ಆಂಧ್ರದಲ್ಲಿ ಕಾಂಗ್ರೆಸ್ ಗತ ವೈಭವ ಮರಳಿಸುವರೇ ವೈ.ಎಸ್. ಶರ್ಮಿಳಾ ?

Update: 2024-01-19 04:15 GMT
Editor : Ismail | Byline : ಆರ್. ಜೀವಿ

ವೈ.ಎಸ್. ಶರ್ಮಿಳಾ | Photo: PTI 

ವೈಎಸ್ಆರ್ ಕಾಲದಲ್ಲಿ ಆಂಧ್ರದಲ್ಲಿ ವಿಜೃಂಭಿಸಿದ್ದ ಕಾಂಗ್ರೆಸ್ ಆ ನಂತರ ದೊಡ್ಡ ಬಿಕ್ಕಟ್ಟನ್ನೇ ಎದುರಿಸಿ ಪೂರ್ತಿ ಹಿನ್ನೆಲೆಗೆ ಸರಿದುಹೋದ ಕಥೆ ಗೊತ್ತೇ ಇದೆ. ಆದರೆ ಮತ್ತೆ ಅದೇ ಆಂಧ್ರದಲ್ಲಿ ಮೈಕೊಡವಿ ಎದ್ದು ನಿಲ್ಲಲು ಕಾಂಗ್ರೆಸ್ ತಯಾರಾಗುತ್ತಿದೆಯೆ?. ತೆಲಂಗಾಣದಲ್ಲಿ ರಾಜ್ಯ ರಚನೆಯಾಗಿ 10 ವರ್ಷಗಳ ಬಳಿಕ ಮೊದಲ ಗೆಲುವು ಕಂಡು ಬೀಗಿರುವ ಕಾಂಗ್ರೆಸ್ ಈಗ ಅದರ ಬೆನ್ನಲ್ಲೇ​ ಪಕ್ಕದ ಆಂಧ್ರದಲ್ಲೂ ಗತವೈಭವ ಕಾಣುವ ಕಾಲ ಕೂಡಿಬಂದಿದೆಯೆ?.

ಆಂಧ್ರದಲ್ಲಿ ನೆಲೆ ಕಳೆದುಕೊಂಡಿದ್ದ ಕಾಂಗ್ರೆಸ್ ಅನ್ನು ವೈಎಸ್ಸಾರ್ ಪುತ್ರಿ​ಯೇ ಈಗ ಮೇಲೆತ್ತುವರೇ?. ಟಿಡಿಪಿ ಹಾಗು ವೈಎಸ್ಆ​ರ್ ಸಿ ಪಿ ಗಳ ಪ್ರಾಬಲ್ಯದ ನಡುವೆ ಇತ್ತೀಚಿಗೆ ಸಂಪೂರ್ಣ ತಣ್ಣಗಾಗಿದ್ದ ಕಾಂಗ್ರೆಸ್ನ ಗತ ವೈಭವವನ್ನು ಮರಳಿಸುವುದು ಶರ್ಮಿಳಾ ಅವರಿಗೆ ಸಾಧ್ಯವೇ?

ವೈಎಸ್ ಶರ್ಮಿಳಾ ಅವರ ಹೊಸ ನಿರ್ಧಾರ ಸ್ವತಃ ಅವರ ರಾಜಕೀಯ ಬದುಕಿನ ಮಹತ್ವದ ತಿರುವಾಗಲಿರುವುದರ ಜೊತೆಗೇ ಕಾಂಗ್ರೆಸ್ ಪಾಲಿಗೂ ಹೊಸ ಶಕ್ತಿಯಾಗಲಿದೆ ಎಂದೇ ಹೇಳಲಾಗುತ್ತಿದೆ. ಆಂಧ್ರದಲ್ಲಿ ಕಾಂಗ್ರೆಸ್ ಪುನರುಜ್ಜೀವನದ ಜವಾಬ್ದಾರಿಯನ್ನು ಹೊರಲು ಶರ್ಮಿಳಾ ಸಿದ್ಧರಾಗಿದ್ದಾರೆ.

ಹಿಂದೊಮ್ಮೆ, ತಮ್ಮ ಸಹೋದರ ಜಗನ್ ವಿರುದ್ಧ ನೇರವಾಗಿ ಸ್ಪರ್ಧೆಗೆ ಇಳಿದಂತಾಗುತ್ತದೆ ಎಂದು ಕಾಂಗ್ರೆಸ್ ಸೇರಲು ನಿರಾಕರಿಸಿದ್ದ ಶರ್ಮಿಳಾ ಅಂತಿಮವಾಗಿ ಕಾಂಗ್ರೆಸ್ ಸೇರುವುದಕ್ಕೆ ಮನಸ್ಸು ಮಾಡಿದ್ದಾರೆ. ತಮ್ಮ ವೈಎಸ್‌ಆರ್‌ಟಿಪಿಯನ್ನು ಕಾಂಗ್ರೆಸ್‌ನೊಂದಿಗೆ ವಿಲೀನಗೊಳಿಸುವುದಾಗಿ ಮತ್ತು ಜನವರಿ 4 ರಂದು ದೆಹಲಿಯಲ್ಲಿ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಸೇರುವುದಾಗಿ ಕಡೆಗೂ ಅವರು ಘೋಷಿಸಿದ್ದಾರೆ.

ಇದು ಆಂಧ್ರ ರಾಜಕಾರಣದಲ್ಲಿ ಖಂಡಿತವಾಗಿಯೂ ಹೊಸ ​ಸಂಚಲನವನ್ನೇ ಸೃಷ್ಟಿಸಲಿದೆ. ಜನವರಿ 3ರಂದು ಶರ್ಮಿಳಾ ದೆಹಲಿಗೆ ಹೋಗುತ್ತಿದ್ದಾರೆ.​ ಕಾಂಗ್ರೆಸ್‌ನಲ್ಲಿ ತನ್ನ ಪಾತ್ರದ ಬಗ್ಗೆ ಯಾವುದೇ ವಿವರಗಳನ್ನು ಶರ್ಮಿಳಾ ಬಹಿರಂಗಪಡಿಸಿಲ್ಲ. ಆದರೆ ಆಂಧ್ರಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ಅಥವಾ ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಗಳನ್ನು ನೀಡಲು ಕಾಂಗ್ರೆಸ್ ಮುಂದಾಗಿದೆ ಎನ್ನಲಾಗಿದೆ.

ಬಹುಶಃ ಶರ್ಮಿಳಾ ಅವರು ಇದರ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕಿದೆ. ಆಂಧ್ರ ಕಾಂಗ್ರೆಸ್ ಅಧ್ಯಕ್ಷ ಹುದ್ದೆ ನೀಡುವ ಉದ್ದೇಶ ಎಐಸಿಸಿಗೆ ಇಲ್ಲ ಎಂದೂ ಕೆಲವು ವರದಿಗಳು ಹೇಳುತ್ತಿವೆ. ಕರ್ನಾಟಕದಿಂದ ರಾಜ್ಯಸಭೆಗೆ ಶರ್ಮಿಳಾ ಅವರನ್ನು ನಾಮನಿರ್ದೇಶನ ಮಾಡಬಹುದು ಎಂತಲೂ ಹೇಳಲಾಗುತ್ತಿದೆ.

ಒಂದೆರೆಡು ದಿನದಲ್ಲಿ ಎಲ್ಲವೂ ಸ್ಪಷ್ಟವಾಗಲಿದೆ ಎಂದು ತಮ್ಮ ಪಕ್ಷದ ನಾಯಕರ ಜೊತೆಗಿನ ಸಭೆಯ ಬಳಿಕ ಶರ್ಮಿಳಾ ಹೇಳಿರುವುದು ವರದಿಯಾಗಿದೆ. ಕಾಂಗ್ರೆಸ್ ಸೇರಿದ ನಂತರ ಶರ್ಮಿಳಾ ಆಂಧ್ರಪ್ರದೇಶದಲ್ಲಿ ಪಕ್ಷವನ್ನು ಪುನರುಜ್ಜೀವನಗೊಳಿಸುವ ಜವಾಬ್ದಾರಿಯನ್ನು ಹೊರುವ ನಿರೀಕ್ಷೆಯಿದೆ.

2014ರ ರಾಜ್ಯ ವಿಭಜನೆಯ ನಂತರ ಆಂಧ್ರಪ್ರದೇಶದಲ್ಲಿ ಸಂಪೂರ್ಣ ನೆಲಕಚ್ಚಿರುವ ಕಾಂಗ್ರೆಸ್, ಶರ್ಮಿಳಾ ಅವರ ಸೇರ್ಪಡೆ ಮೂಲಕ ಬಲ ಪಡೆಯುವ ನಿರೀಕ್ಷೆಗಳು ಮೂಡಿವೆ. ಈಗಾಗಲೇ ಶರ್ಮಿಳಾ ತೆಲಂಗಾಣದಲ್ಲಿ ಬಿಆರ್ಎಸ್ ಸೋಲಿಸುವ ಪಣ ತೊಟ್ಟು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿದ್ದರು ಮತ್ತು ಭಾರೀ ಗೆಲುವು ಕಾಂಗ್ರೆಸ್ ಪಾಲಿಗೆ ಅಲ್ಲಿ ಸಾಧ್ಯವಾಗಿತ್ತು.

ಈ ಗೆಲುವಿನ ಬೆನ್ನಲ್ಲೇ ಶರ್ಮಿಳಾ ಕಾಂಗ್ರೆಸ್ ಸೇರ್ಪಡೆ ನಿರ್ಧಾರ ಹೊರಬಿದ್ದಿದೆ. ಇದು ಲೋಕಸಭೆ ಚುನಾವಣೆಯ ಜೊತೆಗೇ ಆಂಧ್ರದಲ್ಲಿ ವಿಧಾನಸಭೆ ಚುನಾವಣೆಯೂ ಇರುವ ಹಿನ್ನೆಲೆಯಲ್ಲಿ ಬಹಳ ನಿರ್ಣಾಯಕವಾಗಲಿದ್ದು, ಎಲ್ಲಾ ಲೆಕ್ಕಾಚಾರಗಳು ಸರಿಹೋದರೆ ಕಾಂಗ್ರೆಸ್ ಪಾಲಿಗೆ ಆಂಧ್ರದಲ್ಲಿ ಹೊಸ ಪರ್ವವೇ ಶುರುವಾಗಲಿದೆ.

ಹಾಗೆ ನೋಡಿದರೆ, ತೆಲಂಗಾಣ ವಿಧಾನಸಭೆ ಚುನಾವಣೆಗೆ ಮೊದಲೇ ಶರ್ಮಿಳಾ ತಮ್ಮ ಪಕ್ಷ ವೈಎಸ್ಆರ್ಟಿಪಿಯನ್ನು ಕಾಂಗ್ರೆಸ್ ಪಕ್ಷದೊಂದಿಗೆ ವಿಲೀನಗೊಳಿಸುತ್ತಾರೆಂಬ ಊಹಾಪೋಹಗಳಿದ್ದವು. ಆಗ ಅದು ಆಗಿರಲಿಲ್ಲವಾದರೂ ಚುನಾವಣೆಗೆ ಸ್ಪರ್ಧಿಸದೇ ಇರುವ ನಿರ್ಧಾರ ತೆಗೆದುಕೊಳ್ಳುವ ಮೂಲಕ ಶರ್ಮಿಳಾ ಅಚ್ಚರಿ ಮೂಡಿಸಿದ್ದರು.

ತಮ್ಮ ಪಕ್ಷದ ಅಭ್ಯರ್ಥಿಗಳು ಕಣಕ್ಕಿಳಿದು ಕಾಂಗ್ರೆಸ್ ಪರ ಮತಗಳನ್ನು ವಿಭಜಿಸುವಂತಾಗುವುದು ಬೇಡ ಎಂದು ನಿರ್ಧರಿಸಿದ್ದ ಅವರು ಚುನಾವಣೆಯಿಂದ ದೂರ ಉಳಿದು, ಬಿಆರ್ಎಸ್ ವಿರುದ್ಧವಾಗಿ ಕಾಂಗ್ರೆಸ್ಗೆ ಸಂಪೂರ್ಣ ಬೆಂಬಲ ನೀಡಿದ್ದರು. ಈ ನಡುವೆ, ಸಹೋದರಿಯೊಂದಿಗೆ ರಾಜಿಯಾಗುವ ಜಗನ್ ಸಂದೇಶದೊಂದಿಗೆ ಚಿಕ್ಕಪ್ಪ, ವೈಎಸ್ಆರ್ಸಿಪಿ ಮಾಜಿ ಸಂಸದ ವೈ ವಿ ಸುಬ್ಬಾ ರೆಡ್ಡಿ ಅವರು ಶರ್ಮಿಳಾ ಜೊತೆ ಮಾತುಕತೆ ನಡೆಸಿದ್ದರಾದರೂ, ಅದು ವಿಫಲವಾಯಿತು ಮತ್ತು ಶರ್ಮಿಳಾ ಈ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ.

ಸಹೋದರಿಯೇ ರಾಜ್ಯದಲ್ಲಿ ತಮ್ಮ ವಿರುದ್ಧ ನಿಂತರೆ ರಾಜ್ಯಾದ್ಯಂತ ತನ್ನ ಪ್ರಭಾವ ಮತ್ತು ಇಮೇಜ್‌ಗೆ ಧಕ್ಕೆಯಾಗಲಿದೆ ಎಂಬುದು ಜಗನ್ ಆತಂಕವಾಗಿದೆ. ಆದರೆ ವೈಎಸ್‌ಆರ್‌ಸಿಪಿ ಸೇರುವಂತೆ ಶರ್ಮಿಳಾ ಮನವೊಲಿಸಲು ಸುಬ್ಬಾ ರೆಡ್ಡಿ ಮೂಲಕ ಜಗನ್ ಮಾಡಿದ ಯತ್ನ ಕೈಗೂಡಲಿಲ್ಲ. ವೈಎಸ್‌ಆರ್‌ಸಿಪಿ ಸೇರಲು ಶರ್ಮಿಳಾ ನಿರಾಕರಿಸಿದರು.

ಜಗನ್ ಮತ್ತು ಶರ್ಮಿಳಾ ದಾರಿ ಬೇರೆಬೇರೆಯಾದದ್ದು 2021ರ ಜುಲೈನಲ್ಲಿ ಶರ್ಮಿಳಾ ತಮ್ಮದೇ ಹೊಸ ಪಕ್ಷ ವೈಎಸ್ಆರ್ಟಿಪಿ ಘೋಷಿಸುವುದರೊಂದಿಗೆ. ಈಗ ಶರ್ಮಿಳಾ ಕಾಂಗ್ರೆಸ್ ಸೇರುವುದರೊಂದಿಗೆ, ಏಕಕಾಲದಲ್ಲಿ ರಾಜ್ಯದಲ್ಲಿ ನಡೆಯಲಿರುವ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಯಲ್ಲಿ ಸಹೋದರ-ಸಹೋದರಿಯ ಮಧ್ಯೆಯೇ ಕದನ ಏರ್ಪಡುವ ಸಾಧ್ಯತೆ ಹೆಚ್ಚಾಗಿದೆ.

​ಜಗನ್ ಗೆ ಈಗಾಗಲೇ ಟಿಡಿಪಿಯ ಚಂದ್ರಬಾಬು ನಾಯ್ಡು , ಅವರ ಪುತ್ರ ನರ ಲೋಕೇಶ್ ಅವರ ಸವಾಲು ಇದೆ.

ಅದರ ಜೊತೆಗೇ ಸೋದರಿಯ ಸವಾಲ್ ಕೂಡ ಸೇರಿಕೊಂಡರೆ ಮತ್ತೆ ಅಧಿಕಾರಕ್ಕೆ ಮರಳುವ ಹಾದಿ ಸುಲಭವಾಗದು.

ಇದು ಜಗನ್ ರಾಜಕೀಯ ಭವಿಷ್ಯದ ಮೇಲೆ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ. 2009ರಲ್ಲಿ ತಮ್ಮ ತಂದೆಯ ಮರಣದ ನಂತರ ಜಗನ್ ಮತ್ತು ಶರ್ಮಿಳಾ ಮಧ್ಯೆ ದೊಡ್ಡ ಮಟ್ಟದಲ್ಲಿಯೇ ವೈಮನಸ್ಯ ತಲೆದೋರಿದೆ ಎಂದು ಹೇಳಲಾಗುತ್ತದೆ. 2011ರಲ್ಲಿ ಜಗನ್ ವೈಎಸ್ಆರ್ಸಿಪಿ ಕಟ್ಟಿದಾಗ, ಅವರು ರಾಜ್ಯದಲ್ಲಿ ಎಲ್ಲವನ್ನೂ ನಿಭಾಯಿಸಿದ್ದರೆ, ಸಹೋದರಿ ಶರ್ಮಿಳಾ ಅದರ ರಾಷ್ಟ್ರೀಯ ಸಂಚಾಲಕರಾಗಿದ್ದರು.

ಆದರೆ ​ಇದು ಶರ್ಮಿಳಾ ರಾಜಕೀಯ ಆಕಾಂಕ್ಷೆಗೆ ತೊಡಕಾಗಿತ್ತು. ತಂದೆಯ ಜನಪ್ರಿಯತೆಯನ್ನು ಜಗನ್ ಹೈಜಾಕ್ ಮಾಡುತ್ತಿರುವುದು ನಿಧಾನವಾಗಿ ಶರ್ಮಿಳಾ ಅವರ ಅಸಮಾಧಾನಕ್ಕೆ ಕಾರಣವಾಗಿತ್ತು. ವೈಎಸ್‌ಆರ್‌ಸಿಪಿ ಕಟ್ಟಿದ ಹೊತ್ತಲ್ಲಿ ತಾಯಿ ಕೂಡ ಜಗನ್‌ಗೆ ಬೆಂಬಲವಾಗಿ ನಿಂತಿದ್ದರಿಂದ ಶರ್ಮಿಳಾ ಪೂರ್ತಿ ಅಸಹಾಯಕರಾದರು.

ಈ ರಾಜಕೀಯ ಹಗ್ಗಜಗ್ಗಾಟದ ಜೊತೆಗೇ ಅಣ್ಣ ತಂಗಿಯ ನಡುವೆ ಹಣಕಾಸು ಸೇರಿದಂತೆ ಇತರ ಹಲವು ಸಮಸ್ಯೆಗಳಿದ್ದು, ಸಂಬಂಧ ಪೂರ್ತಿ ಹದಗೆಡಲು ಕಾರಣವಾಯಿತೆನ್ನಲಾಗುತ್ತದೆ. ಕಡೆಗೆ ಶರ್ಮಿಳಾ ಅವರು ತೆಲಂಗಾಣದಲ್ಲಿ ವೈಎಸ್‌ಆರ್‌ಟಿಪಿಯನ್ನು ತಮ್ಮ ತಾಯಿ ವೈಎಸ್ ವಿಜಯಮ್ಮ ಅವರೊಂದಿಗೆ ಪ್ರಾರಂಭಿಸಿದರು. ಕೆಸಿಆರ್ ನೇತೃತ್ವದ ಬಿಆರ್‌ಎಸ್ ಸರ್ಕಾರವನ್ನು ಎದುರು ಹಾಕಿಕೊಂಡಿದ್ದ ಅವರನ್ನು ತೆಲಂಗಾಣ ಪೊಲೀಸರು ಹಲವಾರು ಬಾರಿ ಬಂಧಿಸಿದ್ದರು.

ಇಷ್ಟಾಗಿಯೂ, ಆಂಧ್ರದಲ್ಲಿ ಜಗನ್ ಪಡೆದಿರುವ ಯಶಸ್ಸು ಶರ್ಮಿಳಾ ಅವರಿಗೆ ರಾಜಕೀಯದಲ್ಲಿ ದೊರೆಯಲಿಲ್ಲ. ಇಂಥ ಹೊತ್ತಿನಲ್ಲಿ ಅವರು ಕಾಂಗ್ರೆಸ್ನತ್ತ ಹೊರಟಿದ್ದಾರೆ. ಜಗನ್ ವಿರುದ್ಧದ ರಾಜಕೀಯ ಹಣಾಹಣಿಯಲ್ಲಿ ಇದು ಅವರ ಪಾಲಿನ ದೊಡ್ಡ ಅಸ್ತ್ರವಾದರೆ ಅಚ್ಚರಿಯಿಲ್ಲ.

ಶರ್ಮಿಳಾ ಅವರ ಜೊತೆಗೇ ಅನೇಕ ವೈಎಸ್‌ಆರ್‌ಸಿಪಿ ನಾಯಕರು ಕಾಂಗ್ರೆಸ್ ಸೇರಬಹುದು ಎಂದೂ ಹೇಳಲಾಗುತ್ತಿದೆ. ಶರ್ಮಿಳಾ ಅವರು ಇಲ್ಲಿಯವರೆಗೆ ಯಾವುದೇ ಚುನಾವಣೆಗೆ ಸ್ಪರ್ಧಿಸಿಲ್ಲವಾದರೂ, ವೈಎಸ್‌ಆರ್‌ಸಿಪಿಯ ಆರಂಭಿಕ ವರ್ಷಗಳಲ್ಲಿ ಅದರ ರಾಷ್ಟ್ರೀಯ ಸಂಚಾಲಕಿಯಾಗಿ ಪ್ರಮುಖ ಪಾತ್ರ ವಹಿಸಿದ್ದಾರೆ.

ಆಂಧ್ರ ರಾಜಕಾರಣದ ಕುರಿತಂತೆ ಅವರಿಗಿರುವ ಅಪಾರ ಅನುಭವ ಈಗ ಕಾಂಗ್ರೆಸ್ ಪಕ್ಷವನ್ನು ಆಂಧ್ರದಲ್ಲಿ ಮೇಲೆತ್ತುವ ಅವರ ಹೊಣೆಗಾರಿಕೆಗೆ ನೆರವಾಗಲಿದೆ ಎನ್ನಲಾಗುತ್ತಿದೆ. ಮುಂದಿನ ದಿನಗಳು ಆಂಧ್ರ ರಾಜಕಾರಣದಲ್ಲಿ ಶರ್ಮಿಳಾ ಆವರು ಕಾಣಿಸಿಕೊಳ್ಳುವುದಕ್ಕೂ ಕಾಂಗ್ರೆಸ್ ಹೊಸ ಭರವಸೆಯನ್ನು ತುಂಬಿಕೊಳ್ಳುವುದಕ್ಕೂ ಸಾಕ್ಷಿಯಾಗುವಾಗ ಉಂಟಾಗಲಿರುವ ಸಂಘರ್ಷ ಮಾತ್ರ ತೀವ್ರ ಕುತೂಹಲ ಕೆರಳಿಸಿದೆ ಎಂಬುದಂತೂ ನಿಜ.

Writer - ವಾರ್ತಾಭಾರತಿ

contributor

Editor - Ismail

contributor

Byline - ಆರ್. ಜೀವಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!