ಬೆಂಡಿಗೊ ಅಂತರ್‌ರಾಷ್ಟ್ರಿಯ ಬ್ಯಾಡ್ಮಿಂಟನ್ ಪಂದ್ಯಾವಳಿ | ತನ್ಯಾ ಹೇಮಂತ್‌ಗೆ ಮಹಿಳಾ ಸಿಂಗಲ್ಸ್ ಪ್ರಶಸ್ತಿ

Update: 2024-10-14 16:02 GMT

ತನ್ಯಾ ಹೇಮಂತ್‌ | PC : PTI 

ಬೆಂಗಳೂರು : ಆಸ್ಟ್ರೇಲಿಯದಲ್ಲಿ ನಡೆದ ಬೆಂಡಿಗೊ ಅಂತರ್‌ರಾಷ್ಟ್ರಿಯ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕರ್ನಾಟಕದ ತನ್ಯಾ ಹೇಮಂತ್ ಮಹಿಳೆಯರ ಸಿಂಗಲ್ಸ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಅವರು ರವಿವಾರ ನಡೆದ ಫೈನಲ್‌ನಲ್ಲಿ ಚೈನೀಸ್ ತೈಪೆಯ ಟುಂಗ್ ಸಿವೊಯು-ಟೋಂಗ್‌ರನ್ನು 21-17, 21-17 ಗೇಮ್‌ಗಳಿಂದ ಸೋಲಿಸಿದರು.

ಪಂದ್ಯಾವಳಿಯಲ್ಲಿ ಕೇವಲ ಒಂದು ಗೇಮ್ ಕಳೆದುಕೊಂಡಿರುವ (ಸೆಮಿಫೈನಲ್‌ನಲ್ಲಿ ಸಿಂಗಾಪುರದ ಯುವೆ ಯಾನ್ ಜಾಸ್ಲಿನ್ ಹೂಯಿ) ಬೆಂಗಳೂರಿನ ಹುಡುಗಿ, ಅಮೋಘ ಸ್ಥಿರತೆಯನ್ನು ತೋರಿಸಿದ್ದಾರೆ. ಫೈನಲ್‌ನಲ್ಲಿ, ಮೊದಲ ಗೇಮ್‌ನಲ್ಲಿ ಸ್ಪರ್ಧೆಯು ನಿಕಟವಾಗಿತ್ತು. ಒಂದು ಹಂತದಲ್ಲಿ ಅದು 16-16ರಲ್ಲಿ ಸಮಬಲದಲ್ಲಿತ್ತು. ಆರನೇ ಶ್ರೇಯಾಂಕದ ಟುಂಗ್, ತನ್ಯಾರಿಗೆ ಸವಾಲೊಡ್ಡಿದರು. ಆದರೆ, ಎರಡನೇ ಶ್ರೇಯಾಂಕದ ತನ್ಯಾ ಎರಡನೇ ಗೇಮ್‌ನ ಹೆಚ್ಚಿನ ಅವಧಿಯಲ್ಲಿ ಮುನ್ನಡೆಯಲ್ಲಿದ್ದರು. ಅವರು 41 ನಿಮಿಷಗಳಲ್ಲಿ ಪಂದ್ಯವನ್ನು ಗೆದ್ದರು.

‘‘ಪಂದ್ಯದ ಕಠಿಣ ಸಂದರ್ಭಗಳಲ್ಲಿ, ಅದರಲ್ಲೂ ಸೆಮಿಫೈನಲ್ ಮತ್ತು ಫೈನಲ್‌ಗಳಲ್ಲಿ ನಾನು ಆಡಿದ ರೀತಿಯ ಬಗ್ಗೆ ನನಗೆ ಸಂತೋಷವಾಗಿದೆ’’ ಎಂದು ತನ್ಯಾ ಹೇಳಿದರು.

ಇದು ಅವರ ಮೂರನೇ ಅಂತರ್‌ರಾಷ್ಟ್ರೀಯ ಪ್ರಶಸ್ತಿಯಾಗಿದೆ. ಅವರು ತನ್ನ ಚೊಚ್ಚಲ ಅಂತರ್‌ರಾಷ್ಟ್ರೀಯ ಪ್ರಶಸ್ತಿಯನ್ನು ಬೆಂಗಳೂರಿನಲ್ಲಿ 2022 ಅಕ್ಟೋಬರ್‌ನಲ್ಲಿ ಗೆದ್ದಿದ್ದರು. ಬಳಿಕ, ಕಳೆದ ವರ್ಷದ ಫೆಬ್ರವರಿಯಲ್ಲಿ ಇರಾನ್‌ನಲ್ಲಿ ತನ್ನ ಎರಡನೇ ಅಂತರ್‌ರಾಷ್ಟ್ರೀಯ ಪ್ರಶಸ್ತಿ ಗಳಿಸಿದರು.

2024ರ ಫೆಬ್ರವರಿಯಲ್ಲಿ ಅವರು ಅಝರ್‌ಬೈಜಾನ್ ಇಂಟರ್‌ನ್ಯಾಶನಲ್‌ನಲ್ಲಿ ಮತ್ತು ಮಾರ್ಚ್‌ನಲ್ಲಿ ಪೋಲ್ಯಾಂಡ್ ಓಪನ್‌ನಲ್ಲಿ ರನ್ನರ್ಸ್‌-ಅಪ್ ಆದರು. ಬೆಂಡಿಗೊ ಪಂದ್ಯಾವಳಿಯ ಮೊದಲು, ನಡೆದ ನಾಲ್ಕು ಪಂದ್ಯಾವಳಿಗಳಲ್ಲಿ ಅವರು ಆರಂಭದಲ್ಲೇ ಹೊರಬಿದ್ದಿದ್ದರು.

ಪುರುಷರ ಡಬಲ್ಸ್ ಫೈನಲ್‌ನಲ್ಲಿ, ಅಗ್ರ ಶ್ರೇಯಾಂಕದ ಭಾರತದ ಹರಿಹರನ್ ಅಮ್ಸಕರುಣನ್ ಮತ್ತು ರುಬನ್ ಕುಮಾರ್ ರೆತಿನಸಬಾಪತಿ ಜೋಡಿಯು ಚೈನೀಸ್ ತೈಪೆಯ ಐದನೇ ಶ್ರೇಯಾಂಕದ ಪೊ ಲಿ-ವೇ ಮತ್ತು ಚೆನ್ ಕುವಾನ್ ವಿರುದ್ಧ 17-21, 14-21 ಗೇಮ್‌ಗಳಿಂದ ಸೋಲನುಭವಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News