ನಿತೀಶ್ ಪಲ್ಟಿ ಬೆನ್ನಿಗೇ ಆರ್ ಜೆ ಡಿ ಗೆ ಭಾರೀ ಜನ ಬೆಂಬಲ | Bihar | Tejaswi Yadav | RJD | Nitish Kumar | BJP

Update: 2024-03-06 04:59 GMT
Editor : Ismail | Byline : ಆರ್. ಜೀವಿ

ತೇಜಸ್ವಿ ಯಾದವ್ | Photo : NDTV 

ಬಿಹಾರದಲ್ಲಿ ನಿಜಕ್ಕೂ ತೇಜಸ್ವಿ ಕಾಲ ಬಂದಿದೆಯೇ ? ಸರಕಾರ ಉರುಳಿದ ಮೇಲೆ​ ಅಲ್ಲಿ ತೇಜಸ್ವಿ ಯಾದವ್ ಜನಪ್ರಿಯತೆ ಉತ್ತುಂಗಕ್ಕೆ ಏರಿದೆಯೆ ?

ಅವರ​ ಪ್ರತಿಯೊಂದು ರೋಡ್ ಶೋ ಗಳಿಗೆ ಸೇರುವ ಸಾವಿರ ಸಾವಿರ ಜನ ಏನು ಹೇಳುತ್ತಿದ್ದಾರೆ ? ಬಿಹಾರದಲ್ಲಿ ಬಿಜೆಪಿಗೆ ಆಘಾತ ಕಾದಿದೆಯೆ ? ಅಥವಾ ಬಿಜೆಪಿ ಬಳಿ ಈ ಜನಪ್ರಿಯತೆಯನ್ನೂ ಮುರಿಯುವ ತಂತ್ರ ಇದೆಯೇ ? ಈಗಾಗಲೇ ಬಿಹಾರದಲ್ಲಿ ಹೈ ವೋಲ್ಟೇಜ್ ರ್ಯಾಲಿಗಳು ಮತ್ತು ಸಭೆಗಳು ಶುರುವಾಗಿವೆ.

ತೇಜಸ್ವಿ ಯಾದವ್ ಅವರ ಜನ ವಿಶ್ವಾಸ ಯಾತ್ರೆಗೆ ಆಗಮಿಸುತ್ತಿರುವ ​ಭಾರೀ ಜನಸಮೂಹವನ್ನು ನೋಡಿದರೆ ಅದು ಬಿಜೆಪಿ ಮತ್ತು ಜೆಡಿಯುಗೆ ಸವಾಲೆಸೆಯುವ ಹಾಗೆ ಕಾಣಿಸುತ್ತಿದೆ. ತೇಜಸ್ವಿ ಯಾದವ್ ಫೆಬ್ರವರಿ 20 ರಿಂದ ಜನ ವಿಶ್ವಾಸ ಯಾತ್ರೆಯಲ್ಲಿದ್ದಾರೆ. ಈ ಹಿಂದೆ ಸಭೆಗಳನ್ನು ನಡೆಸುತ್ತಿದ್ದ ಅವರು ಈಗ ಬಸ್ ಮೂಲಕ ರೋಡ್ ಶೋ ಮಾಡಲು ಆರಂಭಿಸಿದ್ದಾರೆ.

ತೇಜಸ್ವಿ ಅವರ ರೋಡ್ ಶೋ ಬಿಹಾರ ರಾಜಕೀಯದಲ್ಲಿ ​ದೊಡ್ಡ ಚರ್ಚೆಯಾಗುತ್ತಿದೆ, ಇದರಲ್ಲಿ ಅವರು ಒಟ್ಟು 2,500 ಕಿಲೋಮೀಟರ್ ಪ್ರಯಾಣಿಸಲಿದ್ದಾರೆ. ಮಾರ್ಚ್ 3ರಂದು ಪಾಟ್ನಾದ ಗಾಂಧಿ ಮೈದಾನದಲ್ಲಿ ತೇಜಸ್ವಿ ರ್ಯಾಲಿ ನಡೆಯಲಿದೆ. ತೇಜಸ್ವಿ ಅವರು ತಮ್ಮ ಭಾಷಣಗಳಲ್ಲಿ ನಿತೀಶ್ ಕುಮಾರ್ ಮತ್ತು ಬಿಜೆಪಿಗೆ ನೇರವಾಗಿ ಸವಾಲು ಹಾಕುತ್ತಿದ್ದಾರೆ.

ಬಿಹಾರದ ಜನತೆ ತೇಜಸ್ವಿಯವರನ್ನು ಹೇಗೆ ನೋಡುತ್ತಿದ್ಧಾರೆ? ಇದೇ ವೇಳೆ ತನಗೆ ಸವಾಲಾಗಿರುವ ತೇಜಸ್ವಿ ಅವರನ್ನು ಬಿಜೆಪಿ ನೊಡುವ ಬಗೆ ಎಂತ​ಹದು? ತೇಜಸ್ವಿ ನೇರವಾಗಿ ಜನರ ಬಳಿಗೆ ಹೋಗುತ್ತಿದ್ದರೆ, ಹಿಂಬಾಗಿಲ ಮೂಲಕ ತೇಜಸ್ವಿ ವಿರುದ್ದ ಆಟವಾಡಲು ಬಿಜೆಪಿ ನೋಡುತ್ತಿದೆ.

ಇಧೇ ಥರದ ಆಟವನ್ನಾಡಿಯೇ ಅದು ನಿತೀಶ ಕುಮಾರ್ ಜೊತೆ ಸೇರಿ ರಾಜ್ಯದಲ್ಲಿ ಅಧಿಕಾರ ಹಿಡಿಯಿತು ಮತ್ತು ತೆಜಸ್ವಿಯವರನ್ನು ಹೊರಹಾಕಲಾಯಿತು. ​ದೇಶದ ಅತ್ಯಂತ ಜನಪ್ರಿಯ ನಾಯಕ ಎಂದು ಹೇಳಿಕೊಳ್ಳುವ ಮೋದಿ ಏಕೆ ಈ ಯುವ ರಾಜಕಾರಣಿಯ ಎದುರು​ ನೇರವಾಗಿ ನಿಂತು ಹೋರಾಡಲಾರರು?

ಒಂದಂತೂ ನಿಜ. ತೇಜಸ್ವಿ ಮೂಲಕ ಬಿಹಾರದಲ್ಲಿ ಹೊಸ ರಾಜಕೀಯ ಸಮಯವೊಂದು ಶುರುವಾಗುತ್ತಿದೆ. ರಾತ್ರಿ 2 ಗಂಟೆಯಾದರೂ ತೇಜಸ್ವಿಗಾಗಿ ಕಾದು ನಿಲ್ಲುವ ಜನರು, ಯಾವ ಹೇಳಿಕೊಳ್ಳುವಂಥ ಜಾಹೀರಾತು, ಪೋಸ್ಟರುಗಳ ಹಂಗಿಲ್ಲದೆ, ತೇಜಸ್ವಿಯವರನ್ನು ಬೆಂಬಲಿಸುವವರಾಗಿದ್ದಾರೆ.

ಆದರೆ ಮೋದಿ ಸರ್ಕಾರದ ಜಾಹೀರಾತಿಗಳು ಬಜಾರಿನಿಂದ ಬಸ್ ನಿಲ್ದಾಣದವರೆಗೆ ಎಲ್ಲೆಂದರಲ್ಲಿ ಇವೆ. ಟಿವಿ, ರೇಡಿಯೋ, ವೆಬ್ಸೈಟ್ಗಳಲ್ಲಿಯೂ ಅವೇ ತುಂಬಿ​ಕೊಂಡಿವೆ. ಯಾವ ದಿಕ್ಕಿನಲ್ಲಿ ನೋಡಿದರೂ ಮೋದಿ ಪೋಸ್ಟರ್ಗಳೇ ಕಾಣಿಸುತ್ತವೆ. ​ಮಡಿಲ ಮೀಡಿಯಾಗಳ ನಿರೂಪಕರು ಹಗಲು ರಾತ್ರಿ ಮೋದಿ ಮೋದಿ ಎನ್ನುತ್ತಾರೆ. ಮಾಧ್ಯಮಗಳೆಲ್ಲ ಮೋದಿಮಯವಾಗಿಬಿಟ್ಟಿವೆ.

ಇನ್ನೊಂದೆಡೆ ರಾಹುಲ್ ಯಾತ್ರೆ. ರಾಹುಲ್ ಗಾಂಧಿ ಹಾಗೂ ಅಖಿಲೇಶ್ ಯಾದವ್ ಭೇಟಿಗೆ ಉತ್ತರ ಪ್ರದೇಶದಲ್ಲಿಯೂ ಭಾರೀ ಬೆಂಬಲ ವ್ಯಕ್ತವಾಗಿದೆ. ಆಗ್ರಾದಲ್ಲಿ ರಾಹುಲ್ ಯಾತ್ರೆಗೆ ದೊಡ್ಡ ಪ್ರಮಾಣದಲ್ಲಿಯೇ ಜನರು ಸೇರಿದ್ದರು. ಆದರೂ ಮೀಡಿಯಾಗಳಲ್ಲಿ ಮಾತ್ರ ರಾಹುಲ್ ಯಾತ್ರೆ ಕುರಿತ ವರದಿಗಳಿಗೆ ಜಾಗ ಬಹಳ ಕಡಿಮೆ.

ಬಿಹಾರದಲ್ಲಿ ಇಲ್ಲಿಯವರೆಗೂ ಚಿತ್ರ ಸ್ವಲ್ಪ ಭಿನ್ನವಿದೆ. ಸದ್ಯಕ್ಕೆ ತೇಜಸ್ವಿ ಯಾದವ್ ಯಾತ್ರೆ ಕುರಿತ ವರದಿಗಳು ಕಾಣಿಸುತ್ತಿವೆ. ಯಾವಾಗ ಅವು ನಿಲ್ಲುತ್ತವೆಯೊ ಗೊತ್ತಿಲ್ಲ. ಮಾರ್ಚ್ 3ರಂದು ತೇಜಸ್ವಿ ಯಾದವ್ ಅವರ ರ್ಯಾಲಿ ಪಾಟ್ನಾದ ಗಾಂಧಿ ಮೈದಾನದಲ್ಲಿ ಇದೆ. ದೊಡ್ಡ ಸಂಖ್ಯೆಯಲ್ಲಿ ಬರುವಂತೆ ಜನತೆಯನ್ನು ತೇಜಸ್ವಿ ಯಾದವ್ ಆಹ್ವಾನಿಸಿದ್ದಾರೆ.

ಇನ್ನು ಬಿಜೆಪಿ ​ಅಲ್ಲಿ ಯಾವ ರೀತಿ ಆಟವಾಡಲಿದೆ​ ? ಪ್ರಚಾರದ ವೇಳೆ ಮೋದಿ ಮಾತ್ರ ಮಿಂಚಲಿದ್ದಾರೆಯೆ ಅಥವಾ ಅವರ ಪೊಸ್ಟರಿನಲ್ಲಿ ನಿತೀಶ್ ಕುಮಾರ್ ಅವರಿಗೂ ಜಾಗ ಸಿಗುವುದೆ ಎಂಬುದನ್ನು ನೋಡಬೇಕಿದೆ.

ಬಿಹಾರದ ​ಚುನಾವಣಾ ಮೈದಾನದಲ್ಲಿನ ಈ ಬಾರಿಯ ಕದನ ಸಣ್ಣದಲ್ಲ.

ಬಿಹಾರದಲ್ಲೂ ಕೇಂದ್ರದಲ್ಲೂ ಬಿಜೆಪಿ ಸರ್ಕಾರವಿದೆ. ಲಕ್ಷ ಕೋಟಿ ಯೋಜನೆಗಳಿವೆ.

ಇಂಥ ಬಿಜೆಪಿಯ ಎದುರು ತೇಜಸ್ವಿ ನಿಂತಿದ್ದಾರೆ, ಅವರ ಪಾರ್ಟಿ ಇದೆ.

ತೇಜಸ್ವಿ ಯಾದವ್ ಮುಖ್ಯವಾಗಿ ಉದ್ಯೋಗ ವಿಚಾರವನ್ನು ಎತ್ತಿಕೊಳ್ಳುತ್ತಿದ್ದಾರೆ.

ಯಾವುದರಲ್ಲಿ ಮೋದಿ ಸರ್ಕಾರ ಸಂಪೂರ್ಣವಾಗಿ ವಿಫಲವಾಗಿದೆಯೊ ಅದನ್ನೇ ಪ್ರತ್ಯಸ್ತ್ರವಾಗಿಸುತ್ತಿದ್ದಾರೆ ತೇಜಸ್ವಿ.

ಆರ್‌ಜೆಡಿ ಹೇಗೆ ಉದ್ಯೋಗಗಳನ್ನು ಒದಗಿಸಲು ಮತ್ತು ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಗರಿಷ್ಠ ಪ್ರಯತ್ನ ಮಾಡಿದೆ ಎಂಬುದನ್ನು ಎತ್ತಿ ತೋರಿಸುವ ಮೂಲಕ ಜನರ ಬೆಂಬಲವನ್ನು ಗಳಿಸಲು ಪ್ರಯತ್ನಿಸುತ್ತಿದ್ದಾರೆ. ಮೋದಿಯವರ ಎರಡು ಕೋಟಿ ಉದ್ಯೋಗಗಳ ಭರವಸೆ ವಿಫಲವಾಗಿದೆ. ಆದರೆ ನನ್ನ ಭರವಸೆ ಕೆಲಸ ಮಾಡಿದೆ. 2020ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ 10 ಲಕ್ಷ ಸರ್ಕಾರಿ ಉದ್ಯೋಗ ನೀಡುವುದಾಗಿ ಭರವಸೆ ನೀಡಿದ್ದೆ. ಅವಕಾಶ ಸಿಕ್ಕಾಗ 17 ತಿಂಗಳಲ್ಲಿ ಐದು ಲಕ್ಷ ಉದ್ಯೋಗ ನೀಡಿದ್ದೇನೆ ಎಂಬುದನ್ನು ತೇಜಸ್ವಿ ಹೇಳುತ್ತಿದ್ದಾರೆ.

ವಯಸ್ಸಾದ ಚಾಚಾ ಅವರು ನಮ್ಮೊಂದಿಗೆ ಇನ್ನೂ ಸ್ವಲ್ಪ ಕಾಲ ಮುಂದುವರಿದಿದ್ದರೆ ನೀಡಿದ್ದ ಭರವಸೆಯನ್ನು ಪೂರೈಸುತ್ತಿದ್ದೆ ಎಂದು ನಿತೀಶ್ ಅವರೆಡೆಗೆ ಬೆರಳು ಮಾಡುತ್ತಿದ್ದಾರೆ. ಮಾರ್ಚ್ 3 ರಂದು ಪಾಟ್ನಾದಲ್ಲಿ ಆಯೋಜಿಸಲಾಗಿರುವ ಜನ ವಿಶ್ವಾಸ ಮಹಾ ರ್ಯಾಲಿಯಲ್ಲಿ ​ ರಾಹುಲ್ ಗಾಂಧಿ ಸೇರಿದಂತೆ ಪ್ರತಿಪಕ್ಷಗಳ ಮೈತ್ರಿಕೂಟದ ನಾಯಕರು ಪಾಲ್ಗೊಳ್ಳುತ್ತಿದ್ದಾರೆ.

ಸಮಯ ಬಂದಾಗ ತೇಜಸ್ವಿ ಬರುತ್ತಾರೆ ಎಂದು ಈಚೆಗೆ ಜನವರಿ 28 ರಂದು ಬಿಹಾರ ವಿಧಾನಸಭೆಯಲ್ಲಿ ತೇಜಸ್ವಿ​ ಯಾದವ್ ಹೇಳಿದ್ದರು.

ಈಗ ಅವರ ಸಭೆಗಳಿಗೆ, ಜನವಿಶ್ವಾಸ ಯಾತ್ರೆಗೆ ಬರುತ್ತಿರುವ ದೊಡ್ಡ ಪ್ರಮಾಣದ ಜನಸಮೂಹ, ತೇಜಸ್ವಿಯವರ ಸಮಯ ಬರುತ್ತಿದೆ ಎಂಬುದನ್ನೇ ಸೂಚಿಸುತ್ತಿದೆಯೇ? ನಿಜಕ್ಕೂ ಬಿಹಾರದಲ್ಲಿನ ರಾಜಕೀಯ ಚಿತ್ರಗಳು ಕುತೂಹಲ ಕೆರಳಿಸುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!