ಎರಡನೇ ಟೆಸ್ಟ್ | ಇಂಗ್ಲೆಂಡ್ ವಿರುದ್ಧ ಪಾಕಿಸ್ತಾನ 259/5
ಮುಲ್ತಾನ್ : ತನ್ನ ಪಾದಾರ್ಪಣೆ ಪಂದ್ಯದಲ್ಲೇ 118 ರನ್ ಗಳಿಸಿದ ಕಾಮ್ರಾನ್ ಗುಲಾಮ್ ನೆರವಿನಿಂದ ಮಂಗಳವಾರ ಆರಂಭವಾದ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡ ಇಂಗ್ಲೆಂಡ್ ವಿರುದ್ಧ ಮೊದಲ ದಿನದಾಟದಲ್ಲಿ ಗೌರವಾರ್ಹ ಮೊತ್ತ ಗಳಿಸಿದೆ.
ಮುಲ್ತಾನ್ ಕ್ರಿಕೆಟ್ ಸ್ಟೇಡಿಯಮ್ ನಲ್ಲಿ ಟಾಸ್ ಜಯಿಸಿದ ಪಾಕಿಸ್ತಾನ ತಂಡ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. 19 ರನ್‌ಗೆ 2 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿದ್ದ ಪಾಕಿಸ್ತಾನಕ್ಕೆ ಆಸರೆಯಾದ 29ರ ಹರೆಯದ ಗುಲಾಮ್ 224 ಎಸೆತಗಳಲ್ಲಿ 11 ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿದರು. ದಿನದಾಟದಂತ್ಯಕ್ಕೆ ಪಾಕಿಸ್ತಾನವು 90 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 259 ರನ್ ಗಳಿಸಲು ಪ್ರಮುಖ ಪಾತ್ರವಹಿಸಿದರು.
ಪಾಕಿಸ್ತಾನ ತಂಡವು ಆರಂಭಿಕ ಬ್ಯಾಟರ್ ಅಬ್ದುಲ್ಲಾ ಶಫೀಕ್(7 ರನ್)ಹಾಗೂ ನಾಯಕ ಶಾನ್ ಮಸೂದ್(3 ರನ್)ವಿಕೆಟನ್ನು ಅಲ್ಪ ಮೊತ್ತಕ್ಕೆ ಕಳೆದುಕೊಂಡಿತು. ಆಗ ಇನ್ನೋರ್ವ ಆರಂಭಿಕ ಆಟಗಾರ ಸಯೀಮ್ ಅಯ್ಯೂಬ್(77 ರನ್, 160 ಎಸೆತ, 7 ಬೌಂಡರಿ)ಜೊತೆ ಕೈಜೋಡಿಸಿದ ಗುಲಾಮ್ 3ನೇ ವಿಕೆಟ್‌ಗೆ 149 ರನ್ ಜೊತೆಯಾಟದಲ್ಲಿ ಭಾಗಿಯಾದರು. ಅಯ್ಯೂಬ್ ಜೀವನಶ್ರೇಷ್ಠ ಇನಿಂಗ್ಸ್ ಆಡಿ ಔಟಾದ ನಂತರ ಮುಹಮ್ಮದ್ ರಿಝ್ವಾನ್(ಔಟಾಗದೆ 37)ಅವರೊಂದಿಗೆ ಇನ್ನೂ 65 ರನ್ ಸೇರಿಸಿದರು.
ಮೊದಲು ಬ್ಯಾಟಿಂಗ್ ಮಾಡುವ ಪಾಕಿಸ್ತಾನದ ನಾಯಕ ಮಸೂದ್ ನಿರ್ಧಾರವು ಕೈಕೊಟ್ಟಿತು. ಕೇವಲ 5 ಓವರ್ ವೇಗದ ಬೌಲಿಂಗ್‌ಗೆ ಆದ್ಯತೆ ನೀಡಿದ ನಾಯಕ ಬೆನ್ ಸ್ಟೋಕ್ಸ್ ಆ ನಂತರ ಸ್ಪಿನ್ನರ್‌ಗಳನ್ನು ದಾಳಿಗಿಳಿಸಿದರು.
ಜಾಕ್ ಲೀಚ್(2-92)ಅವರು ಅಬ್ದುಲ್ಲಾ ಶಫೀಕ್ ಹಾಗೂ ಶಾನ್ ಮಸೂದ್‌ರನ್ನು ಬೇಗನೆ ಔಟ್ ಮಾಡಿದರು. ಆಗ ಪಾಕಿಸ್ತಾನದ ಸ್ಥಿತಿ ಶೋಚನೀಯವಾಗಿತ್ತು.
ಆಗ ಯಾವುದೇ ಭೀತಿ ಇಲ್ಲದೆ ಬ್ಯಾಟ್ ಬೀಸಿದ ಕಾಮ್ರಾನ್ ಗುಲಾಮ್ ಅವರು ಲೀಚ್ ಬೌಲಿಂಗ್‌ನಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿದರು. ಲಂಚ್ ವಿರಾಮದ ನಂತರ ಗುಲಾಮ್ ಹಾಗೂ ಸಯೀಮ್ ಇನಿಂಗ್ಸ್ ಕಟ್ಟಿದರು. ಗುಲಾಮ್ ತನ್ನ ಚೊಚ್ಚಲ ಅರ್ಧಶತಕ ಪೂರೈಸಿದರು. 79 ರನ್ ಗಳಿಸಿದ್ದಾಗ ಬೆನ್ ಡಕೆಟ್‌ರಿಂದ ಜೀವದಾನ ಪಡೆದ ಗುಲಾಮ್ ಅವರು ಜೋ ರೂಟ್ ಬೌಲಿಂಗ್‌ನಲ್ಲಿ ಬೌಂಡರಿ ಗಳಿಸಿ ಶತಕವನ್ನು ತಲುಪಿದರು. ತನ್ನ ಮೊದಲ ಟೆಸ್ಟ್ ಪಂದ್ಯದಲ್ಲೇ ಶತಕ ಗಳಿಸಿದ ಪಾಕಿಸ್ತಾನದ 12ನೇ ಬ್ಯಾಟರ್ ಎನಿಸಿಕೊಂಡರು. ಆಫ್ ಸ್ಪಿನ್ನರ್ ಶುಐಬ್ ಬಶೀರ್(1-66) ಅವರು ಗುಲಾಮ್ ರನ್ನು ಕ್ಲೀನ್‌ಬೌಲ್ಡ್ ಮಾಡಿ ಗಮನಾರ್ಹ ಇನಿಂಗ್ಸ್‌ಗೆ ತೆರೆ ಎಳೆದರು.
ಗುಲಾಮ್ ಫಾರ್ಮ್ ಕಳೆದುಕೊಂಡಿರುವ ಬಾಬರ್ ಆಝಮ್ ಬದಲಿಗೆ 4ನೇ ಕ್ರಮಾಂಕದಲ್ಲಿ ಆಡಿದರು.
ದಿನದಾಟದಂತ್ಯಕ್ಕೆ ರಿಝ್ವಾನ್ ಹಾಗೂ ಸಲ್ಮಾನ್ ಆಘಾ(7 ರನ್)ಕ್ರೀಸ್ ಕಾಯ್ದುಕೊಂಡಿದ್ದಾರೆ.
ಪಾಕಿಸ್ತಾನದ ಶ್ರೇಷ್ಠ ಆಟಗಾರ ಬಾಬರ್ ಆಝಮ್ ಬದಲಿಗೆ ಆಡಿ ಶತಕ ಗಳಿಸಿದ್ದು ತುಂಬಾ ಖುಷಿಕೊಟ್ಟಿದೆ ಎಂದು 2020ರ ದೇಶೀಯ ಋತುವಿನಲ್ಲಿ 1,249 ರನ್ ಗಳಿಸಿ ಕೊನೆಗೂ ಪಾಕಿಸ್ತಾನ ತಂಡದಲ್ಲಿ ಆಡುವ ಅವಕಾಶ ಪಡೆದಿದ್ದ ಗುಲಾಮ್ ಹೇಳಿದ್ದಾರೆ.
ಗಾಯದ ಸಮಸ್ಯೆಯಿಂದ ಮೊದಲ ಪಂದ್ಯದಿಂದ ಹೊರಗುಳಿದಿದ್ದ ಬೆನ್ ಸ್ಟೋಕ್ಸ್ ರನ್ನು ಇಂಗ್ಲೆಂಡ್ 2ನೇ ಪಂದ್ಯದಲ್ಲಿ ಕಣಕ್ಕಿಳಿಸಿತು.
ಮತ್ತೊಂದೆಡೆ ಪಾಕಿಸ್ತಾನ ತಂಡ ಆಡುವ ಬಳಗದಲ್ಲಿ ಮಹತ್ವದ ಬದಲಾವಣೆಗಳನ್ನು ಮಾಡಿದ್ದು, ಮಾಜಿ ನಾಯಕ ಬಾಬರ್ ಆಝಮ್ ಹಾಗೂ ವೇಗಿಗಳಾದ ಶಾಹೀನ್ ಅಫ್ರಿದಿ ಹಾಗೂ ನಸೀಮ್ ಶಾರನ್ನು ಕೈಬಿಟ್ಟಿದೆ.
►ಸಂಕ್ಷಿಪ್ತ ಸ್ಕೋರ್
ಪಾಕಿಸ್ತಾನ ಮೊದಲ ಇನಿಂಗ್ಸ್: 259/5
(ಕಾಮ್ರಾನ್ ಗುಲಾಮ್ 118, ಸಯೀಮ್ ಅಯ್ಯೂಬ್ 77, ಮುಹಮ್ಮದ್ ರಿಝ್ವಾನ್ ಔಟಾಗದೆ 37, ಜಾಕ್ ಲೀಚ್ 2-92, ಬ್ರೆಂಡನ್ ಕಾರ್ಸ್ 1-14)