ಆಸ್ಟ್ರೇಲಿಯನ್ ಓಪನ್ ; ಕಾರ್ಲೊಸ್ ಅಲ್ಕರಾಝ್, ಮೆಡ್ವೆಡೆವ್ ಪ್ರಿ-ಕ್ವಾರ್ಟರ್ ಫೈನಲ್ ಗೆ
ಮೆಲ್ಬರ್ನ್: ಸ್ಪೇನ್ ಆಟಗಾರ ಕಾರ್ಲೊಸ್ ಅಲ್ಕರಾಝ್ ಹಾಗೂ ರಶ್ಯದ ಡೇನಿಯಲ್ ಮೆಡ್ವೆಡೆವ್ ಆಸ್ಟ್ರೇಲಿಯನ್ ಓಪನ್ ಟೆನಿಸ್ ಟೂರ್ನಿಯಲ್ಲಿ ಅಂತಿಮ-16ರ ಸುತ್ತು ಪ್ರವೇಶಿಸಿದ್ದಾರೆ.
ವಿಶ್ವದ ನಂ.2ನೇ ಆಟಗಾರ ಅಲ್ಕರಾಝ್ ಶನಿವಾರ ನಡೆದ ಪುರುಷರ ಸಿಂಗಲ್ಸ್ ನ ಮೂರನೇ ಸುತ್ತಿನ ಪಂದ್ಯದಲ್ಲಿ ಚೀನಾದ ಯುವ ಆಟಗಾರ ಶಾಂಗ್ ಜುನ್ಚೆಂಗ್ ಗಾಯಗೊಂಡು ನಿವೃತ್ತಿಯಾದ ಕಾರಣ ಮೊದಲ ಬಾರಿ ಆಸ್ಟ್ರೇಲಿಯನ್ ಓಪನ್ನಲ್ಲಿ 4ನೇ ಸುತ್ತು ತಲುಪಿದ್ದಾರೆ.
18ರ ಹರೆಯದ ಶಾಂಗ್ ಗಾಯಗೊಂಡು ನಿವೃತ್ತಿಯಾದಾಗ ಅಲ್ಕರಾಝ್ 6-1, 6-1, 1-0 ಸೆಟ್ ಗಳಿಂದ ಮುನ್ನಡೆಯಲ್ಲಿದ್ದರು. ರಾಡ್ ಲಾವೆರ್ ಅರೆನಾದಲ್ಲಿ ಏಕಪಕ್ಷೀಯವಾಗಿ ಸಾಗಿದ ಪಂದ್ಯವು ಕೇವಲ 66 ನಿಮಿಷಗಳಲ್ಲಿ ಕೊನೆಗೊಂಡಿತು.
ಕಳೆದ ವರ್ಷ ಗಾಯದ ಸಮಸ್ಯೆಯ ಕಾರಣ ಮೆಲ್ಬರ್ನ್ ಪಾರ್ಕ್ನಲ್ಲಿ ನಡೆದಿದ್ದ ಟೂರ್ನಮೆಂಟ್ ನಿಂದ ವಂಚಿತರಾಗಿದ್ದ ಅಲ್ಕರಾಝ್, ನಾನು ಕಳೆದ ವರ್ಷ ಟೂರ್ನಮೆಂಟ್ ನಿಂದ ವಂಚಿತನಾಗಿದ್ದೆ. ಮನೆಯಲ್ಲಿ ಕುಳಿತು ಪಂದ್ಯಗಳನ್ನು ವೀಕ್ಷಿಸಿದ್ದೆ. ಇದೀಗ ಎರಡನೇ ವಾರ ಮೆಲ್ಬರ್ನ್ನಲ್ಲಿ ಆಡಲು ಸಾಧ್ಯವಾಗಿರುವುದಕ್ಕೆ ಸಂತೋಷವಾಗಿದೆ. ನಾನು ಇದೇ ಮೊದಲ ಬಾರಿ ಆಸ್ಟ್ರೇಲಿಯದಲ್ಲಿ 4ನೇ ಸುತ್ತಿಗೆ ತಲುಪಿದ್ದು, ಇದು ನನ್ನ ಪಾಲಿಗೆ ವಿಶೇಷವಾಗಿದೆ ಎಂದರು.
ಎರಡು ಬಾರಿಯ ಗ್ರ್ಯಾನ್ಸ್ಲಾಮ್ ಚಾಂಪಿಯನ್ ಅಲ್ಕರಾಝ್ ಮುಂದಿನ ಸುತ್ತಿನಲ್ಲಿ ಸರ್ಬಿಯದ ಮಿಯೋಮಿರ್ ಕೆಕ್ಮನೋವಿಕ್ರನ್ನು ಎದುರಿಸಲಿದ್ದಾರೆ. ವಿಶ್ವದ 60ನೇ ರ್ಯಾಂಕಿನ ಮಿಯೋಮಿರ್ ಅಮೆರಿಕದ 14ನೇ ಶ್ರೇಯಾಂಕದ ಟೊಮಿ ಪೌಲ್ ರನ್ನು ಐದು ಸೆಟ್ ಗಳ ಅಂತರದಿಂದ ಸೋಲಿಸಿದ್ದರು.
ಮೆಡ್ವೆಡೆವ್ 4ನೇ ಸುತ್ತಿಗೆ ಲಗ್ಗೆ:
ಇದೇ ವೇಳೆ ಶನಿವಾರ ನಡೆದ ಮತ್ತೊಂದು ಪುರುಷರ ಸಿಂಗಲ್ಸ್ ನ ಮೂರನೇ ಸುತ್ತಿನ ಪಂದ್ಯದಲ್ಲಿ ಡೇನಿಯಲ್ ಮೆಡ್ವೆಡೆವ್ ಅವರು ಕೆನಡಾ ಆಟಗಾರ ಫೆಲಿಕ್ಸ್ ಅಗೆರ್ ಅಲಿಯಾಸಿಮ್ ರನ್ನು 6-3, 6-4, 6-3 ನೇರ ಸೆಟ್ ಗಳ ಅಂತರದಿಂದ ಸೋಲಿಸಿದರು.
ಎರಡನೇ ಸುತ್ತಿನ ಪಂದ್ಯದಲ್ಲಿ ತಡರಾತ್ರಿಯ ತನಕ ಮ್ಯಾರಥಾನ್ ಪಂದ್ಯವನ್ನಾಡಿ ದಣಿದಂತೆ ಕಂಡುಬಂದಿದ್ದ 3ನೇ ಶ್ರೇಯಾಂಕದ ಮೆಡ್ವೆಡೆವ್ ಎರಡು ಸೆಟ್ ಹಿನ್ನಡೆಯಿಂದ ಚೇತರಿಸಿಕೊಂಡು ಎದುರಾಳಿ ಎಮಿಲ್ ರುಸುವೂರಿ ಅವರನ್ನು ಸೋಲಿಸಿದ್ದರು.
ಶನಿವಾರ ನಡೆದ 3ನೇ ಸುತ್ತಿನ ಪಂದ್ಯದಲ್ಲಿ ಅಲಿಯಾಸಿಮ್ ರನ್ನು ಸುಲಭವಾಗಿ ಸೋಲಿಸಿದ ಮೆಡ್ವೆಡೆವ್ ಐದನೇ ಬಾರಿ ನಾಲ್ಕನೇ ಸುತ್ತು ತಲುಪಿದ್ದಾರೆ.
2021 ಹಾಗೂ 2022ರಲ್ಲಿ ಮೆಲ್ಬರ್ನ್ನಲ್ಲಿ ಸತತ ಎರಡು ಬಾರಿ ಫೈನಲ್ ನಲ್ಲಿ ಸೋತಿದ್ದ ಮೆಡ್ವೆಡೆವ್ ಅಂತಿಮ-16ರ ಸುತ್ತಿನ ಪಂದ್ಯದಲ್ಲಿ ಪೋರ್ಚುಗೀಸ್ನ ವಿಶ್ವದ ನಂ.69ನೇ ಆಟಗಾರ ನುನೋ ಬೋರ್ಗೆಸ್ ರನ್ನು ಎದುರಿಸಲಿದ್ದಾರೆ.