ಡೆಲ್ಲಿ ಕ್ಯಾಪಿಟಲ್ಸ್ ಮುಖ್ಯ ಕೋಚ್ ಹುದ್ದೆಯ ಸ್ಪರ್ಧೆಯಲ್ಲಿ ಹೇಮಂಗ್ ಬದಾನಿ

Update: 2024-10-16 16:00 GMT

ಹೇಮಂಗ್ ಬದಾನಿ | PC :X 

ಹೊಸದಿಲ್ಲಿ : ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮುಖ್ಯ ಕೋಚ್ ಹುದ್ದೆಯ ರೇಸ್‌ನಲ್ಲಿ ಭಾರತದ ಮಾಜಿ ಎಡಗೈ ಬ್ಯಾಟರ್ ಹೇಮಂಗ್ ಬದಾನಿ ಮುಂಚೂಣಿಯಲ್ಲಿದ್ದಾರೆ. ಫ್ರಾಂಚೈಸಿಯ ಸಹಾಯಕ ಸಿಬ್ಬಂದಿಯ ಪಾತ್ರಕ್ಕೆ ಮಾಜಿ ವೇಗದ ಬೌಲರ್ ಮುನಾಫ್ ಪಟೇಲ್ ಹೆಸರು ಕೇಳಿಬರುತ್ತಿದೆ.

ಡೆಲ್ಲಿ ಕ್ಯಾಪಿಟಲ್ಸ್ ಕೆಲವು ವಾರಗಳ ಹಿಂದೆ ಆಸ್ಟ್ರೇಲಿಯದ ಕ್ರಿಕೆಟ್ ದಿಗ್ಗಜ ರಿಕಿ ಪಾಂಟಿಂಗ್‌ರನ್ನು ಮುಖ್ಯ ಕೋಚ್ ಹುದ್ದೆಯಿಂದ ಕೈಬಿಟ್ಟಿತ್ತು. ಪಾಂಟಿಂಗ್ 2018ರಿಂದ ಡೆಲ್ಲಿ ಕ್ರಿಕೆಟ್ ತಂಡದೊಂದಿಗೆ ಇದ್ದರು.

ಡೆಲ್ಲಿ ಕ್ಯಾಪಿಟಲ್ಸ್ ಮ್ಯಾನೇಜ್‌ಮೆಂಟ್ ಸ್ಥಳೀಯ ಕೋಚ್‌ಗಳಿಗಾಗಿ ಹುಡುಕಾಟ ನಡೆಸುತ್ತಿದ್ದು, ಹೇಮಂಗ್ ಬದಾನಿ ಹಾಗೂ ಮುನಾಫ್ ಹೆಸರು ಕೇಳಿಬರುತ್ತಿದೆ. ಅಂತಿಮ ನಿರ್ಧಾರ ಇನ್ನಷ್ಟೇ ತೆಗೆದುಕೊಳ್ಳಬೇಕಾಗಿದೆ. ಮುನಾಫ್‌ರನ್ನು ಬೌಲಿಂಗ್ ಕೋಚ್ ಹುದ್ದೆಗೆ ಪರಿಗಣಿಸಬಹುದು ಎಂದು ಐಪಿಎಲ್ ಮೂಲಗಳು ತಿಳಿಸಿವೆ.

ಇತರ ಫ್ರಾಂಚೈಸಿಗಳಂತೆ ಡೆಲ್ಲಿ ಕ್ಯಾಪಿಟಲ್ಸ್ ಕೂಡ ಮೂವರು ಆಟಗಾರರನ್ನು ತಂಡದಲ್ಲಿ ಉಳಿಸಿಕೊಂಡಿದೆ. ನಾಯಕ ರಿಷಭ್ ಪಂತ್(18 ಕೋಟಿ ರೂ.), ಆಲ್‌ರೌಂಡರ್ ಅಕ್ಷರ್ ಪಟೇಲ್(14 ಕೋಟಿ ರೂ.) ಹಾಗೂ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್(11 ಕೋಟಿ ರೂ.)ಅವರನ್ನು ತನ್ನಲ್ಲೇ ಉಳಿಸಿಕೊಂಡಿದೆ.

ಬದಾನಿ ಈ ಹಿಂದೆ ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಬ್ರಿಯಾನ್ ಲಾರಾರೊಂದಿಗೆ ಕೆಲಸ ಮಾಡಿದ್ದರು. ತಮಿಳುನಾಡಿನ ಮಾಜಿ ಬ್ಯಾಟರ್ ಬದಾನಿ 2001-2004ರ ನಡುವೆ 4 ಟೆಸ್ಟ್ ಹಾಗೂ 40 ಏಕದಿನ ಪಂದ್ಯಗಳನ್ನು ಆಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News