ಸಂಜು ಸ್ಯಾಮ್ಸನ್‌ಗೆ ಭವ್ಯ ಸ್ವಾಗತ ನೀಡಿದ ಶಶಿ ತರೂರ್
ಹೊಸದಿಲ್ಲಿ : ಬಾಂಗ್ಲಾದೇಶದ ವಿರುದ್ಧದ ಪಂದ್ಯದಲ್ಲಿ ತನ್ನ ಚೊಚ್ಚಲ ಸ್ಫೋಟಕ ಟಿ20 ಶತಕ ಸಿಡಿಸಿರುವ ಭಾರತೀಯ ಕ್ರಿಕೆಟ್ ತಂಡದ ಆಟಗಾರ ಸಂಜು ಸ್ಯಾಮ್ಸನ್ ಕೇರಳಕ್ಕೆ ಬಂದಾಗ ತಿರುವನಂತಪುರಮ್ ಸಂಸದ ಶಶಿ ತರೂರ್ ಆತ್ಮೀಯವಾಗಿ ಸ್ವಾಗತಿಸಿದ್ದಾರೆ. ಸೋಮವಾರ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ತರೂರ್, ತಮ್ಮ ಭೇಟಿಯ ಚಿತ್ರಗಳನ್ನು ಹಾಕಿದ್ದಾರೆ.
‘‘ಬಾಂಗ್ಲಾದೇಶದ ವಿರುದ್ಧ ಅಮೋಘ ಶತಕ ಬಾರಿಸಿದ ಬಳಿಕ ತಿರುವನಂತಪುರಮ್‌ಗೆ ಮರಳಿರುವ ಸಂಜು ಸ್ಯಾಮ್ಸನ್‌ರಿಗೆ ಹೀರೋ ಮಾದರಿಯ ಸ್ವಾಗತ ನೀಡಲು ಸಂತೋಷಪಡುತ್ತೇನೆ. ಅವರನ್ನು ಭಾರತೀಯ ಬಣ್ಣಗಳನ್ನು ಹೊಂದಿರುವ ‘ಪೊನ್ನಡ’ (ಸನ್ಮಾನಕ್ಕೆ ಬಳಸುವ ನೀಲಿ ಶಾಲು)ದಿಂದ ಗೌರವಿಸಿದೆ!’’ ಎಂದು ಅವರು ಬರೆದಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಟಿ20 ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಕೇವಲ 47 ಎಸೆತಗಳಲ್ಲಿ 111 ರನ್‌ಗಳನ್ನು ಗಳಿಸಿದ್ದರು. ಅದರೊಂದಿಗೆ ಭಾರತವು 6 ವಿಕೆಟ್‌ಗಳ ನಷ್ಟಕ್ಕೆ ದಾಖಲೆಯ 297 ರನ್ ಗಳಿಸಿತ್ತು. ಇದು ಅಂತರ್‌ರಾಷ್ಟ್ರೀಯ ಟಿ20 ಇತಿಹಾಸದಲ್ಲಿ ಐಸಿಸಿಯ ಪೂರ್ಣ ಸದಸ್ಯ ದೇಶವೊಂದು ಬಾರಿಸಿರುವ ಗರಿಷ್ಠ ಮೊತ್ತವಾಗಿದೆ.
ಏರಿಳಿತಗಳಲ್ಲಿ ತನ್ನ ಪರವಾಗಿ ನಿಂತಿರುವ ತಂಡದ ಆಡಳಿತಕ್ಕೆ ಸ್ಯಾಮ್ಸನ್ ಕೃತಜ್ಞತೆ ಸಲ್ಲಿಸಿದರು. ‘‘ಏನೇ ಆದರೂ, ನಾವು ನಿಮ್ಮನ್ನು ಬೆಂಬಲಿಸುತ್ತೇವೆ ಎಂದು ತಂಡದ ನಾಯಕತ್ವ ಹೇಳಿದೆ. ಅವರು ಬಾಯಿ ಮಾತಿನಲ್ಲಿ ಮಾತ್ರವಲ್ಲ, ಕೃತಿಯಲ್ಲೂ ಅದನ್ನು ಮಾಡಿತೋರಿಸಿದ್ದಾರೆ. ಕಳೆದ ಸರಣಿಯಲ್ಲಿ, ನಾನು ಎರಡು ಬಾರಿ ಸೊನ್ನೆ ಸಂಪಾದಿಸಿದೆ ಮತ್ತು ಮುಂದೆ ಏನಾಗಬಹುದು ಎಂದು ಯೋಚಿಸುತ್ತಾ ಕೇರಳಕ್ಕೆ ಮರಳಿದೆ. ಆದರೆ, ಈಗ ಮತ್ತೆ ನಾನು ಇಲ್ಲಿದ್ದೇನೆ’’ ಎಂದು ಅವರು ಹೇಳಿದರು.
ತಂಡದ ನಾಯಕತ್ವವು ನನ್ನ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಕೃತಜ್ಞನಾಗಿದ್ದೇನೆ ಎಂದು ಅವರು ನುಡಿದರು.