ಪ್ಯಾರಾಲಿಂಪಿಕ್ಸ್ | ಆರ್ಚರ್ ಹರ್ವಿಂದರ್‌ಗೆ ಐತಿಹಾಸಿಕ ಚಿನ್ನ
ಪ್ಯಾರಿಸ್ : ಪ್ಯಾರಾಲಿಂಪಿಕ್ಸ್‌ನ ಪುರುಷರ ವೈಯಕ್ತಿಕ ರಿಕರ್ವ್ ಓಪನ್ ಫೈನಲ್‌ನಲ್ಲಿ ಬುಧವಾರ ಪೋಲ್ಯಾಂಡ್‌ನ ಲುಕಾಸ್ ಸಿಸ್‌ಝೆಕ್‌ರನ್ನು 6-0 ಅಂತರದಿಂದ ಮಣಿಸಿದ ಭಾರತದ ಬಿಲ್ಗಾರ ಹರ್ವಿಂದರ್ ಸಿಂಗ್ ಚಿನ್ನದ ಪದಕ ಜಯಿಸಿದರು. ಚಿನ್ನದ ಪದಕ ಗೆದ್ದಿರುವ ಭಾರತದ ಮೊದಲ ಪ್ಯಾರಾಲಿಂಪಿಯನ್ ಆರ್ಚರ್ ಎನಿಸಿಕೊಂಡಿರುವ ಹರ್ವಿಂದರ್ ಇತಿಹಾಸ ನಿರ್ಮಿಸಿದರು.
ಹರ್ವಿಂದರ್ ಅಂತಿಮ ಸೆಟನ್ನು 29-25 ಅಂತರದಿಂದ ಗೆದ್ದುಕೊಂಡರು. ಈ ಮೂಲಕ ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ 4ನೇ ಚಿನ್ನದ ಪದಕ ಗೆದ್ದುಕೊಟ್ಟರು.
ಹರ್ವಿಂದರ್ ಸೆಮಿ ಫೈನಲ್‌ನಲ್ಲಿ ಇರಾನ್‌ನ ಮುಹಮ್ಮದ್ ರೆಝಾರನ್ನು 7-3 ಅಂತರದಿಂದ ಮಣಿಸಿ ಫೈನಲ್‌ಗೆ ಪ್ರವೇಶಿಸಿದ್ದಾರೆ. ಈ ಮೂಲಕ ಪದಕವನ್ನು ದೃಢಪಡಿಸಿದ್ದರು.
ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಹರ್ವಿಂದರ್ ಪ್ಯಾರಾಲಿಂಪಿಕ್ ಗೇಮ್ಸ್‌ನಲ್ಲಿ ಫೈನಲ್ ತಲುಪಿದ ಭಾರತದ ಮೊತ್ತ ಮೊದಲ ಬಿಲ್ಗಾರ ಎನಿಸಿಕೊಂಡಿದ್ದರು.
ಇದಕ್ಕೂ ಮೊದಲು ಹರ್ವಿಂದರ್ ಎಲಿಮಿನೇಶನ್ ಪಂದ್ಯದಲ್ಲಿ ಚೈನೀಸ್ ತೈಪೆಯ ಸೆಂಗ್ ಲುಂಗ್‌ರನ್ನು 7-3 ಅಂತರದಿಂದ ಮಣಿಸಿದ್ದರು. ಇಂಡೋನೇಶ್ಯದ ಸೆಟಿಯವಾನ್‌ರನ್ನು 6-2ರಿಂದ ಸೋಲಿಸಿ ಕ್ವಾರ್ಟರ್ ಫೈನಲ್‌ಗೆ ಪ್ರವೇಶಿಸಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ ಹರ್ವಿಂದರ್ ಕೊಲಂಬಿಯಾದ ಹೆಕ್ಟರ್ ಜುಲಿಯೊರನ್ನು 6-2ರಿಂದ ಸುಲಭವಾಗಿ ಸೋಲಿಸಿ ಸೆಮಿ ಫೈನಲ್‌ಗೆ ತಲುಪಿದ್ದರು.