ಸಂಸತ್ತಿನಲ್ಲಿ ಜನರ ಧ್ವನಿಯಾಗಿ ಕೆಲಸ ಮಾಡುವುದು ನನ್ನ ಆದ್ಯತೆ ʼಮನ್ಸೂರ್ ಅಲಿಖಾನ್ʼ

Update: 2024-04-08 04:37 GMT


ಐದು ಜನ ಶಾಸಕರು, ಪರಾಜಿತ ಅಭ್ಯರ್ಥಿಗಳು ಶೇ.100ರಷ್ಟು ನನಗೆ ಬೆಂಬಲ ನೀಡಿದ್ದಾರೆ. ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ. ಸಂಸತ್ತಿನಲ್ಲಿ ಜನರ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂಬ ವಿಶ್ವಾಸವಿದೆ. ಶಿಕ್ಷಣ ನನ್ನ ಮೊದಲ ಆದ್ಯತೆ. ನಾನು ಶಾಲೆ ಆರಂಭಿಸಿದಾಗ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಆರಂಭಿಸಿದೆ. ಶಿಕ್ಷಣ ನೀಡಿದರೆ ನಾವು ರಾಷ್ಟ್ರ ನಿರ್ಮಾಣದಲ್ಲಿ ಸಹಯೋಗ ನೀಡಿದಂತಾಗುತ್ತದೆ. ಶಿಕ್ಷಣ ಹೊರತುಪಡಿಸಿ ಬೇರೆ ಯಾವುದೇ ಕ್ಷೇತ್ರ ರಾಷ್ಟ್ರ ನಿರ್ಮಾಣಕ್ಕೆ ದೊಡ್ಡ ಮಟ್ಟದ ಸಹಯೋಗ ನೀಡುವುದಿಲ್ಲ.

ರಾಜ್ಯದ ಪ್ರತಿಷ್ಠಿತ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕೇಂದ್ರದ ಮಾಜಿ ಸಚಿವ ಡಾ.ಕೆ.ರಹ್ಮಾನ್ ಖಾನ್ ಅವರ ಪುತ್ರ ತೆಲಂಗಾಣ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿ ಮನ್ಸೂರ್ ಅಲಿಖಾನ್ ‘ವಾರ್ತಾಭಾರತಿ’ಗಾಗಿ ನೀಡಿರುವ ವಿಶೇಷ ಸಂದರ್ಶನ.


► ನಾಮಪತ್ರ ಸಲ್ಲಿಕೆ ಮಾಡುವ ಮುನ್ನ ದೇವಸ್ಥಾನಗಳಿಗೆ ತೆರಳಿ ಪೂಜೆ ಸಲ್ಲಿಸುವ ಮೂಲಕ ಏನು ಸಂದೇಶ ನೀಡಿದ್ದೀರಾ?

ಮನ್ಸೂರ್: ನಾಮಪತ್ರ ಸಲ್ಲಿಸುವ ಮುನ್ನ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡುವುದರಿಂದ ವ್ಯಕ್ತಿಯಲ್ಲಿ ಆತ್ಮವಿಶ್ವಾಸ ವೃದ್ಧಿಯಾಗುತ್ತದೆ. ನಾನು ಚರ್ಚ್, ದರ್ಗಾ ಹಾಗೂ ದೇವಸ್ಥಾನಗಳಿಗೆ ಭೇಟಿ ನೀಡಿದ್ದೇನೆ. ಸಾರ್ವಜನಿಕ ಜೀವನದಲ್ಲಿ ಇರುವವರು ಯಾವುದೋ ಒಂದು ಸಮುದಾಯದ ಭಾಗವಾಗಿ ಇರುವುದಿಲ್ಲ. ಸಮಾಜದಲ್ಲಿನ ಪ್ರತಿಯೊಂದು ಸಮುದಾಯವನ್ನು ಪ್ರತಿನಿಧಿಸುವಂತಿರಬೇಕು.

► ಬಿಜೆಪಿ ಭದ್ರಕೋಟೆಯಾಗಿರುವ ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದಲ್ಲಿ ನಿಮ್ಮ ಗೆಲುವಿಗೆ ಸಹಕಾರಿಯಾಗುವ ಅಂಶಗಳೇನು?

ಮನ್ಸೂರ್: 2014ರಲ್ಲಿ ಬಿಜೆಪಿ ಅಭ್ಯರ್ಥಿ ಪಿ.ಸಿ.ಮೋಹನ್ 1.37 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. ಆದರೆ, 2019ರಲ್ಲಿ ಈ ಪ್ರಮಾಣ 70,968 ಮತಗಳಿಗೆ ಕುಸಿಯಿತು. ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಗಮನಿಸಿದರೆ ನಮ್ಮ ಪಕ್ಷಕ್ಕೆ ಒಟ್ಟಾರೆ 71 ಸಾವಿರಕ್ಕಿಂತ ಹೆಚ್ಚು ಮತಗಳ ಮುನ್ನಡೆ ಸಿಕ್ಕಿದೆ. ಹಾಗಾಗಿ, ಬೆಂಗಳೂರು ಕೇಂದ್ರ ಈಗ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ ಐದರಲ್ಲಿ ಕಾಂಗ್ರೆಸ್ ಶಾಸಕರು ಗೆದ್ದಿದ್ದಾರೆ.

ಮತದಾರರು ಪಿ.ಸಿ.ಮೋಹನ್ಗೆ ಮೂರು ಬಾರಿ ಅವಕಾಶ ಕೊಟ್ಟಿದ್ದಾರೆ. 15 ವರ್ಷದಲ್ಲಿ ಕ್ಷೇತ್ರದ ಸ್ವರೂಪವನ್ನೇ ಬದಲಾಯಿಸಲು ಅವಕಾಶವಿತ್ತು. ಆದರೆ, ಅವರು ಏನು ಮಾಡಿದ್ದಾರೆ ಅನ್ನುವುದನ್ನು ಜನರೇ ಪ್ರಶ್ನಿಸಬೇಕಿದೆ. ಬೆಂಗಳೂರು ಕೇಂದ್ರ ಕೇವಲ ಬೆಂಗಳೂರು ನಗರಕ್ಕೆ ಮಾತ್ರ ಕೇಂದ್ರ ಅಲ್ಲ, ಇದು ದೇಶದ ಪ್ರತಿಷ್ಠಿತ 10 ಕ್ಷೇತ್ರಗಳಲ್ಲಿ ಒಂದಾಗಿದೆ.

ಈ ಕ್ಷೇತ್ರದ ವ್ಯಾಪ್ತಿಗೆ ಒಳಪಡುವ ಮಹದೇವಪುರದಲ್ಲಿ ಒಂದು ವರ್ಷ ಅತಿವೃಷ್ಟಿ, ಒಂದು ಅನಾವೃಷ್ಟಿ, ಕುಡಿಯುವ ನೀರಿನ ಸಮಸ್ಯೆ, ಪಾದಚಾರಿ ಮಾರ್ಗಗಳ ಒತ್ತುವರಿ, ಬಸ್ ಸಂಪರ್ಕ ಸೇವೆ ವಿರಳ, ಮೆಟ್ರೋ ರೈಲು ಯೋಜನೆಗಳ ಅನುಷ್ಠಾನದಲ್ಲಿ ವಿಳಂಬ ಆಗುತ್ತಿದೆ. ಯಾವ ರೀತಿಯಲ್ಲಿ ಅಭಿವೃದ್ಧಿಯಾಗಬೇಕಿತ್ತೋ ಆ ರೀತಿ ಆಗಿಲ್ಲ.

► ಈ ಕ್ಷೇತ್ರದಲ್ಲಿ ಘಟಾನುಘಟಿ ಕಾಂಗ್ರೆಸ್ ಶಾಸಕರು ಇದ್ದರೂ ಈವರೆಗೆ ಈ ಕ್ಷೇತ್ರ ಗೆಲ್ಲಲು ಯಾಕೆ ಸಾಧ್ಯವಾಗಿಲ್ಲ?

ಮನ್ಸೂರ್: ಈ ಬಾರಿ ಪರಿಸ್ಥಿತಿ ಬದಲಾಗಿದೆ. ನಾವು ಜನರಿಗೆ ಐದು ಗ್ಯಾರಂಟಿ ಕೊಟ್ಟಿದ್ದೇವೆ. ಅದು ನೇರವಾಗಿ ತಲುಪಿ, ಅವರಿಗೆ ಅನುಕೂಲವಾಗಿದೆ. ವಿಧಾನಸಭೆ ರೀತಿಯಲ್ಲಿ ಲೋಕಸಭೆ ಚುನಾವಣೆಯಲ್ಲೂ ಜನ ನಮಗೆ ಬೆಂಬಲ ನೀಡುತ್ತಾರೆ ಎಂಬ ವಿಶ್ವಾಸವಿದೆ.

► ಭಾಷಾ, ಧಾರ್ಮಿಕ ಅಲ್ಪಸಂಖ್ಯಾತರು ಇರುವ ಈ ಕ್ಷೇತ್ರದ ಜನ ಬಿಜೆಪಿಯತ್ತ ಯಾಕೆ ಆಕರ್ಷಿತರಾಗುತ್ತಿದ್ದಾರೆ?

ಮನ್ಸೂರ್: 2009ರಲ್ಲಿ ಮತಗಳ ವಿಭಜನೆಯಿಂದ, 2014ರಲ್ಲಿ ಒಂದು ರೀತಿಯ ಅಲೆಯಲ್ಲಿ ಬಿಜೆಪಿ ಗೆಲುವು ಸಾಧಿಸಿತು. 2019ರಲ್ಲಿ ಜೆಡಿಎಸ್ ಜೊತೆ ಮೈತ್ರಿ ಹಾಗೂ ಸ್ಥಳೀಯವಾಗಿ ತೆಗೆದುಕೊಂಡ ಕೆಲವು ನಿರ್ಣಯಗಳಿಂದಾಗಿ ಸೋಲನುಭವಿಸಬೇಕಾಯಿತು. ಆದರೂ, ರಿಝ್ವಾನ್ ಅರ್ಶದ್ ಉತ್ತಮವಾಗಿ ಹೋರಾಟ ಮಾಡಿದ್ದರು.

► ಈ ಚುನಾವಣೆಯಲ್ಲಿ ನರೇಂದ್ರ ಮೋದಿ ಅಲೆ ಇಲ್ಲವೇ?

ಮನ್ಸೂರ್: ನರೇಂದ್ರ ಮೋದಿ ಅಲೆ ಇದ್ದರೆ ಈ.ಡಿ., ಸಿಬಿಐ, ಐಟಿ ದಾಳಿಗಳನ್ನು ವಿಪಕ್ಷ ನಾಯಕರ ಮೇಲೆ ಮಾಡಿಸಿ, ಇಬ್ಬರು ಮುಖ್ಯಮಂತ್ರಿಗಳನ್ನು ಬಂಧಿಸುವ ಅಗತ್ಯವಿತ್ತೇ. ಚುನಾವಣಾ ಬಾಂಡ್ಗಳು ಸಂವಿಧಾನ ಬಾಹಿರ ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಕಾಂಗ್ರೆಸ್ ಪಕ್ಷದ ಖಾತೆಗಳನ್ನು ಜಪ್ತಿ ಮಾಡಿದ್ದಾರೆ. ವಿಪಕ್ಷದಲ್ಲಿರುವ ನಾಯಕರ ವಿರುದ್ಧ ಆರೋಪಗಳನ್ನು ಮಾಡುತ್ತಾರೆ. ಅವರು ಬಿಜೆಪಿ ಸೇರುತ್ತಿದ್ದಂತೆ ವಾಷಿಂಗ್ ಮೆಷಿನ್ನಲ್ಲಿ ಬಟ್ಟೆಗಳು ಸ್ವಚ್ಛವಾಗುವಂತೆ ಆರೋಪಗಳೆಲ್ಲ ಸ್ವಚ್ಛವಾಗಿಬಿಡುತ್ತವೆ. ಮೋದಿ ಅಲೆ ಇದ್ದಿದ್ದರೆ ಇದನ್ನೆಲ್ಲ ಮಾಡುವ ಅಗತ್ಯವಿದೆಯೇ?

► ದೇಶದ ಬಹುತೇಕ ರಾಜ್ಯಗಳಲ್ಲಿ ಜನ ಬಿಜೆಪಿಗೆ ಹೆಚ್ಚು ಬೆಂಬಲ ನೀಡುತ್ತಿದ್ದಾರಲ್ಲ?

ಮನ್ಸೂರ್: ಮಹಾರಾಷ್ಟ್ರ, ಬಿಹಾರದಲ್ಲಿ ಬಿಜೆಪಿಗೆ ಬಹುಮತ ಸಿಕ್ಕಿತ್ತಾ? ಚುನಾಯಿತ ಸರಕಾರಗಳನ್ನು ಅಸ್ಥಿರಗೊಳಿಸಿ ಅವರು ಅಧಿಕಾರಕ್ಕೆ ಬಂದಿರುವುದು ಎಲ್ಲರ ಕಣ್ಣ ಮುಂದಿದೆ. ಜನರ ತೀರ್ಪನ್ನು ತಿರುಚುವ ಕೆಲಸವನ್ನು ಬಿಜೆಪಿ ಮಾಡಿದೆ.

► ಪ್ರಜಾಪ್ರಭುತ್ವ ಹಾಗೂ ಸಂವಿಧಾನ ಅಪಾಯದಲ್ಲಿದೆ ಎಂದು ಯಾಕೆ ಅನಿಸುತ್ತಿದೆ?

ಮನ್ಸೂರ್: ವಿಪಕ್ಷ ನಾಯಕರ ಮೇಲೆ ನಿರಂತರವಾಗಿ ಐಟಿ, ಈಡಿ, ಸಿಬಿಐ ದಾಳಿಗಳು ನಡೆಯುತ್ತಿವೆ. ಬಿಜೆಪಿ ನಾಯಕರ ಮೇಲೆ ಇಂತಹ ದಾಳಿಗಳು ನಡೆಯುವುದಿಲ್ಲ. ಸಂಸತ್ತಿನಲ್ಲಿ ಬಹುಮತವಿದ್ದರೂ ಸುಗ್ರೀವಾಜ್ಞೆಗಳ ಮೂಲಕ ತಮಗೆ ಬೇಕಾದ್ದನ್ನು ಮಾಡುವುದು ಸರಿಯಾದ ಮಾರ್ಗವೇ? ವಿಧೇಯಕಗಳನ್ನು ಸದನದಲ್ಲಿ ಮಂಡಿಸಿ, ಚರ್ಚೆಗೆ ಅವಕಾಶ ನೀಡಿ ಅಂಗೀಕಾರ ಪಡೆದುಕೊಳ್ಳಲಿ. ಚುನಾವಣಾ ಆಯುಕ್ತರ ನೇಮಕದ ಸಮಿತಿಯಲ್ಲಿ ದೇಶದ ಮುಖ್ಯ ನ್ಯಾಯಮೂರ್ತಿಯನ್ನು ಹೊರಗೆ ಇಟ್ಟಿದ್ದು ಸರಿಯೇ?

► ಕಾಂಗ್ರೆಸ್ನಲ್ಲಿ ಕುಟುಂಬ ರಾಜಕಾರಣಕ್ಕೆ ಮಣೆ ಹಾಕುತ್ತಿರುವುದು ಕಾರ್ಯಕರ್ತರಿಗೆ ತಪ್ಪುಸಂದೇಶ ರವಾನಿಸುವುದಿಲ್ಲವೇ?

ಮನ್ಸೂರ್: ನಾನು ಪಕ್ಷದಲ್ಲಿ 20 ವರ್ಷದಿಂದ ದುಡಿಯುತ್ತಿದ್ದೇನೆ. ಕೆಪಿಸಿಸಿ ವೃತ್ತಿಪರ ಘಟಕದ ಉಪಾಧ್ಯಕ್ಷ, ಕೆಪಿಸಿಸಿ ಕಾರ್ಯದರ್ಶಿ, ಕೆಪಿಸಿಸಿ ಸಂಶೋಧನಾ ವಿಭಾಗದ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಮಾಧ್ಯಮ ಮತ್ತು ಸಂವಹನ ವಿಭಾಗದ ಸಹ ಅಧ್ಯಕ್ಷ, ತೆಲಂಗಾಣ ರಾಜ್ಯದ ಎಐಸಿಸಿ ಉಸ್ತುವಾರಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಬಳಿಕ ನನಗೆ ಅವಕಾಶ ಸಿಕ್ಕಿದೆ.

► ಕಾಂಗ್ರೆಸ್ ಪಕ್ಷ ಎಂದರೆ ‘ಪರಿವಾರವಾದ’ ಎಂದು ಪ್ರಧಾನಿ ಮೋದಿ ಟೀಕಿಸುತ್ತಿದ್ದಾರಲ್ಲ?

ಮನ್ಸೂರ್: ರಾಜ್ಯ ಬಿಜೆಪಿ ಅಧ್ಯಕ್ಷ ಯಾರು? ಕೆ.ಎಸ್.ಈಶ್ವರಪ್ಪಯಾರಿಗಾಗಿ ಟಿಕೆಟ್ ಕೇಳಿಕೊಂಡು ಗಲಾಟೆ ಮಾಡುತ್ತಿದ್ದಾರೆ? ಜ್ಯೋತಿರಾದಿತ್ಯ ಸಿಂಧಿಯಾ, ಅನುರಾಗ್ ಠಾಕೂರ್, ರಾಜನಾಥ್ ಸಿಂಗ್ ಮಗ, ಅಮಿತ್ ಶಾ ಮಗ ಜಯ್ಶಾ ಇವರೆಲ್ಲ ಯಾರು?. ಸಾಮಾನ್ಯ ಕಾರ್ಯಕರ್ತನಾಗಿ ಪಕ್ಷ ನಿಷ್ಠೆಯಿಂದ ದುಡಿದರೆ ಅವಕಾಶಗಳು ಸಿಗುತ್ತವೆ. ನನಗೆ ಕೇವಲ ನನ್ನ ತಂದೆಯ ನಾಮಬಲದಿಂದ ಪಕ್ಷ ಟಿಕೆಟ್ ನೀಡಿದೆ ಎಂಬುದನ್ನು ನಾನು ಒಪ್ಪುವುದಿಲ್ಲ.

► ಅಲ್ಪಸಂಖ್ಯಾತ ಸಮುದಾಯದಲ್ಲಿನ ಅಭದ್ರತೆಯ ವಾತಾವರಣ ದೂರವಾಗಿಸಲು ನಿಮ್ಮ ಪ್ರಯತ್ನವೇನು?

ಮನ್ಸೂರ್: ಪ್ರಜಾಪ್ರಭುತ್ವ ಇರುವ ದೇಶದಲ್ಲಿ ಯಾವ ಸಮುದಾಯವೂ ಅಭದ್ರತೆಯನ್ನು ಅನುಭವಿಸಬಾರದು. ದ್ವಿತೀಯ ದರ್ಜೆ ನಾಗರಿಕರು ಎಂಬ ಮನೋಭಾವ ಬರಬಾರದು. ಒಬ್ಬ ಜನಪ್ರತಿನಿಧಿಯಾಗಿ ಪ್ರತಿಯೊಂದು ಜನ ಸಮುದಾಯವನ್ನು ಸಮಾನವಾಗಿ ಕಾಣಬೇಕು. ಸಮುದಾಯದಲ್ಲಿ ವಿಶ್ವಾಸ ಮೂಡಿಸಲು ಎಲ್ಲ ರಾಜಕೀಯ ಪಕ್ಷಗಳು, ರಾಜಕೀಯ ವ್ಯವಸ್ಥೆ ಸಾಮೂಹಿಕ ಜವಾಬ್ದಾರಿಯನ್ನು ಹೊರಬೇಕು.

ಕಾಂಗ್ರೆಸ್ ಪಕ್ಷವು ಸದಾಕಾಲ ಎಲ್ಲ ವರ್ಗಗಳನ್ನು ಪ್ರತಿನಿಧಿಸುತ್ತದೆ. ಎಲ್ಲರಿಗೂ ನ್ಯಾಯ ಸಿಗಬೇಕು ಅನ್ನುವುದು ನಮ್ಮ ಬದ್ಧತೆ. ಇದರಲ್ಲಿ ತುಷ್ಟೀಕರಣ ಏನು ಇಲ್ಲ. ಮುಸ್ಲಿಮ್ ಸಮುದಾಯ ತುಂಬಾ ಹಿಂದುಳಿದಿರುವುದನ್ನು ಸಾಚಾರ್ ಸಮಿತಿಯ ವರದಿ ತಿಳಿಸಿದೆ. ಕೇವಲ ಮುಸ್ಲಿಮರು ಅಷ್ಟೇ ಅಲ್ಲ, ಬೇರೆ ಯಾವುದೇ ಸಮುದಾಯ ಹಿಂದುಳಿದಿದ್ದರೆ ಅವರಿಗೆ ಅಗತ್ಯ ಸೌಲಭ್ಯ ನೀಡಿ ಮುಂದುವರಿಯಲು ಅವಕಾಶ ನೀಡಬೇಕು.

ಕಾಂಗ್ರೆಸ್ ಏನು ಮಾಡಿಲ್ಲ ಎಂದು ಟೀಕಿಸುವ ಬಿಜೆಪಿಯವರು ಕಳೆದ 10 ವರ್ಷಗಳಲ್ಲಿ ಏನು ಮಾಡಿದ್ದಾರೆ? ಅಲ್ಪಸಂಖ್ಯಾತ ಸಮುದಾಯದಲ್ಲಿ ವಿಶ್ವಾಸ ವೃದ್ಧಿಸುವ ಕೆಲಸವನ್ನು ಏನಾದರೂ ಮಾಡಿದ್ದಾರಾ? ಸಮುದಾಯದ ಭಾವನೆಗಳಿಗೆ ಧಕ್ಕೆ ತರುವಂತಹ ವಿಚಾರಗಳನ್ನು ಮುನ್ನೆಲೆಗೆ ತಂದವರು ಯಾರು? ಅನ್ನುವುದನ್ನು ಪ್ರಶ್ನೆ ಮಾಡಿಕೊಳ್ಳಲಿ.

► ರಾಮಮಂದಿರ ನಿರ್ಮಾಣ, 370 ಆರ್ಟಿಕಲ್ ರದ್ದು ಮಾಡಿದ್ದನ್ನು ಬಿಜೆಪಿ ತನ್ನ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿದೆಯಲ್ಲ?

 ಮನ್ಸೂರ್: ರಾಮ ಮಂದಿರ ನಿರ್ಮಾಣದ ಬಗ್ಗೆ ಯಾರ ತಕರಾರೂ ಇಲ್ಲ. 370 ಆರ್ಟಿಕಲ್ ಬಗ್ಗೆ ನ್ಯಾಯಾಲಯದಲ್ಲಿ ಇರುವುದರಿಂದ ನಾನು ಪ್ರತಿಕ್ರಿಯೆ ಕೊಡುವುದಿಲ್ಲ. ಇವತ್ತು ಸರಕಾರದ ಮುಂದೆ ಇರುವ ಸವಾಲುಗಳೇನು? ನಿರುದ್ಯೋಗ ಪ್ರಮಾಣ ಹೆಚ್ಚಾಗಿದೆ. ಹಸಿವಿನ ಸೂಚ್ಯಂಕ ಏನಾಗಿದೆ. ಬಡವರು ಬಡವರಾಗುತ್ತಿದ್ದಾರೆ, ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ. ದೇಶದ ಕಲ್ಯಾಣದ ವಿಚಾರದ ಬಗ್ಗೆ ಚರ್ಚೆಗಳು ಆಗಬೇಕೇ ಹೊರತು ಬೇರೆ ವಿಚಾರಗಳ ಮೇಲೆ ಅಲ್ಲ.

► ಈ ಚುನಾವಣೆಯಲ್ಲಿ ಜನರಿಗೆ ಹೊಸದು ಏನು ನೀಡುತ್ತೀರಾ?

ಮನ್ಸೂರ್: ಐದು ನ್ಯಾಯ, 25 ಗ್ಯಾರಂಟಿಗಳನ್ನು ದೇಶದ ಜನರಿಗೆ ನೀಡಿದ್ದೇವೆ. ಜನರಿಗೆ ಭದ್ರತೆ ನೀಡುತ್ತೇವೆ. ಮಹಿಳೆಯರಿಗೆ ಆರ್ಥಿಕ ಭದ್ರತೆ ನೀಡುತ್ತೇವೆ. ಶಿಕ್ಷಣ, ಆಹಾರ, ಮಾಹಿತಿ, ಉದ್ಯೋಗದ ಹಕ್ಕು ನೀಡಿದ್ದು ಯಾರು? ಕಾಂಗ್ರೆಸ್ ಪಕ್ಷ ಅಲ್ಲವೇ. ಯುಪಿಎ-ಎನ್ಡಿಎ ಸಾಧನೆಗಳ ಬಗ್ಗೆ ಆರೋಗ್ಯಕರ ಚರ್ಚೆಗಳು ನಡೆಯಲಿ. ವಾಟ್ಸ್ಆ್ಯಪ್ ಯೂನಿವರ್ಸಿಟಿಯಿಂದ ಕಲಿತವರು ವಾಸ್ತವ ಅಂಶಗಳನ್ನು ಅರಿಯಲಿ.

► ನಿಮ್ಮ ಕ್ಷೇತ್ರಕ್ಕೆ ಕೊಡಲು ಬಯಸಿರುವ ಕೊಡುಗೆಗಳೇನು?

ಮನ್ಸೂರ್: ಬೆಂಗಳೂರನ್ನು ಪುನಃ ಉದ್ಯಾನನಗರಿ, ಕೆರೆಗಳ ನಗರಿಯನ್ನಾಗಿ ಮಾಡಬೇಕು ಅನ್ನುವುದು ನನ್ನ ಕಲ್ಪನೆ. ಮೆಟ್ರೋ ಯೋಜನೆ ಮಾಡಲು ಭೂ ಸ್ವಾಧೀನ ಮಾಡುವುದಾದರೆ, ಕೆರೆಗಳ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಮಾಡಲು ಯಾಕೆ ಸಾಧ್ಯವಿಲ್ಲ?. ಜಲ ಸಂಪನ್ಮೂಲ ಅಭಿವೃದ್ಧಿಪಡಿಸಬೇಕು. ಪರಿಸರ ಹಾಗೂ ಅಭಿವೃದ್ಧಿ ಎರಡು ಸಮತೋಲನವಾಗಿರಬೇಕು. ಶಿಕ್ಷಣ, ಆರೋಗ್ಯ, ಉದ್ಯೋಗಕ್ಕೆ ಒತ್ತು ನೀಡಬೇಕು.

ಬೆಂಗಳೂರು ಕೇಂದ್ರವು ನವೋದ್ಯಮಗಳ ಸ್ಥಾಪನೆಯ ತವರು ಎಂದರೆ ತಪ್ಪಾಗಲಾರದು. ನವೋದ್ಯಮಗಳು ಉದ್ಯೋಗ ಸೃಷ್ಟಿಸುವಲ್ಲಿ ಮುಂಚೂಣಿಯಲ್ಲಿವೆ. ನವೋದ್ಯಮಗಳು ವಿಫಲವಾದರೆ ಔದ್ಯೋಗಿಕ ವಾತಾವರಣವೇ ವಿಫಲವಾಗಿ, ಉದ್ಯೋಗ ನಷ್ಟವಾಗುತ್ತದೆ. ಇಂತಹ ಸಮಸ್ಯೆಗಳನ್ನು ಸರಿಪಡಿಸಬೇಕು.

► ಬಿಬಿಎಂಪಿ, ಬಿಡಿಎ ಎಲ್ಲವೂ ಒಂದೇ ಸೂರಿನಡಿ ಬಂದರೆ ಅಭಿವೃದ್ಧಿ ಸಾಧ್ಯ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಮನ್ಸೂರ್: ಸಂಸದ, ಶಾಸಕ, ಕಾರ್ಪೊರೇಟರ್ ಅವರ ಜವಾಬ್ದಾರಿಗಳು ಬೇರೆ ಬೇರೆ ಇವೆ. ಬೆಂಗಳೂರು ಇವತ್ತು ಉದ್ಯೋಗಗಳನ್ನು ಸೃಷ್ಟಿಸುವ ತಾಣವಾಗಿದೆ. ದೇಶದ ಬೇರೆ ಬೇರೆ ರಾಜ್ಯಗಳಿಂದ ಬಂದು ಜನ ಇಲ್ಲಿ ನೆಲೆಸಿದ್ದಾರೆ. ಬದುಕು ಕಟ್ಟಿಕೊಂಡಿದ್ದಾರೆ. ಒಂದು ನಗರವನ್ನು ಸಮರ್ಪಕವಾಗಿ ಅಭಿವೃದ್ಧಿಪಡಿಸಲು ಸಂಪನ್ಮೂಲಗಳು ಬೇಕು. ಕೇವಲ ರಾಜ್ಯ ಸರಕಾರದ ಸಂಪನ್ಮೂಲಗಳಿಂದ ಎಲ್ಲವನ್ನೂ ಮಾಡಲು ಆಗುವುದಿಲ್ಲ. ಕೇಂದ್ರ ಸರಕಾರವೂ ಕೈ ಜೋಡಿಸಬೇಕು.

ಕೇಂದ್ರ ಸರಕಾರದಿಂದ ಅಗತ್ಯ ಯೋಜನೆಗಳಿಗೆ ಅನುದಾನ ತರಬೇಕು. ಆದರೆ, ನಮ್ಮ ರಾಜ್ಯದ ಬಿಜೆಪಿ ಸಂಸದರು ಕೇಂದ್ರದ ಬಳಿ ಮಾತನಾಡಲು ಮುಂದೆ ಬರುವುದಿಲ್ಲ. ರಾಜ್ಯದ ಬರ ಪರಿಸ್ಥಿತಿ ಕುರಿತು ಸದನದಲ್ಲಿ ಎಷ್ಟು ಜನ ಮಾತನಾಡಿದ್ದಾರೆ. ಎಸ್ಡಿಆರ್ಎಫ್, ಎನ್ಡಿಆರ್ಎಫ್ ಅಡಿ ನಮಗೆ ಹಣ ಬಿಡುಗಡೆ ಮಾಡುವಂತೆ ರಾಜ್ಯ ಸರಕಾರ ಕೇಳಿದೆ, ಬಿಜೆಪಿ ಸಂಸದರು ಕೇಳಿದ್ದಾರೆಯೇ?

ರಾಜ್ಯದಿಂದ ಒಬ್ಬರು ಪಕ್ಷೇತರರು ಸೇರಿದಂತೆ 26 ಜನ ಬಿಜೆಪಿ ಸಂಸದರು ಆಯ್ಕೆಯಾಗಿದ್ದಾರೆ. ಇಡೀ ದೇಶದಲ್ಲಿ ಬಿಜೆಪಿಗೆ ಹೆಚ್ಚು ಕೊಡುಗೆ ನೀಡಿದ ರಾಜ್ಯ ನಮ್ಮದು. ಇಷ್ಟು ಜನ ಸಂಸದರು ಆಯ್ಕೆಯಾಗಿದ್ದರೂ ರಾಜ್ಯಕ್ಕೆ ಆಗಿರುವ ಲಾಭ ಏನು? ಪ್ರಜಾಪ್ರಭುತ್ವದಲ್ಲಿ ಜನರು ಪ್ರಶ್ನಿಸದಿದ್ದರೆ ಉತ್ತರದಾಯಿತ್ವ ಇರುವುದಿಲ್ಲ.

► ಭಾರತ ವಿಶ್ವಗುರು ಆಗುತ್ತಿದೆ, ಐದು ಟ್ರಿಲಿಯನ್ ಆರ್ಥಿಕತೆ ಆಗುತ್ತಿದೆ ಎಂದು ಹೇಳುತ್ತಿದ್ದಾರಲ್ಲ?

ಮನ್ಸೂರ್: ದೇಶದ ಆರ್ಥಿಕತೆಯನ್ನು ಐದು ಟ್ರಿಲಿಯನ್ ಆರ್ಥಿಕತೆ ಮಾಡಲು ಬಿಜೆಪಿಯವರೇ ಬರಬೇಕಿಲ್ಲ. ಅಭಿವೃದ್ಧಿಯ ಮಾನದಂಡಗಳ ಅನುಗುಣವಾಗಿ ಅದು ತಾನಾಗಿಯೇ ಆರ್ಥಿಕ ಬೆಳವಣಿಗೆ ಆಗಲಿದೆ. ಆದರೆ, ಬಿಜೆಪಿಯವರು ಕಳೆದ ಚುನಾವಣೆಯಲ್ಲಿ ವಾರ್ಷಿಕ ಎರಡು ಕೋಟಿ ಉದ್ಯೋಗ ಸೃಷ್ಟಿ, ದೇಶದ ಪ್ರತಿಯೊಬ್ಬ ನಾಗರಿಕನ ಖಾತೆಯಲ್ಲಿ 15 ಲಕ್ಷ ರೂ. ಹಾಕುವುದಾಗಿ ಭರವಸೆ ನೀಡಿದ್ದರು. ಒಂದಾದರೂ ಈಡೇರಿಸಿದ್ದಾರಾ?

► ನೀವು ಕ್ಷೇತ್ರದ ಜನರ ಜೊತೆ ಹೆಚ್ಚು ಒಡನಾಟವಿರಿಸಿಕೊಂಡಿಲ್ಲ, ತಂದೆಯ ನೆರಳಿನಲ್ಲಿ ರಾಜಕಾರಣ ಮಾಡುತ್ತೀರಿ ಎಂಬ ಆಪಾದನೆಯಿದೆಯಲ್ಲ?

ಮನ್ಸೂರ್: ನನ್ನ ತಂದೆ ಹಲವಾರು ವರ್ಷಗಳಿಂದ ರಾಜಕಾರಣದಲ್ಲಿದ್ದಾರೆ. ರಾಜ್ಯಸಭಾ ಸದಸ್ಯ, ಕೇಂದ್ರ ಸಚಿವರಾಗಿ ಕೆಲಸ ಮಾಡಿದ್ದಾರೆ. ತಂದೆಯ ಸಕ್ರಿಯ ರಾಜಕಾರಣ ಅಂತ್ಯವಾಗಿದ್ದು 2014ರಲ್ಲಿ. ನಾನು ರಾಜಕೀಯ ಪ್ರವೇಶ ಮಾಡಿದ್ದು 2007ರಲ್ಲಿ. ಅಲ್ಲಿಂದ ಈವರೆಗೆ ನಾನು ಪಕ್ಷದ ವಿವಿಧ ಹಂತಗಳಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ. ಏಕಾಏಕಿ ನಾನು ಪ್ರತಿಷ್ಠಾಪನೆಯಾದವನಲ್ಲ.

► ಕ್ಷೇತ್ರದ ಶಾಸಕರು, ಮುಖಂಡರ ಬೆಂಬಲ ಹೇಗಿದೆ?

ಮನ್ಸೂರ್: ಐದು ಜನ ಶಾಸಕರು, ಪರಾಜಿತ ಅಭ್ಯರ್ಥಿಗಳು ಶೇ.100ರಷ್ಟು ನನಗೆ ಬೆಂಬಲ ನೀಡಿದ್ದಾರೆ. ಕ್ಷೇತ್ರದ ಜನರು ನನ್ನನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವಿದೆ. ಸಂಸತ್ತಿನಲ್ಲಿ ಜನರ ಧ್ವನಿಯಾಗಿ ಕೆಲಸ ಮಾಡುತ್ತೇನೆ ಎಂಬ ವಿಶ್ವಾಸವಿದೆ. ಶಿಕ್ಷಣ ನನ್ನ ಮೊದಲ ಆದ್ಯತೆ. ನಾನು ಶಾಲೆ ಆರಂಭಿಸಿದಾಗ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಆರಂಭಿಸಿದೆ. ಶಿಕ್ಷಣ ನೀಡಿದರೆ ನಾವು ರಾಷ್ಟ್ರ ನಿರ್ಮಾಣದಲ್ಲಿ ಸಹಯೋಗ ನೀಡಿದಂತಾಗುತ್ತದೆ. ಶಿಕ್ಷಣ ಹೊರತುಪಡಿಸಿ ಬೇರೆ ಯಾವುದೇ ಕ್ಷೇತ್ರ ರಾಷ್ಟ್ರ ನಿರ್ಮಾಣಕ್ಕೆ ದೊಡ್ಡ ಮಟ್ಟದ ಸಹಯೋಗ ನೀಡುವುದಿಲ್ಲ.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ಸಂದರ್ಶನ: ಮಂಜುಳಾ ಮಾಸ್ತಿಕಟ್ಟೆ

contributor

Contributor - ಬರಹ ರೂಪ: ಅಮ್ಜದ್ ಖಾನ್ ಎಂ.

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!