ನಾಳೆ ಜಿದ್ದಾದಲ್ಲಿ ಐಪಿಎಲ್ ಮೆಗಾ ಹರಾಜು
ಹೊಸದಿಲ್ಲಿ: ಸೌದಿ ಅರೇಬಿಯದ ಜಿದ್ದಾದಲ್ಲಿ ನವೆಂಬರ್ 24 ಹಾಗೂ 25ರಂದು ಎರಡು ದಿನಗಳ ಕಾಲ ನಡೆಯಲಿರುವ ಐಪಿಎಲ್ ಮೆಗಾ ಹರಾಜಿನಲ್ಲಿ ಭಾರತದ ದೇಶೀಯ ಸ್ಟಾರ್ ಆಟಗಾರರ ಜೊತೆಗೆ ವಿದೇಶದ ಪ್ರಮುಖ ಕ್ರಿಕೆಟಿಗರು ಗಮನ ಸೆಳೆಯಲಿದ್ದಾರೆ.
ಒಟ್ಟು 577 ಆಟಗಾರರು ಹರಾಜಿನ ಕಣದಲ್ಲಿದ್ದು, 10 ತಂಡಗಳು ಮೂರು ವರ್ಷಗಳ ಅವಧಿಗೆ ಆಟಗಾರರನ್ನು ತನ್ನತ್ತ ಸೆಳೆಯಲು ಬಿಡ್ ಸಲ್ಲಿಸಲಿವೆ.
204 ಸ್ಥಾನಗಳನ್ನು ಭರ್ತಿ ಮಾಡುವ ಸಾಧ್ಯತೆಯಿದ್ದು, 10 ಫ್ರಾಂಚೈಸಿಗಳು 641.5 ಕೋ.ರೂ.ವನ್ನು ಬಿಡ್ಡಿಂಗ್‌ನಲ್ಲಿ ವ್ಯಯಿಸಲು ಸಜ್ಜಾಗಿವೆ.
ಎರಡು ದಿನಗಳ ಕಾಲ ನಡೆಯಲಿರುವ ಮೆಗಾ ಹರಾಜು ಪ್ರಕ್ರಿಯೆಯು ಭಾರತದ ಕಾಲಮಾನ ಮಧ್ಯಾಹ್ನ 3:30ಕ್ಕೆ ಆರಂಭವಾಗಲಿದೆ.
ಈ ಬಾರಿ ಪ್ರಮುಖ ಆಟಗಾರರ ಎರಡು ಪಟ್ಟಿ ಸಿದ್ದಪಡಿಸಲಾಗಿದ್ದು, ಪ್ರತಿ ಪಟ್ಟಿಯಲ್ಲಿ ಆರು ಆಟಗಾರರಿದ್ದಾರೆ.
ಮೊದಲ ಪಟ್ಟಿಯಲ್ಲಿ ರಿಷಭ್ ಪಂತ್, ಶ್ರೇಯಸ್ ಅಯ್ಯರ್, ಜೋಶ್ ಬಟ್ಲರ್,ಅರ್ಷದೀಪ್ ಸಿಂಗ್, ಕಾಗಿಸೊ ರಬಾಡ, ಮಿಚೆಲ್ ಸ್ಟಾರ್ಕ್ ಅವರಿದ್ದಾರೆ.
ಎರಡನೇ ಪಟ್ಟಿಯಲ್ಲಿ ಕೆ.ಎಲ್.ರಾಹುಲ್, ಯಜುವೇಂದ್ರ ಚಹಾಲ್, ಲಿಯಾಮ್ ಲಿವಿಂಗ್‌ಸ್ಟೋನ್, ಡೇವಿಡ್ ಮಿಲ್ಲರ್, ಮುಹಮ್ಮದ್ ಶಮಿ, ಮುಹಮ್ಮದ್ ಸಿರಾಜ್ ಅವರಿದ್ದಾರೆ.
ಹರಾಜಿಗೆ 1,574 ಆಟಗಾರರು ಹೆಸರು ನೋಂದಾಯಿಸಿದ್ದು, ಪಟ್ಟಿಯನ್ನು 577 ಆಟಗಾರರಿಗೆ ಸೀಮಿತಗೊಳಿಸಲಾಗಿದೆ. ಕೊನೆಯ ಕ್ಷಣದಲ್ಲಿ ಇಂಗ್ಲೆಂಡ್‌ನ ವೇಗಿ ಜೋಫ್ರಾ ಆರ್ಚರ್ ಹಾಗೂ ಭಾರತ ಮೂಲದ ಅಮೆರಿಕದ ಆಟಗಾರ ಸೌರಭ್ ನೇತ್ರಾವಲ್ಕರ್‌ರನ್ನು ಪಟ್ಟಿಗೆ ಸೇರಿಸಲಾಗಿದೆ. ಪಟ್ಟಿಯಲ್ಲಿ ಭಾರತದ 367 ಹಾಗೂ ವಿದೇಶದ 210 ಆಟಗಾರರಿದ್ದಾರೆ.
ಎಲ್ಲ 10 ತಂಡಗಳಲ್ಲಿ ನಿಯೋಜಿತ 70 ವಿದೇಶಿ ಆಟಗಾರರು ಸೇರಿದಂತೆ ಒಟ್ಟು 204 ಸ್ಥಾನಗಳು ಲಭ್ಯವಿದೆ.
► ಪ್ರತಿ ತಂಡಗಳು ಹರಾಜಿನ ವೇಳೆ ಹೊಂದಿರುವ ಹಣ
ಪಂಜಾಬ್ ಕಿಂಗ್ಸ್-110.5 ಕೋ.ರೂ.(ಗರಿಷ್ಠ)
ರಾಜಸ್ಥಾನ ರಾಯಲ್ಸ್-41 ಕೋ.ರೂ.(ಗರಿಷ್ಠ)
ರಾಯಲ್ ಚಾಲೆಂಜರ್ಸ್ ಬೆಂಗಳೂರು-83 ಕೋ.ರೂ.
ಡೆಲ್ಲ್ ಕ್ಯಾಪಿಟಲ್ಸ್-73 ಕೋ.ರೂ.
ಲಕ್ನೊ ಸೂಪರ್ ಜಯಂಟ್ಸ್-69 ಕೋ.ರೂ.
ಗುಜರಾತ್ ಟೈಟಾನ್ಸ್-69 ಕೋ.ರೂ.
ಚೆನ್ನೈ ಸೂಪರ್ ಕಿಂಗ್ಸ್-55 ಕೋ.ರೂ.
ಕೋಲ್ಕತಾ ನೈಟ್ ರೈಡರ್ಸ್-51 ಕೋ.ರೂ.
ಮುಂಬೈ ಇಂಡಿಯನ್ಸ್-45 ಕೋ.ರೂ.
ಸನ್‌ರೈಸರ್ಸ್ ಹೈದರಾಬಾದ್-45 ಕೋ.ರೂ.
2 ಕೋ.ರೂ. ಗರಿಷ್ಠ ಮೂಲ ಬೆಲೆಯಾಗಿದ್ದು, 81 ಆಟಗಾರರು ಈ ಮೊತ್ತಕ್ಕೆ ನೋಂದಾಯಿಸಿದ್ದಾರೆ.
ಕನಿಷ್ಠ ಮೂಲ ಬೆಲೆಯನ್ನು 20ರಿಂದ 30 ಲಕ್ಷ ರೂ.ಗೆ ಏರಿಸಲಾಗಿದೆ.
ಡೇವಿಡ್ ಮಿಲ್ಲರ್ ಹೊರತುಪಡಿಸಿ ಎಲ್ಲ ಪ್ರಮುಖ ಅಟಗಾರರು 2 ಕೋ.ರೂ. ಮೂಲಬೆಲೆಯ ಪಟ್ಟಿಯಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಬ್ಯಾಟರ್ ಮಿಲ್ಲರ್ 1.5 ಕೋ.ರೂ. ಮೂಲ ಬೆಲೆ ಹೊಂದಿದ್ದಾರೆ.
ರಿಷಭ್ ಪಂತ್, ಕಳೆದ ಬಾರಿಯ ಐಪಿಎಲ್ ಪ್ರಶಸ್ತಿ ವಿಜೇತ ಕೆಕೆಆರ್ ತಂಡದ ನಾಯಕ ಶ್ರೇಯಸ್ ಅಯ್ಯರ್ ಹಾಗೂ ಕೆ.ಎಲ್.ರಾಹುಲ್ ಬಿಡ್ಡಿಂಗ್‌ನಲ್ಲಿ ತೀವ್ರ ಪೈಪೋಟಿಗೆ ಕಾರಣವಾಗುವ ಸಾಧ್ಯತೆಯಿದೆ.
► ರೈಟ್-ಟು-ಮ್ಯಾಚ್ ಕಾರ್ಡ್: ರೈಟ್ ಟು ಮ್ಯಾಚ್ ಕಾರ್ಡ್(ಆರ್‌ಟಿಎಂ)2014 ಹಾಗೂ 2018ರ ಮೆಗಾ ಹರಾಜಿನಲ್ಲಿ ಕೊನೆಯ ಬಾರಿ ಬಳಸಲಾಗಿತ್ತು. ಆದರೆ 2022ರಲ್ಲಿ ಇದನ್ನು ಕೈಬಿಡಲಾಗಿತ್ತು. ಈ ವರ್ಷ ಇದು ಬಳಕೆಯಾಗಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು
ಆರ್‌ಸಿಬಿ ತಂಡವು ಮೆಗಾ ಹರಾಜಿಗಿಂತ ಮೊದಲು ಮೂವರು ಆಟಗಾರರಾದ ವಿರಾಟ್ ಕೊಹ್ಲಿ, ರಜತ್ ಪಾಟಿದಾರ್ ಹಾಗೂ ಯಶ್ ದಯಾಳ್‌ರನ್ನು ಮಾತ್ರ ತನ್ನಲ್ಲೇ ಉಳಿಸಿಕೊಂಡಿದೆ. ಎಫ್ ಡು ಪ್ಲೆಸಿಸ್ ತಂಡಕ್ಕೆ ವಾಪಸಾಗುವ ಸಾಧ್ಯತೆ ಇಲ್ಲ. ಹೀಗಾಗಿ ಆರ್‌ಸಿಬಿ ತಂಡವು ನಾಯಕತ್ವದ ಅಭ್ಯರ್ಥಿಯನ್ನು ಹುಡುಕಬೇಕಾಗಿದೆ. ವಿಕೆಟ್‌ಕೀಪರ್ ಆಗಿಯೂ ಕಾರ್ಯನಿರ್ವಹಿಸಬಲ್ಲ ಕೆ.ಎಲ್.ರಾಹುಲ್‌ರತ್ತ ಆರ್‌ಸಿಬಿ ಚಿತ್ತಹರಿಸಬಹುದು.
ಪಾಟಿದಾರ್ ಮಧ್ಯಮ ಸರದಿಯಲ್ಲಿ ತಂಡವನ್ನು ಆಧರಿಸಬಹುದು. ಆರ್‌ಸಿಬಿಗೆ ಪವರ್-ಹಿಟ್ಟರ್‌ಗಳ ಅಗತ್ಯವಿದೆ. ಅದು ಲಿಯಾಮ್ ಲಿವಿಂಗ್‌ಸ್ಟೋನ್‌ರಂತಹ ಆಟಗಾರರನ್ನು ಗುರಿಯಾಗಿಸಿಕೊಂಡಿದೆ. ಆರ್‌ಟಿಎಂ ಆಯ್ಕೆ ಬಳಸಿಕೊಂಡು ಗ್ಲೆನ್ ಮ್ಯಾಕ್ಸ್‌ವೆಲ್ ಅಥವಾ ವಿಲ್ ಜಾಕ್ಸ್‌ರನ್ನು ತಂಡಕ್ಕೆ ಮರಳಿ ಕರೆ ತರಬಹುದು.
ಬೌಲಿಂಗ್ ವಿಭಾಗದಲ್ಲಿ ಆರ್‌ಟಿಎಂ ಕಾರ್ಡ್ ಬಳಸಿ ಮುಹಮ್ಮದ್ ಸಿರಾಜ್‌ರನ್ನು ಮತ್ತೊಮ್ಮೆ ಸೇರಿಸಿಕೊಳ್ಳಬಹುದು. ಬೌಲಿಂಗ್ ಸರದಿಗೆ ಸಂಬಂಧಿಸಿ ಆರ್‌ಸಿಬಿ ತನ್ನ ಹರಾಜು ರಣತಂತ್ರವನ್ನು ಸರಿಯಾಗಿ ಬಳಸಲು ಬಯಸುತ್ತಿದೆ.