ಬಿಜೆಪಿಗೆ ಕೈ ಕೊಡ್ತಾರಾ ತೇಜಸ್ವಿನಿ ಅನಂತ್ ಕುಮಾರ್ ?
ಸದ್ಯ ತೀವ್ರ ಚರ್ಚೆಯಲ್ಲಿರುವ ಆಪರೇಷನ್ ಹಸ್ತ ವಿಚಾರ ಬೇರೆಯೇ ಒಂದು ಹಂತ ಮುಟ್ಟಲಿದೆಯೆ?. ಮತ್ತದರಲ್ಲಿ ತೇಜಸ್ವಿನಿ ಅನಂತಕುಮಾರ್ ಎಂಬ ಪರ್ವವೊಂದು ತೆರೆದುಕೊಳ್ಳಲಿದೆಯೆ?. ರಾಜಕೀಯ ನಾಯಕರುಗಳ ನಡುವೆ ಈಗ ನಡೆಯುವ ಯಾವ ಭೇಟಿಗಳೂ ಸಹಜ ಅಥವಾ ಔಪಚಾರಿಕ ಭೇಟಿಗಳಾಗಿ ಕಾಣಿಸುವುದಿಲ್ಲ. ಯಾಕೆಂದರೆ ಇದು ರಾಜಕೀಯ ಸಂಧಿ ಕಾಲ.
ಮುಂಬರುವ ಲೋಕಸಭೆ ಚುನಾವಣೆಗೆ ಇನ್ನು ಹೆಚ್ಚು ತಿಂಗಳುಗಳಿಲ್ಲದ ಈ ಹೊತ್ತಿನಲ್ಲಿ, ಬಿಜೆಪಿ ನಾಯಕಿ, ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತಕುಮಾರ್ ಅವರು ಡಿಸಿಎಂ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿರುವ ವಿದ್ಯಮಾನ ತೀವ್ರ ಕುತೂಹಲಕ್ಕೆ ಎಡೆ ಮಾಡಿಕೊಟ್ಟಿರುವುದು ಈ ಹಿನ್ನೆಲೆಯಲ್ಲಿ.
ಅವರು ಡಿಕೆ ಶಿವಕುಮಾರ್ ಅವರನ್ನು ಇದೇ 22ರಂದು ಅನಂತಕುಮಾರ್ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಏರ್ಪಡಿಸಿರುವ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ ಆಹ್ವಾನಿಸಿದ್ದಾರೆ ಎಂಬುದು ವರದಿಗಳು ಹೇಳುತ್ತಿರುವ ವಿಚಾರ. ಡಿಕೆ ಶಿವಕುಮಾರ್ ಅವರು ಈ ಭೇಟಿಯ ಬಗ್ಗೆ ಟ್ವೀಟ್ ಮಾಡಿದ್ದು, ಬಿಜೆಪಿಯ ಹಿರಿಯ ನಾಯಕರಾಗಿದ್ದ ದಿ.ಅನಂತ್ ಕುಮಾರ್ ಅವರ ಪತ್ನಿ ಶ್ರೀಮತಿ ತೇಜಸ್ವಿನಿ ಅನಂತಕುಮಾರ್ ಅವರು ಇಂದು ನನ್ನನ್ನು ಕುಮಾರಕೃಪಾ ಅತಿಥಿಗೃಹದಲ್ಲಿ ಭೇಟಿಯಾಗಿ ರಾಜ್ಯ ರಾಜಕೀಯ ವಿಚಾರಗಳ ಕುರಿತು ಚರ್ಚಿಸಿದರು ಎಂದು ಹೇಳಿಕೊಂಡಿದ್ದಾರೆ.
ಆದರೆ, ಆಪರೇಷನ್ ಹಸ್ತದ ಬಗ್ಗೆ ಚರ್ಚೆ ನಡೆಯುತ್ತಿರುವಾಗಲೇ ನಡೆದಿರುವ ಈ ಭೇಟಿ ಮತ್ತು ಭೇಟಿಯ ವೇಳೆ ನಡೆದಿರಬಹುದಾದ ಮಾತುಕತೆ ಕುತೂಹಲಕ್ಕೆ ಕಾರಣವಾಗಿದೆ. ಕಳೆದ ಬಾರಿ ದಮ್ಮಯ್ಯ ಹಾಕಿದಂತೆ ಮಾಡಿ ತೇಜಸ್ವಿನಿಯವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿಗೆ ಈ ಭೇಟಿ ಶಾಕ್ ನೀಡಿದೆ ಎಂಬುದನ್ನಂತೂ ಇಲ್ಲವೆನ್ನಲಾಗದು.
ತೇಜಸ್ವಿನಿಯವರು ಕಾಂಗ್ರೆಸ್ ಸೇರುತ್ತಿದ್ದಾರೆಯೇ ಎಂಬ ಅನುಮಾನ ಮೂಡುವುದಕ್ಕೆ ಕಾರಣವಾಗಿರುವ ಈ ಭೇಟಿ, ಇದಕ್ಕೂ ಕೆಲ ದಿನಗಳ ಹಿಂದೆಯೇ ಅವರು ಕಾಂಗ್ರೆಸ್ ಸೇರುತ್ತಾರೆಂಬ ವದಂತಿ ಹರಡಿದ್ದರ ಹಿನ್ನೆಲೆಯಲ್ಲಿ ಇನ್ನಷ್ಟು ಗಂಭೀರತೆ ಪಡೆಯುತ್ತಿದೆ. ಎರಡು ತಿಂಗಳ ಹಿಂದೆ ಅವರು ಕಾಂಗ್ರೆಸ್ ಸೇರಲಿದ್ದಾರೆ ಎಂಬ ಸುದ್ದಿ ಹಬ್ಬಿದಾಗ ಸ್ವತಃ ತೇಜಸ್ವಿನಿಯವರೇ ಅದನ್ನು ನಿರಾಕರಿಸಿ, ಬಿಜೆಪಿ ತೊರೆಯುವುದಿಲ್ಲ ಎಂದು ಹೇಳುವ ಮೂಲಕ ಊಹಾಪೋಹಗಳಿಗೆ ತೆರೆ ಎಳೆದಿದ್ದರು.
ಈ ಸಲ ಎದ್ದಿರುವ ಊಹಾಪೋಹಗಳಿಗೂ ಅವರು ಹಾಗೆಯೇ ನಿರಾಕರಣೆಯ ತೆರೆ ಎಳೆಯುತ್ತಾರೆಯೇ ಅಥವಾ ಬೇರೆಯದೇ ಅಂಕಕ್ಕೆ ರಂಗ ತೆರೆದುಕೊಳ್ಳಲಿದೆಯೆ?. ಆಪರೇಷನ್ ಹಸ್ತದ ವಿಚಾರ ಅಥವಾ ಲೋಕಸಭೆ ಚುನಾವಣೆಗೆ ಸಂಬಂಧಿಸಿ ಕಾಂಗ್ರೆಸ್ ಬಹಳ ಗಂಭೀರವಾದ ರಣತಂತ್ರಗಳನ್ನು ಹೂಡುತ್ತಿದೆಯೆಂಬ ವಿಚಾರವನ್ನು ಬದಿಗಿಟ್ಟು ನೋಡಿದರೂ, ತೇಜಸ್ವಿನಿಯವರ ರಾಜಕೀಯ ನಡೆಯ ಬಗ್ಗೆ ಕುತೂಹಲ ಮೂಡುವುದಕ್ಕೆ ಹಲವು ಕಾರಣಗಳಿವೆ.
ಒಂದಿಷ್ಟು ಅಂಶಗಳನ್ನು ಗಮನಿಸೋಣ. ಅವರ ಪತಿ ಅನಂತಕುಮಾರ್ ಪ್ರತಿನಿಧಿಸುತ್ತಿದ್ದ ಬೆಂಗಳೂರು ದಕ್ಷಿಣದಿಂದ ಕಳೆದ ಲೋಕಸಭೆ ಚುನಾವಣೆಯಲ್ಲಿಯೇ ತೇಜಸ್ವಿನಿಯವರು ಟಿಕೆಟ್ ಆಕಾಂಕ್ಷಿಯಾಗಿದ್ದರು. ಅನಂತಕುಮಾರ್ ನಿಧನದ ಹಿನ್ನೆಲೆಯಲ್ಲಿ ತೇಜಸ್ವಿನಿಯವರಿಗೇ ಬಿಜೆಪಿ ಟಿಕೆಟ್ ನೀಡಲಾಗುತ್ತದೆ ಎಂದೇ ಸುದ್ದಿಗಳಿದ್ದವು. ಬಿಜೆಪಿಯೂ ಹಾಗೆಯೇ ನಂಬಿಸಿದಂತಿತ್ತು. ಆದರೆ ಕಡೇ ಘಳಿಗೆಯಲ್ಲಿ ಅವರಿಗೆ ಟಿಕೆಟ್ ತಪ್ಪಿತ್ತು. ತೇಜಸ್ವಿ ಸೂರ್ಯ ಬಿಜೆಪಿ ಅಭ್ಯರ್ಥಿಯಾಗಿದ್ದರು.
ಕುಟುಂಬ ರಾಜಕಾರಣಕ್ಕೆ ದೆಹಲಿ ನಾಯಕರ ಸಮ್ಮತಿಯಿಲ್ಲ ಎಂಬ ಕಾರಣವೊಂದು ಮುಂದೆ ಕಾಣಿಸಿತ್ತಾದರೂ, ಅವರಿಗೆ ಟಿಕೆಟ್ ಕೈತಪ್ಪಿದ್ದರ ಹಿಂದಿನ ರಾಜಕೀಯ ಸಮೀಕರಣಗಳು ಪೂರ್ತಿಯಾಗಿ ಬಹಿರಂಗಗೊಂಡಿರಲಿಲ್ಲ. ಡಿಎನ್ಎ, ಜೀನ್ ನೋಡಿ ಟಿಕೆಟ್ ನೀಡುವುದಿಲ್ಲ ಎಂದು ಆಗ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿಯಾಗಿದ್ದ ಬಿಎಲ್ ಸಂತೋಷ್ ಹೇಳಿದ್ದು ಕೂಡ ಸುದ್ದಿಯಾಗಿತ್ತು.
ಟಿಕೆಟ್ ನಿರೀಕ್ಷೆಯಲ್ಲಿದ್ದು ನಿರಾಸೆಗೊಂಡಿದ್ದ ತೇಜಸ್ವಿನಿಯವರಿಗೆ ರಾಜ್ಯ ಬಿಜೆಪಿ ಉಪಾಧ್ಯಕ್ಷೆ ಹುದ್ದೆ ನೀಡಿ ಸಮಾಧಾನಪಡಿಸಲಾಗಿತ್ತು.ಇದಾದ ಬಳಿಕ ಅವರು ಲೋಕಸಭೆ ಚುನಾವಣೆ ವೇಳೆ ಬಿಜೆಪಿ ಅಭ್ಯರ್ಥಿಯ ಪರವಾಗಿ ಪ್ರಚಾರವನ್ನೂ ನಡೆಸಿದ್ದರು. ಅದರ ಮಧ್ಯೆಯೇ, ತಮಗೆ ಯಾವ ಕಾರಣಕ್ಕೆ ಟಿಕೆಟ್ ತಪ್ಪಿತು ಎಂಬುದೂ ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರ ಸಿಕ್ಕಿಲ್ಲ ಎಂದೂ ತೇಜಸ್ವಿನಿಯವರು ಹೇಳಿದ್ದರು. ಈಗ ಯುದ್ಧಕಾಲವಾಗಿರುವುದರಿಂದ, ಮುಂದಿನ ದಿನಗಳಲ್ಲಿ ಉತ್ತರ ಸಿಗುವ ನಿರೀಕ್ಷೆ ಇದೆ ಎಂದು ಅವರು 2019ರ ಏಪ್ರಿಲ್ ಮಧ್ಯದಲ್ಲಿ, ಚುನಾವಣಾ ಪ್ರಚಾರದಲ್ಲಿ ತೊಡಗಿಕೊಂಡಿದ್ದ ಸಂದರ್ಭದಲ್ಲಿ ಹೇಳಿದ್ದು ವರದಿಯಾಗಿತ್ತು.
ಈ ನಡುವೆ ಅವರು, ಟಿಕೆಟ್ ವಿಚಾರದಲ್ಲಿನ ಬಿಜೆಪಿ ನಾಯಕರ ವರ್ತನೆಯಿಂದ ನೋವಾಗಿರುವುದರ ಬಗ್ಗೆಯೂ ಬಹಿರಂಗವಾಗಿಯೇ ಹೇಳಿಕೊಂಡಿದ್ದರು. ಪಕ್ಷದ ನಾಯಕರೇ ಬಂದು ಸ್ಪರ್ಧಿಸುವಂತೆ ಕೇಳಿ, ನಿರೀಕ್ಷೆ ಹುಟ್ಟಿಸಿ, ಚುನಾವಣಾ ಕಚೇರಿಯನ್ನೂ ಆರಂಭಿಸುವುದಕ್ಕೂ ಕಾರಣರಾದ ಬಳಿಕ ನಡೆದಿದ್ದು ಬೇರೆಯೇ ಆಗಿತ್ತು. ನಡುರಾತ್ರಿಯಲ್ಲಿ ಬೇರೆ ಹೆಸರು ಘೋಷಣೆಯಾದ ಬಳಿಕ ಮಾರನೇ ದಿನವಾದರೂ ಅದರ ಬಗ್ಗೆ ನಾಯಕರು ತಮ್ಮ ಜೊತೆಗೊಂದು ಮಾತನಾಡುವ ಸೌಜನ್ಯ ತೋರಿಸದ ಬಗ್ಗೆ ತೇಜಸ್ವಿನಿಯವರು ತೀವ್ರ ಬೇಸರ ವ್ಯಕ್ತಪಡಿಸಿದ್ದರು.
ಇದೆಲ್ಲ ಮುಗಿದು ವರ್ಷಗಳೇ ಕಳೆದ ಮೇಲೆ, 2021ರ ಜೂನ್ನಲ್ಲಿ ತೇಜಸ್ವಿನಿ ಅವರು ಮಾಡಿದ ಟ್ವೀಟ್ ಒಂದು ಮತ್ತೆ ಇದೆಲ್ಲವನ್ನೂ ನೆನಪಿಸುತ್ತಲೇ ಚರ್ಚೆಗೂ ಗ್ರಾಸವಾಗಿತ್ತು. ಯಾರ ಮಾತುಗಳನ್ನೂ ಕೇಳದ ನಾಯಕರ ಸುತ್ತ ಅಂತಿಮವಾಗಿ ಏನನ್ನೂ ಹೇಳಲು ಬಯಸದವರೇ ಸುತ್ತುವರಿದಿರುತ್ತಾರೆ ಎಂಬ Andy Stanley ಮಾತನ್ನು ಟ್ಯಾಗ್ ಮಾಡಿದ್ದ ತೇಜಸ್ವಿನಿಯವರು, ಈ ಮಾತು ಸಮಾಜದ ಎಲ್ಲ ವರ್ಗಕ್ಕೂ ಅನ್ವಯವಾಗುತ್ತದೆ ಎಂದಿದ್ದು ಹಲವು ಅನುಮಾನಗಳನ್ನು ಸೃಷ್ಟಿಸಿತ್ತು. ಇದು ಮೋದಿಯವರನ್ನೇ ಉದ್ದೇಶಿಸಿ ಮಾಡಿರುವ ಟ್ವೀಟ್ ಅಲ್ಲವೆ ಎಂಬ ಪ್ರಶ್ನೆಯನ್ನೂ ಅನೇಕರು ಕೇಳಿದ್ದರು.
ಇದಾದ ಬಳಿಕ ಅಷ್ಟೇ ಚರ್ಚೆಗೆ ಕಾರಣವಾಗಿದ್ದ ಅವರ ಮತ್ತೊಂದು ಟ್ವೀಟ್ ಇದೇ ವರ್ಷದ ಏಪ್ರಿಲ್ 17ರದ್ದು.
ಬಾಡಿದ ಗಿಡವೊಂದರ ಚಿತ್ರವನ್ನು ಹಾಕಿ, ಜೂನ್ 5, 2015ರಂದು ಲಾಲ್ ಬಾಗ್ ಪಶ್ಚಿಮ ದ್ವಾರದ ಬಳಿ ಅನಂತಕುಮಾರ್ ಅವರು ನೆಟ್ಟಿದ್ದ ಗಿಡ ಅದೆಂದೂ, ಅವರು ನೆಟ್ಟ ಗಿಡ ಯಾಕೋ ಮುದುರಿ ಹೋಗಿದೆ ಎಂದೂ ಹೇಳಿದ್ದು ಮಾರ್ಮಿಕವೆಂಬಂತೆ ಕಂಡಿತ್ತು.
ಲೋಕಸಭೆ ಚುನಾವಣೆ ಟಿಕೆಟ್ ಕೈತಪ್ಪಿದ್ದ ಅವರಿಗೆ ಕಳೆದ ವಿಧಾನಸಭೆ ಟಿಕೆಟ್ ಸಿಗಬಹುದು ಎಂಬ ವದಂತಿಗಳಿದ್ದವು. ಅವರೂ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎನ್ನಲಾಗಿತ್ತು. ಆದರೆ ಟಿಕೆಟ್ ಸಿಕ್ಕಿರಲಿಲ್ಲ. ಟಿಕೆಟ್ ಕೈತಪ್ಪಿರುವ ನೋವನ್ನು ಹೀಗೆ ಈ ಟ್ವೀಟ್ ಮೂಲಕ ವ್ಯಕ್ತಪಡಿಸಿರಬಹುದು ಎಂದೆಲ್ಲ ವ್ಯಾಖ್ಯಾನಗಳನ್ನು ಮಾಡಲಾಗಿತ್ತು.
ಲೋಕಸಭೆ ಟಿಕೆಟ್ ಕೈತಪ್ಪಿದ ಬಳಿಕ ಅವರಿಗೆ ಬಿಜೆಪಿ ಉಪಾಧ್ಯಕ್ಷ ಹುದ್ದೆ ಕೊಡಲಾಗಿತ್ತೆ ಹೊರತು, ಅವರ ಪ್ರತಿಭೆಯನ್ನು ಬಳಸಿಕೊಳ್ಳಲಿಲ್ಲ ಎಂಬ ಆರೋಪಗಳೂ ಇದ್ದವು. ಅವರನ್ನು ರಾಜಕೀಯವಾಗಿ ಮೂಲೆಗುಂಪು ಮಾಡಲಾಗಿದೆ ಎಂಬ ಭಾವನೆಯೇ ಬಿಜೆಪಿಯ ಒಂದು ವಲಯದಲ್ಲಿದೆ ಎನ್ನಲಾಗುತ್ತದೆ.
ಈಚೆಗೆ ಪ್ರಧಾನಿ ಮೋದಿಯವರನ್ನೂ ತೇಜಸ್ವಿನಿಯವರು ಭೇಟಿಯಾದದ್ದಿತ್ತು. ಆ ಭೇಟಿ ಬಳಿಕ ಮಾಧ್ಯಮಗಳೆದುರು ಮಾತನಾಡಿದ್ದಾಗಲೂ ಟಿಕಟ್ ಆಕಾಂಕ್ಷೆ ಇಟ್ಟುಕೊಂಡಿಲ್ಲ ಎಂದು ಹೇಳಿದ್ದರು. ಕಾಂಗ್ರೆಸ್ ಸೇರುವ ವದಂತಿಗಳನ್ನು ಅವರು ತಳ್ಳಿಹಾಕಿದ್ದು ಕೂಡ ಅದೇ ಸಂದರ್ಭದಲ್ಲಿ.
ಆದರೆ, ರಾಜಕೀಯ ಎಂಬುದು ಬಹಿರಂಗ ಹೇಳಿಕೆಗಳಿಗಿಂತ ಬೇರೆಯೇ ಇರುತ್ತದೆ ಎಂಬುದು ವಾಸ್ತವ. ಈ ಹಿಂದೆ 2021ರಲ್ಲಿ ಅವರ ಪುತ್ರಿ ವಿಜೇತಾ ಅನಂತಕುಮಾರ್ ಟ್ವೀಟ್ ಒಂದರಲ್ಲಿ ಕರ್ನಾಟಕ ರಾಜಕೀಯ ನಿಜಕ್ಕೂ ಏಕೆ ಆಸಕ್ತಿದಾಯಕವಾಗಿದೆ ಎಂದು ಕೇಳಿ, ಜೆಡಿಎಸ್ ಇನ್ನೂ ಪ್ರಬಲ ರಾಜಕೀಯ ಶಕ್ತಿಯಾಗಿ ಉಳಿದಿದೆ ಎಂದು ಅವರೇ ಉತ್ತರಿಸಿದ್ದರು.
ಆಗ, ತೇಜಸ್ವಿನಿಯವರು ಜೆಡಿಎಸ್ ಸೇರಲಿದ್ದಾರೆಯೇ ಎಂಬ ಅನುಮಾನಗಳು ಎದ್ದಿದ್ದವು. ಕಟ್ಟಿ ಬೆಳೆಸಿದ ತಮ್ಮ ತಂದೆಯವರನ್ನೇ ಬಿಜೆಪಿ ಮರೆಯುತ್ತಿರುವುದರ ಬಗೆಗಿನ ವಿಜೇತಾ ಅವರ ಅಸಮಾಧಾನದ ಹಿನ್ನೆಲೆಯಲ್ಲಿಯೂ ಆ ಅನುಮಾನಗಳಿಗೆ ಪುಷ್ಟಿ ಸಿಕ್ಕಿತ್ತು. ಆದರೆ, ಅದು ತಮ್ಮ ರಾಜಕೀಯ ಅವಲೋಕನ ಮಾತ್ರ, ತಮ್ಮ ಕುಟುಂಬದವರೊಡನೆ ತಳುಕು ಹಾಕಿ ಊಹಿಸುವುದು ಸರಿಯಲ್ಲ ಎಂಬ ಸ್ಪಷ್ಟನೆ ನೀಡಿ ಅವರು ಕಡೆಗೆ ಗೊಂದಲ ನಿವಾರಿಸಿದ್ದರು.
ಇದೆಲ್ಲ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅವರೊಂದಿಗಿನ ತೇಜಸ್ವಿನಿಯವರ ಭೇಟಿ ಹಲವು ಆಯಾಮಗಳ ಚರ್ಚೆಗೆ ಎಡೆ ಮಾಡಿಕೊಟ್ಟಂತಾಗಿದೆ. ಇಲ್ಲಿ ಕಾಂಗ್ರೆಸ್ನ ಸದ್ಯದ ರಣತಂತ್ರಗಳ ವಿಚಾರವನ್ನೂ ಗಮನಿಸುವುದು ಮುಖ್ಯವಾಗಿದೆ. ಈಗಾಗಲೇ ಕಾಂಗ್ರೆಸ್ನ ಹಲವು ನಾಯಕರು ಪ್ರತಿಪಾದಿಸುತ್ತಿರುವ ಪ್ರಕಾರ, ಲೋಕಸಭೆ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನು ಗೆಲ್ಲಲೇಬೇಕೆಂಬ ಹವಣಿಕೆಯಲ್ಲಿ ಪಕ್ಷ ಇದೆ.
ಹೆಚ್ಚಿನ ಸ್ಥಾನಗಳನ್ನು ಗೆಲ್ಲುವುದಷ್ಟೇ ಮುಖ್ಯ ಎಂಬ ಧೋರಣೆಯೊಂದಿಗೆ ಕಾರ್ಯೋನ್ಮುಖವಾಗಿರುವ ರಾಜ್ಯ ಕಾಂಗ್ರೆಸ್ ಈಗಾಗಲೇ ಆಪರೇಷನ್ ಹಸ್ತ ಕುರಿತಂತೆ ಗಂಭೀರವಾಗಿದೆ ಎಂಬ ಮಾತುಗಳಿವೆ. ಇಂಥ ಹೊತ್ತಿನಲ್ಲಿಯೇ ತೇಜಸ್ವಿನಿಯವರು ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿರುವುದು, ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸುವುದಕ್ಕೊ ಅಥವಾ ಅವರಿಗಾಗಿಯೇ ಕಾಂಗ್ರೆಸ್ನಲ್ಲೊಂದು ಆಹ್ವಾನ ಕಾದಿದೆಯೊ ಎಂಬ ಕುತೂಹಲವನ್ನು ಮೂಡಿಸಿದೆ.
ಬೆಂಗಳೂರಿನಲ್ಲಿಯೇ ಕನಿಷ್ಠ ಎರಡು ಲೋಕಸಭಾ ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ಡಿಕೆ ಶಿವಕುಮಾರ್ ತಂತ್ರ ರೂಪಿಸುತ್ತಿದ್ಧಾರೆ ಎನ್ನಲಾಗುತ್ತಿದೆ.ಇದಕ್ಕೆ ಪೂರಕವಾಗಿ, ಕಾಂಗ್ರೆಸ್ ಪಾಲಿಗೆ ಕಡುಕಷ್ಟದ ಕ್ಷೇತ್ರವಾಗಿರುವ ಬೆಂಗಳೂರು ದಕ್ಷಿಣದಲ್ಲಿ ತೇಜಸ್ವಿನಿಯವರನ್ನು ಕಣಕ್ಕಿಳಿಸುವ ಮೂಲಕ ಅಲ್ಲಿ ನೆಲೆಯೂರುವ ತಂತ್ರಗಾರಿಕೆ ಕಾಂಗ್ರೆಸ್ನದ್ದು ಎಂದು ಹೇಳಲಾಗುತ್ತಿದೆ.
ಈಗಾಗಲೇ ಟಿಕೆಟ್ ಸಿಗದ ಕಾರಣಕ್ಕೆ ತೇಜಸ್ವಿನಿಯವರ ಪರವಾಗಿ ಬೇಸರಗೊಂಡಿರುವ ಒಂದು ವರ್ಗವೇ ಬಿಜೆಪಿಯೊಳಗಿದ್ದು, ತೇಜಸ್ವಿನಿಯವರನ್ನೇ ಬಿಜೆಪಿಯ ವಿರುದ್ಧ ಕಣಕ್ಕಿಳಿಸುವುದು ಕಾಂಗ್ರೆಸ್ ಯೋಚನೆ. ಈ ತಂತ್ರದ ಮೂಲಕ ಈಗಿರುವ ಕಾಂಗ್ರೆಸ್ ಮತಗಳ ಜೊತೆಗೇ ಬ್ರಾಹ್ಮಣರು ಮತ್ತು ಒಕ್ಕಲಿಗರ ಮತಗಳನ್ನೂ ಆ ಕ್ಷೇತ್ರದಲ್ಲಿ ಪಡೆಯುವುದು ಸುಲಭವಾದೀತು ಎಂಬ ಲೆಕ್ಕಾಚಾರ ಡಿಕೆ ಶಿವಕುಮಾರ್ ಅವರದಾಗಿದೆ ಎಂದೂ ಹೇಳಲಾಗುತ್ತಿದೆ.
ಪಕ್ಷದ ಮಾಜಿ ನಾಯಕ ಅನಂತಕುಮಾರ್ ಅವರನ್ನು ಕಡೆಗಣಿಸಿದ ಬಿಜೆಪಿಯ ವಿರುದ್ಧ ಇರಬಹುದಾದ ಅಸಮಾಧಾನದ ಲಾಭ ಪಡೆಯಲು ಈ ಮೂಲಕ ಕಾಂಗ್ರೆಸ್ ಮುಂದಾಗಿದ್ದಲ್ಲಿ, ಮತ್ತದಕ್ಕೆ ತೇಜಸ್ವಿನಿಯವರಿಂದ ಸೂಕ್ತ ಸ್ಪಂದನೆಯೂ ಸಿಕ್ಕಿದಲ್ಲಿ, ಬಿಜೆಪಿಗೆ ನಡುಕ ಶುರುವಾಗುವುದು ನಿಜ. ನಿಜವಾಗಿಯೂ ತೇಜಸ್ವಿನಿಯವರು ಬಿಜೆಪಿಗೆ ನಡುಕ ಹುಟ್ಟಿಸುವ ಅಂಥದೊಂದು ರಾಜಕೀಯ ನಿರ್ಧಾರವನ್ನು ತೆಗೆದುಕೊಳ್ಳುವರೆ ಎಂಬುದೇ ಈಗಿನ ಕುತೂಹಲ.