"ನೀವು ಭಾರತದ ಹೆಮ್ಮೆ, ಪ್ರತಿಯೊಬ್ಬ ಭಾರತೀಯನಿಗೆ ಸ್ಫೂರ್ತಿ": ವಿನೇಶ್ ಫೋಗಟ್ ಅನರ್ಹತೆ ಬೆನ್ನಲ್ಲೇ ಪ್ರಧಾನಿ ಮೋದಿ ಟ್ವೀಟ್
ಹೊಸದಿಲ್ಲಿ: ಭಾರತದ ಕುಸ್ತಿಪಟು ವಿನೇಶ್ ಫೋಗಟ್ ಅವರು ಕೆಲವು ಗ್ರಾಂ ತೂಕ ಹೆಚ್ಚಿದ್ದಾರೆಂಬ ಕಾರಣಕ್ಕೆ ಇಂದು ನಡೆಯಬೇಕಿದ್ದ 50 ಕೆಜಿ ಕುಸ್ತಿ ಪಂದ್ಯದ ಫೈನಲ್‌ನಿಂದ ಅವರನ್ನು ಅನರ್ಹಗೊಳಿಸಿದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ವಿನೇಶ್ ಅವರನ್ನು ಹುರಿದುಂಬಿಸಿದ್ದಾರೆ.
“ವಿನೇಶ್, ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್. ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯನಿಗೆ ಸ್ಫೂರ್ತಿ. ಇಂದಿನ ಹಿನ್ನಡೆ ನೋವುಂಟು ಮಾಡಿದೆ. ನಾನು ಅನುಭವಿಸುತ್ತಿರುವ ನಿರಾಸೆಯನ್ನು ಪದಗಳಲ್ಲಿ ವ್ಯಕ್ತಪಡಿಸಲು ಸಾಧ್ಯವಿಲ್ಲ. ಅದೇ ಸಮಯ ನೀವು ದೃಢತೆಯುಳ್ಳವರು. ಸವಾಲುಗಳನ್ನು ಧೈರ್ಯದಿಂದ ಎದುರಿಸುವುದು ನಿಮಗೆ ಗೊತ್ತಿದೆ. ಇನ್ನಷ್ಟು ಬಲಶಾಲಿಗಳಾಗಿ ಹೊರಹೊಮ್ಮಿ. ನಾವೆಲ್ಲರೂ ನಿಮ್ಮನ್ನು ಹುರಿದುಂಬಿಸುತ್ತೇವೆ,” ಎಂದು ಪ್ರಧಾನಿ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
ವಿನೇಶ್ ಅವರನ್ನು ಒಲಿಂಪಿಕ್ಸ್‌ನಿಂದ ಅನರ್ಹಗೊಳಿಸಿರುವ ವಿಚಾರ ಸಂಸತ್ತಿನಲ್ಲೂ ಗದ್ದಲಕ್ಕೆ ಕಾರಣವಾಗಿದ್ದು ಕ್ರೀಡಾ ಸಚಿವ ಅನುರಾಗ್ ಠಾಕುರ್ ಈ ಕುರಿತು ಹೇಳಿಕೆ ನೀಡಲಿದ್ದಾರೆಂಬ ಮಾಹಿತಿಯಿದೆ.