ಮೂರು​ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರಲಿದೆಯೇ ಕಾಂಗ್ರೆಸ್ ?

Update: 2023-12-08 12:33 GMT

ಪಂಚರಾಜ್ಯ ಚುನಾವಣೆಯ ಮತ ಎಣಿಕೆ ಡಿ.3ರಂದು ನಡೆಯಲಿದೆ. ಐದು ರಾಜ್ಯಗಳಲ್ಲಿ ಏನಾಗಬಹುದು, ಯಾರು ಗೆಲ್ಲಬಹುದು, ಯಾರು ಸೋಲಬಹುದು?. ಇದು ಈಗಿನ ಬಹುದೊಡ್ಡ ಕುತೂಹಲ. ಇದರ ಬಗ್ಗೆ ಚುನಾವಣಾ ತಜ್ಞ ಹಾಗು ಸಾಮಾಜಿಕ ಕಾರ್ಯಕರ್ತ ​ಯೋಗೇಂದ್ರ ಯಾದವ್ ಅವರ ಅಂದಾಜು ಹಾಗು ವಿಶ್ಲೇಷಣೆ ಏನಿದೆ?.

ತೆಲಂಗಾಣದಲ್ಲಿ ಒಂದು ನಾಟಕೀಯ ಪರಿವರ್ತನೆ ಕಳೆದೆರಡು ತಿಂಗಳಲ್ಲಿ ಕಂಡಿದ್ದು, ಬಿಜೆಪಿಯ ಆಟ ನಡೆಯದಾಗಿದೆ. ಮಧ್ಯಪ್ರದೇಶದಲ್ಲಿ ಎರಡೇ ಪಕ್ಷಗಳ ನಡುವೆ ಪೈಪೋಟಿಯಿದ್ದು, ಬಿಜೆಪಿಗೆ ಅದರ ರಣತಂತ್ರ ಕೊಂಚ ಲಾಭ ತಂದುಕೊಡುವ ಸಾಧ್ಯತೆಯಿದೆ. ಛತ್ತೀಸ್ಗಢದಲ್ಲಿ ಪರಿಸ್ಥಿತಿ ಕಾಂಗ್ರೆಸ್ಗೆ ಅನುಕೂಲಕರ ಎನ್ನಿಸಿದರೆ, ರಾಜಸ್ಥಾನದಲ್ಲಿ ಒಂದು ಬಗೆಯ ನಿಗೂಢತೆಯಿದೆ. ಇನ್ನು ಮಿಜೋರಾಂನಲ್ಲಿ ಪ್ರಾದೇಶಿಕ ಪಕ್ಷಕ್ಕೆ ಅವಕಾಶ ಹೆಚ್ಚು.

​ಯೋಗೇಂದ್ರ ಯಾದವ್ ​ಅವರ ಪ್ರಕಾರ ತೆಲಂಗಾಣ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಸರ್ಕಾರ ರಚನೆ ಸಾಧ್ಯತೆ ಹೆಚ್ಚು.

ರಾಜಸ್ಥಾನದಲ್ಲಿ ಏನಾಗಬಹುದೆಂಬುದನ್ನು ಖಚಿತವಾಗಿ ಹೇಳುವುದು ಕಷ್ಟ. ಮಿಜೋರಾಂನಲ್ಲಿ ಕಾಂಗ್ರೆಸ್ಗೆ ಗೆಲುವಿನ ಅವಕಾಶ ಕಡಿಮೆ.

ಅವರ ವಿಶ್ಲೇಷಣೆಯನ್ನು ವಿವರವಾಗಿ ನೋಡುವುದಾದರೆ, ತೆಲಂಗಾಣ ಎರಡು ತಿಂಗಳ ಹಿಂದೆ ನೋಡಿದಾಗ ಕಾಂಗ್ರೆಸ್ ಗೆ ತೆಲಂಗಾಣದಲ್ಲಿಯೇ ಅತಿ ಕಷ್ಟದ ಸ್ಥಿತಿಯಿದೆ ಎನ್ನಿಸಿತ್ತು. ಆದರೆ ಈಗ ನೋಡಿದರೆ ಒಂದು ನಾಟಕೀಯ ಪರಿವರ್ತನೆ ತೆಲಂಗಾಣದಲ್ಲಿ ಆಗಿದೆ.​ ತೆಲಂಗಾಣದಲ್ಲಿ ಕಾಂಗ್ರೆಸ್ ಗೆಲುವಿನ ಸಾಧ್ಯತೆ ಈಗ ಹೆಚ್ಚು ಎನ್ನಿಸಿದೆ. ಕರ್ನಾಟಕ ಚುನಾವಣೆಯ ಗೆಲುವು, ರಾಹುಲ್ ಅವರ ಭಾರತ್ ಜೋಡೋ ಯಾತ್ರೆ ತೆಲಂಗಾಣದಲ್ಲಿ ಕಾಂಗ್ರೆಸ್ಗೆ ನೆರವಾಗಲಿರೋ ಮುಖ್ಯ ಅಂಶಗಳಾಗಿವೆ.

ಚುನಾವಣೆ ಬಳಿಕ ಬಿಜೆಪಿ ಬಿಆರ್ಎಸ್ ಸೇರಿ ಸರ್ಕಾರ ರಚಿಸಬಹುದು ಎಂಬೆಲ್ಲ ಲೆಕ್ಕಾಚಾರಗಳ ನಡುವೆಯೇ, ಕಾಂಗ್ರೆಸ್ ಸ್ಪಷ್ಟ ಬಹುಮತದೊಂದಿಗೆ ಅಧಿಕಾರಕ್ಕೆ ಬರಲಿದೆ ಅನ್ನೋದು ಖಚಿತವಾಗಿದೆ.

ಕಾಂಗ್ರೆಸ್​ ಅನ್ನು ತಡೆಯುವುದು ಅಸಾಧ್ಯವಾಗಲಿದೆ.

ಕೆಸಿಆರ್ ಪ್ರಬಲ ನಾಯಕ ಅನ್ನೋದು ನಿಜ. ​ಅವರು ಜನಪ್ರಿಯ ನಾಯಕ, ಅವರ ವಿರುದ್ಧ ಪ್ರಬಲ ಸ್ಪರ್ಧಿಗಳೇ ಇಲ್ಲ.

ಆದರೂ, ಜನರಲ್ಲೊಂದು ವಿರೋಧಿ ಭಾವನೆ ಬಂದುಬಿಟ್ಟಿದೆ. ಮತದಾರರು ಪೂರ್ತಿಯಾಗಿ ಮತ್ತೊಂದೆಡೆ ಶಿಫ್ಟ್ ಆಗಲಿದ್ದಾರೆ.

ಭಾರೀ ಭ್ರಷ್ಟಾಚಾರದ ಆರೋಪ, ಬಿಆರ್ ಎಸ್ ಶಾಸಕರ ವಿರುದ್ಧ ಇರೋ ಆಡಳಿತ ವಿರೋಧಿ ಅಲೆ, ಆ ಸರ್ಕಾರದ ಯೋಜನೆಗಳು ಕೂಡ ಅವರಿಗೆ ಬೇಕಾದವರಿಗೆ ಲಾಭ ಮಾಡಿವೆಯೇ ಹೊರತು ಇತರರಿಗೆ ಏನನ್ನೂ ಕೊಟ್ಟಿಲ್ಲ, ಯುವಕರು ನಿರುದ್ಯೋಗದಿಂದ ನಿರಾಶರಾಗಿರೋದು ಇವೆಲ್ಲ ಇದಕ್ಕೆ ಕಾರಣ. ಅದು ಕಾಂಗ್ರೆಸ್ಗೆ ಸ್ಪಷ್ಟ ಬಹುಮತವಾಗಿ ಒದಗಲಿದೆ.

ಇದೆಲ್ಲದರ ಲಾಭವನ್ನು ಬಿಜೆಪಿ ಪಡೆಯಬಹುದು ಎಂದು ಆರಂಭದಲ್ಲಿ ಅನ್ನಿಸಿತ್ತು. ಮುಸ್ಲಿಂ ಜನಸಂಖ್ಯೆ ಜಾಸ್ತಿಯಿರುವುದರಿಂದ ಹಿಂದೂ ಮುಸ್ಲಿಂ ಆಟವನ್ನು ಅದು ಬಳಸಿಕೊಳ್ಳುವ ಸಾಧ್ಯತೆ ಬಗ್ಗೆ ಅನುಮಾನವಿತ್ತು. ಆದರೆ ದಕ್ಷಿಣ ಭಾರತದಲ್ಲಿ ಹಿಂದೂ ಮುಸ್ಲಿಂ ವಿಚಾರ ರಾಜಕೀಯವಾಗಿ ಪರಿಣಾಮ ಬೀರುವ ಅಂಶವಾಗಿ ಉಳಿದಿಲ್ಲ. ಇದೆಲ್ಲದರ ಜೊತೆಗೆ ತೆಲಂಗಾಣ ಜನತೆಯ ನೆನಪಿನಲ್ಲಿ ಕಾಂಗ್ರೆಸ್ ಉಳಿದಿದೆ. ಇವತ್ತಿಗೂ ಇಂದಿರಾ ಅಮ್ಮ ಎಂದು ಜನ ನೆನೆಯುತ್ತಾರೆ.

ಬಿಜೆಪಿ ಮೋದಿ ಮುಖತೋರಿಸಿ ಮತ ಸೆಳೆಯುವ ತಂತ್ರ ವಿಫಲವಾಗಿದೆ, ಮೋದಿ ಮ್ಯಾಜಿಕ್ ದೆಹಲಿಯಲ್ಲಿ ವಿಫಲವಾಗಿದೆ, ಬಂಗಾಳದಲ್ಲಿ, ಬಿಹಾರದಲ್ಲಿ, ಕರ್ನಾಟಕದಲ್ಲಿ ವಿಫಲವಾಗಿದೆ. ಆದರೂ ಬಿಜೆಪಿ ಅದನ್ನೇ ಅದನ್ನೇ ಹೇಳಿಕೊಳ್ಳುತ್ತ ಬರುತ್ತಿದೆ. ಬಿಜೆಪಿಯ ಬಳಿ ಹೇಳಿಕೊಳ್ಳುವುದಕ್ಕೂ ಬೇರೆ ಏನೂ ಇಲ್ಲ. ಈ ಹೊತ್ತಲ್ಲಿ ಬಿಜೆಪಿಯಿಂದ ಆಗಬಹುದಾದ್ದು ಒಂದೇ ಒಂದು ಏನೆಂದರೆ, ಅದು ಆಡಳಿತ ವಿರೋಧಿ ಮತಗಳನ್ನು ಒಡೆದು, ಕಾಂಗ್ರೆಸ್ ಪಾಲಿಗೆ ಹೋಗಬಹುದಾದ ಮತಗಳಿಗೆ ಸ್ವಲ್ಪ ನಷ್ಟ ತಂದೀತು. ಇದಕ್ಕಿಂತ ಹೆಚ್ಚೇನೂ ಮಾಡಲು ಬಿಜೆಪಿ​ ಅಲ್ಲಿ ಶಕ್ತವಿಲ್ಲ.

ಮಧ್ಯಪ್ರದೇಶ. ಮಧ್ಯಪ್ರದೇಶದಲ್ಲಿಯೂ​ ಜನರಿಗೆ ಬದಲಾವಣೆ ಬೇಕಾಗಿದೆ. ಕಾಂಗ್ರೆಸ್ ಇಲ್ಲಿ ಕೂಡ ಬಹುಮತ ಪಡೆ​ಯುವ ಸಾಧ್ಯತೆಯೇ ಹೆಚ್ಚು.

ಬಿಜೆಪಿ ಇಷ್ಟು ವರ್ಷಗಳಲ್ಲಿ ಅಂಥದ್ದೇನನ್ನೂ ಮಾಡಿಲ್ಲ. ಇಲ್ಲಿ ಮೂರನೇ ಪಕ್ಷವೊಂದು ಪೈಪೋಟಿಯೊಡ್ಡುವ ಮಾತಂತೂ ಇಲ್ಲ

ಆದರೆ ಇಲ್ಲಿ ಬಿಜೆಪಿ ತೆಲಂಗಾಣದಲ್ಲಿನಂತೆ ದುರ್ಬಲವಲ್ಲ. ಇಲ್ಲಿನ ಬಿಜೆಪಿಯ ಸಂಘಟನಾ​ ಶಕ್ತಿ ಅಸಾಧಾರಣವಾದುದು.

ಅದು ಅಂಥದೇ ಅಭ್ಯರ್ಥಿಗಳನ್ನೂ ಕಣಕ್ಕಿಳಿಸಿದೆ. ಇಂಥ ರಣತಂತ್ರ ಕೂಡ ಬಿಜೆಪಿಗೆ ಸ್ವಲ್ಪ ಹೆಚ್ಚು ಲಾಭದಾಯಕವಾಗಬಹುದು. ಸೋತರೂ ಅಂತರ ಕಡಿಮೆ ಇರಬಹುದು. ಕಾಂಗ್ರೆಸ್ಗೆ ಒಂದು ಸಾಧಾರಣ ಗೆಲುವು ಸಿ​ಗಬಹುದು.

ಛತ್ತೀಸ್ಗಢ. ಮಧ್ಯ ಛತ್ತೀಸ್ಗಢದಲ್ಲಿ ಬಿಜೆಪಿ ಈಗಾಗಲೇ ಪ್ರಬಲವಿದ್ದು, ಅಲ್ಲಿ ಅದು ಹೆಚ್ಚು ಮತಗಳನ್ನು ಗಳಿಸಬಹುದು​. ದಕ್ಷಿಣ ಮತ್ತು ಉತ್ತರದಲ್ಲಿ ಆದಿವಾಸಿಗಳಿದ್ದು, ಕಾಂಗ್ರೆಸ್ ಗೆಲುವಿಗೆ​ ಅನುಕೂಲವಾಗಬಹುದು ಎಂಬ ವರ್ತಮಾನವಿದೆ. ಅದನ್ನು ಒಪ್ಪುವ ಇಲ್ಲವೆ ನಿರಾಕರಿಸುವ​ ಸ್ಪಷ್ಟ ಸ್ಥಿತಿ​ ನಮಗೆ ಕಾಣುತ್ತಿಲ್ಲ. ಆದರೆ​ ಆ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ರಚಿಸುವ ಸಾಧ್ಯತೆ ಹೆಚ್ಚಾಗಿ ಕಾಣಿಸುತ್ತಿದೆ.

ರಾಜಸ್ಥಾನ. ರಾಜಸ್ಥಾನದ ವಿಚಾರವಾಗಿ ಊಹಿಸುವುದು ಅಷ್ಟು ಸುಲಭವಿಲ್ಲ. ಆದರೆ ಆಡಳಿತ ವಿರೋಧಿ ಅಲೆಯೇನೂ ಅಲ್ಲಿರಲಿಲ್ಲ. ಕಾಂಗ್ರೆಸ್ನ ಯೋಜನೆಗಳು ಉತ್ತಮವಿದ್ದವು. ರಾಜಸ್ಥಾನದಲ್ಲಿ ಮತದಾರರಿಗೆ 5 ವರ್ಷದ ಬಳಿಕ ಸರ್ಕಾರ ಬದಲಿಸಿ ನೋಡುವ ಗುಣವೊಂದಿದೆ

ಇದಲ್ಲದೆ ರಾಜಸ್ಥಾನದಲ್ಲಿ ಬಿಜೆಪಿಗೆ ಒಂದು ರಚನಾತ್ಮಕ ಲಾಭವಿದೆ.

ಹಿಂದಿನ ಚುನಾವಣೆಗಳನ್ನು ಗಮನಿಸಿದರೆ ಕಾಂಗ್ರೆಸ್ ಗೆಲುವಿನ ಅಂತರ ತೀರಾ ಕಡಿಮೆಯಿರುತ್ತದೆ, ಸೋತರೆ ದೊಡ್ಡ ಅಂತರದಿಂದ ಸೋಲುತ್ತದೆ

ಬಿಜೆಪಿಗೆ ಇಲ್ಲಿ ಸಿಗುವ ಬೆಂಬಲ ದೊಡ್ಡ ಮಟ್ಟದ್ದು. ಹಾಗಾಗಿ ಇಲ್ಲೇನಾಗಬಹುದು ಎಂಬ ಸ್ಪಷ್ಟ ಚಿತ್ರವನ್ನು ಕಂಡುಕೊಳ್ಳುವುದು ಕಷ್ಟ,

ಮಿಜೋರಾಂ. ಇಲ್ಲಿ MNF, ಕಾಂಗ್ರೆಸ್ ಮತ್ತು ZPM ಇವೆ. ಯಾವುದಕ್ಕೂ ಬಹುಮತ ಬರಬಹುದು. ಎಂಎನ್ಎಫ್ ಗೆ ಹೆಚ್ಚು ಅವಕಾಶ. ಕಾಂಗ್ರೆಸ್ ಗೆಲುವಿನ ಸಾಧ್ಯತೆ ಕಡಿಮೆಯಿದ್ದು, ಎರಡನೇ ಸ್ಥಾನಕ್ಕೆ ಬರಬಹುದು. ​ಇಂದು ಸಂಜೆ ಐದೂ ರಾಜ್ಯಗಳ ಮತಗಟ್ಟೆ ಸಮೀಕ್ಷೆ ಅಂದ್ರೆ ಎಕ್ಸಿಟ್ ಪೋಲ್ ಬರಲಿದೆ. ಅದು ಏನು ಹೇಳಲಿದೆ ಎಂದು ನೋಡೋಣ. ಇನ್ನೆರಡು ದಿನಗಳ ಬಳಿಕ ರವಿವಾರ ಮಧ್ಯಾಹ್ನದೊಳಗೆ ಈ ಐದೂ ರಾಜ್ಯಗಳಲ್ಲಿ ಯಾರ್ಯಾರು ಅಧಿಕಾರಕ್ಕೆ ಏರಲಿದ್ದಾರೆ ಎಂಬ ಸ್ಪಷ್ಟ ಚಿತ್ರಣ ಸಿಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!