700 ವಿಕೆಟ್ ಮೈಲುಗಲ್ಲು ಸಾಧಿಸಿದ ಅಶ್ವಿನ್; ತಂದೆ- ಮಗನ ವಿಕೆಟ್ ಗಳಿಸಿದ ಹೆಗ್ಗಳಿಕೆ!

Update: 2023-07-13 03:58 GMT

ಫೋಟೋ: Twitter

ಹೊಸದಿಲ್ಲಿ: ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ನ ಪ್ರಥಮ ಇನ್ನಿಂಗ್ಸ್ ನಲ್ಲಿ 5 ವಿಕೆಟ್  ಗಳಿಸಿದ ರವಿಚಂದ್ರನ್ ಅಶ್ವಿನ್, ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ 700 ವಿಕೆಟ್ ಗಳಿಸಿದ ಭಾರತದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಟೆಸ್ಟ್ ನಲ್ಲಿ ಮೂರನೇ ವಿಕೆಟ್ ರೂಪದಲ್ಲಿ ಅಲ್ಜರಿ ಜೋಸೆಫ್ (4) ಅವರನ್ನು ಔಟ್ ಮಾಡುವ ಮೂಲಕ 700 ವಿಕೆಟ್ ಸಾಧನೆ ಮಾಡಿದ ಅಶ್ವಿನ್, ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ತಂದೆ- ಮಗನ ವಿಕೆಟ್ ಕಬಳಿಸಿದ ವಿಶಿಷ್ಟ ದಾಖಲೆಗೂ ಭಾಜನರಾದರು.

ವೆಸ್ಟ್ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ನಲ್ಲಿ ಆರಂಭಿಕ ಬ್ಯಾಟ್ಸ್ ಮನ್ ತಗ್ನರೇನ್ ಚಂದ್ರಪಾಲ್ ಅವರನ್ನು ಬೌಲ್ಡ್ ಮಾಡುವ ಮೂಲಕ ತಂಡದ ಕುಸಿತಕ್ಕೆ ನಾಂದಿ ಹಾಡಿದರು. 2011ರಲ್ಲಿ ಹೊಸದಿಲ್ಲಿಯಲ್ಲಿ ಟೆಸ್ಟ್ ಪದಾರ್ಪಣೆ ಮಾಡಿದ ಅಶ್ವಿನ್, ಆ ಪಂದ್ಯದಲ್ಲಿ ತಗ್ನರೇನ್ ಚಂದ್ರಪಾಲ್ ಅವರ ತಂದೆ ಶಿವನರೇನ್ ಚಂದ್ರಪಾಲ್ ಅವರನ್ನು ಔಟ್ ಮಾಡಿದ್ದರು. 12 ವರ್ಷ ಹಿಂದೆ ದೆಹಲಿ ಟೆಸ್ಟ್ ನ ಎರಡನೇ ಇನ್ನಿಂಗ್ಸ್ ನಲ್ಲಿ ಶಿವನರೇನ್ ಚಂದ್ರಪಾಲ್ ಅವರ ಎಲ್ ಬಿ ಬಲೆಗೆ ಬಿದ್ದಿದ್ದರು.

ಈ ಪಂದ್ಯ ಆರಂಭಕ್ಕೆ ಮುನ್ನ 474 ಟೆಸ್ಟ್ ವಿಕೆಟ್ ಗಳಿಸಿದ್ದ ಅಶ್ವಿನ್, ಆಕರ್ಷಕ ಎಸೆತದಲ್ಲಿ ತಗ್ನರೇನ್ ಅವರನ್ನು ಬೌಲ್ಡ್ ಮಾಡುವ ಮೂಲಕ ತಂದೆ- ಮಗನನ್ನು ಔಟ್ ಮಾಡಿದ ವಿಶ್ವದ ಐದನೇ ಬೌಲರ್ ಎನಿಸಿಕೊಂಡರು. ಕುತೂಹಲದ ಅಂಶವೆಂದರೆ ಮೂವರು ಬೌಲರ್ ಗಳು ಶಿವನರೇನ್ ಚಂದ್ರಪಾಲ್ ಮತ್ತು ತಗ್ನರೇನ್ ಅವರನ್ನು ಔಟ್ ಮಾಡಿದ್ದಾರೆ. ಆಸ್ಟ್ರೇಲಿಯಾದ ವೇಗಿ ಮಿಚೆಲ್ ಸ್ಟಾರ್ಕ್ ಹಾಗೂ ದಕ್ಷಿಣ ಆಫ್ರಿಕಾದ ಆಫ್ ಸ್ಪಿನ್ನರ್ ಸೈಮನ್ ಹರ್ಮೆರ್ ಈ ಸಾಧನೆ ಮಾಡಿದ ಇತರರು.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News