ಭಾರತ ಹಾಗೂ ನ್ಯೂಝಿಲ್ಯಾಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಭೀತಿ
ಬೆಂಗಳೂರು : ಭಾರತ ಹಾಗೂ ನ್ಯೂಝಿಲ್ಯಾಂಡ್ ನಡುವೆ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರ ನಿಗದಿಯಾಗಿರುವ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ.
ಮಂಗಳವಾರ ಬೆಳಗ್ಗೆ ಭಾರತೀಯ ಕ್ರಿಕೆಟ್ ತಂಡ ಯೋಜಿಸಿದ್ದ ತರಬೇತಿ ಚಟುವಟಿಕೆಯು ಮಳೆಯಿಂದಾಗಿ ರದ್ದಾಗಿದೆ. ಆದರೆ ಮೊದಲ ಟೆಸ್ಟ್ ಪಂದ್ಯದ ಎಲ್ಲ ಐದು ದಿನಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು ಸಹಿತ ಮಳೆಯಾಗುವ ಮುನ್ಸೂಚನೆ ನೀಡಲಾಗಿದೆ.
ಸ್ಥಳೀಯ ಹವಾಮಾನ ಪೋರ್ಟಲ್ ಪ್ರಕಾರ, ಬೆಂಗಳೂರಿನಲ್ಲಿ ಅ.16ರಿಂದ 18ರ ತನಕ ಭಾರೀ ಮಳೆಯಾಗಲಿದೆ. ಪಂದ್ಯದ ಕೊನೆಯ ಎರಡು ದಿನ ಮಳೆ ಬಿಡುವು ನೀಡಬಹುದು ಎಂದಿದೆ.
ಪ್ರತಿಕೂಲ ಹವಾಗುಣ ಉಭಯ ತಂಡಗಳ ಅಭ್ಯಾಸಕ್ಕೆ ಅಡ್ಡಿಯಾಗಿದ್ದು, ಮಂಗಳವಾರ ಬೆಳಗ್ಗೆ 11:15ಕ್ಕೆ ಆರಂಭವಾಗಬೇಕಾಗಿದ್ದ ಭಾರತದ ಅಭ್ಯಾಸದ ಸೆಶನ್ ಅನ್ನು ರದ್ದುಪಡಿಸಲಾಗಿದೆ.
ನ್ಯೂಝಿಲ್ಯಾಂಡ್ ತಂಡ ಮಧ್ಯಾಹ್ನ 1:30ಕ್ಕೆ ನಿಗದಿಪಡಿಸಿದ್ದ ತರಬೇತಿ ಸೆಶನ್ ಕೂಡ ತೇವಾಂಶಭರಿತ ವಾತಾವರಣದಿಂದಾಗಿ ಸಾಧ್ಯವಾಗಿಲ್ಲ.
ಬಾಂಗ್ಲಾದೇಶ ವಿರುದ್ಧ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿರುವ ಭಾರತ ತಂಡವು ಕಿವೀಸ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿಯನ್ನಾಡಲು ಸಜ್ಜಾಗಿದೆ. ಕಾನ್ಪುರದಲ್ಲಿ ನಡೆದಿದ್ದ ಬಾಂಗ್ಲಾ ವಿರುದ್ಧದ 2ನೇ ಟೆಸ್ಟ್ ಪಂದ್ಯ ಕೂಡ ಮಳೆಬಾಧಿತವಾಗಿತ್ತು. ಎರಡು ಸಂಪೂರ್ಣ ದಿನದಾಟವು ಮಳೆಗಾಹುತಿಯಾಗಿದ್ದರೂ ಭಾರತವು ಪಂದ್ಯವನ್ನು ಜಯಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಟೇಬಲ್‌ನಲ್ಲಿ ಅಗ್ರ ಸ್ಥಾನ ಪಡೆದಿತ್ತು.
ಪಂದ್ಯದ ಮೊದಲ ಮೂರು ದಿನಗಳ ಕಾಲ ಬೆಂಗಳೂರಿನಲ್ಲಿ ನಿರಂತರ ಮಳೆ ಸುರಿಯಲಿದೆ. ಕೊನೆಯ 2 ದಿನಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು ಎಂದು ಕರ್ನಾಟಕದ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ.
ನ್ಯೂಝಿಲ್ಯಾಂಡ್ ತಂಡ ಇತ್ತೀಚೆಗೆ ಗ್ರೇಟರ್‌ನೊಯ್ಡಾದಲ್ಲಿ ಅಫ್ಘಾನಿಸ್ತಾನ ವಿರುದ್ಧ ಆಡಬೇಕಾಗಿದ್ದ ಏಕೈಕ ಟೆಸ್ಟ್ ಪಂದ್ಯವು ನಿರಂತರ ಮಳೆಯಿಂದಾಗಿ ರದ್ದಾಗಿತ್ತು.