ಯಾವುದೇ ಕ್ರೀಡಾಕೂಟಗಳಿಗೆ ಭಾರತಕ್ಕೆ ತಂಡವನ್ನು ಕಳಿಸಬೇಡಿ: ಪಿಸಿಬಿಗೆ ಶಾಹಿದ್ ಅಫ್ರಿದಿ ಸಂದೇಶ
ಕರಾಚಿ: ಭಾರತ ತಂಡವು ಪಾಕಿಸ್ತಾನದಲ್ಲಿ ಆಡಲು ಒಪ್ಪಿಕೊಳ್ಳದಿದ್ದರೆ, ಭಾರತದಲ್ಲಿ ಆಯೋಜನೆಗೊಳ್ಳುವ ಐಸಿಸಿ ಕ್ರೀಡಾಕೂಟ ಸೇರಿದಂತೆ ಎಲ್ಲ ಕ್ರೀಡಾಕೂಟಗಳನ್ನೂ ಬಹಿಷ್ಕರಿಸುವ ದೃಢ ನಿಲುವು ತೆಗೆದುಕೊಳ್ಳಬೇಕು ಎಂದು ಪಾಕಿಸ್ತಾನ ತಂಡದ ಮಾಜಿ ನಾಯಕ ಶಾಹಿದ್ ಅಫ್ರಿದಿ, ಪಾಕಿಸ್ತಾನ ಕ್ರಿಕೆಟ್ ಮಂಡಳಿಯನ್ನು (ಪಿಸಿಬಿ) ಆಗ್ರಹಿಸಿದ್ದಾರೆ. ಈ ಕ್ಷಣ ಕ್ರಿಕೆಟ್ ಜಗತ್ತಿನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಿಕ್ಕಟ್ಟು ಚರ್ಚೆಯ ಕೇಂದ್ರ ಬಿಂದುವಾಗಿ ಬದಲಾಗಿದ್ದು, ಪಾಕಿಸ್ತಾನದಲ್ಲಿ ಆಯೋಜನೆಗೊಂಡಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಕ್ರೀಡಾಕೂಟಕ್ಕೆ ತನ್ನ ತಂಡವನ್ನು ಕಳಿಸಲು ಭಾರತ ನಿರಾಕರಿಸುತ್ತಿದೆ.
ಕರಾಚಿ ಆರ್ಟ್ಸ್ ಕೌನ್ಸಿಲ್ ನಲ್ಲಿ ಆಯೋಜಿಸಲಾಗಿದ್ದ ಉರ್ದು ವಿಚಾರ ಸಂಕಿರಣವನ್ನುದ್ದೇಶಿಸಿ ಮಾತನಾಡಿದ ಅಫ್ರಿದಿ, ಪಾಕಿಸ್ತಾನ ಕ್ರಿಕೆಟ್ ಸ್ವಾವಲಂಬನೆ ಸಾಧಿಸಬೇಕಾದ ಅಗತ್ಯವನ್ನು ಒತ್ತಿ ಹೇಳಿದರು. ಪಾಕಿಸ್ತಾನ ಕ್ರಿಕೆಟ್ ಮಂಡಳಿ ನಿರ್ಣಾಯಕ ಕ್ರಮಗಳನ್ನು ಕೈಗೊಳ್ಳಬೇಕು, ನಿರ್ದಿಷ್ಟವಾಗಿ ಮುಂದಿನ ವರ್ಷದ ಜನವರಿ ಮತ್ತು ಮಾರ್ಚ್ ನಡುವೆ ನಿಗದಿಯಾಗಿರುವ ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಪಾಕಿಸ್ತಾನಕ್ಕೆ ತನ್ನ ತಂಡವನ್ನು ಕಳಿಸಲು ನಿರಾಕರಿಸುತ್ತಿರುವ ಭಾರತದ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಭಾರತದಲ್ಲಿ ಆಡಲು ಪಾಕಿಸ್ತಾನ ತನ್ನ ತಂಡವನ್ನು ಕಳಿಸಬಾರದು ಎಂದೂ ಅವರು ಒತ್ತಾಯಿಸಿದರು.
“ಪಾಕಿಸ್ತಾನ ಕ್ರಿಕೆಟ್ ಮಂಡಳಿ ಪ್ರಬಲ, ಸ್ವಾವಲಂಬಿ ಹಾಗೂ ಬಲಿಷ್ಠ ತಾತ್ವಿಕ ನಿರ್ಧಾರಗಳನ್ನು ಕೈಗೊಳ್ಳಬೇಕು. ಒಂದು ವೇಳೆ ಭಾರತ ತಂಡ ಪಾಕಿಸ್ತಾನಕ್ಕೆ ಆಗಮಿಸಿ ಆಟವಾಡಲು ಸಾಧ್ಯವಿಲ್ಲವಾದರೆ, ಭಾರತದಲ್ಲಿ ನಡೆಯುವ ಯಾವುದೇ ಕ್ರೀಡಾಕೂಟಗಳಿಗೆ ಪಾಕಿಸ್ತಾನ ತಂಡ ತೆರಳಿ, ಆಡಲು ಯಾವುದೇ ಕಾರಣಗಳಿಲ್ಲ” ಎಂದೂ ಅವರು ಹೇಳಿದರು.
ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಹೈಬ್ರಿಡ್ ಮಾದರಿಗೆ ಆಗ್ರಹಿಸುತ್ತಿರುವ ಭಾರತ, ಪಾಕಿಸ್ತಾನಕ್ಕೆ ತೆರಳುವ ಬದಲು, ತಟಸ್ಥ ಸ್ಥಳಗಳಲ್ಲಿ ನಮ್ಮ ತಂಡ ಆಡಲಿದೆ ಎಂದು ಹೇಳಿದೆ. ಇದರಿಂದ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಅಂತಿಮ ವೇಳಾಪಟ್ಟಿ ಹಾಗೂ ಸ್ಥಳಗಳ ಪ್ರಕಟಣೆ ವಿಳಂಬಗೊಂಡಿದೆ.