ಅಶ್ವಿನ್ ಮೋಡಿ: ವೆಸ್ಟ್ಇಂಡೀಸ್ ವಿರುದ್ಧ ಭಾರತ ಮೇಲುಗೈ
ಹೊಸದಿಲ್ಲಿ: ವೃತ್ತಿ ಜೀವನದಲ್ಲಿ 33ನೇ ಬಾರಿ ಐದು ವಿಕೆಟ್ ಗಳಿಸಿದ ರವಿಚಂದ್ರನ್ ಅಶ್ವಿನ್, ಟೆಸ್ಟ್ ಕ್ರಿಕೆಟ್ ಗೆ ತಮ್ಮ ಪುನರಾಗಮನವನ್ನು ಸ್ಮರಣೀಯವಾಗಿಸಿಕೊಂಡಿದ್ದಾರೆ. 24.3 ಓವರ್ಗಳಲ್ಲಿ 60 ರನ್ ಗೆ ಐದು ವಿಕೆಟ್ ಕಬಳಿಸುವ ಮೂಲಕ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಅತಿಥೇಯರನ್ನು 150 ರನ್ ಗಳಿಗೆ ಕಟ್ಟಿ ಹಾಕುವಲ್ಲಿ ಅಶ್ವಿನ್ ಪ್ರಮುಖ ಪಾತ್ರ ವಹಿಸಿದರು.
ಡೊಮಿನಿಕಾ ರೊಸೇವು ವಿಂಡ್ಸರ್ ಪಾರ್ಕ್ ನಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಅತಿಥೇಯ ತಂಡದ ಪತನ ಆರಂಭಿಕ ಬ್ಯಾಟ್ಸ್ಮನ್ ಟಿ. ಚಂದ್ರಪಾಲ್ (12) ಅವರನ್ನು ಅಶ್ವಿನ್ ಬೌಲ್ಡ್ ಮಾಡುವ ಮೂಲಕ ಆರಂಭವಾಯಿತು. 31 ರನ್ ಗಳಿಗೆ ಮೊದಲ ವಿಕೆಟ್ ಕಳೆದುಕೊಂಡ ವೆಸ್ಟ್ಇಂಡೀಸ್ ಇಡೀ ಇನಿಂಗ್ಸ್ ನಲ್ಲಿ ಚೇತರಿಸಿಕೊಳ್ಳಲೇ ಇಲ್ಲ. ಅಲಿಕ್ ಅಥನಾಝ್ (47) ಅವರನ್ನು ಹೊರತುಪಡಿಸಿದರೆ ಯಾವುದೇ ಬ್ಯಾಟ್ಸ್ ಮನ್ ಗಳಿಂದ ಪ್ರತಿರೋಧ ವ್ಯಕ್ತವಾಗಲಿಲ್ಲ. ಅಶ್ವಿನ್ ಗೆ ಉತ್ತಮ ಸಾಥ್ ನೀಡಿದ ರವೀಂದ್ರ ಜಡೇಜ 14 ಓವರ್ ಗಳಲ್ಲಿ 26 ರನ್ ಗಳಿಗೆ 3 ವಿಕೆಟ್ ಕಬಳಿಸಿದರು. ಸಿರಾಜ್ ಅಹ್ಮದ್ (1/25) ಮತ್ತು ಶಾರ್ದೂಲ್ ಠಾಕೂರ್ (1/15) ಉಳಿದ ಎರಡು ವಿಕೆಟ್ ಗಳನ್ನು ಹಂಚಿಕೊಂಡರು.
ಐಸಿಸಿ ಟೆಸ್ಟ್ ರ‍್ಯಾಂಕಿಂಗ್ ನಲ್ಲಿ ಅಗ್ರಸ್ಥಾನವನ್ನು ಸಮರ್ಥಿಸಿಕೊಂಡ ಅಶ್ವಿನ್ ಹಾಗೂ ರವೀಂದ್ರ ಜಡೇಜಾ ವೆಸ್ಟ್ಇಂಡೀಸ್ ಬ್ಯಾಟ್ಸ್ ಮನ್ ಗಳಿಗೆ ಸಿಂಹಸ್ವಪ್ನರಾದರು.
ಉಳಿದ ಅವಧಿಯಲ್ಲಿ ಭಾರತ ಎಚ್ಚರಿಕೆಯ ಆಟವಾಡಿ ಮುರಿಯದ ಮೊದಲ ವಿಕೆಟ್ ಗೆ 80 ರನ್ ಗಳನ್ನು ಕಲೆಹಾಕಿದೆ. ನಾಯಕ ರೋಹಿತ್ ಶರ್ಮಾ (65 ಎಸೆತಗಳಲ್ಲಿ ಅಜೇಯ 30) ಮತ್ತು ಮೊದಲ ಟೆಸ್ಟ್ ಆಡುತ್ತಿರುವ ಯಶಸ್ವಿ ಜೈಸ್ವಾಲ್ (73 ಎಸೆತಗಳಲ್ಲಿ ನಾಟೌಟ್ 40) ಎರಡನೇ ದಿನಕ್ಕೆ ಆಟ ಕಾಯ್ದಿರಿಸಿಕೊಂಡರು. ಸದ್ಯಕ್ಕೆ ಭಾರತ 70 ರನ್ ಗಳ ಹಿನ್ನಡೆಯಲ್ಲಿದೆ.
ಬೌಲರ್ ಗಳಿಗೆ ನೆರವು ನೀಡುವ ಪಿಚ್ ನಲ್ಲಿ ಭಾರತದ ಆರಂಭಿಕ ಜೋಡಿ ಆರಾಮದಾಯಕವಾಗಿ ಆಡಿದರು. ರೋಹಿತ್ ಶರ್ಮಾ ತಮ್ಮ "ನಟರಾಜ" ಪುಲ್ಶಾಟ್ ಹಾಗೂ ಆಕರ್ಷಕ ಸ್ಟ್ರೈಟ್ ಡ್ರೈವ್ ಗಳ ಮೂಲಕ ಗಮನ ಸೆಳೆದರೆ, ಜೈಸ್ವಾಲ್ ತಮ್ಮ ವಯಸ್ಸಿಗೆ ಮೀರಿದ ಪ್ರೌಢಿಮೆ ಪ್ರದರ್ಶಿಸಿದರು.