ನೂತನ ಮುಖ್ಯ ಕೋಚ್ ನೇಮಕಾತಿ ನಡೆಸಲಿರುವ ಬಿಸಿಸಿಐ: ಜಯ್ ಶಾ
ಹೊಸದಿಲ್ಲಿ: ಭಾರತದ ಪುರುಷರ ಕ್ರಿಕೆಟ್ ತಂಡಕ್ಕೆ ಹೊಸ ಮುಖ್ಯ ಕೋಚ್‌ಗಾಗಿ ಬಿಸಿಸಿಐ ಶೀಘ್ರ ಹೊಸಬರನ್ನು ನೇಮಿಸಲು ಕ್ರಮಕೈಗೊಳ್ಳಲಿದೆ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಇಂದು ಹೇಳಿದ್ದಾರೆ. ತಂಡದ ಹಾಲಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಅವಧಿ ಜೂನ್ ತಿಂಗಳಿನಲ್ಲಿ ಕೊನೆಗೊಳ್ಳಲಿದೆ.
ನೂತನ ಕೋಚ್ ಹುದ್ದೆಗೆ ದ್ರಾವಿಡ್ ಕೂಡ ಅರ್ಜಿ ಸಲ್ಲಿಸಬಹುದು ಎಂದು ಹೇಳಿದ ಶಾ ಅದೇ ಸಮಯ ವಿದೇಶಿ ಕೋಚ್ ನೇಮಕಾತಿ ಸಾಧ್ಯತೆಯನ್ನು ಅಲ್ಲಗಳೆದಿಲ್ಲ.
ನೂತನ ಮುಖ್ಯ ಕೋಚ್ ನೇಮಕಾತಿಗೊಂಡ ನಂತರ ಬ್ಯಾಟಿಂಗ್, ಬೌಲಿಂಗ್ ಮತ್ತು ಫೀಲ್ಡಿಂಗ್ ಕೋಚಿಂಗ್ ಸಿಬ್ಬಂದಿಯನ್ನು ಅವರ ಸಲಹೆ ಪಡೆದು ನೇಮಿಸಲಾಗುವುದೆಂಬ ಮಾಹಿತಿ ಇದೆ.
ರಾಹುಲ್ ದ್ರಾವಿಡ್ ಅವರ ಗುತ್ತಿಗೆ ಅವಧಿಯನ್ನು ನವೆಂಬರ್ 2023 ರಲ್ಲಿ ವಿಸ್ತರಿಸಲಾಗಿತ್ತು.
“ರಾಹುಲ್ ಅವರ ಅವಧಿ ಜೂನ್ ತನಕ ಮಾತ್ರ. ಅವರು ಮತ್ತೆ ಅರ್ಜಿ ಸಲ್ಲಿಸಲು ಬಯಸಿದರೆ ಹಾಗೆಯೇ ಮಾಡಬಹುದು. ಹೊಸ ಕೋಚ್ ಭಾರತೀಯರೇ ಅಥವಾ ವಿದೇಶೀಯರೇ ಎಂದು ಹೇಳಲಾಗದು, ಅದು ಸಿಎಸಿ ನಿರ್ಧಾರಕ್ಕೆ ಬಿಟ್ಟಿದ್ದು ನಾವು ಜಾಗತಿಕ ಸಂಸ್ಥೆ,” ಎಂದು ಜಯ್ ಶಾ ಹೇಳಿದ್ದಾರೆ.