ಎಎಫ್‌ ಸಿ ಏಶ್ಯನ್ ಕಪ್ ಫೈನಲ್: ಜೋರ್ಡನ್‌ ಗೆ ಸೋಲುಣಿಸಿ ಪ್ರಶಸ್ತಿ ಉಳಿಸಿಕೊಂಡ ಖತರ್

Update: 2024-02-11 16:26 GMT

Photo: PTI 

ದೋಹಾ: ಪೆನಾಲ್ಟಿ ಕಾರ್ನರ್ ಅವಕಾಶದಲ್ಲಿ ಹ್ಯಾಟ್ರಿಕ್ ಗೋಲು ಗಳಿಸಿದ ಅಕ್ರಂ ಅಫೀಫ್ ಸಾಹಸದಿಂದ ಆತಿಥೇಯ ಖತರ್ ತಂಡ ಫೈನಲ್ ಪಂದ್ಯದಲ್ಲಿ ಜೋರ್ಡನ್ ತಂಡವನ್ನು 3-1 ಗೋಲುಗಳ ಅಂತರದಿಂದ ಸೋಲಿಸಿ ಸತತ ಎರಡನೇ ಬಾರಿ ಎಎಫ್‌ ಸಿ ಏಶ್ಯನ್ ಕಪ್ ಚಾಂಪಿಯನ್ ಶಿಪ್ ಗೆದ್ದುಕೊಳ್ಳುವಲ್ಲಿ ಶಕ್ತವಾಗಿದೆ. ನಾಲ್ಕು ವರ್ಷಗಳಲ್ಲಿ 2ನೇ ಬಾರಿ ಪ್ರಶಸ್ತಿ ಎತ್ತಿ ಹಿಡಿದಿದೆ.

24 ತಂಡಗಳು ಭಾಗವಹಿಸಿರುವ ಈ ಫುಟ್ಬಾಲ್ ಟೂರ್ನಿಯು ಸತತ ನಾಟಕೀಯ ಪಂದ್ಯಗಳಿಗೆ ಸಾಕ್ಷಿಯಾಗಿತ್ತು.

ಈ ಫಲಿತಾಂಶವು ಫಿಫಾ ವಿಶ್ವಕಪ್ ನಲ್ಲಿ ಖತರ್ನ ಕಳಪೆ ಪ್ರದರ್ಶನ ಮರೆಯಲು ನೆರವಾಗಿದೆ. ಆತಿಥೇಯ ಖತರ್ ತಂಡ ವಿಶ್ವಕಪ್ ನಲ್ಲಿ ಆಡಿರುವ ಎಲ್ಲ 3 ಲೀಗ್ ಪಂದ್ಯಗಳನ್ನು ಸೋತಿತ್ತು. ಟೂರ್ನಿಯ ಇತಿಹಾಸದಲ್ಲಿ ಆತಿಥೇಯ ತಂಡವಾಗಿ ಅತ್ಯಂತ ಕಳಪೆ ನಿರ್ವಹಣೆ ತೋರಿತ್ತು.

14 ತಿಂಗಳ ಹಿಂದೆ ವಿಶ್ವಕಪ್ ಫೈನಲ್ ನ ಆತಿಥ್ಯವಹಿಸಿದ್ದ ಲುಸೈಲ್ ಕ್ರೀಡಾಂಗಣದಲ್ಲಿ 86,492 ಪ್ರೇಕ್ಷಕರ ಸಮ್ಮುಖದಲ್ಲಿ ಆಡಿದ ಹಾಲಿ ಚಾಂಪಿಯನ್ ಖತರ್ ಉತ್ತಮ ಪ್ರದರ್ಶನದಿಂದ ಅಭಿಮಾನಿಗಳ ಮನರಂಜಿಸಿತು. ಏಶ್ಯನ್ ಕಪ್ ನಲ್ಲಿ ಇದೇ ಮೊದಲ ಬಾರಿ ಫೈನಲ್‌ ನಲ್ಲಿ ಕಾಣಿಸಿಕೊಂಡಿದ್ದ ಜೋರ್ಡನ್ ಪ್ರಮುಖ ಪ್ರಶಸ್ತಿಯ ನಿರೀಕ್ಷೆಯಲ್ಲಿತ್ತು.

ಫಿಫಾ ರ್ಯಾಂಕಿಂಗ್‌ ನಲ್ಲಿ 87ನೇ ಸ್ಥಾನದಲ್ಲಿರುವ ಜೋರ್ಡನ್ ಮೊದಲಾರ್ಧದಲ್ಲಿಯೇ ಹಿನ್ನಡೆ ಕಂಡಿದ್ದು, ಫಾರ್ವರ್ಡ್ ಆಟಗಾರ ಅಫೀಫ್ 22ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಮೊದಲ ಗೋಲು ಗಳಿಸಿ 1-0 ಮುನ್ನಡೆ ಒದಗಿಸಿಕೊಟ್ಟರು.

ಜೋರ್ಡನ್ ದ್ವಿತೀಯಾರ್ಧದ 67ನೇ ನಿಮಿಷದಲ್ಲಿ ಗೋಲು ಗಳಿಸಿ 1-1ರಿಂದ ಸಮಬಲ ಸಾಧಿಸಿ ತಿರುಗೇಟು ನೀಡುವ ವಿಶ್ವಾಸದಲ್ಲಿತ್ತು. ಆದರೆ ಎದುರಾಳಿ ತಂಡಕ್ಕೆ ಇನ್ನೂ ಎರಡು ಪೆನಾಲ್ಟಿಗಳನ್ನು ಬಿಟ್ಟುಕೊಟ್ಟು ಕೈಸುಟ್ಟುಕೊಂಡಿತು.

73ನೇ ನಿಮಿಷದಲ್ಲಿ ಅಫೀಫ್ ಪೆನಾಲ್ಟಿ ಕಿಕ್ ನಲ್ಲಿ ಮತ್ತೊಂದು ಗೋಲು ಗಳಿಸಿ ಆತಿಥೇಯ ತಂಡಕ್ಕೆ 2-1 ರಿಂದ ಮೇಲುಗೈ ಒದಗಿಸಿಕೊಟ್ಟರು. ಅಫೀಫ್ ಇಂಜುರಿ ಟೈಮ್ನಲ್ಲಿ (90+5)ಪೆನಾಲ್ಟಿ ಕಾರ್ನರ್ನಲ್ಲಿ ಮತ್ತೊಂದು ಗೋಲು ಗಳಿಸಿ ಹ್ಯಾಟ್ರಿಕ್ ಪೂರೈಸಿದರು. ಇದು ಟೂರ್ನಮೆಂಟ್‌ ನಲ್ಲಿ ಅಫೀಫ್ ಅವರು ಗಳಿಸಿದ 8ನೇ ಗೋಲಾಗಿತ್ತು.

ಹ್ಯಾಟ್ರಿಕ್ ಹೀರೊ ಅಫೀಫ್ ಟೂರ್ನಿಯಲ್ಲಿ ಒಟ್ಟು 8 ಗೋಲುಗಳನ್ನು ಗಳಿಸಿ ಟಾಪ್ ಸ್ಕೋರರ್ ಗೆ ನೀಡುವ ಪ್ರಶಸ್ತಿ ಅನ್ನು ಸ್ವೀಕರಿಸಿದರು.

ಚಾಂಪಿಯನ್ ಖತರ್ 5 ಮಿಲಿಯನ್ ಯುಎಸ್ ಡಾಲರ್ ಹಾಗೂ ರನ್ನರ್ಸ್ ಅಪ್ ಜೋರ್ಡನ್ ತಂಡ 3 ಮಿಲಿಯನ್ ಯುಎಸ್ ಡಾಲರ್ ಬಹುಮಾನ ಗೆದ್ದುಕೊಂಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News