2ನೇ ಟೆಸ್ಟ್ | ಪಾಕಿಸ್ತಾನ ವಿರುದ್ಧ ಇಂಗ್ಲೆಂಡ್ 239/6

Update: 2024-10-16 15:59 GMT

ಬೆನ್ ಡಕೆಟ್ |  PC : PTI 

ಮುಲ್ತಾನ್ : ಆರಂಭಿಕ ಬ್ಯಾಟರ್ ಬೆನ್ ಡಕೆಟ್ ಆಕರ್ಷಕ ಶತಕ (114 ರನ್, 129 ಎಸೆತ, 16 ಬೌಂಡರಿ) ಗಳಿಸಿದ ಹೊರತಾಗಿಯೂ ದ್ವಿತೀಯ ಟೆಸ್ಟ್‌ನ 2ನೇ ದಿನವಾದ ಬುಧವಾರ ಪಾಕಿಸ್ತಾನದ ಸ್ಪಿನ್ ದಾಳಿಗೆ ಕಕ್ಕಾಬಿಕ್ಕಿಯಾದ ಇಂಗ್ಲೆಂಡ್‌ನ ಅಗ್ರ ಕ್ರಮಾಂಕದ ಆಟಗಾರರು ವಿಕೆಟ್ ಕೈಚೆಲ್ಲಿದ್ದಾರೆ.

ಪ್ರವಾಸಿ ತಂಡ 2ನೇ ದಿನದಾಟದಂತ್ಯಕ್ಕೆ 239 ರನ್‌ಗೆ 6 ವಿಕೆಟ್‌ಗಳನ್ನು ಕಳೆದುಕೊಂಡಿದ್ದು, ಇನ್ನೂ 127 ರನ್ ಹಿನ್ನಡೆಯಲ್ಲಿದೆ.

ಇನಿಂಗ್ಸ್ ಆರಂಭಿಸಿದ ಡಕೆಟ್ ಹಾಗೂ ಕ್ರಾಲಿ ಮೊದಲ ವಿಕೆಟ್‌ಗೆ 73 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.

ಒಂದು ಹಂತದಲ್ಲಿ ಉತ್ತಮ ಸ್ಥಿತಿಯಲ್ಲಿದ್ದ ಇಂಗ್ಲೆಂಡ್ ಕ್ರಿಕೆಟ್ ತಂಡವು ಸ್ಪಿನ್ನರ್‌ಗಳಾದ ಸಾಜಿದ್ ಖಾನ್(4-86)ಹಾಗೂ ನೂಮಾನ್ ಅಲಿ(2-75) ದಾಳಿಗೆ ತತ್ತರಿಸಿ ನಾಲ್ಕು ವಿಕೆಟ್‌ಗಳನ್ನು ಕಳೆದುಕೊಂಡು ದಿಢೀರ್ ಕುಸಿತ ಕಂಡಿತು.

ಸಾಜಿದ್ ಖಾನ್ 10 ಎಸೆತಗಳಲ್ಲಿ ಜೋ ರೂಟ್(34 ರನ್), ಡಕೆಟ್ ಹಾಗೂ ಹ್ಯಾರಿ ಬ್ರೂಕ್(9 ರನ್)ವಿಕೆಟ್‌ಗಳನ್ನು ಉರುಳಿಸಿದರು. ಟೆಸ್ಟ್ ಕ್ರಿಕೆಟಿಗೆ ವಾಪಸಾಗಿರುವ ನಾಯಕ ಬೆನ್ ಸ್ಟೋಕ್ಸ್ 5 ಎಸೆತಗಳನ್ನು ಎದುರಿಸಿದರೂ ಕೇವಲ ಒಂದು ರನ್ ಗಳಿಸಿ ಎಡಗೈ ಸ್ಪಿನ್ನರ್ ನೂಮಾನ್ ಅಲಿಗೆ ವಿಕೆಟ್ ಒಪ್ಪಿಸಿದರು.

ದಿನದಾಟದಂತ್ಯಕ್ಕೆ ಜಮಿ ಸ್ಮಿತ್(12 ರನ್,33 ಎಸೆತ) ಹಾಗೂ ಬ್ರೆಂಡನ್ ಕಾರ್ಸ್(ಔಟಾಗದೆ 2,19 ಎಸೆತ)ಕ್ರೀಸ್ ಕಾಯ್ದುಕೊಂಡಿದ್ದಾರೆ.

ಡಕೆಟ್ ಅವರು ಸ್ವೀಪ್ ಹೊಡೆೆತಗಳ ಮೂಲಕ ಸ್ಪಿನ್ನರ್‌ಗಳ ಎದುರು ಪ್ರಾಬಲ್ಯ ಮೆರೆದರು. ರೂಟ್ ಅವರೊಂದಿಗೆ 3ನೇ ವಿಕೆಟ್‌ಗೆ 86 ರನ್ ಜೊತೆಯಾಟ ನಡೆಸಿದರು. ಈ ಜೋಡಿಯನ್ನು ಸಾಜಿದ್ ಖಾನ್ ಬೇರ್ಪಡಿಸಿದರು.

ಮೊದಲ ಟೆಸ್ಟ್ ಪಂದ್ಯದಲ್ಲಿ ಸ್ಮರಣೀಯ 262 ರನ್ ಗಳಿಸಿ ಇಂಗ್ಲೆಂಡ್ ತಂಡ ಇನಿಂಗ್ಸ್ ಹಾಗೂ 47 ರನ್ ಅಂತರದಿಂದ ಗೆಲುವು ದಾಖಲಿಸಲು ನೆರವಾಗಿದ್ದ ರೂಟ್ ಅವರು ಸಾಜಿದ್ ಖಾನ್ ಬೌಲಿಂಗ್‌ನಲ್ಲಿ ಕ್ಲೀನ್‌ಬೌಲ್ಡಾದರು.

ಕಳೆದ ವಾರ ಮುಲ್ತಾನ್ ಮೈದಾನದಲ್ಲಿ ತ್ರಿಶತಕ ಗಳಿಸಿದ್ದ ಹ್ಯಾರಿ ಬ್ರೂಕ್(9 ರನ್)ಕೂಡ ಸಾಜಿದ್ ಖಾನ್‌ಗೆ ಕ್ಲೀನ್‌ಬೌಲ್ಡಾದರು.

ಆರಂಭಿಕ ಬ್ಯಾಟರ್ ಕ್ರಾಲಿ ಕೇವಲ 27 ರನ್ ಗಳಿಸಿ ನಿರಾಸೆಗೊಳಿಸಿದರು.

► ಪಾಕಿಸ್ತಾನ 366 ರನ್: ಇದಕ್ಕೂ ಮೊದಲು 5 ವಿಕೆಟ್‌ಗಳ ನಷ್ಟಕ್ಕೆ 259 ರನ್‌ನಿಂದ ತನ್ನ ಮೊದಲ ಇನಿಂಗ್ಸ್ ಮುಂದುವರಿಸಿದ ಪಾಕಿಸ್ತಾನ ತಂಡವು ಭೋಜನ ವಿರಾಮದ ನಂತರ 366 ರನ್‌ಗೆ ಆಲೌಟಾಯಿತು.

ಜಾಕ್ ಲೀಚ್(4-114)ಯಶಸ್ವಿ ಪ್ರದರ್ಶನ ನೀಡಿದರು. ವೇಗದ ಬೌಲರ್‌ಗಳಾದ ಕಾರ್ಸ್(3-50) ಹಾಗೂ ಮ್ಯಾಥ್ಯೂ ಪೊಟ್ಸ್(2-66)ತಮ್ಮೊಳಗೆ ಐದು ವಿಕೆಟ್‌ಗಳನ್ನು ಹಂಚಿಕೊಂಡರು.

ಬ್ಯಾಟಿಂಗ್ ಮುಂದುವರಿಸಿದ ಮುಹಮ್ಮದ್ ರಿಝ್ವಾನ್(41 ರನ್)ಹಾಗೂ ಸಲ್ಮಾನ್ ಅಲಿ(31 ರನ್)ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ.

ಆಲ್‌ರೌಂಡರ್ ಆಮಿರ್ ಜಮಾಲ್ (37 ರನ್) ಬೌಲರ್ ನೂಮಾನ್ ಅಲಿ (32 ರನ್)ಅವರೊಂದಿಗೆ 49 ರನ್ ಜೊತೆಯಾಟ ನಡೆಸಿದರು.ಪಾಕಿಸ್ತಾನವು ನಿನ್ನೆಯ ಮೊತ್ತಕ್ಕೆ 107 ರನ್ ಸೇರಿಸಿ ಆಲೌಟಾಯಿತು.

ಚೊಚ್ಚಲ ಪಂದ್ಯವನ್ನಾಡಿದ ಕಾಮ್ರಾನ್ ಗುಲಾಮ್ ಮೊದಲ ದಿನದಾಟದಲ್ಲಿ ಚೊಚ್ಚಲ ಶತಕ ಸಿಡಿಸಿ ಮಿಂಚಿದರು.

ದೀರ್ಘ ಸಮಯದ ನಂತರ ಸ್ವದೇಶದಲ್ಲಿ ಮೊದಲ ಗೆಲುವು ದಾಖಲಿಸಲು ಹವಣಿಸುತ್ತಿರುವ ಪಾಕಿಸ್ತಾನ ತಂಡವು ಆಡುವ 11ರ ಬಳಗಕ್ಕೆ ಮೂವರು ಸ್ಪೆಷಲಿಸ್ಟ್ ಸ್ಪಿನ್ನರ್‌ಗಳು ಹಾಗೂ ಏಕೈಕ ವೇಗದ ಬೌಲರ್ ಅನ್ನು ಆಯ್ಕೆ ಮಾಡಿದೆ.

►ಸಂಕ್ಷಿಪ್ತ ಸ್ಕೋರ್

ಪಾಕಿಸ್ತಾನ ಮೊದಲ ಇನಿಂಗ್ಸ್: 366 ರನ್

(ಕಾಮ್ರಾನ್ ಗುಲಾಮ್ 118, ಅಯ್ಯೂಬ್ 77, ರಿಝ್ವಾನ್ 41, ಆಮಿರ್ ಜಮಾಲ್ 37, ಅಲಿ 32, ಜಾಕ್ ಲೀಚ್ 4-114, ಬ್ರೆಂಡನ್ ಕಾರ್ಸ್ 3-50, ಮ್ಯಾಥ್ಯೂ ಪೊಟ್ಸ್ 2-66)

ಇಂಗ್ಲೆಂಡ್ ಮೊದಲ ಇನಿಂಗ್ಸ್: 239/6

(ಬೆನ್ ಡಕೆಟ್ 114, ರೂಟ್ 34, ಸಾಜಿದ್ ಖಾನ್ 4-86, ನುಮಾನ್ ಅಲಿ 2-75)

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News