ಆಸ್ಟ್ರೇಲಿಯನ್ ಓಪನ್: ಎಚ್.ಎಸ್. ಪ್ರಣಯ್ ಫೈನಲ್ ಗೆ ಲಗ್ಗೆ
ಸಿಡ್ನಿ: ಭಾರತದ ಸ್ಟಾರ್ ಶಟ್ಲರ್ ಎಚ್.ಎಸ್. ಪ್ರಣಯ್ ಸಹ ಆಟಗಾರ ಪ್ರಿಯಾಂಶು ರಾಜಾವತ್ರನ್ನು ನೇರ ಗೇಮ್ ಗಳ ಅಂತರದಿಂದ ಮಣಿಸುವ ಮೂಲಕ ಆಸ್ಟ್ರೇಲಿಯನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಫೈನಲ್ ಗೆ ಪ್ರವೇಶಿಸಿದ್ದಾರೆ.
ಶನಿವಾರ 43 ನಿಮಿಷಗಳಲ್ಲಿ ಕೊನೆಗೊಂಡ ಪುರುಷರ ಸಿಂಗಲ್ಸ್ ಸೆಮಿ ಫೈನಲ್ ಪಂದ್ಯದಲ್ಲಿ ವಿಶ್ವದ ನಂ.9ನೇ ಆಟಗಾರ ಪ್ರಣಯ್ 21ರ ಹರೆಯದ ರಾಜಾವತ್ರ ಸವಾಲನ್ನು ಮೀರಿ ನಿಂತು 21-18, 21-12 ಗೇಮ್ ಗಳ ಅಂತರದಿಂದ ಜಯ ಸಾಧಿಸಿದರು.
ಸೂಪರ್-500 ಟೂರ್ನಮೆಂಟ್ ನಲ್ಲಿ ಇದೇ ಮೊದಲ ಬಾರಿ ಸೆಮಿ ಫೈನಲ್ ನಲ್ಲಿ ಕಾಣಿಸಿಕೊಂಡಿರುವ ಒರ್ಲಿಯನ್ಸ್ ಮಾಸ್ಟರ್ಸ್ ಚಾಂಪಿಯನ್ ರಾಜಾವತ್ ಆರನೇ ಶ್ರೇಯಾಂಕದ ಪ್ರಣಯ್ ವಿರುದ್ಧ ಮೊದಲ ಗೇಮ್ ನಲ್ಲಿ ಕಠಿಣ ಹೋರಾಟ ನೀಡಿದರು.
ಮೇನಲ್ಲಿ ಮಲೇಶ್ಯ ಮಾಸ್ಟರ್ಸ್ ಪ್ರಶಸ್ತಿಯನ್ನು ಜಯಿಸಿದ್ದ ಪ್ರಣಯ್ ತನ್ನೆಲ್ಲಾ ಅನುಭವವನ್ನು ಬಳಸಿಕೊಂಡು ಎರಡನೇ ಗೇಮ್ ನ್ನು ಸುಲಭವಾಗಿ ವಶಪಡಿಸಿಕೊಂಡು ಪಂದ್ಯವನ್ನು ಜಯಿಸಿದರು. ಪ್ರಣಯ್ ಫೈನಲ್ ಪಂದ್ಯದಲ್ಲಿ ಚೀನಾದ ವೆಂಗ್ ಹಾಂಗ್ ಯಾಂಗ್ರನ್ನು ಎದುರಿಸಲಿದ್ದಾರೆ.