ಶೋಭಾ ಕರಂದ್ಲಾಜೆ ಸ್ಪರ್ಧೆಗೆ ಉಡುಪಿ ಚಿಕ್ಕಮಗಳೂರು ಬಿಜೆಪಿಯಲ್ಲೇ ವಿರೋಧ ಯಾಕೆ ? | Shobha Karandlaje | CT Ravi
ಲೋಕಸಭಾ ಚುನಾವಣೆ ಸಮೀಪಿಸುತ್ತಿರುವಾಗ ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಟಿಕೆಟ್ ವಿಚಾರ ಬಿಜೆಪಿಯಲ್ಲಿ ಬಿರುಗಾಳಿ ಎಬ್ಬಿಸಿದೆ. ಹಾಲೀ ಸಂಸದೆ, ಕೇಂದ್ರ ಸಚಿವೆಯೂ ಆಗಿರುವ ಶೋಭಾ ಕರಂದ್ಲಾಜೆಗೆ ಮತ್ತೆ ಟಿಕೆಟ್ ನೀಡಬಾರದೆಂದು ಚಿಕ್ಕಮಗಳೂರು ಭಾಗದಲ್ಲಿ ಕಾರ್ಯಕರ್ತರು ಪತ್ರ ಚಳವಳಿ ನಡೆಸುತ್ತಿದ್ದಾರೆ. ಇದರ ಜೊತೆಗೆ, ವಾಟ್ಸಾಪ್ ಸ್ಟೇಟಸ್ ನಲ್ಲೂ ಶೋಭಾ ವಿರೋಧಿ ಅಭಿಯಾನ ಜೋರಾಗಿದೆ.
ಇತ್ತೀಚಿಗೆ ಉಡುಪಿಯಲ್ಲಿ ಮೀನುಗಾರ ಮುಖಂಡರ ಜೊತೆ ಶೋಭಾ ಜಟಾಪಟಿಯ ವೀಡಿಯೊ ವೈರಲ್ ಆದ ಬೆನ್ನಿಗೇ ಈ ಬೆಳವಣಿಗೆ ಚಿಕ್ಕಮಗಳೂರು ಭಾಗದಿಂದ ನಡೆದಿದೆ.
ಒಟ್ಟಾರೆ ಉಡುಪಿ ಚಿಕ್ಕಮಗಳೂರು ಎರಡೂ ಕಡೆಗಳಲ್ಲಿ ಶೋಭಾ ಸ್ಪರ್ಧೆಯನ್ನು ವಿರೋಧಿಸುವ ಬಣಗಳು ಬಿಜೆಪಿಯೊಳಗೇ ಇವೆ ಎಂಬುದು ಈಗ ಜಗಜ್ಜಾಹೀರಾಗಿದೆ.
ವಿಶೇಷ ಅಂದ್ರೆ ಈ ಪತ್ರ ಅಭಿಯಾನಕ್ಕೆ ಶೋಭಾ ಕರಂದ್ಲಾಜೆ ಮಾತ್ರವಲ್ಲ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರೂ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
"ಗಂಡಸರಲ್ಲಿ ಕೆಲವೊಂದು ವರ್ಗವಿದೆ, ಅವರಿಗೆ ದುಡ್ಡಿನ ಮದ. ಹಾಗಾಗಿ, ಅಹಂಕಾರದಿಂದ ಹೀಗೆಲ್ಲಾ ಮಾಡಿಸುತ್ತಿದ್ದಾರೆ, ಅಧಿಕಾರ ತಮ್ಮಲ್ಲೇ ಇರಬೇಕು ಎನ್ನುವ ಚಪಲ" ಎಂದು ಶೋಭಾ ಪ್ರತಿಕ್ರಿಯೆ ನೀಡಿದ್ದಾರೆ.
ಪತ್ರ ಅಭಿಯಾನದ ಬಗ್ಗೆ ಮಾತನಾಡಿದ ಯಡಿಯೂರಪ್ಪನವರು , " ಶೋಭಾ ಅವರು ಇಂತಹ ಅಭಿಯಾನಕ್ಕೆ ಜಗ್ಗಬೇಕಾಗಿಲ್ಲ, ಇದನ್ನೆಲ್ಲಾ ಯಾರು ಮಾಡಿಸುತ್ತಿದ್ದಾರೆ ಎನ್ನುವುದು ಗೊತ್ತಿದೆ. ಇದೊಂದು ಷಡ್ಯಂತ್ರದ ಭಾಗ ಎನ್ನುವುದು ಗೊತ್ತಿರುವ ವಿಚಾರ " ಎಂದು ಖಾರವಾಗಿ ಹೇಳಿದ್ದಾರೆ.
ಅಲ್ಲಿಗೆ ಈ ಬಾರಿಯೂ ಟಿಕೆಟ್ ವಿಚಾರದಲ್ಲಿ ಶೋಭಾ ಬೆನ್ನಿಗೇ ಯಡಿಯೂರಪ್ಪ ಗಟ್ಟಿಯಾಗಿ ನಿಲ್ಲುವುದು ಖಚಿತವಾಗಿದೆ.
ಸತತ ಎರಡು ಬಾರಿ ಶೋಭಾ ಕರಂದ್ಲಾಜೆಯವರು ಉಡುಪಿ - ಚಿಕ್ಕಮಗಳೂರಿನಿಂದ ಸಂಸದರಾಗಿದ್ದಾರೆ, ಕೇಂದ್ರ ಸಚಿವೆಯೂ ಆಗಿದ್ದಾರೆ. ಆದರೆ ಚಿಕ್ಕಮಗಳೂರು ಜಿಲ್ಲೆಗೆ ಇವರ ಕೊಡುಗೆ ಏನೇನೂ ಇಲ್ಲ. ಈ ಹಿನ್ನಲೆಯಲ್ಲಿ ಶೋಭಾ ಅವರಿಗೆ ದಯವಿಟ್ಟು ಟಿಕೆಟ್ ನೀಡಬಾರದು ಎಂದು ವೈರಲ್ ಆಗಿರುವ ಪತ್ರದಲ್ಲಿ ಒತ್ತಾಯಿಸಲಾಗಿದೆ. ಇದರ ಜೊತೆ ಜೊತೆಗೆ, ಉಡುಪಿ - ಚಿಕ್ಕಮಗಳೂರು ಲೋಕಸಭಾ ಕ್ಷೇತ್ರಕ್ಕೆ ಸಿ.ಟಿ.ರವಿಯವರೇ ಸೂಕ್ತ ಅಭ್ಯರ್ಥಿ, ಅವರೇ ಹಿಂದೂ ಹುಲಿ ಎಂದು ವಾಟ್ಸಾಪ್ ಸ್ಟೇಟಸ್ ಅಭಿಯಾನವೂ ನಡೆಯುತ್ತಿದೆ.
ಶೋಭಾ ವಿರೋಧಿ ಅಭಿಯಾನ ಹಾಗು ಸಿ ಟಿ ರವಿ ಪರ ಅಭಿಯಾನ ಒಟ್ಟೊಟ್ಟಿಗೆ ಶುರುವಾಗಿರುವುದರಿಂದ ಶೋಭಾ ಹೇಳಿದ ದರ್ಪದ ಗಂಡಸು ಯಾರು ಎಂಬುದು ಈಗ ದೊಡ್ಡ ಚರ್ಚೆಯ ವಿಷಯವಾಗಿದೆ.
" ಈ ಷಡ್ಯಂತ್ರದ ಹಿಂದೆ ಯಾರೆಲ್ಲಾ ಇದ್ದಾರೆ ಎನ್ನುವುದು ಸದ್ಯದಲ್ಲೇ ಗೊತ್ತಾಗಲಿದೆ. ಮೂರು ದಿನ ಕಾದು ನೋಡಿ, ಮೊದಲ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ. ಮೋದಿಯವರ ಸಂಪುಟದಲ್ಲಿ ಶೋಭಾ ಕರಂದ್ಲಾಜೆಯವರು ಉತ್ತಮ ಕೆಲಸವನ್ನು ಮಾಡಿದ್ದಾರೆ. ಈ ಬಾರಿಯೂ ಅವರಿಗೇ ಟಿಕೆಟ್, ಅವರು ಮತ್ತೆ ಚುನಾವಣೆ ಗೆಲ್ಲಲಿದ್ದಾರೆ " ಎಂದು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ.
ಶೋಭಾ ವಿರುದ್ಧ ಕ್ಷೇತ್ರದ ಜನರು ತಿರುಗಿ ಬಿದ್ದಿರುವುದು ಇದು ಮೊದಲೇನಲ್ಲ. ಅವರ ವಿರುದ್ಧ ಗೋಬ್ಯಾಕ್ ಎನ್ನುವ ಅಭಿಯಾನ ಕಳೆದ ಚುನಾವಣೆಯ ವೇಳೆಯೂ ನಡೆದಿತ್ತು
" ಗೋಬ್ಯಾಕ್ ಎನ್ನುವ ಅಭಿಯಾನ ಕಳೆದ ಚುನಾವಣೆಯ ವೇಳೆಯೂ ನಡೆದಿತ್ತು, ಇದನ್ನೆಲ್ಲಾ ಉದ್ದೇಶಪೂರ್ವಕವಾಗಿ ಯಾರು ನಡೆಸುತ್ತಿದ್ದಾರೆ ಎನ್ನುವುದು ಗೊತ್ತಿದೆ. ಹೈಕಮಾಂಡ್ ಎಲ್ಲವನ್ನೂ ನೋಡುತ್ತಿದೆ, ಸರಿಯಾದ ಪಾಠವನ್ನು ಅಂತ ಗಂಡಸರಿಗೆ ಕಲಿಸಲಿದೆ. ಇದು ಉದ್ದೇಶಪೂರ್ವಕವಾಗಿ ನಡೆಯುತ್ತಿರುವ ಕೆಲಸ. ಕಪ್ಪುಚುಕ್ಕೆಯಿಲ್ಲದೇ ರಾಜಕಾರಣ ಮಾಡಿದ್ದೇನೆ " ಎಂದು ಶೋಭಾ ಕರಂದ್ಲಾಜೆ ತಿರುಗೇಟು ನೀಡಿದ್ದಾರೆ.
ಹೈಕಮಾಂಡಿಗೆ ಕಳುಹಿಸಲಾಗಿದೆ ಎನ್ನುವ ಪತ್ರವನ್ನು ಯಾರ ಹ್ಯಾಂಡ್ ರೈಟಿಂಗ್ ನಲ್ಲಿ ಬರೆಯಲಾಗಿದೆ, ಯಾರು ಪೋಸ್ಟ್ ಮಾಡಲು ಹೇಳಿದ್ದಾರೆ, ಎಷ್ಟು ಪತ್ರವನ್ನು ಪೋಸ್ಟ್ ಮಾಡಲು ಹೇಳಿದ್ದಾರೆ, ಈ ಎಲ್ಲಾ ಮಾಹಿತಿಯನ್ನು ಹೈಕಮಾಂಡ್ ತರಿಸಿಕೊಂಡಿದೆ. ಕಾಂಗ್ರೆಸ್ ಪಕ್ಷಕ್ಕೆ ಅವರ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಆಗುತ್ತಿಲ್ಲ, ಹಾಗಾಗಿ ಬಿಜೆಪಿ ಶಾಸಕರನ್ನು ಸೆಳೆಯುವ ಕೆಲಸವನ್ನು ಮಾಡುತ್ತಿದ್ದಾರೆ ಎಂದು ಶೋಭಾ ಕರಂದ್ಲಾಜೆ ಟೀಕಿಸಿದ್ದಾರೆ.
ಯಡಿಯೂರಪ್ಪ ಹಾಗು ಸಿಟಿ ರವಿ ನಡುವೆ ವೈಮನಸ್ಸು ಹೊಸತೇನಲ್ಲ. ಕಳೆದ ವಿಧಾನ ಸಭಾ ಚುನಾವಣೆ ಸಂದರ್ಭದಲ್ಲಿ ಬಹಿರಂಗವಾಗಿಯೇ ಸಿ ಟಿ ರವಿ ಯಡಿಯೂರಪ್ಪ ಹಾಗು ಅವರ ಕುಟುಂಬದ ವಿರುದ್ಧ ಹೇಳಿಕೆ ನೀಡಿದ್ದರು. ಯಾರದ್ದೋ ಮನೆಯ ಕಿಚನ್ ನಲ್ಲಿ ಬಿಜೆಪಿ ಟಿಕೆಟ್ ನಿರ್ಧಾರ ಆಗೋದಿಲ್ಲ ಎಂದು ಕುಟುಕಿದ್ದರು. ಅದಕ್ಕೆ ವಿಜಯೇಂದ್ರ ಕೂಡ ಬಹಿರಂಗವಾಗಿಯೇ ತಿರುಗೇಟು ನೀಡಿದ್ದರು. ಕೊನೆಗೆ ಚಿಕ್ಕಮಗಳೂರಿನಲ್ಲಿ ಯಡಿಯೂರಪ್ಪ ಅವರ ಆಪ್ತ, ಬಿಜೆಪಿ ಬಿಟ್ಟು ಕಾಂಗ್ರೆಸ್ ಸೇರಿದ ಎಚ್ ಡಿ ತಮ್ಮಯ್ಯ ಅವರೆದುರು ಸಿಟಿ ರವಿ ಸೋತಿದ್ದೂ ಆಯಿತು.
ವಿಧಾನ ಸಭೆಗೆ ಹೋಗಲು ಆಗದ ಸಿ ಟಿ ರವಿ ಈಗ ಸಂಸತ್ತಿಗೆ ಹೋಗುವ ಪ್ರಯತ್ನದಲ್ಲಿದ್ದಾರೆ. ಆದರೆ ಅವರು ನೇರವಾಗಿ ನನಗೇ ಟಿಕೆಟ್ ಕೊಡಿ ಎಂದು ಕೇಳುತ್ತಿಲ್ಲ. ಈ ಬಾರಿ ಕರ್ನಾಟಕದಲ್ಲಿ ಟಿಕೆಟ್ ಹಂಚಿಕೆಯಲ್ಲಿ ಯಡಿಯೂರಪ್ಪ ಹಾಗು ವಿಜಯೇಂದ್ರ ಅವರದ್ದೇ ಕಾರುಬಾರು ನಡೆಯುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಉಡುಪಿ ಚಿಕ್ಕಮಗಳೂರು ಕ್ಷೇತ್ರದಿಂದ ಮತ್ತೆ ಶೋಭಾಗೆ ಟಿಕೆಟ್ ಕೊಡಿಸಲು ಬಿಜೆಪಿ ರಾಜ್ಯ ಘಟಕ ಉತ್ಸುಕವಾಗಿದೆ. ಸ್ವತಃ ಶೋಭಾ ಅವರೇ ಉಡುಪಿ ಚಿಕ್ಕಮಗಳೂರು ಬಿಟ್ಟು ಬೆಂಗಳೂರು ಉತ್ತರದ ಕಡೆ ಹೋಗುವ ಅಂದಾಜಿನಲ್ಲಿದ್ದರು. ಆದರೆ ಅಲ್ಲಿ ಟಿಕೆಟ್ ಸಿಗೋದು ಕಷ್ಟ ಎಂದು ಗೊತ್ತಾದ ಮೇಲೆ ಮತ್ತೆ ಉಡುಪಿ ಭೇಟಿ ಶುರು ಮಾಡಿದ್ದಾರೆ.
ಅದೇ ಚಿಕ್ಕಮಗಳೂರು ಜಿಲ್ಲೆಯಿಂದ ಪತ್ರ ಅಭಿಯಾನ ಶುರುವಾಗಿದೆ. ಶೋಭಾ ಅವರಿಂದ ಏನೂ ಕೆಲಸ ಆಗಿಲ್ಲ, ಅವರಿಗೆ ಟಿಕೆಟ್ ಬೇಡ ಅಂತ ಆಗ್ರಹ ಪತ್ರದಲ್ಲಿದೆ. ಜೊತೆಗೆ ವಾಟ್ಸ್ ಆಪ್ ಗಳಲ್ಲಿ ಸಿ ಟಿ ರವಿ ಹಿಂದೂ ಹುಲಿ, ಅವರಿಗೇ ಟಿಕೆಟ್ ಕೊಡಿ ಎಂದು ಅಭಿಯಾನವೂ ಶುರುವಾಗಿದೆ.
ಹಾಗಾಗಿ ಶೋಭಾ ಹೇಳ್ತಾ ಇರುವ ದರ್ಪದ ಗಂಡಸು ಯಾರು ಎಂಬುದು ಎಲ್ಲರೂ ಸುಲಭವಾಗಿ ಊಹೆ ಮಾಡಬಹುದಾಗಿದೆ.
ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ದ ಚಿಕ್ಕಮಗಳೂರಿನಲ್ಲಿ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಯಡಿಯೂರಪ್ಪ ಆರೋಪಿಸಿದ್ದಾರಲ್ಲಾ ಎಂದು ಸುದ್ದಿಗಾರರು ಪ್ರಶ್ನಿಸಿದಾಗ, ಸಿ ಟಿ ರವಿ “ಯಡಿಯೂರಪ್ಪ ಅವರು ನಮ್ಮ ಪಕ್ಷದ ಹಿರಿಯ ನಾಯಕರು. ಹೀಗಾಗಿ ‘ಬಾಸ್ ಈಸ್ ಆಲ್ವೇಸ್ ರೈಟ್” ಎಂದು ಹೇಳಿದ್ದಾರೆ. ಅಂದರೆ ಚುನಾವಣೆ ಹೊತ್ತಲ್ಲಿ ಮತ್ತೆ ಯಡಿಯೂರಪ್ಪ ವಿರುದ್ಧ ಹೋಗಲು ಅವರು ಸಿದ್ಧರಿಲ್ಲ.
ಅತ್ತ ಉಡುಪಿಯಲ್ಲೂ ಕಾಂಗ್ರೆಸ್ ನಿಂದ ಬಿಜೆಪಿಗೆ ಬಂದ ಮೊಗವೀರ ಸಮುದಾಯದ ಪ್ರಮೋದ್ ಮಧ್ವರಾಜ್ ಟಿಕೆಟ್ ಗಾಗಿ ಜೋರಾಗಿಯೇ ಲಾಬಿ ಮಾಡುತ್ತಿದ್ದಾರೆ. ಮೀನುಗಾರ ಮುಖಂಡರೂ ಅವರ ಬೆನ್ನಿಗೆ ನಿಂತಿದ್ದಾರೆ. ಮೊನ್ನೆ ಮೀನುಗಾರರ ಜೊತೆ ಸಭೆಯಲ್ಲೂ ಶೋಭಾ ವಿರುದ್ಧ ಮೀನುಗಾರ ಮುಖಂಡರು ಮಾತಾಡಿದ್ದಾರೆ. ನೀವು ಎರಡೆರಡು ಸರ್ತಿ ಗೆದ್ದರೂ ಇಲ್ಲಿ ನಮ್ಮ ಕೆಲಸ ಮಾಡಿಲ್ಲ ಎಂದು ತಕರಾರು ಎತ್ತಿದ್ದಾರೆ. ಶೋಭಾಗೂ ಸಿಟ್ಟು ಬಂದು ತಿರುಗೇಟು ನೀಡಿದ್ದಾರೆ.
ಅಷ್ಟಕ್ಕೂ ಮೀನುಗಾರ ಮುಖಂಡರು ಮಾಡಿರುವ ಆರೋಪವೂ ನಿರಾಧಾರ ಏನಲ್ಲ. ಕಳೆದ ಎರಡು ಅವಧಿಗೆ ಶೋಭಾ ಉಡುಪಿ ಚಿಕ್ಕಮಗಳೂರು ಸಂಸದರಾಗಿದ್ದರೂ ಅವರು ಅಲ್ಲಿ ಮಾಡಿರುವ ಅಭಿವೃದ್ಧಿ ಕೆಲಸಗಳು ಅಷ್ಟಕ್ಕಷ್ಟೇ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯವೇ.
ಹೇಳಿ ಕೇಳಿ ಶೋಭಾ ಕರಂದ್ಲಾಜೆ ಹಿಂದುತ್ವ ನಿಲುವು, ಕೋಮುವಾದಿ ಹಾಗು ಪ್ರಚೋದನಕಾರಿ ಹೇಳಿಕೆಗಳ ಮೂಲಕವೇ ರಾಜಕೀಯವಾಗಿ ಸುದ್ದಿಯಲ್ಲಿದ್ದವರು. ಅವರೆಂದೂ ಅಭಿವೃದ್ಧಿ ರಾಜಕಾರಣವನ್ನು ನೆಚ್ಚಿಕೊಂಡವರೇ ಅಲ್ಲ.
ತಮ್ಮ ಕ್ಷೇತ್ರದ ಮೀನುಗಾರರು ನಿಗೂಢವಾಗಿ ಸಾವಿಗೀಡಾದಾಗ ಕೂಡ ಶೋಭಾ ಅವರ ಪರವಾಗಿ ಧ್ವನಿ ಎತ್ತಲಿಲ್ಲ. ಅವರ ಅಳಲಿಗೆ ಸ್ಪಂದಿಸಲಿಲ್ಲ. ಸರಕಾರದ ವಿರುದ್ಧದ ಮೀನುಗಾರರ ಅಸಮಾಧಾನಕ್ಕೆ ಧ್ವನಿ ಗೂಡಿಸಲಿಲ್ಲ. ಅವರೇನಿದ್ದರೂ ಮೋದಿ ಸರಕಾರದ ಪರವಾಗಿಯೇ ಮಾತಾಡಿದರು.
ಅವರ ಜೊತೆ ಬಿಜೆಪಿಯ ಕಟ್ಟಾ ಕಾರ್ಯಕರ್ತರೇ ಮುನಿಸಿಕೊಂಡ ಘಟನೆಗಳೂ ಈ ಹಿಂದೆ ನಡೆದಿದ್ದವು. ಬಿಜೆಪಿ ಕಾರ್ಯಕರ್ತನೊಬ್ಬ ಶೋಭಾ ಅವರನ್ನು ಫೋನ್ ಸಂಭಾಷಣೆಯಲ್ಲಿ ತರಾಟೆಗೆ ತೆಗೆದುಕೊಂಡಿದ್ದು ಭಾರೀ ಸುದ್ದಿಯಾಗಿತ್ತು.
ಆದರೆ ವರಿಷ್ಠರ ಆಶೀರ್ವಾದ ಇರುವ ಶೋಭಾ ಎಂದೂ ತಳಮಟ್ಟದ ಕಾರ್ಯಕರ್ತರ, ಮತದಾರರ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡವರಲ್ಲ. ಕಳೆದ ಬಾರಿಯೂ ಅವರಿಗೆ ಟಿಕೆಟ್ ಕೊಡಬಾರದು ಎಂಬ ಆಗ್ರಹ ಕೇಳಿ ಬಂದಿತ್ತು. ಆದರೆ ಕೊನೆಗೂ ಟಿಕೆಟ್ ಸಿಕ್ಕಿದ್ದು ಅವರಿಗೇ. ದೊಡ್ಡ ಅಂತರದಲ್ಲೇ ಗೆದ್ದೂ ಬಿಟ್ಟರು.
ಟಿಕೆಟ್ ಕೊಡೋದು ವರಿಷ್ಠರು. ಮತ ಪಡೆಯೋದು, ಗೆಲ್ಲೋದು ಹಿಂದುತ್ವ ಹಾಗು ಮೋದಿ ಅಲೆಯ ಮೇಲೆ. ಬೇರೆ ತಲೆಬಿಸಿ ಯಾಕೆ ಎಂಬಂತೆಯೇ ಅವರು ಕಳೆದೊಂದು ದಶಕದಲ್ಲಿ ರಾಜಕಾರಣ ಮಾಡಿಕೊಂಡು ಬಂದವರು. ಈಗಲೂ ತನ್ನ ವಿರುದ್ಧದ ಅಭಿಯಾನಕ್ಕೆ ಹೈಕಮಾಂಡ್ ಉತ್ತರ ನೀಡುತ್ತೆ ಅಂತಾನೆ ಹೇಳಿದ್ದಾರೆ ಶೋಭಾ.
ಅಂದ್ರೆ ಅವರಿಗೆ ಬಹಳ ಚೆನ್ನಾಗಿ ಗೊತ್ತಿದೆ. ಈಗ ಬಿಜೆಪಿಯಲ್ಲಿ ನಡೆಯೋದು ಮೋದಿ, ಅಮಿತ್ ಶಾ ಮಾತು ಮಾತ್ರ. ಕರ್ನಾಟಕದ ಮಟ್ಟಿಗೆ ಯಡಿಯೂರಪ್ಪ ಹಾಗು ವಿಜಯೇಂದ್ರ ಅವರೇ ಈಗ ಬಾಸ್. ಅವರೆಲ್ಲರೂ ತನ್ನ ಬೆಂಬಲಕ್ಕಿದ್ದಾರೆ.
ಕೊನೆಗೆ ಮೋದಿಯವರು ಟಿಕೆಟ್ ಕೊಟ್ಟಿದ್ದಾರೆ ಎಂದು ಬಂದರೆ ಎಲ್ಲ ಸ್ಥಳೀಯ ಬಿಜೆಪಿ ಮುಖಂಡರು , ಕಾರ್ಯಕರ್ತರು ಕೆಲಸ ಮಾಡೋದು, ಓಟು ಹಾಕೋದು ಬಿಜೆಪಿಗೇ.
ಅಷ್ಟರಮಟ್ಟಿಗೆ ತಾನು ಸೇಫ್ ಎಂದು ಶೋಭಾ ಯಾರನ್ನೂ ಕೇರ್ ಮಾಡುತ್ತಿಲ್ಲ.
ಮುಂದೇನಾಗುತ್ತದೆ ಎಂದು ಕಾದು ನೋಡೋಣ