ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಆಸ್ಟ್ರೇಲಿಯಕ್ಕೆ 36 ರನ್ ಜಯ

Update: 2024-06-09 17:29 GMT

PC : PTI 

ಬಾರ್ಬಡೋಸ್, ಜೂ.9: ಟಿ-20 ವಿಶ್ವಕಪ್ ಟೂರ್ನಿಯ ಬಿ ಗುಂಪಿನ 17ನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 2021ರ ಆವೃತ್ತಿಯ ಚಾಂಪಿಯನ್ ಆಸ್ಟ್ರೇಲಿಯ 36 ರನ್ ಅಂತರದಿಂದ ಗೆಲುವು ಸಾಧಿಸಿ ಶುಭಾರಂಭ ಮಾಡಿದೆ.

ಕೆನ್ಸಿಂಗ್ಟನ್ ಓವಲ್‌ನಲ್ಲಿ ರವಿವಾರ ನಡೆದ ಪಂದ್ಯದಲ್ಲಿ ಗೆಲ್ಲಲು 202 ರನ್ ಗುರಿ ಬೆನ್ನಟ್ಟಿದ ಇಂಗ್ಲೆಂಡ್ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 165 ರನ್ ಗಳಿಸಿ ಸೋಲೊಪ್ಪಿಕೊಂಡಿದೆ. ಇಂಗ್ಲೆಂಡ್ ಪರ ಇನಿಂಗ್ಸ್ ಆರಂಭಿಸಿದ ನಾಯಕ ಜೋಸ್ ಬಟ್ಲರ್(42 ರನ್, 28 ಎಸೆತ, 5 ಬೌಂಡರಿ, 2 ಸಿಕ್ಸರ್) ಹಾಗೂ ಸಾಲ್ಟ್ ಲೇಕ್(37 ರನ್, 23 ಎಸೆತ, 4 ಬೌಂಡರಿ, 2 ಸಿಕ್ಸರ್) ಮೊದಲ 6 ಓವರ್‌ಗಳಲ್ಲಿ 50 ರನ್ ಗಳಿಸಿದರು. ಸ್ಪಿನ್ನರ್ ಆಡಮ್ ಝಂಪಾ(2-28) ಕೇವಲ 12 ಎಸೆತಗಳಲ್ಲಿ ಇಂಗ್ಲೆಂಡ್ ಚೇಸ್‌ಗೆ ಕಡಿವಾಣ ಹಾಕಿದರು. 8ನೇ ಓವರ್‌ನಲ್ಲಿ ಸಾಲ್ಟ್ ವಿಕೆಟ್ ಕಬಳಿಸಿದ ಝಂಪಾ ಮೊದಲ ವಿಕೆಟ್ ಜೊತೆಯಾಟಕ್ಕೆ (73 ರನ್) ತೆರೆ ಎಳೆದರು. 28 ಎಸೆತಗಳಲ್ಲಿ 42 ರನ್ ಗಳಿಸಿದ್ದ ಬಟ್ಲರ್ ರಿವರ್ಸ್ ಸ್ವೀಪ್ ಮೂಲಕ ಸಿಕ್ಸರ್ ಬಾರಿಸಲು ಮುಂದಾಗಿ ಝಂಪಾಗೆ ವಿಕೆಟ್ ಒಪ್ಪಿಸಿದರು.

ಆಡುವ 11ರ ಬಳಗದಲ್ಲಿದ್ದ ಏಕೈಕ ಎಡಗೈ ಬ್ಯಾಟರ್ ಮೊಯಿನ್ ಅಲಿ(25 ರನ್, 15 ಎಸೆತ) 5ನೇ ಕ್ರಮಾಂಕದಲ್ಲಿ ಭಡ್ತಿ ಪಡೆದು ಬಂದು ಬ್ಯಾಟಿಂಗ್ ಮಾಡಿದ್ದು 14ನೇ ಓವರ್‌ನಲ್ಲಿ ಮ್ಯಾಕ್ಸ್‌ವೆಲ್ ಬೌಲಿಂಗ್‌ನಲ್ಲಿ 3 ಸಿಕ್ಸರ್‌ಗಳನ್ನು ಸಿಡಿಸಿದರು. ಆದರೆ ಜಾನಿ ಬೈರ್‌ಸ್ಟೋವ್(7 ರನ್)ಹಾಗೂ ಮೊಯಿನ್ ಅಲಿ ಬೆನ್ನುಬೆನ್ನಿಗೆ ಔಟಾದಾಗ ಇಂಗ್ಲೆಂಡ್ ಹಿನ್ನಡೆ ಕಂಡಿತು. ಅಲಿ ಹಾಗೂ ಲಿವಿಂಗ್‌ಸ್ಟೋನ್(15 ರನ್) ವಿಕೆಟ್ ಪಡೆದ ಪ್ಯಾಟ್ ಕಮಿನ್ಸ್(2-23) ಇಂಗ್ಲೆಂಡ್ ತಂಡವನ್ನು 6 ವಿಕೆಟ್ ನಷ್ಟಕ್ಕೆ 165 ರನ್‌ಗೆ ನಿಯಂತ್ರಿಸಲು ನೆರವಾಗಿದ್ದಾರೆ.

*ಆಸ್ಟ್ರೇಲಿಯ 201/7: ಇದಕ್ಕೂ ಮೊದಲು ಟಾಸ್ ಜಯಿಸಿದ ಇಂಗ್ಲೆಂಡ್ ತಂಡ ಮೊದಲು ಫೀಲ್ಡಿಂಗ್ ಆಯ್ದುಕೊಂಡಿತು. ಇನಿಂಗ್ಸ್ ಆರಂಭಿಸಿದ ಟ್ರಾವಿಸ್ ಹೆಡ್ ಹಾಗೂ ಡೇವಿಡ್ ವಾರ್ನರ್ ಮೊದಲ ವಿಕೆಟ್‌ಗೆ 70 ರನ್ ಸೇರಿಸಿ ಉತ್ತಮ ಆರಂಭ ಒದಗಿಸಿದರು. ಆಸ್ಟ್ರೇಲಿಯವು ಮೊದಲ 6 ಓವರ್‌ಗಳಲ್ಲಿ 74 ರನ್ ಗಳಿಸಿದ್ದು, ಟಿ-20 ವಿಶ್ವಕಪ್‌ನಲ್ಲಿ ಪವರ್ ಪ್ಲೇನಲ್ಲಿ ಗರಿಷ್ಠ ಮೊತ್ತ ಗಳಿಸಿತು.

ವಾರ್ನರ್(39 ರನ್, 16 ಎಸೆತ, 2 ಬೌಂಡರಿ, 4 ಸಿಕ್ಸರ್)ಮೊಯಿನ್ ಅಲಿಗೆ(1-18) ವಿಕೆಟ್ ಒಪ್ಪಿಸಿದರು. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ವಾಪಸಾಗಿರುವ ಜೋಫ್ರಾ ಆರ್ಚರ್ (1-28) ಅವರು ಹೆಡ್(34 ರನ್, 18 ಎಸೆತ,2 ಬೌಂಡರಿ, 3 ಸಿಕ್ಸರ್ )ವಿಕೆಟನ್ನು ಪಡೆದು ಇಂಗ್ಲೆಂಡ್‌ಗೆ ಮೇಲುಗೈ ಒದಗಿಸಿದರು.

ನಾಯಕ ಮಿಚೆಲ್ ಮಾರ್ಷ್(35 ರನ್, 25 ಎಸೆತ) ಹಾಗೂ ಮ್ಯಾಕ್ಸ್‌ವೆಲ್(28 ರನ್, 25 ಎಸೆತ) ಸತತ ಓವರ್‌ಗಳಲ್ಲಿ ವಿಕೆಟ್ ಕೈಚೆಲ್ಲುವ ಮೊದಲು ಮೂರನೇ ವಿಕೆಟ್‌ನಲ್ಲಿ 49 ಎಸೆತಗಳಲ್ಲಿ 65 ರನ್ ಗಳಿಸಿದರು. ಆಲ್‌ರೌಂಡರ್ ಮಾರ್ಕಸ್ ಸ್ಟೊಯಿನಿಸ್(30 ರನ್, 17 ಎಸೆತ)ಕ್ರಿಸ್ ಜೋರ್ಡನ್‌ಗೆ ವಿಕೆಟ್ ಒಪ್ಪಿಸಿದರು. ಜೋರ್ಡನ್(2-44) ಟಿ-20 ಕ್ರಿಕೆಟ್‌ನಲ್ಲಿ 100 ವಿಕೆಟ್ ಮೈಲಿಗಲ್ಲು ತಲುಪಿದ ಇಂಗ್ಲೆಂಡ್‌ನ ಎರಡನೇ ಬೌಲರ್ ಆಗಿದ್ದಾರೆ. ಆದಿಲ್ ರಶೀದ್(1-41) ಈ ಸಾಧನೆ ಮಾಡಿದ ಮೊದಲಿಗ.

ಮ್ಯಾಥ್ಯೂ ವೇಡ್(ಔಟಾಗದೆ 17, 10 ಎಸೆತ) ಪ್ರಸಕ್ತ ಪಂದ್ಯಾವಳಿಯಲ್ಲಿ ಆಸ್ಟ್ರೇಲಿಯ ತಂಡ 200 ರನ್ ಗಳಿಸಿದ ಮೊದಲ ತಂಡ ಎನಿಸಿಕೊಳ್ಳಲು ನೆರವಾದರು.

ಇಂಗ್ಲೆಂಡ್ ಮೊದಲ ಪಂದ್ಯದಲ್ಲಿ ಸೋತ ಕಾರಣ ಮುಂದಿನ ಎರಡು ಪಂದ್ಯಗಳಲ್ಲೂ ಜಯ ಸಾಧಿಸಬೇಕಾಗಿದೆ. ಆಸ್ಟ್ರೇಲಿಯ ತಂಡ ಜೂನ್ 11ರಂದು ನಮೀಬಿಯಾ ವಿರುದ್ದ ಆಡಲು ಆ್ಯಂಟಿಗುವಾಕ್ಕೆ ತೆರಳಲಿದೆ. ಇಂಗ್ಲೆಂಡ್ ತಂಡ ಜೂನ್ 13ರಂದು ಒಮಾನ್ ತಂಡವನ್ನು ಎದುರಿಸಲಿದೆ.

ಸಂಕ್ಷಿಪ್ತ ಸ್ಕೋರ್

ಆಸ್ಟ್ರೇಲಿಯ: 20 ಓವರ್‌ಗಳಲ್ಲಿ 201/7

(ಡೇವಿಡ್ ವಾರ್ನರ್ 39, ಮಿಚೆಲ್ ಮಾರ್ಷ್ 35, ಟ್ರಾವಿಸ್ ಹೆಡ್ 34, ಮಾರ್ಕಸ್ ಸ್ಟೊಯಿನಿಸ್ 30, ಕ್ರಿಸ್ ಜೋರ್ಡನ್ 2-44, ಲಿವಿಂಗ್‌ಸ್ಟೋನ್ 1-15, ಮೊಯಿನ್ ಅಲಿ 1-18)

ಇಂಗ್ಲೆಂಡ್: 20 ಓವರ್‌ಗಳಲ್ಲಿ 165/6

(ಜೋಸ್ ಬಟ್ಲರ್ 42, ಫಿಲ್ ಸಾಲ್ಟ್ 37, ಮೊಯಿನ್ ಅಲಿ 25, ಪ್ಯಾಟ್ ಕಮಿನ್ಸ್ 2-23, ಝಂಪಾ 2-28)

ಪಂದ್ಯಶ್ರೇಷ್ಠ: ಆ್ಯಡಮ್ ಝಂಪಾ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News