ನ್ಯೂಝಿಲ್ಯಾಂಡ್ ವಿರುದ್ಧ ಟೆಸ್ಟ್ ಸರಣಿ | ವೈಯಕ್ತಿಕ ಮೈಲಿಗಲ್ಲುಗಳ ನಿರೀಕ್ಷೆಯಲ್ಲಿ ಕೊಹ್ಲಿ, ವಿಲಿಯಮ್ಸನ್, ಅಶ್ವಿನ್, ಕುಲದೀಪ್

Update: 2024-10-14 15:42 GMT

ಕೊಹ್ಲಿ, ವಿಲಿಯಮ್ಸನ್, ಅಶ್ವಿನ್, ಕುಲದೀಪ್| PC : PTI 

ಚೆನ್ನೈ : ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಅಕ್ಟೋಬರ್ 16ರಿಂದ ಆರಂಭವಾಗಲಿರುವ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಟೀಮ್ ಇಂಡಿಯಾವು ನ್ಯೂಝಿಲ್ಯಾಂಡ್ ಕ್ರಿಕೆಟ್ ತಂಡವನ್ನು ಎದುರಿಸಲು ಸಜ್ಜಾಗಿದೆ.

ಬಾಂಗ್ಲಾದೇಶ ವಿರುದ್ಧ 2-0 ಅಂತರದಿಂದ ಜಯಶಾಲಿಯಾಗಿರುವ ಭಾರತವು ಆತ್ಮವಿಶ್ವಾಸದೊಂದಿಗೆ ಈ ಸರಣಿಗೆ ಪ್ರವೇಶಿಸುತ್ತಿದೆ. ಮತ್ತೊಂದೆಡೆ ನ್ಯೂಝಿಲ್ಯಾಂಡ್ ತಂಡ ಶ್ರೀಲಂಕಾ ವಿರುದ್ಧ ಸರಣಿ ಸೋಲಿನಿಂದ ಹೊರಬರುವತ್ತ ಚಿತ್ತಹರಿಸಿದೆ.

ಎರಡೂ ತಂಡಗಳು ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಥಾನ ಪಡೆಯುವ ರೇಸ್‌ನಲ್ಲಿವೆ. ಈ ಸರಣಿಯು ಡಬ್ಲ್ಯುಟಿಸಿ ಅಂಕಪಟ್ಟಿಯಲ್ಲಿ ಅಗ್ರ-2 ಸ್ಥಾನ ಪಡೆಯಲು ನಿರ್ಣಾಯಕವಾಗಿದೆ.

ಮುಂದಿನ ಮೂರು ವಾರಗಳ ಕಾಲ ನಡೆಯುವ ಪ್ರಸಕ್ತ ಸರಣಿಯು ಎರಡೂ ತಂಡದ ಆಟಗಾರರಿಗೆ ಮಹತ್ವದ ವೈಯಕ್ತಿಕ ಮೈಲಿಗಲ್ಲುಗಳನ್ನು ತಲುಪಲು ಸುವರ್ಣಾವಕಾಶವಾಗಿದೆ.

►ಕೊಹ್ಲಿ 9,000 ರನ್: ವಿರಾಟ್ ಕೊಹ್ಲಿಗೆ 9,000 ಟೆಸ್ಟ್ ರನ್ ತಲುಪಲು ಕೇವಲ 53 ರನ್ ಅಗತ್ಯವಿದೆ. ಕೊಹ್ಲಿ ಈ ಮೈಲಿಗಲ್ಲು ತಲುಪಿದ ಭಾರತದ 4ನೇ ಬ್ಯಾಟರ್ ಎನಿಸಿಕೊಳ್ಳಲಿದ್ದಾರೆ. ಕೊಹ್ಲಿ ಅವರು ಸಚಿನ್ ತೆಂಡುಲ್ಕರ್(15,921 ರನ್), ರಾಹುಲ್ ದ್ರಾವಿಡ್(13,265 ರನ್)ಹಾಗೂ ಸುನೀಲ್ ಗವಾಸ್ಕರ್(10,122 ರನ್)ಅವರನ್ನೊಳಗೊಂಡ ವಿಶೇಷ ಗುಂಪಿಗೆ ಸೇರಲಿದ್ದಾರೆ.

►9,000 ರನ್ ಪೂರೈಸುವ ಹಾದಿಯಲ್ಲಿ ವಿಲಿಯಮ್ಸನ್: ಕೇನ್ ವಿಲಿಯಮ್ಸನ್ ಅವರು ಟೆಸ್ಟ್ ಕ್ರಿಕೆಟ್‌ನಲ್ಲಿ 9,000 ರನ್ ಗಳಿಸಿದ ನ್ಯೂಝಿಲ್ಯಾಂಡ್‌ನ ಮೊದಲ ಬ್ಯಾಟರ್ ಆಗಲು ಸಜ್ಜಾಗಿದ್ದಾರೆ. ಅವರಿಗೆ ಈ ಮೈಲಿಗಲ್ಲು ತಲುಪಲು ಕೇವಲ 119 ರನ್ ಬೇಕಾಗಿದೆ. ವಿಲಿಯಮ್ಸನ್ ಈಗಾಗಲೇ ಟೆಸ್ಟ್ ಪಂದ್ಯ(8,881 ರನ್)ಹಾಗೂ ಎಲ್ಲ ಮಾದರಿಯ ಕ್ರಿಕೆಟ್‌ನಲ್ಲಿ(18,266 ರನ್)ಗರಿಷ್ಠ ರನ್ ಗಳಿಸಿದ ನ್ಯೂಝಿಲ್ಯಾಂಡ್‌ನ ಆಟಗಾರ ಎನಿಸಿಕೊಂಡಿದ್ದಾರೆ.

►ಕುಂಬ್ಳೆ ದಾಖಲೆ ಮುರಿಯುವ ವಿಶ್ವಾಸದಲ್ಲಿ ಅಶ್ವಿನ್: ಭಾರತದ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಅತ್ಯಂತ ಹೆಚ್ಚು ಐದು ವಿಕೆಟ್ ಹಾಗೂ 10 ವಿಕೆಟ್ ಗೊಂಚಲು ಪಡೆಯುವ ಮೂಲಕ ಅಶ್ವಿನ್ ಅವರು ಅನಿಲ್ ಕುಂಬ್ಳೆ ದಾಖಲೆಯನ್ನು ಮುರಿಯುವ ವಿಶ್ವಾಸದಲ್ಲಿದ್ದಾರೆ. ಈ ಇಬ್ಬರೂ ಸ್ಪಿನ್ನರ್‌ಗಳು ಸದ್ಯ 37 ಐದು ವಿಕೆಟ್ ಗೊಂಚಲು ಹಾಗೂ 8 ಬಾರಿ 10 ವಿಕೆಟ್ ಗೊಂಚಲು ಕಬಳಿಸಿ ಸಮಬಲ ಸಾಧಿಸಿದ್ದಾರೆ. ಒಂದು ವೇಳೆ ಅಶ್ವಿನ್ ಇನ್ನೊಂದು ಐದು ವಿಕೆಟ್ ಗೊಂಚಲು ಪಡೆದರೆ ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳ ಪಟ್ಟಿಯಲ್ಲಿ ಮುತ್ತಯ್ಯ ಮುರಳೀಧರನ್(67)ನಂತರ ಎರಡನೇ ಸ್ಥಾನಕ್ಕೇರಲಿದ್ದಾರೆ. ಇನ್ನೊಂದು 10 ವಿಕೆಟ್ ಗೊಂಚಲು ಪಡೆದರೆ ಅಶ್ವಿನ್ ಅವರು ಟೆಸ್ಟ್ ಪಂದ್ಯಗಳಲ್ಲಿ ಹೆಚ್ಚು ಬಾರಿ 10 ವಿಕೆಟ್ ಗೊಂಚಲು ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ರಿಚರ್ಡ್ ಹ್ಯಾಡ್ಲಿ ಹಾಗೂ ರಂಗನ ಹೆರಾತ್‌ರೊಂದಿಗೆ ಮೂರನೇ ಸ್ಥಾನ ಹಂಚಿಕೊಳ್ಳಲಿದ್ದಾರೆ.

►300 ವಿಕೆಟ್ ನಿರೀಕ್ಷೆಯಲ್ಲಿ ಕುಲದೀಪ್: ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್‌ಗೆ ಅಂತರ್‌ರಾಷ್ಟ್ರೀಯ ಕ್ರಿಕೆಟ್‌ನಲ್ಲಿ 300 ವಿಕೆಟ್ ಪೂರೈಸಲು ಕೇವಲ ಆರು ವಿಕೆಟ್‌ಗಳ ಅಗತ್ಯವಿದೆ. ಯಾದವ್ ಈ ತನಕ ಏಕದಿನ ಕ್ರಿಕೆಟ್‌ನಲ್ಲಿ 172 ವಿಕೆಟ್, ಟೆಸ್ಟ್‌ನಲ್ಲಿ 53 ಹಾಗೂ ಟಿ-20 ಕ್ರಿಕೆಟ್‌ನಲ್ಲಿ 69 ವಿಕೆಟ್‌ಗಳನ್ನು ಉರುಳಿಸಿದ್ದಾರೆ. ಈ ಮೈಲಿಗಲ್ಲು ತಲುಪಿದ ಭಾರತದ 13ನೇ ಬೌಲರ್ ಎನಿಸಿಕೊಳ್ಳಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News