ಭಾರತದ ವಿರುದ್ಧ ಚೆಂಡು ವಿರೂಪಗೊಳಿಸಿದ ಆರೋಪ: ಅಂಪೈರ್ ನಿರ್ಣಯ ಮೂರ್ಖತನದ್ದು ಎಂದು ಆಕ್ರೋಶ ವ್ಯಕ್ತಪಡಿಸಿದ ಇಶಾನ್ ಕಿಶನ್

Update: 2024-11-03 12:02 GMT

Photo: X/ (@toisports)

ಮ್ಯಾಕೆ: ಇಲ್ಲಿ ನಡೆಯುತ್ತಿರುವ ಭಾರತ-ಎ ಮತ್ತು ಆಸ್ಟ್ರೇಲಿಯ-ಎ ತಂಡದ ನಡುವಿನ ಟೆಸ್ಟ್ ಪಂದ್ಯದ ನಾಲ್ಕನೆ ದಿನ ಭಾರತ ತಂಡವು ಚೆಂಡನ್ನು ವಿರೂಪಗೊಳಿಸಿದ ಆರೋಪಕ್ಕೆ ಗುರಿಯಾಗಿದೆ. ಇದರಿಂದ ಕುಪಿತಗೊಂಡ ವಿಕೆಟ್ ಕೀಪರ್ ಇಶಾನ್ ಕಿಶಾನ್, ಅಂಪೈರ್ ಶಾನ್ ಕ್ರೇಗ್ ರೊಂದಿಗೆ ಮಾತಿನ ಚಕಮಕಿ ನಡೆಸಿದ್ದು, ಅದಕ್ಕಾಗಿ ಶಿಸ್ತು ಕ್ರಮಕ್ಕೊಳಗಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.

ರವಿವಾರ ಗ್ರೇಟ್ ಬ್ಯಾರಿಯರ್ ರೀಫ್ ಅರೆನಾ ಕ್ರೀಡಾಂಗಣದಲ್ಲಿ ನಾಲ್ಕನೆಯ ದಿನದಾಟ ಪ್ರಾರಂಭಗೊಂಡಾಗ, ಭಾರತೀಯ ಆಟಗಾರರು ಚೆಂಡನ್ನು ವಿರೂಪಗೊಳಿಸಿರುವುದರಿಂದ, ಚೆಂಡನ್ನು ಬದಲಿಸಬೇಕಾಗಿದೆ ಎಂಬ ಇಂಗಿತವನ್ನು ಅಂಪೈರ್ ಶಾನ್ ಕ್ರೇಗ್ ವ್ಯಕ್ತಪಡಿಸಿದರು.

ಈ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಭಾರತ ತಂಡದ ಆಟಗಾರರು ಹಾಗೂ ಅಧಿಕಾರಿಗಳ ನಡುವೆ ಮಾತಿನ ವಿನಿಮಯ ನಡೆಯಿತು.

ಈ ವೇಳೆ, “ಮತ್ತಷ್ಟು ಚರ್ಚೆಯ ಅಗತ್ಯವಿಲ್ಲ. ಈಗ ಆಟವಾಡೋಣ. ಇದು ಚರ್ಚೆಯಲ್ಲ” ಎಂದು ಅಂಪೈರ್ ಶಾನ್ ಕ್ರೇಗ್ ಭಾರತೀಯ ಆಟಗಾರರಿಗೆ ತಾಕೀತು ಮಾಡಿದರು. ಆ ಮಾತಿಗೆ ಪ್ರತ್ಯುತ್ತರ ನೀಡಿರುವ ಇಶಾನ್ ಕಿಶನ್, “ನಾವು ಹಾಗಾದರೆ ಈ ಚೆಂಡಿನಲ್ಲಿ ಆಡಬೇಕು. ಇದೊಂದು ಮೂರ್ಖ ನಿರ್ಧಾರ” ಎಂದು ಅಂಪೈರ್ ನಿರ್ಣಯವನ್ನು ಟೀಕಿಸಿದರು. ಈ ಮಾತಿನ ಚಕಮಕಿ ಸ್ಟಂಪ್ ಮೈಕ್ ನಲ್ಲಿ ಸೆರೆಯಾಗಿದೆ.

ಇಶಾನ್ ಕಿಶನ್ ಪ್ರತಿಕ್ರಿಯೆಗೆ ತೀಕ್ಷ್ಣ ಪ್ರತ್ಯುತ್ತರ ನೀಡಿದ ಶಾನ್ ಕ್ರೇಗ್, ಭಿನ್ನಮತ ವ್ಯಕ್ತಪಡಿಸಿದ್ದಕ್ಕೆ ನಿಮ್ಮ ವಿರುದ್ಧ ವರದಿ ನೀಡಲಾಗುವುದು. ಇದು ಅನುಚಿತ ನಡವಳಿಕೆಯಾಗಿದೆ ಎಂದು ಅವರಿಗೆ ಎಚ್ಚರಿಕೆ ನೀಡಿದರು.

ಒಂದು ವೇಳೆ ಭಾರತೀಯ ಆಟಗಾರರರೇನಾದರೂ ಉದ್ದೇಶಪೂರ್ವಕವಾಗಿ ಚೆಂಡನ್ನು ವಿರೂಪಗೊಳಿಸಿದ್ದರೆ, ಕ್ರಿಕೆಟ್ ಆಸ್ಟ್ರೇಲಿಯ ನೀತಿ ಸಂಹಿತೆಯ ಪ್ರಕಾರ, ಇಂತಹ ಕೃತ್ಯದಲ್ಲಿ ಪಾಲ್ಗೊಂಡ ಆಟಗಾರರ ವಿರುದ್ಧ ಬಲವಾದ ನಿಷೇಧಗಳು ಸೇರಿದಂತೆ ನಿರ್ಬಂಧಗಳನ್ನು ಹೇರಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News