ವಾಗ್ಲೆ ಮೇಲೆ ದಾಳಿ ಸೂಚನೆ ಇದ್ದರೂ ಪೊಲೀಸರೇಕೆ ಕ್ರಮ ಜರುಗಿಸಲಿಲ್ಲ ?

Update: 2024-02-19 05:42 GMT
Editor : Ismail | Byline : ಆರ್. ಜೀವಿ

Photo: India today  

ಗುಂಪೊಂದು ವ್ಯಕ್ತಿಯ ಮೇಲೆ ದಾಳಿ ಮಾಡುವ ಸೂಚನೆ ಸಿಕ್ಕಿದ ಕೂಡಲೇ ಪೊಲೀಸರು ಏನು ಮಾಡಬೇಕು?ಆ ಗುಂಪನ್ನು ಕೂಡಲೇ ವಶಕ್ಕೆ ಪಡೆಯಬೇಕು, ಅದರ ಸಂಚನ್ನು ವಿಫಲ ಗೊಳಿಸಬೇಕು. ಯಾರ ಮೇಲೆ ದಾಳಿಗೆ ಸಂಚು ನಡೆದಿತ್ತೋ ಅವರಿಗೆ ಸೂಕ್ತ ಭದ್ರತೆ ನೀಡಬೇಕು.

ಆದರೆ ನಯಾ ಭಾರತ್ ನಲ್ಲಿ ಹಾಗೆಲ್ಲ ಆಗೋದಿಲ್ಲ. ಇಲ್ಲಿ ಆ ವ್ಯಕ್ತಿಯನ್ನೇ ಪೊಲೀಸರು ಸುತ್ತುವರಿತಾರೆ, ನೀವು ಎಲ್ಲಿಗೂ ಹೋಗಬೇಡಿ, ಅಲ್ಲಿ ನಿಮ್ಮ ಮೇಲೆ ದಾಳಿ ಆಗಲಿದೆ ಅಂತಾರೆ. ದಾಳಿ ಮಾಡಲು ಸಜ್ಜಾದವರನ್ನು ಹೆಡೆಮುರಿ ಕಟ್ಟಲು ಮಾತ್ರ ಅವರು ಹೋಗೋದೇ ಇಲ್ಲ.ಅವರಿಗೆ ದಾಳಿ ಮಾಡುವ ಪೂರ್ಣ ಅವಕಾಶ ಒದಗಿಸಲಾಗುತ್ತದೆ.

ಮೋದಿ ಸರ್ಕಾರ ಬಂದಾಗಿನಿಂದಲೂ ದ್ವೇಷ ಮತ್ತು ಹಿಂಸೆಗೆ ಗುರಿಯಾಗುವವರಲ್ಲಿ ಪ್ರಶ್ನಿಸುವ ಮತ್ತು ಸತ್ಯ ಹೇಳುವ ಪತ್ರಕರ್ತರು ಕೂಡ ಸೇರಿದ್ದಾರೆ. ಕಳೆದ 10 ವರ್ಷಗಳಲ್ಲಿ ಪತ್ರಕರ್ತರ ಮೇಲೆ ನಡೆದಿರುವ ದಾಳಿಗಳು ಹಲವು. ಹಲವರು ಬಲಿಯಾಗಿ ಹೋಗಿರುವುದೂ ಇದೆ. ಮೊನ್ನೆ ಮತ್ತೆ ಪತ್ರಕರ್ತರೊಬ್ಬರ ಮೇಲೆ ಮಹಾರಾಷ್ಟ್ರದ ಪುಣೆಯಲ್ಲಿ ದಾಳಿ ನಡೆದಿದೆ. ಅದೃಷ್ಟವಶಾತ್ ಆ ಪತ್ರಕರ್ತ ಕೂದಲೆಳೆ ಅಂತರದಲ್ಲಿ ಬಚಾವಾಗಿದ್ದಾರೆ.

ಅವರು ಹಿರಿಯ ಮರಾಠಿ ಪತ್ರಕರ್ತ ನಿಖಿಲ್ ವಾಗ್ಲೆ. ನಿಮಗೆ ನೆಪಿರಬಹುದು. ಕಳೆದ ವರ್ಷ ಕೂಡ ಮಹಾರಾಷ್ಟ್ರದಲ್ಲಿ ಒಬ್ಬ ಪತ್ರಕರ್ತನನ್ನು ಕಾರು ಗುದ್ದಿಸಿ ಕೊಲ್ಲಲಾಗಿತ್ತು. ಶಶಿಕಾಂತ್ ವಾರಿಶೆ ಎಂಬ ಪತ್ರಕರ್ತ ಬರೆದ ಒಂದು ವರದಿಯೇ ಅವರಿಗೆ ಮಾರಣಾಂತಿಕವಾಗಿ ಪರಿಣಮಿಸಿತ್ತು.

ರತ್ನಗಿರಿ ರಿಫೈನರಿಯನ್ನು ವಿರೋಧಿಸುತ್ತಿರುವ ಸ್ಥಳೀಯರನ್ನು ಬೆದರಿಸುತ್ತಿರುವ ಕ್ರಿಮಿನಲ್ ವ್ಯಕ್ತಿಯೊಬ್ಬನ ಫೋಟೋ ಪ್ರಧಾನಿ ಹಾಗೂ ಮುಖ್ಯ ಮಂತ್ರಿಯ ಫೋಟೋ ಜೊತೆ ಬ್ಯಾನರ್ ನಲ್ಲಿದೆ ಎಂದು ಶಶಿಕಾಂತ್ ವರದಿ ಮಾಡಿದ್ದರು.

ಅದೇ ವ್ಯಕ್ತಿ ಎಸ್ ಯು ವಿ ಯಲ್ಲಿ ಬಂದು ಅವರಿಗೆ ಡಿಕ್ಕಿ ಹೊಡೆದು ಎಳೆದುಕೊಂಡೇ ಹೋಗಿದ್ದ. ಸತ್ಯ ಬರೆದ ತಪ್ಪಿಗೆ ಶಶಿಕಾಂತ್ ಪ್ರಾಣ ಕಳೆದುಕೊಂಡಿದ್ದರು.

 

ಮೊನ್ನೆಯ ದಾಳಿ ನಡೆದಿರುವುದು ಬಿಜೆಪಿಯವರಿಂದ. ಬಿಜೆಪಿ ಹಿರಿಯ ನಾಯಕ ಎಲ್‌ಕೆ ಅಡ್ವಾಣಿ ಅವರಿಗೆ ಮೋದಿ ಸರ್ಕಾರ ದೇಶದ ಅತ್ಯುನ್ನತ ನಾಗರಿಕ ಗೌರವ ಭಾರತ ರತ್ನ ಘೋಷಿಸಿದ್ದನ್ನು ಪತ್ರಕರ್ತ ನಿಖಿಲ್ ವಾಗ್ಲೆ ಟೀಕಿಸಿದ್ದರು. ಇದರಿಂದಾಗಿ ಬಿಜೆಪಿ ಕಾರ್ಯಕರ್ತರು ಈ ಕೃತ್ಯ ಎಸಗಿದ್ದು, ಹಲವು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ನಿಷೇಧಾಜ್ಞೆ ಉಲ್ಲಂಘಿಸಿದ್ದಾರೆಂದು ಆರೋಪಿಸಿ ವಾಗ್ಲೆ ವಿರುದ್ಧವೂ ಪ್ರಕರಣ ದಾಖಲಿಸಲಾಗಿದೆ.

ರಾಷ್ಟ್ರ ಸೇವಾದಳ ಆಯೋಜಿಸಿದ್ದ ನಿರ್ಭಯ್ ಬನೋ ಕಾರ್ಯಕ್ರಮಕ್ಕೆ ನಿಖಿಲ್ ವಾಗ್ಲೆ, ಅಸೀಮ್ ಸರೋಡೆ ಮತ್ತು ವಿಶ್ವಂಭರ ಚೌಧರಿ ಪೊಲೀಸ್ ರಕ್ಷಣೆಯಲ್ಲಿ ಪ್ರಯಾಣಿಸುತ್ತಿದ್ದಾಗಲೇ ಕಾರಿನ ಮೇಲೆ ಬಿಜೆಪಿ ಕಾರ್ಯಕರ್ತರು ಶಾಯಿ ಎರಚಿ ಕಾರಿನ ವಿಂಡ್‌ಸ್ಕ್ರೀನ್ ಒಡೆದು ಹಾಕಿದ್ದರು.

ನಿಖಿಲ್ ವಾಗ್ಲೆ ಹೇಳೋ ಹಾಗೆ, ಹೇಗೆ ಅವತ್ತು ಅಲ್ಲಿ ಮತ್ತೊಬ್ಬ ಪತ್ರಕರ್ತನನ್ನು ಮುಗಿಸಿಬಿಡುವ ಷಡ್ಯಂತ್ರ ನಡೆಯಿತು? ಆ ಸ್ಥಳದಲ್ಲಿ ನಡೆದದ್ದು ಏನು? ಆ ವಿವರಗಳು ನಿಜಕ್ಕೂ ಆತಂಕ ಹುಟ್ಟಿಸುತ್ತವೆ. ನ್ಯೂಸ್ ಲಾಂಡ್ರಿ ವರದಿ ಪ್ರಕಾರ, ಕಾರ್ಯಕ್ರಮಕ್ಕೆ ಹೋಗದಂತೆ ವಾಗ್ಲೆ ಮನವೊಲಿಸಲು ಪುಣೆ ಪೊಲೀಸರು ಅನಧಿಕೃತವಾಗಿ ನಾಲ್ಕು ಗಂಟೆಗಳ ಕಾಲ ವಶಕ್ಕೆ ಪಡೆದಿದ್ದರು.

ವಾಗ್ಲೆ ಮೇಲೆ ದಾಳಿ ನಡೆಯಲಿದೆ ಎನ್ನುವುದು ಪೊಲಿಸರಿಗೆ ಚೆನ್ನಾಗಿಯೇ ತಿಳಿದಿತ್ತಾದರೂ, ವಾಗ್ಲೆಗೆ ಸರಿಯಾದ ರಕ್ಷಣೆ ಕೊಡುವಲ್ಲಿ ಪೊಲೀಸರು ವಿಫಲರಾಗಿದ್ದರು. ತಮ್ಮ ವೃತ್ತಿಜೀವನದಲ್ಲಿ ಆರು ಬಾರಿ ದಾಳಿಗೆ ಒಳಗಾಗಿ ಪಾರಾಗಿರುವ ವಾಗ್ಲೆ, ಮೊನ್ನೆಯ ಘಟನೆಯಿಂದ ಮಾತ್ರ ತೀವ್ರ ಆಘಾತಗೊಂಡಿದ್ದಾರೆ. ಆ ಸನ್ನಿವೇಶವನ್ನು ಮರೆಯಲಾರದಷ್ಟು ಆಘಾತಗೊಂಡಿರುವ ಬಗ್ಗೆ ವರದಿ ಉಲ್ಲೇಖಿಸಿದೆ.

ಅಲ್ಲಿ ಏನೇನಾಯಿತು ಎಂಬುದು ಮತ್ತು ಅದಕ್ಕೂ ಮುಂಚಿನ ವಿದ್ಯಮಾನಗಳನ್ನು ಗಮನಿಸುವುದಾದರೆ,

ಫೆಬ್ರವರಿ 4 - ಅಡ್ವಾಣಿಯವರಿಗೆ ಭಾರತ ರತ್ನ ಘೋಷಿಸಿದ್ದನ್ನು ಟೀಕಿಸಿ ವಾಗ್ಲೆ ಎಕ್ಸ್ನಲ್ಲಿ ಪೋಸ್ಟ್ ಹಾಕಿದ್ದರು.

ಫೆಬ್ರವರಿ 6 – ವಾಗ್ಲೆ ವಿರುದ್ಧ ಬಿಜೆಪಿ ನಾಯಕ ಸುನೀಲ್ ದಿಯೋಧರ್ ಪೊಲೀಸ್ ದೂರು.

ಫೆಬ್ರವರಿ 9 – ಪುಣೆಯಲ್ಲಿ ನಿರ್ಭಯ್ ಬನೋ ಕಾರ್ಯಕ್ರಮ ನಿಗದಿಯಾಗಿತ್ತು. ಮಾನವ ಹಕ್ಕುಗಳ ವಕೀಲ ಅಸಿಮ್ ಸರೋಡೆ, ಸಾಮಾಜಿಕ ಕಾರ್ಯಕರ್ತ ವಿಶ್ವಂಭರ್ ಚೌಧರಿ, ವಾಗ್ಲೆ ಮೊದಲಾದವರು ಪ್ರಮುಖ ಭಾಷಣಕಾರರಾಗಿದ್ದರು.

ಎನ್‌ಸಿಪಿ ಮತ್ತು ಶಿವಸೇನೆಯ (ಯುಬಿಟಿ) ನಾಯಕರು ಕೂಡ ಭಾಗವಹಿಸಿದ್ದರು.

ಫೆಬ್ರವರಿ 9 – ಬೆಳಗ್ಗೆ ದಿಯೋಧರ್ ದೂರಿನ ಆಧಾರದ ಮೇಲೆ ವಿಶ್ರಾಮ್ ಬಾಗ್ ಪೊಲೀಸ್ ಠಾಣೆಯಲ್ಲಿ ವಾಗ್ಲೆ ವಿರುದ್ಧ ಎಫ್‌ಐಆರ್.

ಅಂದು ಸಂಜೆ 5 ಗಂಟೆಯಿಂದಲೇ ಕಾರ್ಯಕ್ರಮ ನಡೆಯುತ್ತಿದ್ದ ಸಭಾಂಗಣದ ಹೊರಗೆ ಜನಸಾಗರವೇ ಇತ್ತು. ಅವರಲ್ಲಿ ಬಿಜೆಪಿ ಕಾರ್ಯಕರ್ತರು, ಕಾರ್ಯಕ್ರಮದ ಬೆಂಬಲಿಗರು ಮತ್ತು ವಿರೋಧ ಪಕ್ಷದ ಕಾರ್ಯಕರ್ತರು ಕೂಡ ಇದ್ದರು.

ಸಂಜೆ 6 ಗಂಟೆಗೆ ಕಾರ್ಯಕ್ರಮ ಆರಂಭ. ಮಾರ್ಗಮಧ್ಯೆ ದಾಳಿಗೆ ಒಳಗಾದ ವಾಗ್ಲೆ ಮತ್ತಿತರರು ಕಾರ್ಯಕ್ರಮ ಸ್ಥಳ ಮುಟ್ಟಿದ್ದು ರಾತ್ರಿ 7.30ರ ನಂತರ.

ಅದಕ್ಕೂ ಮೊದಲು, ಮುಂಚಿನ ದಿನವೇ ಮುಂಬೈನಿಂದ ಪುಣೆಗೆ ಬಂದಿದ್ದ ವಾಗ್ಲೆ ಕಾರ್ಯಕ್ರಮಕ್ಕೆ ಒಟ್ಟಿಗೇ ಹೋಗಲು ಸರೋಡೆ ಅವರ ಮನೆಗೆ ತೆರಳಿದ್ದರು. ಸರೋಡೆ ಅವರಿಗೆ ಪೊಲೀಸ್ ಕಮಿಷನರ್ ಕಚೇರಿ ಮತ್ತು ಹೆಚ್ಚುವರಿ ಪೊಲೀಸ್ ಕಮಿಷನರ್ ಕಚೇರಿಯಿಂದ ಕರೆಗಳು ಬಂದವು. ವಾಗ್ಲೆ ಕಾರ್ಯಕ್ರಮಕ್ಕೆ ಹೋಗುವಂತಿಲ್ಲ ಎಂದು ಪೊಲಿಸರಿಂದ ಸೂಚನೆ ಬಂದಿತ್ತು.

ಮಧ್ಯಾಹ್ನ 3 ಗಂಟೆಗೆ ಇಬ್ಬರು ಎಸಿಪಿಗಳು, ಮೂವರು ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್‌ಗಳು, ಕೆಲವು ಸಬ್ ಇನ್ಸ್‌ಪೆಕ್ಟರ್‌ಗಳು ಸೇರಿ ಪೊಲೀಸರ ದೊಡ್ಡ  ಗುಂಪು ಸರೋಡೆ ಮನೆಗೆ ಬಂತು. ಪೊಲೀಸ್ ಅಧಿಕಾರಿಗಳು ಸರೋಡೆ ಮನೆಗೆ ಬಂದರೆ, 30-40ರಷ್ಟು ಪೊಲೀಸರು ಮನೆಯ ಬಳಿ ಕೆಳಗೆ ಇದ್ದರು.

ಬಿಜೆಪಿ ಕಾರ್ಯಕರ್ತರು ಹಲ್ಲೆಗೆ ಯೋಜಿಸಿದ್ದು, ವಾಗ್ಲೆ ಕಾರ್ಯಕ್ರಮಕ್ಕೆ ಹೋಗಕೂಡದೆಂದು ಪೊಲೀಸರು ತಡೆದರು. ಪೊಲೀಸರು ತಮ್ಮನ್ನು ಒಂದು ರೀತಿಯಲ್ಲಿ ಗೃಹಬಂಧನದಲ್ಲಿಟ್ಟ ಹಾಗಿತ್ತು ಎಂದು ವಾಗ್ಲೆ ಆ ಸನ್ನಿವೇಶದ ಬಗ್ಗೆ ಹೇಳಿದ್ದಾರೆ. ತಾನು ಕಾರ್ಯಕ್ರಮಕ್ಕೆ ಹೋಗುವಂತಿಲ್ಲ ಎಂದು ಲಿಖಿತವಾಗಿ ಕೊಡಲು ಹೇಳಿದ್ದಕ್ಕೆ ಪೊಲೀಸರು ಒಪ್ಪಲಿಲ್ಲ ಎಂದಿದ್ದಾರೆ ವಾಗ್ಲೆ.

ರಕ್ಷಣೆ ನೀಡುವುದು ಪೊಲೀಸರ ಕರ್ತವ್ಯವಾಗಿತ್ತು. ಅವರು ರಕ್ಷಣೆ ಕೊಡದಿದ್ದರೂ ಕಾರ್ಯಕ್ರಮಕ್ಕೆ ಹೋಗುತ್ತಿದ್ದೆವು. ನಮ್ಮನ್ನು ಬಂಧಿಸಲು 40 ಮಂದಿ ಪೊಲೀಸರಿದ್ದರೆ, ದಾಳಿಗೆ ತಯಾರಾಗಿ ನಿಂತಿದ್ದವರನ್ನು ಹಾಗೇ ಬಿಟ್ಟಿದ್ದರು. ಗೂಂಡಾಗಳನ್ನು ಬಂಧಿಸುವ ಬದಲು ನಮ್ಮನ್ನು ತಡೆಯುತ್ತಿದ್ದರು ಎಂಬುದು ಸರೋಡೆ ತಕರಾರು.

ಕಡೆಗೂ ಕಾರ್ಯಕ್ರಮಕ್ಕೆ ಹೊರಟಾಗ, ಐದಾರು ಜನ ಪೊಲೀಸರಷ್ಟೇ ಅವರನ್ನು ಹಿಂಬಾಲಿಸಿದ್ದರು. ದಾರಿಯಲ್ಲಿ ಒಮ್ಮೆಯಲ್ಲ, ನಾಲ್ಕು ಬಾರಿ ಅವರ ಕಾರಿನ ಮೇಲೆ ದಾಳಿಗಳಾದವು. ಮೊದಲ ದಾಳಿ ಪ್ರಭಾತ್ ರಸ್ತೆಯಲ್ಲಿರುವ ದೇಹತಿ ರೆಸ್ಟೋರೆಂಟ್ ಬಳಿ ನಡೆಯಿತು.

ಬಿಜೆಪಿ ಕಾರ್ಯಕರ್ತರು ಕಾರಿನ ಮೇಲೆ ಕಲ್ಲು ತೂರಾಟ ನಡೆಸಿದರು. ಹೇಗೋ ಓಡಿಸಿಕೊಂಡು ಹೋದರೆ ಮುಂದೆ ಶೈಲರ್ ಮಾಮಾ ಚೌಕ್ ತಲುಪಿದಾಗ ದೊಡ್ಡ ಗುಂಪೇ ಸೇರಿತ್ತು. ಪೊಲೀಸರು ಅವರನ್ನು ಚದುರಿಸಲು ಪ್ರಯತ್ನಿಸಿದರು. ಆದರೆ ಗುಂಪು ವಾಹನದ ಮೇಲೆ ದಾಳಿ ಮಾಡಿತು ಗುಂಪೊಂದು ಮೊಟ್ಟೆ ಎಸೆಯಿತು ಮತ್ತು ಶಾಯಿ ಎರಚಿತು.  

ಅವರು ಗಾಜಿನ ಮೇಲೆ ಬಡಿಯುತ್ತಿದ್ದರು. ಕೆಲವರು ಬಾನೆಟ್ ಮೇಲೆ ಹತ್ತಿದರು. 8ರಿಂದ 10 ನಿಮಿಷ ಅದು ನಡೆಯಿತು. ಬಾಬಾ ಚೌಕ್‌ಗೆ ತೆರಳಿದಾಗ ಅಲ್ಲಿ ಗುಂಪೊಂದು ಕಲ್ಲು ಮತ್ತು ಮೊಟ್ಟೆಗಳನ್ನು ತೂರಿತು. ಎಡಭಾಗದ ಕಿಟಕಿಯ ಗಾಜು ಒಡೆಯಿತು. ನಂತರ ಮಾರ್ಗ ಬದಲಿಸಿ ಹೋದಾಗ ಅಲ್ಲಿಯೂ ಮತ್ತೊಂದು ದೊಡ್ಡ ಗುಂಪು ಕಾರಿಗೆ ಅಡ್ಡ ನಿಂತಿತ್ತು. ಕಾರಿನ ವಿಂಡ್‌ಶೀಲ್ಡ್ ಅನ್ನು ಮುರಿಯಲು ಯತ್ನಿಸಿದ್ದರು. ಗುಂಪನ್ನು ನಿಯಂತ್ರಿಸಲು ಪೊಲೀಸರಿಗೆ ಸಾಧ್ಯವಾಗಲಿಲ್ಲ. ಮಾರ್ಗ ಬದಲಿಸಿ ಹೋದರೂ ಅದರ ಬಗ್ಗೆಯೂ ಅವರಿಗೆ ತಿಳಿದದ್ದು ಹೇಗೆ ಎಂಬುದು ಅಚ್ಚರಿಯ ವಿಷಯವಾಗಿತ್ತು.

ಅದು ಭಯಾನಕ ಸ್ಥಿತಿಯಾಗಿತ್ತು. ಜನಸಮೂಹ ನಮ್ಮನ್ನು ಕೊಲ್ಲಬೇಕು ಎಂಬಂತೆ ದಾಳಿ ನಡೆಸುತ್ತಿತ್ತು. ಆ 25-30 ನಿಮಿಷಗಳು ಅಪಾಯಕಾರಿ ಎನ್ನಿಸಿದ್ದವು. ಪೊಲೀಸರು ಮೂಕಪ್ರೇಕ್ಷಕರಾಗಿದ್ದರು ಎಂದು ವಾಗ್ಲೆ ವಿವರಿಸಿದ್ದಾರೆ.

45 ವರ್ಷಗಳ ಪತ್ರಿಕೋದ್ಯಮದಲ್ಲಿ ನಾನು ಅನುಭವಿಸಿದ ಅತ್ಯಂತ ಭಯಾನಕ ಘಟನೆ ಇದು. ಈ ಹಿಂದೆ ಶಿವಸೇನೆ ಮತ್ತು ಬಿಜೆಪಿಯಿಂದ ನನ್ನ ಮೇಲೆ ಹಲ್ಲೆ ನಡೆದಿದೆ ಆದರೆ ನಾನು ಈ ರೀತಿಯ ಅನುಭವವನ್ನು ಎಂದಿಗೂ ಅನುಭವಿಸಿಲ್ಲ. ನನ್ನನ್ನು ಕಾರಿನಿಂದ ಕೆಳಗಿಳಿಸಿ ಎಂದು ಗುಂಪು ಕೂಗುತ್ತಿತ್ತು ಎಂದು ವಾಗ್ಲೆ ಆ ಸನ್ನಿವೇಶವನ್ನು ನೆನೆದಿದ್ದಾರೆ.

ಮೊದಲು ಕಾರಿನ ಗಾಜಿಗೆ ಶಾಯಿ ಎರಚಲಾಯಿತು. ನಂತರ ಕಲ್ಲು ಇತ್ಯಾದಿಗಳನ್ನು ಬಳಸಿ ವಿಂಡ್ ಶೀಲ್ಡ್ ಒಡೆಯಲು ಯತ್ನಿಸಿದ್ದರು.

ಆ ಹೊತ್ತಲ್ಲೇ ಇದರ ಬಗ್ಗೆ ತಿಳಿದುಕೊಂಡ ಎನ್ಸಿಪಿ ನಾಯಕ ಪ್ರಶಾಂತ್ ಜಗತಾಪ್ ತಮ್ಮ ಪಕ್ಷದ ಕಾರ್ಯಕರ್ತರನ್ನು ರಕ್ಷಣೆಗಾಗಿ ಕಳಿಸಿದ್ದರು.

ಪೊಲೀಸರು ಖಂಡಿತವಾಗಿಯೂ ಬಿಜೆಪಿಯೊಂದಿಗೆ ಕೈಜೋಡಿಸಿದ್ದಾರೆ ಎಂಬುದು ವಾಗ್ಲೆ ಆರೋಪ.

ಕಾರ್ಯಕ್ರಮಕ್ಕೆ ಹೋಗುವಾಗ ಮುಂದೆ ಮತ್ತು ಹಿಂದೆ ವಾಹನಗಳಲ್ಲು ಇರಿಸಿ ರಕ್ಷಣೆ ನೀಡುವಂತೆ ಕೇಳಿಕೊಂಡಿದ್ದರೂ ಪೊಲೀಸರು ಅದನ್ನು ಮಾಡಲಿಲ್ಲ.  ಜನಸಮೂಹ ತುಂಬಾ ಉಗ್ರವಾಗಿತ್ತು. ಹಿಂಸಾತ್ಮಕವಾಗಿತ್ತು. ಅದರಿಂದ ಪಾರಾದದ್ದೇ ಹೆಚ್ಚು ಎಂದಿದ್ದಾರೆ.

ಆ 70-80 ಜನರ ಗುಂಪಿನ ಎದುರು 5-6 ಪೊಲೀಸರಷ್ಟೇ ರಕ್ಷಣೆಗೆಂದು ಇದ್ದದ್ದು.

ಇಷ್ಟೆಲ್ಲದರ ಬಳಿಕ ವಾಗ್ಲೆ ವಿರುದ್ಧ ಎರಡನೇ ಎಫ್‌ಐಆರ್ ದಾಖಲಿಸಲಾಗಿರುವ ಬಗ್ಗೆ ವರದಿಯಾಗಿದೆ.

ಕಾರ್ಯಕ್ರಮಕ್ಕೆ ಅನುಮತಿ ನೀಡಲಾಗಿರಲಿಲ್ಲ. ಆದರೆ ಅವರು ಸೂಚನೆ ಉಲ್ಲಂಘಿಸಿದ್ದಾರೆ. ಹೀಗಾಗಿ ಅವರ ಮೇಲೆ ಎಫ್‌ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆನ್ನಲಾಗಿದೆ. ಈ ಇಡೀ ವಿದ್ಯಮಾನವೇ ಪೊಲೀಸರ ನದರಿನಡಿಯೇ ನಡೆದಿದೆ.

ದಾಳಿಯಾಗಲಿರುವ ವಿಚಾರ ಸ್ಪಷ್ಟವಾಗಿ ಗೊತ್ತಿದ್ದರೂ, ದಾಳಿಗೆ ಕಾದಿದ್ದವರು ಯಾರೆಂಬುದು ಗೊತ್ತಿದ್ದರೂ ಪೊಲೀಸರು ಅವರ ವಿರುದ್ಧ ಕ್ರಮಕ್ಕೆ ಮುಂದಾಗದೆ, ವಾಗ್ಲೆಯವರನ್ನು ವಶದಲ್ಲಿಟ್ಟುಕೊಂಡಿದ್ದರೆಂಬುದು ನಿಜಕ್ಕೂ ಅಚ್ಚರಿ ಮೂಡಿಸುತ್ತದೆ. ಕಡೆಗೂ ಅವರು ಕಾರ್ಯಕ್ರಮಕ್ಕೆ ಹೊರಟಾಗ ಅವರನ್ನು ರಕ್ಷಿಸುವ ನಿಟ್ಟಿನಲ್ಲಿಯೂ ಪೊಲೀಸರು ತೀರಾ ನಿರ್ಲಕ್ಷ್ಯ ವಹಿಸಿದ್ದರು.

ದಾರಿಯಲ್ಲಿ ನಾಲ್ಕು ಕಡೆ ನಡೆದ ದಾಳಿಗಳು ಪೊಲೀಸರಿಗೆ ಅನಿರೀಕ್ಷಿತವೇನೂ ಆಗಿರಲಿಲ್ಲ. ಹಾಗಿರುವಾಗ ಅಷ್ಟೊಂದು ಸಂಖ್ಯೆಯಲ್ಲಿ ಜನ ಸೇರಿರುವುದರ ಬಗ್ಗೆ ಗೊತ್ತಿದ್ದರೂ, ಮೂಕಪ್ರೇಕ್ಷಕರಂತೆ ನಿಲ್ಲಲು 5-6 ಪೊಲೀಸರಷ್ಟೇ ಜೊತೆಗೆ ಹೊರಟಿದ್ದು ವಿಚಿತ್ರವಾಗಿದೆ.

ದಾಳಿ ಯೋಜನೆಯ ಭಾಗವಾಗಿ ಪೊಲೀಸರೂ ಪಾತ್ರ ವಹಿಸಿದ್ದರೆಂಬುದನ್ನು ಇದು ಸಾಬೀತು ಮಾಡುತ್ತದೆ.ಬಿಜೆಪಿ ಪಾಲುದಾರಿಕೆಯ ಸರ್ಕಾರವಿರುವ ಮಹಾರಾಷ್ಟ್ರದಲ್ಲಿ ಅವರದೇ ಮಂದಿ ಹೀಗೆ ಪತ್ರಕರ್ತನ ಮೇಲೆ ದಾಳಿ ನಡೆಸುತ್ತಾರೆ, ಕೈಗೆ ಸಿಕ್ಕರೆ ಮುಗಿಸಿಯೇ ಬಿಡುವ ಮಟ್ಟಕ್ಕೆ ಪ್ರತಾಪ ಮೆರೆಯುತ್ತಾರೆ, ಅದು ಕೂಡ ಪೊಲೀಸರ ಎದುರಿನಲ್ಲಿಯೇ ಎಂದರೆ ಏನರ್ಥ?

ಪೊಲೀಸರಿಗೆ ಸುಳಿವುಗಳಿದ್ದೇ ಹೀಗೆ ಪತ್ರಕರ್ತನ ಮೇಲೆ ದಾಳಿಯಾಗುತ್ತದೆ ಎಂದರೆ ರಕ್ಷಿಸಬೇಕಾದವರು ಯಾರು? ಅಥವಾ ಬಿಜೆಪಿಯ ಭಾಗವಾಗಿ ಪೊಲೀಸರು ಕೂಡ ರಕ್ಷಣೆಗೆ ಬದಲು, ಮುಗಿಸುವ ಹುನ್ನಾರದ ಭಾಗವಾಗಿ ನಿಂತುಬಿಡುತ್ತಾರೆಯೆ?ನಮ್ಮ ದೇಶ ಈಗ ವಿಶ್ವ ಪತ್ರಿಕಾ ಸ್ವಾತಂತ್ರ್ಯದ ಸೂಚ್ಯಂಕದಲ್ಲಿ ಪಟ್ಟಿಯಲ್ಲಿರುವ ಒಟ್ಟು 180 ರಾಷ್ಟ್ರಗಳ ಪೈಕಿ 161ನೇ ಸ್ಥಾನಕ್ಕೆ ತಲುಪಿಬಿಟ್ಟಿದೆ. ಕಳೆದ ಕೆಲವು ವರ್ಷಗಳಿಂದ ಪ್ರತಿ ವರ್ಷ ಭಾರತ ಈ ಪಟ್ಟಿಯಲ್ಲಿ ಕುಸಿಯುತ್ತಲೇ ಇದೆ.

ಪತ್ರಕರ್ತರ ಪಾಲಿಗೆ ಅತ್ಯಂತ ಗಂಭೀರ ಸ್ಥಿತಿಯಿರುವ 31 ರಾಷ್ಟ್ರಗಳನ್ನು ಗುರುತಿಸಿದ್ದು, ಭಾರತವೂ ಈ ಗುಂಪಿನಲ್ಲಿ ಸೇರಿದೆ. ಇದಕ್ಕಿಂತಲೂ ಕೆಟ್ಟ ಸುದ್ದಿಯೆಂದರೆ, ಪತ್ರಕರ್ತರಿಗೆ ಸುರಕ್ಷತೆಯ ವಿಭಾಗದಲ್ಲಿ ಭಾರತ 180 ದೇಶಗಳ ಪೈಕಿ 172 ನೇ ಸ್ಥಾನಕ್ಕೆ ತಲುಪಿದೆ.

ಅಂದರೆ ಇಡೀ ವಿಶ್ವದಲ್ಲಿ ಪತ್ರಕರ್ತರ ಸುರಕ್ಷತೆ ವಿಷಯದಲ್ಲಿ ಭಾರತಕ್ಕಿಂತ ಕೆಟ್ಟ ಸ್ಥಿತಿಯಿರುವ ದೇಶಗಳು ಕೇವಲ ಎಂಟು ಮಾತ್ರ. ಹಗಲು ರಾತ್ರಿ ಸರಕಾರದ, ಪ್ರಧಾನಿಯ ಭಟ್ಟಂಗಿತನ ಮಾಡುವ ಆಂಕರ್ ಗಳು ಮೆರೆಯುತ್ತಿರುವ ಈ ಕಾಲದಲ್ಲಿ ನಿಜವಾದ ಪತ್ರಕರ್ತರು ತಲೆ ಮರೆಸಿಕೊಂಡು ಓಡಾಡುವ ಸ್ಥಿತಿ ಎದುರಾಗಿದೆ. ಇಂತಹ ಸ್ಥಿತಿ ನಿರ್ಮಾಣವಾಗಿರುವ ಭಾರತವನ್ನು ಮದರ್ ಆಫ್ ಡೆಮಾಕ್ರಸಿ ಅಂತ ಹೇಳೋದಾದ್ರೂ ಹೇಗೆ ?

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!