'ಸೂರ್ಯ' ಹೊಡೆತಕ್ಕೆ ಮಂಕಾದ ಸನ್ ರೈಸರ್ಸ್: ಮುಂಬೈಗೆ ಭರ್ಜರಿ ಜಯ
ಹೊಸದಿಲ್ಲಿ: ಸೂರ್ಯಕುಮಾರ್ ಯಾದವ್ ಅವರ ಅದ್ಭುತ ಶತಕ (51 ಎಸೆತಗಳಲ್ಲಿ 102) ಮತ್ತು ಬೌಲರ್ ಗಳ ಶಿಸ್ತಿನ ಬೌಲಿಂಗ್ ನಿಂದಾಗಿ ಮುಂಬೈ ಇಂಡಿಯನ್ಸ್ ತಂಡ ಸನ್ ರೈಸರ್ಸ್ ವಿರುದ್ಧ ಸೋಮವಾರ ನಡೆದ ಐಪಿಎಲ್ ಪಂದ್ಯದಲ್ಲಿ ಏಳು ವಿಕೆಟ್ ಗಳ ಸುಲಭ ಜಯ ಸಾಧಿಸಿದೆ.
ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಸೂರ್ಯಕುಮಾರ್ ಅವರ ಭರ್ಜರಿ ಶತಕದಿಂದಾಗಿ ಕೇವಲ 17.2 ಓವರ್ ಗಳಲ್ಲಿ ಮುಂಬೈ ಇಂಡಿಯನ್ ಗೆಲುವು ಸಾಧಿಸಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಿಂದ ಒಂದು ಸ್ಥಾನ ಮೇಲೇರಿತು. ಇದಕ್ಕೂ ಮುನ್ನ ಸನ್ ರೈಸರ್ಸ್ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 173 ರನ್ ಗಳಿಸಿತ್ತು.
ಹನ್ನೊಂದು ಪಂದ್ಯಗಳಿಂದ ಎಂಟು ಪಾಯಿಂಟ್ ಸಂಗ್ರಹಿಸಿದ ಮುಂಬೈ ಇಂಡಿಯನ್ಸ್ ಒಂಬತ್ತನೇ ಸ್ಥಾನಕ್ಕೇರಿದರೆ, ಸೋಲಿನ ಹೊರತಾಗಿಯೂ, 11 ಪಂದ್ಯಗಳಿಂದ 12 ರನ್ ಕಲೆ ಹಾಕಿರುವ ಎಸ್ಆರ್ಎಚ್ ನಾಲ್ಕನೇ ಸ್ಥಾನದಲ್ಲಿ ಉಳಿದಿದೆ.
ಪವರ್ ಪ್ಲೇ ಸಂದರ್ಭದಲ್ಲಿ ಕೇವಲ 31ರನ್ ಗಳಿಗೆ 3 ವಿಕೆಟ್ಗಳನ್ನು ಕಳೆದುಕೊಂಡು ದಯನೀಯ ಸ್ಥಿತಿಯಲ್ಲಿದ್ದ ಮುಂಬೈ ಇಂಡಿಯನ್ಸ್ ತಂಡವನ್ನು ಸೂರ್ಯಕುಮಾರ್ ಯಾದವ್ ಮತ್ತು ತಿಲಕ್ ವರ್ಮಾ (32 ಎಸೆತಗಳಲ್ಲಿ ಅಜೇಯ 37) ಗೆಲುವಿನ ಹಳಿಗೆ ತಂದರು. 143 ರನ್ ಗಳ ಅಜೇಯ ಜತೆಯಾಟ, ಸುಲಭ ಜಯಕ್ಕೆ ಕಾರಣವಾಯಿತು. ಯಾದವ್ ಅವರ ಶತಕದಲ್ಲಿ 12 ಬೌಂಡರಿ ಮತ್ತು ಆರು ಸಿಕ್ಸರ್ ಗಳು ಸೇರಿವೆ.
ಐದನೇ ಓವರ್ ನಲ್ಲಿ ಭುವನೇಶ್ವರ ಕುಮಾರ್ ಅವರ ಎಸೆತ ಲೆಗ್ ಸ್ಟಂಪ್ ನಿಂದ ಹೊರಗೆ ಪಿಚ್ ಆಗದೇ ವರ್ಮಾ ಅವರನ್ನು ಎಲ್ ಬಿಡಬ್ಲ್ಯು ಬಲೆಗೆ ಕೆಡವಿದ್ದರೆ ಮುಂಬೈ ಇಂಡಿಯನ್ಸ್ 31 ರನ್ಗಳಿಗೆ ನಾಲ್ಕು ವಿಕೆಟ್ ಕಳೆದುಕೊಳ್ಳಬೇಕಿತ್ತು. ಇಶಾನ್ ಕಿಶನ್ (9) ಮತ್ತು ನಮನ್ ಧೀರ್ (0) ಅಗ್ಗದ ಮೊತ್ತಕ್ಕೆ ವಾಪಸ್ಸಾದರು. ಏಳನೇ ಓವರ್ ನಲ್ಲಿ ಮಾರ್ಕೊ ಜೇಸನ್ ಅವರನ್ನು ದಂಡಿಸಿದ ಸೂರ್ಯಕುಮಾರ್ 2 ಸಿಕ್ಸರ್ ಮತ್ತು ಎರಡು ಬೌಂಡರಿ ಸೇರಿದಂತೆ 22 ರನ್ ದೋಚಿ ಪಂದ್ಯಕ್ಕೆ ತಿರುವು ನೀಡಿದರು.