ಎಸ್ಪಿ ಕಾಂಗ್ರೆಸ್ ಮೈತ್ರಿ ಬಿಜೆಪಿಯನ್ನು ಹಿಮ್ಮೆಟ್ಟಿಸುತ್ತಾ ? | Samajwadi Party | Congress | Uttar Pradesh

Update: 2024-03-06 04:53 GMT
Editor : Ismail | Byline : ಆರ್. ಜೀವಿ

ಕಡೆಗೂ ಉತ್ತರ ಪ್ರದೇಶದಲ್ಲಿ ಇಂಡಿಯಾ ಮೈತ್ರಿಕೂಟದ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಮತ್ತು ಎಸ್ಪಿ ನಡುವೆ ಸೀಟು ಹಂಚಿಕೆ ಯಶಸ್ವಿಯಾಗುವುದರೊಂದಿಗೆ ಮಹತ್ವದ ಬೆಳವಣಿಗೆಯಾಗಿದೆ. ಕಳೆದ ನಾಲ್ಕೈದು ದಿನಗಳ ಹಿಂದೆ ಸೀಟು ಹಂಚಿಕೆ ಅಂತಿಮಗೊಂಡ ಹಿನ್ನೆಲೆಯಲ್ಲಿ, ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಎಸ್ಪಿ ನಾಯಕ ಅಖಿಲೇಶ್ ಯಾದವ್ ಪಾಲ್ಗೊಂಡು, ಬಿಜೆಪಿ ಹಠಾವೋ ದೇಶ್ ಬಚಾವೋ ಎಂದು ಕರೆನೀಡಿದ್ದಾರೆ.

ವಿಧಾನಸಭೆ ಚುನಾವಣೆ ವೇಳೆ ಎರಡೂ ಪಕ್ಷಗಳ ನಡುವೆ ತಲೆದೋರಿದ್ದ ಮುನಿಸು ಶಮನವಾಗಿ, ಈಗ ಆತ್ಮವಿಶ್ವಾಸದೊಂದಿಗೆ ಲೋಕಸಭೆ ಚುನಾವಣೆ ಎದುರಿಸುವ ವಾತಾವರಣವೊಂದು ನಿರ್ಮಾಣವಾದಂತಾಗಿದೆ. ಈ ಹೊತ್ತಿನಲ್ಲಿ ಯುಪಿಯಲ್ಲಿನ ಕಾಂಗ್ರೆಸ್-ಎಸ್ಪಿ ಮೈತ್ರಿಯ ಮಹತ್ವ ಎಷ್ಟಿದೆ, ಅದೇ ವೇಳೆ ಅದರ ಎದುರಿನ ಸವಾಲುಗಳು ಏನೇನಿವೆ ಎಂಬುದನ್ನು ಒಮ್ಮೆ ನೋಡಬೇಕು.

ಒಂದು ಮುಖ್ಯ ವಿಚಾರವೆಂದರೆ, ಮೈತ್ರಿಯಲ್ಲಿನ ಪಕ್ಷಗಳೆರಡು ಉತ್ತರ ಪ್ರದೇಶದಲ್ಲಿ ಸೀಟು ಹಂಚಿಕೆಯನ್ನು ಇಷ್ಟು ನಿಖರವಾಗಿ ಘೋಷಿಸಿಕೊಂಡಿರುವುದು ಇದೇ ಮೊದಲು. ಎನ್ಡಿಎ ಇಂಥ ಎದೆಗಾರಿಕೆಯನ್ನು ತೋರಿಸಲು ಹಿಂಜರಿಯುತ್ತಲೇ ಇದೆ. ಈಗಾಗಲೇ ಅದೇ ಕಾರಣಕ್ಕೆ ಎನ್ಡಿಎಯೊಳಗೆ ಅಸಮಾಧಾನಗಳು ಎದ್ದಿವೆ ಎಂಬ ಮಾತುಗಳೂ ಇವೆ.

ಹಾಗಾದರೆ, ಕಾಂಗ್ರೆಸ್ ಮತ್ತು ಎಸ್ಪಿ ಮಧ್ಯೆ ಮೈತ್ರಿ ಸಾಧ್ಯವಾದದ್ದು ಹೇಗೆ? ಅದು ಹೇಗೆ ಪರಿಣಾಮಕಾರಿಯಾಗಬಲ್ಲದು? ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಮತ್ತು ಎಸ್‌ಪಿ ನಡುವಿನ ಸೀಟು ಹಂಚಿಕೆ ಒಪ್ಪಂದದ ಪ್ರಕಾರ, ಉತ್ತರ ಪ್ರದೇಶದ 80 ಲೋಕಸಭಾ ಕ್ಷೇತ್ರಗಳ ಪೈಕಿ ಎಸ್‌ಪಿ 63 ಸ್ಥಾನಗಳಲ್ಲಿ ಮತ್ತು ಕಾಂಗ್ರೆಸ್ 17ರಲ್ಲಿ ಸ್ಪರ್ಧಿಸಲಿವೆ.

ರಾಯ್ ಬರೇಲಿ, ಅಮೇಥಿ, ವಾರಾಣಸಿ, ಕಾನ್ಪುರ ಸಿಟಿ, ಫತೇಪುರ್ ಸಿಕ್ರಿ, ಬನ್ಸ್‌ಗಾಂವ್, ಸಹರಾನ್‌ಪುರ, ಪ್ರಯಾಗ್‌ರಾಜ್, ಮಹಾರಾಜ್‌ಗಂಜ್, ಅಮ್ರೋಹಾ, ಝಾನ್ಸಿ, ಬುಲಂದ್‌ಶಹರ್, ಗಾಜಿಯಾಬಾದ್, ಮಥುರಾ, ಸೀತಾಪುರ, ಬಾರಾಬಂಕಿ ಮತ್ತು ಡಿಯೋರಿಯಾದಲ್ಲಿ ಕಾಂಗ್ರೆಸ್ ಸ್ಪರ್ಧಿಸಲಿದೆ ಎಂದು ಎಸ್‌ಪಿ ರಾಜ್ಯ ಘಟಕದ ಮುಖ್ಯಸ್ಥ ನರೇಶ್ ಉತ್ತಮ್ ಪಟೇಲ್ ಹೇಳಿದ್ದಾರೆ.

ರಾಯ್‌ಬರೇಲಿ, ಅಮೇಥಿ ಮತ್ತು ವಾರಾಣಸಿ ಮೂರು ಪ್ರಮುಖ ಸ್ಥಾನಗಳನ್ನು ಎಸ್ಪಿ ಕಾಂಗ್ರೆಸ್‌ಗೆ ಬಿಟ್ಟುಕೊಟ್ಟಿದೆ. ವಾರಾಣಸಿ ಪ್ರಧಾನಿ ನರೇಂದ್ರ ಮೋದಿಯವರ ಕ್ಷೇತ್ರವಾಗಿದ್ದರೆ, ಅಮೇಥಿಯಲ್ಲಿ 2019ರಲ್ಲಿ ಬಿಜೆಪಿಯ ಸ್ಮೃತಿ ಇರಾನಿ ವಿರುದ್ಧ ರಾಹುಲ್ ಗಾಂಧಿ ಸೋತಿದ್ದರು.

ರಾಯ್‌ಬರೇಲಿ, ಸೋನಿಯಾ ಗಾಂಧಿಯವರು ಆರೋಗ್ಯದ ಕಾರಣಕ್ಕಾಗಿ ತೆರವು ಮಾಡುವವರೆಗೆ ಮತ್ತು ರಾಜ್ಯಸಭೆಗೆ ಹೋಗುವವರೆಗೂ ಅವರ ಕ್ಷೇತ್ರವಾಗಿತ್ತು. ಸೀಟು ಹಂಚಿಕೆಯಾದ ಬೆನ್ನಲ್ಲೇ ಆಗ್ರಾದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾರತ್ ಜೋಡೋ ನ್ಯಾಯ ಯಾತ್ರೆಯಲ್ಲಿ ಅಖಿಲೇಶ್ ಯಾದವ್ ಭಾನುವಾರ ಸೇರಿಕೊಂಡರು.

ನ್ಯಾಯ ಯಾತ್ರೆಯಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಯಾದವ್, ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಉಳಿಸುವುದೇ ದೊಡ್ಡ ಸವಾಲು ಎಂದು ಹೇಳಿದರು. ಯಾತ್ರೆ ಅಲಿಗಢ ವಿಭಾಗದಿಂದ ಅಮ್ರೋಹ, ಸಂಭಾಲ್, ಬುಲಂದ್‌ಶಹರ್, ಅಲಿಗಢ, ಹತ್ರಾಸ್ ಮೂಲಕ ಆಗ್ರಾ ವಿಭಾಗವನ್ನು ಪ್ರವೇಶಿಸಿತು, ಅಲ್ಲಿ ಎಸ್‌ಪಿ ಮುಖ್ಯಸ್ಥರು ಸೇರಿಕೊಂಡು ರಾಹುಲ್ ಗಾಂಧಿ ಅವರೊಂದಿಗೆ ಜಂಟಿ ಸಾರ್ವಜನಿಕ ಭಾಷಣ ಮಾಡಿದರು.

ಇಂದು ರೈತರು ಸರ್ಕಾರದ ವಿರುದ್ದ ನಿಂತಿದ್ದಾರೆ. ಸರ್ಕಾರ ರೈತರ ಶಕ್ತಿಗೆ ಹೆದರುತ್ತಿದೆ. ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತ ಸಮುದಾಯಗಳಿಗೆ ಬಿಜೆಪಿ ನೀಡಬೇಕಾದ ಗೌರವ ನೀಡಿಲ್ಲ ಎಂದು ಅಖಿಲೇಶ್ ಆರೋಪಿಸಿದ್ದಾರೆ. ಈ ಅಂಶ, ಅಂದ್ರೆ ಸಾಮಾಜಿಕ ನ್ಯಾಯದ ವಿಚಾರ ಕಾಂಗ್ರೆಸ್ ಮತ್ತು ಎಸ್ಪಿಯೆರಡೂ ಒಂದಾಗುವಲ್ಲಿ ಪಾತ್ರ ವಹಿಸಿದೆ. ಇದರೊಡನೆ ಚುನಾವಣಾ ಅನಿವಾರ್ಯತೆಗಳೂ ಅವೆರಡೂ ಪಕ್ಷಗಳನ್ನು ಹತ್ತಿರ ತಂದಿವೆ ಎಂಬುದು ಕೂಡ ಸ್ಪಷ್ಟ.

ಕಳೆದೊಂದು ವರ್ಷದಿಂದ ಎಸ್ಪಿ ನಾಯಕ ಅಖಿಲೇಶ್ ಯಾದವ್ ಪಿಡಿಎ ಸೂತ್ರವನ್ನು ರೂಪಿಸಿದ್ದಾರೆ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರನ್ನು ಕ್ರೋಡೀಕರಿಸುವ ಸೂತ್ರ ಅದು. ಹಿಂದಿನ ಚುನಾವಣೆಗಳಲ್ಲಿನ ಮತದಾನದ ಮಾದರಿಗಳನ್ನು ಗಮನಿಸಿದರೆ, ಬಿಜೆಪಿ ಮತ್ತದರ ಮಿತ್ರಪಕ್ಷಗಳು ಯಾದವೇತರ ಒಬಿಸಿಗಳು ಮತ್ತು ಜಾಟವೇತರ ದಲಿತರ ಮತಗಳ ಗಣನೀಯ ಪಾಲನ್ನು ಹೊಂದಿವೆ.

ಆದರೆ ಆ ಮತದಾರರಲ್ಲಿ ಹೆಚ್ಚಿನವರು ಬಿಜೆಪಿಯಿಂದ ಭ್ರಮನಿರಸನಕ್ಕೊಳಗಾಗಿದ್ದಾರೆ ಎಂಬುದನ್ನು ಕೂಡ ಎಸ್ಪಿ ತಿಳಿದಿದೆ.

ಇದಕ್ಕೆ ಕಾರಣ ಈ ಸಮುದಾಯಗಳು ಎದುರಿಸುತ್ತಿರುವ ಕೃಷಿ ಸಮಸ್ಯೆಗಳು, ಹಣದುಬ್ಬರ ಮತ್ತು ನಿರುದ್ಯೋಗದಂತಹ ಅಂಶಗಳು.

ರಾಷ್ಟ್ರಮಟ್ಟದಲ್ಲಿ ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯ 2ನೇ ಹಂತ ನ್ಯಾಯ ಯಾತ್ರೆಯಾಗಿದೆ. ಬಿಜೆಪಿ ಏನೆಂಬುದನ್ನು, ಅದರ ನಿಜ ಬಣ್ಣವನ್ನು ಈ ಯಾತ್ರೆಯ ಮೂಲಕ ರಾಹುಲ್ ಹೇಳುತ್ತ ಬಂದಿದ್ದಾರೆ.

ನಿರಂತರವಾಗಿ ಜಾತಿ ಗಣತಿ, ಸಾಮಾಜಿಕ-ಆರ್ಥಿಕ ನ್ಯಾಯ ಮತ್ತು ನಿರುದ್ಯೋಗದ ಸಮಸ್ಯೆಯನ್ನು ಕಾಂಗ್ರೆಸ್ ಎತ್ತುತ್ತಿರುವುದರೊಂದಿಗೆ, ದೇಶದ ದಲಿತರು ಮತ್ತು ಒಬಿಸಿಗಳಿಗೆ ಬಿಜೆಪಿಯಿಂದ ಸುರಕ್ಷೆಯಿಲ್ಲ ಎಂಬುದನ್ನು ಮನಗಾಣಿಸುವ ಯತ್ನದಲ್ಲಿದೆ. ಇನ್ನು ಮತಗಳನ್ನು ಸೆಳೆಯುವ ವಿಚಾರ. CSDS ದತ್ತಾಂಶದ ಪ್ರಕಾರ 2022ರಲ್ಲಿ ಎಸ್ಪಿ ಯಶಸ್ವಿಯಾಗಿರುವುದು ಮುಸ್ಲಿಂ ಮತ್ತು ಯಾದವ ಮತಗಳ ದೊಡ್ಡ ಪಾಲನ್ನು ಪಡೆಯುವಲ್ಲಿ.

ಇದೇ ವೇಳೆ, ದಲಿತರು ಮತ್ತು ಒಬಿಸಿಗಳನ್ನು ಸೆಳೆಯಲು ಅದಕ್ಕೆ ಸಾಧ್ಯವಾಗಲಿಲ್ಲ. ಇನ್ನೊಂದೆಡೆ, ಕಳೆದ ಬಾರಿ ಕಾಂಗ್ರೆಸ್ಗೂ ಅದು ಚುನಾವಣಾ ಹೋರಾಟದಲ್ಲಿ ಪ್ರಬಲವಾಗಿಲ್ಲ ಎಂಬ ಕಾರಣಕ್ಕೆ ಜನರು ಮತ ಹಾಕಲಿಲ್ಲ. ಈಗ ಅವೆರಡೂ ಪಕ್ಷಗಳು ಮೈತ್ರಿಯಲ್ಲಿರುವುದರಿಂದ, ಹಾಗೆ ಮತಗಳು ಕೈತ್ಪಪಿ ಹೋಗುವುದನ್ನು ತಡೆಯಬಹುದು. ಬಹುಪಾಲು ಮುಸ್ಲಿಂ ಮತದಾರರು 2022ರಲ್ಲಿ ಮಹಾಘಟಬಂಧನ್‌ಗೆ ಮತ ಹಾಕಿದ್ದರೂ 2024ರಲ್ಲಿ ಕಾಂಗ್ರೆಸ್‌ಗೆ ಮತ ಹಾಕುತ್ತೇವೆ ಎಂದು ಸ್ಪಷ್ಟವಾಗಿ ಹೇಳುತ್ತಿದ್ದಾರೆ ಎಂದು ಸಮೀಕ್ಷೆಗಳು ಹೇಳಿವೆ.

ಹೀಗಾಗಿ, ಚುನಾವಣಾ ಅನಿವಾರ್ಯತೆಗಳು ಮತ್ತು ಸೈದ್ಧಾಂತಿಕ ಸಾಮ್ಯತೆ ಅವೆರಡೂ ಪಕ್ಷಗಳನ್ನು ಒಟ್ಟಿಗೆ ತಂದಿವೆ. ಯುಪಿಯಲ್ಲಿ ಈ ಮೈತ್ರಿ ಏನು ಸಾಧಿಸಬಹುದು? ಬರುವ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಸುಮಾರು 55 ಸ್ಥಾನಗಳಿಗೆ ಎನ್‌ಡಿಎಯನ್ನು ಕಟ್ಟಿಹಾಕಬಹುದು ಎಂಬುದೊಂದು ಲೆಕ್ಕಾಚಾರ ಹಾಕಲಾಗುತ್ತಿದೆ. 2019ರಲ್ಲಿ 64 ಸೀಟುಗಳನ್ನು ಅದು ಗೆದ್ದಿತ್ತು.

ಬಿಜೆಪಿಯನ್ನು ಹಾಗೆ ಕಟ್ಟಿಹಾಕುವುದು ಇಂಡಿಯಾ ಮೈತ್ರಿಕೂಟಕ್ಕೆ ಸಾಧ್ಯವಾಗಬಹುದೆ? ಇದು ಕಾಂಗ್ರೆಸ್ ಮತ್ತು ಎಸ್ಪಿ ಎದುರಿನ ಸವಾಲು. ಜನರಿಗಾಗಿ ಏನನ್ನೂ ಮಾಡದಿದ್ದರೂ, ಬಿಜೆಪಿಯ ಬಳಿ ಅಧಿಕಾರವಿದೆ. ಹಣಬಲ, ಜನಬಲವಿದೆ.

ರಾಹುಲ್ ಗಾಂಧಿಯವರ ಜನಪ್ರಿಯತೆ ಹೆಚ್ಚಿರುವುದು ನಿಜವೇ ಆದರೂ, ಮೋದಿ ಜನಪ್ರಿಯತೆಯನ್ನು ಮೀರಿ ಹೋಗಲು ಸಾಧ್ಯವಿಲ್ಲ.

ಇನ್ನೊಂದೆಡೆ, ಪ್ರತಿಪಕ್ಷಗಳ ಪ್ರಯತ್ನಗಳ ಹೊರತಾಗಿಯೂ ಬಿಜೆಪಿಯ ರಾಮ್, ರೋಟಿ ಮತ್ತು ರಾಷ್ಟ್ರ ಎಂಬುದರ ಹೊಳಪು ಕುಂದಿಲ್ಲ.

ಆದರೂ, ಕಾಂಗ್ರೆಸ್-ಎಸ್ಪಿ ಮೈತ್ರಿ ಬಿಜೆಪಿ ವಿರೋಧಿ ನಿರೂಪಣೆಯೊಂದಿಗೆ ಚುನಾವಣೆಯನ್ನು ಎದುರಿಸಲಿದೆ. ಯುಪಿಯಲ್ಲಿ ಬಿಎಸ್‌ಪಿ ಅಧಿಕಾರ ಕಳೆದುಕೊಂಡು 12 ವರ್ಷಗಳೇ ಕಳೆದಿವೆ ಮತ್ತದು ಅವತ್ತಿನಿಂದಲೂ ಚೇತರಿಸಿಕೊಂಡೇ ಇಲ್ಲ.

ಅಲ್ಲಿ ಅಸಮಾಧಾನ ಹೊಂದಿರುವವರು ದೊಡ್ಡ ಪ್ರಮಾಣದಲ್ಲಿಯೇ ಇದ್ದರೂ, ಕಾಂಗ್ರೆಸ್ ಪಾಲಿಗೆ, ಎಸ್ಪಿ ಪಾಲಿಗೆ ಅವರು ದೂರವೇ ಇದ್ದಾರೆ.

ಹೀಗಿರುವಾಗ, ಎಸ್‌ಪಿ-ಕಾಂಗ್ರೆಸ್ ಮೈತ್ರಿ ಜನರಿಗೆ ಯಾವ ಸಂದೇಶವನ್ನು ಕೊಡಲಿದೆ ಎಂಬುದರ ಮೇಲೆ, ಎಂಥ ಅಭ್ಯರ್ಥಿಗಳನ್ನು ಆರಿಸುತ್ತದೆ ಎಂಬುದರ ಮೇಲೆ ಅದರ ಯಶಸ್ಸು ನಿರ್ಧಾರವಾಗಲಿದೆ. ಈಗಿನ ಅವಕಾಶವನ್ನು ಅವೆರಡೂ ಪಕ್ಷಗಳು ಪ್ರಾಮಾಣಿಕ ಸಾಮಾಜಿಕ ಕಳಕಳಿಯೊಂದಿಗೆ ಸದುಪಯೋಗ ಮಾಡಿಕೊಂಡಲ್ಲಿ ಕಡೇಪಕ್ಷ ಬಿಜೆಪಿಯನ್ನು 2019ರಲ್ಲಿ ಗೆದ್ದುದಕ್ಕಿಂತ ಕಡಿಮೆ ಸ್ಥಾನಗಳಿಗೆ ಕಟ್ಟಿಹಾಕುವುದು ಸಾಧ್ಯವಾಗಬಹುದು. ಅಷ್ಟು ಮಾಡಿದರೂ ಅದು ಮೈತ್ರಿಯ ಗಮನಾರ್ಹ ಸಾಧನೆಯೇ ಆಗಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!