ಲ್ಯಾಬ್ ಉತ್ಪಾದಿತ ಮಾಂಸ ಭಾರತದ ಮಾರುಕಟ್ಟೆಗೂ ಬರಲಿದೆಯೇ?

Update: 2023-07-04 14:18 GMT

- ಆರ್.ಜೀವಿ

"ಕೋಶ ಕೃಷಿ ಮಾಂಸ ತಯಾರಿಸಲು ಪ್ರಾಣಿಗಳ ಜೀವಕೋಶಗಳನ್ನು ತೆಗೆದು ಅವನ್ನು ಲ್ಯಾಬ್ನಲ್ಲ್ಲಿ ವಿಶಿಷ್ಟ ವಾತಾವರಣದಲ್ಲಿ ಬೆಳೆಸಲಾಗುತ್ತದೆ. ಮೂಲ ಮಾಂಸ ಹೇಗಿರುತ್ತದೆಯೊ ಅದನ್ನೇ ಗುಣದಲ್ಲಿ ಹೋಲುವಂತೆ ಮಾಡಲು ಅಗತ್ಯವಾಗುವ ಎಲ್ಲ ಅಂಶಗಳೊಂದಿಗೆ ಈ ಕೋಶಗಳನ್ನು ಲ್ಯಾಬ್ನಲ್ಲ್ಲಿ ಸಂಯೋಜಿಸಲಾಗುತ್ತದೆ. ಹೀಗೆ ಕೋಶಗಳೊಂದಿಗೆ ಸಂಯೋಜಿಸಲಾಗುವ ಸಂಪನ್ಮೂಲಗಳೆಂದರೆ, ಸಾಮಾನ್ಯವಾಗಿ ಪೋಷಕಾಂಶಗಳು, ಕೊಬ್ಬುಗಳು, ಕಾರ್ಬೋಹೈಡ್ರೇಟ್ಗಳು, ಅಮೈನೋ ಆಮ್ಲಗಳು. ಇದಕ್ಕೆ ಸೂಕ್ತ ತಾಪಮಾನವನ್ನು ವ್ಯವಸ್ಥೆಗೊಳಿಸಬೇಕಾಗುತ್ತದೆ. ಈ ಪ್ರಕ್ರಿಯೆ ಸಂಭವಿಸುವ ಸೆಟ್ಟಿಂಗ್ ಸಾಮಾನ್ಯವಾಗಿ ಜೈವಿಕ ರಿಯಾಕ್ಟರ್ ಆಗಿದ್ದು, ಕಲ್ಟಿವೇಟರ್ ಎಂದೂ ಕರೆಯಲಾಗುತ್ತದೆ".

ಪ್ರಯೋಗಾಲಯದಲ್ಲಿ ಕೋಶಗಳಿಂದ ಅಭಿವೃದ್ಧಿಪಡಿಸಲಾಗುವ ಕೋಳಿ ಮಾಂಸ ಮಾರಾಟಕ್ಕೆ ಕ್ಯಾಲಿಫೋರ್ನಿಯಾದ ಎರಡು ಕಂಪೆನಿಗಳಿಗೆ ಅನುಮತಿ ಸಿಕ್ಕಿದೆ. ಇದರೊಂದಿಗೆ ಅಮೆರಿಕ ಇಂಥ ನಿರ್ಧಾರವನ್ನು ತೆಗೆದುಕೊಂಡ ಎರಡನೇ ದೇಶವಾಗಿದೆ. ಈ ಮೊದಲು 2020ರಲ್ಲಿ ಸಿಂಗಾಪುರ ಲ್ಯಾಬ್ ಉತ್ಪಾದಿತ ಮಾಂಸ ಮಾರಾಟಕ್ಕೆ ಮೊದಲ ಬಾರಿಗೆ ಅನುಮತಿ ನೀಡಿತ್ತು.

ಅಮೆರಿಕ ಕೃಷಿ ಇಲಾಖೆ ಈಗ ಅಂತಿಮವಾಗಿ, ಮಾರಾಟವಾಗಲಿರುವ ಲ್ಯಾಬ್ ಉತ್ಪಾದಿತ ಮಾಂಸಕ್ಕೆ ಸೆಲ್-ಕಲ್ಟಿವೇಟೆಡ್ ಚಿಕನ್ ಅಥವಾ ಕೋಶ ಕೃಷಿ ಚಿಕನ್ ಎಂಬ ಲೇಬಲ್ ಅನ್ನು ಅಂತಿಮಗೊಳಿಸಿದೆ. ಗುಡ್ ಮೀಟ್ ಮತ್ತು ಅಪ್ಸೈಡ್ ಫುಡ್ಸ್ ಎಂಬ ಎರಡು ಕಂಪೆನಿಗಳು ಈಗ ಲ್ಯಾಬ್ನಲ್ಲಿ ತಯಾರಿಸುವ ಚಿಕನ್ ಮಾರಾಟಕ್ಕೆ ಅಮೆರಿಕ ಸರಕಾರದ ಅನುಮೋದನೆ ಪಡೆದಿವೆ.

ಪ್ರಾಣಿಗಳನ್ನು ಕೊಲ್ಲದೆ ಅವುಗಳ ಸ್ಟೆಮ್ ಸೆಲ್ ಬಳಸಿ ಮಾಂಸ ಉತ್ಪಾದನೆ ಮಾಡಲಾಗುತ್ತದೆ. ಈ ಸ್ಟೆಮ್ ಸೆಲ್ಗಳಿಗೆ ಅಮೈನೋ ಆ್ಯಸಿಡ್ ಮತ್ತು ಕಾರ್ಬೊಹೈಡ್ರೇಟ್ಸ್ ಒದಗಿಸಿ ಲ್ಯಾಬ್ಗಳಲ್ಲಿ ಬೆಳೆಸಲಾಗುತ್ತದೆ. ನೋಡಲು ಈ ಮಾಂಸ ಪ್ರಾಣಿಗಳ ಮಾಂಸದಂತೆಯೇ ಇರುತ್ತದೆ. ರುಚಿಯಲ್ಲಿಯೂ ವ್ಯತ್ಯಾಸವೇನೂ ಇರುವುದಿಲ್ಲ ಎನ್ನಲಾಗುತ್ತಿದೆಯಾದರೂ, ಇನ್ನೂ ಪ್ರಯೋಗಗಳು ನಡೆದೇ ಇವೆ.

2021ರ ವರದಿ ಪ್ರಕಾರ 24 ದೇಶಗಳಲ್ಲಿ 107 ಕಂಪೆನಿಗಳು ಲ್ಯಾಬ್ನಲ್ಲಿ ಮಾಂಸ ಅಭಿವೃದ್ಧಿಪಡಿಸುವುದರಲ್ಲಿ ತೊಡಗಿವೆ. ಭಾರತದಲ್ಲಿಯೂ ಇಂಥ ಎರಡು ಕಂಪೆನಿಗಳಿವೆ.

ಏನಿದು ಕೋಶ ಕೃಷಿ ಚಿಕನ್?

ಇದು ಜೀವಕೋಶಗಳಿಂದ ಅಭಿವೃದ್ಧಿಪಡಿಸಲಾಗುವ ಚಿಕನ್. ಕೋಶ ಕೃಷಿ ಮಾಂಸ ತಯಾರಿಸಲು ಪ್ರಾಣಿಗಳ ಜೀವಕೋಶಗಳನ್ನು ತೆಗೆದು ಅವನ್ನು ಲ್ಯಾಬ್ನಲ್ಲ್ಲಿ ವಿಶಿಷ್ಟ ವಾತಾವರಣದಲ್ಲಿ ಬೆಳೆಸಲಾಗುತ್ತದೆ. ಮೂಲ ಮಾಂಸ ಹೇಗಿರುತ್ತದೆಯೊ ಅದನ್ನೇ ಗುಣದಲ್ಲಿ ಹೋಲುವಂತೆ ಮಾಡಲು ಅಗತ್ಯವಾಗುವ ಎಲ್ಲ ಅಂಶಗಳೊಂದಿಗೆ ಈ ಕೋಶಗಳನ್ನು ಲ್ಯಾಬ್ನಲ್ಲ್ಲಿ ಸಂಯೋಜಿಸಲಾಗುತ್ತದೆ. ಹೀಗೆ ಕೋಶಗಳೊಂದಿಗೆ ಸಂಯೋಜಿಸಲಾಗುವ ಸಂಪನ್ಮೂಲಗಳೆಂದರೆ, ಸಾಮಾನ್ಯವಾಗಿ ಪೋಷಕಾಂಶಗಳು, ಕೊಬ್ಬುಗಳು, ಕಾರ್ಬೋಹೈಡ್ರೇಟ್ಗಳು, ಅಮೈನೋ ಆಮ್ಲಗಳು. ಇದಕ್ಕೆ ಸೂಕ್ತ ತಾಪಮಾನವನ್ನು ವ್ಯವಸ್ಥೆಗೊಳಿಸಬೇಕಾಗುತ್ತದೆ. ಈ ಪ್ರಕ್ರಿಯೆ ಸಂಭವಿಸುವ ಸೆಟ್ಟಿಂಗ್ ಸಾಮಾನ್ಯವಾಗಿ ಜೈವಿಕ ರಿಯಾಕ್ಟರ್ ಆಗಿದ್ದು, ಕಲ್ಟಿವೇಟರ್ ಎಂದೂ ಕರೆಯಲಾಗುತ್ತದೆ. ಕಂಟೇನರ್ನಂತಿರುವ ಸೆನ್ಸರ್ ಫಿಟ್ ಯಂತ್ರ ನಿರ್ದಿಷ್ಟ ಜೈವಿಕ ಪರಿಸರವನ್ನು ಸಿದ್ಧಪಡಿಸಲೆಂದೇ ವಿನ್ಯಾಸಗೊಂಡಿದ್ದಾಗಿದೆ. ಇದು ಒಳಗೊಂಡಿರುವ ತಾಂತ್ರಿಕತೆಯ ಕಾರಣದಿಂದಾಗಿ, ಈ ರೀತಿಯಲ್ಲಿ ಮಾಂಸ ಉತ್ಪಾದಿಸುವುದನ್ನು ಸೆಲ್ಯುಲರ್ ಕೃಷಿ ಎಂದೂ ಕರೆಯಲಾಗುತ್ತದೆ.

ಒಮ್ಮೆ ಈ ಕೋಶಗಳು ಸಂಖ್ಯೆಯಲ್ಲಿ ಸಾಕಷ್ಟು ದೊಡ್ಡದಾದರೆ, ಮಾಂಸ ತಯಾರಾಗಲು ಸುಮಾರು ಎರಡರಿಂದ ಮೂರು ವಾರಗಳು ಬೇಕೆನ್ನಲಾಗಿದೆ. ಹಾಗೆ ಸಿದ್ಧವಾದ ಮಾಂಸ, ಕೊಚ್ಚಿದ ಮಾಂಸವನ್ನು ಹೋಲುತ್ತದೆ. ಅದರ ಆಕಾರವನ್ನು ಉತ್ತಮಪಡಿಸಲು, ಆಕರ್ಷಕವಾಗಿ ಕಾಣುವಂತೆ ಮಾಡಲು ಪೂರಕ ಪದಾರ್ಥಗಳನ್ನು ಬೆರೆಸಿ, ಸಂಗ್ರಹಿಸಿ, ನಂತರ ಸಂಸ್ಕರಿಸಲಾಗುತ್ತದೆ. ವಿವಿಧ ರೆಸಿಪಿಗಳಿಗೆ ಹೊಂದುವಂತೆ ಅವನ್ನು ಸಿದ್ಧಪಡಿಸಲಾಗುತ್ತದೆ. ಕಟ್ಲೆಟ್ಗಳು, ಸಾಸೇಜ್ಗಳು ಅಥವಾ ಇತರ ರೂಪಗಳಲ್ಲಿ ವಿವಿಧ ಮಾಂಸ ಉತ್ಪನ್ನಗಳಾಗಿ ಸಿದ್ಧಪಡಿಸಲಾಗುತ್ತದೆ.

ಕೋಶ ಕೃಷಿ ಮಾಂಸ ಯಾವ ರೂಪದಲ್ಲಿ ಸಿಗಲಿದೆ?

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆ (ಎಫ್ಎಒ) ಪ್ರಕಾರ, ಹಂದಿಮಾಂಸದ ನಂತರ ಕೋಳಿ ಮಾಂಸವೇ ಜಗತ್ತಿನಲ್ಲಿ ಅತಿ ಹೆಚ್ಚು ಸೇವಿಸುವ ಮಾಂಸ. ಆದರೆ ಅಮೆರಿಕದಲ್ಲಿ 2010ರಿಂದ ಅತಿ ಹೆಚ್ಚು ಸೇವಿಸುವುದು ಕೋಳಿಮಾಂಸವನ್ನೇ. ಗುಡ್ ಮೀಟ್ ಮತ್ತು ಅಪ್ಸೈಡ್ ಕಂಪೆನಿಗಳು ಸದ್ಯಕ್ಕೆ ಗಮನವಿಟ್ಟಿರುವುದು ಚಿಕನ್ ಮೇಲೆ. ಮುಂದಿನ ದಿನಗಳಲ್ಲಿ ಅವು ಇತರ ಮಾಂಸಗಳನ್ನು ತಯಾರಿಸುವ ನಿಟ್ಟಿನಲ್ಲಿ ತಮ್ಮ ಯೋಜನೆ ವಿಸ್ತರಿಸಲಿವೆ ಎಂದು ಹೇಳಲಾಗಿದೆ. ಸಂಶೋಧಕರು ಸೀ ಬಾಸ್, ಟ್ಯೂನ, ಸಿಗಡಿ ಮತ್ತು ಹಂದಿಯ ಕೋಶ ಕೃಷಿ ಮಾಂಸವನ್ನು ಅಭಿವೃದ್ಧಿಪಡಿಸುತ್ತಿದ್ದಾರೆ. ಸಲಹಾ ಸಂಸ್ಥೆ ಮೆಕಿನ್ಸೆ ಅಂದಾಜಿನ ಪ್ರಕಾರ, ಜಾಗತಿಕ ಪರ್ಯಾಯ ಮಾಂಸ ಮಾರುಕಟ್ಟೆ 2030ರ ವೇಳೆಗೆ 20ರಿಂದ 25 ಶತಕೋಟಿ ಡಾಲರ್ ವಹಿವಾಟಿನದ್ದಾಗಬಹುದು.

ಕೋಶ ಕೃಷಿ ಮಾಂಸ ಪರಿಕಲ್ಪನೆ ಹುಟ್ಟಿದ್ದು ಹೇಗೆ?

ಕೋಶ ಕೃಷಿ ಮಾಂಸದ ಪ್ರತಿಪಾದಕರು ಲ್ಯಾಬ್ ಉತ್ಪಾದಿತ ಮಾಂಸವನ್ನು ಅಭಿವೃದ್ಧಿಪಡಿಸುವುದರ ಉದ್ದೇಶವನ್ನು ಮುಖ್ಯವಾಗಿ ಪರಿಸರದೊಂದಿಗೆ ಮತ್ತು ಮಾನವೀಯತೆಯೊಂದಿಗೆ ಬೆಸೆಯುತ್ತಾರೆ. ಅವರ ವಾದದ ಪ್ರಕಾರ, ಇಂಗಾಲದ ಹೊರಸೂಸುವಿಕೆ ಮತ್ತು ಜಾನುವಾರು ಉತ್ಪಾದನೆಗೆ ಸಂಬಂಧಿಸಿದ ಭೂ ಬಳಕೆಯನ್ನು ಕಡಿಮೆ ಮಾಡಲು ಸಾಧ್ಯ.

ಎಲ್ಲಾ ಮಾನವಜನ್ಯ ಹಸಿರುಮನೆ ಅನಿಲ ಹೊರಸೂಸುವಿಕೆ ಗಳಲ್ಲಿ ಶೇ.14.5ರಷ್ಟು ಜಾಗತಿಕ ಜಾನುವಾರುಗಳಿಂದಲೇ ಉಂಟಾಗುತ್ತದೆ ಎಂದು ಎಫ್ಎಒ ಅಂದಾಜಿಸಿದೆ. ವಿಶ್ವಾದ್ಯಂತ ಆಹಾರ ಉದ್ಯಮಕ್ಕೆ ಸಂಬಂಧಿಸಿದ ಇಂಗಾಲದ ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಪ್ರಮುಖ ಹೆಜ್ಜೆ ಇದು ಎಂದು ಹೇಳಲಾಗುತ್ತಿದೆ.

ಹಾಗೆಯೇ, 2021ರ ವರದಿ ಹೇಳುವಂತೆ ಲ್ಯಾಬ್ ಉತ್ಪಾದಿತ ಮಾಂಸ ಭೂ ಬಳಕೆಯನ್ನು ತಗ್ಗಿಸುತ್ತದೆ. ಕೋಳಿ ಮತ್ತು ಹಂದಿಯಂಥ ಜಾನುವಾರುಗಳ ಸಾಕಣೆಗೆ ಬಹುದೊಡ್ಡ ಸ್ಥಳ ಬೇಕು. ಆದರೆ ಕೋಶ ಕೃಷಿ ಮಾಂಸ ಉತ್ಪಾದನೆ ಮೂಲಕ ಕೋಳಿಯ ಸಂದರ್ಭದಲ್ಲಿ ಶೇ.63ರಷ್ಟು ಮತ್ತು ಹಂದಿಮಾಂಸದ ಸಂದರ್ಭದಲ್ಲಿ ಶೇ.72ರಷ್ಟು ಭೂ ಬಳಕೆ ತಗ್ಗಿಸಬಹುದು ಎಂದು ವರದಿ ಅಂದಾಜಿಸಿದೆ.

ಹವಾಮಾನ ವಿಜ್ಞಾನಿಗಳು ಮಾಂಸ ಸೇವನೆ ಕಡಿಮೆ ಮಾಡಲು ಶ್ರೀಮಂತ ದೇಶಗಳಲ್ಲಿ ಜನರಿಗೆ ಸಲಹೆ ನೀಡುತ್ತಿದ್ದಾರಾದರೂ, ಮಾಂಸಾಹಾರಿ ಆಹಾರಗಳು ಜನಪ್ರಿಯವಾಗಿವೆ. ಹೀಗಿರುವಾಗ, ಲ್ಯಾಬ್ ಉತ್ಪಾದಿತ ಮಾಂಸ ಒಂದು ಭರವಸೆಯ ಪರ್ಯಾಯವಾಗಲಿದೆ. ಇದು ಪ್ರಾಣಿಹತ್ಯೆಯಿಲ್ಲದೆ ಮಾಂಸ ಸೇವನೆ ಮಾಡುವ ಅವಕಾಶವನ್ನು ತೆರೆಯುತ್ತದೆ ಎಂಬುದು ಅವರ ವಾದ.

ಕೋಶ ಕೃಷಿ ಮಾಂಸವನ್ನು ಪ್ರಪಂಚದ ಪೌಷ್ಟಿಕಾಂಶದ ಬೇಡಿಕೆಗಳನ್ನು ಪೂರೈಸುವ ಮಾರ್ಗವಾಗಿಯೂ ವಿಜ್ಞಾನಿಗಳು ಮುಂದಿಟ್ಟಿದ್ದಾರೆ.

ಕೆಲವು ತಜ್ಞರು ಹೇಳುವ ಪ್ರಕಾರ, ಲ್ಯಾಬ್ ಉತ್ಪಾದಿತ ಮಾಂಸವನ್ನು ಆರೋಗ್ಯದ ದೃಷ್ಟಿಯಿಂದ ಕಸ್ಟಮೈಸ್ ಮಾಡಲು ಅವಕಾಶವಿದೆ. ಉದಾಹರಣೆಗೆ ಕಡಿಮೆ ಕೊಬ್ಬನ್ನು ಒಳಗೊಂಡಿರುವಂತೆ ಮಾಂಸವನ್ನು ತಯಾರಿಸಬಹುದು. ಇದರೊಂದಿಗೆ ಸಾರ್ವಜನಿಕ ಆರೋಗ್ಯಕ್ಕೆ ಕೊಡುಗೆ ನೀಡಿದಂತಾಗುತ್ತದೆ.

ಸವಾಲುಗಳೇನು?

ಗ್ರಾಹಕರು ಇದನ್ನು ಹೇಗೆ ಸ್ವೀಕರಿಸಬಹುದು ಎಂಬುದು ಮುಖ್ಯ ಪ್ರಶ್ನೆ. ಕೋಶ ಕೃಷಿ ಮಾಂಸ ಸಾಂಪ್ರದಾಯಿಕ ಮಾಂಸದ ರುಚಿ, ಸತ್ವ ಮತ್ತು ಅದು ಕಾಣುವ ಬಗೆಗೆ ಎಷ್ಟು ಹೊಂದಿಕೆಯಾಗುತ್ತದೆ ಎಂದು ಖಚಿತಪಡಿಸಿಕೊಳ್ಳುವುದು ದೊಡ್ಡ ಸವಾಲಾಗಿ ಉಳಿದಿದೆ. ಸಂಶೋಧಕರು ಕೆಲವು ಅಂಶಗಳಲ್ಲಿ ಯಶಸ್ಸು ಸಾಧಿಸಿದ್ದರೂ, ಇನ್ನೂ ಅನೇಕ ವಿಚಾರಗಳಲ್ಲಿ ಪ್ರಗತಿಯಾಗಬೇಕಿದೆ.

ಕೋಶ ಕೃಷಿ ಮಾಂಸಕ್ಕೆ ಸ್ಟೆಮ್ ಸೆಲ್ ಪಡೆಯಲು ಪ್ರಾಣಿಗಳ ಬಳಕೆಯಾಗುತ್ತದೆ. ಸಾಮಾನ್ಯ ಮಾಂಸಕ್ಕೆ ಬೇಕಾದ ಪ್ರಾಣಿಗಳ ಸಂಖ್ಯೆಗಿಂತ ಬಹಳ ಕಡಿಮೆಯಾಗಿದ್ದರೂ ಲ್ಯಾಬ್ ಮಾಂಸಕ್ಕೂ ಪ್ರಾಣಿಗಳು ಬೇಕು. ಹಾಗಾಗಿ ಇದು ಸೂಕ್ತ ಪರ್ಯಾಯ ಅಲ್ಲ ಎಂಬ

ವಾದಗಳೂ ಇವೆ. ಇನ್ನು ಬೆಲೆಯ ವಿಚಾರಕ್ಕೆ ಬರುವುದಾದರೆ, ಪ್ರಾಣಿ ಹತ್ಯೆ ಮಾಡದೆ ಪ್ರಾಣಿಗಳ ದೇಹದಿಂದ ತೆಗೆದ ಕೋಶಗಳನ್ನು ಬಳಸಿ ಉತ್ಪಾದಿಸುವ ಈ ಮಾಂಸದ ಉತ್ಪಾದನಾ ವೆಚ್ಚ ದುಬಾರಿ.

ಕೋಶ ಕೃಷಿ ಮಾಂಸದ ಮಾರಾಟ ಬೆಲೆ ಹೆಚ್ಚಾಗಿಯೇ ಇರಲಿದೆ ಎನ್ನಲಾಗುತ್ತದೆ. ಬೆಲೆ ಸ್ಪರ್ಧಾತ್ಮಕವಾಗಿರಬಾರದು ಎಂಬ ಅಭಿಪ್ರಾಯಗಳಿವೆಯಾದರೂ, ಗುಣಮಟ್ಟ ನಿಯಂತ್ರಣದ ಹಿನ್ನೆಲೆಯಲ್ಲಿ ವೆಚ್ಚ ಹೆಚ್ಚಾಗಲಿದೆ ಎಂಬ ಕಳವಳವೂ ವ್ಯಕ್ತವಾಗುತ್ತಿದೆ.

ಮಾಂಸದ ಬೃಹತ್ ಬೇಡಿಕೆಗೆ ಅನುಗುಣವಾಗಿ ಅಗತ್ಯ ಸಂಪನ್ಮೂಲ ಗಳ ವಿಚಾರವೂ ಮತ್ತೊಂದು ದೊಡ್ಡ ಸವಾಲು. ಸೆಲ್ಯುಲಾರ್ ಕೃಷಿ ಪ್ರಕ್ರಿಯೆಗಾಗಿ ಉತ್ತಮ ಗುಣಮಟ್ಟದ ಜೀವಕೋಶಗಳು, ಸೂಕ್ತವಾದ ಬೆಳವಣಿಗೆಯ ಮಾಧ್ಯಮಗಳು ಮತ್ತು ಇತರ ಸಂಪನ್ಮೂಲಗಳು ಅವಶ್ಯಕ. ಈಗ ಜಾಗತಿಕ ಅಗತ್ಯಕ್ಕೆ ಬೇಕಾಗುವಷ್ಟು ಈ ಸಂಪನ್ಮೂಲಗಳ ಕ್ರೋಡೀಕರಣ ಸಾಧ್ಯವೇ ? ಅದು ಸಾಧ್ಯವಾದರೂ ಉತ್ಪಾದನಾ ವೆಚ್ಚ ತಗ್ಗಿಸಲು ಸಾಧ್ಯವೇ ? ಈ ಪ್ರಶ್ನೆ ಬಹಳ ಮುಖ್ಯವಾಗಿದೆ.

ಭಾರತದಲ್ಲಿ ಕೋಶ ಕೃಷಿ ಮಾಂಸ ಅಭಿವೃದ್ಧಿ

ಭಾರತದಲ್ಲಿ ನ್ಯಾಷನಲ್ ರೀಸರ್ಚ್ ಸೆಂಟರ್ ಆನ್ ಮೀಟ್ (ಎನ್‌ಆರ್‌ಸಿಎಂ) ಮತ್ತು ಹೈದರಾಬಾದ್ ಮೂಲದ ಸೆಂಟರ್ ಫಾರ್ ಸೆಲ್ಯುಲರ್ ಆ್ಯಂಡ್ ಮಾಲಿಕ್ಯೂಲರ್ ಬಯಾಲಜಿ (ಸಿಸಿಎಂಬಿ) ಮುಖ್ಯವಾಗಿ ಕೋಶ ಕೃಷಿ ಮಾಂಸ ಅಭಿವೃದ್ಧಿಪಡಿಸುವ ಪ್ರಯೋಗದಲ್ಲಿ ತೊಡಗಿವೆ. ಅಗತ್ಯ ಮೂಲಸೌಕರ್ಯ ಮತ್ತು ಪರಿಣತಿಯನ್ನು ಇನ್ನೂ ಅಭಿವೃದ್ಧಿಪಡಿಸಬೇಕಿದೆ.

ಇದೇ ಸಿಸಿಎಂಬಿ ಕೇಂದ್ರದಲ್ಲಿ ಐದು ವರ್ಷಗಳ ಹಿಂದೆ (ಆಗಸ್ಟ್, 2018) ಪ್ರೊಟೀನ್ ಮತ್ತು ಆಹಾರ ತಂತ್ರಜ್ಞಾನದ ಭವಿಷ್ಯ ಎಂಬ ವಿಚಾರವಾಗಿ ಶೃಂಗಸಭೆ ನಡೆದಿತ್ತು.

ಪ್ರಯೋಗಾಲಯಗಳಲ್ಲಿ ಪ್ರಾಗಳ ಕೋಶದಿಂದ ತಯಾರಾದ ಮಾಂಸ ಸೇವನೆ ಮೂಲಕ ಗೋರಕ್ಷಕರ ಹಾವಳಿ, ಅವರಿಂದಾಗುವ ಗುಂಪು ಹತ್ಯೆ, ಆಕ್ರಮಣ ಮತ್ತು ಬೆದರಿಕೆಗಳಂತಹ ಹಿಂಸಾತ್ಮಕ ಕ್ರಮಗಳನ್ನು ತಡೆಗಟ್ಟಬಹುದು ಎಂದು ಆಗ ಕೇಂದ್ರ ಸಚಿವೆ ಮೇನಕಾ ಗಾಂಧಿ ಆ ಶೃಂಗಸಭೆಯಲ್ಲಿ ಹೇಳಿದ್ದರು. ಪರ್ಯಾಯ ಮಾಂಸದ ಅಗತ್ಯವನ್ನು ಕಂಡುಕೊಳ್ಳಬೇಕಾದ ಅಗತ್ಯವನ್ನು ಪ್ರತಿಪಾದಿಸಿದ್ದ ಆಗಲೇ ಅವರು ಅದನ್ನು ಅಹಿಂಸಾ ಮಾಂಸ ಎಂದು ಬ್ಣಸಿದ್ದರು.

ಇನ್ನು ಬಹುಶಃ ಅಂಥ ದಿನಗಳು ದೂರವಿರಲಾರವು. ಈಗ ಅಮೆರಿಕದಲ್ಲಿ ಲ್ಯಾಬ್ ಉತ್ಪಾದಿತ ಮಾಂಸ ಮಾರಾಟಕ್ಕೆ ಅಧಿಕೃತ ಮುದ್ರೆ ಬಿದ್ದಿರುವುದರಿಂದ ಇಲ್ಲಿಯೂ ಅದಕ್ಕೆ ಪ್ರೇರಣೆಗಳು ಸಿಗಲಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!