301 ಸುರಕ್ಷತಾ ಅಧಿಕಾರಿಗಳು ಇರಬೇಕಾದಲ್ಲಿ 176 ಮಂದಿ ಮಾತ್ರ ಏಕಿದ್ದರು ?

Update: 2023-12-17 02:31 GMT
Editor : Ismail | Byline : ಆರ್. ಜೀವಿ

Photo: NDTV 

ಲೋಕಸಭಾ ಸದಸ್ಯರ ಕೈಪಿಡಿ ಪ್ರಕಾರ ಯಾವುದೇ ಲೋಕಸಭಾ ಸಂಸದರು ಯಾರಿಗಾದರೂ ಸಂಸತ್ ಸಂದರ್ಶನ ಪಾಸ್ ಕೊಡಿಸುವಾಗ "ಈ ವ್ಯಕ್ತಿ ಬಗ್ಗೆ ವೈಯಕ್ತಿಕವಾಗಿ ನನಗೆ ಗೊತ್ತಿದೆ ಮತ್ತು ಆತ ಅಥವಾ ಆಕೆಯ ಪೂರ್ಣ ಜವಾಬ್ದಾರಿ ನಾನು ತೆಗೆದುಕೊಳ್ಳುತ್ತೇನೆ " ಎಂದು ಲೋಕಸಭೆಗೆ ಲಿಖಿತವಾಗಿ ಹೇಳಿಕೆ ಕೊಡಬೇಕು.

ಈ ಕೈಪಿಡಿ ಒತ್ತಿ ಹೇಳುವುದೇನೆಂದರೆ, ವಿಸಿಟರ್ ಕಾರ್ಡ್ ಗೆ ಸಲ್ಲಿಸುವ ಅರ್ಜಿ ಜೊತೆ ಸಂಸದರು ಒಂದು ಸರ್ಟಿಫಿಕೇಟ್ ಅನ್ನೇ ಕೊಡಬೇಕು. ಅದರಲ್ಲಿ "ಈ ವ್ಯಕ್ತಿ ನನಗೆ ವೈಯಕ್ತಿಕವಾಗಿ ಮಿತ್ರ ಅಥವಾ ಚೆನ್ನಾಗಿ ಗೊತ್ತಿರುವವನು ಹಾಗು ಈತನ ಅಥವಾ ಈಕೆಯ ಪೂರ್ಣ ಜವಾಬ್ದಾರಿ ನಾನು ಹೊರುತ್ತೇನೆ " ಎಂದು ಲಿಖಿತವಾಗಿ ಕೊಡಬೇಕು.

ಇದು ಲೋಕಸಭೆಯ ನಿಯಮ. ಅಂದ್ರೆ ಯಾವುದೇ ವ್ಯಕ್ತಿಗೆ ಸಂಸತ್ ಒಳಗೆ ಬರುವ ಸಂದರ್ಶನ ಪಾಸ್ ಕೊಡಿಸುವಾಗ ಆಯಾ ಸಂಸದರು ಆ ವ್ಯಕ್ತಿಯ ಬಗ್ಗೆ ಚೆನ್ನಾಗಿ ತಿಳಿದುಕೊಂಡಿರಬೇಕು ಹಾಗು ಆತನ ಪೂರ್ಣ ಜವಾಬ್ದಾರಿ ನನ್ನದು ಅಂತ ಗ್ಯಾರಂಟಿ ಕೊಡಬೇಕು. ಹಾಗಾದರೆ ಸಂಸತ್ ಒಳಗಿನ ಚೇಂಬರ್ ಗೆ ಹಾರಿ ಅಲ್ಲಿ ಸ್ಮೋಕ್ ಬಾಂಬ್ ಸಿಡಿಸಿದ ಸಾಗರ್ ಶರ್ಮಾ ಹಾಗು ಮನೋರಂಜನ್ ಅವರ ಬಗ್ಗೆಯೂ " ಇವರು ನನಗೆ ಚೆನ್ನಾಗಿ ಗೊತ್ತು ಅಂತ ಸಂಸದ ಪ್ರತಾಪ್ ಸಿಂಹ ಗ್ಯಾರಂಟಿ ಕೊಟ್ಟಿರಲೇ ಬೇಕಲ್ವಾ ?

ಅಂತಹ ಸರ್ಟಿಫಿಕೇಟ್ ಕೊಡದೆ ಅವರು ಹೇಳಿದವರಿಗೆ ಪಾಸ್ ಕೊಟ್ಟಿರಲು ಸಾಧ್ಯವೇ ಇಲ್ಲ. ಹಾಗಾದರೆ ಆ ಗ್ಯಾರಂಟಿ ಹಾಗು ಸರ್ಟಿಫಿಕೇಟ್ ಕೊಟ್ಟ ಸಂಸದ ಪ್ರತಾಪ್ ಸಿಂಹ ವಿರುದ್ಧ ಸದನದ ಯಜಮಾನರಾದ ಸ್ಪೀಕರ್ ಹಾಗು ಸಂಸತ್ತಿನ ಸುರಕ್ಷತೆಯ ಜವಾಬ್ದಾರಿ ಹೊತ್ತ ಸರಕಾರ ಯಾವ ಕ್ರಮ ಕೈಗೊಂಡಿದೆ ?

ನಿನ್ನೆ ಸಂಸತ್ತಿನಲ್ಲಿ ಆಗಿದ್ದೇನು ?. ಅಲ್ಲಿ ಪ್ರತಾಪ್ ಸಿಂಹ ವಿರುದ್ಧ ಈವರೆಗೂ ಯಾವುದೇ ಕ್ರಮ ಆಗಿಲ್ಲ. ಆದರೆ ಸಂಸತ್ತಿನ ಇತಿಹಾಸದಲ್ಲೇ ಅತಿದೊಡ್ಡ ಭದ್ರತಾ ವೈಫಲ್ಯ ನಡೆದಿದ್ದು ಹೇಗೆ ಎಂದು ಸರಕಾರ ವಿವರಣೆ ಕೊಡಬೇಕು ಎಂದು ಆಗ್ರಹಿಸಿದ ಸಂಸದರನ್ನೇ ಅಮಾನತು ಮಾಡಲಾಗಿದೆ.

ಇದು ಪ್ರಧಾನಿ ನರೇಂದ್ರ ಮೋದಿ ಅವರ ಭದ್ರತಾ ಗ್ಯಾರಂಟಿನಾ ?.

22 ವರ್ಷಗಳ ಹಿಂದೆ ಸಂಸತ್ ಮೇಲೆ ದಾಳಿ ನಡೆದ ದಿನವೇ ಸಂಸತ್ ​ಒಳಗೆ ಅಪರಿಚಿತರು ನುಗ್ಗಿ ಸ್ಮೋಕ್ ಬಾಂಬ್ ಸಿಡಿಸಿದ್ದು​ ಈ ದೇಶದ ಪ್ರಧಾನಿ​ ಹಾಗು ಗೃಹ ಸಚಿವ ಹೇಳಿಕೆ ನೀಡಬೇಕಾದ ವಿಚಾರ ಅಲ್ಲವೆ?. ಹಾಗಾದರೆ ಪ್ರಧಾನಿಯಾಗಲೀ ಗೃಹ ಮಂತ್ರಿಯಾಗಲೀ ಯಾಕೆ​ ಘಟನೆ ನಡೆದು ​ಎರಡು ದಿನ ಆದರೂ ಹೇಳಿಕೆ ಕೊಟ್ಟಿಲ್ಲ?. ವಿಪರ್ಯಾಸವೆಂದರೆ, ಗಂಭೀರ ಭದ್ರತಾ ​ವೈಫಲ್ಯ​ಕ್ಕೆ ಕಾರಣ ಕೇಳಿ, ಚರ್ಚೆಗೆ ಒತ್ತಾಯಿಸಿದ ಸಂಸದರನ್ನೇ ಅಮಾನತು ಮಾಡಲಾಗಿದೆ.

ಇದರೊಂದಿಗೆ, ಒಟ್ಟಾರೆ ಉತ್ತರದಾಯಿತ್ವವನ್ನೇ, ಪ್ರಶ್ನೆಯನ್ನೇ ದೇಶದಲ್ಲಿ ಅಮಾನತು ಮಾಡಲಾಯಿತಲ್ಲವೆ?. ​ಇಂಡಿಯನ್ ಎಕ್ಸ್ ಪ್ರೆಸ್ ನಲ್ಲಿ ಜಿಜ್ನಾಸಾ ಸಿನ್ಹಾ ಮಾಡಿರುವ ವರದಿ ಪ್ರಕಾರ, ಸಂಸತ್ತಿನಲ್ಲಿ ಸಾಮಾನ್ಯವಾಗಿ 301 ಸುರಕ್ಷತಾ ಅಧಿಕಾರಿಗಳು ನಿಯೋಜಿತರಾಗಿರ್ತಾರೆ. ಆದರೆ ಮೊನ್ನೆ ಅಪರಿಚಿತರು ನುಗ್ಗಿದ ಬುಧವಾರ ಸಂಸತ್ತಿನಲ್ಲಿ 176 ಸುರಕ್ಷತಾ ಅಧಿಕಾರಿಗಳು ಮಾತ್ರ ಕರ್ತವ್ಯದಲ್ಲಿದ್ದರು.

ಇದು ಹೌದು ಎಂದಾದರೆ ಇದು ಭಾರೀ ಗಂಭೀರ ವಿಷಯ. ಸಂಸತ್ ಮೇಲೆ ಈ ಹಿಂದೆ ದಾಳಿ ನಡೆದ ವಾರ್ಷಿಕದ ದಿನವೇ, ಅದೂ ಖಾಲಿಸ್ತಾನಿ ಉಗ್ರರು ಇಂತಾ ದಿನ ಸ್ಪೋಟಿಸುತ್ತೇವೆ ಎಂದು ಬೆದರಿಕೆ ಹಾಕಿದ ದಿನವೇ ಭದ್ರತೆ ಹೆಚ್ಚಿಸುವ ಬದಲು ಸುರಕ್ಷತಾ ಅಧಿಕಾರಿಗಳ ಸಂಖ್ಯೆ ಕಡಿಮೆ ಮಾಡಿದ್ದು ಯಾಕೆ ?.

ಅದೇ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಪ್ರಕಾರ, ಹೊಸ ಸಂಸತ್ತಲ್ಲಿ ಸಂದರ್ಶಕರ ಗ್ಯಾಲರಿ ಸದನದ ಚೇಂಬರ್ ನಿಂದ ಹೆಚ್ಚು ಎತ್ತರದಲ್ಲಿ ಇಲ್ಲದೇ ಇರೋದು, ಆ ದಿನ ಕಡಿಮೆ ಸುರಕ್ಷತಾ ಸಿಬ್ಬಂದಿ ಇದ್ದಿದ್ದು, ಇತ್ತೀಚಿಗೆ ಹೊಸ ಸಂಸತ್ತಿಗೆ ಬರುತ್ತಿರುವ ಸಂದರ್ಶಕರ ಸಂಖ್ಯೆ ಹೆಚ್ಚಿದ್ದು ಹಾಗು

ಸಂದರ್ಶಕರ ಶೂ ಗಳನ್ನು ಚೆಕ್ ಮಾಡದೆಯೇ ಬಿಟ್ಟಿದ್ದು ಈ ನಾಲ್ಕು ಅಂಶಗಳಿಂದಾಗಿ ಬುಧವಾರ ಸಾಗರ್ ಶರ್ಮಾ ಹಾಗು ಮನೋರಂಜನ್ ಈ ಕೃತ್ಯ ಎಸಗಲು ಸಾಧ್ಯವಾಯಿತು.

ಇತ್ತೀಚಿಗೆ ಹೊಸ ಸಂಸತ್ತು ನೋಡಲು ಬರುತ್ತಿರುವವರ ಸಂಖ್ಯೆ ಬಹಳ ಹೆಚ್ಚಾಗಿದೆ. ಆದರೆ ಭದ್ರತಾ ಅಧಿಕಾರಿಗಳ ಸಂಖ್ಯೆ ಸೀಮಿತವಾಗಿದೆ. ಹಾಗಾಗಿ ಪ್ರತಿಯೊಬ್ಬರನ್ನೂ ವಿವರವಾಗಿ ಪರಿಶೀಲಿಸುವುದು ದೊಡ್ಡ ಸವಾಲಾಗಿದೆ. ಸಾಮಾನ್ಯವಾಗಿ ಶೂ ಪರಿಶೀಲಿಸುವುದಿಲ್ಲ. ಅದರಿಂದ ದುಷ್ಕರ್ಮಿಗಳಿಗೆ ಲಾಭವಾಗಿದೆ. ಸ್ಮೋಕ್ ಕ್ಯಾನ್ ಗಳು ಕಬ್ಬಿಣದ್ದು ಅಲ್ಲದೇ ಇರೋದರಿಂದ ಮೆಟಲ್ ಡಿಟೆಕ್ಟರ್ ಗಳಲ್ಲೂ ಅವು ಸಿಕ್ಕಿಲ್ಲ ಎಂದು ಅಧಿಕಾರಿಯೊಬ್ಬರನ್ನು ಉಲ್ಲೇಖಿಸಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಸಂಸತ್ತಿಗೆ ಭದ್ರತೆ ಹೆಚ್ಚಿಸಬೇಕಾದ ದಿನವೇ ಅದನ್ನು ಕಡಿಮೆ ಮಾಡಿದ್ದು ಯಾಕೆ ?. ಸಾವಿರಾರು ಕೋಟಿ ರೂಪಾಯಿ ಹಾಕಿ ಕಟ್ಟಿರುವ ಹೊಸ ಸಂಸತ್ತಲ್ಲಿ ಸಂದರ್ಶಕರ ಗ್ಯಾಲರಿ ಕಡಿಮೆ ಎತ್ತರದಲ್ಲಿ ನಿರ್ಮಿಸಿದ್ದು ಯಾಕೆ ?. ಸಂಸತ್ ನಂತಹ ಸ್ಥಳದಲ್ಲಿ ಭದ್ರತೆಗೆ ಸಾಕಷ್ಟು ಸಿಬ್ಬಂದಿ ನಿಯೋಜನೆ ಯಾಕೆ ಆಗಲಿಲ್ಲ ?. ಶೂ ಒಳಗೂ ಚೆಕ್ ಮಾಡಿಯೇ ಕಳಿಸಬೇಕು ಎಂದು ಯಾಕೆ ಯಾರಿಗೂ ಹೊಳೆಯಲಿಲ್ಲ ?.

ಇವೆಲ್ಲ ಗಂಭೀರ ಪ್ರಶ್ನೆಗಳಿಗೆ ಸಂಸತ್ತಿನ ಭದ್ರತೆಯ ಉಸ್ತುವಾರಿ ಹೊತ್ತಿರುವ ದೇಶದ ಗೃಹ ಸಚಿವರು ಹಾಗು ಪ್ರಧಾನಿ ಉತ್ತರಿಸಬೇಡವೇ ?. ದೇಶದ ಗೃಹಮಂತ್ರಿಯ ವೈಫಲ್ಯದ ಬಗ್ಗೆ ಆಕ್ಷೇಪಿಸಿ ರಾಜೀನಾಮೆಗೆ ಸಂಸದರು ಒತ್ತಾಯಿಸಿದ್ದೇ ​ಅಪರಾಧ​ವೇ ?. ​ನೂತನ ಸಂಸತ್ ನಿರ್ಮಾಣ ಆಗುವಾಗ, ಅದರ ಉದ್ಘಾಟನೆ ಆಗುವಾಗ ಎಲ್ಲೆಡೆಯೂ ಅವರಿಸಿಕೊಂಡಿದ್ದದ್ದು ಪ್ರಧಾನಿ ಮೋದಿ. ಸಂಸತ್ತಿನ ಯಜಮಾನರಾದ ರಾಷ್ಟ್ರಪತಿಯವರಿಗೂ ಅಲ್ಲಿ ಆಹ್ವಾನ ಇರಲಿಲ್ಲ. ಆಗ ಸಂಸತ್ ಸಂಪೂರ್ಣ ಮೋದಿಮಯವಾಗಿತ್ತು.

ಈಗ ಅದೇ ಮೋದಿಯವರಲ್ಲಿ ವಿಪಕ್ಷ ಪ್ರಶ್ನೆ ಕೇಳಿದರೆ, ಸಂಸತ್ತಿನ ಹೊಣೆ ಸ್ಪೀಕರ್ ಅವರದ್ದು, ಮೊನ್ನೆಯ ಘಟನೆಯ ಬಗ್ಗೆ ಅವರು ಹೇಳಿದ ಹಾಗೆ ನಾವು ಕೇಳ್ತೇವೆ ಅಷ್ಟೇ. ಅವರೇ ಎಲ್ಲವನ್ನೂ ನಿಭಾಯಿಸ್ತಾರೆ ಎಂದು ಮೋದಿ ಸರಕಾರ ಹೇಳ್ತಾ ಇದೆ. ಈ ದ್ವಂದ್ವ ಕೇವಲ ಮೋದಿಯವರಿಗೆ ಮಾತ್ರವೇ ಸಾಧ್ಯ. ಸಂಸತ್ ಭದ್ರತೆ ವಿಚಾರಕ್ಕಾಗಿ ಮಾತನಾಡಿದ, ದೇಶದ ಭದ್ರತೆ ವಿಚಾರದಲ್ಲಿ ಕಳವಳ ವ್ಯಕ್ತಪಡಿಸಿದ ಸಂಸದರನ್ನೇ ಅಮಾನತು ಮಾಡುತ್ತಾರೆ ಎಂದಾದರೆ, ಏನೆನ್ನಬೇಕು ಇದಕ್ಕೆ?

ಇನ್ನೂ ​ವಿಪರ್ಯಾಸದ ಸಂಗತಿಯೆಂದರೆ, ಸದನದಲ್ಲಿ ಇರದೇ ಇದ್ದವರನ್ನೂ ಅಮಾನತು ಮಾಡಿರುವುದು. ಕಾಂಗ್ರೆಸ್‌ನ ಒಂಬತ್ತು, ಸಿಪಿಎಂನ ಇಬ್ಬರು, ಸಿಪಿಐನ ಒಬ್ಬರು ಮತ್ತು ಡಿಎಂಕೆಯ ಇಬ್ಬರು ಸಂಸದರನ್ನು ಅಮಾನತು ಮಾಡಲಾಗಿದೆ. ಅಲ್ಲದೆ, ಟಿಎಂಸಿಯ ರಾಜ್ಯಸಭಾ ಸದಸ್ಯ ಡೆರೆಕ್ ಒ'ಬ್ರೇನ್ ಅವರನ್ನೂ ಅಮಾನತುಗೊಳಿಸಲಾಗಿದೆ. ಹೀಗೆ ಅಮಾನತಾದವರಲ್ಲಿ ಡಿಎಂಕೆ ಸಂಸದ ಎಸ್‌​ ಆರ್‌ ಪಾರ್ಥಿಬನ್‌ ಕೂಡ ಸೇರಿದ್ದರು. ಆದರೆ, ಅವರು ಸದನದಲ್ಲೇ ಇರಲಿಲ್ಲ.

ಕಡೆಗೆ ಇದರ ಬಗ್ಗೆ ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಸ್ಪಷ್ಟನೆಯನ್ನೂ ಕೊಟ್ಟರು. ತಪ್ಪಾಗಿ ಅವರ ಹೆಸರು ಸೇರಿಹೋಗಿದೆ ಎಂದು ಸಮಜಾಯಿಷಿ ಕೊಟ್ಟು, ಅವರ ಅಮಾನತು ಹಿಂಪಡೆಯಲಾಯಿತು. ಅಲ್ಲೆಲ್ಲೋ ಕೂತು, ರಾಜಕೀಯ ಮಾಡಬೇಡಿ ಎಂದು​ ಪ್ರಧಾನಿ ಹೇಳಿದ್ದಾರೆ ಎಂದು ವರದಿಯಾಗುತ್ತದೆ. ಹಾಗಾದರೆ ಹೀಗೆ ಹೇಳಿಕೆ ನೀಡದೇ ಇರುವುದು ಏನು? ಇದು ರಾಜಕೀಯ ಅಲ್ಲವೆ?.

​ಕೇಳಲೇಬೇಕಾದ ಪ್ರಶ್ನೆಯನ್ನು ಕೇಳಿದ ಸಂಸದರನ್ನು ಅಮಾನತು ಮಾಡುವುದು ​ಕೆಟ್ಟ ರಾಜಕೀಯವೇ ಅಲ್ಲವೆ?. ಸಂಸದರ ಅಮಾನತು ಕ್ರಮ ಒಂದು ಬಗೆಯದ್ದಾದರೆ, ಬಿಜೆಪಿ ಮಂದಿ ಈಗ ಬುಧವಾರದ ಘಟನೆಯನ್ನು ಕಾಂಗ್ರೆಸ್ ಜೊತೆ ತಳುಕು ಹಾಕುತ್ತಿರುವ ಹೊಣೆಗೇಡಿ ಹೇಳಿಕೆಗಳನ್ನು ಕೊಡುತ್ತಿರುವುದು ಮತ್ತೊಂದೆಡೆ ನಡೆದಿದೆ.

ಬಂಧಿತ ನೀಲಂ ಆಜಾದ್ ವಿಚಾರವನ್ನು ಪ್ರಸ್ತಾಪಿ​ಸಿ ಬಿಜೆಪಿಯ ಅಮಿತ್ ಮಾಳವಿಯ, ಆಕೆಯನ್ನು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವಾಕೆ ಎಂದಿದ್ದಾರೆ. ಆಂದೋಲ​ನ ಜೀವಿ ಎಂದು ಆಕೆಯ ಬಗ್ಗೆ ವ್ಯಂಗ್ಯವಾಡಿರುವ ಅವರು, ಆಕೆ ಹಲವಾರು ಪ್ರತಿಭಟನೆಗಳಲ್ಲಿ ಕಾಣಿಸಿಕೊಂಡಿದ್ದಾರೆ. ಆಕೆಯನ್ನು ಯಾರು ಕಳುಹಿಸಿದ್ದಾರೆ ಎಂಬುದು ಪ್ರಶ್ನೆ ಎಂದಿದ್ದಾರೆ.

ಬಿಜೆಪಿ ಸಂಸದರಿಂದ ಸಂಸತ್ತಿನ ಪಾಸ್ ಪಡೆಯಲು ಮೈಸೂರಿನವರನ್ನು ಏಕೆ ಸೇರಿಸಿಕೊಳ್ಳಲಾಯಿತು ಎಂದು ಪ್ರಶ್ನೆ ಮಾಡಿದ್ದಾರೆ. ಅದನ್ನು ದಾರಿ ತಪ್ಪಿಸುವ ತಂತ್ರ ಎಂದು ಹೇಳಿದ್ದಾರೆ.​ ಆಮೇಲೆ ಆ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದಾರೆ. ಹಾಗಾದರೆ ಸಂಸದ ಪ್ರತಾಪ್ ಸಿಂಹ ಜಾಗದಲ್ಲಿ ಕಾಂಗ್ರೆಸ್ ಸಂಸದರೇನಾದರೂ ಇದ್ದಿದ್ದರೆ ಆಗಲೂ ಅದನ್ನು ದಾರಿ ತಪ್ಪಿಸುವ ತಂತ್ರ ಎಂದು ಮಾಳವಿಯ ಹೇಳುತ್ತಿದ್ದರೆ?.

ಅವರ ​ಪಕ್ಷದವರ ಹೆಸರು ಘಟನೆಯಲ್ಲಿ ಕಾಣಿಸಿಕೊಂಡರೆ ಆಗ ಅದು ದಾರಿ ತಪ್ಪಿಸುವ ತಂತ್ರ. ಆದರೆ ಬೇರೆಯವರು ಇದ್ದರೆಂದಾದರೆ ಅದಕ್ಕೆ ಬೇರೆಯದೇ ಅರ್ಥವೆ?. ​ಇವರು ಬೇಕಾಬಿಟ್ಟಿ ಟ್ವೀಟ್ ಮಾಡಬಹುದು. ಆಮೇಲೆ ಅದನ್ನು ಡಿಲೀಟ್ ಮಾಡಿಬಿಡಬಹುದು. ಅಲ್ಲಿಗೆ ಅವರ ಹೊಣೆಗಾರಿಕೆ ಮುಗಿದು ಹೋಯ್ತು.

ಬಿಜೆಪಿಯ ಮತ್ತೊಬ್ಬ ನಾಯಕ ಸಿಟಿ ರವಿ ಅವರಂತೂ ಇನ್ನೂ ಹೊಣೆಗೇಡಿ ಹೇಳಿಕೆಯನ್ನು ನೀಡಿದ್ದಾರೆ. ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್‌ನ ಸಂಘಟಿತ ಲೂಟಿಯ ಅವಧಿಯಲ್ಲಿ ಭಾರತದಲ್ಲಿ ಹೆಚ್ಚು ನಿರುದ್ಯೋಗವಿತ್ತು. ಆಗ ಏಕೆ ನಿರುದ್ಯೋಗಿ ಯುವಕರು ದಾಳಿ ಮಾಡಲಿಲ್ಲ? ಈಗ ಸಂಸತ್ತಿನ ಮೇಲಿನ ದಾಳಿಯಲ್ಲಿ ಕಾಂಗ್ರೆಸ್ ಉದ್ಯೋಗಿ ಯುವಕರು ಏಕಿದ್ದಾರೆ ಎಂಬ ಉದ್ಧಟ ಪ್ರಶ್ನೆಯನ್ನು ಎತ್ತಿದ್ಧಾರೆ.

10 ವರ್ಷಗಳ ಕಾಲ ಸೋನಿಯಾ ಗಾಂಧಿ ನೇತೃತ್ವದ ಕಾಂಗ್ರೆಸ್, ಭಾರತಕ್ಕೆ ಮನಸೋ ಇಚ್ಛೆ ನುಗ್ಗಿ ಅಮಾಯಕರನ್ನು ಕೊಲ್ಲಲು ಪಾಕಿಸ್ತಾನಿ ಭಯೋತ್ಪಾದಕರಿಗೆ ಸಂಪೂರ್ಣ ಅನುಮತಿ ನೀಡಿತ್ತು ಎಂದಿದ್ದಾರೆ. ​ಪ್ರಧಾನಿ ಮೋದಿ ಅದೆಷ್ಟು ಚೆನ್ನಾಗಿ ಮಾತಾಡ್ತಾರೆ. ಅದೆಷ್ಟು ಸುಲಲಿತವಾಗಿ ಭಾಷಣ ಮಾಡ್ತಾರೆ. ಪ್ರಪಂಚದ ಯಾವುದೇ ವಿಷಯದ ಬಗ್ಗೆ ಟ್ವೀಟ್ ಮಾಡ್ತಾರೆ. ಅಮಿತ್ ಶಾ ಅವರೂ ಅಷ್ಟೇ. ಅವರು ಪ್ರತಿಪಕ್ಷಗಳ ಸರಕಾರಗಳ ಬಗ್ಗೆ, ನಾಯಕರ ಬಗ್ಗೆ ಅದೆಷ್ಟು ಚೆನ್ನಾಗಿ ಮಾತಾಡ್ತಾರೆ.

ಆದರೆ ಅವರಿಬ್ಬರೂ ಮಾತಾಡಲೇಬೇಕಾದ ವಿಷಯ ಬಂದಿರುವಾಗ, ಇಡೀ ದೇಶ ಅವರಿಬ್ಬರೂ ಏನು ಹೇಳ್ತಾರೆ ಎಂದು ಕೇಳಲು ಕಾದು ಕೂತಿರುವಾಗ ಅವರು ಮಾತಾಡೋದೇ ಇಲ್ಲ. ಅದಕ್ಕಿಂತಲೂ ಅಪಾಯಕಾರಿ ಅಂದ್ರೆ, ಅವರು ಬಾಯಿ ಮುಚ್ಚಿಕೊಂಡಿರುವಾಗ ಅವರ ಪರಿವಾರದ ಬಾಯಿ ಬಡುಕರು ಬಂದು ಏನೇನೋ ತೀರಾ ಅಸಂಬದ್ಧ ಮಾತಾಡಿ ಹೋಗ್ತಾರೆ.

ಇಲ್ಲಿ ಇನ್ನೂ ಒಂದು ವಿಚಾರ ಗಮನಿಸಬೇಕು. ಲೋಕಸಭೆ​ಯೊಳಗೆ ಅಪರಿಚಿತರು ನುಗ್ಗಿದ ಒಂದು ದಿನ ಮೊದಲಷ್ಟೇ ಹೆಚ್ಚುವರಿ ಭದ್ರತಾ ಮೂಲಸೌಕರ್ಯಕ್ಕಾಗಿ ಕೇಂದ್ರ ಲೋಕೋಪಯೋಗಿ ಇಲಾಖೆಯ 35 ಕೋಟಿ ವೆಚ್ಚದ ಟೆಂಡರ್ ವಿಚಾರದ ಬಗ್ಗೆ ಪಿಟಿಐ ವರದಿ ಮಾಡಿದೆ. ಭದ್ರತಾ ಉಪಕರಣಗಳು ಮತ್ತು ಭದ್ರತಾ ಸಿಬ್ಬಂದಿಗೆ ಬುಲೆಟ್ ಪ್ರೂಫ್ ಎನ್​ ಕ್ಲೋಸರ್ ಗಳ ಬಗ್ಗೆ ಟೆಂಡರ್ನಲ್ಲಿ ಪ್ರಸ್ತಾಪವಿದ್ದುದರ ಬಗ್ಗೆ ವರದಿ ಹೇಳಿದೆ.

ಡಿಸೆಂಬರ್ 13,​ ಈ ದೇಶದಲ್ಲಿ 22 ವರ್ಷಗಳ ಹಿಂ​ದೆ ನಡೆದ ಕಹಿ ಘಟನೆಯ ಹಿನ್ನೆಲೆಯಲ್ಲಿ ಅತಿ ಎಚ್ಚರ ವಹಿಸಬೇಕಿರುವ ದಿನವಾಗಿರುವಾಗ, ಅದರ ಹಿಂದಿನ ದಿನ ಪ್ರಕಟಿಸಲಾದ ಈ ಟೆಂಡರ್ ವಿಚಾರ ಏನನ್ನು ಸೂಚಿಸುತ್ತದೆ?​. ಸೂಕ್ತ ಭದ್ರತಾ ವ್ಯವಸ್ಥೆಯನ್ನು ಮೊದಲೇ ಮಾಡಿಕೊಳ್ಳದೆಯೇ ನೂತನ ಸಂಸತ್ತನ್ನು ಉದ್ಘಾಟನೆ ಮಾಡಲಾಗಿತ್ತೆ ?.

ಮೊನ್ನೆಯ ಘಟನೆಗೆ ಸಂಬಂಧಿಸಿ ಎಂಟು ಮಂದಿ ಸಂಸತ್ ಸುರಕ್ಷತಾ ಸಿಬ್ಬಂದಿಯನ್ನು ಅಮಾನತು ಮಾಡಿದ್ದಾರೆ ಎಂದು ಸುದ್ದಿ ಬಂದಿದೆ. ಸಂಸತ್ತಿನ ಇತಿಹಾಸದಲ್ಲೇ ಅತಿ ದೊಡ್ಡ ಭದ್ರತಾ ವೈಫಲ್ಯ ಸಂಭವಿಸಲು ಆ ಎಂಟು ಮಂದಿ ಸಿಬ್ಬಂದಿಗಳು ಮಾತ್ರ ಹೊಣೆಯೇ ?. ಸಂಸತ್ತಿನ ಸುರಕ್ಷತೆಯ ಹೊಣೆಗಾರಿಕೆ ಇರುವುದು ಸುರಕ್ಷತೆಯ ಜಂಟಿ ಕಾರ್ಯದರ್ಶಿ ಎಂಬ ಹುದ್ದೆಯಲ್ಲಿರುವ ಒಬ್ಬ ಹಿರಿಯ ಐಎಎಸ್ ಅಧಿಕಾರಿ. ಅವರ ಅಧೀನದಲ್ಲಿ ಪಾರ್ಲಿಮೆಂಟ್ ಸೆಕ್ಯೂರಿಟಿ ಸರ್ವಿಸಸ್, ದಿಲ್ಲಿ ಪೊಲೀಸರು, ಪಾರ್ಲಿಮೆಂಟ್ ಡ್ಯೂಟಿ ಗ್ರೂಪ್ ಹಾಗು ವಿವಿಧ ಸುರಕ್ಷತಾ ಸಂಸ್ಥೆಗಳು ಸಂಸತ್ ಭದ್ರತೆ ನೋಡಿಕೊಳ್ಳುತ್ತವೆ. ಈ ಎಲ್ಲ ಭದ್ರತಾ ಸಂಸ್ಥೆಗಳು ಬರುವುದು ಕೇಂದ್ರ ಗ್ರಹ ಸಚಿವರ ಅಧೀನದಲ್ಲಿ. ಪಾರ್ಲಿಮೆಂಟ್ ನಲ್ಲಿ ಹಲವು ಸುತ್ತುಗಳ ಭದ್ರತಾ ಕೋಟೆಯೇ ಇದೆ. ಅದರಲ್ಲಿ ಸಾಂಪ್ರದಾಯಿಕ ಶೈಲಿಯ ಹಾಗು ಅತ್ಯಾಧುನಿಕ ತಂತ್ರಜ್ಞಾನ - ಇವೆರಡರ ಸಮ್ಮಿಶ್ರಣದ ಸುರಕ್ಷತಾ ವ್ಯವಸ್ಥೆಯಿದೆ. ಇವೆಲ್ಲವನ್ನೂ ಭೇದಿಸಿ ಸಂಸತ್ ಒಳಗೆ ನುಗ್ಗಿ ಸ್ಮೋಕ್ ಬಾಂಬ್ ಸಿಡಿಸಿದ್ದಕ್ಕೆ ಕೇವಲ ಆ ಎಂಟು ಮಂದಿ ಸಿಬ್ಬಂದಿ ಮಾತ್ರ ಹೊಣೆಯೇ ?

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!