ಐಸಿಸಿ ಹಾಲ್ ಆಫ್ ಫೇಮ್‌ಗೆ ಡಿ ವಿಲಿಯರ್ಸ್, ಕುಕ್, ನೀತು ಡೇವಿಡ್ ಸೇರ್ಪಡೆ

Update: 2024-10-16 16:12 GMT

PC : @ICC

ಹೊಸದಿಲ್ಲಿ : ದಕ್ಷಿಣ ಆಫ್ರಿಕಾದ ದಂತಕತೆ ಎಬಿ ಡಿ ವಿಲಿಯರ್ಸ್, ಇಂಗ್ಲೆಂಡ್‌ನ ಮಾಜಿ ನಾಯಕ ಅಲೆಸ್ಟರ್ ಕುಕ್ ಹಾಗೂ ಭಾರತದ ಲೆಜೆಂಡ್ ನೀತು ಡೇವಿಡ್ ಅವರನ್ನು ಐಸಿಸಿ ಹಾಫ್ ಆಫ್ ಫೇಮ್‌ಗೆ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಬುಧವಾರ ಸೇರ್ಪಡೆಗೊಳಿಸಿದೆ.

ಮಿಸ್ಟರ್ 360 ಎಂದೇ ಖ್ಯಾತಿ ಪಡೆದಿರುವ ಡಿ ವಿಲಿಯರ್ಸ್ ದಕ್ಷಿಣ ಆಫ್ರಿಕಾದ ಪರ 14 ವರ್ಷಗಳ ವೃತ್ತಿಜೀವನದಲ್ಲಿ 20,000ಕ್ಕೂ ಅಧಿಕ ಅಂತರ್‌ರಾಷ್ಟ್ರೀಯ ರನ್ ಕಲೆ ಹಾಕಿದ್ದರು.

ಭಾರತದ ಮಾಜಿ ಸ್ಪಿನ್ನರ್ ನೀತು ಡೇವಿಡ್ ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಯಾದ ಭಾರತದ ಎರಡನೇ ಮಹಿಳಾ ಕ್ರಿಕೆಟರ್ ಎನಿಸಿಕೊಂಡರು. ಮಾಜಿ ನಾಯಕಿ ಡಯಾನಾ ಎಡುಲ್ಜಿ ಕಳೆದ ವರ್ಷ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಯಾದ ಭಾರತದ ಮೊದಲ ಮಹಿಳಾ ಕ್ರಿಕೆಟಿಗ ಎನಿಸಿಕೊಂಡಿದ್ದರು.

ವಿಶ್ವ ಕ್ರಿಕೆಟ್‌ನ ಓರ್ವ ಶ್ರೇಷ್ಠ ಆರಂಭಿಕ ಆಟಗಾರನಾಗಿರುವ ಸರ್ ಅಲೆಸ್ಟರ್ ಕುಕ್ 161 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದ್ದು, 12,472 ರನ್ ಗಳಿಸಿದ್ದಾರೆ. ಕುಕ್ ಅವರು ಇಂಗ್ಲೆಂಡ್‌ನ ಸಾರ್ವಕಾಲಿಕ ಶ್ರೇಷ್ಠ ರನ್ ಸ್ಕೋರರ್ ಆಗಿ ನಿವೃತ್ತಿಯಾಗಿದ್ದರು.

ನೀತು ಡೇವಿಡ್ ಅವರು ಭಾರತದ ಪರ 100ಕ್ಕೂ ಅಧಿಕ ಪಂದ್ಯಗಳಲ್ಲಿ(10 ಟೆಸ್ಟ್, 97 ಏಕದಿನ)ಆಡಿದ್ದು, 141 ವಿಕೆಟ್‌ಗಳೊಂದಿಗೆ ಏಕದಿನ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಎರಡನೇ ಮಹಿಳಾ ಬೌಲರ್ ಎನಿಸಿಕೊಂಡಿದ್ದಾರೆ.

ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಯಾಗಿರುವುದು ನಿಜವಾಗಿಯೂ ಗೌರವವಾಗಿದೆ. ರಾಷ್ಟ್ರೀಯ ತಂಡದ ಜರ್ಸಿಯನ್ನು ಧರಿಸುವ ಎಲ್ಲರಿಗೂ ಲಭ್ಯವಿರುವ ಅತ್ಯುನ್ನತ ಮನ್ನಣೆ ಇದಾಗಿದೆ ಎಂದು ನಾನು ಪರಿಗಣಿಸುತ್ತೇನೆ. ಈ ಮಹಾನ್ ಕ್ರೀಡೆಗೆ ಜೀವಮಾನದ ಸಮರ್ಪಣೆಗೆ ಈ ಗೌರವ ಲಭಿಸುತ್ತದೆ. ಈ ಗೌರವ ಪಡೆದಿರುವುದು ನನ್ನ ಪಾಲಿಗೆ ವಿಶೇಷವಾದುದು ಎಂದು ಡೇವಿಡ್ ಹೇಳಿದ್ದಾರೆ.

ಈ ಗೌರವಕ್ಕೆ ನನ್ನನ್ನು ಗುರುತಿಸಿರುವ ಐಸಿಸಿಗೆ ಧನ್ಯವಾದ ಸಲ್ಲಿಸಲು ಬಯಸುವೆ. ನನ್ನ ವೃತ್ತಿಬದುಕಿನುದ್ದಕ್ಕೂ ನಿರಂತರವಾಗಿ ಬೆಂಬಲಿಸುತ್ತಾ ಬಂದಿರುವ ಬಿಸಿಸಿಐ, ನನ್ನ ಸಹ ಆಟಗಾರ್ತಿಯರು, ಕೋಚ್‌ಗಳು, ಕುಟುಂಬ ಹಾಗೂ ಸ್ನೇಹಿತರಿಗೆ ಧನ್ಯವಾದ ಸಲ್ಲಿಸುವೆ ಎಂದು ಡೇವಿಡ್ ಹೇಳಿದ್ದಾರೆ.

ಡಿ ವಿಲಿಯರ್ಸ್ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವನ್ನು 114 ಟೆಸ್ಟ್, 228 ಏಕದಿನ ಹಾಗೂ 78 ಟಿ20 ಪಂದ್ಯಗಳಲ್ಲಿ ಪ್ರತಿನಿಧಿಸಿದ್ದರು. ಈ ಎಲ್ಲ ಪಂದ್ಯಗಳಲ್ಲಿ 20,000ಕ್ಕೂ ಅಧಿಕ ರನ್ ಗಳಿಸಿದ್ದಾರೆ.

ಐಸಿಸಿ ಹಾಲ್ ಆಫ್ ಫೇಮ್‌ಗೆ ಸೇರ್ಪಡೆಗೊಂಡಿರುವುದು ದೊಡ್ಡ ಗೌರವವಾಗಿದೆ. ಈ ರೀತಿಯಾಗಿ ಗುರುತಿಸಲ್ಪಡುವ ಆಯ್ದ ಕ್ರಿಕೆಟಿಗರ ಗುಂಪಿಗೆ ಸೇರಿದ್ದು ಖುಷಿ ಕೊಟ್ಟಿದೆ ಎಂದು ಡಿ ವಿಲಿಯರ್ಸ್ ಹೇಳಿದ್ದಾರೆ.

ತನ್ನ ಯಶಸ್ವಿ ಟೆಸ್ಟ್ ಕ್ರಿಕೆಟ್ ವೃತ್ತಿಜೀವನದಲ್ಲಿ ಕುಕ್ ಅವರು ಸತತ 159 ಟೆಸ್ಟ್ ಪಂದ್ಯಗಳಲ್ಲಿ ಆಡಿದ್ದರು. 2010-11ರ ಆ್ಯಶಸ್ ಸರಣಿ ಗೆಲುವು ಹಾಗೂ 2012ರಲ್ಲಿ ಭಾರತದಲ್ಲಿ ಟೆಸ್ಟ್ ಸರಣಿ ಗೆಲುವು ಕುಕ್ ಅವರ ಟೆಸ್ಟ್ ವೃತ್ತಿಜೀವನದ ಮುಖ್ಯಾಂಶವಾಗಿದೆ.

ನಾನು ಸೇರ್ಪಡೆಯಾಗುವ ಜನರ ಹೆಸರನ್ನು ಓದಿ ನಿಜವಾಗಿಯೂ ಅಚ್ಚರಿಯಾಗಿದೆ. ಇದು ನಾನು ಸೇರ್ಪಡೆಯಾದ ಶ್ರೇಷ್ಠ ಪಟ್ಟಿಯಾಗಿದೆ. 20 ವರ್ಷಗಳ ಕಾಲ ಉತ್ತಮ ಕ್ರಿಕೆಟ್ ಆಡಿದ್ದೇನೆ. ವೃತ್ತಿಜೀವನದಲ್ಲಿ ಗಾಯಗೊಳ್ಳದೆ, ಹಲವು ಶ್ರೇಷ್ಠ ಆಟಗಾರರನ್ನು ಭೇಟಿಯಾಗಿ ಕೆಲವು ಏರಿಳಿತವನ್ನು ಹಂಚಿಕೊಂಡಿದ್ದು ನನ್ನ ಅದೃಷ್ಟ. ಈ ನೆನಪನ್ನ್ನು ನಾನು ಯಾವತ್ತೂ ಮರೆಯಲಾರೆ ಎಂದು ಕುಕ್ ಹೇಳಿದ್ದಾರೆ.

ಐಸಿಸಿ ಹಾಲ್ ಆಫ್ ಫೇಮ್ 2009ರ ಜನವರಿ ಆರಂಭವಾಗಿತ್ತು. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News