯ್ಕೆ ಮಾಡುವಾಗ ತಮ್ಮ ಜೊತೆ ಸಮಾಲೋಚಿಸದೆ ಗ್ವಾಲಿಯರ್-ಚಂಬಲ್ ಕ್ಷೇತ್ರದ ರಾಜಕಾರಣಿ ಅಶೋಕ್ ಸಿಂಗ್ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದಕ್ಕೆ ಕಮಲ್ ನಾಥ್ ಮುನಿಸಿಕೊಂಡಿದ್ದರರು. ಚುನಾವಣಾ ರಾಜಕಾರಣದಿಂದ ಹೊರಗಿರಲು ಬಯಸಿರುವ ಕಮಲ್ ನಾಥ್ ರಾಜ್ಯಸಭೆ ಟಿಕೆಟ್ ಸಿಗಲಿದೆ ಎಂದು ಭಾವಿಸಿದ್ದರು. ಆದರೆ ತಮ್ಮ ಹೆಸರು ಪಟ್ಟಿಯಲ್ಲಿ ಇಲ್ಲದ ಕಾರಣಕ್ಕೆ ಕಾಂಗ್ರೆಸ್ ವಿರುದ್ಧ ಅಸಮಾಧಾನಗೊಂಡಿದ್ದರು.

2023ರ ಮಧ್ಯಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಸೋಲಿನ ನಂತರ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಸ್ಥಾನದಿಂದಲೂ ಕಮಲ್ ನಾಥ್ ಅವರನ್ನು ಕೆಳಗಿಳಿಸಲಾಗಿತ್ತು. ಈಗ ಇನ್ನೇನು ಅವರು ಬಿಜೆಪಿ ಸೇರಿಯೇಬಿಡುತ್ತಾರೆ ಎಂಬ ವದಂತಿಗಳು ಹಬ್ಬಿದ್ದ ಹೊತ್ತಿನಲ್ಲೇ ಅವರದೇ ಪ್ರಭಾವವಿರುವಲ್ಲಿ​ ಸ್ಥಳೀಯ ಕಾಂಗ್ರೆಸ್ ಮಂದಿಯೆಲ್ಲ ಬಿಜೆಪಿ ಸೇರಿಯಾಗಿತ್ತು.

ಕಮಲ್ ನಾಥ್ ಅವರ ಭದ್ರಕೋಟೆಯಾದ ಮಧ್ಯಪ್ರದೇಶದ ಛಿಂದ್ವಾರಾ ಜಿಲ್ಲೆಯಲ್ಲಿ ಕಾಂಗ್ರೆಸ್ನ ಹಲವು ಮುಖಂಡರು ಬಿಜೆಪಿ ಸೇರ್ಪಡೆಯಾಗಿದ್ದರು. ಕಮಲ್ ನಾಥ್ ಮುಂದಿನ ರಾಜಕೀಯ ನಡೆ ನಿಗೂಢವಾಗಿದ್ದ ಹೊತ್ತಲ್ಲಿಯೇ ಹೀಗೆ ಛಿಂದ್ವಾರದಲ್ಲಿ ಹಲವಾರು ಕಾಂಗ್ರೆಸ್ ನಾಯಕರು ಬಿಜೆಪಿಗೆ ಸೇರ್ಪಡೆಯಾಗಿದ್ದ ಬೆಳವಣಿಗೆ ಕುತೂಹಲ ಕೆರಳಿಸಿತ್ತು.

ಕಮಲ್ ನಾಥ್ ತಮ್ಮ ಹೆಸರಿನಲ್ಲಿ ಮಾತ್ರವಲ್ಲ, ರಾಜಕೀಯವಾಗಿಯೂ ಕಮಲ ಹಿಡಿಯಲು ಮುಂದಾಗಿದ್ದಾರೆ ಎಂಬ ಸುದ್ದಿ ಹರಡಿತ್ತು.

ಬಿಜೆಪಿ ಸೇರ್ಪಡೆ ಊಹಾಪೋಹಕ್ಕೆ ಅವರ ದಿಲ್ಲಿ ಭೇಟಿ ಕೂಡ ಪುಷ್ಠಿ ನೀಡಿತ್ತು. ಅವರ ಮಗ​ ಸಂಸದ ನಕುಲ್ ನಾಥ್, ಕಾಂಗ್ರೆಸ್ ತ್ಯಜಿಸುತ್ತಿರುವ ಸಂಕೇತವನ್ನು ಸಾಮಾಜಿಕ ಜಾಲತಾಣದಲ್ಲಿನ ತಮ್ಮ 'ಬಯೋ' ಬದಲಿಸುವ ಮೂಲಕ ನೀಡಿದ್ದರು.

ಈ ವದಂತಿಗಳ ನಡುವೆಯೂ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಅವರು, ಕಮಲ್ ನಾಥ್ ಬಿಜೆಪಿ ಸೇರುವ ಸಾಧ್ಯತೆಯನ್ನು ತಳ್ಳಿಹಾಕಿದ್ದರು. ಅವರು ಸೋನಿಯಾ ಮತ್ತು ರಾಹುಲ್ ಗಾಂಧಿಗೆ ನಿಷ್ಠರಾಗಿ ಇರಲಿದ್ದಾರೆ. ಅವರ ರಾಜಕೀಯ ಜೀವನವು ನೆಹರೂ- ಗಾಂಧಿ ಕುಟುಂಬದೊಂದಿಗೆ ಶುರುವಾಗಿದ್ದು. ಸಂಕಷ್ಟದ ಸಂದರ್ಭದಲ್ಲಿಯೂ ಅವರು ಪಕ್ಷ ಹಾಗೂ ಗಾಂಧಿಗಳಿಗೆ ನಿಷ್ಠರಾಗಿದ್ದರು. ಇಂದಿರಾ ಗಾಂಧಿಯವರ ಕಾನೂನು ಹೋರಾಟಗಳಲ್ಲಿ ಜತೆಗಿದ್ದರು. ಇಂತಹ ಐತಿಹಾಸಿಕ ಬಾಂಧವ್ಯ ಇರುವಾಗ ಅಂತಹ ವ್ಯಕ್ತಿ ಕಾಂಗ್ರೆಸ್ ಮತ್ತು ಗಾಂಧಿ ಕುಟುಂಬವನ್ನು ಬಿಟ್ಟು ಹೋಗುತ್ತಾರೆ ಎಂದು ಭಾವಿಸುತ್ತೀರಾ ಎಂದು ದಿಗ್ವಿಜಯ್ ಸಿಂಗ್ ಹೇಳಿದ್ದರು.

ಹೀಗಿರುವಾಗಲೇ, ಬಿಜೆಪಿಗೆ ಕಮಲ್ ನಾಥ್ ಅವರ ಅಗತ್ಯ ಇಲ್ಲ. ಅವರಿಗೆ ಪಕ್ಷದ ಬಾಗಿಲು ಮುಚ್ಚಿದೆ ಎಂದು ಮಧ್ಯಪ್ರದೇಶ​ದ ಸಚಿವ ಕೈಲಾಸ್ ವಿಜಯವರ್ಗೀಯ ಹೇಳಿಬಿಟ್ಟಿದ್ದರು. ಇಷ್ಟೆಲ್ಲ ಆದ ಮೇಲೆ ಮತ್ತೆ ಕಮಲ್ ನಾಥ್ ಕಾಂಗ್ರೆಸ್ ನಿಷ್ಠರಾಗಿಬಿಟ್ಟಿದ್ದಾರೆ. ರಾಹುಲ್ ಗಾಂಧಿ ನೇತೃತ್ವದ ‘ಭಾರತ್ ಜೋಡೋ ನ್ಯಾಯ ಯಾತ್ರೆ ಮಧ್ಯಪ್ರದೇಶಕ್ಕೆ ಬಂದಾಗ ಕಮಲ್ ನಾಥ್ ಭಾಗವಹಿಸಲಿದ್ದಾರೆ ಎಂದು ಪಕ್ಷದ ಮೂಲಗಳು ಹೇಳಿವೆ.

ಅವರು ಮಾರ್ಚ್ 2ರಂದು ಗ್ವಾಲಿಯರ್ ತಲುಪಲಿದ್ದು, ಮಾರ್ಚ್ 6ರವರೆಗೆ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಕಾಂಗ್ರೆಸ್ ವಕ್ತಾರರು ತಿಳಿಸಿದ್ದಾರೆ. ಆದರೆ ನಿಜವಾಗಿಯೂ ಕಮಲ್ ನಾಥ ಕಾಂಗ್ರಸ್ಗೆ ಬೇಕಾಗಿದ್ದಾರೆಯೆ? ಕಮಲದ ಕಡೆ​ಗೇ ಮನಸ್ಸಿಟ್ಟುಕೊಂಡು, ಅವಕಾಶ ಸಿ​ಕ್ಕಿದರೆ ಯಾವ ಕ್ಷಣದಲ್ಲೂ ಜಿಗಿಯುವ ಉದ್ದೇಶ ಇಟ್ಟುಕೊಂಡು ಕಮಲ್ ನಾಥ್ ಹೇಗೆ ಕಾಂಗ್ರೆಸಿಗರಾಗಿರಬಲ್ಲರು?

​ದ್ವೇಷ, ಅಸಹಿಷ್ಣುತೆ, ಕೋಮು ರಾಜಕಾರಣ, ಸಾಂವಿಧಾನಿಕ ಸಂಸ್ಥೆಗಳ ಸ್ವಾಯತ್ತೆ ಮೇಲೆ ದಾಳಿ, ತನಿಖಾ ಸಂಸ್ಥೆಗಳ ವ್ಯಾಪಕ ದುರ್ಬಳಕೆ, ವಿಪಕ್ಷ ನಾಯಕರನ್ನು ಮಟ್ಟ ಹಾಕುವ ಕೆಟ್ಟ ರಾಜಕೀಯ - ಇವೆಲ್ಲವುಗಳ ಸಂಕೇತವೇ ಆಗಿ ಹೋಗಿರುವ ಬಿಜೆಪಿಯಲ್ಲಿರಲು ತನಗೆ ಸಮಸ್ಯೆಯಿಲ್ಲ ಎಂದು ಎರಡು ಮೂರು ದಿನಗಳ ಹಿಂದೆ ಹೋದವರು ಈಗ ಅದೇ ಅನ್ಯಾಯಗಳ ವಿರುದ್ಧ ಹೋರಾಡುತ್ತಿರುವ ರಾಹುಲ್ ಗಾಂಧಿ ಜೊತೆ ಅದೇಗೆ ಹೆಜ್ಜೆ ಹಾಕುತ್ತಾರೆ ?

ಬಿಜೆಪಿಯ ಎಲೆಕ್ಟೋರಲ್ ಬಾಂಡ್ ನಂತಹ ಮಹಾ ಹಗರಣ ಬಯಲಾಗಿ ಸುಪ್ರೀಂ ಕೋರ್ಟೇ ಅದನ್ನು ರದ್ದು ಮಾಡಿದ ಬೆನ್ನಿಗೇ ಆ ಪಕ್ಷವೇ ತನಗೆ ಆಗಬಹುದು ಎಂದು ಹೊರಟವರು ಈಗ ಅದೇ ಎಲೆಕ್ಟೊರಲ್ ಬಾಂಡ್ ವಿರುದ್ಧ ಧ್ವನಿ ಎತ್ತುತ್ತಿರುವ ಕಾಂಗ್ರೆಸ್ ಹಾಗು ರಾಹುಲ್ ಗಾಂಧಿಯ ಪಕ್ಷದವರಾಗಲು ಹೇಗೆ ಸಾಧ್ಯ ?

ಅದಾನಿ, ಅಂಬಾನಿಗಳಿಗೆ ಇನ್ನಿಲ್ಲದ ಎಲ್ಲ ವಿನಾಯಿತಿ ಕೊಟ್ಟು ಈ ದೇಶದ ರೈತರು , ಯುವಜನರು , ಕಾರ್ಮಿಕರ ಹಕ್ಕುಗಳನ್ನು ನಿರಾಕರಿಸುತ್ತಿರುವ ಪಕ್ಷ ಹಾಗು ಸರಕಾರಕ್ಕೆ ಸೇರುತ್ತೇನೆ ಎಂದು ಹೋಗಿದ್ದವರು ಈಗ ಅದರ ವಿರುದ್ಧವೇ ಬೀದಿಗಿಳಿದಿರುವ ಕಾಂಗ್ರೆಸ್ ಪಕ್ಷದ ನಾಯಕರಾಗಲು ಹೇಗೆ ಸಾಧ್ಯ ?

ಕಂಡಕಂಡಲ್ಲಿ ನೆಹರೂ ಅವರನ್ನು ಅವಹೇಳನ ಮಾಡುವ, ಅವರ ವಿರುದ್ಧ ವ್ಯವಸ್ಥಿತ ಅಪಪ್ರಚಾರ ಮಾಡುವ, ಹಸಿ ಹಸಿ ಸುಳ್ಳುಗಳನ್ನೇ ಹೇಳುವ ಪಕ್ಷಕ್ಕೆ ಸೇರುತ್ತೇನೆ ಎಂದು ಹೋದವರು ಅದೇ ನೆಹರೂ ಅವರ ಆದರ್ಶಗಳ ಪಕ್ಷಕ್ಕೆ ಏನು ಕೊಡುಗೆ ನೀಡಬಲ್ಲರು ? ಬಿಜೆಪಿಯ ಗೇಟಿನವರೆಗೂ ಹೋಗಿ ತಟ್ಟಿಬಂದವರು, ಬೇರೆ ಗತಿಯಿಲ್ಲ ಎಂದು​ ವಾಪಸ್ ಬಂದವರು​ ಚುನಾವಣೆ ಹೊತ್ತಲ್ಲಿ ಕಾಂಗ್ರೆಸ್ ಗೆ ಅದ್ಯಾವ ನಿಷ್ಠೆಯನ್ನು ತೋರಿಸಬಲ್ಲರು?

ಕಾಂಗ್ರೆಸ್ ಬಿಟ್ಟವರಂತೆ ಕಾಣಿಸಿಕೊಂಡಿದ್ದವರು, ಪಕ್ಷದ​ ಅತ್ಯಂತ ಹಿರಿಯ ನಾಯಕನಾಗಿ ಆ ಘನತೆಯನ್ನು ಉಳಿಸಿಕೊಳ್ಳದವರು, ಇನ್ನೂ ಅಧಿಕಾರದ ಆಸೆಯೊಂದೇ ಮುಖ್ಯವಾಗಿ ಸಿಟ್ಟು ಹೊರಹಾಕಿದ್ದವರು ಕಾಂಗ್ರೆಸಿಗರಾಗಿ ಇರುವುದು ಹೇಗೆ ಸಾಧ್ಯ? ​ಈ ಎಲ್ಲ ಪ್ರಶ್ನೆಗಳಿಗೆ ಉತ್ತರಿಸಬೇಕಾದವರು ಕಮಲ್ ನಾಥ್ ಅಲ್ಲ, ಕಾಂಗ್ರೆಸ್ ಪಕ್ಷ ಇದಕ್ಕೆ ಉತ್ತರಿಸಬೇಕಾಗಿದೆ.

ಕಾಂಗ್ರೆಸ್ ಪಕ್ಷದ ತತ್ವ, ಸಿದ್ಧಾಂತಗಳಿಗೆ ಬದ್ಧರಾಗಿ ಅದಕ್ಕಾಗಿ ದುಡಿಯುವ ಕಾರ್ಯಕರ್ತರು, ತಳ ಮಟ್ಟದ ನಾಯಕರು ಹಾಗು ಅದರ ಮತದಾರರಿಗೆ ಕಾಂಗ್ರೆಸ್ ನಾಯಕತ್ವ ಈ ಪ್ರಶ್ನೆಗಳಿಗೆ ಉತ್ತರಿಸಬೇಕಾಗಿದೆ. ಹೊರೆಯ ಹಾಗಿರುವ ಇಂಥವರನ್ನೆಲ್ಲ ಹೊರಕಳಿಸಿ ದೃಢವಾಗುವ ಜರೂರತ್ತು ಕಾಂಗ್ರೆಸ್ ಪಾಲಿಗೆ ಖಂಡಿತ ಇದೆ​. ಮನಸ್ಸಿನಲ್ಲಿ ಕಮಲ ಇಟ್ಟುಕೊಂಡು ಕೈ ಪಕ್ಷದಲ್ಲಿರುವವರೆಲ್ಲರೂ ಇಲ್ಲಿಂದ ಹೋಗಿ ಕಾಂಗ್ರೆಸ್ ಅನ್ನು ಅದರ ಆಶಯಕ್ಕೆ, ಸಿದ್ಧಾಂತಕ್ಕೆ ಬದ್ಧವಾಗಿ ರೂಪಿಸುವ ಅವಕಾಶ ಮಾಡಿಕೊಡಬೇಕಿದೆ. ಕಾಂಗ್ರೆಸ್ ಈ ಬಗ್ಗೆ ಯೋಚಿಸಬೇಕಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!