ಏಕದಿನ ಕ್ರಿಕೆಟ್ ನಲ್ಲಿ ಅತ್ಯಂತ ದುಬಾರಿ ಬೌಲರ್ ಎನಿಸಿಕೊಂಡ ಬಾಸ್ ಡಿ ಲೀಡ್
ಹೊಸದಿಲ್ಲಿ: ಒಂದೆಡೆ ಗ್ಲೆನ್ ಮ್ಯಾಕ್ಸ್ ವೆಲ್ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ವೇಗದ ಶತಕ(40 ಎಸೆತಗಳಲ್ಲಿ)ಗಳಿಸಿ ದಾಖಲೆ ನಿರ್ಮಿಸಿದರೆ ಮತ್ತೊಂದೆಡೆ ನೆದರ್ಲ್ಯಾಂಡ್ಸ್ ಬೌಲರ್ ಬಾಸ್ ಡೆ ಲೀಡೆ 50 ಓವರ್ ಮಾದರಿಯ ಕ್ರಿಕೆಟ್ ನಲ್ಲಿ ಅತ್ಯಂತ ದುಬಾರಿ ಬೌಲರ್ ಎಂಬ ಹಣೆಪಟ್ಟಿ ಕಟ್ಟಿಕೊಂಡಿದ್ದಾರೆ.
ಲೀಡ್ 10 ಓವರ್ ಗಳಲ್ಲಿ 115 ರನ್ ಬಿಟ್ಟುಕೊಟ್ಟು ಪುರುಷರ ಏಕದಿನ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಕಳಪೆ ಬೌಲಿಂಗ್ ಮಾಡಿದ ಬೌಲರ್ ಎನಿಸಿಕೊಂಡರು.
23ರ ಹರೆಯದ ಲೀಡ್ ಅರುಣ್ ಜೇಟ್ಲಿ ಸ್ಟೇಡಿಯಮಂಲ್ಲಿ ಮ್ಯಾಕ್ಸ್ ವೆಲ್ ರಿಂದ ತೀವ್ರ ದಂಡನೆಗೆ ಒಳಗಾದರು. ಲೀಡೆ 10 ಓವರ್ ಕೋಟಾದಲ್ಲಿ 115 ರನ್ ಗೆ 2 ವಿಕೆಟ್ ಪಡೆದರು. 13 ಬೌಂಡರಿ ಹಾಗೂ 6 ಸಿಕ್ಸರ್ ನೀಡಿದರು. ಪ್ರತಿ ಓವರಿಗೆ 11 ರನ್ ನೀಡಿದರು.
ಲೀಡೆ ಅವರು ಆಸ್ಟ್ರೇಲಿಯದ ಮಿಕ್ ಲೇವಿಸ್(2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ)ಹಾಗೂ ಆಡಂ ಝಾಂಪ ದಾಖಲೆ ಮುರಿದರು. ಈ ಇಬ್ಬರು ಬೌಲರ್ ಗಳು ತಲಾ 113 ರನ್ ಬಿಟ್ಟುಕೊಟ್ಟಿದ್ದರು. ಆಸೀಸ್ ಸ್ಪಿನ್ನರ್ ಝಾಂಪ ದುಬಾರಿ ಬೌಲರ್ಗಳ ಪಟ್ಟಿಯಲ್ಲಿ ಇದೀಗ 3ನೇ ಸ್ಥಾನ ಪಡೆದಿದ್ದಾರೆ. ಝಂಪಾ ಈ ವರ್ಷ ಸೆಂಚೂರಿಯನ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ವಿಕೆಟ್ ಪಡೆಯದೆ 113 ರನ್ ನೀಡಿದ್ದರು.
ಪಾಕಿಸ್ತಾನದ ವಹಾಬ್ ರಿಯಾಝ್ ಹಾಗೂ ಅಫ್ಘಾನಿಸ್ತಾನದ ರಶೀದ್ ಖಾನ್ ಕ್ರಮವಾಗಿ 2016 ಹಾಗೂ 2019ರಲ್ಲಿ ಇಂಗ್ಲೆಂಡ್ ವಿರುದ್ಧ 110 ರನ್ ನೀಡಿದ್ದರು. ಪಟ್ಟಿಯಲ್ಲಿ ಅಗ್ರ-5ರಲ್ಲಿದ್ದಾರೆ.