ಕಾಂಗ್ರೆಸ್ ಮತ ಒಡೆಯುವಲ್ಲಿ ಕುಮಾರಸ್ವಾಮಿ ಹಾಗು ಬಿಜೆಪಿ ಯಶಸ್ವಿ ಆಗ್ತಾರಾ ?

Update: 2024-02-27 06:53 GMT
Editor : Ismail | Byline : ಆರ್. ಜೀವಿ

ಕುಮಾರಸ್ವಾಮಿ

ಈ ಹಿಂದೆ ಬಿಜೆಪಿಯ ಆಪರೇಷನ್ ಕಮಲದ ವಿರುದ್ಧ ಹರಿಹಾಯುತ್ತಿದ್ದ ಜೆಡಿಎಸ್ ಅಧ್ಯಕ್ಷ ಕುಮಾರಸ್ವಾಮಿ ಅವರೇ ಈಗ ಬಿಜೆಪಿ ಪರ ಆಪರೇಷನ್ ಗೆ ಇಳಿದು ಬಿಟ್ಟಿದ್ದಾರಾ? ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡಲು ಕಾಂಗ್ರೆಸ್ ಶಾಸಕರಿಗೆ ಕುಮಾರಸ್ವಾಮಿ ಆಮಿಷವೊಡ್ಡುವ ಕೆಲಸ ಶುರು ಮಾಡಿದ್ದಾರಾ?

ರಾಜ್ಯಸಭೆಗೆ ನಡೆಯಲಿರುವ ಚುನಾವಣೆಗೆ ತಮ್ಮ ಎರಡನೇ ಅಭ್ಯರ್ಥಿಗೆ ಕೊರತೆಯಾಗುವ ಮತಗಳನ್ನು ಪಡೆಯಲು ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟ ಪ್ರಯತ್ನ ಆರಂಭಿಸಿದ್ದು,

ಪಕ್ಷೇತರರು ಸೇರಿದಂತೆ ಆಡಳಿತಾರೂಢ ಕಾಂಗ್ರೆಸ್ಸಿನ ಕೆಲವು ಶಾಸಕರನ್ನು ಕುಮಾರಸ್ವಾಮಿ ಸದ್ದಿಲ್ಲದೆ ಸಂಪರ್ಕಿಸಿದ್ದಾರೆ ಎಂಬ ಆರೋಪಗಳು ಇದೀಗ ಕೇಳಿ ಬಂದಿವೆ.

"ಆಪರೇಷನ್ ಕಮಲ ಬಿಜೆಪಿ ಪಾಪದ ಕೂಸು. ಆ ಕೂಸಿಗೆ ಹಾಲೆರೆದವರು ಯಾರಯ್ಯ ಸುಳ್ಳುರಾಮಯ್ಯ? ಇಂಥ ಅನೈತಿಕ ಕೂಸಿಗೆ ಹಾಲೆರೆದು ಬೆಳೆಸಿ, ದೊಡ್ಡದು ಮಾಡಿದ ನೀವು, ಜೆಡಿಎಸ್ ಪಕ್ಷ ಬಿಜೆಪಿ ಬೀ ಟಿಂ ಎಂದು ಹಾದಿಬೀದಿಯಲ್ಲಿ ಜಾಗಟೆ ಹೊಡೆಯುತ್ತಿದ್ದೀರಲ್ಲ? ಇದ್ಯಾವ ಸೀಮೆ ರಾಜಕೀಯ? "

ಇದು ಜೆಡಿಎಸ್ ರಾಜ್ಯಾಧ್ಯಕ್ಷ, ಮಾಜಿ ಮುಖ್ಯಮತ್ರಿ ಎಚ್ ಡಿ ಕುಮಾರಸ್ವಾಮಿ ಅವರು ಕಳೆದೊಂದು ವರ್ಷದ ಹಿಂದೆ 'ಜೆಡಿಎಸ್ ಪಕ್ಷ ಬಿಜೆಪಿ ಬೀ ಟಿಂ' ಎಂದು ಅಂದು ವಿಪಕ್ಷ ನಾಯಕರಾಗಿದ್ದ ಸಿದ್ದರಾಮಯ್ಯ ಅವರ ಆರೋಪಕ್ಕೆ ಪ್ರತಿಕ್ರಿಯೆ ನೀಡಿ ಮಾಡಿದ್ದ ಟ್ವೀಟ್.

ಕಾಂಗ್ರೆಸ್ ಅನ್ನು ಟೀಕಿಸುವ ಜೊತೆಗೆ ಬಿಜೆಪಿಯ ವಿರುದ್ಧ ಇಂಥ ಹೇಳಿಕೆಗಳನ್ನು ನಿರಂತರ ನೀಡಿಕೊಂಡೇ ಬರುತ್ತಿದ್ದ ಕುಮಾರಸ್ವಾಮಿ ಅವರಿಗೆ ಇತ್ತೀಚೆಗೆ ಜ್ಞಾನೋದಯ ಆಗಿ, ಅದೇ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ್ರು. ಅಲ್ಲಿಗೆ ಕುಮಾರಸ್ವಾಮಿ ಅವರ ಬಿಜೆಪಿ ವಿರುದ್ಧದ ಎಲ್ಲಾ ಆರೋಪಗಳು ನಿಂತು ಹೋದವು. ಸಂಘಪರಿವಾರದ ನಾಯಕರ ವಿರುದ್ಧ ಅವರಾಡಿದ್ದ ಮಾತುಗಳೆಲ್ಲಾ ತನಗೆ ಯಾರೋ ತಪ್ಪಾದ ಮಾಹಿತಿ ನೀಡಿದ್ದೂ ಎಂದೂ ಅವರು ಹೇಳಿದ್ದಾಯಿತು.

ಈಗ ಕೇಸರಿ ಶಾಲು ಹಾಕಿಕೊಂಡಿರುವ ಕುಮಾರಸ್ವಾಮಿಯವರು ಸ್ವತಃ ಕಾಂಗ್ರೆಸ್ ಶಾಸಕರ ಆಪರೇಷನ್ ಗೆ ಇಳಿದಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಆದರೆ ಯಾವ ಆಪರೇಷನ್ ಅನ್ನು ಬಿಜೆಪಿಯ ಪಾಪದ ಕೂಸು ಅಂತ ಆಡಿದ್ರೋ, ಅದೇ ಪಾಪದ ಕೂಸಿನ ಜೊತೆ ಒಡನಾಟ ಮಾಡ್ಕೊಂಡಿದ್ದಾರೆ ಕುಮಾರಸ್ವಾಮಿ. ಹಾಗಂತ ಡಿಸಿಎಂ ಡಿಕೆ ಶಿವಕುಮಾರ್ ಅವರೇ ಹೇಳಿದ್ದಾರೆ.

‘ರಾಜ್ಯಸಭೆ ಚುನಾವಣೆ ಹಿನ್ನೆಲೆಯಲ್ಲಿ ಜೆಡಿಎಸ್‌ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರು ನಮ್ಮ ಶಾಸಕರಿಗೆ ಕರೆ ಮಾಡಿ ಆಫರ್ ನೀಡುತ್ತಿರುವುದು, ಧಮಕಿ ಹಾಕುತ್ತಿರುವ ಬಗ್ಗೆ ನನಗೆ ಮಾಹಿತಿ ಬಂದಿದೆ. ಯಾರಿಗೆ ಫೋನ್ ಮಾಡಿ, ಏನು ಮಾತನಾಡುತ್ತಿದ್ದಾರೆ, ಯಾರಿಗೆ ಧಮಕಿ ಹಾಕುತ್ತಿದ್ದಾರೆ ಎಂಬುದೆಲ್ಲವೂ ನಮಗೆ ತಿಳಿಯುತ್ತಿದೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹೇಳಿದ್ದಾರೆ.

ಅಲ್ಲದೆ, ಬಿಜೆಪಿ ತಂತ್ರಗಾರಿಕೆ ಬಗ್ಗೆಯೂ ಗೊತ್ತಿದೆ. ಮೊದಲು ಅವರು ತಮ್ಮ ಮನೆ ಸರಿಪಡಿಸಿಕೊಳ್ಳಲಿ ಎಂದು ತಿರುಗೇಟು ನೀಡಿದ್ದಾರೆ ಡಿಸಿಎಂ ಡಿಕೆಶಿ . ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ನಾನು ಹೆಚ್ಚಿಗೆ ಮಾತನಾಡುವುದಿಲ್ಲ. ಬಿಜೆಪಿಯವರು ಅಡ್ಡಮತದಾನಕ್ಕೆ ಪ್ರಯತ್ನಿಸುತ್ತಿದ್ದಾರೆ. ಸುಮ್ಮನೆ ಅವರು ಐದನೇ ಅಭ್ಯರ್ಥಿ ಕಣಕ್ಕಿಳಿಸುತ್ತಾರಾ? ಒಂದು ಪ್ರಯತ್ನ ಮಾಡೋಣ ಎಂದು ಹಾಕಿದ್ದಾರೆ. ಮತದಾನದ ದಿನ ಎಲ್ಲವೂ ಗೊತ್ತಾಗಲಿದೆ ಎಂದು ಹೇಳಿದರು.

ಆದರೆ, ಜೆಡಿಎಸ್ ಸಂಪರ್ಕಿಸಿದ ಕಾಂಗ್ರೆಸ್ ಶಾಸಕರಿಂದ ಯಾವುದೇ ಅಡ್ಡ ಮತದಾನದ ಭರವಸೆ ಇದುವರೆಗೂ ಸಿಕ್ಕಿಲ್ಲ ಎನ್ನಲಾಗಿದೆ. ಬಿಜೆಪಿಯ ಹೆಚ್ಚುವರಿ ಮತ್ತು ಜೆಡಿಎಸ್ ನ ಎಲ್ಲ ಮತಗಳನ್ನು ಪಡೆದರೂ ಮೈತ್ರಿ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲ್ಲಲು ಇನ್ನೂ ಐದು ಮತಗಳ ಕೊರತೆ ಎದುರಾಗಲಿದೆ. ಪಕ್ಷೇತರ ನಾಲ್ವರಲ್ಲಿ ಜನಾರ್ದನ ರೆಡ್ಡಿ ಹೊರತು ಉಳಿದ ಮೂವರು ಕಾಂಗ್ರೆಸ್ ಪರ ಒಲವು ಹೊಂದಿರೋರು. ಹೀಗಾಗಿ ಹೆಚ್ಚುವರಿ ಮತ ಸಿಗಬೇಕಾದರೆ ಕಾಂಗ್ರೆಸ್ ನ ಅಥವಾ ಕಾಂಗ್ರೆಸ್ ಪರ ಒಲವಿರುವ ಶಾಸಕರನ್ನೇ ತನ್ನ ಬುಟ್ಟಿಗೆ ಹಾಕಿಕೊಳ್ಳುವ ಪ್ಲಾನ್ ಬಿಜೆಪಿ ಮತ್ತು ಜೆಡಿಎಸ್ ನದ್ದು. ಈಗಾಗಲೇ ಅದರ ಪ್ರಯತ್ನಗಳು ನಡೆದಿದ್ದು ಆದರೆ ಆ ಕಡೆಯಿಂದ ಯಾವುದೇ ಭರವಸೆ ಸಿಕ್ಕಿಲ್ಲ ಎನ್ನಲಾಗಿದೆ.

ಅಲ್ಲಿ ಚಂಡೀಗಢದಲ್ಲಿ ಬಹುಮತ ಇರುವ ಆಪ್ ಹಾಗು ಕಾಂಗ್ರೆಸ್ ನ ಅಭ್ಯರ್ಥಿಯನ್ನು ಸೋಲಿಸಲು ಚುನಾವಣಾ ಅಕ್ರಮ ಮಾಡಿ ಸಿಕ್ಕಿ ಬಿದ್ದಿರುವ ಬಿಜೆಪಿ ಮತ್ತೂ ಪಾಠ ಕಲಿಯದೆ ಆಪ್ ನ ಮೂವರು ಕಾರ್ಪೊರೇಟರ್ ಗಳನ್ನು ತನ್ನೆಡೆಗೆ ಸೆಳೆದುಕೊಂಡಿದೆ.

ಅಂದರೆ ಹೇಗಾದರೂ ಸರಿ ಚುನಾವಣೆ ಗೆಲ್ಲಬೇಕು ಎಂಬುದು ಬಿಜೆಪಿ ಪಾಲಿಸಿ. ಈಗ ರಾಜ್ಯದಲ್ಲೂ ಗೆಲ್ಲಲು ಬೇಕಾದಷ್ಟು ಮತಗಳು ಇಲ್ಲದಿದ್ದರೂ ಬಿಜೆಪಿ ಜೆಡಿಎಸ್ ಸೇರಿಕೊಂಡು ಎರಡನೇ ಅಭ್ಯರ್ಥಿ ಹಾಕಿವೆ. ಅಂದರೆ ಇಲ್ಲೂ ಏನಾದರೊಂದು ಆಟ ಆಡಿ ಕಾಂಗ್ರೆಸ್ ಮತಗಳನ್ನು ಸೆಳೆದು ಗೆಲ್ಲೋ ಇರಾದೆ ಎಂಬುದು ಸ್ಪಷ್ಟ. ಈಗ ಡಿ ಕೆ ಶಿವಕುಮಾರ್ ಅವರು ಮಾಡುತ್ತಿರೋ ಆರೋಪ ನೋಡಿದರೆ ಕುಮಾರಸ್ವಾಮಿಯವರೇ ಮತ ಸೆಳೆಯುವ ಕೆಲಸಕ್ಕೆ ಇಳಿದ ಹಾಗೆ ಕಾಣುತ್ತಿದೆ.

ಮೊನ್ನೆ ಸದನದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಬಜೆಟ್ ಮಂಡಿಸಲು ಆರಂಭಿಸುವಷ್ಟರಲ್ಲೇ ಸಭಾತ್ಯಾಗ ಮಾಡಿ ಬಿಜೆಪಿಯವರ ಜೊತೆ ಎದ್ದು ಹೋದ ಕುಮಾರಸ್ವಾಮಿ ಸದನದ ಹೊರಗೆ ಬಜೆಟ್ ವಿರುದ್ಧ ಘೋಷಣೆ ಕೂಗಿದ್ರು. ಆ ನಂತರ ಬಜೆಟ್ ಅನ್ನು ಏರ್ರಾಬಿರ್ರಿ ಟೀಕಿಸೋದೇ ಅವರ ಕೆಲಸವಾಗ್ಬಿಟ್ಟಿದೆ. ಆದರೆ, ವಿಪಕ್ಷ ಬಿಜೆಪಿಯ ಶಾಸಕರಾಗಿರುವ ಎಸ್ ಟಿ ಸೋಮಶೇಖರ್ ಅವರು ಬಜೆಟ್ ನಲ್ಲಿ ಬೆಂಗಳೂರಿಗೆ ಕೊಟ್ಟ ಕೊಡುಗೆಗಳನ್ನು ಪ್ರಶಂಸೆ ಮಾಡಿ, ಡಿಕೆಶಿ , ಸಿದ್ದರಾಮಯ್ಯರನ್ನು ಹೊಗಳಿದ್ರು ..

ಅದೇ ವೇಳೆ ಕುಮಾರಸ್ವಾಮಿ ಅವರು, " ಇಡೀ ದೇಶವೇ ಅಮೃತಕಾಲದ ಬಗ್ಗೆ ಮಾತನಾಡುತ್ತಿದ್ದರೆ, ಮುಖ್ಯಮಂತ್ರಿ ಸಿದ್ದರಾಮಯ್ಯ ನವರು ವಿನಾಶಕಾಲದ ಬಗ್ಗೆ ಚರ್ಚೆ ಮಾಡುತ್ತಿದ್ದಾರೆ. ಸುಳ್ಳು ಹೇಳಿ ಹೇಳಿ ಅದನ್ನೇ ಸತ್ಯ ಮಾಡಲು ಹೊರಟಿದ್ದಾರೆ. ಇದು 15ನೇ ದಾಖಲೆ ಬಜೆಟ್ ಅಲ್ಲ, ಡಿಪಿಆರ್ ಬಜೆಟ್ ಅಷ್ಟೇ ಅಂದಿದ್ದಾರೆ. ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ ಒಡೆಯುವಲ್ಲಿ ಕುಮಾರಸ್ವಾಮಿ ಹಾಗು ಬಿಜೆಪಿ ಯಶಸ್ವಿ ಆಗ್ತಾರಾ ? ಕಾದು ನೋಡ್ಬೇಕು

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!