ಡಚ್ಚರನ್ನು ಅಲ್ಪ ಮೊತ್ತಕ್ಕೆ ಕಟ್ಟಿಹಾಕಿದ ಅಫ್ಘಾನಿಸ್ತಾನ
ಲಕ್ನೋ: ಇಲ್ಲಿನ ಅಟಲ್ ಬಿಹಾರಿ ವಾಜಪೇಯಿ ಎಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡ ಅಫ್ಘಾನಿಸ್ತಾನ ಗೆಲುವಿಗೆ 180 ರನ್ ಗಳ ಗುರಿ ನೀಡಿದೆ.
ಇಕ್ರಮ್ ಅಲಿಖಿಲ್ ಅದ್ಭುತ ಫೀಲ್ಡಿಂಗ್ ಹಾಗೂ ಅಫ್ಘಾನ್ ಸಂಘಟಿತ ಬೌಲಿಂಗ್ ದಾಳಿಗೆ ಬೆದರಿದ ನೆದರ್ಲ್ಯಾಂಡ್ಸ್ ತಂಡ 46.3 ಓವರ್ ನಲ್ಲಿ 179 ರನ್ ಗೆ ಆಲೌಟ್ ಆಯಿತು.
ಪಂದ್ಯದಲ್ಲಿ ಅಫ್ಘಾನ್ ವಿರುದ್ಧ ಟಾಸ್ ಗೆದ್ದ ನೆದರ್ಲ್ಯಾಂಡ್ಸ್ ಬ್ಯಾಟಿಂಗ್ ಆಯ್ದುಕೊಂಡಿತು. ಆರಂಭದಲ್ಲಿ ಉತ್ತಮ ಬ್ಯಾಟಿಂಗ್ ಪರ್ದರ್ಶಿಸಿ ಅಫ್ಘಾನ್ ಗೆ ಕಠಿಣ ಗುರಿ ನೀಡಬೇಕು ಎಂಬ ಉದ್ದೇಶದಿಂದ ಬ್ಯಾಟಿಂಗ್ ಆಯ್ದುಕೊಂಡಿದ್ದ ಡಚ್ ಪಡೆ ಅಫ್ಘಾನ್ ನ ಅದ್ಭುತ ಫೀಲ್ಡಿಂಗ್ ಗೆ ಪೆವಿಲಿಯನ್ ಸೇರಿಕೊಂಡಿತು. ನೆದರ್ಲ್ಯಾಂಡ್ಸ್ ಪರ ಓಪನರರ್ ಬ್ಯಾರೆಸಿ ಮೊದಲ ಓವರ್ ನಲ್ಲಿಯೇ ಕೇವಲ 1 ರನ್ ಗೆ ಮುಜೀಬ್ ಬೌಲಿಂಗ್ ನಲ್ಲಿ ಎಬಿಡಬ್ಲೂ ಆದರೆ ಮಾಕ್ಸ್ ಒ”ಡೌಡ್ 42 ರನ್ ಗಳಿಸಿ ಸಮರ್ಥವಾಗಿ ಬ್ಯಾಟಿಂಗ್ ಮಾಡುತ್ತಿದ್ದಾಗ ಅಝ್ಮತುಲ್ಲಾ ಒಮರ್ಝೈ ಅದ್ಬುತ ರನೌಟ್ ಗೆ ಬಲಿಯಾದರು. ಕಾಲಿನ್ ಅಕೆರ್ಮಾನ್ 29 ರನ್ ಹಾಗೂ ನಾಯಕ ಎಡ್ವಡ್ಸ್ ಶೂನ್ಯಕ್ಕೆ ಕ್ರಮವಾಗಿ ಇಕ್ರಮ್ ಅಲಿಖಿಲ್ ಭರ್ಜರಿ ಫೀಲ್ಡಿಂಗ್ ಗೆ ರನೌಟ್ ಆದರು. ತಂಡ ನೂರೈವತ್ತು ದಾಟುವಲ್ಲಿ ಏಕಾಂಗಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಸೈಬ್ರಾಂಡ್ ಎಂಗಲ್ ಬ್ರೆಕ್ಟ್ ಆಕರ್ಷಕ 6 ಬೌಂಡರಿ ಸಹಿತ 58 ರನ್ ಬಾರಿಸಿ ತಂಡದ ಪರ ಒಂಟಿ ಅರ್ಧಶತಕ ದಾಖಲಿಸಿದರು. ಬಾಸ್ ಡೆ ಲೀಡ್, ಶಾಕಿಬ್ ಝುಲ್ಫಿಕರ್,ಲೋಗನ್ ವಾನ್ ಬೀಕ್ ಕ್ರಮವಾಗಿ 3,3,2 ರನ್ ಗಳಿಸಿದರು. ಕಡೆಯಲ್ಲಿ ಬ್ಯಾಟ್ ಬೀಸಿದ್ದ ವ್ಯಾನ್ ಡೆರ್ ಮರ್ವೆ ಉಪಯುಕ್ತ 11 ರನ್ ಬಾರಿಸಿದರೆ ಆರ್ಯನ್ ದತ್ 10 ರನ್ ಗಳಿಸಿದರು.
ಅಫ್ಘಾನಿಸ್ತಾನ ಪರ ಮುಹಮ್ಮದ್ ನಬಿ 3 ವಿಕೆಟ್ ಪಡೆದರೆ, ನೂರ್ ಅಹ್ಮದ್ 2 ಹಾಗೂ ಮುಜೀಬ್ ಉರ್ ರಹ್ಮಾನ್ 1 ಒಂದು ವಿಕೆಟ್ ಪಡೆದರು.