ಲಡಾಖ್ ಗಾಗಿ 21 ದಿನ ಉಪವಾಸ ಕೂತ ಸೋನಮ್ ಗೆ ಪ್ರಧಾನಿ ಪ್ರತಿಕ್ರಿಯೆ ಯಾಕಿಲ್ಲ?
ತ್ರೀ ಈಡಿಯಟ್ಸ್ ಚಿತ್ರ ಯಾರಿಗೆ ಗೊತ್ತಿಲ್ಲ ಹೇಳಿ ? ಆ ಚಿತ್ರ ಇಷ್ಟವಾಗದವರೇ ಇಲ್ಲ ಎನ್ನುವಷ್ಟು ಅದು ದೇಶಾದ್ಯಂತ ಜನಪ್ರಿಯವಾಗಿತ್ತು.
ಅದರಲ್ಲಿನ ರ್ಯಾಂಚೊ ಅಥವಾ ಫು೦ಗ್ ಸುಖ್ ವಾಂಗ್ಡೂ ಎಂಬ ಹೀರೋನನ್ನು ದೇಶದ ಜನ ಇವತ್ತಿಗೂ ಮರೆತಿಲ್ಲ. ಆದರೆ ಆ ಪಾತ್ರಕ್ಕೆ ಇಷ್ಟೊಂದು ಪ್ರೀತಿ ತೋರಿಸಿದವರು ಆ ಪಾತ್ರಕ್ಕೆ ಸ್ಪೂರ್ತಿಯಾದ ರಿಯಲ್ ಹೀರೊ ಹಾಗು ಅವರ ಹೋರಾಟವನ್ನು ಮಾತ್ರ ಸಂಪೂರ್ಣ ಕಡೆಗಣಿಸಿಬಿಟ್ಟಿದ್ದಾರೆ.
ಅವರು ಇಪ್ಪತ್ತೊಂದು ದಿನಗಳಿಂದ ನಡೆಸುತ್ತಿದ್ದ ಆಮರಣ ಉಪವಾಸಕ್ಕೂ, ಅದರ ಹಿಂದಿರುವ ನೋವು, ಅವರ ಬೇಡಿಕೆ - ಇವೆಲ್ಲವುಗಳಿಗೂ ತಮಗೂ ಸಂಬಂಧವೇ ಇಲ್ಲದಂತೆ ವರ್ತಿಸಿದ್ದಾರೆ. ಭಾರತ ಸರಕಾರವಂತೂ ದೇಶದೊಳಗಿನ ಒಂದು ಪ್ರದೇಶದಲ್ಲಿ ಇಂತಹದ್ದೊಂದು ನಡೀತಿದೆ ಎಂಬುದನ್ನೇ ಪರಿಗಣಿಸಿಲ್ಲ. ಅದರ ಪ್ರಕಾರ ಲಡಾಖ್ ಕೇವಲ ರಾಜಕೀಯಕ್ಕೆ ಬಳಸಿ ಬಿಸಾಡುವ ವಿಷಯ.
ಕಾಶ್ಮೀರದ ವಿಶೇಷ ಸ್ಥಾನಮಾನ ಕಿತ್ತು ಹಾಕಿದಾಗ ಇದೇ ಲಡಾಖ್ ನ ಬಿಜೆಪಿ ಸಂಸದ ಸರಕಾರದ ಆ ನಡೆಯನ್ನು ಹೊಗಳಿ ಲಡಾಖ್ ಗೆ ನ್ಯಾಯ ಸಿಕ್ಕಿತು ಎಂದು ಸಂಸತ್ತಿನಲ್ಲಿ ಮಾಡಿದ್ದ ಭಾಷಣವನ್ನು ಪ್ರಧಾನಿ ಮೋದಿ ಪ್ರಶಂಸಿಸಿದ್ದರು. ಆದರೆ ಈಗ ಆ ಸಂಸದ ಎಲ್ಲಿದ್ದಾರೆ ? ಪ್ರಧಾನಿ ಮೋದಿ ಎಲ್ಲಿದ್ದಾರೆ ? ಲಡಾಖ್ ನ ಜನರ ಆಕ್ರೋಶ, ಆಕ್ರಂದನ, ಅಳಲಿಗೆ ಮೋದಿ ಸರಕಾರ ಹೇಗೆ ಸಂಪೂರ್ಣ ಕಿವುಡು ಹಾಗು ಕುರುಡಾಗಿದೆ ? ಇದೆಷ್ಟು ದೊಡ್ಡ ಅನ್ಯಾಯ ?
ಲಡಾಖ್‌ಗೆ ರಾಜ್ಯ ಸ್ಥಾನಮಾನ ನೀಡಬೇಕು ಮತ್ತು ಬುಡಕಟ್ಟು ಪ್ರದೇಶಗಳನ್ನು ಸಂವಿಧಾನದ ಆರನೇ ಪರಿಚ್ಛೇದದಡಿ ಸೇರಿಸಬೇಕು ಎಂಬ ಎರಡು ಪ್ರಮುಖ ವಿಚಾರಗಳೂ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಶಿಕ್ಷಣತಜ್ಞ ಸೋನಮ್ ವಾಂಗ್ಚುಕ್ ಅವರು ನಡೆಸುತ್ತಿರುವ ಉಪವಾಸ ಸತ್ಯಾಗ್ರಹ ನಿನ್ನೆ 21ನೇ ದಿನವನ್ನು ಮುಟ್ಟಿದೆ. ನಿನ್ನೆ ಅವರು ತನ್ನ ಸತ್ಯಾಗ್ರಹ ಕೊನೆಗೊಳಿಸಿದ್ದಾರೆ.
ಲಡಾಖ್ ಕುರಿತ ತಮ್ಮ ಬೇಡಿಕೆಗಳನ್ನು ಮುಂದಿಟ್ಟು ಮಾರ್ಚ್ 6ರಿಂದ ಅವರ 21 ದಿನಗಳ ಉಪವಾಸ ಸತ್ಯಾಗ್ರಹ ಶುರುವಾಗಿತ್ತು. ನಡುವೆಯೆ ಅವರ ಆರೋಗ್ಯ ಹದಗೆಡುತ್ತಿದ್ದ ಹಿನ್ನೆಲೆಯಲ್ಲಿ ಎಲ್ಲರು ಸತ್ಯಾಗ್ರಹ ಕೊನೆಗೊಳಿಸಲು ಒತ್ತಾಯಿಸುತ್ತಲೇ ಇದ್ದರು. ಆದರೆ ಮಾತಿನಂತೆ, 21 ದಿನಗಳ ವರೆಗೂ ಸತ್ಯಾಗ್ರಹ ಮುಂದುವರಿಸುವುದಾಗಿ ಹೇಳಿದ್ದ ವಾಂಗ್ಚುಕ್, ಆ ಮಾತು ಪೂರೈಸಿದ್ದಾರೆ.
ಒಂದು ಸಣ್ಣ ಬಿಡುವಿನ ಬಳಿಕ ಮತ್ತೆ ಸತ್ಯಾಗ್ರಹಕ್ಕೆ ಅಣಿಯಾಗುವುದಾಗಿಯೂ ಅವರು ಪ್ರಕಟಿಸಿದ್ದಾರೆ. ಈ ಹೋರಾಟ ಮುಂದುವರಿಯಲಿದೆ ಎಂದು ಅವರು ದೃಢವಾಗಿ ಹೇಳಿದ್ದಾರೆ. ಸೋನಮ್ ವಾಂಗ್ಚುಕ್ ಅವರೊಂದಿಗೆ ಅಲ್ಲಿನ ಜನರು ಮೈನಸ್ ಹತ್ತು ಡಿಗ್ರಿಗಿಂತ ಕಡಿಮೆ ತಾಪಮಾನದಲ್ಲಿ ಕುಳಿತು ರಾತ್ರಿಯಿಡೀ ಪ್ರತಿಭಟನೆ ನಡೆಸುತ್ತಿದ್ದರು. ತಮ್ಮ ಹೋರಾಟಕ್ಕೆ ಕೇಂದ್ರ ಸರಕಾರ ಸ್ಪಂದಿಸದಿರುವುದಕ್ಕೆ ಸೋನಮ್ ವಾಂಗ್ಚುಕ್ ಅವರು ತೀವ್ರ ನಿರಾಶರಾಗಿದ್ದಾರೆ.
ತಾನು ದಣಿದಿದ್ದೇನೆ ಎನ್ನಿಸುತ್ತಿದೆ. ದೇಹ ಸೋತು ಹೋದಂತಿದೆ. ಉಪವಾಸ ಸತ್ಯಾಗ್ರಹದ ಸಂದರ್ಭದಲ್ಲಿ ಕೇವಲ ನೀರು ಮತ್ತು ಉಪ್ಪು ಸೇವಿಸುವ ಮೂಲಕ ಬದುಕಿದ್ದೇನೆ ಎಂದು ಸೋನಮ್ ವಾಂಗ್ಚುಕ್ ಹೇಳಿದ್ದರು. ಆದರೆ ಸೋನಮ್ ವಾಂಗ್ಚುಕ್ ಅವರಿಗೆ ವ್ಯಕ್ತವಾಗುತ್ತಿರುವ ಜನಬೆಂಬಲ ಮಾತ್ರ ಅಪಾರವಾಗಿತ್ತು. ಆ ಬೆಂಬಲವೇ ಅವರು ನಂಬಿಕೆ ಕಳೆದುಕೊಳ್ಳದಂತೆ ಮಾಡಿದೆ.
ಪ್ರಮುಖ ಮಾಧ್ಯಮಗಳಲ್ಲಿ, ಚಾನಲ್ ಗಳಲ್ಲಿ ಚರ್ಚೆಯೇ ಆಗದೇ ಇರುವ ಈ ಹೋರಾಟವನ್ನು ಲಡಾಖ್ ನ ಜನರು ತಾವೇ ಮಾಧ್ಯಮದಂತಾಗಿ ದೇಶದ ಪ್ರತಿಯೊಬ್ಬರಿಗೂ ಮುಟ್ಟಿಸುತ್ತಿರುವ ಬಗ್ಗೆ ಅವರು ಕೃತಜ್ಞತೆ ಹೇಳಿದ್ದಾರೆ. ಪ್ರಧಾನಿ ಮೋದಿಗೂ, ಅಮಿತ್ ಶಾಗೂ ಅಲ್ಲದೆ ರಾಷ್ಟ್ರಪತಿಗಳಿಗೂ ಈ ವಿಚಾರ ತಲುಪುತ್ತದೆ ಎನ್ನುವ ನಂಬಿಕೆಯಿದೆ. ಅವರು ಶೀಘ್ರದಲ್ಲಿಯೇ ವಾಸ್ತವವನ್ನು ಅರ್ಥ ಮಾಡಿಕೊಳ್ಳುತ್ತಾರೆ ಮತ್ತು ನ್ಯಾಯ ನೀಡುತ್ತಾರೆ ಎಂಬ ನಂಬಿಕೆ ಈಗಲೂ ನನ್ನಲ್ಲಿದೆ ಎಂದು ವಾಂಗ್ಚುಕ್ ಹೇಳಿದ್ದಾರೆ.
ಲಡಾಖ್ ಕುರಿತ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಲು 3,000 ಜನರು ವಾಂಗ್ಚುಕ್ ಅವರೊಂದಿಗೆ ಉಪವಾಸ ಮುಂದುವರಿಸಿದ್ದರು. ಈಗ ಅವರ ಹೋರಾಟವನ್ನು ಜನರು ಮುಂದುವರಿಸಲಿದ್ದಾರೆ. ಈಗ ಕೇಂದ್ರಾಡಳಿತ ಪ್ರದೇಶ ಸ್ಥಾನಮಾನದಡಿ ಕೈಗಾರಿಕಾ ಶೋಷಣೆಯಿಂದಾಗಿ ಲಡಾಖ್ ಪರಿಸರ ವ್ಯವಸ್ಥೆ ಶಿಥಿಲಗೊಳ್ಳುವ ಬಗ್ಗೆಯೂ ಸೋನಮ್ ವಾಂಗ್ಚುಕ್ ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ವಾಂಗ್ಚುಕ್ ಹೋರಾಟ ಬೆಂಬಲಿಸಿ ಸೋಮವಾರ ಅವರೊಡನೆ 5,000 ಜನರು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಅವರಲ್ಲಿ 300 ಜನರು ಮೂರು ದಿನಗಳಿಂದ ಹತ್ತು ದಿನಗಳವರೆಗೆ ಉಪವಾಸವನ್ನು ಮುಂದುವರಿಸಲು ಸಂಕಲ್ಪ ಮಾಡಿದ್ದಾರೆ.ಜೊತೆಗೆ ದೇಶಾದ್ಯಂತ 40 ನಗರಗಳಲ್ಲಿ ಫ್ರೆಂಡ್ಸ್ ಆಫ್ ಲಡಾಖ್ ಕಾರ್ಯಕ್ರಮಗಳು ನಡೆದಿವೆ. ಸೋನಮ್ ವಾಂಗ್ಚುಕ್ ಶಿಕ್ಷಣದಲ್ಲಿನ ತಮ್ಮದೇ ಆದ ವಿಧಾನಗಳಿಗಾಗಿ ಮತ್ತು ಲಡಾಖ್ ವಲಯದಲ್ಲಿನ ಸುಸ್ಥಿರ ಅಭಿವೃದ್ಧಿ ಕುರಿತ ಕೆಲಸಗಳಿಗಾಗಿ ಹೆಸರಾದವರು.
ಲಡಾಖ್ ಗೆ ಸ್ವಾಯತ್ತತೆಯನ್ನು ಕಲ್ಪಿಸುವುದು ಮತ್ತು ಕೈಗಾರಿಕೀಕರಣದ ಪರಿಣಾಮವಾಗಿ ಹಿಮಾಲಯ ವಲಯದ ದುರ್ಬಲ ಪರಿಸರಕ್ಕೆ ಇನ್ನಷ್ಟು ಹಾನಿಯಾಗುತ್ತಿರುವುದರ ಬಗ್ಗೆ ಸಂವೇದನೆಯೇ ಇಲ್ಲದ ಸರ್ಕಾರಕ್ಕೆ ಮನವರಿಕೆ ಮಾಡಿಕೊಡುವುದು ಸೋನಮ್ ವಾಂಗ್ಚುಕ್ ಹೋರಾಟದ ಆಶಯವಾಗಿದೆ. ಸಾವಿರಾರು ಜನರು ಸೋನಮ್ ವಾಂಗ್ಚುಕ್ ಹೋರಾಟ ಬೆಂಬಲಿಸಿ ಸರದಿಯಲ್ಲಿ ಬರುತ್ತಿದ್ದರು.
ಲಡಾಖ್ ಗೆ ರಾಜ್ಯ ಸ್ಥಾನಮಾನ ಬೇಕೆಂಬುದರ ಜೊತೆಗೇ, ಬುಡಕಟ್ಟು ಪ್ರದೇಶಗಳ ಸ್ವಾಯತ್ತತೆ ಮತ್ತು ನೆಲದ ರಕ್ಷಣೆಯ ಖಾತ್ರಿಯನ್ನು ನೀಡುವ 6ನೇ ಪರಿಚ್ಚೇದದಡಿ ಸೇರ್ಪಡೆಗಾಗಿ ಸೋನಮ್ ವಾಂಗ್ಚುಕ್ ಒತ್ತಾಯಿಸುತ್ತಿದ್ದಾರೆ. ಲಡಾಖ್ ನ ನೆಲ ದಕ್ಷಿಣದಲ್ಲಿ ಭಾರೀ ಕೈಗಾರಿಕಾ ಸ್ಥಾವರಗಳಿಗಾಗಿ ಪ್ರಮುಖ ಗೋಮಾಳ ಭೂಮಿ ನಾಶವಾಗುತ್ತಿದ್ದರೆ, ಉತ್ತರದಲ್ಲಿ ಚೀನಾ ಅತಿಕ್ರಮಣಕ್ಕೆ ತುತ್ತಾಗುತ್ತಿದೆ ಎಂಬುದು ಸೋನಮ್ ವಾಂಗ್ಚುಕ್ ಸಂಕಟವಾಗಿದೆ. ಈ ವಾಸ್ತವದ ಬಗ್ಗೆ ತಿಳಿಸುವುದಕ್ಕೆಂದೇ 10,000 ಲಡಾಖಿ ಕುರಿಗಾಹಿಗಳು ಮತ್ತು ರೈತರ ಜೊತೆ ಗಡಿಯುದ್ದಕ್ಕೂ ಮೆರವಣಿಗೆ ನಡೆಸುವುದಾಗಿ ವಾಂಗ್ಚುಕ್ ಅವರು ಹೇಳಿದ್ದಾರೆ.
ಲೇಹ್ ಮತ್ತು ಕಾರ್ಗಿಲ್ ಜಿಲ್ಲೆಗಳ ಪ್ರತ್ಯೇಕ ಲೋಕಸಭಾ ಸ್ಥಾನಗಳು, ವಿಶೇಷ ಭೂಮಿ ಮತ್ತು ಉದ್ಯೋಗ ಹಕ್ಕುಗಳು ಮತ್ತು ಲೋಕಸೇವಾ ಆಯೋಗದ ಸ್ಥಾಪನೆ ಕೂಡ ಸೋನಮ್ ವಾಂಗ್ಚುಕ್ ಬೇಡಿಕೆಗಳಲ್ಲಿ ಸೇರಿವೆ. ಕೈಗಾರಿಕೀಕರಣದಿಂದ ಲಡಾಖ್ ಪರಿಸರಕ್ಕೆ ಆಗುತ್ತಿರುವ ಹಾನಿಯ ಬಗ್ಗೆ ಅವರು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರ ಜೊತೆ ಯಾವ ಸಮಾಲೋಚನೆಯನ್ನೂ ನಡೆಸದೆ ಸರ್ಕಾರ 13 ಗಿಗಾವ್ಯಾಟ್ ಯೋಜನೆಯನ್ನು ಇಲ್ಲಿ ಹೇರುತ್ತಿರುವುದರ ಬಗ್ಗೆ ಅವರು ಟೀಕಿಸಿದ್ದಾರೆ. ಆರೋಗ್ಯದ ದೃಷ್ಟಿಯಿಂದ ಸತ್ಯಾಗ್ರಹ ನಿಲ್ಲಿಸಿದರೂ ಚೇತರಿಸಿಕೊಂಡು ಮತ್ತೆ ಸತ್ಯಾಗ್ರಹಕ್ಕೆ ಇಳಿಯುವುದಾಗಿ ಅವರು ಹೇಳಿದ್ದಾರೆ. ಅದರ ನಡುವೆ ಜನರು ತಮ್ಮ ಹೋರಾಟವನ್ನು ಕೈಗೆತ್ತಿಕೊಳ್ಳುತ್ತಾರೆ ಎನ್ನುವ ಭರವಸೆ ಅವರದು.
ಮೊದಲು ಜಮ್ಮು ಕಾಶ್ಮೀರದ ಭಾಗವಾಗಿದ್ದ ಲಡಾಖ್ ಈಗ ಕೇಂದ್ರಾಳಿತ ಪ್ರದೇಶ. ವಿಧಾನಸಭೆಯಿಂದ ವಂಚಿತ. ಜಮ್ಮು ಕಾಶ್ಮೀರ ಅಸೆಂಬ್ಲಿಯಲ್ಲಿ ಲಡಾಖ್ ಅನ್ನು ಪ್ರತಿನಿಧಿಸುವ ನಾಲ್ವರು ಶಾಸಕರಿದ್ದಾರೆ. ಸದ್ಯ ಲಡಾಖ್ ಒಂದು ಲೋಕಸಭಾ ಕ್ಷೇತ್ರವನ್ನು ಮಾತ್ರ ಹೊಂದಿದೆ.
ತಾನೇ ಕೊಟ್ಟ ವಚನವನ್ನು ಉಳಿಸಿಕೊಳ್ಳುವಂತೆ ಮೋದಿ ಸರ್ಕಾರಕ್ಕೆ ನೆನಪಿಸಬೇಕಾಗಿ ಬಂದಿರುವುದಕ್ಕೆ ವಾಂಗ್ಚುಕ್ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ರಾಮನ ಆದರ್ಶ ಪಾಲಿಸುವುದಾಗಿ ಹೇಳುವವರು ಲಡಾಖ್ ಜನರಿಗೆ ನೀಡಿದ ಭರವಸೆಗಳನ್ನು ಪೂರೈಸಿ ಎಂದು ಅವರು ಮೋದಿ ಮತ್ತು ಅಮಿತ್ ಶಾಗೆ ಮನವಿ ಮಾಡಿದ್ಧಾರೆ.
ಈ 21 ದಿನಗಳಲ್ಲಿ ಲೇಹ್ ಮತ್ತು ಕಾರ್ಗಿಲ್‌ನಲ್ಲಿ ಸುಮಾರು 60,000 ಜನರು ವಾಂಗ್ಚುಕ್ ಅವರ ಸತ್ಯಾಗ್ರಹ ಬೆಂಬಲಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು. ಆದರೆ ಮೋದಿ ಸರ್ಕಾರ ಮಾತ್ರ ಕಣ್ಣುಗಳೂ ಇಲ್ಲ, ಕಿವಿಗಳೂ ಇಲ್ಲ ಎನ್ನುವಂತೆ ವರ್ತಿಸುತ್ತಿದೆ.
ಸರ್ಕಾರದ ಈ ಅಲಕ್ಷ್ಯವನ್ನು ಕಂಡೇ ವಾಂಗ್ಚುಕ್ ಕಟುವಾಗಿ ಮಾತನಾಡಿದ್ದಾರೆ. ಅಮಿತ್ ಶಾ ತಾವು ಜೈನರಲ್ಲ, ಹಿಂದೂ ವೈಷ್ಣವ ಎಂದು ಹೇಳಿಕೊಳ್ಳುತ್ತಾರೆ. 'ವೈಷ್ಣವನಾದವನು ಇತರರ ನೋವನ್ನು ತಿಳಿದಿರುತ್ತಾನೆ, ಇತರರಿಗೆ ಒಳ್ಳೆಯದನ್ನು ಮಾಡುತ್ತಾನೆಯೇ ಹೊರತು ತನ್ನ ಮನಸ್ಸಿನಲ್ಲಿ ಅಹಂಕಾರಕ್ಕೆ ಅವಕಾಶ ಕೊಡುವುದಿಲ್ಲ. ಎಂದು ವಾಂಗ್ಚುಕ್ ಹೇಳಿದ್ದಾರೆ.
ಇನ್ನು ರಾಮನ ಭಕ್ತ ಮೋದಿ. ರಾಮ ತನ್ನ ವಾಗ್ದಾನವನ್ನು ಮುರಿಯಬಾರದೆಂದು 14 ವರ್ಷಗಳ ಕಾಲ ವನವಾಸದಲ್ಲಿದ್ದ. ಮೋದಿ ನಿಜವಾಗಿಯೂ ರಾಮನ ಆದರ್ಶ ಪಾಲನೆ ಮಾಡುವವರೇ ಆಗಿದ್ದರೆ ಲಡಾಖ್ ಜನರಿಗೆ ನೀಡಿದ್ದ ಭರವಸೆ ಈಡೇರಿಸಲಿ ಮತ್ತು ತಾನು ರಾಮನ ನಿಜ ಭಕ್ತ ಎಂದು ಸಾಬೀತು ಮಾಡಲಿ ಎಂದಿದ್ದಾರೆ.
ಲಡಾಖ್ ನೆಲದ ಕಳವಳ ಸೋನಮ್ ವಾಂಗ್ಚುಕ್ ಅವರ ಹೋರಾಟದ ಮೂಲಕ, ಅವರ ಹೋರಾಟಕ್ಕೆ ಸೇರಿಕೊಳ್ಳುತ್ತಿರುವ ಸಾವಿರ ಸಾವಿರ ಜನರ ಬೆಂಬಲದ ಮೂಲಕ ವ್ಯಕ್ತವಾಗುತ್ತಿದೆ. ಅವತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಮೋದಿ ಸರ್ಕಾರ ಕಿತ್ತುಹಾಕಿದಾಗ ಇದೇ ಲಡಾಖ್ನ ಬಿಜೆಪಿ ಸಂಸದ ತ್ಸೆರಿಂಗ್ ನಮಾಗ್ಯನ್ ಬಿಜೆಪಿ ಸರ್ಕಾರದ ಕ್ರಮವನ್ನು ಹಾಡಿ ಹೊಗಳಿದ್ದೇನು? ಆತನ ಬಗ್ಗೆ ಮೋದಿ ಪ್ರಶಂಸೆ ಮಾಡಿದ್ದೇನು?
ಆದರೆ ಆ ಬಿಜೆಪಿ ಸಂಸದ ಅವತ್ತು ಹೇಳಿದ್ದಂತೆ ಲಡಾಖ್ ಗೆ ನ್ಯಾಯ ಸಿಕ್ಕಿದೆಯೆ? ಮೋದಿ ಲಡಾಕ್ ಪಾಲಿಗೆ ಮಾಡಿದ್ದು ಏನು?
ಇವತ್ತು ಸೋನಮ್ ವಾಂಗ್ಚುಕ್ ಯಾಕೆ ಉಪವಾಸ ಸತ್ಯಾಗ್ರಹ ಮಾಡಬೇಕಾಗಿ ಬಂತು? ಯಾಕೆ ಸಾವಿರಾರು ಜನರು ಅವರ ಹೋರಾಟವನ್ನು ಬೆಂಬಲಿಸುತ್ತಿದ್ದಾರೆ? ಇದು ಆ ಬಿಜೆಪಿ ಸಂಸದನಿಗಾಗಲೀ ಈ ದೇಶದ ಪ್ರಧಾನಿ ಮೋದಿಗಾಗಲಿ ಅರ್ಥವಾಗುತ್ತಿದೆಯೆ?
ಏಕೆ ಲಡಾಖ್ ಸುದ್ದಿ ಮಡಿಲ ಮೀಡಿಯಾಗಳಲ್ಲಿ ಇಲ್ಲವಾಗಿದೆ? ಬಿಜೆಪಿ ರಾಜಕೀಯ, ಪ್ರಧಾನಿ ಭೇಟಿ ಮತ್ತು ಕೇಂದ್ರ ಸರ್ಕಾರದ ಜಾಹೀರಾತುಗಳಿಗೆ ಸಂಬಂಧಿಸಿದ ಸುದ್ದಿಗಳೇ ಮಡಿಲ ಮೀಡಿಯಾಗಳಿಗೆ ಮುಖ್ಯವಾಗಿ, ಪರಿಸರ ಮತ್ತು ರಾಜ್ಯದ ಹಕ್ಕುಗಳ ಪ್ರಶ್ನೆಗೆ ಸಂಬಂಧಿಸಿದ ಲಡಾಖ್‌ನಲ್ಲಿನ ಚಳವಳಿ ಲೆಕ್ಕಕ್ಕೇ ಇಲ್ಲದಂತಾಗಿರುವುದು ಏಕೆ?
ಯಾಕೆಂದರೆ, ಮೋದಿ ಸರ್ಕಾರಕ್ಕೆ ಅಹಿತ ಎನ್ನಿಸುವ ಯಾವುದೂ ಈ ಮಡಿಲ ಮೀಡಿಯಾಗಳಿಗೂ ರುಚಿಸುವುದಿಲ್ಲ.
ಹಾಗಾಗಿಯೇ, ವಾಂಗ್ಚುಕ್ ಅವರು ಎತ್ತಿರುವ ಪ್ರಶ್ನೆಗಳನ್ನು ಅಡಗಿಸಲಾಗುತ್ತಿದೆ. ಆ ನೆಪದಲ್ಲಿ ಲಡಾಖ್ ಅನ್ನು ಮಾಧ್ಯಮದಿಂದ ಕಣ್ಮರೆ ಮಾಡಲಾಗಿದೆ. ಮಾಧ್ಯಮಗಳು ತಮ್ಮ ಸುದ್ದಿಗಳನ್ನು ಎಂದಿಗೂ ತೋರಿಸುವುದಿಲ್ಲ ಎಂದು ಲಡಾಖ್ ಜನರು ಅರ್ಥಮಾಡಿಕೊಂಡಿದ್ದಾರೆ.
ಅಲ್ಲಿನ ಜನರ ಹೋರಾಟಕ್ಕೆ ಮಡಿಲ ಮಿಡಿಯಾಗಳಲ್ಲಿ ಯಥಾ ಪ್ರಕಾರ ಯಾವುದೇ ಮಹತ್ವವಿಲ್ಲ. ಮಣಿಪುರ ವಿಚಾರದಲ್ಲಿ ಕೂಡ ಹೀಗೆಯೇ ನಿರ್ಲಜ್ಜೆಯಿಂದ ಸರ್ಕಾರ ಮತ್ತು ಅದರ ಪಾದಗಳಲ್ಲಿ ಬಿದ್ದು ಹೊರಳಾಡುತ್ತಿರುವ ಮೀಡಿಯಾ ನಡೆದುಕೊಂಡಿತೆಂಬುದನ್ನು ನೊಡಿದ್ದೇವೆ.
ಮಣಿಪುರದ ಜನರ ಕಷ್ಟಗಳನ್ನು ಮೋದಿ ಹೀಗೆಯೇ ಅಲಕ್ಷಿಸಿದ್ದರು. ಅಲ್ಲಿಗೆ ಒಮ್ಮೆಯೂ ಹೋಗಲಿಲ್ಲ. ಅಲ್ಲಿನ ಜನರಿಗೆ ಸಾಂತ್ವನ ಹೇಳುವ ಮನಸ್ಸು ಮಾಡಲಿಲ್ಲ. ಅಲ್ಲಿನ ಅಭಿವೃದ್ಧಿ ಯೋಜನೆಯನ್ನು ಅನ್ಲೈನ್ ನಲ್ಲಿ ಉದ್ಧಾಟಿಸಿ ಅಲ್ಲಿನ ಜನರನ್ನು ಅವಮಾನಿಸಿದರು. ಮಣಿಪುರದ ಜನರೇನು ಅದನ್ನು ಕೇಳಿದ್ದರೆ ? ಅದನ್ನಾದರೂ ಯಾಕೆ ಮಾಡಬೇಕಿತ್ತೊ ಗೊತ್ತಿಲ್ಲ.
ಈಗ ಲಡಾಖ್ ಮೋದಿ ದೃಷ್ಟಿಯಲ್ಲಿ ಎರಡನೇ ಮಣಿಪುರವಾಗಿದೆ. ಅತ್ತ ವಾಂಗ್ಚುಕ್ ಹೋರಾಟಕ್ಕೆ ದೊಡ್ಡ ಮಟ್ಟದಲ್ಲಿ ಬೆಂಬಲ ವ್ಯಕ್ತವಾಗುತ್ತಿದೆ. ಆ ಹೋರಾಟ ಜೀವಂತವಾಗುಳಿಯುವುದಕ್ಕೆ ಜನರೇ ಜೊತೆಯಾಗುತ್ತಿದ್ದಾರೆ.
ಮೈಕೊರೆಯುವ ಚಳಿಯಲ್ಲಿಯೂ ವ್ಯಕ್ತವಾಗಿದ್ದ ಅವರ ಬದ್ಧತೆ ಅವರ ಹೋರಾಟದ ತಾಕತ್ತನ್ನು ಹೇಳುವಂತಿತ್ತು. ಆದರೆ ಮಡಿಲ ಮೀಡಿಯಾಗಳಿಗೆ ಅದು ಕಾಣಿಸಲೇ ಇಲ್ಲ. ಅವು ಪೂರ್ತಿ ಕುರುಡಾಗಿ ಹೋಗಿವೆ. ಮೋದಿ ಬಿಟ್ಟು ಬೇರೇನೂ ಕಾಣಿಸದಷ್ಟು ಭ್ರಷ್ಟ ಮತ್ತು ಲಜ್ಜೆಗೇಡಿಗಳಾಗಿಬಿಟ್ಟಿವೆ.
ಟಿವಿ ಪರದೆಗಳಲ್ಲಿ ಲಡಾಕ್ ಎಂದೂ ಇರಲೇ ಇಲ್ಲ. ಲಡಾಖ್ ಯೂನಿವರ್ಸಿಟಿಯ ವಿದ್ಯಾರ್ಥಿಗಳು ಕೂಡ ವಾಂಗ್ಚುಕ್ ಅವರನ್ನು ಅವರ ಹೋರಾಟದ ಸ್ಥಳದಲ್ಲಿಯೇ ಗೌರವಿಸಿ, ಹೋರಾಟಕ್ಕೆ ಅಷ್ಟೇ ಶಾಂತಿಯುತ ಬೆಂಬಲ ನೀಡಿದ್ದರು.
ಜನರ ಆ ದನಿಗೆ ಮೀಡಿಯಾಗಳಲ್ಲಿ ಮಾತ್ರ ಜಾಗ ಸಿಗಲಿಲ್ಲ. ಮೋದಿ ಮೋದಿ ಎಂದರೆ ಓಡಿ ಹೋಗಿ ಮಾತನಾಡಿಸುವ, ಟೀವಿ ತುಂಬ ಅದನ್ನೇ ತೋರಿಸುವ, ಮೋದಿಯನ್ನು ಹಾಡಿ ಹೊಗಳುವವರ ಸಂದರ್ಶನ ಪ್ರಸಾರ ಮಾಡಿ ಧನ್ಯತೆ ಅನುಭವಿಸುವ ಮಡಿಲ ಮೀಡಿಯಾಗಳು, ತಮ್ಮ ನೆಲ ಮತ್ತು ಪರಿಸರದ ಸಂರಕ್ಷಣೆ ಬಗ್ಗೆ ಕಳಕಳಿಯೊಂದಿಗೆ ಹೋರಾಟ ಮಾಡುತ್ತಿರುವವರಿಂದ ಮಾತ್ರ ದೂರ, ದೂರ.
ಗಾಂಧಿಯ ಹಾದಿಯಲ್ಲಿ ಅಹಿಂಸಾತ್ಮಕವಾಗಿ ಅವರು ನಡೆಸುತ್ತಿರುವ ಹೋರಾಟಕ್ಕೆ, ಮೋದಿ ಸರ್ಕಾರ ಈ ತನಕವೂ ಸ್ಪಂದಿಸಲಿಲ್ಲ. ಅತ್ಯಂತ ಶಾಂತಿಯಿಂದ, ಪ್ರೀತಿಯ ದಾರಿಯಲ್ಲಿ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಲು ಯತ್ನಿಸುತ್ತಿರುವ ತಮ್ಮ ಹೊರಾಟವನ್ನು ಸರ್ಕಾರ ಅಲಕ್ಷಿಸಿದ ಬಗ್ಗೆ ವಾಂಗ್ಚುಕ್ ಅವರಿಗೆ ಬೇಸರವಿದೆ. ಹೋರಾಟ ಬೇರೆ ಸ್ವರೂಪ ತಾಳುವುದು, ಹಿಂಸಾತ್ಮಕವಾಗುವುದು ಅವರಿಗೆ ಇಷ್ಟವಿಲ್ಲ. ಅದು ಗಡಿ ನೆಲದಲ್ಲಿ ಒಳ್ಳೆಯದಲ್ಲ ಎಂಬುದು ಅವರ ಕಳಕಳಿ.
ಅವರ ಈ ಹೋರಾಟಕ್ಕೆ ಯಾವ ರೀತಿಯಲ್ಲಿಯೂ ಸ್ಪಂದಿಸದ ಸರ್ಕಾರ, ಪ್ರತಿಭಟನೆಯ ಸ್ಥಳದಲ್ಲಿ ಸಿಸಿಟಿವಿ ಕ್ಯಾಮೆರಾದ ಕಣ್ಗಾವಲು ಮಾಡುವುದನ್ನು ಮಾತ್ರ ಮರೆತಿರಲಿಲ್ಲ. ಅವರ ಮೇಲೆ ಕಣ್ಣಿಡಲಾಗಿತ್ತು. ಇದೇಕೆ ಎಂದು ವಾಂಗ್ಚುಕ್ ಅವರು ಹೋರಾಟದ ಮೊದಲ ವಾರದಲ್ಲಿಯೇ ಅದನ್ನು ಪ್ರಶ್ನಿಸಿದ್ದರು. ತಾನೇ ಕೊಟ್ಟಿದ್ದ ಮಾತನ್ನು ಸರ್ಕಾರಕ್ಕೆ ನೆನಪಿಸಬೇಕಾದ ಸ್ಥಿತಿ ಬಂದಿದೆ. ಆದರೆ ಬಹುಶಃ ಅದಕ್ಕೆ ಆ ವಚನ ಈಡೇರಿಸುವ ಮನಸ್ಸಿಲ್ಲ, ಅದೆಲ್ಲ ಬಹುಶಃ ಚುನಾವಣೆ ಹೊತ್ತಿನ ನಾಟಕ ಮಾತ್ರ. ಈಗ ಮತ್ತೊಂದು ಚುನಾವಣೆ ಎದುರಲ್ಲಿದೆ. ಮತ್ತಷ್ಟು ಬೃಹನ್ನಾಟಕಗಳು ಬಿಜೆಪಿಯಿಂದ ನಡೆಯುತ್ತಿವೆ. ಲಡಾಖ್ ನೆಲ ಮತ್ತು ಅಲ್ಲಿನ ಜನರ ಒಡಲಾಳ ಮೋದಿ ಸರ್ಕಾರಕ್ಕೆ ಲೆಕ್ಕಕ್ಕಿಲ್ಲ.