ಶ್ವೇತಾ ಹೆಸರಲ್ಲಿ ವೈಪಿ ಸಿಂಗ್, ವಿನೀತಾ ಹೆಸರಲ್ಲಿ ಅರವಿಂದ್ ಸೈನಿ ಟ್ವೀಟ್ !
ಬಿಜೆಪಿ ದೇಶದಲ್ಲಿ ಮಾತ್ರವಲ್ಲ, ಜಗತ್ತಿನಲ್ಲೇ ಅತ್ಯಂತ ಶಕ್ತಿಶಾಲಿ ರಾಜಕೀಯ ಪಕ್ಷ, ಅತ್ಯಂತ ಶ್ರೀಮಂತ ರಾಜಕೀಯ ಪಕ್ಷ ಅನ್ನೋದು ನಿಮಗೆ ಗೊತ್ತೇ ಇದೆ. ಆದರೆ ಇದೇ ಪಕ್ಷದ ಐಟಿ ಸೆಲ್ ತನ್ನ ಫಾಲೋವರ್ಸ್ ಹೆಚ್ಚಿಸಿಕೊಳ್ಳೋಕೆ ಅದೆಷ್ಟು ಚಿಲ್ಲರೆ ಕೆಲಸ ಮಾಡುತ್ತಿದೆ ಗೊತ್ತೆ?.
ಬಿಜೆಪಿ ಐಟಿ ಸೆಲ್ ಇಷ್ಟೊಂದು ಕೀಳು ಮಟ್ಟಕ್ಕೂ ಇಳಿದಿದೆ, ಇಳಿಯುತ್ತಿದೆ ಎಂದರೆ ನೀವು ನಂಬಲೇಬೇಕು. ಏಕೆಂದರೆ ಸತ್ಯ ಅದೇ ಆಗಿದೆ. ಸದಾ ಸುಳ್ಳುಗಳ ಹಿಂದೆ ಅಡಗಿಕೊಂಡೇ, ಸುಳ್ಳು ಬಾಣಗಳನ್ನು ಬಿಡುತ್ತಲೇ, ವಿರೋಧಿಗಳ ಬಗ್ಗೆ ಅಪಪ್ರಚಾರ ಮಾಡುವ, ಸಮಾಜದಲ್ಲಿ ದ್ವೇಷ ಹರಡುವ ಮೂಲಕ ಬಿಜೆಪಿಯ ರಾಜಕೀಯ ಬೇಳೆ ಬೇಯಿಸುವ ಅದರ ಐಟಿ ಸೆಲ್ ನ ಅಸಲೀಯತ್ತು ಅಷ್ಟು ಮಟ್ಟಿಗೆ ಅಸಹ್ಯವಾಗಿದೆ.
ಅದೆಂಥ ಮನಃಸ್ಥಿತಿಯವರು ಅದರೊಳಗಿದ್ಧಾರೆ ಎಂಬುದಕ್ಕೆ ಮೊನ್ನೆ ಪ್ರಧಾನಿ ಮೋದಿ ಕ್ಷೇತ್ರದಲ್ಲಿ ಸಾಮೂಹಿಕ ಅತ್ಯಾಚಾರ ಕೇಸ್ನಲ್ಲಿ ಬಿಜೆಪಿ ಐಟಿ ಸೆಲ್ನ ಮೂವರು ಬಂಧಿತರಾಗಿರೋದೇ ಸಾಕ್ಷಿ. ಉದ್ದಕ್ಕೂ ಬಿಜೆಪಿಯ ಸೋಷಿಯಲ್ ಮೀಡಿಯಾ ಘಟಕ , ಅದರ ಮುಖ್ಯಸ್ಥ ಅಮಿತ್ ಮಾಳವೀಯ ಅಂಥವರು, ಸಂಬಿತ್ ಪಾತ್ರಾ ಅಂಥವರು ಸುಳ್ಳುಗಳನ್ನೇ ಹರಡುತ್ತ ಬಂದವರು, ದ್ವೇಷವನ್ನೇ ಹರಡುತ್ತ ಬಂದವರು.
ಕಳೆದೊಂದು ದಶಕದಲ್ಲಿ ಸುಳ್ಳು, ದ್ವೇಷಗಳ ಮೂಲಕ ಈ ಐಟಿ ಸೆಲ್ ಇಡೀ ದೇಶದ ಸಾಮಾಜಿಕ, ರಾಜಕೀಯ ಹಂದರವನ್ನು ನಾಶ ಮಾಡಿ ಹಾಕಿದೆ. ಅದು ಹರಡಿರುವ ಸುಳ್ಳುಗಳಿಗೆ, ದ್ವೇಷಕ್ಕೆ ಮಿತಿಯೇ ಇಲ್ಲ. ದೇಶದಲ್ಲೊಂದು ದೊಡ್ಡ ಸುಳ್ಳಿನ ಫ್ಯಾಕ್ಟರಿಯನ್ನೇ ಅದು ನಿರ್ಮಿಸಿ ಬಿಟ್ಟಿದೆ.
ಈಗ ನೋಡಿದರೆ ಅದರ ಬುನಾದಿಯೇ ಸುಳ್ಳಿನ ಮೇಲೆ ನಿಂತಿದೆ ಎಂಬುದು ಒಂದೊಂದಾಗಿ ಬಯಲಾಗುತ್ತಿವೆ.
ನೀವು ನಂಬಲೇಬೇಕು, ಸೋಷಿಯಲ್ ಮೀಡಿಯಾದಲ್ಲಿ ಬಿಜೆಪಿ ಐಟಿ ಸೆಲ್ ಮಂದಿ ಮೊದಲು ಕಾಣಿಸಿಕೊಳ್ಳುವುದು ಹುಡುಗಿಯ ಹೆಸರು ಮತ್ತು ಗುರುತಿನಲ್ಲಿ. ಮೊದಲು ಹುಡುಗಿಯ ಗುರುತಿನಲ್ಲಿ ಕಾಣಿಸಿಕೊಂಡು ಆ ಮೂಲಕ ಜನರನ್ನು ಆಕರ್ಷಿಸುತ್ತಾರೆ. ಭಕ್ತರು ಒಮ್ಮೆ ತಮ್ಮ ಫಾಲೋವರ್ಸ್ ಆದ ಕೂಡಲೇ, ಫಾಲೋವರ್ಸ್ ಜಾಸ್ತಿಯಾಗುತ್ತಿದ್ದ ಹಾಗೆಯೇ ಅಸಲೀ ರೂಪದಲ್ಲಿ ಅವರ ವಿರಾಟ್ ದರ್ಶನ ಆಗುತ್ತದೆ.
ಈಗ ವಾರಣಾಸಿಯ ಕುನಾಲ್ ಪಾಂಡೆ, ಸಕ್ಷಮ್ ಪಟೇಲ್ ಮತ್ತು ಆನಂದ್ ಅಲಿಯಾಸ್ ಅಭಿಷೇಕ್ ಚೌಹಾಣ್ ಸಾಮೂಹಿಕ ಅತ್ಯಾಚಾರ ಆರೋಪದಲ್ಲಿ ಬಂಧಿತರಾಗಿದ್ದಾರೆ. ಇದು ಬಿಜೆಪಿ ಐಟಿ ಸೆಲ್ನ ಇನ್ನೊಂದು ಮುಖ. ಹೇಗೆ ಬಿಜೆಪಿ ಐಟಿ ಸೆಲ್ ಮಂದಿ ಮೊದಲು ಕಾಣಿಸಿಕೊಳ್ಳೋದೇ ಬೇರೆ ವೇಷದಲ್ಲಿ, ಆಮೇಲೆ ಗೊತ್ತಾಗುವ ಅವರ ನಿಜ ಸ್ವರೂಪವೇ ಬೇರೆ ಎನ್ನೋದಕ್ಕೆ ಎರಡು ಸ್ಯಾಂಪಲ್ಗಳನ್ನು ನೋಡೋಣ.
ವೈ ಪಿ ಸಿಂಗ್ ಉತ್ತರ ಪ್ರದೇಶದ ಮುರಾದಾಬಾದ್ ನ ಬಿಜೆಪಿ ಸೋಷಿಯಲ್ ಮೀಡಿಯಾ ಇನ್ಚಾರ್ಜ್. ಆದರೆ ಈ ವೈಪಿ ಸಿಂಗ್ ಮೊದಲು ಕಾಣಿಸಿಕೊಂಡಿದ್ದು ಹುಡುಗಿಯ ಹೆಸರಿನಲ್ಲಿ. ಶ್ವೇತಾ ಎಂಬ ಹೆಸರಿನೊಂದಿಗೆ ಹುಡುಗಿಯ ಗುರುತಿನಲ್ಲಿ ಟ್ವಿಟರ್ನಲ್ಲಿ ಮೊದಲು ಕಾಣಿಸಿಕೊಂಡದ್ದು ಈ ವೈಪಿ ಸಿಂಗ್ ನ ಹಳೇ ಟ್ವೀಟ್ಗಳನ್ನು ನೋಡಿದರೆ ಬಯಲಾಗುತ್ತದೆ.
ಈ ಹಳೇ ಶ್ವೇತಾ ಆಮೇಲೆ ಮುರಾದಾಬಾದ್ ಬಿಜೆಪಿ ಐಟಿ ಸೆಲ್ ಇನ್ಚಾರ್ಜ್ ವೈ ಪಿ ಸಿಂಗ್ ಅನ್ನೋ ಅಸಲೀ ರೂಪದಲ್ಲಿ ಕಾಣಿಸಿಕೊಳ್ಳುತ್ತಾಳೆ ಅಥವಾ ಕಾಣಿಸಿಕೊಳ್ಳುತ್ತಾನೆ ( ವ್ಯಂಗ್ಯ). ಹೇಗಿದೆ ನೋಡಿ ತಮಾಷೆ. ಇಂಥದೇ ಮತ್ತೊಬ್ಬ ಮಹಾನುಭಾವ ಅರವಿಂದ್ ಸೈನಿ. ಈತ ಹರಿಯಾಣ ಬಿಜೆಪಿ ಮೀಡಿಯಾ ವಿಭಾಗದ ಕೋ ಹೆಡ್. ಆಲ್ಟ್ ನ್ಯೂಸ್ ನ ಪತ್ರಕರ್ತ ಮೊಹಮ್ಮದ್ ಜುಬೇರ್ ಪತ್ತೆ ಮಾಡಿರೋ ಪ್ರಕಾರ, ಸೋಷಿಯಲ್ ಮೀಡಿಯಾದಲ್ಲಿ ವಿನಿತಾ ಹಿಂದೂಸ್ತಾನಿ ಹೆಸರಲ್ಲಿ ಮುಗ್ಧ ಮತ್ತು ಅಂಧ ಭಕ್ತರನ್ನು ಮೂರ್ಖರನ್ನಾಗಿಸಿ, ಆಮೇಲೆ ತನ್ನ ಅಸಲಿ ರೂಪದಲ್ಲಿ ಪ್ರತ್ಯಕ್ಷನಾಗುತ್ತಾನೆ ಈ ಅರವಿಂದ್ ಸೈನಿ.
ವಿನಿತಾ ಹಿಂದೂಸ್ತಾನಿ ಎಂದು ಕಾಣಿಸಿಕೊಳ್ಳುವ ಈ ಕುತಂತ್ರಕ್ಕಾಗಿ ಆತ ಬಳಸಿಕೊಂಡಿದ್ದು 'ಇನ್ನೊಸೆಂಟ್ ಅಂಡ್ ಕ್ಯೂಟ್ ಪಾಕಿಸ್ತಾನಿ ಗರ್ಲ್ಸ್' ಎಂಬ ಗೂಗಲ್ ಸರ್ಚ್ನಲ್ಲಿರುವ ಬರುವ ಹುಡುಗಿಯ ಫೋಟೊವನ್ನು. ಈ ವ್ಯಕ್ತಿ ಮೊದಲು ಝೀನ್ಯೂಸ್, ದೈನಿಕ್ ಜಾಗರಣ್, ದೈನಿಕ್ ಭಾಸ್ಕರ್, ಅಮರ್ ಉಜಾಲಾದಲ್ಲಿ ಕೆಲಸ ಮಾಡುತ್ತಿದ್ದುದೂ ಬಯಲಾಗಿದೆ.
ವಿನಿತಾ ಹಿಂದೂಸ್ತಾನಿ ಅರವಿಂದ್ ಸೈನಿಯಾಗೋದು, ಶ್ವೇತಾ ಎಂಬಾಕೆ ವೈಪಿ ಸಿಂಗ್ ಆಗೋದು ಬಿಜೆಪಿ ಐಟಿ ಸೆಲ್ನ ಅಸಲೀಯತ್ತು. ಎಲ್ಲಿವರೆಗೆ ಭಂಡತನ ಅಂದ್ರೆ, ಈ ಇಬ್ಬರೂ ಹಿಂದೆ ಹುಡುಗಿಯ ಹೆಸರಿರುವಾಗ ಅದೇ ಶೈಲಿಯಲ್ಲಿ ಮಾಡಿರುವ ಟ್ವೀಟ್ ಗಳು ಈಗಲೂ ಹಾಗೇ ಇವೆ.
ಅವನ್ನು ಡಿಲೀಟ್ ಮಾಡುವ ಗೋಜಿಗೂ ಹೋಗಿಲ್ಲ.
ಈಗ ಇವರಿಬ್ಬರಲ್ಲಿ ಯಾರು ನಿಜ?. ವಿನಿತಾ ಅಥವಾ ಅರವಿಂದ ಸೈನಿ?. ಶ್ವೇತಾ ಅಥವಾ ವೈಪಿ ಸಿಂಗ್?. ಯಾಕೆ ಇವರು ಮೊದಲು ಹುಡುಗಿಯ ಹೆಸರಲ್ಲಿ ಐಡಿ ಕ್ರಿಯೇಟ್ ಮಾಡುತ್ತಾರೆ?. ಯಾಕೆ ಗೂಗಲ್ ನಿಂದ ಪಾಕಿಸ್ತಾನಿ ಹುಡುಗಿಯರ ಫೋಟೋ ತೆಗೆದು ಪ್ರೊಫೈಲ್ ಗೆ ಹಾಕಿ ಕೊಳ್ತಾರೆ ?.
ಯಾಕೆ ಹುಡುಗಿಯ ಗುರುತಿನಲ್ಲಿ ಕಾಣಿಸಿಕೊಳ್ಳುವ ಅನಿವಾರ್ಯತೆ ಇವರಿಗೆ?.
ಹುಡುಗಿಯ ಹೆಸರು ನೋಡಿದರೆ ಜನರು ಫಾಲೋ ಮಾಡುತ್ತಾರೆ ಎಂದು ಕೀಳಾಗಿ ಯೋಚಿಸುವ ಇವರ ಮನಃಸ್ಥಿತಿ ಎಂಥದು ಹಾಗಾದರೆ?. ಇಲ್ಲಿ ಇಂಥವರ ಫಾಲೋವರ್ಸ್ ಬಗ್ಗೆಯೂ ಕನಿಕರ ಮೂಡುತ್ತದೆ.
ಇಂಥವರ ಅಸಲೀಯತ್ತು ತಿಳಿಯಲು ಫಾಲೋವರ್ಸ್ ಕೂಡ ಚೂರೂ ಪ್ರಯತ್ನ ಮಾಡುವುದಿಲ್ಲ. ಹಾಗಾಗಿ ಇವರ ಪಾಪದಲ್ಲಿ ಇವರ ಫಾಲೋವರ್ಸ್ ಕೂಡ ಪಾಲು ತೆಗೆದುಕೊಳ್ಳಲೇಬೇಕು, ಫಾಲೋ ಮಾಡುತ್ತಿರುವುದಕ್ಕಾಗಿ. ಹುಡುಗಿಯ ಐಡಿ ನೋಡಿದ ಕೂಡಲೇ ಮುಗಿಬೀಳುವ, ಹಿಂದೆ ಬೀಳುವ, ಫಾಲೋ ಮಾಡುವ ಅಂಧ ಭಕ್ತರ ಮನಃಸ್ಥಿತಿಯೂ ಇಲ್ಲಿ ಬಯಲಾಗುತ್ತದೆ.
ಬೇರೆ ರಾಜಕೀಯ ಪಕ್ಷಗಳದ್ದೂ ಸೋಷಿಯಲ್ ಮೀಡಿಯಾ ಹ್ಯಾಂಡಲ್ಗಳಿವೆ. ಆದರೆ ಅಲ್ಲೆಂದೂ ಇಂಥ ಫೇಕ್ ಗುರುತಿನವರು ಕಂಡಿದ್ದಿಲ್ಲ.
ಇಂಥ ಕೀಳುಮಟ್ಟ ಬಳಸಿ ಅವು ತಮ್ಮ ಫಾಲೋವರ್ಸ್ ಹೆಚ್ಚಿಸಿಕೊಳ್ಳಲು ಹೋದ ನಿದರ್ಶನಗಳಿಲ್ಲ.
ಆದರೆ ಇವರು ಮಾತ್ರ ಹುಡುಗಿಯ ಗುರುತಿನಲ್ಲಿ ಬಂದು, ಫಾಲೋವರ್ಸ್ ಆಗುತ್ತಿದ್ದಂತೆ ಅಸಲೀ ಸ್ವರೂಪದಲ್ಲಿ ಪ್ರತ್ಯಕ್ಷರಾಗುತ್ತಾರೆ. ಬಿಜೆಪಿಗೆ ಇಷ್ಟೊಂದು ಹೀನ ಸ್ಥಿತಿ ಯಾಕೆ ಬಂದಿದೆ?. ಅತ್ಯಂತ ಶಕ್ತಿಶಾಲಿ ಮತ್ತು ಶ್ರೀಮಂತ ರಾಜಕೀಯ ಪಕ್ಷಕ್ಕೆ, ಏಜನ್ಸಿಗಳು, ಮೀಡಿಯಾ, ಉದ್ಯಮಿಗಳು ಎಲ್ಲರನ್ನೂ ತನ್ನ ಬೆರಳಲ್ಲೇ ಆಡಿಸುತ್ತಿರುವ ಪಕ್ಷಕ್ಕೆ ಇಂಥದೊಂದು ಹೀನ ಹಾದಿಯ ಅಗತ್ಯ ಇದೆಯೆ?
ಆದರೆ ಹೀಗೆ ಮಾಡಿಕೊಂಡೇ ಅದು ಬೆಳೆದಿದೆ ಎನ್ನೋದು ವಿಪರ್ಯಾಸ. ಇದೇ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಅಂಥವರು, ಸಂಬಿತ್ ಪಾತ್ರಾ ಅಂಥವರು ಕೂಡ ಸುಳ್ಳುಗಳನ್ನು ಹೇಳುತ್ತಲೇ, ದ್ವೇಷ ಹರಡುತ್ತಲೇ ಕೋಟಿಗಟ್ಟಲೆ ಜನರ ಹಾದಿ ತಪ್ಪಿಸಿದವರು.
ಅಮಿತ್ ಮಾಳವೀಯ ಎಂಬ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಮಾಡುತ್ತ ಬಂದಿರುವುದು ಫೇಕ್ ನ್ಯೂಸ್ ಹರಡುವ ಕೆಲಸವನ್ನೇ. ಶಾಹೀನ್ ಬಾಗ್ ಪ್ರತಿಭಟನೆ ಪ್ರಾಯೋಜಿತ ಅಂತ ಸುಳ್ಳು , ಎಲ್ಲದರ ಹಿಂದೆ ಕಾಂಗ್ರೆಸ್ ಕೈವಾಡ ಇದೆ ಅಂತ ಸುಳ್ಳು , ಶಾಹಿನ್ ಬಾಗ್ನಲ್ಲಿ ಬಿರಿಯಾನಿ ಹಂಚಲಾಯಿತು ಅಂತ ಸುಳ್ಳು. .ಸಿಎಎ ವಿರೋಧಿ ಪ್ರತಿಭಟನಾಕಾರರ ವಿರುದ್ಧ ಅಪಪ್ರಚಾರದ ಭಾಗವಾಗಿ, ಲಖ್ನೋದಲ್ಲಿ ಪ್ರತಿಭಟನಾಕಾರರು ಪಾಕಿಸ್ತಾನ್ ಜಿಂದಾಬಾದ್ ಘೋಷಣೆ ಕೂಗಿದರು ಅಂತ ಸುಳ್ಳು. ಸೋಮನಾಥ ದೇವಾಲಯದಲ್ಲಿನ ರಿಜಿಸ್ಟರ್ನಲ್ಲಿ ರಾಹುಲ್ ಗಾಂಧಿ ತಾವು ಹಿಂದೂಯೇತರ ಎಂದು ಸಹಿ ಹಾಕಿದ್ದಾರೆ ಅಂತ ಸುಳ್ಳು . ಈ ಕಡೆ ಆಲೂ ಹಾಕಿದರೆ ಆ ಕಡೆ ಚಿನ್ನ ಉದುರುತ್ತದೆ ಎಂದು ಬಿಜೆಪಿಯವರ ಬೋಗಸ್ ಬಯಲು ಮಾಡಲು ರಾಹುಲ್ ಗಾಂಧಿ ಹೇಳಿದ್ದನ್ನೇ ರಾಹುಲ್ ಅವರನ್ನು ವಿಡಂಬಿಸಲು ತಿರುಚಿ ಬಳಸೋದು.
ಇಂಥವನ್ನೇ ಅಮಿತ್ ಮಾಳವೀಯ ಮಾಡಿಕೊಂಡು ಬಂದಿರುವುದು ಕಣ್ಣೆದುರೇ ಇರುವ ವಾಸ್ತವ. ತೀರಾ ಮೊನ್ನೆ ಪಂಚ ರಾಜ್ಯ ಚುನಾವಣೆ ಫಲಿತಾಂಶದ ವೇಳೆ ದೇಶದ ಹಿರಿಯ ಪತ್ರಕರ್ತ ರಾಜದೀಪ್ ಸರ್ದೇಸಾಯಿ ಒಂದು ಪ್ರಶ್ನೆ ಕೇಳಿದ್ದಕ್ಕೆ ಅವರಿಗೆ ತೀರಾ ಅವಮಾನಕಾರಿಯಾಗಿ ಉತ್ತರಿಸಿ ತನ್ನ ವ್ಯಕ್ತಿತ್ವದ ಪರಿಚಯ ನೀಡಿದ್ದ ಇದೇ ಅಮಿತ್ ಮಾಳವಿಯ.
ಫೇಕ್ ಮಾಹಿತಿಗಳನ್ನೇ ಕೊಡುವುದು, ಕೋಟಿಗಟ್ಟಲೆ ಜನರ ದಾರಿ ತಪ್ಪಿಸುವುದು, ಸಮಾಜದಲ್ಲಿ ತಪ್ಪು ಸಂದೇಶ ಹರಡುವುದು, ಸಮಾಜದಲ್ಲಿ ಅರಾಜಕತೆ ಮೂಡಿಸುವುದು ಇದನ್ನೇ ಮಾಡಿಕೊಂಡು ಬರಲಾಗಿದೆ.
ತನ್ನ ಪ್ರಚಾರ ತಂತ್ರಕ್ಕಾಗಿ ಬಿಜೆಪಿ ಐಟಿ ಸೆಲ್ ಸುಳ್ಳು ಹಾಗು ದ್ವೇಷಗಳ ಹಿಂದೆ ಅಡಗಿದೆ ಎನ್ನುವುದು ಹೊಸ ವಿಷಯವಲ್ಲ. ಆದರೆ ಅದು ಇಷ್ಟು ಕೀಳು ಮಟ್ಟಕ್ಕೂ ಇಳಿದಿದೆ ಎಂಬುದು ಈಗ ಬಯಲಾಗಿದೆ. ಇವರೆಷ್ಟೇ ಸುಳ್ಳು ಹರಡುತ್ತಿದ್ದರೂ ಇವರ ವಿರುದ್ಧ ಯಾವ ಕ್ರಮವೂ ಇಲ್ಲ. ಇದನ್ನೇ ಬೇರೆ ರಾಜಕೀಯ ಪಕ್ಷಗಳು ಮಾಡಿದ್ದಿದ್ದರೆ ಏನಾಗುತ್ತಿತ್ತು ಯೋಚಿಸಿ. ಬೇರೆಯವರು ಮಾಡಿದರೆ ತಪ್ಪು, ತಾವು ಮಾಡಿದರೆ ಸರಿ. ಇದೇ ಬಿಜೆಪಿಯ ಅಸಲೀಯತ್ತು.