ಈ ಸರಕಾರಕ್ಕೆ ಅಶೋಕ್ ರೈ ಬೇಕು, ಬಿ ಆರ್ ಪಾಟೀಲ್ ಬೇಡ ಏಕೆ ?

Update: 2023-12-08 12:36 GMT

ಬಿ ಆರ್ ಪಾಟೀಲ್

ಎಲ್ಲರ ಮನೆ ದೋಸೆಯೂ ತೂತೇ ಅನ್ನೋ ಹಳೇ ಗಾದೆಮಾತನ್ನು ಇವತ್ತಿನ ರಾಜಕಾರಣಕ್ಕೆ ಅನ್ವಯಿಸಿದರೆ, ಕಾಂಗ್ರೆಸ್ ಕೂಡ ಜನರಲ್ಲಿ ಭ್ರಮನಿರಸನ ಮೂಡಿಸ್ತಿದೆಯೆ ಅಂತ ಅನುಮಾನ ಬರ್ತಿದೆ. ಅಥವಾ ಹಾಗೆ ಜನರಲ್ಲಿ ಭಾವನೆ ಬರೋ ಹಾಗೆ ಕಾಂಗ್ರೆಸಿನೊಳಗಿನ ಕಲಹ, ತಳಮಳಗಳನ್ನು ವಿರೋಧಿಗಳು ರಾಜಕೀಯವಾಗಿ ಬಳಸಿಕೊಳ್ಳೋಕೆ ಅವಕಾಶವಾಗಿದೆ.

ಬಿಜೆಪಿ ಮೇಲಿನ ಬೇಸರದಿಂದಲೇ ಅನೇಕರು ಕಾಂಗ್ರೆಸ್ಗೆ​ ಈ ಬಾರಿ ವೋಟು ಕೊಟ್ಟು ಗೆಲ್ಲಿಸಿದರು. ​ಭರ್ಜರಿ ಬಹುಮತದಿಂದ ಗೆದ್ದ ಕಾಂಗ್ರೆಸ್ ಕೂಡ ಅಧಿಕಾರ ಸಿಕ್ಕ ಕೂಡಲೇ ಬಲವುಳ್ಳವರನ್ನೇ ನೆಚ್ಚಿ ಏನೂ ಮಾತನಾಡಲಾರದ ಸಜ್ಜನ ಮುಖಂಡರನ್ನು ಬದಿಗೆ ಸರಿಸಿತೆ​ ?.

ಪಕ್ಷದೊಳಗಿನ ಹಿರಿಯರನ್ನು, ಅದರಲ್ಲೂ ಪ್ರಾಮಾಣಿಕ ರಾಜಕಾರಣ ಮಾಡಿಕೊಂಡು ಬಂದವರನ್ನು, ಸೈದ್ಧಾಂತಿಕ ಬದ್ಧತೆ ಮತ್ತು ಘನತೆಯೊಂದಿಗೆ ರಾಜಕೀಯದಲ್ಲಿರುವ ತಮ್ಮ ಪಕ್ಷದ ಪ್ರಮುಖರನ್ನು​, ಅನುಭವಿಗಳನ್ನು ಕಾಂಗ್ರೆಸ್ ​ವರಿಷ್ಠರು ಕಡೆಗಣಿಸಿದರೆ? .

ಈಗ ಕಾಂಗ್ರೆಸ್ಸಿನ ಹಿರಿಯ ನಾಯಕ, ಆಳಂದ ಶಾಸಕ ಬಿ ಆರ್ ಪಾಟೀಲ್ ಪತ್ರದಿಂದ ಕಾಂಗ್ರೆಸ್ನೊಳಗೆ ಉಂಟಾಗಿರುವ ತಳಮಳ ಏನನ್ನು ಬಿಂಬಿಸ್ತಾ ಇದೆ?. ಪಾಟೀಲ್ ಮಾತ್ರವಲ್ಲದೆ, ಹಲವರು ಪಕ್ಷದ ನಾಯಕರ ವಿರುದ್ಧ ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿರೋದು ಉಂಟು ಮಾಡಬಹುದಾದ ಪರಿಣಾಮಗಳು ಏನು?. ಯಾಕೆ ಸಿದ್ದರಾಮಯ್ಯನವರಂಥ ಸಮಾಜವಾದಿ ಹಿನ್ನೆಲೆಯುಳ್ಳವರ ನಾಯಕತ್ವದಲ್ಲೂ ಬಿ ಆರ್ ಪಾಟೀಲ್ ಅವರಂಥ ಪ್ರಾಮಾಣಿಕ, ದಕ್ಷ ಮತ್ತು ಅನುಭವಿ ನಾಯಕ ಬೇಸರಗೊಳ್ಳಬೇಕಾದ ಸ್ಥಿತಿಯಿದೆ?.

​ಎರಡನೇ ಬಾರಿ ಸಿಎಂ ಆಗಿರುವ ಸಿದ್ದರಾಮಯ್ಯನವರ ಮೇಲೆ ಇರಬಹುದಾದ ಒತ್ತಡಗಳೇನಿರಬಹುದು?. ಲೋಕಸಭೆ ಚುನಾವಣೆ ಹತ್ತಿರವಾಗಿರೋ ಹೊತ್ತಲ್ಲಿ ಕಾಂಗ್ರೆಸ್ ಒಳಗಿನ ಹುಳುಕುಗಳನ್ನು ವಿರೋಧ ಪಕ್ಷಗಳು ಹೇಗೆಲ್ಲ ಬಳಸಿಕೊಳ್ಳಬಹುದು?. ಈಗಿನ ವಿದ್ಯಮಾನದ ಬಗ್ಗೆ ಮಾತಾಡೋಕ್ಕೆ ಮೊದಲು, ಎರಡು ತಿಂಗಳ ಹಿಂದೆ ವಾರ್ತಾಭಾರತಿಗೆ ನೀಡಿದ್ದ ಸಂದರ್ಶನದಲ್ಲಿ ಬಿ ಆರ್ ಪಾಟೀಲರು ಹೇಳಿದ್ದ ಕೆಲವು ಮಾತುಗಳನ್ನು ಗಮನಿಸೋಣ.

​"ನಮ್ಮ ಅಸಮಾಧಾನ ಅಧಿಕಾರಕ್ಕಾಗಿ ಅಲ್ಲ. ಕೆಲವು ಮಂತ್ರಿಗ​ಳ ವರ್ತನೆ ಮತ್ತು ನಡವಳಿಕೆ ಬಗ್ಗೆ ನಮ್ಮ ಬೇಸರ. ಬಹುಶಃ ಅದು ಅನುಭವದ ಕೊರತೆ ಇರಬಹುದು. ಅಥವಾ ನಮ್ಮ ಹಿನ್ನೆಲೆ ಗೊತ್ತಿಲ್ಲದೆ ಇರಬಹುದು. ಅಥವಾ ದುಡ್ಡಿನ ಅಹಂಕಾರದಿಂದ ಗೆದ್ದವರಿಗೆ ತಮಗೆ ಬೇರೆಯವರೇಕೆ ಬೇಕು ಎಂಬ ಭಾವನೆ ಇರಬಹುದು.​"

ನಿಜ. ಇಂಥದೊಂದು ಅಸಮಾಧಾನ ವ್ಯಕ್ತಪಡಿಸಿ ಅವರೂ ಸೇರಿದಂತೆ ಕೆಲವು ಶಾಸಕರು ಈ ಹಿಂದೆಯೂ ಪತ್ರ ಬರೆದಿದ್ದರು. ಅದು ಮಾಧ್ಯಮಗಳಿಗೆ ಸಿಕ್ಕಿ ದೊಡ್ಡ ಸುದ್ದಿಯೇ ಆಗಿಬಿಟ್ಟಿತ್ತು. ಅವರನ್ನೆಲ್ಲ ಸಿದ್ದರಾಮಯ್ಯ ಕರೆದು ಮಾತನಾಡಿಸಿದ್ದಾರೆ ಎಂದೂ ಹೇಳಲಾಗಿತ್ತು.

ಇವತ್ತಿನ ದೌಲತ್ತಿನ ರಾಜಕಾರಣದಲ್ಲಿ ತಮ್ಮಂಥವರು ಲೆಕ್ಕಕ್ಕಿಲ್ಲದಂತಾಗಿರುವುದರ ಬಗ್ಗೆ ಬಿ ಆರ್ ಪಾಟೀಲ್ ಅವರಿಗೆ ಬೇಸರವಿರೋದು ಅವರ ಮಾತುಗಳಿಂದಲೇ ಗೊತ್ತಾಗುತ್ತದೆ.

​ಸಿದ್ದರಾಮಯ್ಯನವರ ನಾಯಕತ್ವ ಇರುವಾಗಲೂ ಸೈದ್ಧಾಂತಕ ಬದ್ಧತೆಯ ರಾಜಕಾರಣವೇ ಅಪ್ರಸ್ತುತ ಆಗ್ತಿದೆಯಾ ಅನ್ನೋ ತಳಮಳ ಅದು. ಈಗ ಮತ್ತೊಮ್ಮೆ ಬಿ ಆರ್ ಪಾಟೀಲ್​ ಅವರ ಬೇಸರ, ಬೇಗುದಿ ಭುಗಿಲೆದ್ದಿದೆ. ಅವರು ಮತ್ತೆ ಮುಖ್ಯಮಂತ್ರಿಗೆ ಪತ್ರ ಬರೆದಿರೋ ವಿಚಾರ ಸುದ್ದಿಯಾಗಿದೆ.

ಅಗತ್ಯ ಬಿದ್ದರೆ ರಾಜೀನಾಮೆ ಕೊಡೋಕ್ಕೂ ರೆಡಿ ಎಂದೂ ಅವರು ಪತ್ರದಲ್ಲಿ ಹೇಳಿದ್ದಾರೆ.

ಅವರು ಹಾಗೆ ಹೇಳಿದ್ದರೆ ಅದು ಖಂಡಿತ ಥ್ರೆಟ್ ಮಾಡಬೇಕು ಅನ್ನೋ ಉದ್ದೇಶದ್ದಾಗಿರಲಿಕ್ಕಿಲ್ಲ. ಬದಲಾಗಿ ಅಷ್ಟು ಮಟ್ಟಿಗೆ ಅವರು ನೊಂದಿದ್ದಾರೆ ಎಂ​ದೇ ಅರ್ಥೈಸಬಹುದು. ಬಹಿರಂಗವಾಗಿಯೇ ಪಾಟೀಲ್ ಸಿಡಿದೆದ್ದಿರೋದು ಸಚಿವರುಗಳಾದ ಪ್ರಿಯಾಂಕ್ ಖರ್ಗೆ ಮತ್ತು ಕೃಷ್ಣ ಬೈರೇಗೌಡ ವಿರುದ್ಧ. ಇದೇ ವಿಚಾರವಾಗಿ ಅವರು ಸಿದ್ದರಾಮಯ್ಯನವರಿಗೂ ಪತ್ರ ಬರೆದಿದ್ದಾರೆ.

ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡೋ ನಿರ್ಧಾರಕ್ಕೆ ಬಂದಿರೋದಾಗಿಯೂ ಹೇಳಿದ್ದಾರೆ. ಕೆ​ ಆರ್‌​ ಐ​ ಡಿ​ ಎಲ್‌ ಕಾಮಗಾರಿಗಳನ್ನು ಲಂಚ ಪಡೆದು ನೀಡಿದ್ದೇನೆ ಅಂತ ಸಚಿವರು ತಮ್ಮ ಮೇಲೆ ಆರೋಪ ಮಾಡ್ತಿದ್ದಾರೆ ಅನ್ನೋದು ಅವರ ಆಕ್ರೋಶ.

ಕೃಷ್ಣ ಬೈರೇಗೌಡರು ಸದನದಲ್ಲಿ ಅಂದು ಆಡಿದ್ದ ಮಾತು ನನ್ನ ಮೇಲೆ ಅನುಮಾನ ಬರೋದಕ್ಕೆ ಕಾರಣವಾಗಿದೆ. ಹೀಗಾಗಿ ಈ ಬಗ್ಗೆ ತನಿಖೆ ನಡೆಸಿ, ನನ್ನನ್ನು ಆರೋಪ ಮುಕ್ತ ಗೊಳಿಸಿ, ಇಲ್ದೆ ಇದ್ರೆ ಆರೋಪ ಹೊತ್ತು ಬೆಳಗಾವಿ ಅಧಿವೇಶನಕ್ಕೆ ಬರಲು ಆಗಲ್ಲ. ಒಂದ್ವೇಳೆ ಬಂದ್ರೆ ಆರೋಪ ಒಪ್ಪಿಕೊಂಡ ಹಾಗಾಗುತ್ತದೆ ಅಂತ ಸಿಎಂಗೆ ಬರೆದಿರೋ ಪತ್ರದಲ್ಲಿ ಬಿ.ಆರ್.ಪಾಟೀಲ್ ಹೇಳಿದ್ದಾರೆ. .

ಬಿ ಆರ್ ಪಾಟೀಲ್ ಆಕ್ರೋಶಕ್ಕೆ ಕೃಷ್ಣ ಬೈರೇಗೌಡ ಯಾವುದೇ ಪ್ರತಿಕ್ರಿಯೆ ಕೊಡೋಕ್ಕೆ ಒಪ್ಪಿಲ್ಲ. ಅದನ್ನು ಸಿದ್ದರಾಮಯ್ಯ ಅವರೇ ಬಗೆಹರಿಸ್ತಾರೆ ಅಂತ ಹೇಳಿ ಸುಮ್ಮನಾಗಿದ್ದಾರೆ. ಈ ಬೆಳವಣಿಗೆ ಬಳಿಕ ಪ್ರತಿಕ್ರಿಯಿಸಿರೋ ಸಿಎಂ ​ಸಿದ್ದರಾಮಯ್ಯ, ತಾವು ​ಬಿ ಆರ್ ಪಾಟೀಲ್ ಜೊತೆ ಮಾತಾಡಿರೋದಾಗಿ ಹೇಳಿದ್ದಾರೆ.

​ನಿನ್ನೆ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಮುಕ್ಕಾಲು ಗಂಟೆ ಮಾತಾಡಿದ ಬಳಿಕ ನನಗೆ ಸಮಾಧಾನ ಆಗಿದೆ. ಸಿದ್ದರಾಮಯ್ಯನವರು ಎಲ್ಲ ಸಮಸ್ಯೆ ಬಗೆಹರಿಸ್ತಾರೆ. ಅಧಿವೇಶನದಲ್ಲಿ ಪಾಲ್ಗೊಳ್ಳುತ್ತೇನೆ ಎಂದು ಹೇಳಿದ್ದಾರೆ ಬಿ ಆರ್ ಪಾಟೀಲ್. ಆದರೆ, ಈಗ ಪ್ರಶ್ನೆ ಇರೋದು, ಇದು ನಿಜವಾಗಿಯೂ ಅವರನ್ನು, ಅವರ ಹಾಗೆ ಬೇಸರದಲ್ಲಿರೋ ಇನ್ನೂ ಅನೇಕ ಶಾಸಕರನ್ನು ಬರೀ ಸಮಾಧಾನಗೊಳಿಸಿ ಮುಗಿಸಿಬಿಡೋ ವಿಚಾರ ಮಾತ್ರವೆ ಅನ್ನೋದು.

ಏನೋ ಒಂದು ಹೇಳಿ ಅವರನ್ನು ಸುಮ್ಮನಿರಿಸುವುದು ಎಲ್ಲವನ್ನೂ ಬಗೆಹರಿಸಿದಂತೆ ಆಗುತ್ತದೆಯೆ?. ನಿಜವಾಗಿಯೂ ಅರ್ಹರಾಗಿರುವ​, ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿರುವ ಅಂಥವರನ್ನು ಬದಿಗಿಟ್ಟು ಸರ್ಕಾರ ರಚಿಸಿರೋದು. ಈಗಲೂ ಅದನ್ನೇ ಮುಂದುವರಿಸುವ ಧೋರಣೆ ತೋರಿಸುತ್ತಿರೋದು, ಸದ್ಯಕ್ಕೆ ಆತಂಕ ನಿವಾರಿಸುವ ರಾಜಕಾರಣವೆ?.

ಯಾಕೆಂದರೆ, ಬಿ ಆರ್ ಪಾಟೀಲ್ ಅವರ ಜಾತ್ಯತೀತ ಹಿನ್ನೆಲೆ, ಅವರೊಬ್ಬ ಕಟ್ಟಾ ಕಾಂಗ್ರೆಸಿಗರಾಗಿರೋದು, ಅವರ ಸೈದ್ಧಾಂತಿಕ ಬದ್ಧತೆ, ಅವರು ನಿಷ್ಠ, ದಕ್ಷ, ಅನುಭವೀ ನಾಯಕ ಆಗಿರೋದು ಎನ್ನವನ್ನೂ ಗಮನಿಸಿದಾಗ, ಅಂಥವರಿಗೆ ಕಾಂಗ್ರೆಸ್ ಸಚಿವ ಸ್ಥಾನ ಕೊಡಲು ಸಾಧ್ಯ ಆಗದೇ ಇದ್ದುದು ದೊಡ್ಡ ವೈಫಲ್ಯವಲ್ಲವೆ?

ಮತ್ತು ಈಗಲೂ ಅದನ್ನು ಸರಿಪಡಿಸಿಕೊಳ್ಳುವ ಇರಾದೆ ಕಾಂಗ್ರೆಸ್ ನಾಯಕರಿಗೆ ಇದ್ದಂತಿಲ್ಲವೆ?. ಬಿ ಆರ್ ಪಾಟೀಲ್ ರಾಜಕೀಯಕ್ಕೆ ಬಂದಿದ್ದೇ ಹೋರಾಟಗಳ ಮೂಲಕ. ತುರ್ತು ಪರಿಸ್ಥಿತಿ ವಿರುದ್ಧವೂ ದನಿಯೆತ್ತಿ ಜೈಲು ಸೇರಿದ್ದವರು ಅವರು. ಸಾಮಾಜಿಕ ಕಾರ್ಯಕರ್ತರಾದ ಮೇಧಾ ಪಾಟ್ಕರ್‌, ಜಲತಜ್ಞ ರಾಜೇಂದ್ರ ಸಿಂಗ್‌ ಅಂಥ ಹಲವರ ಜೊತೆ ನಿಕಟ ಒಡನಾಟದಲ್ಲಿದ್ದವರು.

ಇವತ್ತಿಗೂ ಹೋರಾಟಗಳಲ್ಲಿ ತೊಡಗಿಸಿಕೊಂಡಿರೋ ಅವರು, ಕೇಂದ್ರ ಕೃಷಿ ಕಾಯ್ದೆ ವಿರುದ್ದ ದೆಹಲಿಯಲ್ಲಿ ನಡೆದ ರೈತ ಚಳವಳಿಯಲ್ಲೂ ಭಾಗವಹಿಸಿದ್ದರು. ವಕೀಲರಾಗಿದ್ದ ಪಾಟೀಲ್ ರಾಜಕೀಯಕ್ಕೆ ಬಂದದ್ದು ಎಸ್ ಆರ್ ಬೊಮ್ಮಾಯಿಯವರ ಒತ್ತಾಯದಿಂದ. ಜನತಾ ಪರಿವಾರದಿಂದ ರಾಜಕಾರಣ ಆರಂಭಿಸಿದ ಪಾಟೀಲರು ಇವತ್ತು ನಿಷ್ಠಾವಂತ ಕಾಂಗ್ರೆಸಿಗ.

ಇಂಥ​ ಬದ್ಧತೆಯ ನಾಯಕರೊಬ್ಬರು ಪಕ್ಷದ ನಾಯಕರ ಬಗ್ಗೆ ಬೇಸರ ವ್ಯಕ್ತಪಡಿಸ್ತಿದ್ಧಾರೆ ಎಂದರೆ, ಅದು ಪಕ್ಷದೊಳಗೆ ಖಂಡಿತವಾಗಿಯೂ ಏನೋ ಸರಿಯಿಲ್ಲ ಎಂಬ ಸಂದೇಶವನ್ನೇ ಕೊಡುತ್ತದೆ. ಕಾಂಗ್ರೆಸ್ ಏನೇ ಮಾಡಿದರೂ, ಒಂದು ಸಣ್ಣ ಕೊಂಕು ಕಂಡರೂ ವಿರೋಧ ಪಕ್ಷಗಳು ಕಾಯುತ್ತಲೇ ಇವೆ ಅನ್ನೋದು ಗೊತ್ತಿಲ್ಲದೆ ಇರೋ ವಿಚಾರವಲ್ಲ.

ಈಗಲೂ ಆದೇ ಆಗ್ತಿದೆ. ಕಾಂಗ್ರೆಸ್ ಒಡೆದ ಮನೆಯಾಗಿದೆ. ಯಾವಾಗ ಬೆಂಕಿ ಹೊತ್ತಿಕೊಂಡು ಉರಿಯುತ್ತೊ ಗೊತ್ತಿಲ್ಲ. ಕಾಂಗ್ರೆಸ್ ಸರ್ಕಾರದ ವಿರುದ್ಧ ಶಾಸಕರೇ ದಂಗೆ ಎದ್ದಿದ್ದಾರೆ ಎಂದು ವಿರೋಧ ಪಕ್ಷ ನಾಯಕ ಆರ್ ಅಶೋಕ್ ಹೇಳಿದ್ದಾರೆ. ಇನ್ನೊಂದೆಡೆ ಜೆಡಿಎಸ್ ನಾಯಕ ಕುಮಾರಸ್ವಾಮಿ, ಆಡಳಿತ ಪಕ್ಷದ ಶಾಸಕರ ಸ್ಥಿತಿಯೇ ಹೀಗಾದರೆ ಇನ್ನು ಜನರ ಸ್ಥಿತಿ ಏನಿರಬಹುದು ಅಂತ ಕೆಣಕಿದ್ದಾರೆ.

ಎರಡೂ ಪಕ್ಷಗಳು ಅಧಿವೇಶನದ ಹೊತ್ತಿಗೆ ಕಾಂಗ್ರೆಸ್ ಮೇಲೆ ಮುಗಿಬೀಳಲು ತಯಾರಿ ನಡೆಸುತ್ತಿವೆ. ಹಿಂದೆ ಕೂಡ ಬಿ ಆರ್ ಪಾಟೀಲರು ಮಂತ್ರಿ ಸ್ಥಾನ ಸಿಗದ ಬಗ್ಗೆ ಬೇಸರ ಹೊರಹಾಕಿದ್ದಿತ್ತು. ಸಿದ್ದರಾಮಯ್ಯ ಭರವಸೆ ನೀಡಿದ್ದರು. ಅದನ್ನು ನಂಬಿ ಕೆಟ್ಟೆ ಅಂತ ಅವರು ಹೇಳಿದ್ದು ವರದಿಯಾಗಿತ್ತು. ನಾನು ನಂಬಿದವರೇ ನನ್ನನ್ನು ಕೈಬಿಟ್ಟರು. ನಾನು ಎಂದೂ ಜೀವನದಲ್ಲಿ ಕೋಮುವಾದಿ ಪಕ್ಷದ ಜೊತೆಗೆ ಹೋಗಲ್ಲ. ಕಡೇವರೆಗೂ ಹೋರಾಟ ಮಾಡುತ್ತೇನೆ. ಜಿಲ್ಲೆಯಲ್ಲಿ ಕಿರಿಯರಿಗೆ ಸಚಿವ ಸ್ಥಾನ ಸಿಕ್ಕಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ಹಿರಿಯ, ಅರ್ಹ ಮತ್ತು ಸೈದ್ಧಾಂತಿಕ ಬದ್ಧತೆಯುಳ್ಳ ನಾಯಕರೊಬ್ಬರನ್ನು ಕಾಂಗ್ರೆಸ್ ಏಕೆ ಹೀಗೆ ಕಡೆಗಣಿಸುತ್ತಿದೆ?. ಪಕ್ಷಕ್ಕೆ ಬೆನ್ನಲ್ಲಿ ಇರಿದು ಹೋದವರನ್ನೇ ಮತ್ತೆ ಕರೆದು ತರಲು, ಸ್ಥಾನ ಕೊಡಲು ತಯಾರಾಗಿಯೇ ಇರುವ ಕಾಂಗ್ರೆಸ್, ಬಿ ಆರ್ ಪಾಟೀಲರಂಥ ರಾಜಕಾರಣಿಗೆ ಏಕೆ ಸಿಗಬೇಕಾದ ಮನ್ನಣೆ ಕೊಡದೇ ಉಳಿದಿದೆ?

ಪಾಟೀಲ್ ಜೊತೆ ಮಾತನಾಡಿ ಎಲ್ಲ ಬಗೆಹರಿಸುತ್ತೇನೆ ಎಂದು ಹೇಳುವ ಸಿದ್ದರಾಮಯ್ಯನವರು, ಬಗೆಹರಿಸುವ ರಾಜಕಾರಣ ಬದಿಗಿಟ್ಟು, ಬಿ ಆರ್ ಪಾಟೀಲ್ ಅಂಥವರಿಗೆ ಸಲ್ಲಬೇಕಿರುವ ಗೌರವವನ್ನು ನೀಡಲು ಮನಸ್ಸು ಮಾಡಬೇಕಿದೆ. ​ಅಶೋಕ್ ರೈ ಅಂತಹ ಬಿಜೆಪಿ, ಆರೆಸ್ಸೆಸ್ ಮನಸ್ಥಿತಿಯ ನಾಯಕರು ಕಾಂಗ್ರೆಸ್ ಶಾಸಕರಾಗಿ ಈ ಸರಕಾರದಲ್ಲಿ ಪ್ರಭಾವ ಮೆರೆಯುತ್ತಿರುವಾಗ ಬಿ ಆರ್ ಪಾಟೀಲ್ ಅಂತಹ ನಾಯಕರಿಗೆ ಸೂಕ್ತ ಸ್ಥಾನಮಾನ ಕೊಡದೇ ಇರೋದು ಸ್ವತಃ ಕಾಂಗ್ರೆಸ್ ತನಗೆ ತಾನೇ ಮಾಡಿಕೊಳ್ಳುವ ಅವಮಾನವಾಗಿದೆ. ಆ ಪಕ್ಷದ ಪಾಲಿನ ಬಹುದೊಡ್ಡ ನಷ್ಟವೂ ಆಗಿದೆ.

ಪ್ರಭಾವಿಗಳ ಮಕ್ಕಳಿಗೆ ಈಗ ಯಾವುದೇ ಪಕ್ಷದಲ್ಲಿ ಸುಲಭವಾಗಿ ಟಿಕೆಟ್ ಸಿಗುತ್ತದೆ, ಗೆದ್ದರೆ ಸಚಿವ ಸ್ಥಾನವೂ ಆದ್ಯತೆ ಮೇಲೆ ಸಿಗುತ್ತದೆ. ಆ ಪ್ರಕ್ರಿಯೆಯಲ್ಲಿ ಪಕ್ಷದ ಸಿದ್ಧಾಂತಕ್ಕೆ ಬದ್ಧರಾಗಿ ದಶಕಗಳ ರಾಜಕಾರಣ ಮಾಡಿಕೊಂಡು ಬಂದ ಹಿರಿಯರು ಹಾಗು ನಿಷ್ಠಾವಂತ ಕಾರ್ಯಕರ್ತರು ಬದಿಗೆ ಸರಿಸಲ್ಪಡುತ್ತಾರೆ. ಅವರನ್ನು ಕೇವಲ ಚುನಾವಣೆಗೆ ಮಾತ್ರ ಬಳಸಿ ಬಿಸಾಡುವ ರಾಜಕಾರಣ ಮೆರೆಯುತ್ತದೆ.

ಇಂತಹ ಪಕ್ಷ ನಿಷ್ಠ ನಾಯಕರ ಅಸಮಾಧಾನ ಹಾಗು ನಿಷ್ಠಾವಂತ ಕಾರ್ಯಕರ್ತರ ನಿರಾಶೆ ಕಾಂಗ್ರೆಸ್ ನಂತಹ ಪಕ್ಷಕ್ಕೆ ಬಲುದೊಡ್ಡ ಅಪಾಯ ತಂದಿಡಲಿದೆ. ಈ ವಿಚಾರದಲ್ಲಿ ತಮ್ಮ ಮೇಲೆ ಇದ್ದಿರಬಹುದಾದ ರಾಜಕೀಯ ಒತ್ತಡಗಳನ್ನು ಎದುರಿಸಬೇಕಾಗಿ ಬಂದರೂ, ಅದನ್ನು ಎದುರಿಸುವ ಧಾರ್ಷ್ಟ್ಯ​ ಸಿದ್ದರಾಮಯ್ಯ ತೋರಿಸ​ಲೇಬೇಕಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!