“ರಾಷ್ಟ್ರ ಧ್ವಜದ ಮೇಲೆ ಸಹಿ ಮಾಡಲಾರೆ”: ಭಾರತೀಯರ ಹೃದಯ ಗೆದ್ದ ನೀರಜ್ ಚೋಪ್ರಾ

Update: 2023-08-28 17:09 GMT

 Neera Chopra|  Twitter: jonathan selvaraj/@jon_selvaraj

ಬುಡಾಪೆಸ್ಟ್ (ಹಂಗೇರಿ): ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ಸ್ ನಲ್ಲಿ ಐತಿಹಾಸಿಕ ಸಾಧನೆ ಮಾಡುವ ಮೂಲಕ ನೀರಜ್ ಚೋಪ್ರಾ ದೇಶಾದ್ಯಂತ ಸಂಭ್ರಮದ ಅಲೆ ಎಬ್ಬಿಸಿದ್ದಾರೆ. ಅವರು ವಿಶ್ವ ಚಾಂಪಿಯನ್ ಶಿಪ್ ಒಂದರಲ್ಲಿ ಬಂಗಾರದ ಪದಕ ಗೆದ್ದ ಮೊದಲ ಭಾರತೀಯ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ. ಇದರೊಂದಿಗೆ ಭಾರತದ ರಾಷ್ಟ್ರ ಧ್ವಜದ ಮೇಲೆ ಸಹಿ ಮಾಡಲು ನಿರಾಕರಿಸಿ ತಮ್ಮ ದೇಶಪ್ರೇಮ ಮೆರೆಯುವ ಮೂಲಕ ಮತ್ತೊಮ್ಮೆ ಲಕ್ಷಾಂತರ ಅಭಿಮಾನಿಗಳ ಹೃದಯವನ್ನು ಗೆದ್ದಿದ್ದಾರೆ ಎಂದು indiatoday.in ವರದಿ ಮಾಡಿದೆ.

ಹಂಗೇರಿಯ ಬುಡಾಪೆಸ್ಟ್ ನಲ್ಲಿ ನಡೆಯುತ್ತಿರುವ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ಸ್ ನ ಜಾವೆಲಿನ್ ಎಸೆತ ವಿಭಾಗದಲ್ಲಿ ನೀರಜ್ ಚೋಪ್ರಾ ಬಂಗಾರದ ಪದಕ ಜಯಿಸಿದ ನಂತರ, ಅವರನ್ನು ಎದುರುಗೊಂಡ ಹಂಗೇರಿಯ ಅಭಿಮಾನಿಯೊಬ್ಬರು ಭಾರತದ ರಾಷ್ಟ್ರ ಧ್ವಜದ ಮೇಲೆ ಸಹಿ ಮಾಡುವಂತೆ ಅವರನ್ನು ವಿನಂತಿಸಿದರು. ಆದರೆ, ಆ ವಿನಂತಿಯನ್ನು ನಿರಾಕರಿಸಿದ ನೀರಜ್ ಚೋಪ್ರಾ, “ವಹಾಂ ನಹೀಂ ಸೈನ್ ಕರ್ ಸಕ್ತಾ” (ಅಲ್ಲಿ ಸಹಿ ಮಾಡುವುದಿಲ್ಲ) ಎಂದು ಉತ್ತರಿಸಿದ್ದಾರೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಪತ್ರಕರ್ತ ಜೊನಾಥನ್ ಸೆಲ್ವರಾಜ್, “ಇದರ ಬೆನ್ನಿಗೇ ನೀರಜ್ ಚೋಪ್ರಾ ಆಕೆಯ ಟೀಶರ್ಟ್ ನ ಮೇಲೆ ಸಹಿ ಮಾಡಿದರು. ಅದಕ್ಕೆ ಆಕೆ ಎಲ್ಲವೂ ಒಂದೇ ಎಂದು ಹೇಳುವ ಮೂಲಕ ಸಂತಸ ವ್ಯಕ್ತಪಡಿಸಿದರು” ಎಂದು ಬರೆದಿದ್ದಾರೆ.

ತ್ರಿವರ್ಣ ಧ್ವಜವು ಮೇಜಿನ ಮೇಲೆ ಇದ್ದು, ನೀರಜ್ ಚೋಪ್ರಾ ಅಭಿಮಾನಿಯ ಟೀ ಶರ್ಟ್ ಮೇಲೆ ಸಹಿ ಮಾಡುತ್ತಿರುವ ಚಿತ್ರವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

ರಾಷ್ಟ್ರ ಧ್ವಜದ ಮೇಲೆ ಸಹಿ ಮಾಡಲು ನಿರಾಕರಿಸಿರುವ ನೀರಜ್ ಚೋಪ್ರಾ ಅವರ ನಡೆಯನ್ನು ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಶ್ಲಾಘಿಸಿದ್ದಾರೆ.

25 ವರ್ಷದ ಅಥ್ಲೀಟ್ ಆದ ನೀರಜ್ ಚೋಪ್ರಾರ ವಿಜಯವನ್ನು ಭಾರತದ ಮಹತ್ವದ ಸಾಧನೆ ಎಂದು ಪರಿಗಣಿಸಲಾಗಿದೆ. ನೀರಜ್ ಚೋಪ್ರಾ ವಿಶ್ವ ಚಾಂಪಿಯನ್ ಶಿಪ್ ನಲ್ಲಿ ಯಾವುದೇ ಟ್ರ್ಯಾಕ್ ಮತ್ತು ಫೀಲ್ಡ್ ಕ್ರೀಡಾ ಪ್ರಕಾರದಲ್ಲಿ ಬಂಗಾರದ ಪದಕ ಜಯಿಸಿದ ಪ್ರಥಮ ಭಾರತೀಯರಾಗಿದ್ದಾರೆ.

ಈ ಪದಕದ ವಿಜಯದೊಂದಿಗೆ ಒಲಿಂಪಿಕ್ ಬಂಗಾರದ ಪದಕ, ಡೈಮಂಡ್ ಟ್ರೋಫಿ ಹಾಗೂ ವಿಶ್ವ ಚಾಂಪಿಯನ್ ಶಿಪ್ಸ್ ಬಂಗಾರದ ಪದಕಗಳನ್ನೆಲ್ಲ ಜಯಿಸುವ ಮೂಲಕ, ನೀರಜ್ ಚೋಪ್ರಾ ಎಲ್ಲ ಜಾಗತಿಕ ಪದಕಗಳ ಗುಚ್ಛವನ್ನು ಜಯಿಸಿದಂತಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News